ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಡಿಜಿಟಲ್ ಸುದ್ದಿ ಪ್ರಕಾಶಕರ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್

Posted On: 11 MAR 2021 6:15PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರಿಂದು ಐಟಿ (ಮಧ್ಯಂತರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮ 2021ರ ಹಿನ್ನೆಲೆಯಲ್ಲಿ  ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಡಿಜಿಟಲ್ ಸುದ್ದಿ ಪ್ರಕಾಶಕರ ಸಂಘ (ಡಿಎನ್.ಪಿ.ಎ.) ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಇಂಡಿಯಾ ಟುಡೆ, ದೈನಿಕ್ ಭಾಸ್ಕರ್, ಹಿಂದೂಸ್ತಾನ್ ಟೈಮ್ಸ್, ಇಂಡಿಯನ್ ಎಕ್ಸ್ ಪ್ರೆಸ್, ಟೈಮ್ಸ್ ಆಫ್ ಇಂಡಿಯಾ, ಎಬಿಪಿ, ಈನಾಡು, ದೈನಿಕ ಜಾಗರಣ್, ಲೋಕಮತ್ ಇತ್ಯಾದಿಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.

ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಜಾವಡೇಕರ್, ಡಿಜಿಟಲ್ ಸುದ್ದಿ ಪ್ರಕಾಶಕರ ನಿರ್ದಿಷ್ಟ  ಜವಾಬ್ದಾರಿ ಕುರಿತಂತೆ ಹೊಸ ಕಾನೂನು ಮಾಡಲಾಗಿದೆ. ಇದರಲ್ಲಿ ನೀತಿ ಸಂಹಿತೆ ಅಂದರೆ ಭಾರತೀಯ ಪತ್ರಿಕಾ ಮಂಡಳಿ  ರೂಪಿಸಿದ ಪತ್ರಿಕೋದ್ಯಮ ನಡವಳಿಕೆಯ ಮಾನದಂಡಗಳು ಮತ್ತು ಕೇಬಲ್ ಟೆಲಿವಿಷನ್ ಜಾಲ ಕಾಯ್ದೆಯಡಿ ಕಾರ್ಯಕ್ರಮ ಸಂಹಿತೆಯಂತಹ ನೀತಿ ಸಂಹಿತೆಯ ಅನುಸರಣೆ ಇವುಗಳಲ್ಲಿ ಸೇರಿದೆ. ಜೊತೆಗೆ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಲು ಹೆಚ್ಚುವರಿಯಾಗಿ, ಮೂರು ಹಂತದ ಕುಂದುಕೊರತೆ ನಿವಾರಣಾ ಕಾರ್ಯವಿಧಾನಕ್ಕೆ ನಿಯಮಗಳನ್ನು ಒದಗಿಸಲಾಗಿದೆ, ಅದರಲ್ಲಿ ಮೊದಲ ಮತ್ತು ಎರಡನೆಯ ಹಂತವು ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಅವರೇ ರೂಪಿಸಿದ ಸ್ವಯಂ-ನಿಯಂತ್ರಕ ಸಂಸ್ಥೆಗಳಿಂದ ಕೂಡಿರುತ್ತದೆ. ಡಿಜಿಟಲ್ ಸುದ್ದಿ ಪ್ರಕಾಶಕರು ಕೆಲವು ಮೂಲಭೂತ ಮಾಹಿತಿಯನ್ನು ಸಚಿವಾಲಯಕ್ಕೆ ಸರಳ ರೂಪದಲ್ಲಿ ನೀಡಬೇಕಾಗಿರುತ್ತದೆ ಮತ್ತು ಅದನ್ನು ಅಂತಿಮಗೊಳಿಸಲಾಗುತ್ತಿದೆ ಮತ್ತು ನಿಯಮಿತ ಕಾಲದಲ್ಲಿ ಅವರು ಕೈಗೊಂಡ ಕುಂದುಕೊರತೆ ಪರಿಹಾರವನ್ನು ಸಾರ್ವಜನಿಕ ವಲಯದಲ್ಲಿ ಹಾಕಬೇಕಾಗುತ್ತದೆ. ಮುದ್ರಣ ಮಾಧ್ಯಮ ಮತ್ತು ಟಿವಿ ಚಾನೆಲ್‌ ಗಳು ಡಿಜಿಟಲ್ ಆವೃತ್ತಿಗಳನ್ನು ಹೊಂದಿದ್ದು, ಸಾಂಪ್ರದಾಯಿಕ ವೇದಿಕೆಗಳಲ್ಲಿನ ವಿಷಯವು ಬಹುತೇಕ ಒಂದೇ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಡಿಜಿಟಲ್ ವೇದಿಕೆಗಳಲ್ಲಿ ಪ್ರತ್ಯೇಕವಾಗಿ ಗೋಚರಿಸುವ ವಿಷಯಗಳಿವೆ. ಇದಲ್ಲದೆ ಡಿಜಿಟಲ್ ವೇದಿಕೆಯಲ್ಲಿ ಮಾತ್ರವೇ ಹಲವಾರು ಕಾಯಗಳಿವೆ. ಅದಕ್ಕನುಗುಣವಾಗಿ, ನಿಯಮಗಳು ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿಗಳನ್ನು ಸಾಂಪ್ರದಾಯಿಕ ಮಾಧ್ಯಮಕ್ಕೆ ಸಮನಾಗಿ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

ಹೊಸ ನಿಯಮಗಳನ್ನು ಸ್ವಾಗತಿಸಿದ ಪ್ರತಿನಿಧಿಗಳು, ಟಿವಿ ಮತ್ತು ಮುದ್ರಣ ಮಾಧ್ಯಮ ಈಗಾಗಲೇ ಕೇಬಲ್ ಟೆಲಿವಿಷನ್ ಜಾಲಕ್ಕಾಗಿ ರೂಪಿಸಲಾಗಿರುವ ಕಾಯಿದೆ ಮತ್ತು ಪತ್ರಿಕಾ ಮಂಡಳಿಯ ಕಾಯಿದೆ ನಿಯಮಗಳನ್ನು ತಾವು ದೀರ್ಘಕಾಲದಿಂದ ಪಾಲಿಸುತ್ತಿರುವುದಾಗಿ ತಿಳಿಸಿದರು. ಜೊತೆಗೆ ಡಿಜಿಟಲ್ ಆವೃತ್ತಿಯ ಪ್ರಕಟಣೆಗೆ ಪ್ರಕಾಶಕರು ಹಾಲಿ ಸಾಂಪ್ರದಾಯಿಕ ವೇದಿಕೆಗಳಿಗೆ ಇರುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಡಿಜಿಟಲ್ ವೇದಿಕೆಯಲ್ಲಿ ಮಾತ್ರ ಇರುವ ಸುದ್ದಿ ಪ್ರಕಾಶಕರಿಗಿಂತ ಭಿನ್ನವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀ ಜಾವಡೇಕರ್ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡವರಿಗೆ ಧನ್ಯವಾದ ಅರ್ಪಿಸಿ, ಸರ್ಕಾರ ಈ ಬಗ್ಗೆ ಗಮನ ಹರಿಸಲಿದ್ದು, ಮಾಧ್ಯಮ ಕೈಗಾರಿಕೆಯ ಸರ್ವಾಂಗೀಣ ಪ್ರಗತಿಗಾಗಿ ಈ ಸಮಾಲೋಚನಾ ಪ್ರಕ್ರಿಯೆ ಮುಂದುವರಿಸಲಿದೆ ಎಂದು ತಿಳಿಸಿದರು.

***



(Release ID: 1704320) Visitor Counter : 279