ಕೃಷಿ ಸಚಿವಾಲಯ

2021ರ ಜನವರಿ 13ರಂದು ಯಶಸ್ವಿ 5 ವರ್ಷಗಳನ್ನು ಪೂರೈಸಿದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ


ವಿವಿಧ ಕಾರಣಗಳಿಂದ ಬೆಳೆ ನಷ್ಟ ಎದುರಿಸುವ ರೈತರಿಗೆ ಯೋಜನೆಯಿಂದ ನೆರವು

Posted On: 12 JAN 2021 3:26PM by PIB Bengaluru

ದೇಶದ ರೈತರ ಬೆಳೆಗಳ ನಷ್ಟದ ವ್ಯಾಪ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ 5 ವರ್ಷಗಳ ಹಿಂದೆ, 2016 ಜನವರಿ 13 ರಂದು, ಭಾರತ ಸರ್ಕಾರವು ಪ್ರಮುಖ ಬೆಳೆ ವಿಮಾ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್ಬಿವೈ) ಗೆ ಅನುಮೋದನೆ ನೀಡುವ ಮೂಲಕ ಒಂದು ಐತಿಹಾಸಿಕ ಹೆಜ್ಜೆಯನ್ನಿರಿಸಿತು. ರೈತರಿಗೆ ದೇಶಾದ್ಯಂತ ಕಡಿಮೆ ಏಕರೂಪದ ಪ್ರೀಮಿಯಂನಲ್ಲಿ ಸಮಗ್ರ ನಷ್ಟ ಪರಿಹಾರವನ್ನು ಒದಗಿಸುವ ಉಪಕ್ರಮವಾಗಿ ಯೋಜನೆಯನ್ನು ರೂಪಿಸಲಾಯಿತು. ರೈತರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ಬದ್ಧವಾಗಿದೆ.

ರೈತರು ಪಾವತಿಸುವ ಪ್ರೀಮಿಯಂ ವೆಚ್ಚಕ್ಕೆ ಸಮಾನವಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಸಹಾಯಧನ ನೀಡುತ್ತವೆ. ಆದಾಗ್ಯೂ, ಈಶಾನ್ಯ ರಾಜ್ಯಗಳಲ್ಲಿ ವಿಮೆ ಪಡೆಯುವುದನ್ನು ಉತ್ತೇಜಿಸಲು ಈಶಾನ್ಯ ರಾಜ್ಯಗಳಿಗೆ ಪ್ರೀಮಿಯಂ ಸಬ್ಸಿಡಿಯ ಶೇ.90 ರಷ್ಟನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಪಿಎಂಎಫ್ಬಿವೈಗೂ ಮೊದಲಿದ್ದ ಯೋಜನೆಗಳಲ್ಲಿ ಪ್ರತಿ ಹೆಕ್ಟೇರ್ಗೆ 15,100 ರೂ. ಇದ್ದ ವಿಮೆಯ ಸರಾಸರಿ ಮೊತ್ತವನ್ನು ಪಿಎಂಎಫ್ಬಿವೈ ಅಡಿಯಲ್ಲಿ, 40,700 ರೂ. ಗಳಿಗೆ ಹೆಚ್ಚಿಸಲಾಗಿದೆ.

ರೈತರಿಗೆ ನಷ್ಟವನ್ನು ತಗ್ಗಿಸುವ ಕಾರ್ಯವಿಧಾನವನ್ನು ಕೊನೆಗೊಳಿಸಲು, ಯೋಜನೆಯು ಸಂಪೂರ್ಣ ಬೆಳೆ ಅವಧಿಗೆ ಬಿತ್ತನೆ ಮಾಡಲಾಗದ ಮತ್ತು ಹಂಗಾಮು ನಡುವಿನ ಪ್ರತಿಕೂಲತೆಗಳಿಂದ ಉಂಟಾಗುವ ನಷ್ಟಗಳೂ ಸೇರಿದಂತೆ ಬಿತ್ತನೆ ಪೂರ್ವದಿಂದ ಕೊಯ್ಲಿನ ನಂತರದವರೆಗೆ ವಿಮೆ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಸ್ಥಳೀಯ ವಿಪತ್ತುಗಳಿಂದ ಉಂಟಾಗುವ ವೈಯಕ್ತಿಕ ಜಮೀನು ಮಟ್ಟದ ನಷ್ಟಗಳು ಮತ್ತು ಪ್ರವಾಹ, ಅಕಾಲಿಕ ಮಳೆ  ಮತ್ತು ನೈಸರ್ಗಿಕ ಬೆಂಕಿಯಂತಹ ಅಪಾಯಗಳಿಂದ ಆಗುವ ಕೊಯ್ಲಿನ ನಂತರದ ನಷ್ಟಗಳು ಸಹ ಇದರ ವ್ಯಾಪ್ತಿಗೆ ಬರುತ್ತವೆ.

ವ್ಯಾಪ್ತಿಯ  ಕೆಲವು ಗಮನಾರ್ಹ ಉದಾಹರಣೆಗಳೆಂದರೆ, 2019 ಮುಂಗಾರು ಬೆಳೆ ಅವಧಿಯಲ್ಲಿ ಬಿತ್ತನೆ ಮಾಡಲಾಗದ ಕ್ಲೈಮುಗಳಾಗಿ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ 500 ಕೋಟಿ ರೂ.ಗಳನ್ನು ಪಡೆಯಲಾಗಿದೆ. ಹರಿಯಾಣದಲ್ಲಿ 2018 ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ, ಸ್ಥಳೀಯ ವಿಪತ್ತುಗಳಿಗಾಗಿ 100 ಕೋಟಿ ರೂ. ಗೂ ಹೆಚ್ಚು ಕ್ಲೈಮುಗಳನ್ನು ಮಾಡಲಾಗಿದೆ. 2019-20 ಹಿಂಗಾರು ಅವಧಿಯಲ್ಲಿ ರಾಜಸ್ಥಾನದಲ್ಲಿ ಆಲಿಕಲ್ಲು ಮಳೆ, ಹಂಗಾಮಿನ ಮಧ್ಯದ ಪ್ರತಿಕೂಲಗಳಿಗಾಗಿ ಸುಮಾರು 30 ಕೋಟಿ ರೂ. ಕ್ಲೈಮ್ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ 2019 ಮುಂಗಾರು ಹಂಗಾಮಿನ ಅಕಾಲಿಕ ಮಳೆ ಮತ್ತು ಮಿಡತೆ ದಾಳಿಯ ನಷ್ಟಕ್ಕಾಗಿ 5000 ಕೋಟಿ ರೂ. ಗಳ ಕ್ಲೈಮ್ ಮಾಡಲಾಗಿದೆ.

ಪಿಎಂಎಫ್ಬಿವೈ ಪೋರ್ಟಲ್ನೊಂದಿಗೆ ಭೂ ದಾಖಲೆಗಳ ಏಕೀಕರಣ, ರೈತರನ್ನು ಸುಲಭವಾಗಿ ದಾಖಲಿಸಲು ಬೆಳೆ ವಿಮೆ ಮೊಬೈಲ್-ಅಪ್ಲಿಕೇಶನ್ ಮತ್ತು ಉಪಗ್ರಹ ಚಿತ್ರಣ, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ, ಡ್ರೋನ್ಗಳು, ಕೃತಕ ಬುದ್ಧಿಮತ್ತೆ ಮತ್ತು ಬೆಳೆ ನಷ್ಟವನ್ನು ನಿರ್ಣಯಿಸಲು ವ್ಯವಸ್ಥೆ ಮುಂತಾದ ತಂತ್ರಜ್ಞಾನದ ಬಳಕೆಗಳು ಯೋಜನೆಯ ಕೆಲವು ಪ್ರಮುಖ ಲಕ್ಷಣಗಳಾಗಿವೆ. ಬೆಳೆ ವಿಮೆ ಆ್ಯಪ್, ಸಾಮಾನ್ಯ ಸೇವಾ ಕೇಂದ್ರ ಅಥವಾ ಹತ್ತಿರದ ಕೃಷಿ ಅಧಿಕಾರಿಯ ಮೂಲಕ ಘಟನೆ ಸಂಭವಿಸಿದ 72 ಗಂಟೆಗಳ ಒಳಗೆ ರೈತರು ಬೆಳೆ ನಷ್ಟವನ್ನು ವರದಿ ಮಾಡಲು ಯೋಜನೆಯು ಸಹಾಯ ಮಾಡುತ್ತದೆ.

ನಿರಂತರವಾಗಿ ಸುಧಾರಣೆಗಳನ್ನು ತರುವ ಪ್ರಯತ್ನವಾಗಿ, ಫೆಬ್ರವರಿ 2020 ರಲ್ಲಿ ಅದರ ಪರಿಷ್ಕರಣೆಗೂ ಮುನ್ನ ಯೋಜನೆಯನ್ನು ಎಲ್ಲಾ ರೈತರಿಗೆ ಐಚ್ಛಿಕವನ್ನಾಗಿ ಮಾಡಲಾಯಿತು, ಇದಲ್ಲದೆ, ವಿಮೆ ಮಾಡಿದ ಮೊತ್ತವನ್ನು ಉದಾರಗೊಳಿಸಲು ರಾಜ್ಯಗಳಿಗೆ ಅವಕಾಶ ಒದಗಿಸಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಲಾಭ ದೊರೆಯುತ್ತದೆ.

ಯೋಜನೆಯು ವರ್ಷಕ್ಕೆ 5.5 ಕೋಟಿ ರೈತ ಅರ್ಜಿಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ, ಯೋಜನೆಯಡಿ ಈಗಾಗಲೇ 90,000 ಕೋಟಿ ರೂಪಾಯಿಗಳ ಕ್ಲೈಮುಗಳನ್ನು ಪಾವತಿಸಲಾಗಿದೆ. ಕ್ಲೈಮುಗಳನ್ನು ನೇರವಾಗಿ ರೈತ ಖಾತೆಗಳಿಗೆ ತ್ವರಿತವಾಗಿ ನೀಡಲು ಆಧಾರ್ ಕಾರ್ಡ್ ಸಹಾಯ ಮಾಡಿದೆ. ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಸಹ ಸುಮಾರು 70 ಲಕ್ಷ ರೈತರು ಪ್ರಯೋಜನ ಪಡೆದರು ಮತ್ತು 8741.30 ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಲಾಯಿತು.

ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ವಾವಲಂಬಿಯಾಗಲು ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಮತ್ತು ಆತ್ಮನಿರ್ಭರ ಕಿಸಾನ್ ಗೆ ಬೆಂಬಲ ನೀಡುವಂತೆ ಭಾರತ ಸರ್ಕಾರವು ದೇಶದ ರೈತರಿಗೆ ಮನವಿ ಮಾಡಿದೆ.

***(Release ID: 1688159) Visitor Counter : 286