ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ) ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್


45 ವರ್ಷದ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಕೇಂದ್ರ ಸರಕಾರಿ ನೌಕರರಿಗೆ ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಲು ಸಚಿವರಿಂದ ಮನವಿ

ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾದ ಮಾರ್ಗಸೂಚಿಗಳು/ಸಲಹೆಗಳನ್ನು ಅಳವಡಿಸಿಕೊಳ್ಳುವಂತೆ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಕರೆ

Posted On: 07 APR 2021 5:48PM by PIB Bengaluru

ಈಶಾನ್ಯ ವಲಯದ ಅಭಿವೃದ್ಧಿ ಖಾತೆ (ಸ್ವತಂತ್ರ ನಿರ್ವಹಣೆ) ಸಹಾಯಕ ಸಚಿವರು (ಡಿಒಎನ್‌ಇಆರ್‌); ಪ್ರಧಾನ ಮಂತ್ರಿ ಸಚಿವಾಲಯದ ಸಹಾಯಕ ಸಚಿವರು; ಸಿಬ್ಬಂದಿ; ಸಾರ್ವಜನಿಕ ಕುಂದುಕೊರತೆಗಳು; ಪಿಂಚಣಿ; ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಸಾಂಕ್ರಾಮಿಕ ಹರಡುವಿಕೆಯನ್ನು ನಿಯಂತ್ರಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ವಿಶೇಷವಾಗಿ ಇತ್ತೀಚೆಗೆ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಪರಾಮರ್ಶೆ ನಡೆಸಿದರು.

ಸಭೆಯಲ್ಲಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಗಳಾದ ದೀಪಕ್ ಖಂಡೇಕರ್, ಕೇಂದ್ರ ಆಡಳಿತ ಸುಧಾರಣಾ ಕಾರ್ಯದರ್ಶಿ ಇಂದೇವರ್ ಪಾಂಡೆ, ಕೇಂದ್ರ ಕಾರ್ಯದರ್ಶಿ ಮತ್ತು ಸಿಬ್ಬಂದಿವರ್ಗದ ಅಧಿಕಾರಿ ಕೆ. ಶ್ರೀನಿವಾಸನ್, ಕೇಂದ್ರ ಕಾರ್ಯದರ್ಶಿ ಅಲೋಕ್ ರಂಜನ್, ಕಾರ್ಯದರ್ಶಿ (ತತ್ಸಮಾನ) ಸುಜಾತಾ ಚತುರ್ವೇದಿ, ಪಿಂಚಣಿ ಇಲಾಖೆ ಜಂಟಿ ಕಾರ್ಯದರ್ಶಿ ಎಸ್.ಎನ್. ಮಾಥುರ್; ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಆಡಳಿತ ಸುಧಾರಣೆ ಇಲಾಖೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಹಾಗೂ ಪಿಂಚಣಿ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇತ್ತೀಚಿನ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ, ಕೋವಿಡ್-19 ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಕೇಂದ್ರ ಸರಕಾರಿ ನೌಕರರಿಗೆ ಲಸಿಕೆ ನೀಡುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ʻಕಚೇರಿ ಜ್ಞಾಪನಾ ಪತ್ರʼವನ್ನು (ಒಎಂ) ಹೊರಡಿಸಿದೆ. ಅಂತಹ ಸರಕಾರಿ ನೌಕರರು ಲಸಿಕೆಯ ನಂತರವೂ ಆಗಾಗ್ಗೆ ಕೈಗಳನ್ನು ತೊಳೆಯುವುದು/ ಸ್ಯಾನಿಟೈಸೇಶನ್, ಮಾಸ್ಕ್‌/ಮುಖಗವಸು ಧರಿಸುವುದು, ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಇತ್ಯಾದಿ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಸಭೆಯ ಬಗ್ಗೆ ವಿವರಿಸಿದ ಡಾ. ಜಿತೇಂದ್ರ ಸಿಂಗ್ ಅವರು, ʻಡಿಒಪಿಟಿʼ ಸೇರಿದಂತೆ ಸಿಬ್ಬಂದಿ ಸಚಿವಾಲಯವು ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಕಾಲಕಾಲಕ್ಕೆ ಸೂಚನೆಗಳು ಮತ್ತು ಸೋಂಕು ತಡೆ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ ಎಂದು ಹೇಳಿದರು. ಸರಕಾರವು ಪರಿಸ್ಥಿತಿಯ ಮೇಲೆ ಬಹಳ ನಿಕಟವಾಗಿ ನಿಗಾ ಇರಿಸಿದೆ. ಆದ್ಯತೆ ಮೇರೆಗೆ ಲಸಿಕೆ ನೀಡುವ ಕಾರ್ಯತಂತ್ರದ ಆಧಾರದ ಮೇಲೆ, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಎಲ್ಲ ವ್ಯಕ್ತಿಗಳು ಅಭಿಯಾನದಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು. ಎಲ್ಲಾ ಸರಕಾರಿ ನೌಕರರು ತಮ್ಮ ಸ್ವಂತ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಮತ್ತು ಅವರ ಸಂಪರ್ಕಕ್ಕೆ ಬರುವವರ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಲಸಿಕೆ ಸೌಲಭ್ಯವನ್ನು ಪಡೆಯುವುದು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.

ಡಾ. ಜಿತೇಂದ್ರ ಸಿಂಗ್ ಅವರು ಕೇಂದ್ರ ಸರಕಾರಿ ನೌಕರರಿಗೆ ಹೊರಡಿಸಲಾದ ಮಾರ್ಗಸೂಚಿಗಳು/ಸಲಹೆಗಳನ್ನು ಅಳವಡಿಸಿಕೊಳ್ಳುವಂತೆ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಕರೆ ನೀಡಿದರು. ಕೇವಲ ಸರಕಾರಿ ಕಾರ್ಯಕಲಾಪದಲ್ಲಿ ತೊಡಗಿರುವವರ ಯೋಗಕ್ಷೇಮಕ್ಕಾಗಿ ಮಾತ್ರವಲ್ಲದೆ, ಕೋವಿಡ್ ಕಾರಣದಿಂದಾಗಿ ಸರಕಾರಿ ನೌಕರರು ಅನಾರೋಗ್ಯಕ್ಕೆ ಒಳಗಾಗುವುದರಿಂದ ಉಂಟಾಗುವ ಮಾನವ ದಿನಗಳ ನಷ್ಟವನ್ನು ಕಡಿಮೆ ಮಾಡುವುದಕ್ಕಾಗಿ ಲಸಿಕೆ ಪಡೆಯುವುದು ಅತ್ಯಗತ್ಯ ಎಂದು ಅವರು ಹೇಳಿದರು.

ಸಾಂಕ್ರಾಮಿಕ ರೋಗದ ಅವಧಿಯ ಕಳೆದ ಒಂದು ವರ್ಷದಲ್ಲಿ, ಸರಕಾರಿ ಕಚೇರಿಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಒಂದು ಪಟ್ಟಿಯನ್ನು ʻಡಿಒಪಿಟಿʼ ಅಭಿವೃದ್ಧಿಪಡಿಸಿದೆ. ಕೇವಲ ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಕಚೇರಿಯಲ್ಲಿ ಕೆಲಸ ಕಾರ್ಯಗಳು ಯಾವುದೇ ಅಡಚಣೆಯಿಲ್ಲದೆ, ಪರಿಣಾಮಕಾರಿಯಾಗಿ ಸಾಗುವಂತೆ ನೋಡಿಕೊಳ್ಳುವ ಗುರಿಯೂ ಇದರ ಹಿಂದಿದೆ ಎಂದು ಡಾ. ಜಿತೇಂದ್ರ ಸಿಂಗ್ ಸ್ಮರಿಸಿದರು. ʻಡಿಒಪಿಟಿʼ ಅಭಿವೃದ್ಧಿಪಡಿಸಿದ ವರ್ಕ್ ಫ್ರಮ್ ಹೋಮ್ (ಡಬ್ಲ್ಯುಎಫ್‌ಎಚ್) ಮಾರ್ಗಸೂಚಿಯು ಎಷ್ಟು ಯಶಸ್ವಿಯಾಗಿದೆಯೆಂದರೆ, ಅನೇಕ ಬಾರಿ, ಕೆಲಸದ ಉತ್ಪಾದಕತೆಯು ಸಾಮಾನ್ಯ ಪರಿಸ್ಥಿತಿಗಳಿಗಿಂತಲೂ ಹೆಚ್ಚಾಗಿದೆ. ಏಕೆಂದರೆ ಸರಕಾರಿ ನೌಕರರು ವಾರದ ಕೆಲಸದ ದಿನಗಳಲ್ಲಿ  ಅಥವಾ ರಜಾ ದಿನಗಳಲ್ಲಿಯೂ ಆನ್‌ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

ಕಳೆದ ಒಂದು ವರ್ಷದಲ್ಲಿ ಗಳಿಸಿದ ಅನುಭವದಿಂದ, ಮತ್ತೊಮ್ಮೆ ಕೋವಿಡ್ ಸೋಂಕಿನ ಏರಿಕೆ ನಿಯಂತ್ರಣಕ್ಕಾಗಿ ಪರಿಣಾಮಕಾರಿಯಾದ ಕ್ರಮಗಳನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

***


(Release ID: 1710364) Visitor Counter : 259