ಪ್ರಧಾನ ಮಂತ್ರಿಯವರ ಕಛೇರಿ
ರಷ್ಯಾ ಒಕ್ಕೂಟದ ಅಧ್ಯಕ್ಷ ಪುಟಿನ್ ಅವರೊಂದಿಗೆ ಪ್ರಧಾನಮಂತ್ರಿ ದೂರವಾಣಿ ಸಮಾಲೋಚನೆ
Posted On:
28 APR 2021 7:51PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಷ್ಯಾ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಇಂದು ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.
ಉಭಯ ನಾಯಕರು ಕೋವಿಡ್-19 ಸಾಂಕ್ರಾಮಿಕ ಸ್ಥಿತಿಗತಿಯ ಬೆಳವಣಿಗೆಯ ಕುರಿತು ಚರ್ಚೆ ನಡೆಸಿದರು. ಅಧ್ಯಕ್ಷ ಪುಟಿನ್ ಅವರು, ಭಾರತ ಸರ್ಕಾರ ಮತ್ತು ಜನತೆಗೆ ಸಹಕಾರ ವ್ಯಕ್ತಪಡಿಸಿದರು ಮತ್ತು ರಷ್ಯಾ ಭಾರತಕ್ಕೆ ಸಾಧ್ಯವಾದ ಎಲ್ಲಾ ನೆರವನ್ನು ನೀಡಲಿದೆ ಎಂಬ ಸಂದೇಶ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದಗಳನ್ನು ಹೇಳಿದರು ಮತ್ತು ಭಾರತಕ್ಕೆ ರಷ್ಯಾದ ಪ್ರಾಮಾಣಿಕ ಬೆಂಬಲ ನಮ್ಮ ನಿರಂತರ ಪಾಲುದಾರಿಕೆಯ ಸಂಕೇತವಾಗಿದೆ ಎಂದು ಉಲ್ಲೇಖಿಸಿದರು.
ಉಭಯ ನಾಯಕರು ಜಾಗತಿಕ ಸಾಂಕ್ರಾಮಿಕದ ವಿರುದ್ಧ ಎರಡೂ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಹಕಾರ ನೀಡುತ್ತಿರುವುದನ್ನು ಉಲ್ಲೇಖಿಸಿದರು. ಭಾರತದಲ್ಲಿ ಸ್ಪೂಟ್ನಿಕ್-ವಿ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ನೀಡಿರುವುದಕ್ಕೆ ಅಧ್ಯಕ್ಷ ಪುಟಿನ್ ಮೆಚ್ಚುಗೆ ವ್ಯಕ್ತಪಡಿಸಿದರು. ಉಭಯ ನಾಯಕರು ಭಾರತದಲ್ಲಿ ಉತ್ಪಾದನೆಯಾಗುವ ರಷ್ಯಾದ ಲಸಿಕೆಯನ್ನು ಭಾರತ, ರಷ್ಯಾ ಮತ್ತು ತೃತೀಯ ರಾಷ್ಟ್ರಗಳಿಗೆ ಬಳಸಲಾಗುವುದು ಎಂದು ನಾಯಕರು ಉಲ್ಲೇಖಿಸಿದರು.
ಉಭಯ ನಾಯಕರು ನಮ್ಮ ವಿಶೇಷ ಮತ್ತು ಹೆಮ್ಮೆಯ ಪಾಲುದಾರಿಕೆಯ ಸ್ಫೂರ್ತಿಯೊಂದಿಗೆ ಹಲವು ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧವನ್ನು ಇನ್ನಷ್ಟು ಬಲವರ್ಧನೆಗೊಳಿಸುವ ಪ್ರಾಮುಖ್ಯವನ್ನು ಪ್ರತಿಪಾದಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಗಗನಯಾನ ಕಾರ್ಯಕ್ರಮಕ್ಕೆ ರಷ್ಯಾ ಬೆಂಬಲ ನೀಡಿರುವುದಕ್ಕೆ ಮತ್ತು ನಾಲ್ಕು ಗಗನಯಾತ್ರಿಗಳಿಗೆ ರಷ್ಯಾ ಹಂತದ ತರಬೇತಿ ಪೂರ್ಣಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಭಯ ನಾಯಕರು ಹೈಡ್ರೋಜನ್ ಆರ್ಥಿಕತೆ ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಸಹಕಾರ ಹೆಚ್ಚಳದ ಕುರಿತು ಉಲ್ಲೇಖಿಸಿದರು.
ಉಭಯ ನಾಯಕರು ಎರಡೂ ದೇಶಗಳ ನಡುವಿನ ರಕ್ಷಣಾ ಮತ್ತು ವಿದೇಶಾಂಗ ಸಚಿವರನ್ನೊಳಗೊಂಡ ಸಚಿವರ ಮಟ್ಟದ ಸಮಾಲೋಚನೆಗೆ ಹೊಸದಾಗಿ 2+2 ಮಾತುಕತೆ ಸ್ಥಾಪನೆಗೆ ನಿರ್ಧರಿಸಿದರು.
2019ರ ಸೆಪ್ಟೆಂಬರ್ ನಲ್ಲಿ ವ್ಲಾಡಿವೋಸ್ಟಾಕ್ ನಲ್ಲಿ ನಡೆದ ಕಳೆದ ಶೃಂಗಸಭೆಯ ವೇಳೆ ಕೈಗೊಂಡಿದ್ದ ಪ್ರಮುಖ ನಿರ್ಧಾರಗಳನ್ನು ಇಬ್ಬರೂ ನಾಯಕರು ಸ್ಮರಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ವರ್ಷಾಂತ್ಯದಲ್ಲಿ ನಡೆಯಲಿರುವ ದ್ವಿಪಕ್ಷೀಯ ಶೃಂಗಸಭೆಗಾಗಿ ಅಧ್ಯಕ್ಷ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುವುದನ್ನು ಎದುರು ನೋಡುತ್ತಿದ್ದೇನೆ. ಆ ಶೃಂಗಸಭೆ ನಮ್ಮ ವೈಯಕ್ತಿಕ ಮತ್ತು ವಿಶ್ವಾಸಾರ್ಹ ಸಮಾಲೋಚನೆಗಳನ್ನು ಮುಂದುವರಿಸಲು ವೇದಿಕೆಯಾಗಲಿದೆ ಎಂಬ ಸಂದೇಶವನ್ನು ನೀಡಿದರು. ಅಧ್ಯಕ್ಷ ಪುಟಿನ್ ಅವರು 2021ರಲ್ಲಿ ಭಾರತ ವಹಿಸಿಕೊಂಡಿರುವ ಬ್ರಿಕ್ಸ್ ಅಧ್ಯಕ್ಷತೆ ಯಶಸ್ಸಿಗೆ ರಷ್ಯಾ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಧಾನಮಂತ್ರಿಗೆ ಭರವಸೆ ನೀಡಿದರು. ಉಭಯ ನಾಯಕರು ದ್ವಿಪಕ್ಷೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ನಿಕಟ ಸಂಪರ್ಕದಲ್ಲಿರಲು ಒಪ್ಪಿಗೆ ಸೂಚಿಸಿದರು.
***
(Release ID: 1714756)
Visitor Counter : 229
Read this release in:
Tamil
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Telugu
,
Malayalam