ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಲಾ ಶಿಕ್ಷಣ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಶಿಕ್ಷಣ ಸಚಿವರು
ಸಾಂಕ್ರಾಮಿಕದ ವೇಳೆ ಶಾಲಾ ಶಿಕ್ಷಣ ಕುರಿತ ಅತಿ ದೊಡ್ಡ ಸಭೆ
ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಕಲ್ಯಾಣ ಖಾತ್ರಿ ಪಡಿಸಲು ಸರ್ಕಾರ ಬದ್ಧ: ಶ್ರೀ ರಮೇಶ್ ಪೋಖ್ರಿಯಾಲ್ “ನಿಶಾಂಕ್’
ಸಮಗ್ರ ಶಿಕ್ಷಣ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 5228 ಕೋಟಿ ರೂ. ತಾತ್ಕಾಲಿಕ ಅನುದಾನ ಬಿಡುಗಡೆ
ವಿವಿಧ ಶೈಕ್ಷಣಿಕ ಉಪಕ್ರಮಗಳ ಮುಂದುವರಿಕೆಯ ಖಾತ್ರಿಗಾಗಿ ಶೀಘ್ರವೇ 2500 ಕೋಟಿ ರೂ. ಬಿಡುಗಡೆ
ರಾಜ್ಯಗಳ ಕಾರ್ಯಕ್ಕೆ ಶ್ಲಾಘನೆ; ಕೇಂದ್ರದಿಂದ ಪೂರ್ಣ ಬೆಂಬಲದ ಭರವಸೆ
Posted On:
17 MAY 2021 6:32PM by PIB Bengaluru
ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು, ಕೋವಿಡ್ ವೇಳೆ ಶಿಕ್ಷಣ ವ್ಯವಸ್ಥೆಯ ನಿರ್ವಹಣೆಗಾಗಿ ಅಳವಡಿಸಿಕೊಂಡಿರುವ ವಿವಿಧ ಕ್ರಮಗಳು ಮತ್ತು ಶಾಲೆಗಳಲ್ಲಿ ಆನ್ ಲೈನ್ ಹಾಗೂ ಆಫ್ ಲೈನ್ ಕಲಿಕೆಗೆ ಈವರೆಗೆ ಅಳವಡಿಸಿಕೊಳ್ಳಲಾಗಿರುವ ಕಾರ್ಯತಂತ್ರಗಳು ಮತ್ತು ಅದರ ಮುಂದಿನ ಮಾರ್ಗಗಳ ಬಗ್ಗೆ ಚರ್ಚಿಸಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಲಾ ಶಿಕ್ಷಣ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ; ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ; ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಕಾರ್ಯದರ್ಶಿ ಶ್ರೀಮತಿ ಅನಿತಾ ಕಾರ್ವಾಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು; ಮತ್ತು ರಾಜ್ಯದ ಇತರ ಅಧಿಕಾರಿಗಳು ಅಂದರೆ ರಾಜ್ಯ ಯೋಜನಾ ನಿರ್ದೇಶಕರು, ಎಸ್.ಸಿ.ಇ.ಆರ್.ಟಿ.ಯ ನಿರ್ದೇಶಕರು ಮತ್ತಿತರರು ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸಾಂಕ್ರಾಮಿಕದ ವೇಳೆ ನಡೆದ ಅತಿ ದೊಡ್ಡ ಶಾಲಾ ಶಿಕ್ಷಣ ಕುರಿತ ಸಭೆ ಇದಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಪ್ರಸಕ್ತ ಕೋವಿಡ್ 19 ಪರಿಸ್ಥಿತಿ ಅತ್ಯಂತ ದುರದೃಷ್ಟಕರ, ಆದರೆ ಸರ್ಕಾರ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಕಲ್ಯಾಣ ಎರಡನ್ನೂ ಖಾತ್ರಿಪಡಿಸಲು ಹೊಸ ಪ್ರಯೋಗಗಳ ಮೂಲಕ ಈ ಪರಿಸ್ಥಿತಿಯನ್ನು ಅವಕಾಶವಾಗಿ ಪರಿವರ್ತಿಸಲು ಬದ್ಧವಾಗಿದೆ ಎಂದರು.
ಕಳೆದ ವರ್ಷ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿದ ಸುಸಂಬದ್ಧ ಪ್ರಯತ್ನಗಳನ್ನು ಮುಂದುವರೆಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು ಮತ್ತು ಈ ಸಾಂಕ್ರಾಮಿಕ ಕಾಲದಲ್ಲಿ ಹೆಚ್ಚು ದುರ್ಬಲ ಮತ್ತು ಅಂಚಿನಲ್ಲಿರುವ ಮಕ್ಕಳನ್ನು ತಲುಪುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಕಳೆದ ವರ್ಷದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿದ ಸುಸಂಬದ್ಧ ಪ್ರಯತ್ನಗಳನ್ನು ಮುಂದುವರೆಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು ಮತ್ತು ಈ ಸಾಂಕ್ರಾಮಿಕ ಅವಧಿಯಲ್ಲಿ ಹೆಚ್ಚು ದುರ್ಬಲ ಮತ್ತು ಅಂಚಿನಲ್ಲಿರುವ ಮಕ್ಕಳನ್ನು ತಲುಪುವ ಮಹತ್ವವನ್ನು ಪ್ರತಿಪಾದಿಸಿದರು. ಸಾಂಕ್ರಾಮಿಕ ಸಮಯದಲ್ಲಿ ನಿರಂತರ ಕಲಿಕೆಗೆ ಅನುಕೂಲವಾಗುವಂತೆ ಇಲಾಖೆ 2020-21ರಲ್ಲಿ ಹಲವಾರು ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದರು. ಇದರಲ್ಲಿ: ಪಿಎಂ ಇ-ವಿದ್ಯಾ ಅಡಿಯಲ್ಲಿ ದೀಕ್ಷಾ ವಿಸ್ತರಣೆ; ಸ್ವಯಂ ಪ್ರಭಾ ಟಿವಿ ವಾಹಿನಿ ಗುಚ್ಛದಲ್ಲಿ ಡಿಟಿಎಚ್ ಟಿವಿ ವಾಹಿನಿಗಳು; ದೀಕ್ಷಾದಲ್ಲಿ ಆನ್ ಲೈನ್ ಮೂಲಕ ನಿಷ್ಠಾ ತರಬೇತಿ ಆರಂಭ; ವಿದ್ಯಾರ್ಥಿಗಳ ಸಾಮಾಜಿಕ ಭಾವನಾತ್ಮಕ ಮತ್ತು ಮಾನಸಿಕ ಅಗತ್ಯಗಳನ್ನು ಪೂರೈಸಲು ಮನೋದರ್ಪಣದ ಆರಂಭ ಇತ್ಯಾದಿಗಳು ಸೇರಿವೆ. ಡಿಜಿಟಲ್ ಶಿಕ್ಷಣ ಪ್ರವೇಶಾವಕಾಶವಿಲ್ಲದ ಮಕ್ಕಳನ್ನು ತಲುಪಲು ಹಲವು ಉಪಕ್ರಮಗಳನ್ನೂ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಸಮರ್ಥ ಅನುಷ್ಠಾನಕ್ಕಾಗಿ ವಿವಿಧ ಬಾಧ್ಯಸ್ಥರನ್ನು ಸೇರ್ಪಡೆ ಮಾಡಿಕೊಳ್ಳುವ ಮಹತ್ವವನ್ನೂ ಅವರು ಪ್ರತಿಪಾಸಿದರು.
ಶ್ರೀ ಪೋಖ್ರಿಯಾಲ್ ನಿಶಾಂಕ್ ಅವರು ರಾಜ್ಯಗಳಿಂದ ಬಂದ ಸಲಹೆಗಳು ಮತ್ತು ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಂಡರು. ವಿದ್ಯಾರ್ಥಿಗಳ ಶೈಕ್ಷಣಿಕ ಕಲ್ಯಾಣದ ಖಾತ್ರಿಗಾಗಿ ರಾಜ್ಯಗಳಿಗೆ ಎಲ್ಲ ಸಾಧ್ಯ ನೆರವು ಒದಗಿಸಿದ ಶಿಕ್ಷಣ ಸಚಿವಾಲಯದ ಪ್ರಯತ್ನಕ್ಕೆ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿದವು. ಕೇಂದ್ರ ಸಚಿವರು ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ರಾಜ್ಯಗಳ ಶ್ಲಾಘನಾರ್ಹ ಕಾರ್ಯಕ್ಕೆ ಧನ್ಯವಾದ ಅರ್ಪಿಸಿದರು ಮತ್ತು ಸಚಿವಾಲಯವು ಈ ಸಂಕಷ್ಟದ ಸಮಯದಲ್ಲಿ ಪೂರ್ಣ ಬೆಂಬಲ ನೀಡಲಿದ್ದು, ಸಮಸ್ಯೆ ವಿರುದ್ಧ ಒಗ್ಗೂಡಿ ಹೋರಾಡೋಣ ಎಂದರು.
ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ, ಸರ್ಕಾರ ಕೋವಿಡ್ ಸಾಂಕ್ರಾಮಿಕದಿಂದ ಉದ್ಭವಿಸಿರುವ ಸವಾಲುಗಳನ್ನು ಎದುರಿಸಲು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ನೂತನ ಮತ್ತು ನಾವಿನ್ಯ ವಿಧಾನಗಳನ್ನು ಅಳವಡಿಸಿಕೊಂಡಿದೆ ಎಂಬುದನ್ನು ಉಲ್ಲೇಖಿಸಿ, ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ವಿಧಾನಗಳಲ್ಲಿ ಹೈಬ್ರೀಡ್ ಶಿಕ್ಷಣ ಒದಗಿಸುವ ಮಾರ್ಗೋಪಾಯಗಳ ಶೋಧನೆ ಕುರಿತು ಪ್ರತಿಪಾದಿಸಿದರು. ಇದಕ್ಕಾಗಿ ನಮಗೆ ಹೊಸ ವಿಧಾನಗಳು, ಗುಣಮಟ್ಟದ ಕಲಿಕಾ ಸಾಮಗ್ರಿ, ಮತ್ತು ಮೌಲ್ಯಮಾಪನ ನಿರ್ಧರಣಾ ಮಾದರಿಯ ಅಗತ್ಯವಿದೆ ಎಂದೂ ಅವರು ಹೇಳಿದರು. ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವ ಕೋವಿಡೋತ್ತರ ಜಗತ್ತಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ, ಹೀಗಾಗಿ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನಾ ಸಾಮರ್ಥ್ಯ, ತಾರ್ಕಿಕ ಸಾಮರ್ಥ್ಯ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವತ್ತ ಗಮನ ಹರಿಸಬೇಕು. ನೂತನ ಶಿಕ್ಷಣ ನೀತಿಯ ಸ್ಫೂರ್ತಿಯನ್ನು ಮುಂದುವರಿಸಲು ಒಂದು ತಂಡವಾಗಿ ಎಲ್ಲರೂ ಶ್ರಮಿಸಬೇಕು ಮತ್ತು ನಿರ್ದಿಷ್ಟ ಗುರಿ ಸಾಧನೆಗಾಗಿ ಸಮರ್ಥವಾಗಿ ಅದನ್ನು ಅನುಷ್ಠಾನಗೊಳಿಸಬೇಕು ಎಂದರು. 2021ರ ಮೇ 4ರಂದು ಇಲಾಖೆ ಸಮಗ್ರ ಕೋವಿಡ್ ಸ್ಪಂದನಾ ದಸ್ತಾವೇಜನ್ನು ಹೊರಡಿಸಿದ್ದು, ಪ್ರವೇಶ, ಉಳಿಸಿಕೊಳ್ಳುವುದು, ನಿರಂತರ ಕಲಿಕೆ, ಸಾಮರ್ಥ್ಯವರ್ಧನೆ ಮತ್ತು ಬಾಧ್ಯಸ್ಥರ ಕಾರ್ಯಕ್ರಮದಲ್ಲಿ ತೊಡಗಿಸುವ ಎಲ್ಲಾ ಬಾಧ್ಯಸ್ಥರಿಗೆ ಅನುಗುಣವಾದ ಕಾಲಸೂಚಿಯೊಂದಿಗೆ ವಿವರವಾದ ಕ್ರಿಯಾ ಯೋಜನೆಯನ್ನು ಇದು ವಿವರಿಸುತ್ತದೆ ಎಂದರು.
ಈ ಮಧ್ಯಸ್ಥಿಕೆಗೆ ಗುರುತಿಸಲಾದ ಪ್ರಮುಖ ಕ್ಷೇತ್ರಗಳು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಮುಖ್ಯವಾಹಿನಿಗೆ ತರುವುದು, ಸುಸ್ಥಿರ ದಾಖಲಾತಿ, ಉಳಿಸಿಕೊಳ್ಳುವುದು ಮತ್ತು ಬದಲಾವಣೆಯನ್ನು ಖಾತ್ರಿಪಡಿಸುವುದು; ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆ ಮತ್ತು ಅರಿವಿನ ಅಭಿವೃದ್ಧಿ; ಸಾಮರ್ಥ್ಯ ವರ್ಧನೆ- ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ದತ್ತಾಂಶ ಬಳಕೆ ಸೇರಿದಂತೆ ಸಂಯೋಜಿತ ಮತ್ತು ಮನೆ ಆಧಾರಿತ ಕಲಿಕೆಯ ಮೇಲೆ ನಿರ್ದಿಷ್ಟ ಗಮನವನ್ನು ಕೇಂದ್ರೀಕರಿಸುವುದು; ಪೌಷ್ಟಿಕಾಂಶ, ಸಾಮಾಜಿಕ-ಭಾವನಾತ್ಮಕ ಬೆಂಬಲ; ಡಿಜಿಟಲ್ ಶಿಕ್ಷಣ ಮತ್ತು ಮೇಲ್ವಿಚಾರಣೆ, ಪತ್ತೆ ಮತ್ತು ಪರಿಹಾರ.
ಜೊತೆಗೆ ಪ್ರಸಕ್ತ ಸಾಂಕ್ರಾಮಿಕದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಮಗ್ರ ಶಿಕ್ಷಣ ಕುರಿತ ಈ ಕೆಳಕಂಡ ಅಂಶಗಳನ್ನು ವಿಶೇಷ ಮತ್ತು ಗಮನಾರ್ಹ ಮದ್ಯಸ್ಥಿಕೆಗಳಾಗಿ ರೂಪಿಸಲಾಗಿದೆ:
- ಮಕ್ಕಳಿಗೆ ಪೂರಕ ಸಾಮಗ್ರಿಗಳನ್ನು ಒದಗಿಸಲು ಕಲಿಕೆ ವರ್ಧನೆ/ಸಮೃದ್ಧಗೊಳಿಸುವ ಕಾರ್ಯಕ್ರಮ
- ವಿದ್ಯಾರ್ಥಿಗಳಿಗೆ ಓದುವ ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಗ್ರಂಥಾಲಯದ ಮಂಜೂರಾತಿ
- ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಮತ್ತು ವಿಶೇಷಚೇತನ ಮಕ್ಕಳಿಗೆ ವಿಶೇಷ ತರಬೇತಿ.
- ಎನ್.ಐ.ಒ,ಎಸ್ / ರಾಜ್ಯ ಮುಕ್ತ ಶಾಲೆಗಳ ಮೂಲಕ 16 ರಿಂದ 19 ವರ್ಷದೊಳಗಿನ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಬೆಂಬಲ.
- ಸಮುದಾಯದ ಪಾಲ್ಗೊಳ್ಳುವಿಕೆ, ಪೋಷಕರ ಬೆಂಬಲ ಖಚಿತಪಡಿಸಿಕೊಳ್ಳಲು ಎಸ್.ಎಂ.ಸಿ ತರಬೇತಿಯ ಬಳಕೆ
- ಇಸಿಸಿಇ ಮತ್ತು ಪ್ರಾಥಮಿಕ ದರ್ಜೆಯಲ್ಲಿ ಭೋದನಾ ಕಲಿಕಾ ಸಾಮಗ್ರಿ
- ಪಂಚಾಯ್ತಿ ಮಟ್ಟದಲ್ಲಿ ನೆರವು ಕೇಂದ್ರ ಸ್ಥಾಪನೆ ಮತ್ತು ಸಮೂಹ ಮಾಧ್ಯಮದ ಮೂಲಕ ಜಾಗೃತಿ ಮೂಡಿಸುವುದು. ಇದನ್ನು ಆನ್ ಲೈನ್ ಕಲಿಕೆಯನ್ನು ನಡೆಸಲು ಮತ್ತು ವಿದ್ಯುನ್ಮಾನ ಮಾಧ್ಯಮದ ಮೂಲಕ ವಿಷಯವಸ್ತು ಪ್ರಸರಣಕ್ಕೂ ಬಳಸಬಹುದು.
- ಮಕ್ಕಳ ಪತ್ತೆ ನಿಧಿಯನ್ನು ವಿದ್ಯಾರ್ಥಿಗಳ ನೋಂದಣಿಯ ಸಿದ್ಧತೆಗೆ ಬಳಬಹುದು.
- ಶಾಲೆಗಳ ನೈರ್ಮಲ್ಯ ಮತ್ತು ನಿರ್ಮಲೀಕರಣಕ್ಕೆ ವಿಶೇಷ ಅನುದಾನ
- ಆನ್ ಲೈನ್ ವಿಧಾನದ ಭದ್ರತೆ ಮತ್ತು ಸುರಕ್ಷತೆ ಕುರಿತಂತೆ ಜಾಗೃತಿಗಾಗಿ ಮತ್ತು ಅವರಿಗೆ ಆನ್ ಲೈನ್ ಶಿಕ್ಷಣ ವಿಧಾನ ಬಳಕೆಗಾಗಿ ಶಿಕ್ಷಕರ ಅನುದಾನ.
- ಆನ್ ಲೈನ್ ವಸ್ತುವಿಷಯ ಅಭಿವೃದ್ದಿ ಮತ್ತು ಪ್ರಸರಣಕ್ಕಾಗಿ ಅನುದಾನ
- ದೀಕ್ಷಾ ವೇದಿಕೆಯಲ್ಲಿ ನಿಷ್ಠ ತರಬೇತಿಯನ್ನು ಪಡೆಯಲು ಶಿಕ್ಷಕರಿಗಾಗಿ ಅನುದಾನ
- ಕಲಿಕೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಸಂಯೋಜಿತ ಶಾಲಾ ಅನುದಾನ ಮತ್ತು ಅದರಲ್ಲಿ ಕನಿಷ್ಠ ಶೇ.10ರಷ್ಟು ಶಾಲೆಗಳಲ್ಲಿ ನೀರು, ನೈರ್ಮಲ್ಯ ಮತ್ತು ನಿರ್ಮಲೀಕರಣಕ್ಕಾಗಿ ಬಳಸಬಹುದು.
ಸಮಗ್ರ ಶಿಕ್ಷಣದ ಅಡಿಯಲ್ಲಿ ರಾಜ್ಯಗಳ ವಾರ್ಷಿಕ ಕಾರ್ಯ ಯೋಜನೆ ಮತ್ತು ಬಜೆಟ್ ಅನುಮೋದನೆಗಾಗಿ ಇಲಾಖೆ ಯೋಜನಾ ಅನುಮೋದನೆ ಮಂಡಳಿಯ ಸಭೆಗಳನ್ನು ವರ್ಚುವಲ್ ವಿಧಾನದಲ್ಲಿ ನಡೆಸಲು ಪ್ರಾರಂಭಿಸಲಾಗಿದೆ, ಇದರಿಂದಾಗಿ ಮೇಲಿನ ಮಧ್ಯಸ್ಥಿಕೆಗಳ ಅನುಷ್ಠಾನಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಕಾಲದ ಅನುಮೋದನೆಗಳನ್ನು ಪಡೆಯಬಹುದು.
ಇದರ ಜೊತೆಗೆ, ಸಮಗ್ರ ಶಿಕ್ಷಣದ ಅಡಿಯಲ್ಲಿ ಈಗಾಗಲೇ 5228 ಕೋಟಿ ರೂ.ಗಳ ತಾತ್ಕಾಲಿಕ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿವಿಧ ಶೈಕ್ಷಣಿಕ ಉಪಕ್ರಮಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಶೀಘ್ರದಲ್ಲೇ 2500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಂಕ್ರಾಮಿಕದ ಸಮಯದಲ್ಲಿ ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸುವ ತಮ್ಮ ಕಾರ್ಯತಂತ್ರಗಳನ್ನು ಹಂಚಿಕೊಂಡವು. ಬಹುತೇಕ ಮಕ್ಕಳು ತಮ್ಮ ಪಠ್ಯಪುಸ್ತಕಗಳನ್ನು ಪಡೆದುಕೊಂಡಿದ್ದಾರೆ ಎಂದು ವರದಿ ಮಾಡಲಾಯಿತು. ಇದರ ಜೊತೆಗೆ ವಿವಿಧ ಪೂರಕ ಶ್ರೇಣೀಕೃತ ಕಲಿಕಾ ಸಾಮಗ್ರಿಗಳನ್ನೂ ರಾಜ್ಯಗಳು ಸಿದ್ಧಗೊಳಿಸಿವೆ. ಹರಿಯಾಣ ಮತ್ತು ಗುಜರಾತ್ ಶಾಲೆಗಳು ಇನ್ನೂ ತೆರೆಯದಿರುವಾಗ ರಾಜ್ಯ ಮೌಲ್ಯಮಾಪನ ಮಾಡಿದ ವಿವರಗಳನ್ನು ಹಂಚಿಕೊಂಡಿತು. ಜಾರ್ಖಂಡ್, ಲಡಾಖ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ಅನೇಕ ರಾಜ್ಯಗಳು ಕಲಿಕೆಯನ್ನು ಉತ್ತೇಜಿಸಲು ಡಿಜಿಟಲ್ ಆ್ಯಪ್ ಗಳನ್ನು ರೂಪಿಸಿವೆ. ಪೋಷಕರು ಮತ್ತು ಸಮುದಾಯಗಳ ಪ್ರಮುಖ ಪಾತ್ರವನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎತ್ತಿ ತೋರಿಸಿದವು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಡಿಜಿಟಲ್ ವಿನ್ಯಾಸಗಳು, ದೂರದರ್ಶನ ಮತ್ತು ರೇಡಿಯೋ ಇತ್ಯಾದಿಗಳ ಮೂಲಕ ಆನ್ ಲೈನ್ ಕಲಿಕೆಯನ್ನು ಉತ್ತೇಜಿಸುವ ವಿವರಗಳನ್ನು ಹಂಚಿಕೊಂಡವು.
***
(Release ID: 1719764)
Visitor Counter : 415