ಪ್ರಧಾನ ಮಂತ್ರಿಯವರ ಕಛೇರಿ
ವಾರಾಣಸಿಯ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
ಬನಾರಸ್ ಮತ್ತು ಪೂರ್ವಾಂಚಲದ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಲು ಆರೋಗ್ಯ ಕಾರ್ಯಕರ್ತರಿಗೆ ಕರೆ
‘ಸೂಕ್ಷ್ಮ ನಿರ್ಬಂಧಿತ ವಲಯ’ ಮತ್ತು ‘ಮನೆಗಳಿಗೆ ಔಷಧಿಗಳ ವಿತರಣೆ’ ಕ್ರಮಗಳಿಗೆ ಶ್ಲಾಘನೆ
‘ಜಹಾನ ಭೀಮಾರ್ ವಹಾ ಉಪಚಾರ್’ - ಕೋವಿಡ್ ನಿರ್ವಹಣೆಗೆ ಹೊಸ ಮಂತ್ರ ನೀಡಿದ ಪ್ರಧಾನಿ
Posted On:
21 MAY 2021 2:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಾರಾಣಸಿಯ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಸಂವಾದದ ಸಮಯದಲ್ಲಿ, ಆರೋಗ್ಯ ಮೂಲಸೌಕರ್ಯ ವೃದ್ಧಿಸಲು ಸಹಾಯ ಮಾಡಿದ ಮತ್ತು ಅಗತ್ಯ ಔಷಧ, ವೆಂಟಿಲೇಟರ್ ಮತ್ತು ಆಮ್ಲಜನಕ ಸಾಂದ್ರಕಗಳಂತಹ ನಿರ್ಣಾಯಕ ಸಾಧನಗಳ ಸಮರ್ಪಕ ಪೂರೈಕೆಯನ್ನು ಖಾತ್ರಿಪಡಿಸಿದ ನಿರಂತರ ಮತ್ತು ಸಕ್ರಿಯ ನಾಯಕತ್ವಕ್ಕಾಗಿ ವಾರಾಣಸಿಯ ವೈದ್ಯರು ಮತ್ತು ಅಧಿಕಾರಿಗಳು, ಪ್ರಧಾನಮಂತ್ರಿ ಅವರಿಗೆ ಧನ್ಯವಾದಗಳನ್ನು ಹೇಳಿದರು. ಕಳೆದ ಒಂದು ತಿಂಗಳಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಪ್ರಯತ್ನಗಳು, ಲಸಿಕೆ ನೀಡಿಕೆ ಸ್ಥಿತಿಗತಿ ಮತ್ತು ಜಿಲ್ಲೆಯ ಭವಿಷ್ಯದ ಸವಾಲುಗಳನ್ನು ಎದುರಿಸಲು ಕೈಗೊಂಡಿರುವ ಕ್ರಮಗಳು ಮತ್ತು ಸಿದ್ಧತಾ ಯೋಜನೆಗಳ ಕುರಿತು ಪ್ರಧಾನಮಂತ್ರಿ ಅವರಿಗೆ ಮಾಹಿತಿ ನೀಡಲಾಯಿತು. ಮ್ಯೂಕರ್ ಮೈಕೋಸಿಸ್ ಅಪಾಯದ ಬಗ್ಗೆ ನಿಗಾ ಇರಿಸಿರುವುದಾಗಿ ಮತ್ತು ಈಗಾಗಲೇ ಆ ರೋಗದ ನಿರ್ವಹಣೆಗೆ ಅಗತ್ಯ ಸೌಕರ್ಯಗಳನ್ನು ಸೃಷ್ಟಿಸಿರುವುದು ಮತ್ತು ಕ್ರಮಗಳನ್ನು ಕೈಗೊಂಡಿರುವ ಕುರಿತು ವೈದ್ಯರು ಪ್ರಧಾನಮಂತ್ರಿ ಅವರಿಗೆ ವಿವರಿಸಿದರು.
ಕೋವಿಡ್ ವಿರುದ್ಧ ಹೋರಾಡಲು ಮಾನವ ಸಂಪನ್ಮೂಲಕ್ಕೆ ನಿರಂತರ ತರಬೇತಿಯ ಪ್ರಾಮುಖ್ಯವನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ವಿಶೇಷವಾಗಿ ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗಾಗಿ ತರಬೇತಿ ಕಾರ್ಯಾಗಾರಗಳನ್ನು ಮತ್ತು ವೆಬಿನಾರ್ ಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳು ಮತ್ತು ವೈದ್ಯರಿಗೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಲಸಿಕೆ ವ್ಯರ್ಥವಾಗುವುದನ್ನು ತಗ್ಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಂವಾದದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ವೈದ್ಯರು, ನರ್ಸ್ ಗಳು, ತಂತ್ರಜ್ಞರು, ವಾರ್ಡ್ ಬಾಯ್ ಗಳು, ಆಂಬುಲೆನ್ಸ್ ಚಾಲಕರು ಮತ್ತು ಕಾಶಿಯ ಇತರೆ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಎಲ್ಲರಿಗೂ ಅವರು ಗೌರವ ಸಲ್ಲಿಸಿದರು. ಬನಾರಸ್ ನಲ್ಲಿ ಅತ್ಯಲ್ಪ ಅವಧಿಯಲ್ಲಿಯೇ ಅತ್ಯಂತ ವೇಗವಾಗಿ ಆಕ್ಸಿಜನ್ ಮತ್ತು ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದಕ್ಕಾಗಿ ಮತ್ತು ಅತ್ಯಲ್ಪ ಸಮಯದಲ್ಲೇ ಪಂಡಿತ್ ರಾಜನ್ ಮಿಶ್ರಾ ಕೋವಿಡ್ ಆಸ್ಪತ್ರೆಯನ್ನು ಕಾರ್ಯಾರಂಭಗೊಳಿಸಿದ ರೀತಿಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ವಾರಾಣಸಿಯ ಸಮಗ್ರ ಕೋವಿಡ್ ಕಮಾಂಡ್ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಸಂತಸ ವ್ಯಕ್ತಪಡಿಸಿದರ ಪ್ರಧಾನಿ, ವಾರಾಣಸಿಯ ಉದಾಹರಣೆ ವಿಶ್ವಕ್ಕೆ ಸ್ಫೂರ್ತಿ ನೀಡಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಅವರು ಸಾಂಕ್ರಾಮಿಕವನ್ನು ದೊಡ್ಡ ಮಟ್ಟದಲ್ಲಿ ನಿಯಂತ್ರಿಸಿರುವ ವೈದ್ಯಕೀಯ ತಂಡದ ಪ್ರಯತ್ನಗಳನ್ನು ಶ್ಲಾಘಿಸಿದರು. ಸುದೀರ್ಘ ಸಮರದಲ್ಲಿ ಹೋರಾಡುತ್ತಿರುವವರು ಇದೀಗ ಬನಾರಸ್ ಮತ್ತು ಪೂರ್ವಾಂಚಲದ ಗ್ರಾಮೀಣ ಭಾಗಗಳತ್ತ ಒತ್ತು ನೀಡಬೇಕಾಗಿದೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದೀಚೆಗೆ ನಮ್ಮ ದೇಶದಲ್ಲಿ ಕೈಗೊಂಡ ಹಲವು ಅಭಿಯಾನಗಳು ಮತ್ತು ಯೋಜನೆಗಳು ಕೊರೊನಾ ವಿರುದ್ಧ ಹೋರಾಡಲು ಬಹುಮಟ್ಟಿಗೆ ಸಹಕಾರಿಯಾಗಿವೆ ಎಂದು ಹೇಳಿದರು. ಸ್ವಚ್ಛ ಭಾರತ್ ಅಭಿಯಾನದಡಿ ಶೌಚಾಲಯಗಳ ನಿರ್ಮಾಣ, ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸಾ ಸೌಕರ್ಯಗಳು, ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ವಿತರಣೆ, ಜನ್-ಧನ್ ಬ್ಯಾಂಕ್ ಖಾತೆಗಳ ಆರಂಭ ಅಥವಾ ಫಿಟ್ ಇಂಡಿಯಾ ಅಭಿಯಾನ, ಯೋಗ ಮತ್ತು ಆಯುಷ್ ಪದ್ಧತಿಗಳ ಬಗ್ಗೆ ಜಾಗೃತಿ ಮತ್ತಿತರ ಉಪಕ್ರಮಗಳು ಕೊರೊನಾ ವಿರುದ್ಧದ ಹೋರಾಡಲು ಜನರಿಗೆ ಹೆಚ್ಚಿನ ಶಕ್ತಿಯನ್ನು ತುಂಬಿವೆ.
ಪ್ರಧಾನಮಂತ್ರಿ ಅವರು ಕೋವಿಡ್ ನಿರ್ವಹಣೆಗೆ ‘ಜಹಾ ಭೀಮಾರ್ ವಹಾ ಉಪಚಾರ್’ ಎಂಬ ಹೊಸ ಮಂತ್ರವನ್ನು ನೀಡಿದರು. ರೋಗಿಗಳ ಮನೆ ಬಾಗಿಲಿಗೆ ಚಿಕಿತ್ಸೆಯನ್ನು ಒದಗಿಸುವುದರಿಂದ ಆರೋಗ್ಯ ವ್ಯವಸ್ಥೆ ಮೇಲಿನ ಹೊರೆ ತಗ್ಗುತ್ತದೆ ಎಂದು ಅವರು ಹೇಳಿದರು. ಸೂಕ್ಷ್ಮ ನಿರ್ಬಂಧಿತ ವಲಯ ಮತ್ತು ಔಷಧಿಗಳನ್ನು ಮನೆಯ ಬಾಗಿಲಿಗೆ ತಲುಪಿಸುವ ಉಪಕ್ರಮಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಈ ಅಭಿಯಾನವನ್ನು ಸಾಧ್ಯವಾದಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಸಮಗ್ರವಾಗಿ ಕೈಗೆತ್ತಿಕೊಳ್ಳಬೇಕು ಎಂದು ಪ್ರಧಾನಿ ಅವರು ಆರೋಗ್ಯ ಕಾರ್ಯಕರ್ತರಿಗೆ ಮನವಿ ಮಾಡಿದರು. ವೈದ್ಯರು, ಪ್ರಯೋಗಾಲಯ ಮತ್ತು ಇ-ಮಾರುಕಟ್ಟೆ ಕಂಪನಿಗಳನ್ನು ಒಂದೆಡೆ ಸೇರಿಸುವ ಮೂಲಕ ‘ಕಾಶಿ ಕವಚ’ ಹೆಸರಿನ ಟೆಲಿ ಮೆಡಿಸನ್ ಸೌಕರ್ಯ ಒದಗಿಸಲಾಗುತ್ತಿದ್ದು, ಇದು ಅತ್ಯಂತ ವಿನೂತನ ಕ್ರಮವಾಗಿದೆ ಎಂದು ಹೇಳಿದರು.
ಗ್ರಾಮಗಳಲ್ಲಿ ಕೋವಿಡ್-19 ವಿರುದ್ಧ ಸದ್ಯ ನಡೆಯುತ್ತಿರುವ ಸಮರದಲ್ಲಿ ಆಶಾ ಮತ್ತು ಎಎನ್ಎಂ ಕಾರ್ಯಕರ್ತರು ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು ಹಾಗೂ ಅವರ ಅನುಭವ ಮತ್ತು ಸಾಮರ್ಥ್ಯದ ಗರಿಷ್ಠ ಲಾಭವನ್ನು ಪಡೆಯುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಎರಡನೇ ಅಲೆಯ ವೇಳೆ ಮುಂಚೂಣಿ ಕಾರ್ಯಕರ್ತರು ಜನರ ಸುರಕ್ಷತೆಗೆ ಸೇವೆ ಸಲ್ಲಿಸಲು ಸಾಧ್ಯ. ಏಕೆಂದರೆ ಅವರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ಸರದಿ ಬಂದಾಗ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಉತ್ತರ ಪ್ರದೇಶ ಸರ್ಕಾರದ ಸಕ್ರಿಯ ಪ್ರಯತ್ನಗಳ ಪರಿಣಾಮ ಪೂರ್ವಾಂಚಲ ಭಾಗದಲ್ಲಿ ಮಕ್ಕಳಲ್ಲಿನ ಮಿದುಳುಜ್ವರ ಕಾಯಿಲೆ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿರುವ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿ ಅವರು ಅದೇ ರೀತಿ ಸೂಕ್ಷ್ಮ ಮತ್ತು ಜಾಗರೂಕತೆಯಿಂದ ಕಾರ್ಯೋನ್ಮುಖವಾಗಬೇಕು ಎಂದು ವೈದ್ಯರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಸಮರದ ವೇಳೆ ಹೊಸದಾಗಿ ಎದುರಾಗಿರುವ ಬ್ಲಾಕ್ ಫಂಗಸ್ ಸವಾಲಿನ ವಿರುದ್ಧ ಎಚ್ಚರ ವಹಿಸುವಂತೆ ಅವರು ಕರೆ ನೀಡಿದರು. ಅದನ್ನು ನಿರ್ವಹಿಸಲು ಅಗತ್ಯ ಮುನ್ನೆಚ್ಚರಿಕೆ ಮತ್ತು ವ್ಯವಸ್ಥೆಗಳನ್ನು ಕೈಗೊಳ್ಳಲು ಹೆಚ್ಚಿನ ಗಮನಹರಿಸುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಕೋವಿಡ್ ವಿರುದ್ಧದ ಸಮರದಲ್ಲಿ ವಾರಾಣಸಿಯ ಜನಪ್ರತಿನಿಧಿಗಳು ತೋರುತ್ತಿರುವ ನಾಯಕತ್ವವನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು. ಜನಪ್ರತಿನಿಧಿಗಳು ಸದಾ ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಿರಬೇಕು ಮತ್ತು ಟೀಕೆಗಳ ನಡುವೆಯೂ ಅವರ ಕಾಳಜಿಯ ಬಗ್ಗೆ ಸಂಪೂರ್ಣ ಸಂಯಮವನ್ನು ತೋರಬೇಕು ಎಂದು ಸಲಹೆ ನೀಡಿದರು. ಯಾವುದೇ ನಾಗರಿಕರಿಗೆ ಯಾವುದೇ ಕುಂದುಕೊರತೆಗಳಿದ್ದರೂ ಅವುಗಳನ್ನು ಬಗೆಹರಿಸುವುದು ಸಂಬಂಧಿಸಿದ ಜನಪ್ರತಿನಿಧಿಯ ಹೊಣೆಗಾರಿಕೆಯಾಗಿರುತ್ತದೆ ಎಂದು ಅವರು ಹೇಳಿದರು. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಭರವಸೆಯನ್ನು ಉಳಿಸಿಕೊಂಡಿರುವುದಕ್ಕಾಗಿ ಪ್ರಧಾನಮಂತ್ರಿ ಅವರು ವಾರಾಣಸಿಯ ಜನತೆಯನ್ನು ಶ್ಲಾಘಿಸಿದರು.
****
(Release ID: 1720776)
Visitor Counter : 281
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam