ಪ್ರಧಾನ ಮಂತ್ರಿಯವರ ಕಛೇರಿ

ಆತ್ಮನಿರ್ಭರ ಭಾರತ, ಪ್ರಮಾಣ ಮತ್ತು ಗುಣಮಟ್ಟ ಎರಡರ ಬಗ್ಗೆಯೂ ಗಮನ ಕೊಡುತ್ತದೆ


ಮಾಪನ ಪದ್ಧತಿಯು ಜಗತ್ತಿನಲ್ಲಿ ನಮ್ಮ ಸ್ಥಾನವನ್ನು ತೋರಿಸುವ ಕನ್ನಡಿಯಂತೆ: ಪ್ರಧಾನಿ ನರೇಂದ್ರ ಮೋದಿ

Posted On: 04 JAN 2021 5:10PM by PIB Bengaluru

ಆತ್ಮನಿರ್ಭರ ಭಾರತವು ಪ್ರಮಾಣ ಮತ್ತು ಗುಣಮಟ್ಟ ಎರಡರ ಬಗ್ಗೆಯೂ ಗಮನ ಕೊಡುತ್ತದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಮಾಪನ ಸಮಾವೇಶ 2021 ರಲ್ಲಿ ಅವರು ಮಾತನಾಡುತ್ತಿದ್ದರು, ಸಂದರ್ಭದಲ್ಲಿ ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಪರಮಾಣು ಟೈಮ್ ಸ್ಕೇಲ್ ಮತ್ತು ಭಾರತೀಯ ನಿರ್ದೇಶಕ ದ್ರವ್ಯ ಪ್ರಣಾಲಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ರಾಷ್ಟ್ರೀಯ ಪರಿಸರ ಗುಣಮಟ್ಟ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

"ನಮ್ಮ ಗುರಿಯು ಕೇವಲ ಭಾರತೀಯ ಉತ್ಪನ್ನಗಳೊಂದಿಗೆ ಜಾಗತಿಕ ಮಾರುಕಟ್ಟೆಗಳಿಗೆ ಲಗ್ಗೆ ಹಾಕುವುದು ಮಾತ್ರವಲ್ಲ, ನಾವು ಜನರ ಹೃದಯವನ್ನು ಗೆಲ್ಲಲು ಬಯಸುತ್ತೇವೆ. ಭಾರತೀಯ ಉತ್ಪನ್ನಗಳು ಜಾಗತಿಕವಾಗಿ ಹೆಚ್ಚಿನ ಬೇಡಿಕೆ ಮತ್ತು ಸ್ವೀಕೃತಿಯನ್ನು ಹೊಂದಬೇಕೆಂದು ನಾವು ಬಯಸುತ್ತೇವೆ.” ಎಂದು ಪ್ರಧಾನಿ ಹೇಳಿದರು.

ದಶಕಗಳಿಂದಲೂ ಭಾರತವು ಗುಣಮಟ್ಟ ಮತ್ತು ಅಳತೆಗಾಗಿ ವಿದೇಶಿ ಮಾನದಂಡಗಳನ್ನು ಅವಲಂಬಿಸಿತ್ತು ಎಂದು ಪ್ರಧಾನಿ ಹೇಳಿದರು. ಆದರೆ ಈಗ ಭಾರತದ ವೇಗ, ಪ್ರಗತಿ, ಉನ್ನತಿ, ಚಿತ್ರಣ ಮತ್ತು ಬಲವನ್ನು ನಮ್ಮ ಮಾನದಂಡಗಳಿಂದಲೇ ನಿರ್ಧರಿಸಲಾಗುತ್ತಿದೆ. ಮಾಪನ ವಿಜ್ಞಾನವಾದ ಮಾಪನಶಾಸ್ತ್ರವು ಯಾವುದೇ ವೈಜ್ಞಾನಿಕ ಸಾಧನೆಗೆ ಅಡಿಪಾಯವಾಗಿದೆ ಎಂದು ಅವರು ಹೇಳಿದರು. ದೃಢವಾದ ಮಾಪನ ಪದ್ಧತಿ  ಇಲ್ಲದೆ ಯಾವುದೇ ಸಂಶೋಧನೆ ಮುಂದುವರಿಯಲು ಸಾಧ್ಯವಿಲ್ಲ. ನಮ್ಮ ಸಾಧನೆಗಳು ಸಹ ಕೆಲವು ಪ್ರಮಾಣದ ಮಾಪನಕ್ಕೆ ಒಳಪಟ್ಟಿರುತ್ತವೆ. ವಿಶ್ವದ ವಿಶ್ವಾಸಾರ್ಹತೆಯು ಅದರ ಮಾಪನ ಪದ್ಧತಿಯ ವಿಶ್ವಾಸಾರ್ಹತೆಯ ಮೇಲೆ ಅವಲಂಬಿತವಾಗಿರುತ್ತದೆ. ಮಾಪನಶಾಸ್ತ್ರವು ಜಗತ್ತಿನಲ್ಲಿ ನಮ್ಮ ಸ್ಥಾನವನ್ನು ತೋರಿಸುವ ಕನ್ನಡಿಯಂತಿದೆ ಎಂದು ಅವರು ಹೇಳಿದರು.

ಸ್ವಾವಲಂಬಿ ಭಾರತದ ಗುರಿ ಸಾಧನೆಯು ಪ್ರಮಾಣ ಮತ್ತು ಗುಣಮಟ್ಟವನ್ನು ಒಳಗೊಂಡಿದೆ ಎಂದು ಪ್ರಧಾನಿ ಹೇಳಿದರು. ಕೇವಲ ಭಾರತೀಯ ಉತ್ಪನ್ನಗಳಿಂದ ಜಗತ್ತಿನ ಮಾರುಕಟ್ಟೆಗಳನ್ನು ತುಂಬುವ ಬದಲು, ಭಾರತೀಯ ಉತ್ಪನ್ನಗಳನ್ನು ಖರೀದಿಸುವ ಪ್ರತಿಯೊಬ್ಬ ಗ್ರಾಹಕರ ಹೃದಯವನ್ನು ಗೆಲ್ಲಬೇಕೆಂದು ಅವರು ಕರೆಕೊಟ್ಟರರು. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಜಾಗತಿಕ ಬೇಡಿಕೆಯನ್ನು ಪೂರೈಸುವುದು ಮಾತ್ರವಲ್ಲದೆ ಜಾಗತಿಕವಾಗಿ ಸ್ವೀಕೃತಿಯನ್ನೂ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ಒತ್ತಿ ಹೇಳಿದರು. "ನಾವು ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಆಧಾರಸ್ತಂಭಗಳ ಮೇಲೆ ಬ್ರಾಂಡ್ ಇಂಡಿಯಾವನ್ನು ಬಲಪಡಿಸಬೇಕು" ಎಂದು ಶ್ರೀ ಮೋದಿ ಹೇಳಿದರು.

'ಸರ್ಟಿಫೈಡ್ ರೆಫರೆನ್ಸ್ ಮೆಟೀರಿಯಲ್ ಸಿಸ್ಟಮ್' ಮೂಲಕ ಭಾರಿ ಲೋಹಗಳು, ಕೀಟನಾಶಕಗಳು, ಫಾರ್ಮಾ ಮತ್ತು ಜವಳಿ ಮುಂತಾದ ಕ್ಷೇತ್ರಗಳಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಉದ್ಯಮಕ್ಕೆ ಇಂದು ಭಾರತೀಯ ನಿರ್ದೇಶಕ ದ್ರವ್ಯ ಪ್ರಣಾಲಿಯನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಈಗ ಉದ್ಯಮವು ನಿಯಂತ್ರಣ ಕೇಂದ್ರಿತ ವಿಧಾನದ ಬದಲು ಗ್ರಾಹಕ ಆಧಾರಿತ ವಿಧಾನದತ್ತ ಸಾಗುತ್ತಿದೆ ಎಂದು ಅವರು ಹೇಳಿದರು. ಹೊಸ ಮಾನದಂಡಗಳೊಂದಿಗೆ, ದೇಶಾದ್ಯಂತದ ಜಿಲ್ಲೆಗಳಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಗುರುತನ್ನು ತರುವ ಅಭಿಯಾನ ನಡೆಸಲಾಗುವುದು, ಇದು ನಮ್ಮ ಎಂಎಸ್ಎಂಇ ವಲಯಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುವುದರಿಂದ ಭಾರತಕ್ಕೆ ಬರುವ ದೊಡ್ಡ ವಿದೇಶಿ ಉತ್ಪಾದನಾ ಕಂಪನಿಗಳು ಸ್ಥಳೀಯ ಪೂರೈಕೆ ಸರಪಳಿಯನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಹೊಸ ಮಾನದಂಡಗಳೊಂದಿಗೆ ರಫ್ತು ಮತ್ತು ಆಮದು ಎರಡರ ಗುಣಮಟ್ಟವನ್ನೂ ಖಚಿತಪಡಿಸಲಾಗುವುದು ಎಂದು ಅವರು ಹೇಳಿದರು. ಇದು ಭಾರತದ ಸಾಮಾನ್ಯ ಗ್ರಾಹಕರಿಗೆ ಗುಣಮಟ್ಟದ ಸರಕುಗಳನ್ನು ಒದಗಿಸುತ್ತದೆ ಮತ್ತು ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ಪ್ರಧಾನಿ ತಿಳಿಸಿದರು.

***



(Release ID: 1686214) Visitor Counter : 218