ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಬಹುಪದರದ ಹೈಬ್ರಿಡ್ ಮುಖಗವಸು: ಎನ್95 ಮಾಸ್ಕ್|ಗೆ ಪರ್ಯಾಯ
ಕ್ಷಿಪ್ರ ಕೋವಿಡ್-19 ನಿಧಿಯಿಂದ ಆರ್ಥಿಕ ನೆರವು
ಪರಿಶೋಧನಾ ಟೆಕ್ನಾಲಜೀಸ್ ಕಂಪನಿಗೆ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿಯ ಬೆಂಬಲ
Posted On:
10 JUN 2021 9:10AM by PIB Bengaluru
ಕೋವಿಡ್-19 ಸಾಂಕ್ರಾಮಿಕ ಸೋಂಕು ವಿಶ್ವಾದ್ಯಂತ ಇಡೀ ಮನುಕುಲವನ್ನೇ ಕಾಡುತ್ತಿದೆ. ಈ ಸೋಂಕು ಹರಡುವುದನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ತಡೆಯಬೇಕಾದರೆ ಪ್ರಾಥಮಿಕವಾಗಿ ಮಾಡಬೇಕಾದ ರಕ್ಷಣಾ ಕ್ರಮಗಳೆಂದರೆ, ನಿಯಮಿತವಾಗಿ ಕೈಗಳನ್ನು ಸ್ಯಾನಿಟೈಸರ್|ನಿಂದ ಸ್ವಚ್ಛಗೊಳಿಸುವುದು, ಮುಖಗವಸು ಧರಿಸುವುದು, ಕನಿಷ್ಠ 2 ಗಜ ದೂರ ಭೌತಿಕ ಅಂತರ ಕಾಪಾಡುವುದು ಸೇರಿದಂತೆ ಕೋವಿಡ್ ಸೂಕ್ತ ನಡವಳಿಕೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್-19 ಸೋಂಕು ಹರಡದಂತೆ ರಕ್ಷಿಸಿಕೊಳ್ಳಲು ಮುಖಗವಸು(ಮಾಸ್ಕ್) ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಘಟನೆ ಡಬ್ಲ್ಯುಎಚ್ಒ ಶಿಫಾರಸು ಮಾಡಿದೆ. ಸೋಂಕಿತ ವ್ಯಕ್ತಿಯಿಂದ ಕೋವಿಡ್-19 ಸೋಂಕು ಹರಡುವುದನ್ನು ಎನ್95 ಮಾಸ್ಕ್ ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಎಂದು ಇದುವರೆಗೆ ಪರಿಗಣಿಸಲಾಗಿತ್ತು. ಆದರೆ ಎನ್95 ಮಾಸ್ಕ್ ಬಳಕೆ ಹಲವು ಕಾರಣಗಳಿಗೆ ಹಿತಕರವಲ್ಲ ಮತ್ತು ಅದನ್ನು ಹೆಚ್ಚಿನ ಬಾರಿಗೆ ತೊಳೆಯಲಾಗದು ಎಂಬುದು ಇದೀಗ ಸಾಬೀತಾಗಿದೆ.
ಈ ನಿಟ್ಟಿನಲ್ಲಿ ಬಹುಪದರದ ಹೈಬ್ರಿಡ್ ಮುಖಗವಸುಗಳನ್ನು ಅಭಿವೃದ್ಧಿಪಡಿಸುವಂತೆ ಪರಿಶೋಧನಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಜೈವಿಕ ತಂತ್ರಜ್ಞಾನ ಇಲಾಖೆಯ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ(ಬಿರಾಕ್) ಮತ್ತು ಐಕೆಪಿ ನಾಲೆಡ್ಜ್ ಪಾರ್ಕ್ ಭಾಗಶ: ಬೆಂಬಲ ನೀಡುತ್ತಿವೆ. ಕೇಂದ್ರ ಸರ್ಕಾರದ ಕ್ಷಿಪ್ರ ಕೋವಿಡ್ ನಿಧಿ ಅಡಿ ಆರ್ಥಿಕ ನೆರವು ಒದಗಿಸಲಾಗುತ್ತದೆ. ಎಸ್ಎಚ್|ಜಿ-95 ಹೆಸರಿನ ಸಾಮಾಜಿಕ ಮುಖಗವಸುಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಈಗಾಗಲೇ ಚಾಲನೆ ದೊರೆತಿದ್ದು, ಮೇಡ್ ಇನ್ ಇಂಡಿಯಾದ ಈ ಮುಖಗವಸುಗಳು 90% ಜೀವ ಕಣಗಳು ಮತ್ತು ದೂಳು ಹಾಗೂ 99% ಬ್ಯಾಕ್ಟೀರಿಯಾಗಳನ್ನು ಶುದ್ಧೀಕರಿಸುವ ದಕ್ಷತೆ ಹೊಂದಿವೆ. ಈ ಮುಖಗವಸುಗಳು ಸರಾಗವಾಗಿ ಉಸಿರಾಡಲು ಅನುವು ಮಾಡಿಕೊಡಲಿವೆ, ಆರಾಮದಾಯಕ ಕಿವಿ ಕುಣಿಕೆ ಇರುತ್ತದೆ. ಉಷ್ಣವಲಯದ ಪರಿಸ್ಥಿತಿಯಲ್ಲೂ ಬಳಸಲು ಅನುಕೂಲಕರವಾಗಿದೆ. ಏಕೆಂದರೆ ಅವುಗಳನ್ನು ಸಂಪೂರ್ಣ ಕೈಯಿಂದ ನೇಯ್ಗೆ ಮಾಡಿದ ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತಿದೆ. ಈ ಮುಖಗವಸಿಗೆ ವಿಶೇಷ ಶುದ್ಧೀಕರಣ ಪದರ ಅಳವಡಿಸಿರುವುದು ಮತ್ತೊಂದು ಅನುಕೂಲ. ಕೈಯಿಂದ ತೊಳೆಯಬಹುದಾದ, ಮರುಬಳಕೆ ಮಾಡಬಹುದಾದ ಈ ಮಾಸ್ಕ್|ಗಳನ್ನು 50-75 ರೂಪಾಯಿಗೆ ಮಾರಾಟ ಮಾಡಲು ಕಂಪನಿ ಅಂದಾಜಿಸಿದೆ. ಎಲ್ಲರಿಗೂ ಕೈಗೆಟಕುವ ದರಕ್ಕೆ ಮುಖಗವಸು ಒದಗಿಸುವುದು ಕೇಂದ್ರ ಸರ್ಕಾರದ ಪ್ರಮುಖ ಧ್ಯೇಯವಾಗಿದೆ.
ಈಗಾಗಲೇ ಸುಮಾರು 1,45,000ಕ್ಕಿಂತ ಹೆಚ್ಚಿನ ಮುಖಗವಸುಗಳು ಮಾರಾಟವಾಗಿವೆ. ಈ ಉಪಕ್ರಮಕ್ಕೆ ಗ್ರ್ಯಾಂಡ್ ಚಾಲೆಂಜಸ್ ಕೆನಡಾ ಸಂಸ್ಥೆ ಆರ್ಥಿಕ ನೆರವು ಒದಗಿಸಿದೆ. ಕೋವಿಡ್-19 ಸಂಕಷ್ಟ ಪರಿಸ್ಥಿತಿಯ ಬೇಡಿಕೆಗೆ ಅನುಗುಣವಾಗಿ ಎಸ್ಎಚ್|ಜಿ-95 ಹೆಸರಿನ ಮಾಸ್ಕ್|ಗಳನ್ನು ವಿನ್ಯಾಸಗೊಳಿಸಲಾಗಿದೆ. ಹಲವಾರು ಸ್ವಸಹಾಯ ಗುಂಪುಗಳ ಸದಸ್ಯರನ್ನು ಮುಖಗವಸು ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಾಗಿದ್ದು, ಅವರ ಜೀವನಾಧಾರ ಸುಧಾರಣೆಗೆ ಒತ್ತು ನೀಡಲಾಗಿದೆ. ಪರಿಶೋಧನ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಂಸ್ಥಾಪಕರು ಮಾನವಕುಲ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಆನ್ವಯಕ ಸಂಶೋಧನೆ ಬಳಸಿಕೊಂಡು, ಎಲ್ಲರಿಗೂ ಕೈಗೆಟಕುವ ಬೆಲೆಗೆ ಉತ್ಪನ್ನ ತಯಾರಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: ಡಿಬಿಟಿ / ಬಿರಾಕ್ ಸಂಸ್ಥೆಗಳ ಸಂವಹನ ಕೋಶಗಳನ್ನು ಸಂಪರ್ಕಿಸಿ.
@DBTIndia@BIRAC_2012
www.dbtindia.gov.in
www.birac.nic.in
ಡಿಬಿಟಿ ಕುರಿತು
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ
ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ)ಯು ದೇಶದಲ್ಲಿ ಕೃಷಿ, ಆರೋಗ್ಯ ರಕ್ಷಣೆ, ಪ್ರಾಣಿ ವಿಜ್ಞಾನ, ಪರಿಸರ ಮತ್ತು ಉದ್ಯಮ ರಂಗಗಳಲ್ಲಿ ಜೈವಿಕ ತಂತ್ರಜ್ಞಾನದ ಬೆಳವಣಿಗೆ ಮತ್ತು ಆನ್ವಯಕಗಳ ಮೂಲಕ ಜೈವಿಕ ತಂತ್ರಜ್ಞಾನದ ಅಭಿವೃದ್ಧಿಯನ್ನು ಹೆಚ್ಚಿಸುತ್ತಿದೆ ಮತ್ತು ಸುಧಾರಣೆಗಳನ್ನು ತರುತ್ತಿದೆ.
ಬಿರಾಕ್ ಕುರಿತು
ಭಾರತದ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಸ್ಥಾಪಿಸಿರುವ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿಯು ಲಾಭದಾಯಕವಲ್ಲದ ಸೇವಾ ಮನೋಭಾವದ ಸಾರ್ವಜನಿಕ ರಂಗದ ಸಂಸ್ಥೆಯಾಗಿದೆ. ರಾಷ್ಟ್ರದ ಉತ್ಪನ್ನಗಳ ಅಭಿವೃದ್ಧಿ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯತಂತ್ರ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ವಹಿಸಲು ವಿಕಾಸಗೊಳ್ಳುತ್ತಿರುವ ಜೈವಿಕ ತಂತ್ರಜ್ಞಾನ ಉದ್ಯಮದ ಸುಧಾರಣೆ ಪ್ರೋತ್ಸಾಹ ನೀಡುವ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ.
ಪರಿಶೋಧನಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕುರಿತು
ಪರಿಶೋಧನಾ ಟೆಕ್ನಾಲಜೀಸ್ ಕಂಪನಿಯು ಪ್ರಸ್ತುತ ದೇಶದ ಆರೋಗ್ಯ ಮತ್ತು ಯೋಗಕ್ಷೇಮ ವಲಯದ ಉತ್ಪನ್ನ ಅಗತ್ಯಗಳನ್ನು ಪೂರೈಸುವ ಖಾಸಗಿ ಸಂಸ್ಥೆಯಾಗಿದೆ. ಜಾಗತಿಕ ಉದ್ಯಮ ವಲಯಕ್ಕೆ ತೆರೆದುಕೊಂಡಿರುವ ಈ ಕಂಪನಿಯು, ಭಾರತದ ಉತ್ಪನ್ನಗಳ ಅಗತ್ಯಗಳಿಗೆ ತರಬೇತಿ ಪರಿಹಾರ ನೀಡುವ ಅಗ್ರಣೀಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಹೈದರಾಬಾದ್|ನಲ್ಲಿ ಸ್ಥಾಪಿತವಾಗಿರುವ ಈ ಸಂಸ್ಥೆಯು 2016ರಲ್ಲಿ ಖಾಸಗಿ ನಿಯಮಿತ ಕಂಪನಿಯಾಗಿ ನೋಂದಣಿಯಾಗಿದೆ.
***
(Release ID: 1725901)
Visitor Counter : 293