ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಸದ್ಯದ ಕೋವಿಡ್-19 ಬಿಕ್ಕಟ್ಟಿನ ನಡುವೆಯೇ ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್ ಮತ್ತು ತರಬೇತುದಾರರಿಗೆ ನೆರವು ನೀಡಲು ಒಗ್ಗೂಡಿದ ಐಒಎ, ಎಂವೈಎಎಸ್ ಮತ್ತು ಎಸ್ಎಐ

Posted On: 09 MAY 2021 11:15AM by PIB Bengaluru

ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್ ಹಾಗೂ ತರಬೇತುದಾರರಿಗೆ ವೈದ್ಯಕೀಯ, ಹಣಕಾಸು ಹಾಗೂ ಸಾರಿಗೆ ಬೆಂಬಲವನ್ನು ಖಾತ್ರಿಪಡಿಸುವ ಸಲುವಾಗಿ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ(ಎಂವೈಎಎಸ್), ಭಾರತೀಯ ಒಲಿಂಪಿಕ್ ಅಸೋಸಿಯೇಷನ್(ಐಒಎ) ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ ವಿಶೇಷ ನೆರವಿನ ಘಟಕ ಸ್ಥಾಪನೆಗೆ ಒಗ್ಗೂಡಿವೆ.

ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್ ಗಳು ಹಾಗೂ ತರಬೇತುದಾರರು ವೈದ್ಯಕೀಯ ನೆರವು, ಆಕ್ಸಿಜನ್ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತಿತರ ಅಗತ್ಯ ನೆರವಿಗಾಗಿ ಆನ್ ಲೈನ್ ವೇದಿಕೆ(https://www.research.net/r/SAI-IOA-Covid-19) ಯಲ್ಲಿ ಮನವಿ ಸಲ್ಲಿಸಬಹುದಾಗಿದ್ದು, ಅದು ಈಗಾಗಲೇ ಕಾರ್ಯಾರಂಭ ಮಾಡಿದೆ. ಅಲ್ಲದೆ ಪ್ರತಿಯೊಂದು ರಾಜ್ಯದಲ್ಲೂ ಅರ್ಜಿ ಸಲ್ಲಿಸಿದವರಿಗೆ ನೆರವು ನೀಡಲು ಐಒಎ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಎಸ್ಎಐನ ಅಧಿಕಾರಿಗಳನ್ನೊಳಗೊಂಡ ರಾಷ್ಟ್ರೀಯ ಸಮಿತಿ ಹಾಗೂ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗಿದೆ.

ಉಪಕ್ರಮಗಳ ಕುರಿತು ಮಾತನಾಡಿದ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಕಿರಣ್ ರಿಜಿಜು, “ಭಾರತದಲ್ಲಿ ತಮ್ಮ ಜೀವನದುದ್ದಕ್ಕೂ ಕ್ರೀಡೆಗೆ ಕೊಡುಗೆ ನೀಡಿರುವ ಮತ್ತು ಭಾರತಕ್ಕೆ ಹೆಮ್ಮೆ ತಂದಿರುವವರ ಜೊತೆ ನಾವು ನಿಲ್ಲುತ್ತೇವೆ. ಇದು ಸಂಕಷ್ಟದ ಸಮಯ ಮತ್ತು ನಮ್ಮ ಮಾಜಿ ಅಥ್ಲೀಟ್ ಗಳು ಮತ್ತು ತರಬೇತುದಾರರಿಗೆ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಂಪೂರ್ಣ ಬೆಂಬಲ ವ್ಯವಸ್ಥೆಯನ್ನು ನಾವು ಖಾತ್ರಿಪಡಿಸಲು ಬಯಸುತ್ತೇವೆ. ಸರ್ಕಾರ ಮತ್ತು ಐಒಎ ಜಂಟಿಯಾಗಿ ಕ್ರಮ ಕೈಗೊಂಡಿರುವುದು ನನಗೆ ತೀವ್ರ ಸಂತಸ ತಂದಿದೆ. ಇದರಿಂದಾಗಿ ಅಗತ್ಯವಿರುವವರಿಗೆ ಸಹಾಯ ದೊರಕಲಿದೆ ಎಂಬ ಭರವಸೆ ನನಗಿದೆಎಂದು ಹೇಳಿದ್ದಾರೆ

ಸಹಭಾಗಿತ್ವ ಕುರಿತು ಮಾತನಾಡಿದ ಐಒಎ ಅಧ್ಯಕ್ಷ ಡಾ. ನರೀಂದರ್ ಧ್ರುವ ಬಾತ್ರಾ, “ಭಾರತದಲ್ಲಿನ ಕ್ರೀಡಾ ಸಮುದಾಯ ಒಂದು ದೊಡ್ಡ ಕುಟುಂಬವಿದ್ದಂತೆ ಮತ್ತು ಇಂತಹ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರಿಗೆ ನೆರವು ನೀಡಬೇಕಾದ ಅಗತ್ಯವಿದೆ. ಐಒಎ ಜೊತೆ ಸೇರಿ ಇಂತಹ ಕ್ರಮ ಕೈಗೊಂಡಿದ್ದಕ್ಕಾಗಿ ನಾನು ಶ್ರೀ ರಿಜಿಜು ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಸದ್ಯ ನೆರವಿನ ಅಗತ್ಯವಿರುವ ಹಲವು ಮಾಜಿ ಅಥ್ಲೀಟ್ ಗಳು ಮತ್ತು ಕೋಚ್ ಗಳಿಗೆ ನಾವು ನೆರವು ನೀಡಲು ಸಾಧ್ಯವಾಗುತ್ತದೆ ಎಂಬ ಭರವಸೆ ನನಗಿದೆಎಂದು ಹೇಳಿದ್ದಾರೆ.

ಅಲ್ಲದೆ ಸಂಕಷ್ಟದಲ್ಲಿರುವ ಕ್ರೀಡಾ ವ್ಯಕ್ತಿಗಳು ಮತ್ತು ಅವರ ಕುಟುಂಬದವರಿಗೆ ಆರ್ಥಿಕ ನೆರವು ನೀಡಲು ರೂಪಿಸಲಾಗಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ (ಪಿಡಿಯುಎನ್ ಡಬ್ಲ್ಯೂಎಫ್ ಎಸ್)ಅಡಿ ಬಿಡುಗಡೆಯಾಗಿರುವ ನಿಧಿಗಳನ್ನು ಬಳಸಿ ರಾಜ್ಯ ಸರ್ಕಾರಗಳೊಂದಿಗೆ ಅಗತ್ಯ ವೈದ್ಯಕೀಯ ಮತ್ತು ಸಾರಿಗೆ ಬೆಂಬಲವನ್ನು ನೀಡಲಾಗುವುದು

***



(Release ID: 1717327) Visitor Counter : 185