ಪ್ರಧಾನ ಮಂತ್ರಿಯವರ ಕಛೇರಿ

ಭಾರತ- ಜರ್ಮನಿ ನಾಯಕರ ವಿಡಿಯೋ ಟೆಲಿ ಸಂವಾದ

Posted On: 06 JAN 2021 7:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಜರ್ಮನಿಯ ತಮ್ಮ ಸಹವರ್ತಿ ಫೆಡರಲ್ ಚಾನ್ಸಲರ್ ಡಾ. ಆಂಗೆಲಾ ಮಾರ್ಕೆಲ್ ಅವರೊಂದಿಗೆ ವಿಡಿಯೋ – ಟೆಲಿ ಸಂವಾದ ನಡೆಸಿದರು.  
ಐರೋಪ್ಯ ಮತ್ತು ಜಾಗತಿಕ ಮಟ್ಟದಲ್ಲಿ ಸ್ಥಿರ ಮತ್ತು ಬಲವಾದ ನಾಯಕತ್ವವನ್ನು ನೀಡುವಲ್ಲಿ ಚಾನ್ಸಲರ್ ಮರ್ಕೆಲ್ ಅವರ ದೀರ್ಘಕಾಲೀನ ಪಾತ್ರವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಭಾರತ-ಜರ್ಮನಿ ವ್ಯೂಹಾತ್ಮಕ ಸಹಭಾಗಿತ್ವದ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಿರುವುದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.
ಕೋವಿಡ್-19 ಸಾಂಕ್ರಾಮಿಕದ ಸ್ಪಂದನೆ, ದ್ವಿಪಕ್ಷೀಯ ಸಂಬಂಧಗಳು, ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು, ವಿಶೇಷವಾಗಿ ಭಾರತ-ಐರೋಪ್ಯ ಒಕ್ಕೂಟದ ಬಾಂಧವ್ಯ ಸೇರಿದಂತೆ ಪರಸ್ಪರ ಪ್ರಾಮುಖ್ಯತೆಯ ಪ್ರಮುಖ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.

ಪ್ರಧಾನಮಂತ್ರಿಯವರು ಭಾರತದಲ್ಲಿ ಲಸಿಕೆಯ ಬೆಳವಣಿಗಳ ಕುರಿತಂತೆ ಚಾನ್ಸಲರ್ ಮಾರ್ಕೆಲ್ ಅವರಿಗೆ ಸಂಕ್ಷಿಪ್ತ ವಿವರಣೆ ನೀಡಿ, ವಿಶ್ವದ ಒಳಿತಿಗಾಗಿ, ಸಾಮರ್ಥ್ಯದ ನಿಯೋಜನೆಯ ಭಾರತದ ಬದ್ಧತೆಯ ಬಗ್ಗೆ ಚಾನ್ಸಲರ್ ಮಾರ್ಕೆಲ್ ಅವರಿಗೆ ಭರವಸೆ ನೀಡಿದರು. ಜರ್ಮನಿಯಲ್ಲಿ ಮತ್ತು ಇತರ ಐರೋಪ್ಯ ರಾಷ್ಟ್ರಗಳಲ್ಲಿ ಸೋಂಕಿನ ಹೊಸ ಅಲೆಯನ್ನು ಆರಂಭದಲ್ಲೇ ನಿಯಂತ್ರಿಸಿದ್ದಕ್ಕಾಗಿ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು. 
ಅಂತಾರಾಷ್ಟ್ರೀಯ ಸೌರ ಸಹಯೋಗ (ಐ.ಎಸ್.ಎ.)ದಲ್ಲಿ ಸೇರ್ಪಡೆಯಾಗುವ ಜರ್ಮನಿಯ ನಿರ್ಧಾರವನ್ನು ಪ್ರಧಾನಮಂತ್ರಿ ಸ್ವಾಗತಿಸಿದರು ಮತ್ತು ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯ ಮೈತ್ರಿ (ಸಿ.ಡಿ.ಆರ್.ಐ.) ವೇದಿಕೆಯಡಿ ಜರ್ಮನಿಯೊಂದಿಗೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಇಂಗಿತ ವ್ಯಕ್ತಪಡಿಸಿದರು.  
ಈ ವರ್ಷ ಭಾರತ ಮತ್ತು ಜರ್ಮನಿ ನಡುವೆ ದ್ವಿಪಕ್ಷೀಯ ಬಾಂಧವ್ಯ ಸ್ಥಾಪಿಸಿದ 70ನೇ ವರ್ಷ ಆಚರಿಸುತ್ತಿದ್ದು, ಇದು ವ್ಯೂಹಾತ್ಮಕ ಸಹಭಾಗಿತ್ವದ 20ನೇ ವಾರ್ಷಿಕೋತ್ಸವವೂ ಆಗಿದೆ ಎಂಬುದನ್ನು ಪರಿಗಣಿಸಿದ ಉಭಯ ನಾಯಕರು ಆರನೇ ಅಂತರ-ಸರ್ಕಾರಿ ಸಮಾಲೋಚನೆಗಳನ್ನು (ಐಜಿಸಿ) 2021ರ ಆರಂಭಿಕ ದಿನಾಂಕದಲ್ಲೇ ನಡೆಸಲು ಮತ್ತು ಇದಕ್ಕಾಗಿ ಮಹತ್ವಾಕಾಂಕ್ಷೆಯ ಕಾರ್ಯಸೂಚಿ ರೂಪಿಸಲು ಸಮ್ಮತಿಸಿದರು.


*** 



(Release ID: 1686643) Visitor Counter : 309