ಪ್ರಧಾನ ಮಂತ್ರಿಯವರ ಕಛೇರಿ

ಕೃಷಿ ಮತ್ತು ರೈತರ ಕಲ್ಯಾಣ ಕುರಿತಾದ ಬಜೆಟ್ ಪ್ರಸ್ತಾವಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವೆಬಿನಾರ್‌ನಲ್ಲಿ ಪ್ರಧಾನಿ ಭಾಷಣ


ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಖಾಸಗಿ ವಲಯದ ಕೊಡುಗೆಯ ಅಗತ್ಯವನ್ನು ಒತ್ತಿ ಹೇಳಿದರು

 ಸಣ್ಣ ರೈತರ ಸಬಲೀಕರಣವು ಸರಕಾರದ ದೂರದೃಷ್ಟಿಯ ಕೇಂದ್ರಬಿಂದುವಾಗಿದೆ: ಪ್ರಧಾನಿ

ಸಂಸ್ಕರಿತ ಆಹಾರಕ್ಕಾಗಿ ನಾವು ನಮ್ಮ ದೇಶದ ಕೃಷಿ ಕ್ಷೇತ್ರವನ್ನು ಜಾಗತಿಕ ವಲಯಕ್ಕೆ ವಿಸ್ತರಿಸಬೇಕಿದೆ: ಪ್ರಧಾನಿ

Posted On: 01 MAR 2021 12:51PM by PIB Bengaluru

ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಬಜೆಟ್ ಪ್ರಸ್ತಾವಗಳ ಪರಿಣಾಮಕಾರಿ ಅನುಷ್ಠಾನ  ಕುರಿತಾದ ವೆಬಿನಾರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದರು. ವೆಬಿನಾರ್‌ನಲ್ಲಿ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ವಲಯದ ತಜ್ಞರು, ಸಾರ್ವಜನಿಕ, ಖಾಸಗಿ ಮತ್ತು ಸಹಕಾರಿ ವಲಯದ ಪ್ರತಿನಿಧಿಗಳು ಹಾಗೂ ಗ್ರಾಮೀಣ ಆರ್ಥಿಕತೆಗೆ ಹಣಕಾಸು ನೆರವು ನೀಡುವ ಬ್ಯಾಂಕ್‌ಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕೇಂದ್ರ ಕೃಷಿ ಸಚಿವರೂ ವೆಬಿನಾರ್‌ನಲ್ಲಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಅವರು, ಸಣ್ಣ ರೈತರನ್ನು ಕೇಂದ್ರಬಿಂದುವಾಗಿಸಿಕೊಂಡು ಕೇಂದ್ರ ಸರಕಾರ ಹೊಂದಿರುವ ದೂರದೃಷ್ಟಿಯನ್ನು ವಿವರಿಸಿದರು. ಸಣ್ಣ ರೈತರ ಸಬಲೀಕರಣ ಭಾರತದ ಕೃಷಿಯನ್ನು ಅನೇಕ ಸಮಸ್ಯೆಗಳಿಂದ ಮುಕ್ತಗೊಳಿಸಲು ಬಹಳ ಸಹಕಾರಿ ಎಂದು ಅವರು ಹೇಳಿದರು. ಕೃಷಿ ಸಾಲ ಗುರಿಯನ್ನು 16,50,000 ಕೋಟಿ ರೂ.ಗಳಿಗೆ ಹೆಚ್ಚಿಸುವುದು; ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ವಲಯಕ್ಕೆ ಆದ್ಯತೆ; ಗ್ರಾಮೀಣ ಮೂಲಸೌಕರ್ಯ ನಿಧಿಯನ್ನು 40,೦೦೦ ಕೋಟಿ ರೂ.ಗಳಿಗೆ ಹೆಚ್ಚಿಸುವುದು, ಸೂಕ್ಷ್ಮ ನೀರಾವರಿಗೆ ಮೀಸಲಿಟ್ಟ ಅನುದಾನವನ್ನು ದ್ವಿಗುಣಗೊಳಿಸುವುದು, ʻಆಪರೇಷನ್ ಗ್ರೀನ್ʼ ಯೋಜನೆಯ ವ್ಯಾಪ್ತಿಯನ್ನು 

22 ಶೀಘ್ರ ಹಾಳಾಗುವ (ಪೆರಿಶಬಲ್‌) ಉತ್ಪನ್ನಗಳಿಗೆ ವಿಸ್ತರಿಸುವುದು ಮತ್ತು ʻ-ನಾಮ್‌ʼ (e-NAM) ನೊಂದಿಗೆ ಇನ್ನೂ 1000ಕ್ಕೂ ಹೆಚ್ಚು ಮಂಡಿಗಳನ್ನು ಬೆಸೆಯುವುದು ಸೇರಿದಂತೆ ಬಾರಿ ಕೇಂದ್ರ ಬಜೆಟ್‌ನಲ್ಲಿ ಮುಂದಿಡಲಾದ ಹಲವು ಪ್ರಸ್ತಾವಗಳ ಬಗ್ಗೆ ಅವರು ಪ್ರಧಾನವಾಗಿ ಹೇಳಿದರು. ನಿರಂತರವಾಗಿ ಹೆಚ್ಚುತ್ತಿರುವ ಕೃಷಿ ಉತ್ಪಾದನೆಯ ಜೊತೆಗೆ, 21ನೇ ಶತಮಾನದಲ್ಲಿ ಭಾರತದಲ್ಲಿ ʻಕೊಯ್ಲು ನಂತರದ ಕ್ರಾಂತಿʼ ಅಥವಾ ʻಆಹಾರ ಸಂಸ್ಕರಣೆ ಕ್ರಾಂತಿʼ ಮತ್ತು ʻಕೃಷಿ ಉತ್ಪನ್ನಗಳ ಮೌಲ್ಯವರ್ಧನೆʼ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಎರಡು-ಮೂರು ದಶಕಗಳ ಹಿಂದೆಯೇ ಕೆಲಸ ಮಾಡಿದ್ದರೆ ದೇಶಕ್ಕೆ ಒಳಿತಾಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಆಹಾರಧಾನ್ಯ, ತರಕಾರಿ, ಹಣ್ಣು, ಮೀನುಗಾರಿಕೆ ಮುಂತಾದ ಎಲ್ಲಾ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲೂ ಸಂಸ್ಕರಣೆಯನ್ನು ಅಭಿವೃದ್ಧಿಗೊಳಿಸಬೇಕೆಂಧು ಪ್ರಧಾನಿ ಒತ್ತಿ ಹೇಳಿದರು. ಇದಕ್ಕಾಗಿ ರೈತರು ತಮ್ಮ ಗ್ರಾಮಗಳ ಬಳಿ ಸಂಗ್ರಹ ವ್ಯವಸ್ಥೆ ಮಾಡುವುದು ಅತ್ಯಂತ ನಿರ್ಣಾಯಕ ಎಂದರು. ಕೃಷಿ ಉತ್ಪನ್ನವನ್ನು ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ಯುವ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ಕರೆ ನೀಡಿದ ಅವರು, ರೈತ ಉತ್ಪಾದಕ ಸಂಘಟನೆಗಳು (ಎಫ್‌ಪಿಓಗಳು) ಇಂತಹ ಘಟಕಗಳಿಗೆ ಅಗತ್ಯ ನೆರವು ನೀಡಬೇಕೆಂದು ಪ್ರತಿಪಾದಿಸಿದರು. ದೇಶದ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಆಯ್ಕೆಗಳನ್ನು ವಿಸ್ತರಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದ ಅವರು, 'ನಮ್ಮ ದೇಶದ ಕೃಷಿ ವಲಯವನ್ನು ಜಾಗತಿಕ ಮಟ್ಟಕ್ಕೂ ವಿಸ್ತರಿಸಬೇಕು. ಗ್ರಾಮದ ಜನರಿಗೆ ಕೃಷಿ ಸಂಬಂಧಿತ ಉದ್ಯೋಗ ಸಿಗುವಂತಾಗಬೇಕೆಂಬ ಉದ್ದೇಶದಿಂದ ಗ್ರಾಮದ ಹತ್ತಿರ ಕೃಷಿ ಕೈಗಾರಿಕಾ ಕ್ಲಸ್ಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದರು. ಸಾವಯವ ಕ್ಲಸ್ಟರ್‌ಗಳು ಮತ್ತು ರಫ್ತು ಕ್ಲಸ್ಟರ್‌ಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದರು. ಕೃಷಿ ಆಧಾರಿತ ಉತ್ಪನ್ನಗಳು ಹಳ್ಳಿಯಿಂದ ನಗರಗಳಿಗೆ ಮತ್ತು ಕೈಗಾರಿಕಾ ಉತ್ಪನ್ನಗಳು ನಗರಗಳಿಂದ ಹಳ್ಳಿಗಳನ್ನು ತಲುಪುವಂತಹ ಸ್ಥಿತಿಯತ್ತ ನಾವು ಸಾಗಬೇಕಾಗಿದೆ ಎಂದು ಅವರು ಹೇಳಿದರು. ನಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ʻಒಂದು ಜಿಲ್ಲೆ, ಒಂದು ಉತ್ಪನ್ನʼ ಯೋಜನೆಯನ್ನು  ಹೇಗೆ ಬಳಸಬೇಕು ಎಂಬುದನ್ನು ಅನ್ವೇಷಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಭಾರತ ವಿಶ್ವದ ಪ್ರಮುಖ ಮೀನು ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಸಂಸ್ಕರಿಸಿದ ಮೀನುಗಳ ಪಾಲು ತೀರಾ ಕಡಿಮೆ ಇದೆ ಎಂದು ಪ್ರಧಾನಿ ವಿಷಾದಿಸಿದರು. ಪರಿಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆಸುಧಾರಣೆಗಳ ಜೊತೆ ಜೊತೆಗೇ ʻಸೇವೆನೆಗೆ ಸಿದ್ಧವಾದʼ (ರೆಡಿ ಟು ಈಟ್‌), ʻಅಡುಗೆ ಮಾಡಲು ಸಿದ್ಧವಾದʼ (ರೆಡಿ ಟು ಕುಕ್‌) ಪದಾರ್ಥಗಳು, ಸಂಸ್ಕರಿಸಿದ ಹಣ್ಣು ಮತ್ತು ತರಕಾರಿಗಳು, ಸಂಸ್ಕರಿಸಿದ ಸಮುದ್ರ ಆಹಾರ ಮತ್ತು ಮೊಝೆರೆಲಾ ಚೀಸ್ ಮುಂತಾದ ಉತ್ಪನ್ನಗಳನ್ನು ಉತ್ತೇಜಿಸಲು ಸುಮಾರು 11,000 ಕೋಟಿ ರೂ.ಗಳ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕಗಳನ್ನು ಘೋಷಿಸಲಾಗಿದೆ ಎಂದು ಅವರು ಹೇಳಿದರು. ʻಆಪರೇಷನ್ ಗ್ರೀನ್ಸ್ʼ ಬಗ್ಗೆ ಮಾತನಾಡಿದ ಅವರು, ಎಲ್ಲಾ ಹಣ್ಣು ಮತ್ತು ತರಕಾರಿಗಳ ಸಾಗಣೆಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕಳೆದ 6 ತಿಂಗಳಲ್ಲಿ 350 ಕಿಸಾನ್ ರೈಲುಗಳು ಓಡಾಟ ನಡೆಸಿದ್ದು, ರೈಲುಗಳ ಮೂಲಕ ಸುಮಾರು 1,00,000 ಮೆಟ್ರಿಕ್ ಟನ್ ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಲಾಗಿದೆ. ಕಿಸಾನ್ ರೈಲು ಇಡೀ ದೇಶಕ್ಕೆ ಒಂದು ಬಲವಾದ ಕೋಲ್ಡ್ ಸ್ಟೋರೇಜ್ ಮಾಧ್ಯಮವಾಗಿದೆ ಎಂದು ಹೇಳಿದರು.

'ಅತ್ಮನಿರ್ಭರ್ ಭಾರತ್' ಅಭಿಯಾನದ ಅಡಿಯಲ್ಲಿ ದೇಶದ ವಿವಿಧೆಡೆ ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆಗೆ ಕ್ಲಸ್ಟರ್ ಗಳ ರಚನೆಗೆ ಒತ್ತು ನೀಡಲಾಗುತ್ತಿದೆ. ʻಪ್ರಧಾನಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣʼ ಯೋಜನೆ ಅಡಿಯಲ್ಲಿ ಲಕ್ಷಾಂತರ ಸೂಕ್ಷ್ಮ ಆಹಾರ ಸಂಸ್ಕರಣಾ ಘಟಕಗಳಿಗೆ ನೆರವು ನೀಡಲಾಗುತ್ತಿದೆ. ಟ್ರ್ಯಾಕ್ಟರ್, ಹುಲ್ಲು ಕೊಯ್ಯುವ ಯಂತ್ರಗಳು ಅಥವಾ ಇತರ ಕೃಷಿ ಯಂತ್ರೋಪಕರಣಗಳನ್ನು ಗಂಟೆ ಆಧರಿತವಾಗಿ ಬಾಡಿಗೆಗೆ ಪಡೆಯುವಂತಹ ಅಗ್ಗದ ಮತ್ತು ಪರಿಣಾಮಕಾರಿ ಆಯ್ಕೆಗಳನ್ನು ಸಣ್ಣ ರೈತರಿಗೆ ಒದಗಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕೃಷಿ ಉತ್ಪನ್ನಗಳನ್ನು ಅಗ್ಗದ ದರದಲ್ಲಿ ಮತ್ತು ಪರಿಣಾಮಕಾರಿ ರೀತಿಯಲ್ಲಿ ಮಾರುಕಟ್ಟೆಗೆ ಸಾಗಿಸಲು ಟ್ರಕ್ ಅಗ್ರಿಗೇಟರ್‌ಗಳನ್ನು ಬಳಸುವ ಅಗತ್ಯವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ದೇಶದಲ್ಲಿ ʻಮಣ್ಣು ಆರೋಗ್ಯ ಕಾರ್ಡ್ʼ ಸೌಲಭ್ಯ ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಮಣ್ಣಿನ ಆರೋಗ್ಯದ ಬಗ್ಗೆ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಿದಲ್ಲಿ, ಫಸಲಿನ ಉತ್ಪಾದನೆ ಉತ್ತಮಗೊಳ್ಳುತ್ತದೆ ಎಂದರು.

ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಖಾಸಗಿ ವಲಯ ಮತ್ತಷ್ಟು ಕೊಡುಗೆ ನೀಡಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ರೈತರಿಗೆ ಗೋಧಿ ಮತ್ತು ಭತ್ತ ಬೆಳೆಯಲು ಮಾತ್ರ ಸೀಮಿತವಾಗದ ರೀತಿಯಲ್ಲಿ ಹಲವು ಆಯ್ಕೆಗಳನ್ನು ನಾವು ಒದಗಿಸಬೇಕು. ಸಾವಯವ ಆಹಾರದಿಂದ ಹಿಡಿದು ಸಲಾಡ್‌ಗೆ ಬಳಸುವ ಹಣ್ಣು-ತರಕಾರಿಗಳವರೆಗೆ ಹಲವು ಬೆಳೆಗಳಿದ್ದು, ನಾವು ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬಹುದು ಎಂದರು. ಸಮುದ್ರಕಳೆ ಮತ್ತು ಜೇನುಮೇಣಕ್ಕೆ ಇರುವ ಮಾರುಕಟ್ಟೆಯನ್ನು ಸದ್ಬಳಕೆ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಸಮುದ್ರಕಳೆ ಸಾಗುವಳಿ ಮತ್ತು ಜೇನುಮೇಣವು ಮೀನುಗಾರರು ಮತ್ತು ಜೇನು ಸಾಕಣೆಕಾರರಿಗೆ ಹೆಚ್ಚುವರಿ ಆದಾಯ ಒದಗಿಸಬಲ್ಲವು. ಖಾಸಗಿ ವಲಯದ ಸಹಭಾಗಿತ್ವದಿಂದ ರೈತರ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಅವರು ಹೇಳಿದರು.

ಗುತ್ತಿಗೆ ಕೃಷಿಯು ಭಾರತದಲ್ಲಿ ಬಹಳ ಕಾಲದಿಂದ ಒಂದಲ್ಲಾ ಒಂದು ರೂಪದಲ್ಲಿ ಚಾಲ್ತಿಯಲ್ಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಗುತ್ತಿಗೆ ಬೇಸಾಯ ಕೇವಲ ವ್ಯಾಪಾರದ ಪರಿಕಲ್ಪನೆಯಾಗಿ ಉಳಿಯದೆ, ಭೂಮಿಯ ಮೇಲೆ ನಾವು ನಮ್ಮ ಜವಾಬ್ದಾರಿಯನ್ನು ಪೂರೈಸಲು ಸಹ ಸಹಕಾರಿಯಾಗುವಂತೆ ಕಾಯ್ದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

ದೇಶದ ಕೃಷಿ ಕ್ಷೇತ್ರದಲ್ಲಿ ಸಮಗ್ರ ಪ್ರಯತ್ನಗಳನ್ನು ಮಾಡಲು; ನೀರಾವರಿಯಿಂದ ಹಿಡಿದು ಬಿತ್ತನೆ, ಕೊಯ್ಲು, ಸಂಪಾದನೆಯವರೆಗೆ ಸಮಗ್ರ ತಾಂತ್ರಿಕ ಪರಿಹಾರಗಳನ್ನು ಕಂಡು ಹಿಡಿಯಲು ಪ್ರಧಾನಿ ಕರೆ ನೀಡಿದರು. ಕೃಷಿ ವಲಯಕ್ಕೆ ಸಂಬಂಧಿಸಿದ ನವೋದ್ಯಮಗಳನ್ನು ಉತ್ತೇಜಿಸಿ ಯುವ ಜನರ ಜತೆ ಸಂಪರ್ಕ ಬೆಸೆಯಲು ಮುಂದಾಗಬೇಕಾಗಿದೆ ಎಂದರು. ಕಳೆದ ಹಲವು ವರ್ಷಗಳಲ್ಲಿ ʻಕಿಸಾನ್ ಕ್ರೆಡಿಟ್ ಕಾರ್ಡ್ʼ ಅನ್ನು ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರರಿಗೆ ಕೊಂಚ ಕೊಂಚವಾಗಿಯೇ ವಿಸ್ತರಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ 1.80 ಕೋಟಿಗೂ ಹೆಚ್ಚು ರೈತರಿಗೆ ʻಕಿಸಾನ್ ಕ್ರೆಡಿಟ್ ಕಾರ್ಡ್ʼಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು. 6-7 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಸಾಲ ಸೌಲಭ್ಯ ದುಪ್ಪಟ್ಟಾಗಿದೆ. ದೇಶದಲ್ಲಿ  10,000 `ಎಫ್‌ಪಿಓಗಳನ್ನು ರಚಿಸುವ ಮಾಡುವ ಮೂಲಕ ಸಹಕಾರ ಸಂಘಗಳನ್ನು ಬಲಪಡಿಸಲಾಗುತ್ತಿದೆ ಎಂದರು.

***(Release ID: 1701703) Visitor Counter : 178