ಹಣಕಾಸು ಸಚಿವಾಲಯ

43ನೇ ಜಿಎಸ್|ಟಿ ಮಂಡಳಿ ಸಭೆಯ ಶಿಫಾರಸುಗಳು


ಆಂಫೋಟೆರಿಸಿನ್-ಬಿ ಚುಚ್ಚುಮದ್ದು ಸೇರಿದಂತೆ ಕೋವಿಡ್-19 ಸಂಬಂಧಿತ ವೈದ್ಯಕೀಯ ಸರಕುಗಳ ಉಚಿತ ವಿತರಣೆಗೆ 31.08.2021ರ ವರೆಗೆ ಸಂಪೂರ್ಣ ಐಜಿಎಸ್|ಟಿ (ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ) ವಿನಾಯಿತಿ

ಆಂಫೋಟೆರಿಸಿನ್–ಬಿ ಲಸಿಕೆಗೆ ಸೀಮಾಸುಂಕ ವಿನಾಯಿತಿ

ಬಾಕಿ ಉಳಿಸಿಕೊಳ್ಳುವ ತೆರಿಗೆ ವಿವರಗಳಿಗೆ ವಿಧಿಸುವ ತಡ (ಪಾವತಿ) ಶುಲ್ಕಕ್ಕೆ ಸಂಬಂಧಿಸಿ ತೆರಿಗೆದಾರರಿಗೆ ಪರಿಹಾರ ಒದಗಿಸಲು ಕ್ಷಮಾದಾನ (ಆಮ್ನೆಸ್ಟಿ) ಯೋಜನೆ ; ಭವಿಷ್ಯದ ತೆರಿಗೆ ಅವಧಿಗಳಿಗೆ ತಡ ಪಾವತಿ ಶುಲ್ಕಗಳ ತರ್ಕಬದ್ಧ

2020-21ನೇ ಸಾಲಿನ ವಾರ್ಷಿಕ ಆದಾಯ ತೆರಿಗೆ ವಿವರ ಸಲ್ಲಿಕೆಯ ಪ್ರಕ್ರಿಯೆ ಸರಳೀಕರಣ

Posted On: 28 MAY 2021 9:29PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿಂದು 43ನೇ ಜಿಎಸ್|ಟಿ ಮಂಡಳಿಯ ವೀಡಿಯೊ ಕಾನ್ಫರೆನ್ಸ್ ಸಭೆ ನಡೆಯಿತು. ಈ ಸಭೆಯಲ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಹಾಯಕ ಸಚಿವ ಶ್ರೀ ಅನುರಾಗ್ ಥಾಕೂರ್, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸರಕು ಮತ್ತು ಸೇವಾ ತೆರಿಗೆ(ಜಿಎಸ್|ಟಿ) ದರಗಳ ಬದಲಾವಣೆ ಮತ್ತು ಜಿಎಸ್|ಟಿ ಕಾಯಿದೆ ಮತ್ತು ಕಾರ್ಯವಿಧಾನಗಳ ಬದಲಾವಣೆ ಕುರಿತು ಜಿಎಸ್|ಟಿ ಮಂಡಳಿ ಸಭೆಯು ಕೆಳಕಂಡ ಶಿಫಾರಸುಗಳನ್ನು ಮಾಡಿದೆ.

ಕೋವಿಡ್-19 ಪರಿಹಾರ                                              

 • ಕೋವಿಡ್-19 ಪರಿಹಾರ ಕ್ರಮವಾಗಿ ಹಲವಾರು ತೆರಿಗೆ ವಿನಾಯಿತಿಗಳನ್ನು ಪ್ರಕಟಿಸಲಾಗಿದೆ. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಅಗತ್ಯವಾದ ವೈದ್ಯಕೀಯ ಆಮ್ಲಜನಕ, ಆಮ್ಲಜನಕ ಕಾನ್ಸಂಟ್ರೇಟರ್|ಗಳು ಮತ್ತು ಇತರೆ ಆಮ್ಲಜನಕ ದಾಸ್ತಾನು ಮತ್ತು ಸಾಗಣೆ ಉಪಕರಣಗಳು ಮತ್ತು ಸಾಧನಗಳು, ನಿರ್ದಿಷ್ಟ ಡಯಾಗ್ನಾಸ್ಟಿಕ್(ರೋಗ ಪತ್ತೆ) ಮಾರ್ಕರ್ಸ್ ಟೆಸ್ಟ್ ಕಿಟ್|ಗಳು ಮತ್ತು ಕೋವಿಡ್-19 ಲಸಿಕೆಗಳು ಇತ್ಯಾದಿ ಸರಕುಗಳಿಗೆ ಐಜಿಎಸ್|ಟಿ (ಸಂಯೋಜಿತ ಸರಕು ಮತ್ತು ಸೇವಾ ತೆರಿಗೆ) ತೆರಿಗೆಯಿಂದ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲು ಜಿಎಸ್|ಟಿ ಮಂಡಳಿ ಸಭೆ ಶಿಫಾರಸು ಮಾಡಿದೆ. ಇಂತಹ ಸರಕುಗಳನ್ನು ಸರಕಾರಕ್ಕೆ ದೇಣಿಗೆ ನೀಡಲು ಪಾವತಿ ಮೇರೆಗೆ ಆಮದು ಮಾಡಿಕೊಂಡರೂ ಅಥವಾ ಅಥವಾ ಯಾವುದೇ ಪರಿಹಾರ ಸಂಸ್ಥೆಗಳಿಗಾಗಿ ಸರಕಾರದ ವಿವಿಧ ಇಲಾಖೆಗಳು ಶಿಫಾರಸು ಮಾಡಿದರೂ, ಅಂತಹ ಸರಕುಗಳಿಗೂ ಐಜಿಎಸ್|ಟಿ ತೆರಿಗೆ ವಿನಾಯಿತಿ ನೀಡಲು ಶಿಫಾರಸು ಮಾಡಲಾಗಿದೆ. ಈ ತೆರಿಗೆ ವಿನಾಯಿತಿಯು 31.08.2021ರ ವರೆಗೆ ಅನ್ವಯವಾಗುತ್ತದೆ. ಇಂತಹ ಸರಕುಗಳನ್ನು ಉಚಿತವಾಗಿ ವಿತರಿಸಲು ಉಚಿತವಾಗಿ ಮಾಡಿಕೊಳ್ಳುತ್ತಿದ್ದ ಆಮದಿಗೆ ಮಾತ್ರ ಇಲ್ಲಿಯವರೆಗೆ ಐಜಿಎಸ್|ಟಿ ತೆರಿಗೆ ವಿನಾಯಿತಿ ಅನ್ವಯವಾಗುತ್ತಿತ್ತು. ಇದನ್ನು ಸಹ 31.08.2021ರ ವರೆಗೆ ವಿಸ್ತರಿಸಲಾಗಿದೆ. ಈ ಎಲ್ಲಾ ಸರಕುಗಳನ್ನು ಈಗಾಗಲೇ ಮೂಲ ಸೀಮಾಸುಂಕದಿಂದ ವಿನಾಯಿತಿ ನೀಡಲಾಗಿದೆ. ಇತ್ತೀಚೆಗೆ ದೇಶದ ವಿವಿಧೆಡೆ ಕಪ್ಪು ಶಿಲೀಂಧ್ರ ಸೋಂಕು ‘ಮ್ಯೂಕರ್|ಮೈಕೊಸಿಸ್’ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆಂಫೋಟೆರಿಸಿನ್-ಬಿ ಚುಚ್ಚುಮದ್ದಿಗೂ ಐಜಿಎಸ್|ಟಿ ತೆರಿಗೆ ವಿನಾಯಿತಿ ವಿಸ್ತರಿಸಲಾಗಿದೆ.

2021 ಜೂನ್ 8ರಂದು ಸಚಿವರ ಗುಂಪು ವರದಿ ಸಲ್ಲಿಸಿದ ನಂತರ ಕೋವಿಡ್-19 ಪ್ರತ್ಯೇಕ ವಸ್ತುಗಳಿಗೆ ಮತ್ತಷ್ಟು ತೆರಿಗೆ ಪರಿಹಾರ ಸಿಗಲಿದೆ.

 • ಕೋವಿಡ್-19 ರೋಗಕ್ಕೆ ಸಂಬಂಧಿಸಿದಂತೆ ಸೋಂಕಿತರಿಗೆ ಪ್ರತ್ಯೇಕ ಸರಕುಗಳ ಅಗತ್ಯ, ಅವುಗಳ ಬೆಲೆ ಮತ್ತಿತರ ಸಾಧಕ ಬಾಧಕಗಳನ್ನು ಅರಿಯಲು ಮತ್ತು ತೆರಿಗೆ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ, ಸಚಿವರ ಗುಂಪು ರಚಿಸಿದೆ. ಅದು 2021 ಜೂನ್ 8ರಂದು ತನ್ನ ವರದಿ ಸಲ್ಲಿಸಲಿದೆ.

ಸರಕುಗಳಿಗೆ ಇತರೆ ಪರಿಹಾರ

 • ಲಿಂಪಾಟಿಕ್|ಫಿಲಾರಿಸಿಸ್ ವ್ಯಾಧಿಯ ನಿರ್ಮೂಲನೆ ಬೆಂಬಲಿಸುವ ಕಾರ್ಯಕ್ರಮವನ್ನು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್ಒ) ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಡೈಈಥೈಲ್|ಕಾರ್ಬಮಜಿನ್(ಡಿಇಸಿ) ಮಾತ್ರೆಗಳ ಜಿಎಸ್|ಟಿ ದರವನ್ನು 12%ನಿಂದ 5%ಗೆ ಇಳಿಸಲು ಸಭೆ ಶಿಫಾರಸು ಮಾಡಿದೆ.
 • ಜಿಎಸ್|ಟಿ ತೆರಿಗೆ ದರಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸ್ಪಷ್ಟೀಕರಣಗಳು ಮತ್ತು ಸ್ಪಷ್ಟೀಕರಣದ ತಿದ್ದುಪಡಿಗಳನ್ನು ಮಾಡಲು ಶಿಫಾರಸು ಮಾಡಲಾಗಿದೆ.
 • ರಿಪೇರಿ ನಂತರ ಮರುಆಮದು ಮಾಡಿದ ಸರಕುಗಳ ದುರಸ್ತಿ ಮೌಲ್ಯದ ಮೇಲೆ ಐಜಿಎಸ್‌ಟಿ ವಿಧಿಸಲು ಶಿಫಾರಸು.
 • ಹನಿ ನೀರಾವರಿ ವ್ಯವಸ್ಥೆ / ಸಿಂಪಡಣಾ ಸಾಧನಗಳ ಭಾಗಗಳಿಗೆ 12% ಜಿಎಸ್|ಟಿ ದರ ಅನ್ವಯಕ್ಕೆ ಸಲಹೆ. ಈ ಸಲಕರಣೆಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಿದರೂ ಅದೇ ತೆರಿಗೆ ಅನ್ವಯಕ್ಕೆ ಶಿಫಾರಸು.

ಸೇವೆಗಳು

 • ಅಂಗನವಾಡಿ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ಪ್ರಾಯೋಜಿತ ಮಧ್ಯಾಹ್ನದ ಬಿಸಿಯೂಟ ಮತ್ತಿತರ ಆಹಾರ ಪೂರೈಸುವ ಸೇವೆಗಳಿಗೆ ಬರುವ ಸರ್ಕಾರದ ಅನುದಾನ ಅಥವಾ ಕಾರ್ಪೊರೇಟ್ ದೇಣಿಗೆಗಳಿಗೆ ಜಿಎಸ್|ಟಿ ತೆರಿಗೆಯಿಂದ ವಿನಾಯಿತಿಗೆ ಶಿಫಾರಸು.
 • ಪ್ರವೇಶ ಪರೀಕ್ಷೆ ಸೇರಿದಂತೆ ನಾನಾ ಪರೀಕ್ಷೆಗಳ ಮೂಲಕ ಒದಗಿಸುವ ಸೇವೆಗಳನ್ನು ಸ್ಪಷ್ಟೀಕರಿಸಲು, ಅಂತಹ ಪರೀಕ್ಷೆಗಳಿಗೆ ಶುಲ್ಕ ವಿಧಿಸಲಾಗುತ್ತದೆ, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ), ಅಥವಾ ಅಂತಹುದೇ ಕೇಂದ್ರ ಅಥವಾ ರಾಜ್ಯ ಶೈಕ್ಷಣಿಕ ಮಂಡಳಿಗಳು, ಮತ್ತು ಅದಕ್ಕೆ ಸಂಬಂಧಿಸಿದ ಇನ್‌ಪುಟ್ ಸೇವೆಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡಲು ಶಿಫಾರಸು ಮಾಡಲಾಗಿದೆ.
 • ಭೂಮಾಲಿಕನಿಂದ ಜಾಗ ಖರೀದಿಸಿ ಅಪಾರ್ಟ್|ಮೆಂಟ್ ನಿರ್ಮಿಸುವ  ಡೆವಲಪರ್ ಪ್ರವರ್ತಕನು ಕಟ್ಟಡ ನಿರ್ಮಾಣ ಪೂರ್ಣವಾಗಿರುವ ಪ್ರಮಾಣಪತ್ರ ಪಡೆಯುವಾಗ ಅಥವಾ ಅದಕ್ಕೂ ಮುನ್ನಾ ಜಿಎಸ್|ಟಿ ಪಾವತಿ ಮಾಡಲು ಅವಕಾಶ ಕಲ್ಪಿಸುವ ಅಧಿಸೂಚನೆಗೆ ಬದಲಾವಣೆ ತರಲು ಶಿಫಾರಸು.
 • ವೈಮಾನಿಕ ಕ್ಷೇತ್ರದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷಾ ಘಟಕಗಳಿಗೆ ಒದಗಿಸಿರುವ ತೆರಿಗೆ ಸೌಲಭ್ಯಗಳನ್ನು ದೇಶೀಯ ಬಂದರು ವಲಯದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷಾ ಘಟಕಗಳಿಗೂ ವಿಸ್ತರಿಸಲು ಶಿಫಾರಸು
 • ಬಂದರು ವಲಯದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷಾ ಘಟಕಗಳ ಸೇವೆಗಳಿಗೆ ಜಿಎಸ್|ಟಿ ದರವನ್ನು ಶೇಕಡ 12ರಿಂದ 5ಕ್ಕೆ ಇಳಿಸಲು ಶಿಫಾರಸು
 • ಗೋಧಿ ಮತ್ತು ಭತ್ತವನ್ನು ಹಿಟ್ಟು ಮಾಡಿ, ಖನಿಜಾಂಶಗಳನ್ನು ಸೇರಿಸಿ, ಸರಕಾರಗಳ ನಾನಾ ಸಂಸ್ಥೆಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಜಿಎಸ್|ಟಿಯಿಂದ ವಿನಾಯಿತಿ ನೀಡಲು ಶಿಫಾರಸು. ಇಂತಹ ಸೇವೆಗಳನ್ನು ಹೊರತುಪಡಿಸಿದ ಇತರೆ ಸೇವೆಗಳಿಗೆ ಶೇಕಡ 5 ಜಿಎಸ್|ಟಿ ದರ ಅನ್ವಯ.
 • ಸರಕಾರಿ ಸಂಸ್ಥೆಗಳಿಗೆ ಒದಗಿಸುವ ರೋಪ್|ವೇಯಂತಹ ನಿರ್ಮಾಣ ಸೇವೆಗಳಿಗೆ 18% ಜಿಎಸ್|ಟಿ ವಿಧಿಸಲಾಗುವುದು.
 • ಸರಕಾರದ ಮೂಲಕ ಬ್ಯಾಂಕ್|ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಸರಕಾರದ ಅಧೀನ ಸಂಸ್ಥೆಗಳು, ಸಾರ್ವಜನಿಕ ವಲಯದ ಘಟಕಗಳಿಗೆ ಜಿಎಸ್ಟಿಯಿಂದ ವಿನಾಯಿತಿ.

ವ್ಯಾಪಾರ ಸೌಲಭ್ಯಕ್ಕಾಗಿ ಕ್ರಮಗಳು

 • ತೆರಿಗೆ ವಿವರ ಸಲ್ಲಿಸದ ಬಾಕಿ ಉಳಿಸಿಕೊಳ್ಳುವ ತೆರಿಗೆದಾರರಿಗೆ ವಿಧಿಸುವ ‘ತಡ ಶುಲ್ಕ’ ಅಥವಾ ‘ತಡ ಪಾವತಿ ಶುಲ್ಕ’ ವಿನಾಯಿತಿ ಪರಿಹಾರ ನೀಡುವ ಕ್ಷಮಾದಾನ ಯೋಜನೆ.

2017 ಜುಲೈನಿಂದ 2021 ಏಪ್ರಿಲ್|ವರೆಗೆ ಜಿಎಸ್|ಟಿಆರ್-3ಬಿ ನಮೂನೆಯಲ್ಲಿ ತೆರಿಗೆ ವಿವರ ಸಲ್ಲಿಸದ ತೆರಿಗೆದಾರರಿಗೆ ಪರಿಹಾರ ಒದಗಿಸುವ ಕ್ರಮವಾಗಿ ಕೆಳಗೆ ನಮೂದಿಸಿರುವಂತೆ ತಡ ಶುಲ್ಕ ಮುನ್ನಾ ಮತ್ತು ಕಡಿತ ಮಾಡಲಾಗಿದೆ.

 • ಪ್ರತಿ ತೆರಿಗೆ ವಿವರ ಸಲ್ಲಿಕೆಗೆ ತಡ ಶುಲ್ಕವನ್ನು ಗರಿಷ್ಠ 500 ರೂ.ಗೆ ಮಿತಿಗೊಳಿಸಲಾಗಿದೆ. ಸಿಜಿಎಸ್|ಟಿ ಮತ್ತು ಐಜಿಎಸ್|ಟಿಗೆ 250 ರೂ. ನಿಗದಿ ಮಾಡಲಾಗಿದೆ. ಆದರೆ ಮೇಲೆ ನಮೂದಿಸಿರುವ ಅವಧಿಯಲ್ಲಿ ತೆರಿಗೆದಾರ ಯಾವುದೇ ತೆರಿಗೆ ಬಾಧ್ಯತೆ ಹೊಂದಿರಬಾರದು.
 • ಇತರೆ ತೆರಿಗೆದಾರರಿಗೆ ತಡ ಶುಲ್ಕವನ್ನು ಪ್ರತಿ ರಿಟರ್ನ್|ಗೆ ಗರಿಷ್ಠ 1,000 ರೂ.ಗೆ ಇಳಿಸಲಾಗಿದೆ. ಸಿಜಿಎಸ್|ಟಿ ಮತ್ತು ಐಜಿಎಸ್|ಟಿಗೆ ತಡ ಶುಲ್ಕವನ್ನು 500  ರೂ.ಗೆ ಇಳಿಸಲಾಗಿದೆ.
 • ತೆರಿಗೆದಾರರು 01.06.2021ರಿಂದ 31.08.2021ರ ಒಳಗೆ ಜಿಎಸ್|ಟಿಆರ್-3ಬಿ ತೆರಿಗೆ ವಿವರ ಸಲ್ಲಿಸಿದರೆ ಮಾತ್ರ ಇಳಿಕೆ ಮಾಡಿದ ತಡ ಶುಲ್ಕ ಅನ್ವಯವಾಗುತ್ತದೆ.

ಸಿಜಿಎಸ್|ಟಿ ಕಾಯಿದೆಯ ಸೆಕ್ಷನ್ 47ರಡಿ ವಿಧಿಸಲಾದ ತಡ ಶುಲ್ಕಗಳ ತರ್ಕಬದ್ಧಗೊಳಿಸುವಿಕೆ:

 • ಸಣ್ಣ ತೆರಿಗೆದಾರರಿಗೆ ತಡ ಶುಲ್ಕದಿಂದ ಆಗುವ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಗರಿಷ್ಠ ಮಿತಿಯನ್ನು ತರ್ಕಬದ್ಧಗೊಳಿಸಲಾಗುತ್ತಿದೆ. ತೆರಿಗೆ ಬಾಧ್ಯತೆ, ತೆರಿಗೆದಾರನ ವ್ಯಾಪಾರ ವಹಿವಾಟಿಗೆ ಅನುಗುಣವಾಗಿ ತಡ ಶುಲ್ಕ ಇಳಿಸಲಾಗಿದೆ.
 • ಜಿಎಸ್|ಟಿಆರ್-3ಬಿ ಮತ್ತು ಜಿಎಸ್|ಟಿಆರ್-1 ನಮೂನೆ ಸಲ್ಲಿಕೆ ವಿಳಂಬ ಮಾಡುವ ತೆರಿಗೆದಾರರಿಗೆ ಕೆಳಗಿನಂತೆ ತಡ ಶುಲ್ಕ ಇಳಿಸಲಾಗಿದೆ.
 • ಜಿಎಸ್|ಟಿಆರ್-3ಬಿ ನಮೂನೆಯಲ್ಲಿ ಶೂನ್ಯ ತೆರಿಗೆ ಬಾಧ್ಯತೆ ಹೊಂದಿರುವ ತೆರಿಗೆದಾರ ಅಥವಾ ಜಿಎಸ್|ಟಿಆರ್-1 ನಮೂನೆಯಲ್ಲಿ ಶೂನ್ಯ ಬಾಹ್ಯ ಪೂರೈಕೆ ಮಾಡಿರುವ ತೆರಿಗೆದಾರರಿಗೆ ತಡ ಶುಲ್ಕವನ್ನು 500 ರೂ.ಗೆ ಮಿತಿಗೊಳಿಸಲಾಗಿದೆ.

ಇತರೆ ತೆರಿಗೆದಾರರಿಗೆ:

 • 1.5 ಕೋಟಿ ರೂ. ತನಕ ವಾರ್ಷಿಕ ಸರಾಸರಿ ವಹಿವಾಟು ನಡೆಸುವ ತೆರಿಗೆದಾರರಿಗೆ ತಡಶುಲ್ಕವನ್ನು ಗರಿಷ್ಠ 2 ಸಾವಿರ ರೂ.ಗೆ ಮಿತಿಗೊಳಿಸಲಾಗಿದೆ (ರೂ. 1000 ಸಿಜಿಎಸ್|ಟಿ + ರೂ. 1000 ಎಸ್|ಜಿಎಸ್|ಟಿ).
 • 1.5 ಕೋಟಿ ರೂ.ನಿಂದ 5 ಕೋಟಿ ರೂ. ತನಕ ವಾರ್ಷಿಕ ಸರಾಸರಿ ವಹಿವಾಟು ನಡೆಸುವ ತೆರಿಗೆದಾರರಿಗೆ ತಡ ಪಾವತಿ ಶುಲ್ಕವನ್ನು ಗರಿಷ್ಠ 5 ವಾರಿ ರೂ.ಗೆ ಮಿತಿಗೊಳಿಸಲಾಗಿದೆ (ರೂ. 2500 ಸಿಜಿಎಸ್|ಟಿ + ರೂ. 2500 ಎಸ್|ಜಿಎಸ್|ಟಿ)
 • ವಾರ್ಷಿಕ ಸರಾಸರಿ ವಹಿವಾಟು 5 ಕೋಟಿ ರೂ.ಗಿಂತ ಹೆಚ್ಚಿರುವ ತೆರಿಗೆದಾರರಿಗೆ ಗರಿಷ್ಠ ತಡ ಶುಲ್ಕ ಮಿತಿಯನ್ನು 10 ಸಾವಿರ ರೂ.ಗೆ ಮಿತಿಗೊಳಿಸಲಾಗಿದೆ. (ರೂ. 5000 ಸಿಜಿಎಸ್|ಟಿ + ರೂ. 5000 ಎಸ್|ಡಿಎಸ್|ಟಿ)
 • ನಮೂನೆ ಜಿಎಸ್|ಟಿಆರ್-4ರಲ್ಲಿ ತೆರಿಗೆ ವಿವರ ಸಲ್ಲಿಸಲು ವಿಳಂಬ ಮಾಡುವ ಸಂಯೋಜಿತ ತೆರಿಗೆದಾರರಿಗೆ ಪ್ರತಿ ರಿಟರ್ನ್|ಗೆ ತಡ ಶುಲ್ಕವನ್ನು 500 ರೂ.ಗೆ ಮಿತಿಗೊಳಿಸಲಾಗುವುದು(ರೂ. 250 ಸಿಜಿಎಸ್|ಟಿ + 250 ಎಸ್|ಜಿಎಸ್|ಟಿ). ಇತರೆ ತೆರಿಗೆದಾರರಿಗೆ ಪ್ರತಿ ರಿಟರ್ನ್|ಗೆ ತಡ ಶುಲ್ಕ ಮಿತಿ 2,000 ರೂ. (ರೂ. 1000 ಸಿಜಿಎಸ್|ಟಿ + ರೂ. 1000 ಎಸ್|ಜಿಎಸ್|ಟಿ).
 • ಜಿಎಸ್|ಟಿಆರ್-7 ನಮೂನೆ ವಿಳಂಬವಾಗಿ ಸಲ್ಲಿಸುವ ತೆರಿಗೆದಾರರಿಗೆ ಪ್ರತಿ ರಿಟರ್ನ್|ಗೆ ತಡ ಶುಲ್ಕವನ್ನು 50 ರೂ.ಗೆ ಮಿತಿಗೊಳಿಸಲಾಗಿದೆ(ರೂ. 250 ಸಿಜಿಎಸ್|ಟಿ + 250 ಎಸ್|ಜಿಎಸ್|ಟಿ).

ಮೇಲಿನ ಎಲ್ಲಾ ಪ್ರಸ್ತಾವನೆಗಳು ನಿರೀಕ್ಷಿತ ತೆರಿಗೆ ಅವಧಿಗಳಿಗೆ ಮಾತ್ರ ಅನ್ವಯವಾಗುತ್ತವೆ.

ತೆರಿಗೆದಾರರಿಗೆ ಕೋವಿಡ್-19 ಸಂಬಂಧಿತ ಪರಿಹಾರ ಕ್ರಮಗಳು

01.05.2021ರಂದು ಹೊರಡಿಸಲಾದ ಅಧಿಸೂಚನೆ ಮೂಲಕ ಈಗಾಗಲೇ ತೆರಿಗೆದಾರನಿಗೆ ನೀಡಿರುವ ಪರಿಹಾರ ಕ್ರಮಗಳ ಜತೆಗೆ, ಕೆಳಕಂಡ ಹೆಚ್ಚುವರಿ ತೆರಿಗೆ ಪರಿಹಾರಗಳನ್ನು ಒದಗಿಸಲಾಗುತ್ತಿದೆ.

ಸಣ್ಣ ತೆರಿಗೆದಾರರು

(ವಾರ್ಷಿಕ ಸರಾಸರಿ ವಹಿವಾಟು 5 ಕೋಟಿ ರೂ.ವರೆಗೆ)

ಮಾರ್ಚ್, ಏಪ್ರಿಲ್ ತೆರಿಗೆ ಅವಧಿ

 • ಜಿಎಸ್|ಟಿಆರ್-3ಬಿ ನಮೂನೆಯಲ್ಲಿ ತೆರಿಗೆ ವಿವರ ಸಲ್ಲಿಕೆ ಅಥವಾ ಪಿಎಂಟಿ-06 ಚಲನ್ ಸಲ್ಲಿಕೆ ಕೊನೆಯ ದಿನದ ನಂತರದ 15 ದಿನಗಳ ಕಾಲ ತೆರಿಗೆ ಮೊತ್ತಕ್ಕೆ ಶೂನ್ಯ ಬಡ್ಡಿದರ ಅನ್ವಯ, 15 ದಿನಗಳ ನಂತರ ಮಾರ್ಚ್ ಮತ್ತು ಏಪ್ರಿಲ್|ನಲ್ಲಿ 45 ಮತ್ತು 30 ದಿನಗಳ ತನಕ ಶೇಕಡ 9 ಬಡ್ಡಿದರ ಅನ್ವಯ.
 • ಸಿಎಂಪಿ-08 ಚಲನ್ ಸಲ್ಲಿಸುವ ಸಂಯೋಜಿತ ಡೀಲರ್|ಗಳು ಮಾರ್ಚ್ 2021ಕ್ಕೆ ಅಂತ್ಯವಾಗುವ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಅಂತಿಮ ದಿನದ ನಂತರ 15 ದಿನಗಳ ಕಾಲ ಶೂನ್ಯ ಬಡ್ಡಿದರ ಅನ್ವಯ. ಅದಾದ ನಂತರ 45 ದಿನಗಳ ಕಾಲ ತೆರಿಗೆ ಮೊತ್ತಕ್ಕೆ ಕಡಿತ ಮಾಡಿದ ಶೇಕಡ 9 ತೆರಿಗೆ ದರ ಅನ್ವಯವಾಗಲಿದೆ.

2021 ಮೇ ತೆರಿಗೆ ಅವಧಿ

 •  ಜಿಎಸ್|ಟಿಆರ್-3ಬಿ ಅಥವಾ ಪಿಎಂಟಿ-06 ಚಲನ್ ಸಲ್ಲಿಕೆಯ ಅಂತಿಮ ದಿನದ ನಂತರ ಮೊದಲ 15 ದಿನಗಳ ಕಾಲ ಯಾವುದೇ ಬಡ್ಡಿ ಅನ್ವಯವಾಗುವುದಿಲ್ಲ. ಆನಂತರ ಶೇ.9 ಬಡ್ಡಿದರ ಅನ್ವಯ
 • ಜಿಎಸ್|ಟಿಆರ್-3ಬಿ ನಮೂನೆಯಲ್ಲಿ ಮಾಸಿಕ ರಿಟರ್ನ್ ಸಲ್ಲಿಕೆಗೆ 30 ದಿನ  ವಿಳಂಬ ಮಾಡುವ ತೆರಿಗೆದಾರರಿಗೆ ತಡ ಶುಲ್ಕ ಮನ್ನಾ

ದೊಡ್ಡ ತೆರಿಗೆದಾರರು

(ವಾರ್ಷಿಕ ಸರಾಸರಿ ವಹಿವಾಟು 5 ಕೋಟಿಗಿಂತ ಅಧಿಕ)

 • ಮೇ ತೆರಿಗೆ ಅವಧಿಯಲ್ಲಿ ರಿಟರ್ನ್(ತೆರಿಗೆ ವಿವರ) ಫೈಲಿಂಗ್ ಕಡೆ ದಿನದ ನಂತರ 15 ದಿನಗಳ ಕಾಲ ಕಡಿತಗೊಳಿಸಿದ ಬಡ್ಡಿ ದರ ಶೇಕಡ 9ರಷ್ಟು ಅನ್ವಯ.
 • ಜಿಎಸ್|ಟಿಆರ್-3ಬಿ ಸಲ್ಲಿಕೆ 15 ದಿನ ವಿಳಂಬವಾದರೆ ತಡಶುಲ್ಕ ಮನ್ನಾ.

ಕೋವಿಡ್ ಸಂಬಂಧಿತ ನಿರ್ದಿಷ್ಟ ವಿನಾಯಿತಿಗಳನ್ನು ಒದಗಿಸಲಾಗುತ್ತಿದೆ.

 • ಜಿಎಸ್|ಟಿಆರ್-1/ಐಎಫ್ಎಫ್ ಮೇ ತಿಂಗಳ ಫೈಲಿಂಗ್ ಅಂತಿಮ ದಿನ 15 ದಿನಗಳಿಗೆ ವಿಸ್ತರಣೆ.
 • 2020ರ ಜಿಎಸ್|ಟಿಆರ್-4 ಫೈಲಿಂಗ್ 31.07.2021ರ ವರೆಗೆ ವಿಸ್ತರಣೆ
 • 2021 ಮಾರ್ಚ್ 31ಕ್ಕೆ ಇದ್ದ ಐಟಿಸಿ-04 ಫೈಲಿಂಗ್ 30.06.2021ಕ್ಕೆ ವಿಸ್ತರಣೆ
 • ಡಿಜಿಟಲ್ ಸಹಿ ಪ್ರಮಾಣಪತ್ರದ ಬದಲಾಗಿ ವಿದ್ಯುನ್ಮಾನ ಪರಿಶೀಲನೆ ಸಂಕೇತ(ಇವಿಸಿ)ದ ಮೂಲಕ ರಿಟರ್ನ್ ಫೈಲಿಂಗ್|ಗೆ ಕಂಪನಿಗಳಿಗೆ 31.08.2021ರ ವರೆಗೆ ಅನುಮತಿ

ಸಿಜಿಎಸ್|ಟಿ ಕಾಯಿದೆಯ ಅನುಚ್ಛೇದ 168 ಅಡಿ ವಿನಾಯಿತಿ

2021 ರ ಏಪ್ರಿಲ್ 15 ರಿಂದ 2021 ರ ಜೂನ್ 29ರ ವರೆಗೆ ಬರುವ ಜಿಎಸ್ಟಿ ಕಾಯ್ದೆಯಡಿ, ಯಾವುದೇ ಪ್ರಾಧಿಕಾರದಿಂದ ಅಥವಾ ಯಾವುದೇ ವ್ಯಕ್ತಿಯಿಂದ ವಿವಿಧ ಕಾರ್ಯಗಳನ್ನು ಪೂರ್ಣಗೊಳಿಸುವ ಸಮಯದ ಮಿತಿಯನ್ನು 2021 ಜೂನ್ 30ರ ವರೆಗೆ ವಿಸ್ತರಿಸಲಾಗುವುದು.

2020-21  ಆರ್ಥಿಕ ವರ್ಷದ ವಾರ್ಷಿಕ ತೆರಿಗೆ ವಿವರ ಸಲ್ಲಿಕೆ ಪ್ರಕ್ರಿಯೆ ಸರಳೀಕರಣ:

 • 2021 ಹಣಕಾಸು ಕಾಯಿದೆ ಮೂಲಕ ಸಿಜಿಎಸ್|ಟಿ ಕಾಯಿದೆಯ 35 ಮತ್ತು 44ನೇ ಅನುಚ್ಛೇದಕ್ಕೆ ತಿದ್ದುಪಡಿ ತರಲು ಅಧಿಸೂಚನೆ ಹೊರಡಿಸಲಾಗುವುದು. ಜಿಎಸ್|ಟಿಆರ್-9ಸಿ ನಮೂನೆಯಲ್ಲಿ ತೆರಿಗೆದಾರ ಸಲ್ಲಿಸುವ ಲೆಕ್ಕ ಹೊಂದಾಣಿಕೆ ಹೇಳಿಕೆ (ರಿಕಾನ್ಸಿಲಿಯೇಷನ್ ಸ್ಟೇಟ್|ಮೆಂಟ್)ಗಳ ಅನುಸರಣಾ ಅಗತ್ಯಗಳನ್ನು ಇದು ಸರಾಗಗೊಳಿಸಲಿದೆ. ಜತೆಗೆ, ತೆರಿಗೆದಾರನೇ ಲೆಕ್ಕ ಹೊಂದಾಣಿಕೆ ಹೇಳಿಕೆಯನ್ನು ಸ್ವಯಂ-ಪ್ರಮಾಣೀಕರಿಸಲು ಇದು ಅನುವು ಮಾಡಿಕೊಡಲಿದೆ. ಲೆಕ್ಕ ಪರಿಶೋಧಕರ ಬಳಿ ಪ್ರಮಾಣಪತ್ರ ಪಡೆಯುವುದನ್ನು ಇದು ತಡೆಯುತ್ತದೆ. 2020-21ರ ವಾರ್ಷಿಕ ರಿಟರ್ನ್|ಗೆ ಬದಲಾವಣೆ ಅನ್ವಯವಾಗಲಿದೆ.
 • ವರ್ಷಕ್ಕೆ ಸರಾಸರಿ 2 ಕೋಟಿ ರೂ.ವರೆಗೆ ವಹಿವಾಟು ಹೊಂದಿರುವ ತೆರಿಗೆದಾರರು 2020-21ನೇ ಸಾಲಿನಲ್ಲಿ ಜಿಎಸ್|ಟಿಆರ್-9 / 9ಎ ವಾರ್ಷಿಕ ರಿಟರ್ನ್ ಫೈಲಿಂಗ್ ಮಾಡುವುದು ಕಡ್ಡಾಯವಾಗಿರದೆ, ಐಚ್ಛಿಕವಾಗಿರುತ್ತದೆ.
 • 2020-21ನೇ ಸಾಲಿಗೆ ಜಿಎಸ್|ಟಿಆರ್-9ಸಿ ನಮೂನೆಯಲ್ಲಿ ರಿಕಾನ್ಸಿಲಿಯೇಷನ್ ಸ್ಟೇಟ್|ಮೆಂಟ್ (ಲೆಕ್ಕ ಹೊಂದಾಣಿಕೆ ಹೇಳಿಕೆ) ಅನ್ನು ಸರಾಸರಿ 5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ತೆರಿಗೆದಾರ ಸಲ್ಲಿಸಬೇಕಾಗುತ್ತದೆ.
 • 01.07.2017ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತಂದಿರುವ ಸಿಜಿಎಸ್|ಟಿ ಕಾಯಿದೆಯ ಅನುಚ್ಛೇದ 50ರ ತಿದ್ದುಪಡಿಗಳಂತೆ, ನಿವ್ವಳ ನಗದು ಆಧಾರದಲ್ಲಿ ಬಡ್ಡಿ ಪಾವತಿಸಲಾಗುತ್ತದೆ. ಇದನ್ನು ಅತಿಶೀಘ್ರವೇ ಪ್ರಕಟಿಸಲಾಗುತ್ತದೆ.

ಇತರೆ ಕ್ರಮಗಳು...

ಜಿಎಸ್|ಟಿ ಕಾಯಿದೆಯ ನಿರ್ದಿಷ್ಟ ಅನಿಬಂಧಗಳಿಗೆ ತಿದ್ದುಪಡಿ ತರಲು ಜಿಎಸ್|ಟಿ ಮಂಡಳಿ ಸಭೆ ಶಿಫಾರಸು ಮಾಡಿದೆ. ಪ್ರಸ್ತುತ ಇರುವ ಜಿಎಸ್|ಟಿಆರ್-1 / 3ಬಿ ರಿಟರ್ನ್ ಫೈಲಿಂಗ್ ವ್ಯವಸ್ಥೆಯನ್ನು ಡಿಫಾಲ್ಟ್ ರಿಟರ್ನ್ ಫೈಲಿಂಗ್ ವ್ಯವಸ್ಥೆಯಾಗಿ ರೂಪಿಸಲು ಶಿಫಾರಸು ಮಾಡಿದೆ.

***

ಸೂಚನೆ: ಎಲ್ಲಾ ಪಾಲುದಾರರ ಮಾಹಿತಿಗಾಗಿ ಜಿಎಸ್|ಟಿ ಮಂಡಳಿ ಸಭೆಯ ಶಿಫಾರಸುಗಳನ್ನು ಪತ್ರಿಕಾ ಬಿಡುಗಡೆಯಲ್ಲಿ ಸರಳ ಭಾಷೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಸಂಬಂಧಿಸಿದ ಸುತ್ತೋಲೆಗಳು ಮತ್ತು ಅಧಿಸೂಚನೆಗಳಲ್ಲಿ ಇದೇ ವಿಷಯವನ್ನು ಪರಿಣಾಮಕಾರಿಯಾಗಿ ನೀಡಲಾಗುವುದು. ಇದು ಕಾನೂನಿನ ಕಟ್ಟುಪಾಡು (ಬಲ) ಹೊಂದಿರುತ್ತದೆ.

***(Release ID: 1722596) Visitor Counter : 342