ಪ್ರಧಾನ ಮಂತ್ರಿಯವರ ಕಛೇರಿ
ಜನವರಿ 9, ಭಾರತೀಯ ಪ್ರವಾಸಿ ದಿನ ಸಮಾವೇಶ ಉದ್ಘಾಟಿಸಲಿರುವ ಪ್ರಧಾನಿ
Posted On:
07 JAN 2021 7:07PM by PIB Bengaluru
ಪ್ರವಾಸಿ ಭಾರತೀಯ ದಿವಸ್(ಪಿಬಿಡಿ) ಸಮಾವೇಶ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಡೆಸುವ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ ಮತ್ತು ಅದು ಅನಿವಾಸಿ ಭಾರತೀಯರೊಂದಿಗೆ ಸಂಪರ್ಕ ಮತ್ತು ಬೆಸೆಯುವ ಅತ್ಯಂತ ಪ್ರಮುಖ ವೇದಿಕೆಯಾಗಿದೆ. ನಮ್ಮ ಕ್ರಿಯಾಶೀಲ ಅನಿವಾಸಿ ಭಾರತೀಯ ಸಮುದಾಯದ ಭಾವನೆಗಳಿಗೆ ಸ್ಪಂದಿಸಲು ಕೋವಿಡ್-19 ಸಾಂಕ್ರಾಮಿಕದ ನಡುವೆಯೂ 2021ರ ಜನವರಿ 9ರಂದು 16ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ ಆಯೋಜಿಸಲಾಗಿದೆ. ವರ್ಚುವಲ್ ರೂಪದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ಇತ್ತೀಚೆಗೆ ಪಿಬಿಡಿಯ ಅಣಕು ಪ್ರದರ್ಶನಗಳು ನಡೆದವು. 2021ರ 16ನೇ ಪಿಬಿಡಿ ಸಮಾವೇಶದ ಘೋಷವಾಕ್ಯ “ಆತ್ಮನಿರ್ಭರ ಭಾರತಕ್ಕೆ ಕೊಡುಗೆ”.
ಪಿಬಿಡಿ ಸಮಾವೇಶ ಮೂರು ವಿಭಾಗಗಳನ್ನು ಹೊಂದಿರುತ್ತದೆ. ಮೊದಲನೆಯದಾಗಿ, ಪಿಬಿಡಿ ಸಮಾವೇಶವನ್ನು ಭಾರತದ ಪ್ರಧಾನಮಂತ್ರಿ ಗೌರವಾವನ್ವಿತ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಮತ್ತು ಸೂರಿನಾಮೆ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಚಂದ್ರಿಕಾ ಪೆರ್ಸಾದ್ ಸಂತೋಕಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಆಶಯ ಭಾಷಣ ಮಾಡಲಿದ್ದಾರೆ. ಯುವಜನಾಂಗಕ್ಕಾಗಿ ನಡೆಸಿದ ಭಾರತ್ ಕೋ ಜಾನಿಯೇ ಆನ್ ಲೈನ್ ಕ್ವಿಜ್ ನಲ್ಲಿ ವಿಜೇತರಾದ ಹೆಸರುಗಳನ್ನು ಇದೇ ಸಂದರ್ಭದಲ್ಲಿ ಪ್ರಕಟಿಸಲಾಗುವುದು.
ಉದ್ಘಾಟನಾ ಗೋಷ್ಠಿಯ ನಂತರ ಎರಡು ಪ್ರಮುಖ ಗೋಷ್ಠಿಗಳು ನಡೆಯಲಿವೆ. ಮೊದಲನೇ ಗೋಷ್ಠಿಯಲ್ಲಿ ‘ಆತ್ಮನಿರ್ಭರ ಭಾರತ ನಿರ್ಮಾಣ ನಿಟ್ಟಿನಲ್ಲಿ ಅನಿವಾಸಿ ಭಾರತೀಯರ ಪಾತ್ರ’ದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಕೈಗಾರಿಕಾ ಹಾಗೂ ವಾಣಿಜ್ಯ ಸಚಿವರು ಭಾಷಣ ಮಾಡಲಿದ್ದಾರೆ. ನಂತರದ ಎರಡನೇ ಗೋಷ್ಠಿಯಲ್ಲಿ ‘ಕೋವಿಡ್ ನಂತರದ ಸವಾಲುಗಳು – ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಚಿತ್ರಣ’ ಈ ವಿಚಾರದ ಬಗ್ಗೆ ಆರೋಗ್ಯ ಸಚಿವರು, ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರುಗಳು ಭಾಷಣ ಮಾಡಲಿದ್ದಾರೆ. ಈ ಎರಡು ಗೋಷ್ಠಿಗಳಿಗೂ ಅನಿವಾಸಿ ಗಣ್ಯ ತಜ್ಞರನ್ನು ಆಹ್ವಾನಿಸಿದ್ದು, ಅವರು ಸಂವಾದಗಳಲ್ಲಿ ಭಾಗವಹಿಸಲಿದ್ದಾರೆ.
ಅಂತಿಮವಾಗಿ ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಜಿ ಅವರ ಸಮಾಪನಾ ಭಾಷಣದೊಂದಿಗೆ ಪ್ರವಾಸಿ ಭಾರತೀಯ ದಿವಸ್ ಮುಕ್ತಾಯವಾಗಲಿದೆ. 2020-21ನೇ ಸಾಲಿನ ಪ್ರವಾಸಿ ಭಾರತೀಯ ಸಮ್ಮಾನ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ ಗಣ್ಯರ ಹೆಸರನ್ನು ಪ್ರಕಟಿಸಲಾಗುವುದು. ಆಯ್ದ ಅನಿವಾಸಿ ಭಾರತೀಯರಿಗೆ ನಾನಾ ವಲಯಗಳಲ್ಲಿ ವಿದೇಶದಲ್ಲಿ ಹಾಗೂ ಭಾರತದಲ್ಲಿ ಅವರು ನೀಡಿರುವ ಕೊಡುಗೆಗಳನ್ನು ಗುರುತಿಸಿ, ಪ್ರವಾಸಿ ಭಾರತೀಯ ಸಮ್ಮಾನ ಪ್ರಶಸ್ತಿಗಳನ್ನು ನೀಡಲಾಗುವುದು.
ಯುವ ಪಿಬಿಡಿಯನ್ನೂ ಸಹ ವರ್ಚುವಲ್ ರೂಪದಲ್ಲಿ 2021ರ ಜನವರಿ 8ರಂದು ಆಚರಿಸಲಾಗುವುದು. ಅದರ ಘೋಷವಾಕ್ಯ ‘ಭಾರತ ಮತ್ತು ಅನಿವಾಸಿ ಭಾರತೀಯ ಯುವ ಸಾಧಕರನ್ನು ಒಗ್ಗೂಡಿಸುವುದು’ ಎಂಬುದಾಗಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನ್ಯೂಜಿಲ್ಯಾಂಡ್ ನ ಸಮುದಾಯ ಮತ್ತು ಸ್ವಯಂ ಪ್ರೇರಿತ ಸಂಘಟನಾ ವಲಯದ ಸಚಿವೆ ಗೌರವಾನ್ವಿತ ಶ್ರೀಮತಿ ಪ್ರಿಯಾಂಕಾ ರಾಧಾಕೃಷ್ಣನ್ ಭಾಗವಹಿಸಲಿದ್ದಾರೆ.
***
(Release ID: 1687000)
Visitor Counter : 1072
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam