ಹಣಕಾಸು ಸಚಿವಾಲಯ
ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ 15 ಸಾವಿರ ಕೋಟಿ ರೂ
ಆಸ್ತಿಗಳಿಂದ ಹಣಗಳಿಕೆ/ ಬಂಡವಾಳ ಹಿಂದೆಗೆತಕ್ಕಾಗಿ ರಾಜ್ಯಗಳು 5000 ಕೋಟಿ ರೂ ಪಡೆಯಲಿವೆ
2021-22ರ "ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಹಣಕಾಸಿನ ನೆರವು ಯೋಜನೆ" ಯ ಮಾರ್ಗಸೂಚಿಗಳು ಪ್ರಕಟ
Posted On:
30 APR 2021 1:21PM by PIB Bengaluru
ಬಂಡವಾಳ ಯೋಜನೆಗಳಿಗೆ ಖರ್ಚು ಮಾಡಲು 50 ವರ್ಷಗಳ ಬಡ್ಡಿರಹಿತ ಸಾಲವಾಗಿ ರಾಜ್ಯಗಳಿಗೆ ಹೆಚ್ಚುವರಿಯಾಗಿ 15,000 ಕೋಟಿ ರೂ.ಗಳನ್ನು ನೀಡಲು ಕೇಂದ್ರ ಹಣಕಾಸು ಸಚಿವಾಲಯ ನಿರ್ಧರಿಸಿದೆ. 2021-22ರ ಆರ್ಥಿಕ ವರ್ಷಕ್ಕೆ “ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಹಣಕಾಸು ನೆರವು ಯೋಜನೆ” ಕುರಿತು ವೆಚ್ಚ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಬಂಡವಾಳ ವೆಚ್ಚವು ವಿಶೇಷವಾಗಿ ಬಡವರು ಮತ್ತು ಕೌಶಲ್ಯರಹಿತರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಪರಿಣಾಮವನ್ನು ಬೀರುತ್ತದೆ. ಆರ್ಥಿಕತೆಯ ಭವಿಷ್ಯದ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಆರ್ಥಿಕ ಬೆಳವಣಿಗೆಯ ದರಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಕೇಂದ್ರ ಸರ್ಕಾರವು ಪ್ರತಿಕೂಲ ಆರ್ಥಿಕ ಪರಿಸ್ಥಿತಿಯ ನಡುವೆಯೂ, "ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆ" ಪ್ರಾರಂಭಿಸಲು ಕಳೆದ ವರ್ಷ ನಿರ್ಧರಿಸಿತು.
ಯೋಜನೆಯಡಿ ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲದ ರೂಪದಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. 2020-21ರ ಹಣಕಾಸು ವರ್ಷಕ್ಕೆ ಈ ಯೋಜನೆಗೆ 12,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿತ್ತು ಮತ್ತು 11,830.29 ಕೋಟಿ ರೂ.ಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಸಾಂಕ್ರಾಮಿಕದ ವರ್ಷದಲ್ಲಿ ರಾಜ್ಯ ಮಟ್ಟದ ಬಂಡವಾಳ ವೆಚ್ಚವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡಿತು.
ಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದ್ದರಿಂದ ಮತ್ತು ರಾಜ್ಯ ಸರ್ಕಾರಗಳ ಕೋರಿಕೆಗಳನ್ನು ಪರಿಗಣಿಸಿ, 2021-22ನೇ ವರ್ಷಕ್ಕೂ ಯೋಜನೆಯನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.
2021-22ರ ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆಯು ಮೂರು ಭಾಗಗಳನ್ನು ಹೊಂದಿದೆ:
- ಭಾಗ -1: ಯೋಜನೆಯ ಈ ಭಾಗವು ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಿಗೆ ಸಂಬಂಧಿಸಿದ್ದು ಈ ಭಾಗಕ್ಕೆ 2,600 ಕೋಟಿ ರೂ. ನಿಗದಿಪಡಿಸಲಾಗಿದೆ. ಇದರಲ್ಲಿ ಅಸ್ಸಾಂ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಕ್ಕೆ ತಲಾ 400 ಕೋಟಿ ರೂ. ಪಡೆಯಲಿವೆ. ಈ ಗುಂಪಿನ ಉಳಿದ ರಾಜ್ಯಗಳು ತಲಾ 200 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ
- ಭಾಗ- II: ಯೋಜನೆಯ ಈ ಭಾಗವು ಭಾಗ -1 ರಲ್ಲಿ ಸೇರಿರುವ ರಾಜ್ಯಗಳ್ಲನ್ನು ಬಿಟ್ಟು ಉಳಿದ ಎಲ್ಲ ರಾಜ್ಯಗಳಿಗೆ ಸಂಬಂಧಿಸಿದೆ. ಈ ಭಾಗಕ್ಕೆ 7,400 ಕೋಟಿ ರೂ. ನಿಗದಿಗೊಳಿಸಲಾಗಿದೆ. 2021-22ನೇ ಸಾಲಿನ 15 ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಈ ರಾಜ್ಯಗಳಲ್ಲಿ ಕೇಂದ್ರ ತೆರಿಗೆಗಳ ಪಾಲಿಗೆ ಅನುಗುಣವಾಗಿ ಈ ಮೊತ್ತವನ್ನು ಹಂಚಿಕೆ ಮಾಡಲಾಗಿದೆ.
- ಭಾಗ -3: ಮೂಲಸೌಕರ್ಯ ಆಸ್ತಿಗಳಿಂದ ಹಣಗಳಿಕೆ / ಮರುಬಳಕೆ ಮತ್ತು ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳ (ಎಸ್ಪಿಎಸ್ಇ) ಬಂಡವಾಳ ಹಿಂದೆಗೆತಕ್ಕಾಗಿ ರಾಜ್ಯಗಳಿಗೆ ಪ್ರೋತ್ಸಾಹ ನೀಡುವುದು ಯೋಜನೆಯ ಈ ಭಾಗವಾಗಿದೆ. ಯೋಜನೆಯ ಈ ಭಾಗಕ್ಕೆ 5,000 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ. ಈ ಭಾಗದ ಅಡಿಯಲ್ಲಿ, ಆಸ್ತಿಗಳಿಂದ ಹಣಗಳಿಕೆ, ಮತ್ತು ಬಂಡವಾಳ ಹಿಂದೆಗೆತದ ಮೂಲಕ ರಾಜ್ಯಗಳು ಶೇ. 33 ರಿಂದ 100 ವರೆಗೆ 50 ವರ್ಷಗಳ ಬಡ್ಡಿರಹಿತ ಸಾಲವನ್ನು ಪಡೆಯುತ್ತವೆ.
ಆಸ್ತಿಗಳಿಂದ ಹಣಗಳಿಸುವಿಕೆಯು ಅವುಗಳ ಮೌಲ್ಯವನ್ನು ಬಳಸಿಕೊಳ್ಳಲು ನೆರವಾಗುತ್ತದೆ, ಅವುಗಳ ಹಿಡುವಳಿ ವೆಚ್ಚವನ್ನು ತೆಗೆದುಹಾಕುತ್ತದೆ ಮತ್ತು ಅಲಭ್ಯವಾಗಿದ್ದ ಸಾರ್ವಜನಿಕ ಹಣವನ್ನು ಹೊಸ ಯೋಜನೆಗಳಿಗೆ ಒದಗಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಅನುಷ್ಠಾನವನ್ನು ವೇಗಗೊಳಿಸುತ್ತದೆ.
ಭಾರತ ಸರ್ಕಾರವು ಯೋಜನೆಯಡಿ ರಾಜ್ಯಗಳಿಗೆ ಒದಗಿಸುವ ಹಣವನ್ನು ಹೊಸ ಮತ್ತು ಪ್ರಗತಿಯಲ್ಲಿರುವ ಬಂಡವಾಳ ಯೋಜನೆಗಳಿಗೆ, ರಾಜ್ಯಗಳು ದೀರ್ಘಾವಧಿಯ ಲಾಭಕ್ಕಾಗಿ ಬಳಸಿಕೊಳ್ಳಬಹುದು. ಪ್ರಗತಿಯಲ್ಲಿರುವ ಬಂಡವಾಳ ಯೋಜನೆಗಳಲ್ಲಿ ಬಾಕಿ ಇರುವ ಬಿಲ್ಗಳನ್ನು ಇತ್ಯರ್ಥಗೊಳಿಸಲು ಸಹ ಈ ಹಣವನ್ನು ಬಳಸಬಹುದು.
***
(Release ID: 1715063)
Visitor Counter : 308