ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಕೋವಿಡ್-19 ಕುರಿತ ಸಚಿವರ ಉನ್ನತಾಧಿಕಾರ ಸಮಿತಿ (ಜಿಒಎಂ) 28ನೇ ಸಭೆ


ಭಾರತದಲ್ಲಿ ಪ್ರತಿ ದಿನ ಒಂದು ಲಕ್ಷ ಹೊಸ ಪ್ರಕರಣಗಳ ವರದಿ; 61 ದಿನಗಳಲ್ಲೇ ಅತಿ ಕಡಿಮೆ ಪ್ರಕರಣ ದಾಖಲು

ಚೇತರಿಕೆ ಪ್ರಮಾಣ ಗಣನೀಯ ಏರಿಕೆ ಮತ್ತು ಇಂದು ಶೇ.93.94 ದಾಖಲು

7 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 1000ಕ್ಕೂ ಕಡಿಮೆ ಸಕ್ರಿಯ ಪ್ರಕರಣ; 5 ರಾಜ್ಯಗಳಲ್ಲಿ 2000ಕ್ಕಿಂತ ಸಕ್ರಿಯ ಪ್ರಕರಣ

ನಿನ್ನೆ ಸುಮಾರು 15 ಲಕ್ಷ ಸೋಂಕು ಪರೀಕ್ಷೆ; ಸೋಂಕು ಪರೀಕ್ಷೆ ಪ್ರಯೋಗಾಲಯಗಳ ಸಂಖ್ಯೆ 2,624ಕ್ಕೆ ಏರಿಕೆ

ಜಾಗತಿಕವಾಗಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಲ್ಲಿ ಭಾರತದ ಪಾಲು ಶೇ.20.2ರಷ್ಟು

ಸಾಂಕ್ರಾಮಿಕದ ಜೊತೆಗೆ ದೇಶ  ಇನ್ಫೋಡೆಮಿಕ್ ವಿರುದ್ಧವೂ ಹೋರಾಟ ನಡೆಸುತ್ತಿದೆ: ಡಾ. ಹರ್ಷವರ್ಧನ್

Posted On: 07 JUN 2021 4:03PM by PIB Bengaluru

ಕೋವಿಡ್-19 ಕುರಿತಾದ ಉನ್ನತ ಮಟ್ಟದ ಸಚಿವರ 28ನೇ ಸಭೆ(ಜಿಒಎಂ) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ವಸತಿ ಮತ್ತು ನಗರ ವ್ಯವಹಾರಗಳ(ಸ್ವತಂತ್ರ ಹೊಣೆಗಾರಿಕೆ); ನಾಗರಿಕ ವಿಮಾನಯಾನ(ಸ್ವತಂತ್ರ ಹೊಣೆಗಾರಿಕೆ); ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಹಾಯಕ ಸಚಿವ ಶ್ರೀ ಹರ್ ದೀಪ್ ಸಿಂಗ್ ಪುರಿ, ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವ ಶ್ರೀ ಅಶ್ವಿನಿಕುಮಾರ್ ಚೌಬೆ ಸಭೆಯಲ್ಲಿ ಭಾಗವಹಿಸಿದ್ದರು.  

ಡಾ. ಹರ್ಷವರ್ಧನ್ ಅವರು, ಒಟ್ಟಾರೆ ಕೋವಿಡ್-19 ನಿಯಂತ್ರಣಕ್ಕೆ ಭಾರತ ಕೈಗೊಂಡಿರುವ ಪ್ರಯತ್ನಗಳ ಸ್ಥೂಲ ಚಿತ್ರಣ ನೀಡಿದರು. ಚೇತರಿಕೆ ಪ್ರಮಾಣ ಕ್ರಮೇಣ ಏರಿಕೆಯಾಗುತ್ತಿದೆ ಮತ್ತು ಇಂದು ಪ್ರಮಾಣ ಶೇ.93.94ರಷ್ಟು ತಲುಪಿದೆ. ಕಳೆದ 24 ಗಂಟೆಗಳಲ್ಲಿ 61 ದಿನಗಳಲ್ಲೇ ಅತಿ ಕಡಿಮೆ ಎನ್ನಬಹುದಾದ ಕೇವಲ ಒಂದು ಲಕ್ಷ ಪ್ರಕರಣಗಳು (1,00,636) ಹೊಸದಾಗಿ ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 1,74,399 ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು ಮರಣ ಪ್ರಮಾಣ ದರ ಶೇ.1.20ಕ್ಕೆ ಇಳಿಕೆಯಾಗಿದೆ. ಸತತ 25ನೇ ದಿನ ಪ್ರತಿ ದಿನ ದಾಖಲಾಗುವ ಹೊಸ ಪ್ರಕರಣಗಳಿಗಿಂತ ಗುಣಮುಖರಾಗಿರುವ ಪ್ರಕರಣಗಳು ಹೆಚ್ಚಾಗಿವೆ”.

ಲಸಿಕೆ ಮತ್ತು ಕ್ಲಿನಿಕಲ್ ಮಧ್ಯ ಪ್ರವೇಶದ ಕುರಿತಂತೆ ಮಾತನಾಡಿದ ಡಾ. ಹರ್ಷವರ್ಧನ್ ಅವರು, “ಇಂದು ಬೆಳಗ್ಗಿನವರೆಗೆ ಎಲ್ಲ ವಯೋಮಾನದವರಿಗೆ ಒಟ್ಟು 23,27,86,482 ಲಸಿಕೆಗಳನ್ನು ಹಾಕಲಾಗಿದೆ. 18 ರಿಂದ 44 ವರ್ಷ ವಯೋಮಾನದವರ ಕುರಿತು ವಿಶೇಷವಾಗಿ ಹೇಳುವುದಾದರೆ 2,86,18,514 ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಇಂದಿನ ವರೆಗೆ ರಾಜ್ಯಗಳಲ್ಲಿ 1.4 ಕೋಟಿ ಡೋಸ್ ಲಸಿಕೆ ಲಭ್ಯವಿದೆಎಂದರು. ಇತರೆ ವರ್ಗದವರ ಕುರಿತು ಮಾತನಾಡುತ್ತಾ ಅವರು 60 ವರ್ಷ ಮೇಲ್ಪಟ್ಟ 6,06,75,796 ಜನರಿಗೆ ಮತ್ತು 45 ರಿಂದ 59 ವರ್ಷದೊಳಗಿನ 7,10,44,966 ಜನರಿಗೆ ಮೊದಲ ಡೋಸ್ ನೀಡಲಾಗಿದೆ ಎಂದರು.

ಸೋಂಕು ಪತ್ತೆ ಪರೀಕ್ಷೆ ಕುರಿತಂತೆ ವಿವರಿಸಿದ ಕೇಂದ್ರ ಆರೋಗ್ಯ ಸಚಿವರು ಜೂನ್ 7 ಬೆಳಗ್ಗೆ ವರೆಗೆ ನಾವು ಸುಮಾರು 36.6 ಕೋಟಿ (36,63,34,111) ರಷ್ಟು ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ನಿನ್ನೆ ರಜಾ ದಿನವಾಗಿದ್ದರೂ ಸಹ ಸುಮಾರು 15 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಸೋಂಕು ಪತ್ತೆ ಪರೀಕ್ಷೆ ಪ್ರಯೋಗಾಲಯಗಳ ಸಂಖ್ಯೆ 2,624ಕ್ಕೆ ಏರಿಕೆಯಾಗಿದೆ. ಪ್ರತಿ ದಿನದ ಪಾಸಿಟಿವಿಟಿ ದರ ಕ್ರಮೇಣ ಇಳಿಕೆಯಾಗುತ್ತಿದೆ ಮತ್ತು ಅದು ಸದ್ಯ ಶೇ. 6.34ರಷ್ಟಿದೆ. ಸತತ 14ನೇ ದಿನಗಳಿಂದ ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಕಡಿಮೆ ಇದೆ. ಆದರೆ ಇನ್ನೂ 15  ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಅಧಿಕವಿದೆಎಂದು ಹೇಳಿದರು.

ಎರಡನೇ ಅಲೆಯಲ್ಲಿ ಪ್ರತಿ ದಿನ ಸೋಂಕು ಪ್ರಕರಣಗಳು ನಿರಂತರವಾಗಿ ಇಳಿಕೆಯಾಗುತ್ತಿವೆ ಮತ್ತು ಹೊಸ ಪ್ರಕರಣಗಳಿಗಿಂತ ಗುಣಮುಖವಾಗುತ್ತಿರುವ ಪ್ರಕರಣಗಳೇ ಅಧಿಕವಾಗಿವೆ. ಒಟ್ಟು ಪ್ರಕರಣಗಳಲ್ಲಿ ಹತ್ತು ರಾಜ್ಯಗಳಲ್ಲೇ ಶೇ.83ಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳಿವೆ ಮತ್ತು ಉಳಿದ ಶೇ.17ರಷ್ಟು ಪ್ರಕರಣಗಳು 26 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಒಂದು ಸಾವಿರಕ್ಕಿಂತ ಕಡಿಮೆ ಸೋಂಕು ಪ್ರಕರಣಗಳಿರುವ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದರೆ(ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಗುಜರಾತ್, ಉತ್ತರಾಖಂಡ ಮತ್ತು ಜಾರ್ಖಂಡ್), ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ(ಜಮ್ಮು, ಪಂಜಾಬ್, ಬಿಹಾರ್, ಛತ್ತೀಸ್ ಗಢ ಮತ್ತು ಉತ್ತರ ಪ್ರದೇಶ) ಎರಡು ಸಾವಿರಕ್ಕಿಂತ ಕಡಿಮೆ ಪ್ರಕರಣಗಳಿವೆ. ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಂತಹ ಹೆಚ್ಚು ಬಾಧಿತವಾದ ರಾಜ್ಯಗಳಲ್ಲೂ ಸಹ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಬೆಳವಣಿಗೆ ದರ ಶೇ.14.7(ಮೇ 5)ರಷ್ಟು ಇದ್ದದ್ದು ಶೇ.3.48(ಇಂದು)ಕ್ಕೆ ಕುಸಿದಿದೆ.

ಅಲ್ಲದೆ ಅವರು ರೋಗ ಹರಡುತ್ತಿರುವ ಸಂಭವನೀಯತೆ ಹೆಚ್ಚಿರುವ ವೈರಾಣುಗಳ ಬಗ್ಗೆ ಐಎನ್ಎಸ್ಎಸಿಒಜಿ ಸ್ವೀಕ್ವೆನ್ಸಿಂಗ್ ಪ್ರಯೋಗಾಲಯಗಳಲ್ಲಿ ಪರಿಶೀಲಿಸುತ್ತಿವೆ. ಸದ್ಯ ಹತ್ತು ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿ ಸುಮಾರು 30 ಸಾವಿರ ಮಾದರಿಗಳನ್ನು ಐಎನ್ಎಸ್ಎಸಿಒಜಿ ಸ್ವೀಕ್ವೆನ್ಸಿಂಗ್ ಗೆ ಒಳಪಡಿಸಲಾಗಿದೆ. 18ಕ್ಕೂ ಅಧಿಕ ಪ್ರಯೋಗಾಲಯಗಳನ್ನು ಇತ್ತೀಚೆಗೆ ಒಕ್ಕೂಟಕ್ಕೆ ಸೇರ್ಪಡೆಗೊಳಿಸಿರುವುದರಿಂದ ಸ್ವೀಕ್ವೆನ್ಸಿಂಗ್ ಸಾಮರ್ಥ್ಯ ವೃದ್ಧಿಯಾಗಿದೆ’’ ಎಂದು ಹೇಳಿದರು.

ಹೆಚ್ಚುತ್ತಿರುವ ಮ್ಯೂಕರ್ ಮೈಕೋಸಿಸ್ ಪ್ರಕರಣಗಳ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯಗಳು ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸುತ್ತಿರುವುದಕ್ಕೆ ಡಾ. ಹರ್ಷವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದರು. ಈವರೆಗೆ 28,252 ಪ್ರಕರಣಗಳು ವರದಿಯಾಗಿವೆ. ಪೈಕಿ ಶೇ.86ರಷ್ಟು(24,370) ಪ್ರಕರಣಗಳಲ್ಲಿ ಕೋವಿಡ್-19 ಸೋಂಕಿನ ಹಿನ್ನೆಲೆಯಿದೆ ಮತ್ತು ಶೇ.62.3ರಷ್ಟು (17,601) ಪ್ರಕರಣಗಳಲ್ಲಿ ಮಧುಮೇಹದ ಹಿನ್ನೆಲೆಯಿದೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯ ಮ್ಯೂಕರ್ ಮೈಕೋಸಿಸ್ ಪ್ರಕರಣ(6,339) ಮತ್ತು ಆನಂತರ ಗುಜರಾತ್ ನಲ್ಲಿ (5,486) ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವ ಶ್ರೀ ಅಶ್ವಿನಿಕುಮಾರ್ ಚೌಬೆ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಲಸಿಕೆ ಹಿಂಜರಿಕೆಯನ್ನು ನಿವಾರಿಸಲು ಪ್ರಯತ್ನಿಸಬೇಕು. ಕೋವಿಡ್-19 ವಿರುದ್ಧ ಹೋರಾಟಕ್ಕೆ ಲಸಿಕೆ ಪ್ರಮುಖ ಅಸ್ತ್ರವಾಗಿರುವುದರಿಂದ ಜನರಿಗೆ ಲಸಿಕೆ ಪಡೆಯಲು ಹೆಚ್ಚು ಉತ್ತೇಜನ ನೀಡಬೇಕು ಎಂದರು.

ನೀತಿ ಆಯೋಗದ ಆರೋಗ್ಯ ಸದಸ್ಯ ಡಾ. ವಿ.ಕೆ. ಪೌಲ್, ಲಸಿಕಾ ಅಭಿಯಾನದ ಸ್ಥಿತಿಗತಿ, ಕೋವಿಡ್-19 ಮಕ್ಕಳ ಆರೈಕೆಗೆ ಕೈಗೊಂಡಿರುವ ಸಿದ್ಧತೆಗಳು ಮತ್ತು ಮೂರನೇ ಅಲೆ ನಿಯಂತ್ರಣ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ಸ್ಥೂಲ ಚಿತ್ರಣವನ್ನು ವಿವರಿಸಿದರು. ಅವರು ಭಾರತ 23 ಕೋಟಿ ಲಸಿಕೆ ದಾಟಲು 141 ದಿನಗಳನ್ನು ತೆಗೆದುಕೊಂಡಿದೆ. ಅಮೆರಿಕ ಪ್ರಮಾಣದ ಲಸಿಕೆಯನ್ನು 134 ದಿನಗಳಲ್ಲಿ ಸಾಧಿಸಿತ್ತು ಎಂದು ಉಲ್ಲೇಖಿಸಿದರು. ಅಲ್ಲದೆ ಭಾರತ ಲಸಿಕೆ ನೀಡಿಕೆಯಲ್ಲಿ ವಿಶ್ವದಲ್ಲೇ ಅತ್ಯಂತ ವೇಗದ ರಾಷ್ಟ್ರಗಳಲ್ಲಿ ಒಂದಾಗಿದೆ. ಜಾಗತಿಕವಾಗಿ ಸುಮಾರು 88.7 ಕೋಟಿ ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಹಾಕಲಾಗಿದ್ದು, ಪೈಕಿ ಭಾರತದ ಪಾಲು 17.9  ಕೋಟಿ ಇದ್ದು ಜಾಗತಿಕ ಲಸಿಕಾ ವ್ಯಾಪ್ತಿಯಲ್ಲಿ ಶೇ.20.2ರಷ್ಟು ಪಾಲು ಇದೆ ಎಂದರು. ಭಾರತ ಮಕ್ಕಳ ಕೋವಿಡ್-19 ಆರೈಕೆ ಎದುರಿಸಲು ಸಂಪೂರ್ಣ ಸಜ್ಜಾಗಿದೆ, ಆದರೆ ಸೋಂಕು ಉಲ್ಬಣಿಸದಂತೆ ಎಚ್ಚರ ವಹಿಸಬೇಕು ಎಂದ ಅವರು, ನಾವು ಕೋವಿಡ್-19 ಸೂಕ್ತ ನಡವಳಿಕೆ ಪಾಲನೆಯನ್ನು ಮುಂದುವರಿಸಿದರೆ ಮೂರನೇ ಅಲೆಯನ್ನು ನಿಯಂತ್ರಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದರು

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗಿರಿಧರ್ ಅರ್ಮಾನೆ ಅವರು ದೇಶದಲ್ಲಿ ಆಕ್ಸಿಜನ್ ಲಭ್ಯತೆ ಮತ್ತು ಅದರ ಉತ್ಪಾದನೆ ಮತ್ತು ಪೂರೈಕೆ ಸರಣಿ ವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಆಕ್ಸಿಜನ್ ಲಭ್ಯತೆಯನ್ನು ಹೆಚ್ಚಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಉತ್ಪಾದನೆ ಸಾಮರ್ಥ್ಯ ಹೆಚ್ಚಳದ ಜೊತೆಗೆ ವಿತರಣೆಯನ್ನೂ ವೃದ್ಧಿಸಲಾಗಿದೆ, ಪಿಎಸ್ಎ ಘಟಕಗಳ ಸ್ಥಾಪನೆ, ಎಲ್ಎಂಒ ಮತ್ತು ಆಕ್ಸಿಜನ್ ಸಾಂದ್ರಕಗಳ ಆಮದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಆಕ್ಸಿಜನ್ ಉತ್ಪಾದನೆ 2020 ಆಗಸ್ಟ್ ನಲ್ಲಿ 5,700 ಎಂಟಿ ಇತ್ತು, 2021 ಮೇ ವೇಳೆಗೆ ಅದನ್ನು 9,500ಕ್ಕೂ ಅಧಿಕ ಎಂಟಿಗೆ ಹೆಚ್ಚಿಸಲಾಗಿದೆ. 1,718 ಪಿಎಸ್ಎ ಘಟಕಗಳು(ಪಿಎಂ-ಕೇರ್ಸ್ ನಿಧಿಯಿಂದ ಎಂಒಎಚ್ಎಫ್ ಡಬ್ಲ್ಯೂ ಮತ್ತು ಡಿಆರ್ ಡಿಒ ಮೂಲಕ 1,213, ಎಂಒಪಿಎನ್ ಜಿ ಮೂಲಕ 108, ಕಲ್ಲಿದ್ದಲು ಸಚಿವಾಲಯದಿಂದ 40, ಇಂಧನ ಸಚಿವಾಲಯದಿಂದ 25, ವಿದೇಶಿ ದೇಣಿಗೆಯಿಂದ 19 ಮತ್ತು ರಾಜ್ಯ ಸರ್ಕಾರಗಳಿಂದ 313)ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಪಿಎಂ-ಕೇರ್ಸ್ ನಿಧಿಯಿಂದ ಸುಮಾರು ಒಂದು ಲಕ್ಷ ಆಕ್ಸಿಜನ್ ಸಾಂದ್ರಕಗಳ ಖರೀದಿಗೆ ಅನುಮೋದನೆ ನೀಡಲಾಗಿದೆ ಮತ್ತು ಆಕ್ಸಿಜನ್ ಡಿಜಿಟಲ್ ಟ್ರ್ಯಾಕಿಂಗ್ ಸಿಸ್ಟಮ್(ಒಡಿಟಿಎಸ್) ವೆಬ್ ಮತ್ತು ಆಪ್ ಆಧಾರಿತ ನಿಗಾ ವ್ಯವಸ್ಥೆಯನ್ನು ದೇಶಾದ್ಯಂತ ಎಲ್ಎಂಒ ಸಾಗಣೆಯ ಮೇಲೆ ನಿರಂತರ ನಿಗಾ ಇಡಲು ಅಭಿವೃದ್ಧಿಪಡಿಸಲಾಗಿದೆ ಎಂದರು.

ಇಜಿ-8 ಅಧ್ಯಕ್ಷರು ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಅವರು ದೇಶದಲ್ಲಿ ಸಂವಹನ ಮಾದರಿಗಳ ಸಂಕ್ಷಿಪ್ತ ವಿವರ ನೀಡಿದರು. ಅವರು ಎಲ್ಲ ಕೇಂದ್ರದ ಸಚಿವಾಲಯಗಳು/ಪಿಎಸ್ ಯುಗಳು/ಸ್ವಾಯತ್ತ ಸಂಸ್ಥೆಗಳು ಮತ್ತು ಉತ್ತಮ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರಗಳು, ಜಿಲ್ಲೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳೂ ಸೇರಿ ಇಡೀ ಸರ್ಕಾರದಮನೋಭಾವದೊಂದಿಗೆ ಸೋಂಕಿನ ವಿರುದ್ಧ ಹೋರಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್-19 ಸೂಕ್ತ ನಡವಳಿಕೆ ಸಂದೇಶಗಳನ್ನು ಪ್ರಚಾರ ಮಾಡಲು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳ ಮೇಲೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಮತ್ತು ಕಾರ್ಯಕ್ಕೆ ಸ್ಥಳೀಯ ಸಮುದಾಯ ನಾಯಕರು ಮತ್ತು ಸ್ಥಳೀಯ ಪ್ರಭಾವಿಗಳು, ಮುಂಚೂಣಿ ಕಾರ್ಯಕರ್ತರು, ಸಹಕಾರಿಗಳು, ಪಂಚಾಯತ್ ರಾಜ್ ಪ್ರತಿನಿಧಿಗಳು ಮತ್ತು ಎಫ್ಎಂಸಿಜಿ ಕಂಪನಿಗಳು/ಚಿಲ್ಲರೆ ಮಳಿಗೆಗಳು/ವಾಣಿಜ್ಯ ಸಂಘಟನೆಗಳನ್ನು ಸೇರಿಸಿಕೊಳ್ಳಬೇಕಾಗಿದೆ ಎಂದರು. ವಾರ್ತಾ ಮತ್ತು ಪ್ರಸಾರ ಇಲಾಖೆಯ ಮಾಧ್ಯಮ ಘಟಕಗಳಾದ ಪಿಐಬಿ, ಎಐಆರ್, ಡಿಡಿ ನ್ಯೂಸ್ ಮತ್ತು ಪ್ರಾದೇಶಿಕ ವಿಭಾಗಗಳು ಖಚಿತ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ವ್ಯಾಪಕ ಕಾರ್ಯ ಮಾಡುತ್ತಿವೆ ಎಂದು ಅವರು ಪ್ರಸ್ತಾಪಿಸಿದರು. ಅದರ ಮುಂದುವರಿದ ಭಾಗವಾಗಿ ಲಸಿಕೆ ಪಡೆದ ನಂತರದ ಕೋವಿಡ್ ಸೂಕ್ತ ನಡವಳಿಕೆ, ಕಪ್ಪು/ಬಿಳಿ ಶಿಲೀಂಧ್ರ, ದೀರ್ಘಾವಧಿಯ ದೈಹಿಕ ಮತ್ತು ಮಾನಸಿಕ ಆರೈಕೆ, ಅನಾಥ ಮಕ್ಕಳು ಮತ್ತು ಒಟ್ಟಾರೆ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳುವಂತಹ ವಿಷಯಗಳ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಸಲಹೆ ಮಾಡಿದರು.

ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿನೋದ್ ಕೆ. ಪೌಲ್, ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್, ವಿದೇಶಾಂಗ ಕಾರ್ಯದರ್ಶಿ ಶ್ರೀ ಹರ್ಷವರ್ಧನ್ ಶ್ರಿಂಗ್ಲಾ, ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗಿರಿಧರ್ ಅರ್ಮಾನೆ, ಕಾರ್ಯದರ್ಶಿ(ಫಾರ್ಮಾ) ಶ್ರೀಮತಿ ಎಸ್. ಅಪರ್ಣಾ, ಐಸಿಎಂಆರ್ ಮಹಾ ನಿರ್ದೇಶಕ ಮತ್ತು ಕಾರ್ಯದರ್ಶಿ(ಆರೋಗ್ಯ ಸಂಶೋಧನೆ) ಡಾ. ಬಲರಾಮ್ ಭಾರ್ಗವ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.

***(Release ID: 1725207) Visitor Counter : 203