ಪ್ರಧಾನ ಮಂತ್ರಿಯವರ ಕಛೇರಿ

ಅಹ್ಮದಾಬಾದ್ ಮೆಟ್ರೋ ಯೋಜನೆಯ ಎರಡನೇ ಹಂತ ಮತ್ತು ಸೂರತ್ ಮೆಟ್ರೋ ಯೋಜನೆಯ ಭೂಮಿ ಪೂಜೆ: ಪ್ರಧಾನಿ ನರೇಂದ್ರ ಮೋದಿ ಭಾಷಣ

Posted On: 18 JAN 2021 2:29PM by PIB Bengaluru

ನಮಸ್ತೇ, ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಅಮಿತ್ ಶಾ ಜೀ ಮತ್ತು ಹರ್ದೀಪ್ ಸಿಂಗ್ ಪುರಿ ಜೀ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಜೀ, ಗುಜರಾತ್ ಸರಕಾರದ ಸಚಿವರೇ, ಸಂಸತ್ ಸದಸ್ಯರೇ ಮತ್ತು ಶಾಸಕರೇ, ಅಹ್ಮದಾಬಾದ್ ಮತ್ತು ಸೂರತ್ತಿನ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ

ಅಹ್ಮದಾಬಾದ್ ಮತ್ತು ಸೂರತ್ ಗಳು ಇಂದು ಉತ್ತರಾಯಣದ ಆರಂಭದೊಂದಿಗೆ ಬಹಳ ಪ್ರಮುಖವಾದ ಕೊಡುಗೆಯನ್ನು ಪಡೆಯುತ್ತಿವೆ.ದೇಶದ ಎರಡು ಪ್ರಮುಖ ವಾಣಿಜ್ಯ ಕೇಂದ್ರಗಳಾದ ಅಹ್ಮದಾಬಾದ್ ಮತ್ತು ಸೂರತ್ತಿನಲ್ಲಿಯ ಮೆಟ್ರೋ ನಗರಗಳಲ್ಲಿ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲಿದೆ. ನಿನ್ನೆ ಕೇವಾಡಿಯಾಕ್ಕೆ ಹೊಸ ರೈಲು ಮಾರ್ಗಗಳನ್ನು ಮತ್ತು ಹೊಸ ರೈಲುಗಳನ್ನು ಆರಂಭಿಸಲಾಗಿದೆ. ಆಧುನಿಕ ಜನ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಈಗ ಅಹ್ಮದಾಬಾದಿನಿಂದ ಕೇವಾಡಿಯಾಕ್ಕೆ ಹೋಗುತ್ತದೆ. ಉದ್ಘಾಟನೆಗಾಗಿ ನಾನು ಗುಜರಾತಿನ ಜನತೆಯನ್ನು ಅಭಿನಂದಿಸುತ್ತೇನೆ ಮತ್ತು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು, 17,000 ಕೋ.ರೂ.ಗಳಿಗೂ ಅಧಿಕ ಮೊತ್ತದ ಮೂಲಸೌಕರ್ಯ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. 17,000 ಕೋ.ರೂ.ಗಳ ಮೌಲ್ಯದ ಹೂಡಿಕೆಯು ಕೊರೊನಾ ಅವಧಿಯ ನಡುವೆಯೂ, ದೇಶವು ನಿರಂತರವಾಗಿ ಹೊಸ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲು ನಡೆಸುತ್ತಿರುವ ಪ್ರಯತ್ನಗಳನ್ನು ತೋರಿಸುತ್ತದೆ. ಕಳೆದ ಕೆಲವು ದಿನಗಳಿಂದ, ದೇಶಾದ್ಯಂತ ಸಾವಿರಾರು ಕೋಟಿ ರೂಪಾಯಿಗಳ ಮೂಲಸೌಕರ್ಯ ಯೋಜನೆಗಳನ್ನು ಒಂದೋ ಕಾರ್ಯಾರಂಭ ಮಾಡಲಾಗಿದೆ ಇಲ್ಲವೇ ಹೊಸ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಸ್ನೇಹಿತರೇ,

ಅಹ್ಮದಾಬಾದ್ ಮತ್ತು ಸೂರತ್ ನಗರಗಳು ಗುಜರಾತಿನ ಹಾಗು ಭಾರತದ ಸ್ವಾವಲಂಬನೆಯನ್ನು ಸಶಕ್ತೀಕರಣ ಮಾಡಿದವು. ನನಗೆ ನೆನಪಿದೆ, ಅಹ್ಮದಾಬಾದಿನಲ್ಲಿ ಮೆಟ್ರೋ ಆರಂಭಗೊಂಡ ಕ್ಷಣಗಳು ಬಹಳ ಸುಂದರ ಕ್ಷಣಗಳು. ಜನರು ಮನೆಯ ಮಾಡುಗಳ ಮೇಲೆ ನಿಂತಿದ್ದರು. ಜನರ ಮುಖಗಳಲ್ಲಿದ್ದ ಸಂತೋಷವನ್ನು ಯಾರೂ ಮರೆಯುವುದು ಸಾಧ್ಯವಿಲ್ಲ. ಅಹ್ಮದಾಬಾದ್ ಕನಸುಗಳು ಮತ್ತು ಗುರುತಿಸುವಿಕೆ ಹೇಗೆ ತಮ್ಮಿಂದ ತಾವೇ ಮೆಟ್ರೋ ಜೊತೆ ಜೋಡಿಸಲ್ಪಟ್ಟಿದ್ದವು ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಈಗ ಅಹ್ಮದಾಬಾದ್ ಮೆಟ್ರೋದ  ಎರಡನೇ ಹಂತದ ಕಾಮಗಾರಿ ಇಂದು ಆರಂಭಗೊಳ್ಳುತ್ತಿದೆ. ಅಹ್ಮದಾಬಾದ್ ಮೆಟ್ರೋ ರೈಲು ಯೋಜನೆ ಈಗ ಮೊಟೇರಾ ಕ್ರೀಡಾಂಗಣದಿಂದ ಮಹಾತ್ಮಾ ಮಂದಿರವರೆಗೆ ಕಾರಿಡಾರನ್ನು ಹೊಂದಲಿದೆ ಮತ್ತು ಇತರ ಕಾರಿಡಾರುಗಳು ಜಿ.ಎನ್.ಎಲ್.ಯು. ಮತ್ತು ಗಿಫ್ಟ್ ಸಿಟಿಯನ್ನು ಜೋಡಿಸಲಿವೆ. ಇದರಿಂದ  ನಗರದಲ್ಲಿಯ ಮಿಲಿಯಾಂತರ ಜನರಿಗೆ ಲಾಭವಾಗಲಿದೆ.

ಸ್ನೇಹಿತರೇ,

ಗುಜರಾತಿನಲ್ಲಿ ಅಹ್ಮದಾಬಾದಿನ ಬಳಿಕ ಸೂರತ್ ಎರಡನೇ ಅತಿ ದೊಡ್ಡ ನಗರ. ಇದು ಆಧುನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋದತಹ ವ್ಯವಸ್ಥೆಗಳೊಂದಿಗೆ ಜೋಡಿಸಲ್ಪಟ್ಟಿದೆ. ಸೂರತ್ತಿನ ಮೆಟ್ರೋ ಜಾಲವು ಇಡೀ ನಗರದ ಪ್ರಮುಖ ವ್ಯಾಪಾರೋದ್ಯಮ ತಾಣಗಳನ್ನು ಜೋಡಿಸಲಿದೆ. ಒಂದು ಕಾರಿಡಾರ್ ಸಾರ್ಥನಾದಿಂದ ಡ್ರೀಮ್ ಸಿಟಿಯವರೆಗಿನ ಪ್ರದೇಶಗಳನ್ನು ಸಂಪರ್ಕಿಸಲಿದೆ. ಇನ್ನೊಂದು ಕಾರಿಡಾರ್ ಭೀಸನ್ ನಿಂದ ಸರೋಲಿ ಮಾರ್ಗದವರೆಗಿನ ಪ್ರದೇಶಗಳನ್ನು ಬೆಸೆಯಲಿದೆ. ಮೆಟ್ರೋ ಯೋಜನೆಯ ಪ್ರಮುಖ ಅಂಶಗಳೆಂದರೆ ಅವುಗಳನ್ನು ಬರಲಿರುವ ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗುತ್ತಿದೆ. ಅಂದರೆ ಇಂದು ಮಾಡಲಾಗುತ್ತಿರುವ ಹೂಡಿಕೆ ನಮ್ಮ ನಗರಗಳಲ್ಲಿ ಮುಂದಿನ  ಹಲವಾರು ವರ್ಷಗಳ ಕಾಲ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ಹಿಂದಿನ ಸರಕಾರಗಳು ಮತ್ತು ನಮ್ಮ ಸರಕಾರದ ನಡುವಣ ಧೋರಣೆಗಳ ವ್ಯತ್ಯಾಸಕ್ಕೆ ಉತ್ತಮ ಉದಾಹರಣೆ ಎಂದರೆ ದೇಶದಲ್ಲಿ ಮೆಟ್ರೋ ಜಾಲದ ವಿಸ್ತರಣೆಯನ್ನು ಮೌಲ್ಯಮಾಪನ ಮಾಡುವ ಮೂಲಕ ತಿಳಿದುಕೊಳ್ಳುವುದು. 2014ಕ್ಕೆ 10-12 ವರ್ಷಗಳ ಮೊದಲು ಬರೇ 225 ಕಿಲೋ ಮೀಟರ್ ಮೆಟ್ರೋ ಮಾರ್ಗ ಕಾರ್ಯಾಚರಣೆಯಲ್ಲಿ ಇತ್ತು. ಕಳೆದ ಆರು ವರ್ಷಗಳಲಿ 450 ಕಿಲೋ ಮೀಟರಿಗೂ ಅಧಿಕ ಮೆಟ್ರೋ ಜಾಲವನ್ನು ಕಾರ್ಯಾರಂಭ ಮಾಡಲಾಗಿದೆ. ಪ್ರಸ್ತುತ 1000 ಕಿಲೋ ಮೀಟರಿಗೂ ಅಧಿಕ ಹೊಸ ಮೆಟ್ರೋ ಜಾಲದ ಕೆಲಸ ದೇಶದ 27 ನಗರಗಳಲ್ಲಿ ನಡೆಯುತ್ತಿದೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಮೆಟ್ರೋ ನಿರ್ಮಾಣಕ್ಕೆ ಸಂಬಂಧಿಸಿ ಆಧುನಿಕ ಚಿಂತನೆ ಇಲ್ಲದಿದ್ದ ಕಾಲವೊಂದಿತ್ತು. ದೇಶದಲ್ಲಿ ಮೆಟ್ರೋ ನೀತಿ ಇರಲಿಲ್ಲ. ಇದರ ಪರಿಣಾಮವಾಗಿ, ವಿವಿಧ ನಗರಗಳಲ್ಲಿ ವಿವಿಧ ತಂತ್ರಜ್ಞಾನ ಮತ್ತು ವ್ಯವಸ್ಥೆಗಳನ್ನು ಒಳಗೊಂಡ ವಿವಿಧ ರೀತಿಯ ಮೆಟ್ರೋಗಳು ಆರಂಭಗೊಂಡವು. ಇನ್ನೊಂದು ಸಮಸ್ಯೆ ಎಂದರೆ ಮೆಟ್ರೋ ಜೊತೆ ಉಳಿದ ನಗರ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಸಮನ್ವಯ ಎಂಬುದಿರಲಿಲ್ಲ. ಇಂದು ನಾವು ನಗರಗಳ ಸಾರಿಗೆ ವ್ಯವಸ್ಥೆಯನ್ನು ಏಕೀಕೃತಗೊಳಿಸುತ್ತಿದ್ದೇವೆ, ಸಮಗ್ರಗೊಳಿಸುತ್ತಿದ್ದೇವೆ. ಅಂದರೆ, ಬಸ್ಸುಗಳು, ಮೆಟ್ರೋ ಮತ್ತು ರೈಲುಗಳು ಅವುಗಳಷ್ಟಕ್ಕೆ ಅವುಗಳನ್ನು ಚಲಾಯಿಸುವಂತಿಲ್ಲ. ಬದಲು ಸಾಮೂಹಿಕ ರೀತಿಯಲ್ಲಿ ಇಲ್ಲಿ ಕೆಲಸ ಮಾಡಬೇಕಾಗುತ್ತದೆ. ಮತ್ತು ಪರಸ್ಪರ ಪೂರಕವಾಗಿರಬೇಕಾಗುತ್ತದೆ. ಅಹ್ಮದಾಬಾದ್ ಮೆಟ್ರೋ ನನ್ನ ಭೇಟಿಯ ವೇಳೆ ಜಾರಿಗೆ ತಂದ ರಾಷ್ಟ್ರೀಯ ಸಾಮಾನ್ಯ ಚಲನೆ ಕಾರ್ಡ್ ಭವಿಷ್ಯದಲ್ಲಿ ಸಮಗ್ರತೆಯ ನಿಟ್ಟಿನಲ್ಲಿ ಇನ್ನಷ್ಟು ಸಹಾಯ ಮಾಡಬಲ್ಲದು.

ಸ್ನೇಹಿತರೇ,

ನಾವು ನಮ್ಮ ನಗರಗಳ ಇಂದಿನ ತಕ್ಷಣದ ಆವಶ್ಯಕತೆಗಳನ್ನು ಗಮನಿಸಿಕೊಂಡು ಮತ್ತು ಇನ್ನು 10-20 ವರ್ಷಗಳ ಬಳಿಕ ಏನೇನು ಬೇಕಾಗಬಹುದು ಎಂದು ಆಲೋಚಿಸಿಕೊಂಡು  ಕಾರ್ಯ ನಿರ್ವಹಿಸಲು ಆರಂಭಿಸಿದೆವು. ಈಗ ಸೂರತ್ತನ್ನು ಮತ್ತು ಗಾಂಧಿನಗರವನ್ನು ಉದಾಹರಣೆಗಾಗಿ ತೆಗೆದುಕೊಳ್ಳಿ. ಎರಡು ದಶಕಗಳ ಹಿಂದೆ, ಸೂರತ್ ಅದರ ಅಭಿವೃದ್ಧಿಗಿಂತ ಹೆಚ್ಚಾಗಿ ಪ್ಲೇಗ್ ನಂತಹ ಸಾಂಕ್ರಾಮಿಕದಿಂದಾಗಿ ಹೆಚ್ಚು ಸುದ್ದಿಯಲ್ಲಿತ್ತು. ಆದರೆ ಸೂರತ್ತಿನ ಜನರ ಎಲ್ಲವನ್ನೂ ಒಪ್ಪಿಕೊಳ್ಳುವ ಸಹಜ ಗುಣ ಪರಿಸ್ಥಿತಿಯನ್ನು ಬದಲಾಯಿಸತೊಡಗಿತು. ಪ್ರತೀ ಉದ್ಯಮವನ್ನು ಸ್ವಾಗತಿಸುವ ಸೂರತ್ತಿನ ಸ್ಪೂರ್ತಿಯನ್ನು ನಾವು ಒತ್ತಿ ಹೇಳಿದೆವುಇಂದು ಸೂರತ್ ಜನಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ ದೇಶದ ಎಂಟನೇ ಅತಿ ದೊಡ್ಡ ನಗರ. ಮತ್ತು ಅದು ವಿಶ್ವದಲ್ಲಿ ಅತ್ಯಂತ ತ್ವರಿತಗತಿಯಿಂದ ಬೆಳೆಯುತ್ತಿರುವ ನಾಲ್ಕನೇ ನಗರವಿಶ್ವದ ಪ್ರತೀ ಹತ್ತು ವಜ್ರಗಳ ಪೈಕಿ 9 ವಜ್ರಗಳು ರೂಪುಗೊಳ್ಳುವುದು ಸೂರತ್ತಿನಲ್ಲಿ. ಇಂದು ದೇಶದಲ್ಲಿಯ ಒಟ್ಟು ಮಾನವ ನಿರ್ಮಿತ ಫ್ಯಾಬ್ರಿಕ್ ನಲ್ಲಿ 40 ಶೇಖಡಾ ಮತ್ತು ಮನುಷ್ಯ ನಿರ್ಮಿತ ಫೈಬರಿನಲ್ಲಿ ಸುಮಾರು 30 ಶೇಖಡಾ ಉತ್ಪಾದನೆಯಾಗುತ್ತಿರುವುದು ಸೂರತ್ತಿನಲ್ಲಿ. ಇಂದು ಸೂರತ್ ದೇಶದ ಎರಡನೇ ಅತ್ಯಂತ ಸ್ವಚ್ಛ ನಗರ.

ಸಹೋದರರೇ ಮತ್ತು ಸಹೋದರಿಯರೇ,

ಇದೆಲ್ಲಾ ಸಾಧ್ಯವಾಗಿರುವುದು ಉತ್ತಮ ಯೋಜನೆಗಳು ಮತ್ತು ಎಲ್ಲರನ್ನೂ ಒಳಗೊಳ್ಳುವ ಚಿಂತನಾಕ್ರಮದಿಂದಾಗಿ. ಮೊದಲು, ಸೂರತ್ತಿನ ಸುಮಾರು 20 ಶೇಖಡಾದಷ್ಟು ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರು. ಬಡವರಿಗೆ ಪಕ್ಕಾ ಮನೆಗಳನ್ನು ಮಂಜೂರು ಮಾಡಿದ ಬಳಿಕ, ಈಗ ಅದು ಆರು ಶೇಖಡಾಕ್ಕಿಳಿದಿದೆ. ನಗರದಲ್ಲಿ ದಟ್ಟಣೆ ತಡೆಯಲು ಉತ್ತಮ ಸಂಚಾರ ನಿರ್ವಹಣೆ ಸಹಿತ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಸೂರತ್ತಿನಲ್ಲಿ ನೂರಾರು ಮೇಲ್ಸೇತುವೆಗಳಿವೆ, ಅವುಗಳಲ್ಲಿ 80 ಕ್ಕೂ ಅಧಿಕ ಮೇಲ್ಸೇತುವೆಗಳನ್ನು ಕಳೆದ 20 ವರ್ಷಗಳಲ್ಲಿ ನಿರ್ಮಾಣ ಮಾಡಲಾಗಿದೆ ಮತ್ತು 8 ಮೇಲ್ಸೇತುವೆಗಳು ನಿರ್ಮಾಣ ಹಂತದಲ್ಲಿವೆ. ಅದೇ ರೀತಿ ಕೊಳಚೆ ಸಂಸ್ಕರಣಾ ಸ್ಥಾವರಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇಂದು ಸೂರತ್ತಿನಲ್ಲಿ ಸುಮಾರು ಡಜನ್ನಿನಷ್ಟು ಕೊಳಚೆ ಶುದ್ದೀಕರಣಾಗಾರಗಳಿವೆ. ಇಂದು ಸೂರತ್ ಕೊಳಚೆ, ತ್ಯಾಜ್ಯ ಶುದ್ದೀಕರಣಾಗಾರಗಳ ಮೂಲಕ 100 ಕೋ.ರೂ.ಗಳ ಆದಾಯವನ್ನು ಗಳಿಸುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಸೂರತ್ತಿನಲ್ಲಿ ಅತ್ಯಾಧುನಿಕ ಆಸ್ಪತ್ರೆಗಳನ್ನು ಕಟ್ಟಲಾಗಿದೆ. ಎಲ್ಲಾ ಪ್ರಯತ್ನಗಳಿಂದಾಗಿ ಸೂರತ್ತಿನಲ್ಲಿ ಜೀವಿಸಲು ಅನುಕೂಲಕರ ವಾತಾವರಣದಲ್ಲಿ ಸುಧಾರಣೆಯಾಗಿದೆ. ಇಂದುಏಕ ಭಾರತ್, ಶ್ರೇಷ್ಟ ಭಾರತ್ಗೆ ಸೂರತ್ ಅತ್ಯುತ್ತಮ ಉದಾಹರಣೆಯಾಗಿ ನಮಗೆ ಕಂಡುಬರುತ್ತಿದೆ. ಪೂರ್ವಾಂಚಲ, ಒಡಿಶಾ, ಜಾರ್ಖಂಡ, ಪಶ್ಚಿಮ ಬಂಗಾಲ, ಈಶಾನ್ಯ ಮತ್ತು ದೇಶದ ಪ್ರತೀ ಮೂಲೆ ಮೂಲೆಗಳಿಂದ ಇಲ್ಲಿಗೆ ತಮ್ಮ ಅದೃಷ್ಟ ಪರೀಕ್ಷಿಸಲು ಬರುತ್ತಿರುವ ಜನರಿಂದಾಗಿ ಸೂರತ್ ಭವ್ಯ ಕನಸುಗಳ ಮಿನಿ ಭಾರತದಂತಾಗಿದೆ. ನಮ್ಮ ಉದ್ಯಮಪತಿಗಳು ಇಲ್ಲಿ ಸಂಪೂರ್ಣ ಅರ್ಪಣಾ ಭಾವದಿಂದ ದುಡಿಯುತ್ತಿದ್ದಾರೆ. ಎಲ್ಲಾ ಸಹಭಾಗಿಗಳು ಸೂರತ್ತಿನ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೇರಿಸಲು ಒಗ್ಗೂಡಿ ದುಡಿಯುತ್ತಿದ್ದಾರೆ.

ಸ್ನೇಹಿತರೇ,

ಅದೇ ರೀತಿ ಮೊದಲು ಗಾಂಧೀನಗರದ ಗುರುತಿಸುವಿಕೆ ಕೂಡಾ ಏನಾಗಿತ್ತು?. ಅದು ಸರಕಾರಿ ನೌಕರರ, ನಿವೃತ್ತರ ನಗರವಾಗಿತ್ತು, ನಗರವೆಂದು ಕರೆಯಲಾಗದಷ್ಟು ಉದಾಸೀನದ ನಗರವಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಗಾಂಧೀನಗರದ ಇಮೇಜ್ ತ್ವರಿತವಾಗಿ ಬದಲಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈಗ ನೀವು ಗಾಂಧೀನಗರದಲ್ಲಿ ಎಲ್ಲೆಲ್ಲಿ ಹೋಗುತ್ತೀರೋ, ಅಲ್ಲಿ ನೀವು ಯುವಜನರನ್ನು ಕಾಣುತ್ತೀರಿ ಮತ್ತು ಕನಸುಗಳ ಸಮೂಹವನ್ನು ಎದುರಾಗುತ್ತೀರಿ. ಇಂದು ಗಾಂಧೀನಗರ ತನ್ನದೇ ಆದ ಗುರುತಿಸುವಿಕೆಯನ್ನು ಹೊಂದಿದೆ. ..ಟಿ ಗಾಂಧೀನಗರ, ಗುಜರಾತ್ ನ್ಯಾಶನಲ್ ಲಾ ವಿಶ್ವವಿದ್ಯಾಲಯ, ರಾಷ್ಟ್ರೀಯ ಅಪರಾಧ ವಿಜ್ಞಾನ ವಿಶ್ವವಿದ್ಯಾಲಯ, ರಕ್ಷಾ ಶಕ್ತಿ ವಿಶ್ವವಿದ್ಯಾಲಯ, ಎನ್..ಎಫ್.ಟಿ. ಇತ್ಯಾದಿಗಳು ಗಾಂಧೀನಗರಕ್ಕೆ ಹೊಸ ಗುರುತಿಸುವಿಕೆಯನ್ನು ತಂದಿವೆ. ಮತ್ತು ಅಲ್ಲಿ ದೀನದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯವಿದೆ. ಭಾರತೀಯ ಶಿಕ್ಷಕರ ಶಿಕ್ಷಣ ಸಂಸ್ಥೆ, ಧೀರುಭಾಯಿ ಅಂಬಾನಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಸಂಸ್ಥೆ, ರಾಷ್ಟ್ರೀಯ ವಿನ್ಯಾಸ ಸಂಸ್ಥೆ (ಎನ್..ಡಿ.), ಬಿ..ಎಸ್..ಜಿ.(ಭಾಸ್ಕರಾಚಾರ್ಯ ಬಾಹ್ಯಾಕಾಶ ಮತ್ತು ಜಿಯೋಇನ್ಫಾರ್ಮ್ಯಾಟಿಕ್ಸ್ ಸಂಸ್ಥೆ)ಗಳು ಅಲ್ಲಿವೆ. ಇಂತಹ ಅಸಂಖ್ಯಾತ ವಿಷಯಗಳನ್ನು ನಾನು ಹೇಳಬಲ್ಲೆ. ಇಂತಹ ಅತ್ಯಲ್ಪ ಕಾಲದಲ್ಲಿ ಬಹಳಷ್ಟು ನಿರ್ಮಾಣ ಕಾರ್ಯಗಳು ಭಾರತದ ಭವಿಷ್ಯವನ್ನು ರೂಪಿಸುವ ಜನರಿಗಾಗಿ ಗಾಂಧೀನಗರದ ಭೂಮಿಯಲ್ಲಿ ನಡೆಯುತ್ತಿವೆ. ಸಂಸ್ಥೆಗಳು ಶಿಕ್ಷಣ ವಲಯವನ್ನು ಬದಲಾಯಿಸಿದ್ದು ಮಾತ್ರವಲ್ಲ, ಕಂಪೆನಿಗಳೂ ಇಲ್ಲಿ ಕ್ಯಾಂಪಸ್ ಗಳನ್ನು ಸ್ಥಾಪಿಸಲು ಆರಂಭ ಮಾಡಿವೆ. ಇದರಿಂದ ಗಾಂಧೀನಗರದ ಯುವ ಜನತೆಗೆ ಉದ್ಯೋಗಾವಕಾಶಗಳ ಹೆಚ್ಚಳವಾಗಿದೆ. ಅದೇ ರೀತಿ ಗಾಂಧೀನಗರದಲ್ಲಿಯ ಮಹಾತ್ಮಾ ಮಂದಿರ ಕೂಡಾ ಪ್ರವಾಸೋದ್ಯಮಕ್ಕೆ ಬಲ ತಂದುಕೊಡುತ್ತಿದೆ. ಈಗ ವೃತ್ತಿಪರರು, ರಾಜ ತಾಂತ್ರಿಕರು, ಚಿಂತಕರು ಮತ್ತು ನಾಯಕರು ಸಮಾವೇಶಗಳಿಗಾಗಿ ಇಲ್ಲಿಗೆ ಬರುತ್ತಿದ್ದಾರೆ. ಇದು ಕೂಡಾ ನಗರಕ್ಕೆ ಹೊಸ ಗುರುತಿಸುವಿಕೆ ಮತ್ತು ದಿಕ್ಕನ್ನು ನೀಡಿದೆ. ಇಂದು, ಶಿಕ್ಷಣ ಸಂಸ್ಥೆಗಳು, ಆಧುನಿಕ ರೈಲ್ವೇ ನಿಲ್ದಾಣಗಳು, ಗಿಫ್ಟ್ ಸಿಟಿ, ಮತ್ತು ಹಲವು ಆಧುನಿಕ ಮೂಲ ಸೌಕರ್ಯ ಯೋಜನೆಗಳು ಗಾಂಧೀನಗರವನ್ನು ರೋಮಾಂಚಕ ಮತ್ತು ಕನಸುಗಳ ನಗರವನ್ನಾಗಿಸಿವೆ

ಸ್ನೇಹಿತರೇ,

ಗಾಂಧೀನಗರದ ಜೊತೆ ಅಹ್ಮದಾಬಾದಿನಲ್ಲಿಯೂ ಹಲವಾರು ಯೋಜನೆಗಳು ಬಂದು ಅವು ಇಂದು ನಗರದ ಹಾಲ್ ಮಾರ್ಕ್ ಆಗಿವೆ. ಸಾಬರಮತಿ ನದೀ ಮುಖಭೂಮಿ ಆಗಿರಲಿ, ಜಲ ಏರೋಡ್ರೋಮ್, ಅಹ್ಮದಾಬಾದ್ ಬಸ್ ತ್ವರಿತ ಟ್ರಾನ್ಸಿಟ್ ವ್ಯವಸ್ಥೆ, ಮೊಟೇರಾದಲ್ಲಿಯ ವಿಶ್ವದ ಅತಿ ದೊಡ್ಡ ಕ್ರೀಡಾಂಗಣ, ಸರ್ಕೇಜ್-ಗಾಂಧೀನಗರ ಷಟ್ಪಥ ಹೆದ್ದಾರಿ ಇರಲಿ ಇಂತಹ ಹಲವಾರು ಯೋಜನೆಗಳು ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿ ಅಭಿವೃದ್ಧಿ ಮಾಡಿವೆ. ಅದೇ ರೀತಿ, ಅಹ್ಮದಾಬಾದಿನ ಪೌರಾಣಿಕ ಗುಣವನ್ನು ಕಾಪಾಡಿಕೊಂಡು ಬರುತ್ತಿರುವ ಜೊತೆಯಲ್ಲಿಯೇ ಅದಕ್ಕೆ ಆಧುನಿಕ ಉಡುಪು ಹಾಕಲಾಗುತ್ತಿದೆ.ಅಹ್ಮದಾಬಾದನ್ನು ಭಾರತದ ಮೊದಲವಿಶ್ವ ಪರಂಪರಾ ನಗರಎಂದು ಘೋಷಿಸಲಾಗಿದೆ. ಈಗ ಅಹ್ಮದಾಬಾದಿನ ಧೊಲೇರಾ ಬಳಿಯಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತದೆ. ಅಹ್ಮದಾಬಾದ್-ಧೊಲೇರಾ  ಮೊನೋರೈಲು ಇತ್ತೀಚೆಗೆ ಮಂಜೂರಾಗಿದೆ. ಇದು ವಿಮಾನ ನಿಲ್ದಾಣವನ್ನು ಅಹ್ಮದಾಬಾದಿನೊಂದಿಗೆ ಜೋಡಿಸಲಿದೆ. ಅದೇ ರೀತಿ ಅಹ್ಮದಾಬಾದ್ ಮತ್ತು ಸೂರತ್ತನ್ನು ದೇಶದ ಹಣಕಾಸು ರಾಜಧಾನಿ ಮುಂಬಯಿಯೊಂದಿಗೆ ಜೋಡಿಸುವ ಬುಲೆಟ್ ರೈಲಿನ ಕಾಮಗಾರಿ ಕೂಡಾ ಪ್ರಗತಿಯಲ್ಲಿದೆ.

ಸ್ನೇಹಿತರೇ,

ವರ್ಷಗಳಿಂದ ಗುಜರಾತಿನ ನಗರಗಳ ಜೊತೆ ಗ್ರಾಮೀಣಾಭಿವೃದ್ಧಿಯಲ್ಲಿಯೂ ಅಭೂತಪೂರ್ವ ಬೆಳವಣಿಗೆಯಾಗಿದೆ. ವಿಶೇಷವಾಗಿ ಹಳ್ಳಿಗಳಲ್ಲಿ  ರಸ್ತೆಗಳು, ವಿದ್ಯುತ್, ನೀರು ವ್ಯವಸ್ಥೆಗಳಲ್ಲಿ  ಸುಧಾರಣೆಗಳಾಗಿವೆ. ಕಳೆದ ಎರಡು ದಶಕಗಳಲ್ಲಿ ಗುಜರಾತಿನ ಅಭಿವೃದ್ಧಿ ನಡಿಗೆಯಲ್ಲಿ ಮಹತ್ವದ ಅಧ್ಯಾಯ ಅನಾವರಣಗೊಂಡಿದೆ. ಇಂದು ಗುಜರಾತಿನ  ಪ್ರತೀ ಹಳ್ಳಿ/ಗ್ರಾಮವೂ ಸರ್ವಋತು ರಸ್ತೆ ಸಂಪರ್ಕ ಹೊಂದಿರುವುದು ಮಾತ್ರವಲ್ಲ ಬುಡಕಟ್ಟು ಪ್ರದೇಶಗಳಲ್ಲಿಯೂ ಉತ್ತಮ ರಸ್ತೆಗಳಿವೆ.

ಸ್ನೇಹಿತರೇ,

ಗುಜರಾತ್ ಹಳ್ಳಿಗಳು  ರೈಲುಗಳು ಮತ್ತು ಟ್ಯಾಂಕರುಗಳ ಮೂಲಕ ನೀರು ಪಡೆಯುತ್ತಿದ್ದ ಕಾಲವನ್ನು ನಾವು ಬಹುತೇಕ ಮಂದಿ ನೋಡಿದ್ದೇವೆ. ಇಂದು ನೀರು ಗುಜರಾತಿನ ಪ್ರತೀ ಹಳ್ಳಿಗಳನ್ನೂ ತಲುಪಿದೆ. ಅಷ್ಟು ಮಾತ್ರವಲ್ಲ, ಗುಜರಾತಿನ 80% ಮನೆಗಳಿಗೆ ನಳ್ಳಿ ನೀರು ಲಭ್ಯವಿದೆ. ಜಲ ಜೀವನ ಆಂದೋಲನದಡಿಯಲ್ಲಿ, 10 ಲಕ್ಷ ಹೊಸ ನೀರು ಸಂಪರ್ಕಗಳನ್ನು ರಾಜ್ಯದಲ್ಲಿ ಒದಗಿಸಲಾಗಿದೆ. ಬಹಳ ಶೀಘ್ರದಲ್ಲಿಯೇ, ಗುಜರಾತಿನ ಪ್ರತಿಯೊಂದು ಮನೆಗೂ ಕೊಳವೆಗಳ ಮೂಲಕ ನಳ್ಳಿ ನೀರು ಲಭಿಸಲಿದೆ.

ಸ್ನೇಹಿತರೇ,

ಕುಡಿಯುವ ನೀರು ಮಾತ್ರವಲ್ಲ, ಇಂದು, ನೀರಾವರಿ ಅಸಾಧ್ಯ ಎನ್ನಲಾದ, ಯಾರೊಬ್ಬರೂ ಅದರ ಕನಸನ್ನು ಕೂಡಾ ಕಾಣಲಾರದ ಪ್ರದೇಶಗಳಿಗೆ ನೀರು ತಲುಪಿದೆ, ನೀರಾವರಿ ಸೌಲಭ್ಯ ಸಾಧ್ಯವಾಗಿದೆ. ಗುಜರಾತಿನ ಬರ ಪೀಡಿತ ಪ್ರದೇಶಗಳನ್ನು ಹಸಿರು ಮಾಡಲು ಸಮಗ್ರ ಕಾರ್ಯಗಳನ್ನು ಮಾಡಲಾಗಿದೆ. ಅದು ಸರ್ದಾರ್ ಸರೋವರ ಅಣೆಕಟ್ಟೆ ಇರಲಿ, ಸೌನಿ ಯೋಜನಾ ಅಥವಾ ಜಲ ಗ್ರಿಡ್ ಜಾಲವಿರಲಿ ಎಲ್ಲದರಲ್ಲೂ ಸಮಗ್ರತೆಯನ್ನು ಅನುಸರಿಸಲಾಗಿದೆ. ನರ್ಮದಾ ಮಾತೆಯ ನೀರು ಈಗ ನೂರಾರು ಕಿಲೋ ಮೀಟರ್ ದೂರದಲ್ಲಿರುವ ಕಚ್ ಪ್ರದೇಶವನ್ನು ತಲುಪುತ್ತಿದೆ. ಕಿರು ನೀರಾವರಿಯಲ್ಲಿ ಗುಜರಾತ್ದೇಶದ ಪ್ರಮುಖ ರಾಜ್ಯಗಳ ಯಾದಿಯಲ್ಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಗುಜರಾತ್ ಒಂದೊಮ್ಮೆ ಗಂಭೀರವಾದ ನೀರಿನ ಸಮಸ್ಯೆಯನ್ನು ಎದುರಿಸುತ್ತಿತ್ತು. ಗ್ರಾಮಗಳಲ್ಲಿ ಸಮಸ್ಯೆ ಬಹಳ ತೀವ್ರವಾಗಿತ್ತು. ಇಂದು ಗುಜರಾತ್ ಸಾಕಷ್ಟು ವಿದ್ಯುತ್ತನ್ನು ಹೊಂದಿದೆ. ಮತ್ತು ಅದು ಸೌರ ಇಂಧನ ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ.ಕೆಲವು ದಿನಗಳ ಹಿಂದೆ  ಕಚ್ ನಲ್ಲಿ ವಿಶ್ವದ ಅತ್ಯಂತ ದೊಡ್ಡ ಮರುನವೀಕೃತ ಇಂಧನ ಸ್ಥಾವರದ ಕೆಲಸ ಆರಂಭವಾಗಿದೆ. ಇದು ಸೌರ ವಿದ್ಯುತ್ ಮತ್ತು ಪವನ (ಗಾಳಿ) ವಿದ್ಯುತ್ ಉತ್ಪಾದನೆಯನ್ನು ಒಳಗೊಂಡಿದೆ. ಇಂದು ರೈತರಿಗಾಗಿ ಸರ್ವೋದಯ ಯೋಜನೆ ಅಡಿಯಲ್ಲಿ ನೀರಾವರಿಗಾಗಿ ಪ್ರತ್ಯೇಕ ವಿದ್ಯುತ್ತನ್ನು ಒದಗಿಸುತ್ತಿರುವ ರಾಜ್ಯಗಳಲ್ಲಿ ಗುಜರಾತ್ ಮೊದಲ ರಾಜ್ಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ  ಗುಜರಾತ್ ನಿರಂತರವಾಗಿ ಗ್ರಾಮಗಳಲ್ಲಿ ಆರೋಗ್ಯ ಸೇವೆಯ ಬಲವರ್ಧನೆಯನ್ನು ಮಾಡುತ್ತ ಬಂದಿದೆ. ಕಳೆದ ಆರು ವರ್ಷಗಳಲ್ಲಿ ದೇಶದಲ್ಲಿ ಆರಂಭ ಮಾಡಲಾದ ಆರೋಗ್ಯ ರಕ್ಷಣಾ ಯೋಜನೆಗಳು ಅತ್ಯಂತ ಸಮರ್ಪಕ ರೀತಿಯಲ್ಲಿ ಸಮಗ್ರವಾಗಿ ಗುಜರಾತಿಗೆ ಪ್ರಯೋಜನವನ್ನು ಒದಗಿಸುತ್ತಿವೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಗುಜರಾತಿನ 21 ಲಕ್ಷ ಜನರು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಕಡಿಮೆ ದರದಲ್ಲಿ ಔಷಧಿಗಳನ್ನು ಒದಗಿಸುತ್ತಿರುವ 525 ಕ್ಕೂ ಅಧಿಕ ಜನ ಔಷಧಿ ಕೇಂದ್ರಗಳು ಗುಜರಾತಿನಲ್ಲಿಂದು ಕಾರ್ಯಾಚರಿಸುತ್ತಿವೆ. ಇದರಿಂದ ಗುಜರಾತಿನ ಸಾಮಾನ್ಯ ಕುಟುಂಬಗಳಿಗೆ ಸುಮಾರು 100 ಕೋ.ರೂ.ಗಳಷ್ಟು ಉಳಿತಾಯವಾಗಿದೆ. ವಿಶೇಷವಾಗಿ ಮಧ್ಯಮ ಮತ್ತು ಕೆಳ ವರ್ಗದ ಕುಟುಂಬಗಳಿಗೆ ಇದರಿಂದ ಹೆಚ್ಚು ಪ್ರಯೋಜನವಾಗಿದೆ. ಗ್ರಾಮೀಣ ಬಡವರಿಗೆ ಕೈಗೆಟಕುವ ದರದಲ್ಲಿ ಮನೆಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಗುಜರಾತ್ ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ. ಪಿ.ಎಂ.ಆವಾಸ್ ಯೋಜನೆ (ಗ್ರಾಮೀಣಅಡಿಯಲ್ಲಿ ಗುಜರಾತಿನಲ್ಲಿ 2.5 ಲಕ್ಷಕ್ಕೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಸ್ವಚ್ಛ ಭಾರತ್ ಆಂದೋಲನ ಅಡಿಯಲ್ಲಿ ಗುಜರಾತಿನಲ್ಲಿ 35 ಲಕ್ಷಕ್ಕೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಗುಜರಾತಿನಲ್ಲಿ ಗ್ರಾಮಗಳ, ಹಳ್ಳಿಗಳ ಅಭಿವೃದ್ಧಿಗೆ ಎಷ್ಟು ತ್ವರಿತವಾಗಿ ಕೆಲಸ ಮಾಡಲಾಗುತ್ತಿದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ಡಿಜಿಟಲ್ ಸೇವಾ ಸೇತು. ಇದರ ಮೂಲಕ ಪಡಿತರ ಕಾರ್ಡುಗಳು, ಭೂ ಸಂಬಂಧಿ ದಾಖಲೆಗಳು, ನಿವೃತ್ತಿ ವೇತನ ಯೋಜನೆಗಳು, ವಿವಿಧ ಪ್ರಮಾಣ ಪತ್ರಗಳು ಮತ್ತು ಇತರ ಹಲವು ಸೇವೆಗಳನ್ನು ಗ್ರಾಮಗಳ ಜನರಿಗೆ ಒದಗಿಸಲಾಗುತ್ತಿದೆ. ಸೇತುವನ್ನು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಆರಂಭಿಸಲಾಗಿದೆ. ಅಂದರೆ ನಾಲ್ಕುವರೆ ತಿಂಗಳ ಹಿಂದೆ. ಮತ್ತು ನನಗೆ ತಿಳಿಸಲಾಗಿದೆ ಏನೆಂದರೆ -8000 ಗ್ರಾಮಗಳಿಗೆ ಶೀಘ್ರದಲ್ಲಿಯೇ ಸೇತು ಲಭ್ಯವಾಗಲಿದೆ ಎಂದು. ಇದರ ಮೂಲಕ 50 ಕ್ಕೂ ಅಧಿಕ ಸರಕಾರಿ ಸೇವಾ-ಸೌಲಭ್ಯಗಳು ಹಳ್ಳಿಗಳ ಜನತೆಗೆ ನೇರವಾಗಿ ಲಭ್ಯವಾಗುತ್ತವೆ. ಉಪಕ್ರಮಕ್ಕಾಗಿ ನಾನು ಗುಜರಾತ್ ಸರಕಾರದ ಇಡೀ ತಂಡವನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು, ಭಾರತವು ಆತ್ಮ ವಿಶ್ವಾಸದಿಂದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಮಾತ್ರವಲ್ಲ, ಅವುಗಳನ್ನು ತ್ವರಿತವಾಗಿ ಅನುಷ್ಟಾನಕ್ಕೆ ತರುತ್ತಿದೆ. ಇಂದು, ಭಾರತ ದೊಡ್ಡದಾದುದನ್ನು ಮಾಡುತ್ತಿರುವುದಲ್ಲ, ಅದನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದೆ. ಇಂದು ವಿಶ್ವದ ಅತ್ಯಂತ ದೊಡ್ದ ಪ್ರತಿಮೆ ಭಾರತದಲ್ಲಿದೆ. ಇಂದು, ಕೈಗೆಟಕುವ ದರದಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ವಿಶ್ವದ ಅತ್ಯಂತ ದೊಡ್ಡ ಕಾರ್ಯಕ್ರಮ ಭಾರತದಲ್ಲಿ ಜಾರಿಯಲ್ಲಿದೆ. ವಿಶ್ವದ ಅತ್ಯಂತ ದೊಡ್ದ ಆರೋಗ್ಯ ಭರವಸೆಯ ಕಾರ್ಯಕ್ರಮ ಭಾರತದಲ್ಲಿ ಜಾರಿಯಲ್ಲಿದೆ. ವೇಗದ ಅಂತರ್ಜಾಲದಿಂದ ಆರು ಲಕ್ಷ ಹಳ್ಳಿಗಳನ್ನು ಬೆಸೆಯುವ ಕಾಮಗಾರಿ ಭಾರತದಲ್ಲಿ ನಡೆಯುತ್ತಿದೆ. ಮತ್ತು ಕೊರೊನಾ ಸೋಂಕಿನ ವಿರುದ್ದ ವಿಶ್ವದ ಅತ್ಯಂತ ದೊಡ್ದ ಲಸಿಕಾ ಆಂದೋಲನ ಎರಡು ದಿನಗಳ ಮೊದಲು ಭಾರತದಲ್ಲಿ ಆರಂಭವಾಗಿದೆ.

ಇಲ್ಲಿ ಗುಜರಾತಿನಲ್ಲಿ ಕೂಡಾ, ಇತ್ತೀಚೆಗೆ ಎರಡು ಸಂಗತಿಗಳು ಪೂರ್ಣಗೊಂಡಿವೆ. ಅವುಗಳನ್ನು ನಾನು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ. ಇವು ಯೋಜನೆಗಳು ಬಹಳ ಬೇಗ ಪೂರ್ಣಗೊಂಡರೆ ಜನರ ಜೀವನವನ್ನು ಬದಲಾಯಿಸುತ್ತವೆ ಎಂಬುದಕ್ಕೆ ಉದಾಹರಣೆಗಳು. ಇವುಗಳಲ್ಲಿ ಘೋಘಾ ಮತ್ತು ಹಜಾರಿಯಾ ನಡುವಿನ ರೋಪಾಕ್ಸ್ ಸೇವೆ ಒಂದಾದರೆ, ಇನ್ನೊಂದು ಗಿರ್ನಾರ್ ರೋಪ್ ವೇ.

ಸ್ನೇಹಿತರೇ,

ಕಳೆದ ವರ್ಷದ ನವೆಂಬರಿನಲ್ಲಿ ಅಂದರೆ ನಾಲ್ಕು ತಿಂಗಳ ಹಿಂದೆ, ಘೋಘಾ ಮತ್ತು ಹಾಝಿರಾ ನಡುವೆ ರೋಪಾಕ್ಸ್ ಸೇವೆಯ ಆರಂಭದೊಂದಿಗೆ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತಿನ ಜನತೆಯ ಧೀರ್ಘ ಕಾಲದ ಕಾಯುವಿಕೆ ಮುಕ್ತಾಯಗೊಂಡಿತು.ಮತ್ತು ಅಲ್ಲಿಯ ಜನರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಸೇವೆಯಿಂದಾಗಿ ಘೋಘಾ ಮತ್ತು ಹಾಝಿರಾ ನಡುವಣ 400 ಕಿಲೋ ಮೀಟರ್ ರಸ್ತೆಯ ದೂರ ಸಮುದ್ರದ ಮೂಲಕ ಬರೇ 90 ಕಿಲೋ ಮೀಟರಿಗೆ ಇಳಿದಿದೆ. ಅಂದರೆ ಪ್ರಯಾಣದ ಸಮಯ 10-12 ಗಂಟೆಗಳಿಂದ ಬರೇ 4-5 ಗಂಟೆಗಳಿಗೆ ಇಳಿದಿದೆ. ಇದರಿಂದ ಸಾವಿರಾರು ಜನರ ಸಮಯ ಉಳಿತಾಯವಾಗುತ್ತಿದೆ, ಪೆಟ್ರೋಲ್ ಮತ್ತು ಡೀಸಿಲ್ ಮೇಲಿನ ಖರ್ಚು ಕಡಿಮೆಯಾಗುತ್ತಿದೆ.ಮತ್ತು ರಸ್ತೆಯ ಮೇಲೆ ಕಡಿಮೆ ಸಂಖ್ಯೆಯ ವಾಹನಗಳಿಂದಾಗಿ ಮಾಲಿನ್ಯದ ಪ್ರಮಾಣ ಕೂಡಾ ಕಡಿಮೆಯಾಗುತ್ತಿದೆ. ಬರೇ ಎರಡು ತಿಂಗಳಲ್ಲಿ 50,000 ಕ್ಕೂ ಅಧಿಕ ಮಂದಿ ಹೊಸ ಅಸೌಲಭ್ಯವನ್ನು ಬಳಸಿಕೊಂಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. 14,000 ಕ್ಕೂ ಅಧಿಕ ವಾಹನಗಳು ರೋಪಾಕ್ಸ್ ಹಡಗಿನ ಸೇವೆಯ ಮೂಲಕ ಸಾಗಾಟವಾಗಿವೆ. ಸೂರತ್ತಿನ ಜೊತೆ ಸೌರಾಷ್ಟ್ರದ ಹೊಸ ಸಂಪರ್ಕ ರೈತರಿಗೆ ಅನುಕೂಲತೆಗಳನ್ನು ಒದಗಿಸಿದೆ. ಮತ್ತು ಸೌರಾಷ್ಟ್ರದ ದನಗಾಹಿಗಳಿಗೆ ಪ್ರಯೋಜನವಾಗಿದೆ. ರಸ್ತೆ ಮೂಲಕ ಸಾಗಾಟ ಮಾಡುವಾಗ ಹಾಳಾಗಬಹುದಾದ ಹಣ್ಣುಗಳನ್ನು, ತರಕಾರಿಗಳನ್ನು, ಮತ್ತು ಹಾಲನ್ನು ಸೌರಾಷ್ಟ್ರಕ್ಕೆ ಪೂರೈಸಲು ಇದರಿಂದ ಅನುಕೂಲತೆಗಳು ಲಭಿಸಿವೆ. ಈಗ ದನ ಸಾಕಾಣಿಕೆದಾರರ ಉತ್ಪನ್ನಗಳು ಮತ್ತು ರೈತರ ಉತ್ಪನ್ನಗಳು ಸಮುದ್ರ ಮೂಲಕ ತ್ವರಿತವಾಗಿ ನಗರಗಳಿಗೆ ತಲುಪುತ್ತಿವೆ. ಅದೇ ರೀತಿ, ಸೂರತ್ತಿನಲ್ಲಿಯ ವ್ಯಾಪಾರೋದ್ಯಮಿಗಳಿಗೂ ಮತ್ತು ಕಾರ್ಮಿಕ ಸಹೋದ್ಯೋಗಿಗಳಿಗೂ ಹಡಗು ಸೇವೆಯ ಮೂಲಕ ಪ್ರಯಾಣಿಸುವುದು ಸುಲಭವಾಗಿದೆ.

ಸ್ನೇಹಿತರೇ,

ಹಡಗು ಸೇವೆಯ ಕೆಲವು ವಾರಗಳ ಮೊದಲು, ಸುಮಾರು ನಾಲ್ಕು-ಐದು ತಿಂಗಳ ಹಿಂದೆ ಕಳೆದ ವರ್ಷದ ಅಕ್ಟೋಬರಿನಲ್ಲಿ ಗಿರ್ನಾರ್ ನಲ್ಲಿ ರೋಪ್ ವೇ ಯನ್ನು ಆರಂಭಿಸಲಾಯಿತು. ಮೊದಲು ಗಿರ್ನಾರ್ ಪರ್ವತಕ್ಕೆ ಭೇಟಿ ಕೊಡಲು ಇದ್ದ ಏಕೈಕ ದಾರಿ ಎಂದರೆ 9,000 ಮೆಟ್ಟಿಲುಗಳನ್ನು ಏರುವುದು. ಈಗ ರೋಪ್ ವೇ ಯು ಭಕ್ತರಿಗೆ ಇನ್ನೊಂದು ಅವಕಾಶವನ್ನು ನೀಡಿದೆ. ಮೊದಲು ದೇವಾಲಯವನ್ನು ತಲುಪಲು 5-6 ಗಂಟೆಗಳು ಬೇಕಾಗುತ್ತಿದ್ದವು. ಈಗ ಭಕ್ತಾದಿಗಳು ದೂರವನ್ನು ಕೆಲವು ನಿಮಿಷಗಳಲ್ಲಿ ಕ್ರಮಿಸುತ್ತಾರೆ. ಬರೇ ಎರಡೂವರೆ ತಿಂಗಳಲ್ಲಿ 2.13 ಲಕ್ಷ ಜನರು ಸೌಲಭ್ಯವನ್ನು ಇದುವರೆಗೆ ಪಡೆದಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಬರೇ ಎರಡೂವರೆ ತಿಂಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ಎಂದರೆ ನೀವು ಕಲ್ಪಿಸಿಕೊಳ್ಳಬಹುದು. ನೀವು ಸೇವೆಯ ತೀವ್ರತೆಯನ್ನು ಅರಿತುಕೊಳ್ಳಬಹುದು. ಮತ್ತು ದೇವಾಲಯಕ್ಕೆ ಬರುತ್ತಿರುವ ಹಿರಿಯ ತಾಯಂದಿರು ಮತ್ತು ಸಹೋದರಿಯರು, ವಿಶೇಷವಾಗಿ ಕುಟುಂಬದ ಹಿರಿಯರು ನನ್ನಂತಹ ಹಲವಾರು ಮಂದಿಯನ್ನು ಆಶೀರ್ವದಿಸುತ್ತಿದ್ದಾರೆ. ಅದು ನನಗೆ ಇನ್ನಷ್ಟು ಕೆಲಸಗಳನ್ನು ಮಾಡಲು ಶಕ್ತಿಯನ್ನು ನೀಡುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ತ್ವರಿತವಾಗಿ ಕೆಲಸ ಮಾಡುವುದರ ಮೂಲಕವಷ್ಟೇ ಜನತೆಯ ಆಶೋತ್ತರಗಳನ್ನು, ಅಗತ್ಯಗಳನ್ನು ಈಡೇರಿಸಿ ನವಭಾರತ ನಿರ್ಮಾಣದ ಗುರಿಯನ್ನು ಸಾಧಿಸಬಹುದಾಗಿದೆ. ನಿಟ್ಟಿನಲ್ಲಿ ಇನ್ನೊಂದು ಪ್ರಯತ್ನ ನಡೆದಿದೆ. ಅದು ಚರ್ಚೆಯಾಗಬೇಕಾದಷ್ಟು ಪ್ರಮಾಣದಲ್ಲಿ ಚರ್ಚೆಯಾಗಿಲ್ಲ. ಇದುಪ್ರಗತಿ, ಕೇಂದ್ರ ಮಟ್ಟದ ಕಾರ್ಯಕ್ರಮ. ನಾನು ಗುಜರಾತಿನಲ್ಲಿದ್ದಾಗ, ಸ್ವಾಗತ ಕಾರ್ಯಕ್ರಮದ ಬಗ್ಗೆ ಭಾರೀ ಚರ್ಚೆಯಾಗುತ್ತಿತ್ತು. ಆದರೆ ದೇಶದಲ್ಲಿ ನಡೆಯುತ್ತಿರುವಪ್ರಗತಿಕಾರ್ಯಕ್ರಮ ದೇಶದ ವಿವಿಧ ಕಾರ್ಯಕ್ರಮಗಳಿಗೆ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ವೇಗ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಇಲ್ಲಿ ಸರಕಾರಕ್ಕೆ ಸೇರಿದ ಜನರು ಪ್ರಗತಿ ಕಾರ್ಯಕ್ರಮದಲ್ಲಿ ನಾನು ಕೂಡಾ ಗಂಟೆಗಟ್ಟಲೆ ಕುಳಿತುಕೊಂಡಿರುತ್ತೇನೆ ಎಂಬುದನ್ನು ಅರಿತಿರುತ್ತಾರೆ. ಮತ್ತು ಇದರಲ್ಲಿ ಪ್ರತೀ ಯೋಜನೆಗಳ ಸಣ್ಣ-ಸಣ್ಣ ವಿಷಯಗಳನ್ನು ಕೂಡಾ ಸೂಕ್ಷ್ಮವಾಗಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಕ್ಕಾಗಿ ರಾಜ್ಯಗಳ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತದೆ. ಪ್ರಗತಿ ಸಭೆಗಳಲ್ಲಿ ಎಲ್ಲಾ ಫಲಾನುಭವಿಗಳ ಜೊತೆ ನೇರವಾಗಿ ಸಂವಹನ ನಡೆಸುವ ಮೂಲಕ, ದಶಕಗಳಿಂದ ಬಾಕಿಯಾಗಿರುವ ಯೋಜನೆಗಳ ಅನುಷ್ಟಾನಕ್ಕೆ ಪರಿಹಾರ ಹುಡುಕಲು ಪ್ರಯತ್ನ ಮಾಡುತ್ತೇನೆ. ಕಳೆದ 5 ವರ್ಷಗಳಲ್ಲಿ ಪ್ರಗತಿ ಸಭೆಗಳಲ್ಲಿ 13 ಲಕ್ಷ ಕೋ.ರೂ. ಮೊತ್ತದ ಯೋಜನೆಗಳ ಪರಾಮರ್ಶೆ ನಡೆಸಲಾಗಿದೆ. ಸಭೆಗಳಲ್ಲಿ ಅವುಗಳ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಹಲವಾರು ವರ್ಷಗಳಿಂದ ಬಾಕಿಯಾಗುಳಿದಿರುವ ಪ್ರಮುಖ ಅಪೂರ್ಣ ಯೋಜನೆಗಳಿಗೆ ಸೂಕ್ತ ಪರಿಹಾರವನ್ನು ಹುಡುಕಲಾಗಿದೆ.

ಸ್ನೇಹಿತರೇ,

ಹಲವಾರು ವರ್ಷಗಳಿಂದ ಬಾಕಿಯಾಗಿದ್ದ ಯೋಜನೆಗಳು ವೇಗ ಪಡೆದುಕೊಂಡರೆ ಸೂರತ್ತಿನಂತಹ ನಗರಗಳು ವೇಗದ ಅಭಿವೃದ್ಧಿಯನ್ನು ಗಳಿಸುತ್ತವೆ. ನಮ್ಮ ಕೈಗಾರಿಕೆಗಳು ಮತ್ತು ವಿಶೇಷವಾಗಿ ಸಣ್ಣ ಉದ್ಯಮಗಳು, ಕೈಗಾರಿಕೆಗಳು, ಎಂ.ಎಸ್.ಎಂ.. ಗಳು ಅಭಿವೃದ್ಧಿ ಹೊಂದಿದ ವಿಶ್ವದ ಮಾರುಕಟ್ಟೆಗಳ ಜೊತೆ ಸ್ಪರ್ಧಿಸುವ ವಿಶ್ವಾಸವನ್ನು ಗಳಿಸಿಕೊಳ್ಳುತ್ತವೆ.ಮತ್ತು ಅವುಗಳಿಗೂ ಅಂತಹದೇ ಮೂಲಸೌಕರ್ಯ ಲಭ್ಯವಾಗುತ್ತದೆ. ಸಣ್ಣ ಕೈಗಾರಿಕೆಗಳಿಗಾಗಿ ಆತ್ಮನಿರ್ಭರ ಭಾರತ್ ಯೋಜನೆ ಅಡಿಯಲ್ಲಿ ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಣ್ಣ ಕೈಗಾರಿಕೆಗಳನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಒಂದೆಡೆ ಸಾವಿರಾರು ಕೋ.ರೂ.ಗಳ ಸಾಲಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದೆಡೆ ಎಂ.ಎಸ್.ಎಂ.. ಗಳಿಗೆ ಹೆಚ್ಚಿನ ಅವಕಾಶ ಒದಗಿಸಿಕೊಡಲು ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸರಕಾರ ಕೈಗೊಂಡ ಅತ್ಯಂತ ದೊಡ್ಡ ನಿರ್ಧಾರಗಳಲ್ಲಿ ಎಂ.ಎಸ್.ಎಂ.. ಗಳ ವ್ಯಾಖ್ಯೆ ಕುರಿತ ನಿರ್ಧಾರ ಮತ್ತು ಹೂಡಿಕೆ ವ್ಯಾಪ್ತಿಯನ್ನು ಕುರಿತ ನಿರ್ಧಾರ ಸೇರಿದೆ. ಮೊದಲು ಉದ್ಯಮಿಗಳು ಸರಕಾರದ ಪ್ರಯೋಜನಗಳನ್ನು ಕಳೆದುಕೊಳ್ಳುವ ಭೀತಿಯಿಂದಾಗಿ ಎಂ.ಎಸ್.ಎಂ..ಗಳನ್ನು ವಿಸ್ತರಿಸಲು ಹಿಂಜರಿಯುತ್ತಿದ್ದರು. ಈಗ, ಸರಕಾರ ಇಂತಹ ನಿರ್ಬಂಧಗಳನ್ನು ತೆಗೆದು ಹಾಕುವ ಮೂಲಕ ಘಟಕಗಳಿಗೆ ಹೊಸ ಅವಕಾಶಗಳನ್ನು ತೆರೆದುಕೊಟ್ಟಿದೆ. ಜೊತೆಗೆ ಹೊಸ ವ್ಯಾಖ್ಯೆಯು ಉತ್ಪಾದನೆ ಮತ್ತು ಸೇವಾ ಕ್ಷೇತ್ರದ ನಡುವಣ ತಾರತಮ್ಯವನ್ನು ನಿವಾರಿಸುತ್ತದೆ. ಇದರಿಂದ ಸೇವಾ ವಲಯದಲ್ಲಿ ಹೊಸ ಸಾಧ್ಯತೆಗಳು ರೂಪುಗೊಳ್ಳುತ್ತಿವೆ. ಇದು ಭಾರತದ ಎಂ.ಎಸ್.ಎಂ.. ಗಳು ಸರಕಾರಿ ಖರೀದಿಯಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯುವುದನ್ನು ಖಾತ್ರಿಗೊಳಿಸಿದೆನಮ್ಮ ಸಣ್ಣ ಕೈಗಾರಿಕೆಗಳು ಬೆಳವಣಿಗೆ ಹೊಂದಬೇಕು ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸ್ನೇಹಿತರಿಗೆ ಉತ್ತಮ ಸೌಲಭ್ಯಗಳು ಹಾಗು ಉತ್ತಮ ಬದುಕು ಲಭಿಸಬೇಕು ಎಂಬುದು ಇದರ ಹಿಂದಿನ ಆಶಯವಾಗಿದೆ.

ಸ್ನೇಹಿತರೇ,

ಎಲ್ಲಾ ಬೃಹತ್ ಪ್ರಯತ್ನಗಳ ಹಿಂದೆ 21 ನೇ ಶತಮಾನದ ಭಾರತದ ಯುವ ಜನತೆ ಇದೆ. ಮತ್ತು ಅವರ ಅಸಂಖ್ಯಾತ ಆಶೋತ್ತರಗಳಿವೆ. ಆಶೋತ್ತರಗಳನ್ನು ಮೂಲಸೌಕರ್ಯ ಮತ್ತು ಭದ್ರತೆಯ ಗೈರುಹಾಜರಿಯಲ್ಲಿ ಈಡೇರಿಸುವುದು ಬಹಳ ಕಷ್ಟ ಸಾಧ್ಯ. ಕಷ್ಟಗಳನ್ನು ಮೀರಬಲ್ಲೆವು ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ. ನಾವು ಕನಸುಗಳನ್ನು ಸಾಕಾರಗೊಳಿಸಬೇಕಾಗಿದೆ ಮತ್ತು ನಿರ್ಣಯಗಳನ್ನು ವಾಸ್ತವಕ್ಕೆ ತರಬೇಕಾಗಿದೆ. ಅಹ್ಮದಾಬಾದ್ ಮತ್ತು ಸೂರತ್ತಿನ ಮೆಟ್ರೋ ಯೋಜನೆಗಳು ನಗರಗಳ ಪ್ರತಿಯೊಬ್ಬ ಸ್ನೇಹಿತರ ನಿರೀಕ್ಷೆ ಮತ್ತು ಆಶೋತ್ತರಗಳನ್ನು ಈಡೇರಿಸುತ್ತವೆ ಎಂಬ ಬಗ್ಗೆ ನನಗೆ ಖಚಿತವಿದೆ.

ನಂಬಿಕೆಯೊಂದಿಗೆ, ನಾನು ಗುಜರಾತಿನ ಎಲ್ಲಾ ಸಹೋದರರು ಮತ್ತು ಸಹೋದರಿಯರನ್ನು, ವಿಶೇಷವಾಗಿ ಅಹ್ಮದಾಬಾದ್ ಮತ್ತು ಸೂರತ್ತಿನ ನಾಗರಿಕರನ್ನು ಅಭಿನಂದಿಸುತ್ತೇನೆ.

ಬಹಳ ಬಹಳ ಧನ್ಯವಾದಗಳು!

***



(Release ID: 1690813) Visitor Counter : 208