ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಯಾವುದೇ ರಾಜ್ಯದ ಯಾವುದೇ ಆಕಾಶವಾಣಿ ಕೇಂದ್ರವನ್ನೂ ಮುಚ್ಚುವುದಿಲ್ಲ: ಪ್ರಸಾರ ಭಾರತಿ ಸ್ಪಷ್ಟನೆ

Posted On: 13 JAN 2021 11:57AM by PIB Bengaluru

ಯಾವುದೇ ರಾಜ್ಯದ ಯಾವುದೇ ಆಕಾಶವಾಣಿ ಕೇಂದ್ರವನ್ನೂ ಮುಚ್ಚುವುದಿಲ್ಲ ಎಂದು ಪ್ರಸಾರ ಭಾರತಿ ಇಂದು ಸ್ಪಷ್ಟಪಡಿಸಿದೆ.

ಆಕಾಶವಾಣಿ ಕೇಂದ್ರಗಳನ್ನು ಮುಚ್ಚಲಾಗುತ್ತದೆ ಎಂದು ಭಾರತದಾದ್ಯಂತದ ವಿವಿಧ ಮಾಧ್ಯಮಗಳು ಸುಳ್ಳು ವರದಿ ಮತ್ತು ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ  ಪ್ರಸಾರ ಭಾರತಿ, ವರದಿಗಳು ಆಧಾರರಹಿತ ಮತ್ತು ವಾಸ್ತವಕ್ಕೆ ದೂರವಾದುವು ಎಂದು ಸ್ಪಷ್ಟಪಡಿಸಿದೆ.

ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಯಾವುದೇ ಆಕಾಶವಾಣಿಯ ಕೇಂದ್ರವನ್ನೂ ಕೆಳಹಂತಕ್ಕೆ ಇಳಿಸಲಾಗುವುದಿಲ್ಲ ಅಥವಾ ಪರಿವರ್ತಿಸಲಾಗುವುದಿಲ್ಲ ಎಂದು ಪ್ರಸಾರ ಭಾರತಿ ಹೇಳಿದೆ. ಎಲ್ಲಾ ಆಕಾಶವಾಣಿ ಕೇಂದ್ರಗಳು ಸ್ಥಳೀಯ ಕಾರ್ಯಕ್ರಮಗಳನ್ನು ಭಾಷೆ, ಸಾಮಾಜಿಕ-ಸಾಂಸ್ಕೃತಿಕ ಮತ್ತು ಜನಸಂಖ್ಯಾ ವೈವಿಧ್ಯತೆಗೆ ಅನುಗುಣವಾಗಿ ಮುಂದುವರೆಸುತ್ತವೆ. ಸ್ಥಳೀಯ ಪ್ರತಿಭೆಗಳನ್ನು ಉತ್ತೇಜಿಸುವ ಆಕಾಶವಾಣಿಯ ಧ್ಯೇಯವನ್ನೂ ಮುಂದುವರೆಸುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.

2021-2022ರಲ್ಲಿ ಅನುಷ್ಠಾನಕ್ಕೆ ಸಿದ್ಧವಾಗಿರುವ ಹಲವಾರು ಪ್ರಮುಖ ಯೋಜನೆಗಳೊಂದಿಗೆ ಆಕಾಶವಾಣಿ, ಆಲ್ ಇಂಡಿಯಾ ರೇಡಿಯೋ, ಎಐಆರ್ ಜಾಲವನ್ನು ಬಲಪಡಿಸಲಾಗುವದು. ಭಾರತದಾದ್ಯಂತ ನೂರಕ್ಕೂ ಹೆಚ್ಚು ಹೊಸ ಎಫ್‌ಎಂ ರೇಡಿಯೊ ಟ್ರಾನ್ಸ್‌ಮಿಟರ್‌ಗಳೊಂದಿಗೆ ತನ್ನ ಜಾಲವನ್ನು ವಿಸ್ತರಿಸಲಾಗುವುದು ಎಂದು ಪ್ರಸಾರ ಭಾರತಿ ಪ್ರಕಟಿಸಿದೆ.

ನೂರಾರು ಕೇಂದ್ರಗಳು ಮತ್ತು ರೇಡಿಯೊ ಟ್ರಾನ್ಸ್‌ಮಿಟರ್‌ಗಳನ್ನು ಒಳಗೊಂಡಿರುವ ಎಐಆರ್ ನೆಟ್‌ವರ್ಕ್ ವಿಶ್ವದ ಅತಿದೊಡ್ಡ ಸಾರ್ವಜನಿಕ ಸೇವಾ ಪ್ರಸಾರ ಜಾಲಗಳಲ್ಲಿ ಒಂದಾಗಿದ್ದು, ಇದು ಟೆರೆಸ್ಟ್ರಿಯಲ್ ಅನಲಾಗ್ ರೇಡಿಯೋ (ಎಫ್‌ಎಂ, ಎಂ ಡಬ್ಲ್ಯೂ, ಎಸ್‌ಡಬ್ಲ್ಯೂ), ಸ್ಯಾಟಲೈಟ್ ಡಿಟಿಎಚ್ ರೇಡಿಯೋ (ಉಚಿತ ಡಿಡಿ ಡಿಶ್ ಡಿಟಿಎಚ್ ), ಇಂಟರ್ನೆಟ್ ರೇಡಿಯೋ (ಐಒಎಸ್ / ಆಂಡ್ರಾಯ್ಡ್‌ನಲ್ಲಿ ನ್ಯೂಸ್‌ಆನ್ಏರ್ ಅಪ್ಲಿಕೇಶನ್) ವಿಧಾನಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಉಚಿತ ಡಿಡಿ ಡಿಶ್ ಡಿಟಿಎಚ್ ಸೇವೆಯಲ್ಲಿ 48 ಸ್ಯಾಟಲೈಟ್ ರೇಡಿಯೊ ಚಾನೆಲ್‌ಗಳು ಲಭ್ಯವಿದ್ದು, ಭಾರತದಾದ್ಯಂತದ ರೇಡಿಯೊ ಕೇಂದ್ರಗಳಲ್ಲಿನ ಸ್ಥಳೀಯ ಮತ್ತು ಪ್ರಾದೇಶಿಕ ಧ್ವನಿಗಳಿಗೆ ಈಗ ರಾಷ್ಟ್ರವ್ಯಾಪಿ ವೇದಿಕೆಯನ್ನು ಒದಗಿಸಿವೆ.

ನ್ಯೂಸ್‌ಆನ್‌ಏರ್ ಆ್ಯಪ್‌ನಲ್ಲಿ ಸುಮಾರು 200 ಲೈವ್ ರೇಡಿಯೊ ಸ್ಟ್ರೀಮ್‌ಗಳಿವೆ. ಪ್ರಸಾರ ಭಾರತಿಯುಸ್ಥಳೀಯತೆಗೆ ಆದ್ಯತೆಎಂಬುದಕ್ಕೆ ಹೊಸ ಜಾಗತಿಕ ಅರ್ಥವನ್ನು ನೀಡಿದ್ದು, 2020 ಅವಧಿಯಲ್ಲಿ ವಿಶ್ವದ ವಿವಿಧ ದೇಶಗಳ 2.5 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು 200ಕ್ಕೂ ಹೆಚ್ಚು ಲೈವ್ ರೇಡಿಯೊ ಸ್ಟ್ರೀಮ್‌ಗಳ ಮೂಲಕ 300 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಮಾಡಿದ್ದಾರೆ.

ಪ್ರಸಾರ ಭಾರತಿ ಭಾರತದಲ್ಲಿ ಡಿಜಿಟಲ್ ಟೆರೆಸ್ಟ್ರಿಯಲ್ ರೇಡಿಯೊವನ್ನು ಪರಿಚಯಿಸುವ ಯೋಜನೆ ಹೊಂದಿದೆ. ಆಯ್ದ ಆಕಾಶವಾಣಿ ಚಾನಲ್‌ಗಳು ಈಗಾಗಲೇ ಪ್ರಾಯೋಗಿಕವಾಗಿ ಡಿಜಿಟಲ್ ಡಿಆರ್‌ಎಂ ತಂತ್ರಜ್ಞಾನದ ಮೂಲಕ ಅನೇಕ ನಗರಗಳಲ್ಲಿ / ಪ್ರದೇಶಗಳಲ್ಲಿನ ಕೇಳುಗರಿಗೆ ಲಭ್ಯವಿದೆ. ನಗರಗಳು / ಪ್ರದೇಶಗಳ ಕೇಳುಗರು ಡಿಜಿಟಲ್ ಮೋಡ್‌ನಲ್ಲಿ ಒಂದೇ ರೇಡಿಯೊ ತರಂಗಾಂತರದಲ್ಲಿ ಲಭ್ಯವಿರುವ ಅನೇಕ ರೇಡಿಯೊ ಚಾನೆಲ್‌ಗಳ ಮೂಲಕ ಡಿಜಿಟಲ್ ರೇಡಿಯೊದ ಶಕ್ತಿಯನ್ನು ಅನುಭವಿಸಬಹುದು. ಡಿಆರ್‌ಎಂ ಟ್ರಾನ್ಸ್‌ಮಿಟರ್‌ಗಳಲ್ಲಿ ಲಭ್ಯವಿರುವ ಆಕಾಶವಾಣಿಯ ವಿಶೇಷ ಡಿಜಿಟಲ್ ರೇಡಿಯೋ ಸೇವೆಗಳಲ್ಲಿ ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳಿಗೆ ಮೀಸಲಾಗಿರುವ ಎಐಆರ್ ನ್ಯೂಸ್ 24X7, ಶಾಸ್ತ್ರೀಯ ಸಂಗೀತಕ್ಕೆ ಮೀಸಲಾಗಿರುವ ಎಐಆರ್ ರಾಗಂ 24X7, ಸ್ಥಳೀಯ / ಪ್ರಾದೇಶಿಕ ರೇಡಿಯೋ ಸೇವೆಗಳು ಮತ್ತು ಲೈವ್ ಸ್ಪೋರ್ಟ್ಸ್ ಸೇರಿವೆ.

ಪ್ರಸಾರ ಭಾರತಿಯು ಎಫ್‌ಎಂ ರೇಡಿಯೋಕ್ಕೆ ಡಿಜಿಟಲ್ ತಂತ್ರಜ್ಞಾನ ಆಯ್ಕೆಗಳನ್ನು ಪರೀಕ್ಷಿಸುವ ಸುಧಾರಿತ ಹಂತದಲ್ಲಿದೆ ಮತ್ತು ಭಾರತದಲ್ಲಿ ಡಿಜಿಟಲ್ ಎಫ್‌ಎಂ ರೇಡಿಯೋ ಆರಂಭಿಸಲು ಶೀಘ್ರದಲ್ಲೇ ಅದರ ಗುಣಮಟ್ಟವನ್ನು ಅಂತಿಮಗೊಳಿಸಲಾಗುವುದು.

***


(Release ID: 1688285) Visitor Counter : 365