ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
4,50,000 ರೆಮ್‌ಡೆಸಿವಿರ್ ಸೀಸೆಗಳನ್ನು (ವೈಯಲ್) ಆಮದು ಮಾಡಿಕೊಳ್ಳಲಿರುವ ಭಾರತ
75,000 ಸೀಸೆಗಳ ಮೊದಲ ಕಂತು ಇಂದು ತಲುಪಲಿದೆ
Posted On:
30 APR 2021 11:56AM by PIB Bengaluru
ದೇಶದಲ್ಲಿ ರೆಮ್ಡೆಸಿವಿರ್ ಕೊರತೆಯನ್ನು ನೀಗಿಸಲು ಭಾರತ ಸರಕಾರವು ಈ ಪ್ರಮುಖ ಔಷಧವನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲು ಆರಂಭಿಸಿದೆ. ಇದರ ಭಾಗವಾಗಿ 75000 ಸೀಸೆಗಳ (ವೈಯಲ್) ಮೊದಲ ಕಂತು ಇಂದು ಭಾರತಕ್ಕೆ ತಲುಪಲಿದೆ.
ಭಾರತ ಸರಕಾರದ ಒಡೆತನದ ಕಂಪನಿಯಾದ ʻಎಚ್ಎಲ್ಎಲ್ ಲೈಫ್ ಕೇರ್ ಲಿಮಿಟೆಡ್ʼ ಅಮೆರಿಕದ ಔಷಧ ಕಂಪನಿ ಮೆಸರ್ಸ್ ʻಗಿಲ್ಯಾಡ್ ಸೈನ್ಸಸ್ ಐಎನ್ಸಿʼ ಮತ್ತು ಈಜಿಪ್ತ್ನ ಔಷಧ ಕಂಪನಿ ಮೆಸರ್ಸ್ ʻಇವಾ ಫಾರ್ಮಾʼನಿಂದ ರೆಮ್ಡೆಸಿವಿರ್ನ 4,50,000 ಸೀಸೆಗಳ ಖರೀದಿಗೆ ಬೇಡಿಕೆ ಇಟ್ಟಿದೆ. ಅಮೆರಿಕದ ಗಿಲ್ಯಡ್ ಸೈನ್ಸಸ್ ಐಎನ್ಸಿ ಸಂಸ್ಥೆಯು ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ 75,000 ರಿಂದ 1,00,000 ಸೀಸೆಗಳನ್ನು ರವಾನಿಸುವ ನಿರೀಕ್ಷೆಯಿದೆ. ಮೇ 15ರ ಒಳಗಾಗಿ ಇನ್ನೂ ಒಂದು ಲಕ್ಷದಷ್ಟು ಸೀಸೆಗಳನ್ನು ಪೂರೈಸಲಿದೆ. ಇವಾ ಫಾರ್ಮಾ ಆರಂಭದಲ್ಲಿ ಸುಮಾರು 10,000 ಸೀಸೆಗಳನ್ನು ಪೂರೈಸಲಿದೆ. ನಂತರ ಪ್ರತಿ 15 ದಿನಗಳಿಗೊಮ್ಮೆ ಅಥವಾ ಜುಲೈ ವರೆಗೆ 50,000 ಸೀಸೆಗಳನ್ನು ಪೂರೈಸಲಿದೆ.
ಸರಕಾರವು ದೇಶದಲ್ಲೂ ರೆಮ್ಡೆಸಿವಿರ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. 27.04.2021ರ ವೇಳೆಗೆ, ಪರವಾನಗಿ ಪಡೆದ ಏಳು ದೇಶೀಯ ತಯಾರಕ ಸಂಸ್ಥೆಗಳು ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 38 ಲಕ್ಷ ಸೀಸೆಗಳಿಂದ, ತಿಂಗಳಿಗೆ 1.03 ಕೋಟಿ ಸೀಸೆಗಳಿಗೆ ಹೆಚ್ಚಿಸಿವೆ. ಕಳೆದ ಏಳು ದಿನಗಳಲ್ಲಿ (21-28 ಏಪ್ರಿಲ್, 2021) ಔಷಧ ಕಂಪನಿಗಳು ದೇಶಾದ್ಯಂತ ಒಟ್ಟು 13.73 ಲಕ್ಷ ಸೀಸೆಗಳನ್ನು ಪೂರೈಸಿವೆ. ಏಪ್ರಿಲ್ 11 ರಂದು 67,900 ಸೀಸೆಗಳಷ್ಟಿದ್ದ ದೈನಂದಿನ ಪೂರೈಕೆ 2021ರ ಏಪ್ರಿಲ್ 28ರ ವೇಳೆಗೆ 2.09 ಲಕ್ಷ ಸೀಸೆಗಳಿಗೆ ಹೆಚ್ಚಾಗಿದೆ. ರೆಮ್ಡೆಸಿವಿರ್ ಸಾಗಣೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದೆ.
ಭಾರತದಲ್ಲಿ ಔಷಧದ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೆಮ್ಡೆಸಿವಿರ್ ರಫ್ತನ್ನೂ ಸರಕಾರ ನಿಷೇಧಿಸಿದೆ. ಜನಸಾಮಾನ್ಯರು ಕೈಗೆಟಕುವ ದರದಲ್ಲಿ ಈ ಚುಚ್ಚುಮದ್ದನ್ನು ಖರೀದಿಸುವಂತಾಗಲು, ʻಎನ್ಪಿಪಿಎʼ ಏಪ್ರಿಲ್17,2021ರಂದು ಔಷಧದ ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ನಿಗದಿಪಡಿಸಿದೆ. ಇದರಿಂದಾಗಿ ಎಲ್ಲಾ ಪ್ರಮುಖ ಬ್ರಾಂಡ್ಗಳ ವೆಚ್ಚವು ಪ್ರತಿ ಸೀಸೆಗೆ 3500 ರೂ.ಗಿಂತಲೂ ಕಡಿಮೆಯಾಗಿದೆ.
ರೆಮ್ಡೆಸಿವಿರ್ನ ಉತ್ಪಾದನೆ ಹೆಚ್ಚಿಸಲು ಮತ್ತು ಲಭ್ಯತೆಯನ್ನು ಸುಗಮಗೊಳಿಸುವ ಸಲುವಾಗಿ, ಕಂದಾಯ ಇಲಾಖೆಯು ಏಪ್ರಿಲ್ 20ರ ʻಅಧಿಸೂಚನೆ 27/2021-ಕಸ್ಟಮ್ಸ್ʼ ಮೂಲಕ ರೆಮ್ಡೆಸಿವಿರ್ ಚುಚ್ಚುಮದ್ದಿನ ಮೇಲಿನ ಆಮದು ಸುಂಕಕ್ಕೆ ಸಂಪೂರ್ಣ ವಿನಾಯಿತಿ ಕಲ್ಪಿಸಿದೆ. ಜೊತೆಗೆ ಈ ಔಷಧ ತಯಾರಿಕೆಗೆ ಬಳಸಲಾಗುವ ಸಕ್ರಿಯ ಕಚ್ಚಾ ಸಾಮಗ್ರಿ (ಎಪಿಐ) ಮತ್ತು ʻಬೀಟಾ ಸೈಕ್ಲೋಡೆಕ್ಸ್ಟ್ರಿನ್ʼ ಗೂ 31 ಅಕ್ಟೋಬರ್ 2021 ರವರೆಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ.
22.04.2021ರಂದು ಏಮ್ಸ್/ಐಸಿಎಂಆರ್-ಕೋವಿಡ್-19 ರಾಷ್ಟ್ರೀಯ ಕಾರ್ಯಪಡೆ/ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಮೇಲ್ವಿಚಾರಣಾ ತಂಡವು ವಯಸ್ಕ ಕೋವಿಡ್-19 ರೋಗಿಗಳ ನಿರ್ವಹಣೆಗಾಗಿ ವೈದ್ಯಕೀಯ ಮಾರ್ಗದರ್ಶನದ ಮೂಲಕ ರಾಷ್ಟ್ರೀಯ ಚಿಕಿತ್ಸಾ ಶಿಷ್ಟಾಚಾರವನ್ನು ಪರಿಷ್ಕರಣೆ ಮಾಡಿದೆ. ನವೀಕರಿಸಿದ ಶಿಷ್ಟಾಚಾರ/ನಿಯಮಗಳು ಔಷಧಗಳ ವಿವೇಚನಾಯುಕ್ತ ಬಳಕೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಬೇಡಿಕೆಯನ್ನು ತರ್ಕಬದ್ಧಗೊಳಿಸಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
***
(Release ID: 1715054)
Visitor Counter : 271
Read this release in:
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam