ಆಯುಷ್

ಅಂತಾರಾಷ್ಟ್ರೀಯ ಯೋಗ ದಿನ – 2021ರ ಮುನ್ನುಡಿ ಕಾರ್ಯಕ್ರಮ (ಕರ್ಟನ್ ರೈಸರ್ ಇವೆಂಟ್)


ನಮಸ್ತೆ ಯೋಗ ಆಪ್ ಅನಾವರಣ

Posted On: 12 JUN 2021 10:17AM by PIB Bengaluru

7ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಪೂರ್ವಸಿದ್ಧತೆ ನಡೆಸಲು ಶುಕ್ರವಾರ ಸಂಜೆ ಆಯೋಜಿತವಾಗಿದ್ದ ವರ್ಚುವಲ್ ಕರ್ಟನ್|ರೈಸರ್  ಕಾರ್ಯಕ್ರಮದಲ್ಲಿ ಖ್ಯಾತ ಯೋಗ ಗುರುಗಳು, ಯೋಗ ಸಾಧಕರು ಮತ್ತು ಕೇಂದ್ರ ಸರ್ಕಾರದ ಇಬ್ಬರು ಸಚಿವರು ಭಾಗವಹಿಸಿದ್ದರು.
ಜಾಗತಿಕ ಸಮುದಾಯ ದೈನಂದಿನ ಬದುಕಿನಲ್ಲಿ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು. ವೈಯಕ್ತಿಕ ಮತ್ತು ಮನುಕುಲದ ಉತ್ತಮತೆಗೆ ಯೋಗಾಭ್ಯಾಸ ಉತ್ತಮ ಎಂದು ಸಚಿವರು ಈ ವೇದಿಕೆಯಿಂದ ಇಡೀ ವಿಶ್ವಕ್ಕೆ ಕರೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ‘ನಮಸ್ತೆ ಯೋಗ’ ಹೆಸರಿನ ಮೊಬೈಲ್ ಅಪ್ಲಿಕೇಷನ್ ಅನ್ನು ಲೋಕಾರ್ಪಣೆ ಮಾಡಲಾಯಿತು.

ಆಯುಷ್ ಸಚಿವಾಲಯವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಸಹಯೋಗದಲ್ಲಿ ಹಲವು ತಾಸುಗಳ ಕಾಲ ಈ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಮತ್ತು ಆಯುಷ್ ಖಾತೆ ಸ್ವತಂತ್ರ ಸಚಿವ ಶ್ರೀ ಕಿರೆನ್ ರಿಜಿಜು ಅವರು ಅಂತಾರಾಷ್ಟ್ರೀಯ ಯೋಗ ದಿನ – 2021ರ ಪ್ರಮುಖ ಧ್ಯೇಯವಾಕ್ಯ “ಯೋಗದ ಜತೆಗಿರಿ, ಮನೆಯಲ್ಲೇ ಸುರಕ್ಷಿತವಾಗಿರಿ”  ಇದರ ಮಹತ್ವವನ್ನು ತಿಳಿಸಿದರು.
ಶ್ರೀ ಶ್ರೀ ರವಿಶಂಕರ್ ಗುರೂಜಿ, ಸದ್ಗುರು ಜಗ್ಗಿ ವಾಸುದೇವ್, ಸಹೋದರಿ ಶಿವಾನಿ ಮತ್ತು ಸ್ವಾಮಿ ಚಿದಾನಂದ ಸರಸ್ವತಿ ಅವರಂತಹ ಅಂತಾರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ನಾಯಕರು ಮತ್ತು ಯೋಗ ಗುರುಗಳು ಯೋಗಾಭ್ಯಾಸದ ಅನನ್ಯ ಭಂಗಿಗಳು ಮತ್ತು ವೈಶಿಷ್ಟ್ಯಗಳಿಗೆ ಒತ್ತು ನೀಡಿದ್ದಾರೆ.
ಆಧ್ಯಾತ್ಮಿಕ ಆಯಾಮದಿಂದ ಬೇರು ಬಿಟ್ಟಿರುವ ಯೋಗವು ದೈನಂದಿನ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿದೆ. ಕೋವಿಡ್-19 ಸಾಂಕ್ರಾಮಿಕ ಸೋಂಕು ಸೇರಿದಂತೆ ನಾನಾ ರೋಗ ರುಜಿನಗಳಿಗೆ ಯೋಗ ರಾಮಬಾಣವಾಗಿದೆ ಎಂದು ಸಚಿವರು ಯೋಗದ ಮಹತ್ವಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವು ಖ್ಯಾತನಾಮರು ಯೋಗದ ಮಹತ್ವ ಮತ್ತು ಸದೃಢ ಆರೋಗ್ಯ ಕಾಪಾಡಲು ಅದರಿಂದ ಸಿಗುವ ಪ್ರಯೋಜನಗಳ ಕುರಿತು ಅರ್ಥಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಆರೋಗ್ಯಕರ ಮತ್ತು ಆನಂದದ ಜೀವನಕ್ಕೆ ಯೋಗ ಸನ್ಮಾರ್ಗವಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು ದೇಶದ ಎಲ್ಲ ವರ್ಗಗಳ ಜನರಿಗೂ ಯೋಗ ಉತ್ತೇಜಿಸಲು ಶ್ರಮಿಸುತ್ತಿದೆ ಎಂದರು. 
ಆಯುಷ್ ಖಾತೆ ಸಚಿವ ಶ್ರೀ ಕಿರೆನ್ ರಿಜಿಜು ಅವರು ಅಂತಾರಾಷ್ಟ್ರೀಯ ಯೋಗ ದಿನ – 2021 ಅಂಗವಾಗಿ ದೂರದರ್ಶನದಲ್ಲಿ ಹಮ್ಮಿಕೊಂಡಿರುವ 10 ದಿನಗಳ ಕಾರ್ಯಕ್ರಮ ಸರಣಿ ಕುರಿತು ವಿವರ ನೀಡಿದರು.
ದೇಶದಲ್ಲಿ ಎದುರಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯ ಸಮಕಾಲೀನ ಸಂದರ್ಭ ಮತ್ತು ಸನ್ನಿವೇಶ ಗಮನದಲ್ಲಿ ಇಟ್ಟುಕೊಂಡು  ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ “ಯೋಗದ ಜತೆ ಇರಿ, ಮನೆಯಲ್ಲೇ ಸುರಕ್ಷಿತವಾಗಿರಿ” ಎಂಬ ಅರ್ಥಪೂರ್ಣ ಧ್ಯೇಯವಾಕ್ಯವನ್ನು ಅಳವಡಿಸಿಕೊಳ್ಳಲಾಗಿದೆ. ಇದು ಸದ್ಯದ ಕಾಲಘಟ್ಟದಲ್ಲಿ ಪ್ರಸ್ತುತವೆನಿಸಿದೆ. ಜನರ ಆರೋಗ್ಯ ಉತ್ತೇಜನ ಮತ್ತು ರೋಗಗಳ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಯೋಗಾಭ್ಯಾಸದ ಫಲದಾಯಕತೆ ಮಹತ್ವದ್ದಾಗಿದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ದೈನಂದಿನ ಜೀವನದ ಒತ್ತಡ ನೀಗಿಸಲು ಯೋಗದಲ್ಲಿ ಹಲವಾರು ಪ್ರಯೋಜನಗಳಿವೆ. ಇದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ, ಪ್ರದರ್ಶಿಸಲ್ಪಟ್ಟಿದೆ. ಹಿಂದಿನ ವರ್ಷಗಳಿಗಿಂತ ಈ ವರ್ಷ ಹೆಚ್ಚಿನ ಸಂಖ್ಯೆಯ ಜನರನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಯೋಗ ಚಟುವಟಿಕೆಗಳಲ್ಲಿ ಸಕ್ರಿಯವಾಗುವಂತೆ ಮಾಡುವುದೇ ಆಯುಷ್ ಸಚಿವಾಲಯದ ಪ್ರಮುಖ ಗುರಿಯಾಗಿದೆ. ಆ ಮೂಲಕ ಯೋಗದಿಂದ ಸಿಗುವ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ನಮ್ಮ ಸಮಾಜದ ಎಲ್ಲ ವರ್ಗಗಳ ಜನರಿಗೂ ಹರಡುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ “ನಮಸ್ತೆ ಯೋಗ” ಮೊಬೈಲ್ ಅಪ್ಲಿಕೇಷನ್ ಅನಾವರಣಗೊಳಿಸಿದ ಅವರು, ಈ ಆಪ್ ಅನ್ನು ಯೋಗಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಒದಗಿಸುವ ಸಾರ್ವಜನಿಕ ಡಿಜಿಟಲ್ ವೇದಿಕೆಯಾಗಿ ವಿನ್ಯಾಸಗೊಳಿಸಲಾಗಿದೆ. ಯೋಗ ಕುರಿತು ಹೆಚ್ಚಿನ ಜನಜಾಗೃತಿ ಮೂಡಿಸುವುದು ಹಾಗೂ ಹೆಚ್ಚಿನ ಜನಸಂಖ್ಯೆಗೆ ಇದು ಲಭ್ಯವಾಗುವಂತೆ ಮಾಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದರು. 
ಯೋಗಾಭ್ಯಾಸ ಕೇವಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವುದೇ ಅಲ್ಲದೆ, ಒಟ್ಟಾರೆ ಮಾನವನ ಯೋಗಕ್ಷೇಮವನ್ನು ಸದೃಢಗೊಳಿಸುತ್ತದೆ. ಈ ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಇದು ಅತ್ಯಂತ ಮಹತ್ವಪೂರ್ಣ  ಎಂಬುದನ್ನು ಯೋಗ ಗುರುಗಳು ಯೋಗದ ಮಹಿಮೆಯನ್ನು ಶಕ್ತಿಶಾಲಿಗೊಳಿಸಿದ್ದಾರೆ. ಯೋಗ ಎಂಬುದು ಜೀವನದ ಭಾಗವೇ ಆಗಿದೆ. ಯೋಗಾಭ್ಯಾಸದಿಂದ ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲು ಸಾಧ್ಯವಿದೆ ಎಂಬ ಸ್ಪಷ್ಟ ಸಂದೇಶವನ್ನು ನಮ್ಮ ಯೋಗ ಗುರುಗಳು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್ಟ್ ಆಫ್ ಲಿವಿಂಗ್|ನ ಶ್ರೀ ಶ್ರೀ ರವಿಶಂಕರ್ ಗುರೂಜಿ, ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಈಗ ಬಿಕ್ಕಟ್ಟು ಎದುರಿಸುತ್ತಿದೆ. ಈ ಸಂಕಷ್ಟದಲ್ಲಿ ಮನುಕುಲಕ್ಕೆ ಯೋಗವು ಸನ್ಮಾರ್ಗ ತೋರಲಿದೆ ಎಂದರು.
ಸದ್ಗುರು ಜಗ್ಗಿ ವಾಸುದೇವ ಅವರು ಯೋಗದ ಪ್ರಾಯೋಗಿಕ ಪ್ರಯೋಜನಗಳಿಗೆ (ಅಂಶಗಳಿಗೆ) ಒತ್ತು ನೀಡಿ, ಯೋಗಾಭ್ಯಾಸದಿಂದ ಆನಂದದಾಯಕ ಜೀವನ ನಡೆಸಬಹುದು ಎಂದರು.
ಸ್ವಾಮಿ ಚಿದಾನಂದ ಸರಸ್ವತಿ ಮಾತನಾಡಿ, ಯೋಗವು ಅನಾದಿ ಕಾಲದಿಂದಲೂ ಅಭ್ಯಾಸ ಮಾಡುತ್ತಿರುವ ಚಿಕಿತ್ಸೆಯಾಗಿದೆ, ಆದರೆ ಇದು ಒಂದು ಜೀವನ ವಿಧಾನವೂ ಆಗಿದೆ ಎಂದರು.
ಎಸ್ ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್ ಆರ್ ನಾಗೇಂದ್ರ ಮಾತನಾಡಿ, ಯೋಗವು ಮಾನವನ ಸಮಗ್ರ ಜೀವನದ ವಿಜ್ಞಾನವಾಗಿದೆ ಎಂದರು.
ಮಾ ಹನ್ಸಜೀ ಜಯದೇವ್, ಸಹೋದರಿ ಶಿವಾನಿ, ಸ್ವಾಮಿ ಭರತ್ ಭೂಷಣ್, ಪ್ರೊ. ತನುಜಾ ನೇಸರಿ, ಡಾ. ಬಿ ಎನ್ ಗಂಗಾಧರ್, ಶ್ರೀ ಕಮಲೇಶ್ ಡಿ ಪಾಟೀಲ್, ಶ್ರೀ ಒ ಪಿ ತಿವಾರಿ, ಯೋಗಾಚಾರ್ಯ ಶ್ರೀ ಎಸ್ ಶ್ರೀಧರನ್ ಅವರು ಸಹ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಆಯುಷ್ ಕಾರ್ಯದರ್ಶಿ ರಾಜೇಶ್ ಕೊಟೇಚಾ ಮತ್ತು ಜಂಟಿ ಕಾರ್ಯದರ್ಶಿ ಪಿ ಎನ್ ರಂಜಿತ್ ಕುಮಾರ್ ಅವರು ಆಯುಷ್ ಸಚಿವಾಲಯದ ಪಾತ್ರಗಳು ಮತ್ತು ಬದ್ಧತೆಗಳು, ಯೋಗ ಕಾರ್ಯಕ್ರಮಗಳ ಪ್ರಚಾರ ಮತ್ತು ವಿಸ್ತರಣೆಗೆ ಕೈಗೊಂಡಿರುವ ಸಹಯೋಗ ಕ್ರಮಗಳ ಕುರಿತು ವಿವರ ನೀಡಿದರು.
ಡಿಡಿ ಇಂಡಿಯಾ ವಾಹಿನಿಯಲ್ಲಿ ಜೂನ್ 12ರಿಂದ ಜೂನ್ 21ರ ವರೆಗೆ 10 ದಿನ ನಿರಂತರ ಪ್ರಸಾರವಾಗುವ ಸರಣಿ ಯೋಗ ಕಾರ್ಯಕ್ರಮಕ್ಕೆ ಮುನ್ನುಡಿ ಕಾರ್ಯಕ್ರಮದಲ್ಲಿ ವಿಧ್ಯುಕ್ತ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವು ನಾಳೆಯಿಂದ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಈ ಸರಣಿ ಕಾರ್ಯಕ್ರಮ ನಿರ್ಮಿಸಿದೆ.
ಅಲ್ಲದೆ, ಕಾರ್ಯಕ್ರಮದಲ್ಲಿ ಗುಂಪು ಸಂವಾದ ಆಯೋಜಿಸಲಾಗಿತ್ತು. ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ನಿರ್ದೇಶಕ ಡಾ. ಬಸವ ರೆಡ್ಡಿ ಮತ್ತು ಆಯುಷ್ ಸಚಿವಾಲಯದ ಮಾಧ್ಯಮ ಸಲಹೆಗಾರ ಸಂಜಯ್ ದೇವ್ ಈ ಸಂವಾದದಲ್ಲಿ ಪಾಲ್ಗೊಂಡಿದ್ದರು.

***



(Release ID: 1726497) Visitor Counter : 288