ಪ್ರಧಾನ ಮಂತ್ರಿಯವರ ಕಛೇರಿ

ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆಯಲ್ಲಿ ಪ್ರಧಾನಮಂತ್ರಿಯವರ ಪ್ರಾಸ್ತಾವಿಕ ನುಡಿ


ರಾಜ್ಯ ಮತ್ತು ಕೇಂದ್ರದ ನಡುವಿನ ಸಹಕಾರ ಅತ್ಯಂತ ಮಹತ್ವ: ಪ್ರಧಾನಮಂತ್ರಿ

ಪಿ.ಎಲ್.ಐ. ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮತ್ತು ಗರಿಷ್ಠ ಹೂಡಿಕೆ ಆಕರ್ಷಿಸುವಂತೆ ರಾಜ್ಯಗಳಿಗೆ ಆಗ್ರಹ

Posted On: 20 FEB 2021 11:57AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆ ಉದ್ದೇಶಿಸಿ ಇಂದು ಪ್ರಾಸ್ತಾವಿಕ ಭಾಷಣ ಮಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಪ್ರಗತಿ ಒಕ್ಕೂಟ ವ್ಯವಸ್ಥೆಯ ಸಹಕಾರವನ್ನು ಆಧರಿಸಿದೆ ಮತ್ತು ಇಂದಿನ ಸಭೆ ಅದನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಮತ್ತು ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟವ್ಯವಸ್ಥೆಯತ್ತ ಸಾಗಲು ಬುದ್ದಿ ಚುರುಕುಗೊಳಿಸಲಿದೆ.  ಕರೋನಾ ಸಾಂಕ್ರಾಮಿಕ ಸಮಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಕೆಲಸ ಮಾಡಿದಾಗ ಇಡೀ ದೇಶ ಯಶಸ್ವು ಸಾಧಿಸಿತು ಎಂದು ಅವರು ಹೇಳಿದರು. ಇಂದಿನ ಸಭೆಯ ಕಾರ್ಯಸೂಚಿಯನ್ನು ದೇಶದ ಅತ್ಯುನ್ನತ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧ ಮಾಡಲಾಗಿದೆ ಎಂದು ಅವರು ಹೇಳಿದರು.

ಎಲ್ಲ ಬಡವರಿಗೆ ಪಕ್ಕಾ ಮನೆಗಳನ್ನು ಒದಗಿಸುವ ಅಭಿಯಾನವೂ ಈಗ ನಡೆಯುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 2014ರಿಂದ ನಗರ ಮತ್ತು ಪಟ್ಟಣಗಳೆರಡರಲ್ಲೂ ಒಟ್ಟು 2 ಕೋಟಿ 40 ಲಕ್ಷಕ್ಕೂ ಅಧಿಕ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು. ಜಲ ಜೀವನ ಅಭಿಯಾನ ಆರಂಭವಾದ ಕೇವಲ 18 ತಿಂಗಳುಗಳಲ್ಲಿ 3.5 ಲಕ್ಷ ಗ್ರಾಮೀಣ ಮನೆಗಳಿಗೆ ಕೊಳವೆಯ ಮೂಲಕ ಕುಡಿಯುವ ನೀರು ಒದಗಿಸಲಾಗಿದೆ ಎಂದರು. ಗ್ರಾಮಗಳಿಗೆ ಇಂಟರ್ನೆಟ್ ಸೌಲಭ್ಯ ಒದಗಿಸುವ ಭಾರತ್ ನೆಟ್ ಯೋಜನೆ ಬದಲಾವಣೆಯ ದೊಡ್ಡ ಮಾಧ್ಯಮವಾಗಲಿದೆ ಎಂದರು. ಈ ಎಲ್ಲ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಒಗ್ಗೂಡಿ ಶ್ರಮಿಸಿದರೆ, ಕಾಮಗಾರಿಗಳ ವೇಗವೂ ಹೆಚ್ಚಾಗಲಿದೆ ಮತ್ತು ಕೊನೆಯ ವ್ಯಕ್ತಿಗೂ ಪ್ರಯೋಜನ ತಲುಪಲಿದೆ ಎಂದರು. 

 ವರ್ಷದ ಬಜೆಟ್ ಮೇಲೆ ಬಂದಿರುವ ಧನಾತ್ಮಕ ಪ್ರತಿಕ್ರಿಯೆ ದೇಶದ ಮನೋಸ್ಥಿತಿಯನ್ನು ವ್ಯಕ್ತಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶ ವೇಗವಾಗಿ ಸಾಗಲು ತನ್ನ ಮನಸ್ಸು ಅಣಿಗೊಳಿಸಿದೆ, ಮತ್ತು ಅದು ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ ಎಂದರು. ದೇಶದ ಖಾಸಗಿ ವಲಯ ಹೆಚ್ಚಿನ ಉತ್ಸಾಹದೊಂದಿಗೆ ದೇಶದ ಈ ಅಭಿವೃದ್ಧಿಯ ಪಯಣದಲ್ಲಿ ಮುಂದೆ ಬರುತ್ತಿದೆ ಎಂದೂ ಹೇಳಿದರು. ಒಂದು ಸರ್ಕಾರವಾಗಿ, ನಾವೂ ಕೂಡ ಖಾಸಗಿ ವಲಯದ ಈ ಉತ್ಸಾಹ ಮತ್ತು ಚೈತನ್ಯವನ್ನು ಗೌರವಿಸಬೇಕು ಮತ್ತು ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದರು.   ಆತ್ಮನಿರ್ಭರ ಭಾರತ ಅಭಿಯಾನ ಭಾರತದ ಅವಶ್ಯಕತೆಗಳನ್ನು ಪೂರೈಸುವುದಷ್ಟೇ ಅಲ್ಲ, ಜೊತೆಗೆ ವಿಶ್ವದ ಅಗತ್ಯವನ್ನೂ ಪೂರೈಸುವ ರೀತಿ ಅಭಿವೃದ್ಧಿಪಡಿಸುವ ಮಾರ್ಗವಾಗಿದೆ ಮತ್ತು ಈ ಉತ್ಪಾದನೆ ವಿಶ್ವಕ್ಕೇ ಪರೀಕ್ಷೆಯಾಗಿದೆ ಎಂದರು. 

ಭಾರತದಂತಹ ಯುವ ರಾಷ್ಟ್ರದ ಆಶೋತ್ತರಗಳನ್ನು ಅಂದೆ  ಆಧುನಿಕ ಮೂಲಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಬೇಕಾಗಿದೆ. ನಾವಿನ್ಯತೆಯನ್ನು ಉತ್ತೇಜಿಸಬೇಕಿದೆ ಮತ್ತು ಶಿಕ್ಷಣ ಮತ್ತು ಕೌಶಲ್ಯದ ಉತ್ತಮ ಅವಕಾಶಗಳನ್ನು ಒದಗಿಸಲು ಹೆಚ್ಚಿನ ತಂತ್ರಜ್ಞಾನವನ್ನುಬಳಸಬೇಕಿದೆ ಎಂದರು. ನಮ್ಮ ನವೋದ್ಯಮಗಳು ಮತ್ತು ಎಂ.ಎಸ್.ಎಂ.ಇ.ಗಳನ್ನು ಬಲಪಡಿಸುವ ಅಗತ್ಯವನ್ನು ಅವರು  ಪ್ರತಿಪಾದಿಸಿದರು. ದೇಶದ ನೂರಾರು ಜಿಲ್ಲೆಗಳ ಉತ್ಪನ್ನಗಳನ್ನು ಅದರ ವಿಶೇಷತೆಗೆ ಅನುಗುಣವಾಗಿ ಕಿರುಪಟ್ಟಿ ಮಾಡುವುದು ಅದನ್ನು ಉತ್ತೇಜಿಸುತ್ತಿದೆ ಮತ್ತು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಗೆ ಕಾರಣವಾಗಿದೆ ಎಂದು ಅವರು ಹೇಳಿದರು. ರಾಜ್ಯಗಳ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ರಾಜ್ಯಗಳಿಂದ ರಫ್ತು ಹೆಚ್ಚಿಸಲು ಇದನ್ನು ವಿಭಾಗವಾರು ತೆಗೆದುಕೊಳ್ಳಬೇಕು  ಎಂದು ಅವರು ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯ ಮತ್ತು ನೀತಿ ಚೌಕಟ್ಟಿನ ಮಹತ್ವವನ್ನು ಅವರು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರ ವಿವಿಧ ವಲಯಗಳಿಗೆ ಪಿ.ಎಲ್.ಐ. ಯೋಜನೆ ಪರಿಚಯಿಸಿದ್ದು, ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ಒಂದು ಅದ್ಭುತ ಅವಕಾಶವನ್ನು ನೀಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಜ್ಯಗಳು ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮತ್ತು ಹೂಡಿಕೆಯನ್ನು ಆಕರ್ಷಿಸುವಂತೆ ಮತ್ತು ತಗ್ಗಿಸಲಾಗಿರುವ ಸಾಂಸ್ಥಿಕ ತೆರಿಗೆಯ ಲಾಭ ಪಡೆಯುವಂತೆ ಆಗ್ರಹಿಸಿದರು.  

ಈ ಬಜೆಟ್ ನಲ್ಲಿ ಮೂಲಸೌಕರ್ಯಕ್ಕೆ ಹಂಚಿಕೆ ಮಾಡಲಾಗಿರುವ ಹಣದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇದು ದೇಶದ ಆರ್ಥಿಕತೆಯು ಹಲವು ಮಟ್ಟದಲ್ಲಿ ಮುನ್ನಡೆಯಲು ಆರ್ಥಿಕತೆಗೆ ನೆರವಾಗಲಿದೆ ಎಂದರು. ರಾಜ್ಯಗಳನ್ನು ಸ್ವಾವಲಂಬಿಯಾಗಿ ಮಾಡುವ ಮಹತ್ವವನ್ನು ಪ್ರತಿಪಾದಿಸಿದ ಅವರು, ತಮ್ಮ ಬಜೆಟ್ ನಲ್ಲಿ ಅಭಿವೃದ್ಧಿಗೆ ವೇಗ ನೀಡುವಂತೆ ತಿಳಿಸಿದರು. 15 ನೇ ಹಣಕಾಸು ಆಯೋಗದಲ್ಲಿ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಂಪನ್ಮೂಲಗಳಲ್ಲಿ ದೊಡ್ಡ ಹೆಚ್ಚಳವಾಗಲಿದೆ ಎಂದು ಅವರು ಪ್ರಕಟಿಸಿದರು. ಸ್ಥಳೀಯ ಆಡಳಿತ ಸುಧಾರಣೆಗೆ ತಂತ್ರಜ್ಞಾನದ ಸಾರ್ವಜನಿಕ ಸಹಭಾಗಿತ್ವವು ಬಹಳ ಮುಖ್ಯವಾಗಿದೆ ಎಂದು ಹೇಳಿದರು. ಖಾದ್ಯ ತೈಲ ಆಮದಿಗಾಗಿ 65 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ, ಅದು ನಮ್ಮ ರೈತರಿಗೆ ಹೋಗಬಹುದಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಅದೇ ರೀತಿ ಅನೇಕ ಕೃಷಿ ಉತ್ಪನ್ನಗಳನ್ನು ದೇಶಕ್ಕಾಗಿ ಮಾತ್ರವೇ ಉತ್ಪಾದಿಸುವುದಲ್ಲ ಜೊತೆಗೆ ವಿಶ್ವಕ್ಕೆ ಪೂರೈಕೆ ಮಾಡಬೇಕಾಗಿದೆ ಎಂದರು. ಇದಕ್ಕಾಗಿ, ಎಲ್ಲ ರಾಜ್ಯಗಳೂ ತಮ್ಮ ಕೃಷಿ ಹವಾಮಾನಕ್ಕೆ ಪ್ರಾದೇಶಿಕ ಯೋಜನೆಯ ಕಾರ್ಯತಂತ್ರ ರೂಪಿಸುವುದು ಅಗತ್ಯ ಎಂದರು. ಕೆಲವು ವರ್ಷಗಳಲ್ಲಿ ಕೃಷಿಯಿಂದ ಪಶುಸಂಗೋಪನೆ ಮತ್ತು ಮೀನುಗಾರಿಕೆಯವರೆಗೆ ಸಮಗ್ರವಾದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದರ ಪರಿಣಾಮವಾಗಿ, ಕರೋನಾ ಕಾಲದಲ್ಲೂ ದೇಶದ ಕೃಷಿ ರಫ್ತು, ಗಣನೀಯವಾಗಿ ಹೆಚ್ಚಾಗಿದೆ ಎಂದರು.

ಕೃಷಿ ಉತ್ಪನ್ನ ವ್ಯರ್ಥವಾಗುವುದನ್ನು ತಡೆಯಲು ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ದಾಸ್ತಾನಿನ ಬಗ್ಗೆ ಗಮನ ಹರಿಸಬೇಕೆಂದು ಪ್ರಧಾನಮಂತ್ರಿ ಆಗ್ರಹಿಸಿದರು. ಲಾಭವನ್ನು ಹೆಚ್ಚಿಸಲು ಕಚ್ಚಾ ಆಹಾರಗಳಿಗಿಂತ ಸಂಸ್ಕರಿಸಿದ ಆಹಾರವನ್ನು ರಫ್ತು ಮಾಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ನಮ್ಮ ರೈತರಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳು, ಉತ್ತಮ ಮೂಲಸೌಕರ್ಯ ಮತ್ತು ಆಧುನಿಕ ತಂತ್ರಜ್ಞಾನವನ್ನು ಪಡೆಯಲು ಸುಧಾರಣೆಗಳು ಬಹಳ ಮುಖ್ಯ ಎಂದು ಅವರು ಹೇಳಿದರು.

ಇತ್ತೀಚಿನ ಸುಧಾರಣೆಯನ್ನು ಓ.ಎಸ್.ಪಿ. ನಿಯಮಾವಳಿಗಳ ಮೇಲೆ ಮಾಡಲಾಗಿದೆ ಎಂದ ಪ್ರಧಾನಮಂತ್ರಿಯವರು, ಇದು ಯುವಕರಿಗೆ ಎಲ್ಲಿಂದ ಬೇಕಾದರೂ ಕರ್ತವ್ಯ ನಿರ್ವಹಿಸುವ ನಮ್ಯತೆಯನ್ನು ಒದಗಿಸುತ್ತಿದ್ದು ತಂತ್ರಜ್ಞಾನ ವಲಯ ಇದರಿಂದ  ಅಪಾರ ಪ್ರಯೋಜನ ಪಡೆದಿದೆ ಎಂದರು.  ಹಲವು ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಎಂದ ಅವರು, ಭೂಪ್ರಾದೇಶಿಕ ದತ್ತಾಂಶವನ್ನು ಇತ್ತೀಚೆಗೆ ಉದಾರೀಕರಣ ಮಾಡಲಾಗಿದೆ ಎಂದರು. ಇದು ನವೋದ್ಯಮಗಳಿಗೆ ಮತ್ತು ತಾಂತ್ರಿಕ ವಲಯಕ್ಕೆ ನೆರವಾಗಲಿದ್ದು, ಶ್ರೀಸಾಮಾನ್ಯರ ಸುಗಮ ಜೀವನ ಸುಧಾರಣೆ ಮಾಡಲಿದೆ ಎಂದರು.

***


(Release ID: 1699696) Visitor Counter : 313