ಹಣಕಾಸು ಸಚಿವಾಲಯ
ಕೇಂದ್ರ ಬಜೆಟ್ 2021-22ರಲ್ಲಿ ನಗರ ಪ್ರದೇಶಗಳ ಸಾರ್ವಜನಿಕ ಸಾರಿಗೆಗೆ ಒತ್ತು
ಬೆಂಗಳೂರು ಮೆಟ್ರೋ ರೈಲು 2ಎ ಮತ್ತು 2ಬಿ ಹಂತದ 58.19 ಕಿಮಿ. ಯೋಜನೆಗೆ 14,788 ಕೋಟಿ ರೂ. ನೆರವು ಹಾಗು ಕೊಚ್ಚಿ, ಚೆನ್ನೈ, ನಾಗ್ಪುರ ಮತ್ತು ನಾಸಿಕ್ ಮೆಟ್ರೋಗಳಿಗೆ ಆರ್ಥಿಕ ನೆರವು
ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆ ಬೆಂಬಲಕ್ಕೆ 18,000 ಕೋಟಿ ರೂ.ಗಳ ಹೊಸ ಯೋಜನೆ ಪ್ರಸ್ತಾಪ
‘ಮೆಟ್ರೋ ಲೈಟ್’ ಮತ್ತು ‘ಮೆಟ್ರೋನಿಯೊ’ ಹೊಸ ತಂತ್ರಜ್ಞಾನ, ಎರಡನೇ ದರ್ಜೆ ನಗರಗಳು ಮತ್ತು ಒಂದನೇ ದರ್ಜೆ ನಗರಗಳ ಹೊರ ವಲಯಗಳಿಗೆ ನಿಯೋಜನೆ
Posted On:
01 FEB 2021 1:48PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದ 2021-22ನೇ ಸಾಲಿನ ಬಜೆಟ್ ನಲ್ಲಿ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಮೆಟ್ರೋ ರೈಲು ಮಾರ್ಗ ವಿಸ್ತರಣೆ ಮತ್ತು ನಗರ ಬಸ್ ಸೇವೆ ಸುಧಾರಿಸುವುದು ಸೇರಿದಂತೆ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ವ್ಯವಸ್ಥೆಯನ್ನು ಹಂಚಿಕೆ ಮಾಡುವುದು ಮತ್ತು ಅವುಗಳನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದರು. ಬೆಂಗಳೂರು, ಕೊಚ್ಚಿ, ಚೆನ್ನೈ, ನಾಗ್ಪುರ ಮತ್ತು ನಾಸಿಕ್ ಮೆಟ್ರೋಗಳಿಗೆ ಕೇಂದ್ರದಿಂದ ಆರ್ಥಿಕ ನೆರವು, ಬೆಂಗಳೂರು ಮೆಟ್ರೋ ರೈಲು 2ಎ ಮತ್ತು 2ಬಿ ಹಂತದ 58.19 ಕಿಮಿ. ಯೋಜನೆಗೆ 14,788 ಕೋಟಿ ರೂ. ನೆರವು. ಸಾರ್ವಜನಿಕ ಬಸ್ ಸಾರಿಗೆ ಸೇವೆ ಬಲವರ್ಧನೆಗೆ 18,000 ಕೋಟಿ ರೂ.ಗಳ ಹೊಸ ಯೋಜನೆಯನ್ನು ಆರಂಭಿಸಲಾಗುವುದು. ಅದರಡಿ ನವೀನ ಸಾರ್ವಜನಿಕ ಖಾಸಗಿ ಸಹಭಾಗಿತ್ವ(ಪಿಪಿಪಿ) ಮಾದರಿಯನ್ನು ಉತ್ತೇಜಿಸಲು ಖಾಸಗಿ ವಲಯದ ಕಂಪನಿಗಳಿಂದ ಆರ್ಥಿಕ ನೆರವು ನೀಡುವುದು ಮತ್ತು ಸುಮಾರು 20,000 ಬಸ್ ಗಳಿಗೆ ಹಣಕಾಸು ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕೈಗೊಳ್ಳಲು ಅನುಕೂಲ ಕಲ್ಪಿಸಲಾಗುವುದು. ಈ ಯೋಜನೆಯಿಂದಾಗಿ ಆಟೋ ಮೊಬೈಲ್ ವಲಯ ವೃದ್ಧಿಯಾಗುವುದಲ್ಲದೆ, ಆರ್ಥಿಕ ಪ್ರಗತಿಗೆ ಒತ್ತು ಸಿಗಲಿದೆ. ಯುವಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿದೆ ಮತ್ತು ನಗರ ವಾಸಿಗಳಿಗೆ ಸಂಚಾರ ಸುಗಮವಾಗಲಿದೆ.
ಅಲ್ಲದೆ ದೇಶಾದ್ಯಂತ ಎಲ್ಲಾ ನಗರಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ಭಾರೀ ಪ್ರಮಾಣದಲ್ಲಿ ವಿಸ್ತರಿಸಲಾಗುವುದು. ಒಟ್ಟಾರೆ ಸಾಂಪ್ರದಾಯಿಕ ಮೆಟ್ರೋ ರೈಲು 702 ಕಿ.ಮೀ. ಕಾರ್ಯಾಚರಣೆ ನಡೆಸುತ್ತಿದ್ದು, ಮತ್ತೆ ಹೆಚ್ಚುವರಿಯಾಗಿ 1,016 ಕಿ.ಮೀ. ಮೆಟ್ರೋ ಮಾರ್ಗ ಹೊಂದಲಾಗುವುದು ಮತ್ತು ಆರ್ ಆರ್ ಟಿ ಎಸ್ 27 ನಗರಗಳಲ್ಲಿ ಈ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಬಜೆಟ್ ಮಂಡನೆ ವೇಳೆ ಸಚಿವರು ಸರ್ಕಾರ ಎರಡು ಹೊಸ ತಂತ್ರಜ್ಞಾನಗಳು ಅಂದರೆ ‘ಮೆಟ್ರೋಲೈಟ್’ ಮತ್ತು ‘ಮೆಟ್ರೋನಿಯೊ’ಗಳನ್ನು ನಿಯೋಜಿಸಲು ಚಿಂತನೆ ನಡೆಸಿದೆ. ಮೆಟ್ರೋ ರೈಲು ವ್ಯವಸ್ಥೆಗಿಂತ ಅತಿ ಕಡಿಮೆ ದರವನ್ನು ಒಳಗೊಂಡಿರುವ ಇದು, ಮೆಟ್ರೋ ರೈಲಿನ ಅನುಭವವನ್ನು ನೀಡುತ್ತದೆ ಮತ್ತು ಸೂಕ್ತವಾಗಿದೆ ಹಾಗೂ ಎರಡನೇ ದರ್ಜೆ ನಗರಗಳು ಮತ್ತು ಒಂದನೇ ದರ್ಜೆ ನಗರಗಳ ಹೊರ ವಲಯಗಳಿಗೆ ಸುರಕ್ಷಿತ ಮತ್ತು ಸುಗಮ ಸಂಚಾರ ಕಲ್ಪಿಸಲಾಗುವುದು.
ಬಜೆಟ್ ನಲ್ಲಿ ಪ್ರಸ್ತಾಪಿಸಿರುವಂತೆ ಕೇಂದ್ರದಿಂದ ನೀಡಲಾಗುವ ಅನುದಾನ:
- 58.19 ಕಿ.ಮೀ. ಉದ್ದದ ಬೆಂಗಳೂರು ಮೆಟ್ರೋ ರೈಲು ಯೋಜನೆ 2ಎ ಮತ್ತು 2ಬಿ ಹಂತಕ್ಕೆ 14,788 ಕೋಟಿ ರೂ. ನೆರವು
- 1957.05 ಕೋಟಿ ರೂ. ವೆಚ್ಚದಲ್ಲಿ 11.5 ಕಿ.ಮೀ.ಗಳ ಕೊಚ್ಚಿ ಮೆಟ್ರೋ ರೈಲು ಯೋಜನೆ ಎರಡನೇ ಹಂತ.
- 118.9 ಕಿ.ಮೀ. ಉದ್ದದ ಚೆನ್ನೈ ಮೆಟ್ರೋ ರೈಲು ಯೋಜನೆ ಎರಡನೇ ಹಂತಕ್ಕೆ 63,246 ಕೋಟಿ ರೂ.
- ನಾಗ್ಪುರ ಮೆಟ್ರೋ ರೈಲು ಯೋಜನೆ ಎರಡನೇ ಹಂತ ಮತ್ತು ನಾಸಿಕ್ ಮೆಟ್ರೋ ಯೋಜನೆಗಳಿಗೆ ಕ್ರಮವಾಗಿ 5,976 ಮತ್ತು 2,092 ಕೋಟಿ ರೂ. ನೆರವು.
***
(Release ID: 1693951)
Visitor Counter : 326