ಗೃಹ ವ್ಯವಹಾರಗಳ ಸಚಿವಾಲಯ
ತೌಕ್ತೆ ಚಂಡಮಾರುತದ ನಂತರ ಪರಿಹಾರ ಮತ್ತು ಪುನರ್ ಸ್ಥಾಪನೆ ಪ್ರಯತ್ನಗಳ ಕುರಿತು ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ ಸಿಎಂಸಿ) ಸಭೆ
Posted On:
20 MAY 2021 4:22PM by PIB Bengaluru
ತೌಕ್ತೆ ಚಂಡಮಾರುತದ ಬಳಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ಸಚಿವಾಲಯಗಳು ಮತ್ತು ಸಂಸ್ಥೆಗಳು ಕೈಗೊಂಡಿರುವ ಪರಿಹಾರ ಮತ್ತು ಪುನರ್ ಸ್ಥಾಪನೆ ಪ್ರಯತ್ನಗಳ ಕುರಿತಂತೆ ಇಂದು ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ(ಎನ್ ಸಿಎಂಸಿ) ಸಭೆ ನಡೆಯಿತು.
ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಾರರ ಸಲಹೆಗಾರರು, ಬಾಧಿತ ಪ್ರದೇಶಗಳಲ್ಲಿ ಆಗಿರುವ ಜೀವ ಹಾಗೂ ಬೆಳೆಹಾನಿ ಮತ್ತು ಮೂಲಸೌಕರ್ಯ ಹಾನಿ ಕುರಿತು ಸಮಿತಿಗೆ ವಿವರಿಸಿದರು ಹಾಗೂ ದೂರಸಂಪರ್ಕ, ವಿದ್ಯುತ್, ರಸ್ತೆ, ನೀರು ಪೂರೈಕೆ ಮತ್ತು ಇತರ ಬಳಕೆ ಪುನರ್ ಸ್ಥಾಪನೆಗೆ ಕೈಗೊಂಡಿರುವ ಕ್ರಮಗಳನ್ನು ತಿಳಿಸಿದರು. ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ನಿಖರ ಮತ್ತು ಸಕಾಲಿಕ ಮುನ್ಸೂಚನೆಯಿಂದಾಗಿ ಹಾಗೂ ಕೇಂದ್ರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಮನ್ವಯದ ಪ್ರಯತ್ನಗಳಿಂದಾಗಿ ಹಾನಿ ಮತ್ತು ಜೀವಹಾನಿ ಭಾರಿ ಪ್ರಮಾಣದಲ್ಲಿ ತಗ್ಗಿದೆ ಎಂದು ಉಲ್ಲೇಖಿಸಲಾಯಿತು. ಎಲ್ಲ ಸಂಸ್ಥೆಗಳು ಮುಂಚಿತವಾಗಿಯೇ ಮತ್ತು ಸಕಾಲದಲ್ಲಿ ಕ್ರಮಗಳನ್ನು ಕೈಗೊಂಡ ಪರಿಣಾಮ ಬಾಧಿತ ಪ್ರದೇಶಗಳಲ್ಲಿನ ಕೋವಿಡ್-19 ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳು ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಿದವು.
ಭಾರತೀಯ ನೌಕಾಪಡೆ ಮತ್ತು ಕರಾವಳಿ ಪಡೆ ಹಾಗೂ ಇತರ ಸಂಸ್ಥೆಗಳು ಮೂರು ಬಾರ್ಜ್ ಗಳಲ್ಲಿನ ಜನರನ್ನು ಹಾಗೂ ಒಎನ್ ಜಿಸಿಯ ಹಡಗಿನಲ್ಲಿ ಜನರನ್ನು ರಕ್ಷಿಸಲು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ರಕ್ಷಣಾ ಮತ್ತು ಪುನರ್ ಸ್ಥಾಪನೆ ಕಾರ್ಯಗಳ ಪರಿಶೀಲಿಸಿದ ಶ್ರೀ ರಾಜೀವ್ ಗೌಬ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಬಂಧಿಸಿದ ಸಂಸ್ಥೆಗಳು ದೂರಸಂಪರ್ಕ, ವಿದ್ಯುತ್, ರಸ್ತೆ, ನೀರು ಪೂರೈಕೆ ಮತ್ತು ಇತರ ಮೂಲಸೌಕರ್ಯಗಳ ಮರುಸ್ಥಾಪನೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಪ್ರಯತ್ನಗಳನ್ನು ಮುಂದುವರಿಸಬೇಕು ಮತ್ತು ಆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಿ ಹೇಳಿದರು. ಕೇಂದ್ರದ ಸಚಿವಾಲಯಗಳು/ಸಂಸ್ಥೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಮತ್ತು ಎಲ್ಲಾ ಅಗತ್ಯ ನೆರವನ್ನು ತ್ವರಿತವಾಗಿ ಒದಗಿಸುತ್ತಿವೆ.
ಸಭೆಯಲ್ಲಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ, ಕೇರಳ, ತಮಿಳುನಾಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಲಕ್ಷದ್ವೀಪ ಮತ್ತು ದಾದ್ರ ಮತ್ತು ನಗರ್ ಹವೇಲಿ, ದಾಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಾರರ ಸಲಹೆಗಾರರು, ಭಾಗವಹಿಸಿದ್ದರು. ಅಲ್ಲದೆ ಗೃಹ ವ್ಯವಹಾರಗಳ ಸಚಿವಾಲಯ, ಶಿಪ್ಪಿಂಗ್, ದೂರಸಂಪರ್ಕ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುತ್, ಆರೋಗ್ಯ, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣೆ, ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಎನ್ ಡಿಎಂಎ ಸದಸ್ಯ ಕಾರ್ಯದರ್ಶಿ, ಎನ್ ಡಿಆರ್ ಎಫ್ ನ ಮಹಾನಿರ್ದೇಶರು, ಐಎಂಡಿಯ ಮಹಾನಿರ್ದೇಶರು, ಕರಾವಳಿ ಪಡೆಯ ಮಹಾನಿರ್ದೇಶರು ಮತ್ತು ಐಡಿಎಸ್ ನ ಉಪಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
***
(Release ID: 1720374)
Visitor Counter : 246