ಪ್ರಧಾನ ಮಂತ್ರಿಯವರ ಕಛೇರಿ

ಅಗತ್ಯತೆ ಇರುವವರು ಮೊದಲು ಲಸಿಕೆ ಪಡೆಯುತ್ತಾರೆ: ಪ್ರಧಾನಮಂತ್ರಿ


ಭಾರತದಲ್ಲಿ ಮಾನವ ಕೇಂದ್ರಿತ ವಿಧಾನದ ಮಾರ್ಗದರ್ಶನದಲ್ಲಿ ಲಸಿಕೆ ಅಭಿಯಾನ: ಪ್ರಧಾನಮಂತ್ರಿ ನರೇಂದ್ರ ಮೋದಿ

ಜನತೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಸೂಚನೆಗಳನ್ನು ಮತ್ತು ಲಸಿಕೆ ಶಿಷ್ಟಾಚಾರಗಳನ್ನು ಪರಿಪಾಲಿಸಬೇಕು

Posted On: 16 JAN 2021 1:35PM by PIB Bengaluru

ಭಾರತದ ಕೋವಿಡ್-19 ಲಸಿಕಾ ಅಭಿಯಾನ ಅತ್ಯಂತ ಮಾನವೀಯ ಮತ್ತು ಪ್ರಮುಖ ತತ್ವಗಳನ್ನು ಆಧರಿಸಿದೆ ಎಂದು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಯಾರಿಗೆ ಅಗತ್ಯತೆ ಇದೆಯೋ ಅಂತಹವರಿಗೆ ಮೊದಲು ಲಸಿಕೆ ದೊರೆಯಲಿದೆ. ಸೋಂಕಿಗೆ ಒಳಗಾಗುವ ಗರಿಷ್ಠ ಅಪಾಯದಲ್ಲಿ ಯಾರಿದ್ದಾರೋ ಅಂತಹವರಿಗೆ ಮೊದಲು ಲಸಿಕೆ ಹಾಕಲಾಗುವುದು. ನಮ್ಮ ವೈದ್ಯರು, ದಾದಿಯರು, ಆಸ್ಪತ್ರೆಗಳ ನೈರ್ಮಲ್ಯ ಕಾರ್ಯಕರ್ತರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಮೊದಲು ಲಸಿಕೆ ಪಡೆಯುವ ಅಧಿಕಾರ ಹೊಂದಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಆಸ್ಪತ್ರೆ ವಲಯಗಳಿಗೆ ಮೊದಲ ಆದ್ಯತೆ ದೊರೆಯಲಿದೆ ಎಂದಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ -19 ಸೋಂಕಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ವೈದ್ಯಕೀಯ ಸಿಬ್ಬಂದಿ ನಂತರ ಅಗತ್ಯ ಸೇವೆಯಲ್ಲಿರುವ ಸದಸ್ಯರು ಮತ್ತು ದೇಶದ ಭದ್ರತೆ, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತಿರುವರಿಗೆ ಲಸಿಕೆ ದೊರೆಯಲಿದೆ. ನಮ್ಮ ಭದ್ರತಾ ಪಡೆಗಳು, ಪೊಲೀಸ್ ಸಿಬ್ಬಂದಿ, ಅಗ್ನಿಶಾಮ ದಳ, ನೈರ್ಮಲ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು. ವಲಯದ ಸಂಖ್ಯೆ ಮೂರು ಕೋಟಿಯಷ್ಟಿದ್ದು, ಇವರ ಲಸಿಕೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ಬಹುದೊಡ್ಡ ಲಸಿಕೆ ಅಭಿಯಾನದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಪ್ರಧಾನಮಂತ್ರಿ ಅವರು, ಜನತೆ ಎರಡು ಡೋಸ್ ಲಸಿಕೆ ಪಡೆಯುವುದರಿಂದ ವಂಚಿತರಾಗಬಾರದು. ಪ್ರತಿಯೊಂದು ಡೋಸ್ ಲಸಿಕೆ ಪಡೆಯುವಾಗ ನಡುವೆ ಒಂದು ತಿಂಗಳು ಅಂತರವಿರಬೇಕು. ಎರಡನೇ ಡೋಸ್ ಪಡೆದ ಎರಡು ವಾರಗಳ ನಂತರ ಕೊರೋನಾ ವಿರುದ್ಧ ಹೋರಾಟ ಮಾಡಲು ಮಾನವನ ದೇಶದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೊರೋನಾ ಸೋಂಕಿಗೆ  ಲಸಿಕೆ ಪಡೆದ ನಂತರವೂ ತಮ್ಮ ರಕ್ಷಣೆಗೆ ಪ್ರತಿಯೊಬ್ಬರೂ ಗಮನಕೊಡಬೇಕು. ಜನತೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಸೂಚನೆಗಳನ್ನು ಮತ್ತು ಲಸಿಕೆ ಶಿಷ್ಟಾಚಾರ ಪರಿಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.

ಕೋವಿಡ್-19 ಸೋಂಕಿನ ವಿರುದ್ಧ ಹೋರಾಟ ಮಾಡಿದ ಸಂದರ್ಭದುದ್ದಕ್ಕೂ ತೋರಿದ ತಾಳ್ಮೆಯನ್ನು  ಲಸಿಕೆ ಹಾಕುವ ಸಂದರ್ಭದಲ್ಲೂ ದೇಶದ ಜನತೆ ಪ್ರದರ್ಶನ ಮಾಡಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮನವಿ ಮಾಡಿದರು.

***


(Release ID: 1689441) Visitor Counter : 290