ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ದೇಶದಲ್ಲಿ ಹಕ್ಕಿ ಜ್ವರದ ಸ್ಥಿತಿಗತಿ

Posted On: 06 JAN 2021 9:57AM by PIB Bengaluru

ಕಳೆದ ಶತಮಾನದಲ್ಲಿ ನಾಲ್ಕು ಪ್ರಮುಖ ಸಾಂಕ್ರಾಮಿಕ ರೋಗಗಳು ದಾಖಲಾಗುವುದರೊಂದಿಗೆ ಹಕ್ಕಿ ಜ್ವರ (ಏಐ) ವೈರಾಣುಗಳು ಶತಮಾನಗಳಿಂದಲೂ ವಿಶ್ವಾದ್ಯಂತ ಪ್ರಸರಣಗೊಂಡಿವೆ. ಭಾರತದಲ್ಲಿ 2006 ರಲ್ಲಿ ಹಕ್ಕಿ ಜ್ವರ ಸಾಂಕ್ರಾಮಿಕವು ಕಾಣಿಸಿಕೊಂಡಿತು. ಭಾರತದಲ್ಲಿ ಮನುಷ್ಯರಲ್ಲಿ ಈ ರೋಗದ ಸೋಂಕು ಕಾಣಿಸಿಕೊಂಡಿರುವುದು ಇನ್ನೂ ವರದಿಯಾಗಿಲ್ಲ. ಕಲುಷಿತ ಕೋಳಿ ಉತ್ಪನ್ನಗಳ ಸೇವನೆಯಿಂದ ಏಐ ವೈರಾಣುಗಳು ಮನುಷ್ಯರಿಗೆ ಹರಡುತ್ತವೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳು ದೊರೆತಿಲ್ಲ. ಜೈವಿಕ ಭದ್ರತಾ ನಿಯಮಗಳು, ವೈಯಕ್ತಿಕ ನೈರ್ಮಲ್ಯ ಮತ್ತು ಸ್ವಚ್ಛತೆ ಹಾಗೂ ಸೋಂಕುನಿವಾರಕ ಶಿಷ್ಟಾಚಾರಗಳಂತಹ ನಿರ್ವಹಣಾ ಅಭ್ಯಾಸಗಳು, ಅಡುಗೆ ಮತ್ತು ಸಂಸ್ಕರಣಾ ಮಾನದಂಡಗಳು ಏಐ ವೈರಾಣುಗಳ ಹರಡುವಿಕೆಯನ್ನು ನಿಯಂತ್ರಿಸುವ ಪರಿಣಾಮಕಾರಿ ಸಾಧನಗಳಾಗಿವೆ.

ಚಳಿಗಾಲದಲ್ಲಿ ಅಂದರೆ ಸೆಪ್ಟೆಂಬರ್ - ಅಕ್ಟೋಬರ್ ನಿಂದ ಫೆಬ್ರವರಿ - ಮಾರ್ಚ್ ವರೆಗೆ ಭಾರತಕ್ಕೆ ಬರುವ ವಲಸೆ ಹಕ್ಕಿಗಳು ಭಾರತದಲ್ಲಿ ಈ ರೋಗವನ್ನು ಮುಖ್ಯವಾಗಿ ಹರಡುತ್ತವೆ. ಮಾನವ ನಿರ್ವಹಣೆಯಿಂದ  (ವಸ್ತುಗಳ ಮೂಲಕ) ವೈರಾಣುವಿನ ದ್ವಿತೀಯ ಹರಡುವಿಕೆಯನ್ನು ತಳ್ಳಿಹಾಕುವಂತಿಲ್ಲ.

ಎಐ ವೈರಾಣುವಿನ ಜಾಗತಿಕ ಸಾಂಕ್ರಾಮಿಕ ಆತಂಕವನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಏವಿಯನ್ ಇನ್ಫ್ಲುಯೆನ್ಸದ ನಿಯಂತ್ರಣ ಮತ್ತು ಹತೋಟಿಗಾಗಿ ಭಾರತ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಮಾರ್ಗದರ್ಶನಕ್ಕಾಗಿ 2005 ರಲ್ಲಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿತು. 2006, 2012, 2015 ಮತ್ತು 2021 ರಲ್ಲಿ ಇದನ್ನು ಪರಿಷ್ಕರಿಸಲಾಯಿತು.  (DAHD ವೆಬ್‌ಸೈಟ್ https://dahd.nic.in/sites/default/filess/Action%20Plan%20-%20as%20on23.3.15.docx-final.pdf10.pdf ನೋಡಿ).

2020 ರಲ್ಲಿ ಹಕ್ಕಿ ಜ್ವರ ಸಾಂಕ್ರಾಮಿಕದ ನಿಯಂತ್ರಣ ಮತ್ತು ವಿವಿಧ ಕೇಂದ್ರಬಿಂದುಗಳಲ್ಲಿ ಕೈಗೊಂಡ ನಿಗ್ರಹ ಕಾರ್ಯಾಚರಣೆಯ ನಂತರ ಕಾರ್ಯಾಚರಣೆ ನಂತರದ ಕಣ್ಗಾವಲು ಯೋಜನೆ (ಪಿಒಎಸ್ಪಿ) ಅನ್ವಯ, ದೇಶವು 30 ಸೆಪ್ಟೆಂಬರ್ 2020 ರಿಂದ ಹಕ್ಕಿ ಜ್ವರದಿಂದ ಮುಕ್ತವಾಗಿರುವುದಾಗಿ ಘೋಷಿಸಲಾಯಿತು.

ಚಳಿಗಾಲದ ಸಮಯದಲ್ಲಿ ವರದಿಯಾಗುವ ರೋಗಕ್ಕೆ ಸಂಬಂಧಿಸಿದ ಹಿಂದಿನ ಅನುಭವದ ದೃಷ್ಟಿಯಿಂದ, ಚಳಿಗಾಲದ ಪ್ರಾರಂಭಕ್ಕೂ ಮೊದಲು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಜಾಗರೂಕತೆಯನ್ನು ಕಾಪಾಡಿಕೊಳ್ಳಲು, ಕಣ್ಗಾವಲು ಹೆಚ್ಚಿಸಲು, ಪ್ರಮುಖ ಸರಬರಾಜುಗಳನ್ನು ಸಂಗ್ರಹಿಸಲು (ಪಿಪಿಇ ಕಿಟ್‌ಗಳು, ಇತ್ಯಾದಿ), ಸಂಭಾವ್ಯ ಪರಿಸ್ಥಿತಿಯನ್ನು ನಿರ್ವಹಿಸಲು ಸಿದ್ಧತೆ ಮತ್ತು ಸಾರ್ವಜನಿಕ ಜಾಗೃತಿಗಾಗಿ ಐಇಸಿ ಚಟುವಟಿಕೆಗಳನ್ನು ನಡೆಸಲು ಕಾಲಕಾಲಕ್ಕೆ ಸಲಹೆಗಳನ್ನು ನೀಡಲಾಗಿದೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಇಲಾಖೆಯು ಒದಗಿಸುವ ಇತರ ಬೆಂಬಲಗಳು ಹೀಗಿವೆ:

  • ಭೋಪಾಲ್‌ನ ಐಸಿಎಆರ್-ನಿಹ್ಸದ್ ರೆಫರಲ್ ಲ್ಯಾಬ್‌ನಿಂದ ತಾಂತ್ರಿಕ ಬೆಂಬಲ
  • ಹಕ್ಕಿಗಳ (ಕೋಳಿಗಳ) ನಾಶ ಮತ್ತು ಅದಕ್ಕೆ ಪರಿಹಾರ ನೀಡಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಧನಸಹಾಯ
  • ಎಎಸ್ಸಿಎಡಿ ಯೋಜನೆಯಡಿ ರಾಜ್ಯಗಳಿಗೆ ಧನಸಹಾಯ
  • ಪಶುವೈದ್ಯಕೀಯ ಕಾರ್ಯಪಡೆಯ ತರಬೇತಿ
  • ಆರ್‌ಡಿಡಿಎಲ್/ ಸಿಡಿಡಿಎಲ್ ಬಲಪಡಿಸಲು ಬೆಂಬಲ

ಕೊನೆಯ ಪೂರ್ವಸಿದ್ಧತಾ ಸಲಹೆ/ ಸಂವಹನವನ್ನು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 22.10.2020 ರಂದು ನೀಡಲಾಗಿದೆ.

ಪ್ರಸ್ತುತ ಸಾಂಕ್ರಾಮಿಕ

ಐಸಿಎಆರ್-ನಿಹ್ಸದ್ ನಿಂದ ಪಾಸಿಟಿವ್ ಮಾದರಿಗಳ ದೃಢೀಕರಣದ ನಂತರ, ಈ ಕೆಳಗಿನ ರಾಜ್ಯಗಳಲ್ಲಿ ಹಕ್ಕಿ ಜ್ವರದ ವರದಿಯಾಗಿದೆ. (12 ಕೇಂದ್ರಗಳಲ್ಲಿ).

  • ರಾಜಸ್ಥಾನ (ಕಾಗೆ) - ಬಾರನ್, ಕೋಟಾ, ಝಲಾವರ್
  • ಮಧ್ಯಪ್ರದೇಶ (ಕಾಗೆ) - ಮಾಂಡ್ಸೌರ್, ಇಂದೋರ್, ಮಾಲ್ವಾ
  • ಹಿಮಾಚಲ ಪ್ರದೇಶ (ವಲಸೆ ಹಕ್ಕಿಗಳು) - ಕಾಂಗ್ರಾ
  • ಕೇರಳ (ಕೋಳಿ-ಬಾತುಕೋಳಿ) - ಕೊಟ್ಟಾಯಂ, ಆಲಾಪಿ (4 ಕೇಂದ್ರಗಳು)

ಅದರಂತೆ, ಸೋಂಕು ಮತ್ತಷ್ಟು ಹರಡುವುದನ್ನು ತಪ್ಪಿಸಲು 2021 ರ ಜನವರಿ 1 ರಂದು ರಾಜಸ್ಥಾನ ಮತ್ತು ಮಧ್ಯ ಪ್ರಧೇಶಕ್ಕೆ ತಲಾ ಒಂದು ಮಾರ್ಗಸೂಚಿ ನೀಡಲಾಗಿದೆ. ಹಕ್ಕಿ ಜ್ವರದ ರಾಷ್ಟ್ರೀಯ ಕ್ರಿಯಾ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. 2021 ರ ಜನವರಿ 5 ರಂದು ಹಿಮಾಚಲ ಪ್ರದೇಶಕ್ಕೆ ಮತ್ತೊಂದು ಮಾರ್ಗಸೂಚಿ ನೀಡಲಾಗಿದೆ, ಅಲ್ಲಿ ಕೋಳಿಗಳಿಗೆ ರೋಗ ಹರಡುವುದನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಕ್ಕೆ ಸೂಚಿಸಲಾಗಿದೆ. ಕೇರಳವು ಈಗಾಗಲೇ 05.01.20121 ರಿಂದ ಪ್ರಮುಖ ಕೇಂದ್ರಗಳಲ್ಲಿ ನಿಯಂತ್ರಣ ಮತ್ತು ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಮತ್ತು ಕೋಳಿಗಳ ನಾಶ ಪ್ರಕ್ರಿಯೆ ನಡೆಸುತ್ತಿದೆ.

ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಲು ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳ ಆಧಾರದ ಮೇಲೆ ದೈನಂದಿನ ಮಾಹಿತಿ ಪಡೆಯಲು ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ನವದೆಹಲಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.

ಹಕ್ಕಿ ಜ್ವರದ ಕ್ರಿಯಾ ಯೋಜನೆಯ ಪ್ರಕಾರ ರೋಗದ ನಿಗ್ರಹ ಮತ್ತು ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಪೀಡಿತ ರಾಜ್ಯಗಳಿಗೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಜೈವಿಕ ಸುರಕ್ಷತೆಯನ್ನು ಬಲಪಡಿಸುವುದು, ಪೀಡಿತ ಪ್ರದೇಶಗಳ ಸೋಂಕುನಿವಾರಣೆ, ಸತ್ತ ಪಕ್ಷಿಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು, ದೃಢೀಕರಣ ಮತ್ತು ಹೆಚ್ಚಿನ ಕಣ್ಗಾವಲಿಗಾಗಿ ಸಮಯಕ್ಕೆ ಸರಿಯಾಗಿ ಮಾದರಿಗಳನ್ನು ಸಂಗ್ರಹಿಸುವುದು ಮತ್ತು ಸಲ್ಲಿಸುವುದು, ಕಣ್ಗಾವಲು ತೀವ್ರಗೊಳಿಸುವುದು ಮತ್ತು ಪೀಡಿತ ಪಕ್ಷಿಗಳಿಂದ ಕೋಳಿ ಮತ್ತು ಮನುಷ್ಯರಿಗೆ ರೋಗ ಹರಡದಂತೆ ತಡೆಗಟ್ಟುವ ಸಾಮಾನ್ಯ ಮಾರ್ಗಸೂಚಿಗಳು ಇದರಲ್ಲಿ ಸೇರಿವೆ. ಪಕ್ಷಿಗಳ ಯಾವುದೇ ಅಸಹಜ ಮರಣವನ್ನು ವರದಿ ಮಾಡಲು ಅರಣ್ಯ ಇಲಾಖೆಯೊಂದಿಗೆ ಸಮನ್ವಯವನ್ನು ರಾಜ್ಯಗಳಿಗೆ ಸೂಚಿಸಲಾಗಿದೆ. ಇತರ ರಾಜ್ಯಗಳು ಪಕ್ಷಿಗಳ ಯಾವುದೇ ಅಸಹಜ ಸಾವುಗಳ ಬಗ್ಗೆ ಜಾಗರೂಕರಾಗಿರುವಂತೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ತಕ್ಷಣ ವರದಿ ಮಾಡುವಂತೆ ಸೂಚಿಸಲಾಗಿದೆ.

***



(Release ID: 1686477) Visitor Counter : 552