ನೀತಿ ಆಯೋಗ
ಭಾರತದ ಲಸಿಕೆ ಪ್ರಕ್ರಿಯೆಯ ಮಿಥ್ಯೆಗಳು ಮತ್ತು ವಾಸ್ತವಾಂಶಗಳು
Posted On:
27 MAY 2021 12:01PM by PIB Bengaluru
ಭಾರತದ ಕೋವಿಡ್-19 ಲಸಿಕೆ ಕಾರ್ಯಕ್ರಮದ ಬಗ್ಗೆ ಹಲವಾರು ಮಿಥ್ಯೆಗಳು ಹರಿದಾಡುತ್ತಿವೆ. ತಿರುಚಲಾದ ಹೇಳಿಕೆಗಳು, ಅರ್ಧ ಸತ್ಯಗಳು ಮತ್ತು ಅಪ್ಪಟ ಸುಳ್ಳುಗಳಿಂದಾಗಿ ಈ ಮಿಥ್ಯೆಗಳು ಸೃಷ್ಟಿಯಾಗಿವೆ.
ನೀತಿ ಆಯೋಗದ ಸದಸ್ಯ (ಆರೋಗ್ಯ) ಮತ್ತು ಕೋವಿಡ್-19 ಲಸಕೀಕರಣದ ರಾಷ್ಟ್ರೀಯ ತಜ್ಞರ ತಂಡದ (ಎನ್ಇಜಿವಿಎಸಿ) ಅಧ್ಯಕ್ಷ ಡಾ. ವಿನೋದ್ ಪಾಲ್ ಈ ಮಿಥ್ಯೆಗಳನ್ನು ಉದ್ದೇಶಿಸಿ ಮಾತನಾಡಿದ್ದು, ಈ ಎಲ್ಲಾ ವಿಷಯಗಳ ಬಗ್ಗೆ ವಾಸ್ತವಾಂಶಗಳನ್ನು ಬಹಿರಂಗಪಡಿಸಿದ್ದಾರೆ.
ಮಿಥ್ಯೆಗಳು ಮತ್ತು ವಾಸ್ತವಾಂಶಗಳು ಇಲ್ಲಿವೆ:
ಮಿಥ್ಯೆ 1: ವಿದೇಶದಿಂದ ಲಸಿಕೆಗಳನ್ನು ಖರೀದಿಸಲು ಕೇಂದ್ರವು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿಲ್ಲ.
ವಾಸ್ತವಾಂಶ: ಕೇಂದ್ರ ಸರಕಾರವು 2020ರ ಮಧ್ಯಭಾಗದಿಂದ ಎಲ್ಲಾ ಪ್ರಮುಖ ಅಂತರರಾಷ್ಟ್ರೀಯ ಲಸಿಕೆ ತಯಾರಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಫೈಜರ್, ಜೆ&ಜೆ ಮತ್ತು ಮಾಡರ್ನಾ ಕಂಪನಿಗಳ ಜೊತೆ ಅನೇಕ ಸುತ್ತಿನ ಚರ್ಚೆಗಳು ನಡೆದಿವೆ. ಅವುಗಳನ್ನು ಭಾರತದಲ್ಲಿ ಪೂರೈಸಲು ಮತ್ತು /ಅಥವಾ ತಯಾರಿಸಲು ಸರಕಾರ ಎಲ್ಲಾ ಸಹಾಯವನ್ನು ನೀಡಿದೆ. ಆದರೆ ಈ ಕಂಪನಿಗಳ ಲಸಿಕೆಗಳು ಉಚಿತ ಪೂರೈಕೆ ಅಡಿಯಲ್ಲಿ ಲಭ್ಯವಿದೆ ಎಂದಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಲಸಿಕೆಗಳನ್ನು ಖರೀದಿಸುವುದು ಎಂದರೆ ಮಳಿಗೆಯೊಂದರ ಕಪಾಟಿನಿಂದ ವಸ್ತುಗಳನ್ನು ಖರೀದಿಸಿದಂತೆ ಅಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಜಾಗತಿಕವಾಗಿ ಲಸಿಕೆಗಳ ಪೂರೈಕೆ ಸೀಮಿತವಾಗಿದೆ ಮತ್ತು ಆ ಸೀಮಿತ ದಾಸ್ತಾನನ್ನು ಹಂಚಿಕೆ ಮಾಡುವಲ್ಲಿ ಕಂಪನಿಗಳು ತಮ್ಮದೇ ಆದ ಆದ್ಯತೆಗಳು, ಕಾರ್ಯತಂತ್ರಗಳು ಮತ್ತು ಒತ್ತಾಯಗಳನ್ನು ಹೊಂದಿವೆ. ನಮ್ಮ ದೇಶೀಯ ಲಸಿಕೆ ತಯಾರಕರು ನಮಗೆ ಆದ್ಯತೆ ನೀಡಿದಂತೆಯೇ ಅವರು ತಮ್ಮ ದೇಶಗಗಳಿಗೆ ಆದ್ಯತೆ ನೀಡುತ್ತಾರೆ. ಫೈಜರ್ ಲಸಿಕೆ ಲಭ್ಯತೆ ಸುಳಿವು ಸಿಕ್ಕ ತಕ್ಷಣ, ಕೇಂದ್ರ ಸರಕಾರ ಮತ್ತು ಕಂಪನಿಯು ಸಾಧ್ಯವಾದಷ್ಟು ಬೇಗ ಲಸಿಕೆಯ ಆಮದಿಗೆ ಒಟ್ಟಾಗಿ ಕೆಲಸ ಮಾಡುತ್ತಿವೆ. ಭಾರತ ಸರಕಾರದ ಪ್ರಯತ್ನಗಳ ಪರಿಣಾಮವಾಗಿ, ʻಸ್ಪುಟ್ನಿಕ್ʼ ಲಸಿಕೆ ಪ್ರಯೋಗಗಳು ವೇಗ ಪಡೆದುಕೊಂಡವು ಮತ್ತು ಸಮಯೋಚಿತ ಅನುಮೋದನೆಯೊಂದಿಗೆ, ರಷ್ಯಾ ಈಗಾಗಲೇ ನಮ್ಮ ಕಂಪನಿಗಳಿಗೆ ಎರಡು ಹಂತದ ಲಸಿಕೆಗಳನ್ನು ಕಳುಹಿಸಿದೆ. ಶೀಘ್ರದಲ್ಲೇ ಭಾರತದಲ್ಲೇ ಉತ್ಪಾದನೆಯನ್ನೂ ಪ್ರಾರಂಭಿಸಲಿದೆ. ಭಾರತ ಮತ್ತು ಜಾಗತಿಕ ಪೂರೈಕೆಗಾಗಿ ಭಾರತಕ್ಕೆ ಬಂದು ಲಸಿಕೆ ತಯಾರಿಸುವಂತೆ ಎಲ್ಲಾ ಅಂತರರಾಷ್ಟ್ರೀಯ ಲಸಿಕೆ ತಯಾರಕರಿಗೆ ಪದೇ ಪದೇ ವಿನಂತಿ ಮಾಡಿದ್ದೇವೆ, ಮಾಡುತ್ತಿದ್ದೇವೆ.
ಮಿಥ್ಯೆ 2: ಜಾಗತಿಕವಾಗಿ ಲಭ್ಯವಿರುವ ಲಸಿಕೆಗಳನ್ನು ಕೇಂದ್ರ ಅನುಮೋದಿಸಿಲ್ಲ.
ವಾಸ್ತವಾಂಶ: ಅಮೆರಿಕದ ʻಎಫ್ಡಿಎʼ ಮತ್ತು ಇಎಂಎ, ಬ್ರಿಟನ್ನ ʻಎಂಎಚ್ಆರ್ಎʼ ಮತ್ತು ಜಪಾನ್ನ ʻಪಿಎಂಡಿಎʼ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್ಒ) ತುರ್ತು ಬಳಕೆ ಪಟ್ಟಿಯಲ್ಲಿ ಅನುಮೋದಿಸಲ್ಪಟ್ಟ ಲಸಿಕೆಗಳನ್ನು ಪಡೆಯಲು ಭಾರತಕ್ಕೆ ಕಳೆದ ಏಪ್ರಿಲ್ನಲ್ಲಿ ಅನುಮತಿ ದೊರೆತಿದೆ. ಈ ಲಸಿಕೆಗಳು ಪೂರ್ವಭಾವಿ ಪ್ರಯೋಗಗಳಿಗೆ ಒಳಗಾಗುವ ಅಗತ್ಯವಿಲ್ಲ. ಇತರ ದೇಶಗಳ ಪ್ರತಿಷ್ಠಿತ ಕಂಪನಿಗಳು ತಯಾರಿಸಿದ ಲಸಿಕೆಗಳನ್ನು ಪ್ರಯೋಗಕ್ಕೆ ಒಳಪಡಿಸಬೇಕಾದ ಅಗತ್ಯಕ್ಕೆ ಸಂಪೂರ್ಣ ವಿನಾಯಿತಿ ನೀಡುವ ಸಲುವಾಗಿ ಈ ನಿಬಂಧನೆಗೆ ಈಗ ಮತ್ತಷ್ಟು ತಿದ್ದುಪಡಿ ತರಲಾಗಿದೆ. ಯಾವುದೇ ವಿದೇಶಿ ಲಸಿಕೆ ತಯಾರಕರ ಅರ್ಜಿಗಳು ಪ್ರಸ್ತುತ ಭಾರತಿಯ ಔಷಧ ನಿಯಂತ್ರಕರ ಮುಂದೆ ಅನುಮೋದನೆಗಾಗಿ ಬಾಕಿ ಇಲ್ಲ.
ಮಿಥ್ಯೆ 3: ಲಸಿಕೆಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರವು ಸಾಕಷ್ಟು ಪ್ರಯತ್ನ ಮಾಡುತ್ತಿಲ್ಲ.
ವಾಸ್ತವಾಂಶ: 2020ರ ಆರಂಭದಿಂದ ಹೆಚ್ಚಿನ ಕಂಪನಿಗಳು ಲಸಿಕೆಗಳನ್ನು ಉತ್ಪಾದಿಸಲು ಅನುಕೂಲವಾಗುವಂತೆ ಕೇಂದ್ರ ಸರಕಾರವು ಪರಿಣಾಮಕಾರಿ ಸಮನ್ವಯಕಾರನ ಪಾತ್ರವನ್ನು ವಹಿಸುತ್ತಿದೆ. ಪ್ರಸ್ತುತ ಕೇವಲ ಭಾರತ್ ಬಯೋಟೆಕ್ ಒಂದೇ ಒಂದು ಕಂಪನಿಯು ʻಐಪಿʼಯನ್ನು ಹೊಂದಿದೆ. ಭಾರತ್ ಬಯೋಟೆಕ್ನ ಸ್ವಂತ ಉತ್ಪಾದನಾ ಘಟಕಗಳನ್ನು 1ರಿಂದ 4ಕ್ಕೆ ಹೆಚ್ಚಿಸಲಾಗಿದ್ದು, ಜೊತೆಗೆ ಇತರ 3 ಕಂಪನಿಗಳು/ಸ್ಥಾವರಗಳಲ್ಲೂ ಕೊವಾಕ್ಸಿನ್ ಉತ್ಪಾದನೆಯಾಗುವಂತೆ ಭಾರತ ಸರಕಾರ ಖಾತರಿಪಡಿಸಿದೆ. ಭಾರತ್ ಬಯೋಟೆಕ್ನ ಕೊವಾಕ್ಸಿನ್ ಉತ್ಪಾದನೆಯನ್ನು ಅಕ್ಟೋಬರ್ ವೇಳೆಗೆ ತಿಂಗಳಿಗೆ 1 ಕೋಟಿ ಯಿಂದ 10 ಕೋಟಿ ಡೋಸ್ಗೆ ಹೆಚ್ಚಿಸಲಾಗುತ್ತಿದೆ. ಹೆಚ್ಚುವರಿಯಾಗಿ, ಮೂರು ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ಯು) ಒಟ್ಟಾಗಿ ಡಿಸೆಂಬರ್ ವೇಳೆಗೆ 4.0 ಕೋಟಿ ಡೋಸ್ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿವೆ. ಸರಕಾರದ ನಿರಂತರ ಪ್ರೋತ್ಸಾಹದೊಂದಿಗೆ, ಸೀರಮ್ ಇನ್ಸ್ಟಿಟ್ಯೂಟ್, ಕೋವಿಶೀಲ್ಡ್ ಉತ್ಪಾದನೆಯನ್ನು ತಿಂಗಳಿಗೆ 6.5 ಕೋಟಿ ಡೋಸ್ಗಳಿಂದ ತಿಂಗಳಿಗೆ 11.0 ಕೋಟಿ ಡೋಸ್ಗಳಿಗೆ ಹೆಚ್ಚಿಸುತ್ತಿದೆ. ಡಾ. ರೆಡ್ಡಿಸ್ ಸಂಸ್ಥೆಯ ಸಹಯೋಗದಲ್ಲಿ 6 ಕಂಪನಿಗಳು ರಷ್ಯಾದ ಜತೆ ಪಾಲುದಾರಿಕೆಯೊಂದಿಗೆ ʻಸ್ಪುಟ್ನಿಕ್ʼ ಲಸಿಕೆಯನ್ನು ತಯಾರಿಸಲು ಭಾರತ ಸರಕಾರ ಖಾತರಿಪಡಿಸಿದೆ.
ʻಕೋವಿಡ್ ಸುರಕ್ಷʼ ಯೋಜನೆಯಡಿ ಉದಾರ ಧನಸಹಾಯದ ಮೂಲಕ ʻಝೈಡಸ್ ಕ್ಯಾಡಿಲಾʼ, ʻಬಯೋಇʼ ಮತ್ತು ʻಜೆನ್ನೋವಾʼ ಸಂಸ್ಥೆಗಳ ಸ್ಥಳೀಯ ಲಸಿಕೆ ತಯಾರಿಕೆ ಪ್ರಯತ್ನಗಳನ್ನು ಕೇಂದ್ರ ಸರಕಾರ ಬೆಂಬಲಿಸುತ್ತಿದೆ ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳಲ್ಲಿ ತಾಂತ್ರಿಕ ಬೆಂಬಲವನ್ನೂ ಈ ಸಂಸ್ಥೆಗಳಿಗೆ ಒದಗಿಸುತ್ತಿದೆ. ಭಾರತ್ ಬಯೋಟೆಕ್ನ ಸಿಂಗಲ್ ಡೋಸ್ ಇಂಟ್ರಾನಾಸಲ್ (ಮೂಗಿನ ಮೂಲಕ ಹನಿ) ಲಸಿಕೆಯ ಅಭಿವೃದ್ಧಿಯು ಭಾರತ ಸರಕಾರದ ಧನಸಹಾಯದೊಂದಿಗೆ ಉತ್ತಮವಾಗಿ ಮುಂದುವರಿಯುತ್ತಿದೆ. ಜೊತೆಗೆ ಇದು ಜಗತ್ತಿನಲ್ಲೇ ಕೋವಿಡ್ ವಿರುದ್ಧ ಹೋರಾಟದಲ್ಲಿ ಕ್ರಾಂತಿಕಾರಿ ಉಪಕ್ರಮ ಆಗಬಹುದು. 2021ರ ಅಂತ್ಯದ ವೇಳೆಗೆ ನಮ್ಮ ಲಸಿಕೆ ಉದ್ಯಮವು 200 ಕೋಟಿ ಡೋಸ್ಗಳ ಉತ್ಪಾದನೆ ಮಾಡಬಹುದೆಂದು ಅಂದಾಜಿಸಲಾಗಿದೆಯೆಂದರೆ ಅದಕ್ಕೆ ಕಾರಣ ಇಂತಹ ಪ್ರಯತ್ನಗಳು, ಅವಿರತ ಬೆಂಬಲ ಹಾಗೂ ಪಾಲುದಾರಿಕೆ. ಇಷ್ಟು ಅಗಾಧ ಪ್ರಮಾಣದಲ್ಲಿ, ಅದೂ ಸಾಂಪ್ರದಾಯಿಕ ಮತ್ತು ಅತ್ಯಾಧುನಿಕ ಡಿಎನ್ಎ ಹಾಗೂ ಎಂಆರ್ಎನ್ಎ ವೇದಿಕೆಗಳಲ್ಲಿ ಲಸಿಕೆ ಉತ್ಪಾದನೆ ಸಾಮರ್ಥ್ಯದ ಬಗ್ಗೆ ಕನಸು ಕಾಣಲು ಎಷ್ಟು ದೇಶಗಳಿಗೆ ತಾನೆ ಸಾಧ್ಯ? ಭಾರತ ಸರಕಾರ ಮತ್ತು ಲಸಿಕೆ ತಯಾರಕರು ನಿತ್ಯ ನಿರಂತರ ತೊಡಗಿಕೊಳ್ಳುವ ಮೂಲಕ ಈ ಕಾರ್ಯಾಚರಣೆಯಲ್ಲಿ ಒಂದು ತಂಡವಾಗಿ ಕೆಲಸ ಮಾಡಿದ್ದಾರೆ.
ಮಿಥ್ಯೆ 4: ಕೇಂದ್ರವು ಕಡ್ಡಾಯ ಪರವಾನಗಿಯನ್ನು ಜಾರಿಗೆ ತರಬೇಕು.
ವಾಸ್ತವಾಂಶ: ಕಡ್ಡಾಯ ಪರವಾನಗಿಯು ತೀರಾ ಮುಖ್ಯವಾದ 'ಸೂತ್ರ' ವಲ್ಲದ ಕಾರಣ, ಅದು ತುಂಬಾ ಆಕರ್ಷಕ ಆಯ್ಕೆಯೇನಲ್ಲ. ಇಲ್ಲಿ ಅಗತ್ಯವಾಗಿರುವುದು ಸಕ್ರಿಯ ಪಾಲುದಾರಿಕೆ, ಮಾನವ ಸಂಪನ್ಮೂಲಗಳ ತರಬೇತಿ, ಕಚ್ಚಾ ವಸ್ತುಗಳ ಖರೀದಿ ಮತ್ತು ಅಗತ್ಯವಿರುವ ಅತ್ಯುನ್ನತ ಮಟ್ಟದ ಜೈವಿಕ ಸುರಕ್ಷತಾ ಪ್ರಯೋಗಾಲಯಗಳು. ತಂತ್ರಜ್ಞಾನ ವರ್ಗಾವಣೆಯು ಮಹತ್ವದ್ದಾಗಿದ್ದು, ಅದು ʻಸಂಶೋಧನೆ ಮತ್ತು ಅಭಿವೃದ್ಧಿʼ(ಆರ್&ಡಿ) ನಡೆಸಿದ ಕಂಪನಿಯ ಕೈಯಲ್ಲೇ ಉಳಿದಿದೆ. ವಾಸ್ತವವಾಗಿ, ನಾವು ಕಡ್ಡಾಯ ಪರವಾನಗಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಮತ್ತು ಕೊವಾಕ್ಸಿನ್ ಉತ್ಪಾದನೆಯನ್ನು ಹೆಚ್ಚಿಸಲು ಭಾರತ್ ಬಯೋಟೆಕ್ ಮತ್ತು ಇತರ 3 ಘಟಕಗಳ ನಡುವೆ ಸಕ್ರಿಯ ಪಾಲುದಾರಿಕೆಯನ್ನು ಖಚಿತಪಡಿಸಿದ್ದೇವೆ. ʻಸ್ಪುಟ್ನಿಕ್ʼಗೂ ಇದೇ ರೀತಿಯ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿದೆ. ಈ ಬಗ್ಗೆ ಒಮ್ಮೆ ಯೋಚಿಸಿ ನೋಡಿ: ʻಮಾಡರ್ನಾʼ 2020ರ ಅಕ್ಟೋಬರ್ನಲ್ಲೇ ತನ್ನ ಲಸಿಕೆಗಳನ್ನು ತಯಾರಿಸುವ ಯಾವುದೇ ಕಂಪನಿಯ ವಿರುದ್ಧ ಮೊಕದ್ದಮೆ ಹೂಡುವುದಿಲ್ಲ ಎಂದು ಹೇಳಿತ್ತು. ಆದರೆ ಇದುವರೆಗೂ ಒಂದೇ ಒಂದು ಕಂಪನಿಯೂ ಅಂತಹ ಪ್ರಯತ್ನಕ್ಕೆ ಮುಂದಾಗಿಲ್ಲ. ಪರವಾನಗಿ ಎಂಬುದು ನಗಣ್ಯ ಸಮಸ್ಯೆ ಎಂಬುದನ್ನು ಇದು ತೋರಿಸುತ್ತದೆ. ಲಸಿಕೆ ತಯಾರಿಕೆಯು ಅಷ್ಟು ಸುಲಭವಾಗಿದ್ದರೆ, ಅಭಿವೃದ್ಧಿ ಹೊಂದಿದ ಜಗತ್ತಿನಲ್ಲೂ ಲಸಿಕೆ ಅಭಾವ ಏಕೆ ಉದ್ಭವಿಸುತ್ತಿತ್ತು?
ಮಿಥ್ಯೆ 5: ಕೇಂದ್ರವು ತನ್ನ ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸಿದೆ.
ವಾಸ್ತವಾಂಶ: ಲಸಿಕೆ ತಯಾರಕರಿಗೆ ಧನಸಹಾಯ ನೀಡುವುದರಿಂದ ಹಿಡಿದು ಉತ್ಪಾದನೆ ಹೆಚ್ಚಳದವರೆಗೆ, ಮತ್ತು ಭಾರತಕ್ಕೆ ವಿದೇಶಿ ಲಸಿಕೆಗಳನ್ನು ತರುವವರೆಗೆ ಕೇಂದ್ರ ಸರಕಾರವು ತನ್ನಿಂದ ಸಾಧ್ಯವಾದ ಎಲ್ಲಾ ಅಗಾಧ ಪ್ರಯತ್ನಗಳನ್ನು ಮಾಡುತ್ತಿದೆ. ಕೇಂದ್ರವು ಖರೀದಿಸಿದ ಸಂಪೂರ್ಣ ಲಸಿಕೆಗಳನ್ನು ಜನರಿಗೆ ಉಚಿತವಾಗಿ ನೀಡಲು ರಾಜ್ಯಗಳಿಗೆ ಪೂರೈಸಲಾಗುತ್ತಿದೆ. ರಾಜ್ಯಗಳಿಗೆ ಇದೆಲ್ಲದರ ಬಗ್ಗೆಯೂ ಸಾಕಷ್ಟು ಅರಿವಿದೆ. ರಾಜ್ಯಗಳಿಗೆ ಅವುಗಳ ವಿಶೇಷ ಮನವಿಯ ಬಳಿಕವಷದ್ಟೇ ನೇರವಾಗಿ ಲಸಿಕೆಗಳನ್ನು ಖರೀದಿಸಲು ಪ್ರಯತ್ನಿಸಲು ಭಾರತ ಸರಕಾರವು ಅನುವು ಮಾಡಿಕೊಟ್ಟಿದೆ. ದೇಶದ ಉತ್ಪಾದನಾ ಸಾಮರ್ಥ್ಯ ಮತ್ತು ವಿದೇಶದಿಂದ ನೇರವಾಗಿ ಲಸಿಕೆಗಳನ್ನು ಸಂಗ್ರಹಿಸಲು ಇರುವ ತೊಂದರೆಗಳೇನು ಎಂಬುದು ರಾಜ್ಯಗಳಿಗೆ ಚೆನ್ನಾಗಿ ತಿಳಿದಿದೆ. ವಾಸ್ತವವಾಗಿ, ಭಾರತ ಸರಕಾರವು ಜನವರಿಯಿಂದ ಏಪ್ರಿಲ್ವರೆಗೆ ಸಂಪೂರ್ಣ ಲಸಿಕೆ ಕಾರ್ಯಕ್ರಮವನ್ನು ನಡೆಸಿತು. ಮೇ ತಿಂಗಳ ಪರಿಸ್ಥಿತಿಗೆ ಹೋಲಿಸಿದರೆ ಈ ಅವಧಿಯಲ್ಲಿ ಕಾರ್ಯನಿರ್ವಹಣೆ ಸಾಕಷ್ಟು ಉತ್ತಮವಾಗಿತ್ತು. ಆದರೆ 3 ತಿಂಗಳಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರಿಗೂ ಉತ್ತಮ ಪ್ರಮಾಣದಲ್ಲಿ ಲಸಿಕೆ ನೀಡಲು ಸಾಧ್ಯವಾಗದ ರಾಜ್ಯಗಳು ತಾವೇ ಲಸಿಕೆ ಪ್ರಕ್ರಿಯೆಯನ್ನು ನಡೆಸಲು ಮತ್ತು ಮತ್ತಷ್ಟು ವಿಕೇಂದ್ರೀಕರಣವನ್ನು ಬಯಸಿದವು. ಆರೋಗ್ಯವು ರಾಜ್ಯದ ಪಟ್ಟಿಯ ವಿಷಯವಾಗಿದ್ದು, ಹೆಚ್ಚಿನ ಅಧಿಕಾರವನ್ನು ನೀಡುವಂತೆ ರಾಜ್ಯಗಳ ನಿರಂತರ ಮನವಿಗಳ ಕಾರಣದಿಂದಾಗಿ ಲಸಿಕೆ ನೀತಿಯನ್ನು ಉದಾರೀಕರಣ ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿಯೇ ಲಸಿಕೆಗಳ ಪೂರೈಕೆ ಕಡಿಮೆಯಿದೆ ಮತ್ತು ಅವುಗಳನ್ನು ಅಲ್ಪಾವಧಿಯಲ್ಲಿ ಸಂಗ್ರಹಿಸುವುದು ಸುಲಭವಲ್ಲ. ನಾವು ಮೊದಲ ದಿನದಿಂದಲೂ ರಾಜ್ಯಗಳಿಗೆ ಈ ವಿಷಯವನ್ನು ಹೇಳುತ್ತಲೇ ಇದ್ದೆವು. ಈಗ ರಾಜ್ಯಗಳು ಹೊರಡಿಸಿದ ಜಾಗತಿಕ ಟೆಂಡರ್ಗಳು ಯಾವುದೇ ಫಲಿತಾಂಶಗಳನ್ನು ನೀಡದಿರುವುದನ್ನು ಗಮನಿಸಿದರೆ ಈ ವಿಷಯ ರಾಜ್ಯಗಳಿಗೆ ಮತ್ತಷ್ಟು ಸ್ಪಷ್ಟವಾಗಿದೆ.
ಮಿಥ್ಯೆ 6: ಕೇಂದ್ರವು ರಾಜ್ಯಗಳಿಗೆ ಸಾಕಷ್ಟು ಲಸಿಕೆಗಳನ್ನು ನೀಡುತ್ತಿಲ್ಲ.
ವಾಸ್ತವಾಂಶ: ಒಪ್ಪಿತ ಮಾರ್ಗಸೂಚಿಗಳ ಪ್ರಕಾರ ಕೇಂದ್ರವು ರಾಜ್ಯಗಳಿಗೆ ಸಾಕಷ್ಟು ಲಸಿಕೆಗಳನ್ನು ಪಾರದರ್ಶಕ ರೀತಿಯಲ್ಲಿ ಹಂಚಿಕೆ ಮಾಡುತ್ತಿದೆ. ವಾಸ್ತವವಾಗಿ, ಲಸಿಕೆ ಲಭ್ಯತೆಗೆ ಮುಂಚಿತವಾಗಿ ರಾಜ್ಯಗಳಿಗೆ ಮಾಹಿತಿ ನೀಡಲಾಗುತ್ತಿದೆ. ಲಸಿಕೆ ಲಭ್ಯತೆಯು ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಮತ್ತು ಹೆಚ್ಚಿನ ಪೂರೈಕೆ ಸಾಧ್ಯವಾಗಲಿದೆ. ಭಾರತ ಸರಕಾರದ ಹೊರತಾದ ಮಾರ್ಗಗಳ ಮೂಲಕ ರಾಜ್ಯಗಳು 25% ಡೋಸ್ಗಳನ್ನು ಪಡೆಯುತ್ತಿವೆ ಮತ್ತು ಖಾಸಗಿ ಆಸ್ಪತ್ರೆಗಳು 25% ಡೋಸ್ಗಳನ್ನು ಪಡೆಯುತ್ತಿವೆ. ಆದಾಗ್ಯೂ ರಾಜ್ಯಗಳ ವತಿಯಿಂದ ಈ 25% ಡೋಸ್ಗಳ ನೀಡಿಕೆಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳು ಬಹಳ ಅಪೇಕ್ಷಿತವಾಗಿರುತ್ತವೆ. ಲಸಿಕೆ ಪೂರೈಕೆಯ ಬಗ್ಗೆ ವಾಸ್ತವಾಂಶಗಳ ಸಂಪೂರ್ಣ ಜ್ಞಾನವಿದ್ದರೂ ಪ್ರತಿದಿನ ಟಿವಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿಯನ್ನು ಸೃಷ್ಟಿಸುವ ನಮ್ಮ ಕೆಲವು ನಾಯಕರ ವರ್ತನೆ ತುಂಬಾ ದುರದೃಷ್ಟಕರ. ಇದು ರಾಜಕೀಯ ಮಾಡುವ ಸಮಯವಲ್ಲ. ಈ ಹೋರಾಟದಲ್ಲಿ ಎಲ್ಲರೂ ಒಂದಾಗಬೇಕು.
ಮಿಥ್ಯೆ 7: ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರವು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ವಾಸ್ತವಾಂಶ: ಸದ್ಯಕ್ಕೆ, ಜಗತ್ತಿನ ಯಾವ ದೇಶವೂ ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿಲ್ಲ.* ಅಲ್ಲದೆ, ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಶಿಫಾರಸ್ಸನ್ನೂ ಮಾಡಿಲ್ಲ. ಮಕ್ಕಳಿಗೆ ಲಸಿಕೆ ಹಾಕುವುದರ ಸುರಕ್ಷತೆಯ ಬಗ್ಗೆ ಅಧ್ಯಯನಗಳು ನಡೆದಿವೆ, ಅವು ಪ್ರೋತ್ಸಾಹದಾಯಕವಾಗಿವೆ. ಭಾರತದಲ್ಲಿ ಮಕ್ಕಳ ಮೇಲೆ ಪ್ರಯೋಗಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಪ್ರಯೋಗಗಳ ಆಧಾರದ ಮೇಲೆ ಸಾಕಷ್ಟು ದತ್ತಾಂಶಗಳು ಲಭ್ಯವಾದ ನಂತರ ಈ ಬಗ್ಗೆ ನಮ್ಮ ವಿಜ್ಞಾನಿಗಳು ನಿರ್ಧಾರ ಕೈಗೊಳ್ಳಬೇಕೇ ಹೊರತು, ವಾಟ್ಸಆಪ್ ಗ್ರೂಪ್ಗಳಲ್ಲಿ ಸೃಷ್ಟಿಸಲಾಗುವ ಭೀತಿ ಮತ್ತು ಕೆಲವು ರಾಜಕಾರಣಿಗಳ ರಾಜಕೀಯ ಆಧರಿಸಿ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗದು.
* ಪತ್ರಿಕಾ ಪ್ರಕಟಣೆಯಲ್ಲಿʻಯಾವ ದೇಶವೂ ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿಲ್ಲʼ ಎಂದು ಉಲ್ಲೇಖಿಸಲಾಗಿದೆ. ಇದನ್ನು ʻಜಗತ್ತಿನ ಯಾವ ದೇಶವೂ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆಗಳನ್ನು ನೀಡುತ್ತಿಲ್ಲʼ ಎಂದು ಓದಿಕೊಳ್ಳುವುದು. ಈ ವಿಭಾಗದಲ್ಲಿ ಉಲ್ಲೇಖಿಸಲಾದ ಉಳಿದೆಲ್ಲಾ ಅಂಶಗಳು ಸಿಂಧುವಾಗಿವೆ. ಅನಪೇಕ್ಷಿತ ಮುದ್ರಣದೋಷಕ್ಕಾಗಿ ವಿಷಾದಿಸುತ್ತೇವೆ.
***
(Release ID: 1722133)
Visitor Counter : 950
Read this release in:
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam