ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಪಿ.ಎಂ.ಎ.ವೈ(ನಗರ) ಅಡಿಯಲ್ಲಿ ಸುಮಾರು 3.61 ಲಕ್ಷ ಮನೆಗಳ ನಿರ್ಮಾಣ ಪ್ರಸ್ತಾವನೆಗೆ ಅನುಮೋದನೆ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು/ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಕ್ಷಮತೆ ಗುರುತಿಸಲು ʻಪಿ.ಎಂ.ಎ.ವೈ-ಯು ಪ್ರಶಸ್ತಿಗಳು 2021- 100 ದಿನಗಳ ಸವಾಲುʼ ಅಭಿಯಾನಕ್ಕೆ ಚಾಲನೆ
ಇದುವರೆಗೂ 112.4 ಲಕ್ಷ ಮನೆಗಳ ಮಂಜೂರು; 82.5 ಲಕ್ಷ ಮನೆಗಳ ನಿರ್ಮಾಣ ಆರಂಭ
ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ - ಇಂಡಿಯಾ ಅಡಿಯಲ್ಲಿ ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾದ ʻಟೆಕ್ನೋಗ್ರಾಹಿʼಯ ಇ-ಮಾಡ್ಯೂಲ್ಗೆ ಚಾಲನೆ
Posted On:
09 JUN 2021 11:57AM by PIB Bengaluru
ಪ್ರಧಾನಮಂತ್ರಿ ಆವಾಸ್ ಯೋಜನೆ - ನಗರ (ಪಿಎಂಎವೈ-ಯು) ಅಡಿಯಲ್ಲಿ 3.61 ಲಕ್ಷ ಮನೆಗಳ ನಿರ್ಮಾಣಕ್ಕಾಗಿ 708 ಪ್ರಸ್ತಾಪಗಳನ್ನು ಸರಕಾರ 2021ರ ಜೂನ್ 8ರಂದು ಅನುಮೋದಿಸಿದೆ. ನವದೆಹಲಿಯಲ್ಲಿ ನಡೆದ ʻಪಿಎಂಎವೈ-ಯು ಅಡಿಯಲ್ಲಿ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿʼಯ (ಸಿಎಸ್ಎಂಸಿ) 54ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ 13 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಾಲ್ಗೊಂಡಿದ್ದವು. ಈ ಮನೆಗಳನ್ನು ʻಫಲಾನುಭವಿ ನೇತೃತ್ವದ ನಿರ್ಮಾಣʼ ಮತ್ತು ʻಪಾಲುದಾರಿಕೆಯಲ್ಲಿ ಕೈಗೆಟುಕುವ ದರದ ವಸತಿʼ ವಿಧಾನದಲ್ಲಿ ನಿರ್ಮಿಸಲು ಯೋಜಿಸಲಾಗಿದೆ.
ಇದಲ್ಲದೆ, 'ಪಿಎಂಎವೈ-ಯು ಪ್ರಶಸ್ತಿಗಳು 2021 - 100 ದಿನಗಳ ಸವಾಲುʼ ಅಭಿಯಾನಕ್ಕೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಎಂಒಎಚ್ಯುಎ) ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ ಅವರು ಚಾಲನೆ ನೀಡಿದರು. ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು(ಯುಟಿ), ನಗರ ಸ್ಥಳೀಯ ಸಂಸ್ಥೆಗಳ(ಯುಎಲ್ಬಿಗಳು) ಹಾಗೂ ಫಲಾನುಭವಿಗಳಿಗೆ ಅವುಗಳ ಅತ್ಯುತ್ತಮ ಕಾರ್ಯದಕ್ಷತೆ ಹಾಗೂ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜೊತೆಗೆ ಅವುಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಬೆಳೆಸುವುದೂ ಈ ಪ್ರಶಸ್ತಿಯ ಮತ್ತೊಂದು ಉದ್ದೇಶವಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ನಡೆದ ಮೊದಲ ʻಸಿಎಸ್ಎಂಸಿʼ ಸಭೆ ಇದಾಗಿದೆ. 2022ರ ವೇಳೆಗೆ ಭಾರತದ ನಗರ ಪ್ರದೇಶದ ಎಲ್ಲ ಅರ್ಹ ಫಲಾನುಭವಿಗಳಿಗೆ 'ಸರ್ವರಿಗೂ ಸೂರುʼ ಎಂಬ ದೃಷ್ಟಿಕೋನದಡಿ ಶಾಶ್ವತ ಮನೆಗಳನ್ನು ಒದಗಿಸುವ ಉದ್ದೇಶಕ್ಕೆ ಸರಕಾರ ನೀಡಿರುವ ಪ್ರಾಮುಖ್ಯತೆ ಎಷ್ಟೆಂಬುದನ್ನು ಈ ಸಭೆಯು ಸೂಚಿಸುತ್ತದೆ. ಪಿಎಂಎವೈ (ಯು) ಅಡಿಯಲ್ಲಿ ನಿಗದಿತ ಗಡುವಿನಲ್ಲಿ ದೇಶಾದ್ಯಂತ ವಸತಿಗಳ ನಿರ್ಮಾಣ ಮತ್ತು ಪೂರ್ಣಗೊಳಿಸುವಿಕೆಯ ವೇಗ ಹೆಚ್ಚಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (ಎಂಒಎಚ್ಯುಎ) ಹೊಸ ಒತ್ತು ನೀಡಿದೆ.
"ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಂಜೂರಾತಿಗಾಗಿ ಬೇಡಿಕೆಯು ಬಹುತೇಕ ಸ್ಥಿರ ಸ್ಥಿತಿಗೆ ತಲುಪಿದೆ. ಬಳಕೆಯಾಗದ ಹಣವನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ನಿಗದಿತ ಸಮಯದೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಖಾತರಿಪಡಿಸುವುದು ಈಗ ನಮ್ಮ ಪ್ರಮುಖ ಆದ್ಯತೆಯಾಗಿದೆ," ಎಂದು ಸಭೆಯಲ್ಲಿ ಶ್ರೀ ದುರ್ಗಾ ಶಂಕರ್ ಮಿಶ್ರಾ ಹೇಳಿದರು.
ಭೂಮಿ, ಸ್ಥಳ ಸಂಬಂಧಿತ ಅಪಾಯಗಳು, ಅಂತರ-ನಗರ ವಲಸೆ, ವಿವಿಧ ವಿಭಾಗಗಳ ಆದ್ಯತೆಗಳಲ್ಲಿ ಬದಲಾವಣೆ, ಜೀವಹಾನಿ ಮುಂತಾದ ವಿವಿಧ ಸಮಸ್ಯೆಗಳಿಂದಾಗಿ ಯೋಜನೆಗಳನ್ನು ಪರಿಷ್ಕರಿಸಬೇಕೆಂಬ ಪ್ರಸ್ತಾಪಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮಂಡಿಸಿವೆ.
ಇದರೊಂದಿಗೆ, ಇಲ್ಲಿಯವರೆಗೆ, ಪಿಎಂಎಇ (ಯು) ಅಡಿಯಲ್ಲಿ ಮಂಜೂರಾದ ಒಟ್ಟು 112.4 ಲಕ್ಷ ಮನೆಗಳ ಪೈಕಿ 82.5 ಲಕ್ಷ ಮನೆಗಳ ನಿರ್ಮಾಣಕ್ಕೆ ಕೈ ಹಾಕಲಾಗಿದ್ದು, ಈ ಪೈಕಿ 48.31 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ/ಹಸ್ತಾಂತರಿಸಾಗಿದೆ. ಯೋಜನೆ ಅಡಿಯಲ್ಲಿ ಒಟ್ಟು 7.35 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗಿದ್ದು, ಇದರಲ್ಲಿ 1.81 ಲಕ್ಷ ಕೋಟಿ ರೂ.ಗಳ ಕೇಂದ್ರ ನೆರವೂ ಸೇರಿದೆ. ಈ ಪೈಕಿ 96,067 ಕೋಟಿ ರೂ.ಗಳ ನಿಧಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಸಭೆಯಲ್ಲಿ ಭಾಗವಹಿಸಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಉದ್ದೇಶಿಸಿ ಮಾತನಾಡಿದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು, 2021ರ ಜನವರಿಯಲ್ಲಿ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ ʻಆರು ಲೈಟ್ ಹೌಸ್ ಯೋಜನೆʼಗಳ (ಎಲ್ಎಚ್ಪಿಗಳು) ಬಗ್ಗೆ ಪ್ರಧಾನವಾಗಿ ಪ್ರಸ್ತಾಪಿಸಿದರು. ಅಗರ್ತಲಾ, ಚೆನ್ನೈ, ಲಖನೌ, ರಾಂಚಿ, ರಾಜ್ಕೋಟ್ ಮತ್ತು ಇಂದೋರ್ನಲ್ಲಿ ʻಎಲ್ಎಚ್ಪಿʼಗಳನ್ನು ನಿರ್ಮಿಸಲಾಗುತ್ತಿದೆ. "ನಿರ್ಮಾಣದಲ್ಲಿ ತೊಡಗಿರುವ ಎಲ್ಲಾ ಸಂಬಂಧಿತ ಇಲಾಖೆಗಳನ್ನು ಈ ʻಎಲ್ಎಚ್ಪಿʼಗಳು ತೊಡಗಿಸಿಕೊಳ್ಳಬೇಕು. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯನ್ನು ಪುನರಾವರ್ತಿಸಬೇಕು ಮತ್ತು ಹೆಚ್ಚಿಸಬೇಕು" ಎಂದು ಹೇಳಿದರು. ʻಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ – ಇಂಡಿಯಾʼ ಅಡಿಯಲ್ಲಿ ಅಂತಿಮ ಪಟ್ಟಿಗೆ ಸೇರಿಸಲಾದ ನವೀನ ನಿರ್ಮಾಣ ತಂತ್ರಜ್ಞಾನಗಳ ಕಲಿಕಾ ಸಾಧನಗಳನ್ನು ಒಳಗೊಂಡ ʻಟೆಕ್ನೋಗ್ರಾಹಿʼಯ ಇ-ಮಾಡ್ಯೂಲ್ಗೆ ಸಹ ಈ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಪ್ರಸ್ತುತ ಈ ಮಾಡ್ಯೂಲ್ ಅನ್ನು ಆರು ʻಎಲ್ಎಚ್ಪಿʼಗಳಲ್ಲೂ ಬಳಸಲಾಗುತ್ತಿದೆ. ಇದು ನವೀನ ನಿರ್ಮಾಣ ತಂತ್ರಜ್ಞಾನ ಕ್ಷೇತ್ರದಲ್ಲಿ ಮಧ್ಯಸ್ಥಗಾರರ ಸಾಮರ್ಥ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ಹರಿಯಾಣದ ಪಂಚಕುಲದಲ್ಲಿ ಹೊಸದಾಗಿ ನಿರ್ಮಿಸಲಾದ ಪ್ರಾತ್ಯಕ್ಷಿಕೆ ವಸತಿ ಯೋಜನೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು ಉದ್ಘಾಟಿಸಿದರು. ಇದನ್ನು ಬಾಡಿಗೆ ಆಧಾರದ ಮೇಲೆ ದುಡಿಯುವ ಮಹಿಳೆಯರ ಹಾಸ್ಟೆಲ್ ಆಗಿ ಬಳಸಲಾಗುವುದು. ʻಪಿ.ಎಂ.ಎ.ವೈ-ಯುʼನ ತಂತ್ರಜ್ಞಾನ ಉಪ ಯೋಜನೆ ಅಡಿಯಲ್ಲಿ, 6 ʻಪ್ರಾತ್ಯಕ್ಷಿಕೆ ವಸತಿ ಯೋಜನೆಗಳುʼ (ಡಿಎಚ್ಪಿಗಳು) ಇಲ್ಲಿಯವರೆಗೆ ಪೂರ್ಣಗೊಂಡಿವೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ಇನ್ನೂ 7 ನಿರ್ಮಾಣವಾಗುತ್ತಿವೆ. ʻಡಿಎಚ್ಪಿʼಗಳು ಹೊಸ/ಪರ್ಯಾಯ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ ಮಾದರಿ ವಸತಿ ಯೋಜನೆಗಳಾಗಿವೆ. ಇವು ಕ್ಷೇತ್ರ ಮಟ್ಟದಲ್ಲಿ ತಂತ್ರಜ್ಞಾನದ ಅನ್ವಯವನ್ನು ಪ್ರದರ್ಶಿಸುವುದಷ್ಟೇ ಅಲ್ಲದೆ, ಅಂತಹ ತಂತ್ರಜ್ಞಾನದ ಅನ್ವಯ ಮತ್ತು ಬಳಕೆಯ ಬಗ್ಗೆ ವಸತಿ ವಲಯದಲ್ಲಿ ತೊಡಗಿಕೊಂಡವರು ಮತ್ತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಯನ್ನು ನೀಡಲು ವೇದಿಕೆಯಾಗಿ ಬಳಕೆಯಾಗಲಿವೆ.
***
(Release ID: 1725609)
Visitor Counter : 272