ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಸಾರಜನಕ ಜನರೇಟರ್ ಅನ್ನು ಆಮ್ಲಜನಕ ಜನರೇಟರ್ ಆಗಿ ಪರಿವರ್ತಿಸುವ ಮೂಲಕ ಆಮ್ಲಜನಕದ ಕೊರತೆಗೆ ಪರಿಹಾರ ಕಂಡುಹಿಡಿದ ಐಐಟಿ ಬಾಂಬೆ


ಆಮ್ಲಜನಕದ ಬಿಕ್ಕಟ್ಟಿಗೆ ಸರಳ ಮತ್ತು ತ್ವರಿತ ಪರಿಹಾರ

ಭಾರತದಾದ್ಯಂತ ಈ ಪರಿಹಾರದ  ಅಳವಡಿಕೆಗೆ ಸಿದ್ಧವಾಗಿರುವ ಸಂಸ್ಥೆ

Posted On: 29 APR 2021 2:15PM by PIB Bengaluru

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ, ದೇಶದ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ನಿವಾರಿಸಲು ಸೃಜನಶೀಲ ಮತ್ತು ಕೌಶಲ್ಯದ ಪರಿಹಾರವೊಂದನ್ನು ಕಂಡುಹಿಡಿದಿದೆ. ಪ್ರಾಯೋಗಿಕ ಯೋಜನೆಯು ಯಶಸ್ವಿಯಾಗಿ ಪರೀಕ್ಷಿಸಲ್ಪಟ್ಟಿದೆ. ಇದು ಪಿಎಸ್ಎ (ಪ್ರೆಶರ್ ಸ್ವಿಂಗ್ ಆಡ್ಸಾರ್ಪ್ಶನ್) ಸಾರಜನಕ ಘಟಕವನ್ನು ಪಿಎಸ್ಎ ಆಮ್ಲಜನಕ ಘಟಕವಾಗಿ ಪರಿವರ್ತಿಸುತ್ತದೆ.

ಐಐಟಿ ಬಾಂಬೆಯಲ್ಲಿ ನಡೆಸಲಾದ ಆರಂಭಿಕ ಪರೀಕ್ಷೆಗಳು ಭರವಸೆಯ ಫಲಿತಾಂಶಗಳನ್ನು ತೋರಿಸಿವೆ. ಶುದ್ಧತೆಯ ಮಟ್ಟ ಶೇ.93 ರಿಂದ 96 ರವರೆಗೆ ಇರುವ ಆಮ್ಲಜನಕವನ್ನು 3.5 ಎಟಿಎಂ ಒತ್ತಡದಲ್ಲಿ ಉತ್ಪಾದಿಸಬಹುದು. ಇದರ ಅನಿಲ ಆಮ್ಲಜನಕವನ್ನು ಕೋವಿಡ್ ಸಂಬಂಧಿತ ಅಗತ್ಯಗಳಿಗಾಗಿ ಅಸ್ತಿತ್ವದಲ್ಲಿರುವ ಆಸ್ಪತ್ರೆಗಳು ಮತ್ತು ಮುಂದೆ ನಿರ್ಮಿಸಲಾಗುವ ಕೋವಿಡ್-19 ಸೌಲಭ್ಯಗಳಿಗೆ ನಿರಂತರವಾಗಿ ಪೂರೈಕೆ ಮಾಡುವ ಮೂಲಕ ಬಳಸಿಕೊಳ್ಳಬಹುದು.

ಸಾರಜನಕ ಘಟಕವನ್ನು ಆಮ್ಲಜನಕ ಘಟಕವಾಗಿ ಪರಿವರ್ತಿಸಬಹುದು ಹೇಗೆ? "ಅಸ್ತಿತ್ವದಲ್ಲಿರುವ ಸಾರಜನಕ ಘಟಕವನ್ನು ಕೆಲವು ಬದಲಾವಣೆಗಳಿಂದ ಉತ್ತಮಗೊಳಿಸುವ ಮೂಲಕ ಮತ್ತು ಆಣ್ವಿಕ ತಂತುಗಳನ್ನು ಕಾರ್ಬನ್ನಿಂದ ಜಿಯೋಲೈಟ್ಗೆ ಬದಲಾಯಿಸುವ ಮೂಲಕ ಇದನ್ನು ಮಾಡಲಾಗಿದೆ" ಎಂದು ಯೋಜನೆಯ ನೇತೃತ್ವ ವಹಿಸಿದ್ದ ಐಐಟಿ ಬಾಂಬೆಯ ಡೀನ್ (ಆರ್ & ಡಿ) ಪ್ರೊ. ಮಿಲಿಂದ್ ಅತ್ರೆ ಹೇಳುತ್ತಾರೆ.

"ವಾತಾವರಣದ ಗಾಳಿಯನ್ನು ಕಚ್ಚಾ ವಸ್ತುವಾಗಿ ತೆಗೆದುಕೊಳ್ಳುವ ಸಾರಜನಕ ಘಟಕಗಳು ಭಾರತದಾದ್ಯಂತದ ವಿವಿಧ ಕೈಗಾರಿಕಾ ಸ್ಥಾವರಗಳಲ್ಲಿ ಲಭ್ಯವಿವೆ. ಆದ್ದರಿಂದ, ಅವುಗಳನ್ನು ಆಮ್ಲಜನಕ ಜನರೇಟರ್ ಆಗಿ ಪರಿವರ್ತಿಸಬಹುದು, ಇದರಿಂದಾಗಿ ಪ್ರಸ್ತುತ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಮಗೆ ಸಹಾಯವಾಗುತ್ತದೆ" ಎಂದು ಪ್ರೊ. ಅತ್ರೆ ಹೇಳುತ್ತಾರೆ.

ಯೋಜನೆಯು, ಪಿಎಸ್ಎ ಸಾರಜನಕ ಮತ್ತು ಆಮ್ಲಜನಕ ಘಟಕಗಳ ಬಗ್ಗೆ ಕೆಲಸ ಮಾಡುವ ಮುಂಬೈನ ಐಐಟಿ ಬಾಂಬೆ, ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಮತ್ತು ಸ್ಪ್ಯಾಂಟೆಕ್ ಎಂಜಿನಿಯರ್ಸ್ ನಡುವಿನ ಸಹಯೋಗದ ಪ್ರಯತ್ನವಾಗಿದೆ.

ಐಐಟಿಯ ರೆಫ್ರಿಜರೇಷನ್ ಮತ್ತು ಕ್ರಯೋಜೆನಿಕ್ಸ್ ಪ್ರಯೋಗಾಲಯದಲ್ಲಿ ಪಿಎಸ್ಎ ಸಾರಜನಕ ಘಟಕವನ್ನು ಪರಿವರ್ತನೆಗಾಗಿ ಗುರುತಿಸಲಾಯಿತು. ಅಧ್ಯಯನವನ್ನು ತುರ್ತು ಆದ್ಯತೆಯ  ಮೇಲೆ ಕೈಗೊಳ್ಳಲು, ದೇಶಾದ್ಯಂತ ಜಾರಿಮಾಡಬಹುದಾದ ಎಸ್ಒಪಿಯನ್ನು ಅಂತಿಮಗೊಳಿಸಲು ಐಐಟಿ ಬಾಂಬೆ, ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ಮತ್ತು ಸ್ಪ್ಯಾಂಟೆಕ್ ಎಂಜಿನಿಯರ್ಸ್ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಐಐಟಿ ಬಾಂಬೆಯ ರೆಫ್ರಿಜರೇಷನ್ ಮತ್ತು ಕ್ರಯೋಜೆನಿಕ್ಸ್ ಪ್ರಯೋಗಾಲಯದಲ್ಲಿರುವ ಐಐಟಿಬಿ ಸಾರಜನಕ ಸೌಲಭ್ಯದ ಮೂಲಸೌಕರ್ಯವನ್ನು ಬಳಸಿಕೊಂಡು ಸ್ಪಾಂಟೆಕ್ ಎಂಜಿನಿಯರ್ಸ್ ಮೌಲ್ಯಮಾಪನಕ್ಕಾಗಿ ಐಐಟಿ ಬಾಂಬೆಯಲ್ಲಿ ಅಗತ್ಯವಿರುವ ಘಟಕಗಳನ್ನು ಸ್ಥಾಪಿಸಿತು. ಪ್ರಯೋಗಕ್ಕಾಗಿ ಸೌಲಭ್ಯವನ್ನು ಮೂರೇ ದಿನಗಳಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು ಮೊದಲೇ ಹೇಳಿದಂತೆ ಆರಂಭಿಕ ಪರೀಕ್ಷೆಗಳು ಭರವಸೆಯ ಫಲಿತಾಂಶಗಳನ್ನು ತೋರಿಸಿವೆ.

ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಮಿತ್ ಶರ್ಮಾ, ಸ್ಪ್ಯಾಂಟೆಕ್ ಎಂಜಿನಿಯರ್ಸ್ ಪ್ರವರ್ತಕ ಶ್ರೀ ರಾಜೇಂದ್ರ ತಾಹಿಲಿಯಾನಿ ಮತ್ತು ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಗಳು, (1970) ಗಳಿಗೆ ಅವರೊಂದಿಗೆ; ಸ್ಪ್ಯಾಂಟೆಕ್ ಎಂಜಿನಿಯರ್ಸ್ ಎಂಡಿ, ಶ್ರೀ ರಾಜ್ ಮೋಹನ್ ಮತ್ತು ಯೋಜನೆಯಲ್ಲಿ ಸಹಯೋಗ ಮತ್ತು ಸಹಭಾಗಿತ್ವ ನೀಡಿದ ತಂಡದ ಸದಸ್ಯರಿಗೆ ಪ್ರೊ.ಮಿಲಿಂದ್ ಅತ್ರೆ ಧನ್ಯವಾದಗಳನ್ನು ಹೇಳಿದ್ದಾರೆ.

ಹಲವಾರು ನಿರ್ಬಂಧಗಳ ನಡುವೆಯೂ ಸಮಯೋಚಿತ ಯಶಸ್ವಿ ಪ್ರಾಯೋಗಿಕ ಪ್ರಯತ್ನಕ್ಕಾಗಿ ತಂಡಗಳನ್ನು ಅಭಿನಂದಿಸಿದ ಅಮಿತ್ ಶರ್ಮಾ, “ಐಐಟಿ ಬಾಂಬೆ ಮತ್ತು ಸ್ಪ್ಯಾಂಟೆಕ್ ಎಂಜಿನಿಯರ್ಸ್ ನೊಂದಿಗೆ ಪಾಲುದಾರರಾಗಲು ನಮಗೆ ಸಂತೋಷವಾಗುತ್ತಿದೆ ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಬಳಸಿಕೊಂಡು ತುರ್ತು ಆಮ್ಲಜನಕ ಉತ್ಪಾದನೆಗೆ ಒಂದು ಹೊಸ ಪರಿಹಾರ ನೀಡಿದ್ದೇವೆ. ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ದೇಶದ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಇಂತಹ ಸಹಭಾಗಿತ್ವವು ಆತ್ಮನಿರ್ಭರ ಭಾರತದ ನಮ್ಮ ದೃಷ್ಟಿಕೋನವನ್ನು ವೇಗಗೊಳಿಸುತ್ತದೆಎಂದು ಹೇಳಿದರು.

ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲ ತಂಡಗಳನ್ನು ಅಭಿನಂದಿಸಿದ ಐಐಟಿ ಬಾಂಬೆ ನಿರ್ದೇಶಕ ಪ್ರೊ.ಸುಭಾಸಿಸ್ ಚೌಧುರಿ, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವಿನ ಇಂತಹ ಸಹಭಾಗಿತ್ವವು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಯಶಸ್ಸಿಗೆ ಹೆಚ್ಚು ಅಪೇಕ್ಷಣೀಯ ಮತ್ತು ಅವಶ್ಯಕವಾಗಿದೆ ಎಂದು ಹೇಳಿದರು.

ಸಂಪರ್ಕ ಮಾಹಿತಿ :

ಪ್ರೊ.ಮಿಲಿಂದ್ ಅತ್ರೆ, ಐಐಟಿ ಬಾಂಬೆ

(ಇಮೇಲ್: matrey@iitb.ac.in)

(ದೂರವಾಣಿ: + 91-22-25767522)

ಅಥವಾ

ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್, ಮುಂಬೈ.

***



(Release ID: 1714888) Visitor Counter : 313