ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ


ರಾಷ್ಟ್ರೀಯ ಅಣು ಕಾಲಮಾಪಕ ಮತ್ತು ಭಾರತೀಯ ನಿರ್ದೇಶಕ್ ದ್ರವ್ಯ ರಾಷ್ಟ್ರಕ್ಕೆ ಸಮರ್ಪಣೆ

ರಾಷ್ಟ್ರೀಯ ಪರಿಸರ ಮಾನದಂಡ ಪ್ರಯೋಗಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ

ವಿದ್ಯಾರ್ಥಿಗಳೊಂದಿಗೆ ಸಂವಾದ, ಭವಿಷ್ಯದ ವಿಜ್ಞಾನಿಗಳಾಗುವಂತೆ ಉತ್ತೇಜಿಸಲು ಸಿಎಸ್ಐಆರ್ ಗೆ ಕರೆ

ಭಾರತೀಯ ನಿರ್ದೇಶಕ ದ್ರವ್ಯದ ಮೂಲಕ ‘ಪ್ರಮಾಣೀಕೃತ ಉಲ್ಲೇಖ ವಸ್ತು ವ್ಯವಸ್ಥೆ’ಯಿಂದ ಭಾರತೀಯ ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಸಹಕಾರಿ

ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕೆಗಳಲ್ಲಿ ‘ಮೌಲ್ಯಸೃಷ್ಟಿ ಚಕ್ರವನ್ನು’ ಉತ್ತೇಜಿಸಲು ವೈಜ್ಞಾನಿಕ ಸಮುದಾಯಕ್ಕೆ ಕರೆ

ಪ್ರಬಲ ಸಂಶೋಧನೆಗಳಿಂದ ಬಲಿಷ್ಠ ಭಾರತ ಬ್ರ್ಯಾಂಡ್ ನಿರ್ಮಾಣ: ಪ್ರಧಾನಮಂತ್ರಿ 

Posted On: 04 JAN 2021 1:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ನೇ ರಾಷ್ಟ್ರೀಯ ಮಾಪನಶಾಸ್ತ್ರ ಶೃಂಗಸಭೆಯ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಅವರು ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಪರಮಾಣು ಕಾಲಮಾಪಕ ಮತ್ತು ಭಾರತೀಯ ನಿರ್ದೇಶಕ ದ್ರವ್ಯ ಪ್ರನಳಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ರಾಷ್ಟ್ರೀಯ  ಪರಿಸರ ಮಾನದಂಡಗಳ ಪ್ರಯೋಗಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸಮಾವೇಶವನ್ನು ನವದೆಹಲಿಯಲ್ಲಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿರಾಷ್ಟ್ರೀಯ ಭೌತಿಕ ಪ್ರಯೋಗಾಲಯ(ಸಿಎಸ್ಐಆರ್-ಎನ್ ಪಿಎಲ್) ಸ್ಥಾಪನೆಯ 75ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿತ್ತು. ಸಮಾವೇಶದ ಘೋಷ ವಾಕ್ಯರಾಷ್ಟ್ರದ ಸಮಗ್ರ ಬೆಳವಣಿಗೆಗೆ ಮಾಪನಶಾಸ್ತ್ರ’’ ಎಂಬುದಾಗಿದೆ. ಕೇಂದ್ರ ಸಚಿವ ಡಾ. ಹರ್ಷವರ್ಧನ್ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಡಾ. ವಿಜಯ್ ರಾಘವನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಹೊಸ ವರ್ಷದಲ್ಲಿ ಎರಡು ಭಾರತೀಯ ಕೋವಿಡ್ ಲಸಿಕೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿರುವುದಕ್ಕಾಗಿ ಭಾರತೀಯ ವಿಜ್ಞಾನಿಗಳ ಶ್ರಮವನ್ನು ಶ್ಲಾಘಿಸಿದರು. ಅವರು ಭಾರತದ ಕೋವಿಡ್ ಲಸಿಕೆ ಕಾರ್ಯಕ್ರಮ ಇಡೀ ವಿಶ್ವದಲ್ಲೇ ಅತಿ ದೊಡ್ಡದು ಮತ್ತು ಅದು ಈಗಷ್ಟೇ ಆರಂಭವಾಗಲಿದೆ ಎಂದರು. ಸಿಎಸ್ಐಆರ್ ಸೇರಿದಂತೆ ದೇಶದ ಎಲ್ಲ ವೈಜ್ಞಾನಿಕ ಸಂಸ್ಥೆಗಳು ದೇಶ ಎದುರಿಸುತ್ತಿರುವ ಪ್ರತಿಯೊಂದು ಸವಾಲಿಗೂ ಪರಿಹಾರಗಳನ್ನು ಕಂಡುಹಿಡಿಯಲು ಒಟ್ಟಾಗಿ ಶ್ರಮಿಸುತ್ತಿವೆ ಎಂದು ಅವುಗಳ ಕಾರ್ಯವನ್ನು ಶ್ಲಾಘಿಸಿದರು.

ಸಿಎಸ್ಐಆರ್ ವಿದ್ಯಾರ್ಥಿಗಳ ಜೊತೆ ಸಂವಾದಗಳನ್ನು ನಡೆಸಬೇಕು ಮತ್ತು ಸಂಸ್ಥೆಯ ಪ್ರಯತ್ನಗಳ ಕುರಿತು ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಮಂತ್ರಿ ಅವರು ಕರೆ ನೀಡಿದರು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ರೂಪುಗೊಳ್ಳಲು ಸ್ಫೂರ್ತಿ ಹಾಗೂ ಉತ್ತೇಜನ ದೊರಕಲಿದೆ ಎಂದು ಹೇಳಿದರು. ದೇಶದ ಅಭಿವೃದ್ಧಿಯ ಮೌಲ್ಯಮಾಪನ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಿಎಸ್ಐಆರ್ ಎನ್ ಪಿಎಲ್ ಸಂಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿನ ಸಮಾವೇಶ ಹಿಂದಿನ ಸಾಧನೆಗಳ ಬಗ್ಗೆ ಚರ್ಚಿಸಲು ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಕೇಂದ್ರ ಮಾಡಿಕೊಳ್ಳಬೇಕಿರುವ ಸಿದ್ಧತೆಗಳಿಗೆ ನೆರವಾಗಲಿದೆ ಎಂದರು. ಅವರು ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಹೊಸ ಮಾನದಂಡಗಳು ಮತ್ತು ಹೊಸ ಬೆಂಚ್ ಮಾರ್ಕ್ ಗೆ ಅನುಗುಣವಾಗಿ ಸಂಸ್ಥೆ ಮುಂದೆ ಬಂದು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಬೇಕಿದೆ ಎಂದು ಅವರು ಕರೆ ನೀಡಿದರು.   

ಭಾರತದ ಸಮಯ ಪಾಲಕವಾಗಿರುವ ಸಿಎಸ್ಐಆರ್-ಎನ್ ಪಿಎಲ್ ಸಂಸ್ಥೆಯ ಮೇಲೆ ಭವಿಷ್ಯದ ಭಾರತವನ್ನು ಬದಲಾಯಿಸುವ ಹೊಣೆಗಾರಿಕೆ ಇದೆ ಎಂದು ಪ್ರಧಾನಮಂತ್ರಿ ಹೇಳಿದರು. ದಶಕಗಳಿಂದ ಭಾರತ ಗುಣಮಟ್ಟ ಮತ್ತು ಅಳತೆಗೆ ವಿದೇಶಿ ಮಾನದಂಡಗಳನ್ನು ಅವಲಂಬಿಸಿತ್ತು ಎಂದ ಅವರು, ಇದೀಗ ಭಾರತ ಕ್ಷಿಪ್ರವಾಗಿ ಪ್ರಗತಿ ಕಾಣುತ್ತಿದ್ದು, ನಮ್ಮದೇ ಆದ ಮಾನದಂಡಗಳನ್ನು ರೂಪಿಸಿಕೊಳ್ಳುವ ಮೂಲಕ ಭಾರತದ ಸಾಮರ್ಥ್ಯ ಮತ್ತು ವರ್ಚಸ್ಸನ್ನು ವೃದ್ಧಿಸಿಕೊಂಡಿದೆ ಎಂದರು. ಮಾಪನಶಾಸ್ತ್ರವಾಗಿರುವ ವಿಜ್ಞಾನ ಅಳತೆಯನ್ನು ಒಳಗೊಂಡಿದ್ದು, ಅದು ಯಾವುದೇ ವೈಜ್ಞಾನಿಕ ಸಾಧನೆಗೆ ತಳಹದಿಯನ್ನು ನಿಗದಿಪಡಿಸುತ್ತದೆ ಎಂದರು. ಅಳತೆ ಇಲ್ಲದೆ ಯಾವುದೇ ಸಂಶೋಧನೆಗಳು ಮುಂದುವರಿಸಲಾಗದು. ನಮ್ಮ ಸಾಧನೆಗಳನ್ನೂ ಸಹ ಯಾವುದಾದರೊಂದು ರೀತಿಯಲ್ಲಿ ಅಳತೆ ಮಾಡಲೇ ಬೇಕಾಗುತ್ತದೆ. ವಿಶ್ವದಲ್ಲಿ ನಮ್ಮ ದೇಶದ ಮೇಲಿನ ವಿಶ್ವಾಸಾರ್ಹತೆ ತನ್ನ ಮಾಪನಶಾಸ್ತ್ರದ ವಿಶ್ವಾಸಾರ್ಹತೆಯನ್ನು ಆಧರಿಸಿರುತ್ತದೆ ಎಂದು ಅವರು ಹೇಳಿದರು. ಮಾಪನಶಾಸ್ತ್ರ ಜಗತ್ತಿನಲ್ಲಿ ನಾವು ಎಲ್ಲಿ ನಿಂತಿದ್ದೇವೆ ಎಂಬುದನ್ನು ತೋರಿಸುವ ಕನ್ನಡಿಯಾಗಿದೆ ಮತ್ತು ಸುಧಾರಣೆಗೆ ಅವಕಾಶವನ್ನು ಕಲ್ಪಿಸಿ ಕೊಡಲಿದೆ ಎಂದರು. ಸ್ವಾವಲಂಬಿ ಭಾರತ ಗುರಿ ಸಾಧನೆಗೆ ನಾವು ಗುಣಮಟ್ಟದ ಮತ್ತು ಪ್ರಮಾಣದ ಬಗ್ಗೆ ಎಚ್ಚರವಹಿಸಬೇಕಿದೆ ಎಂದು ಅವರು ನೆನಪು ಮಾಡಿಕೊಟ್ಟರು. ಜಗತ್ತಿನ ಎಲ್ಲೆಡೆ ಭಾರತೀಯ ಉತ್ಪನ್ನಗಳನ್ನು ಕೇವಲ ತುಂಬದೆ, ನಮ್ಮ ಉತ್ಪನ್ನಗಳನ್ನು ಖರೀದಿಸುವ ಪ್ರತಿಯೊಬ್ಬ ಗ್ರಾಹಕರ ಹೃದಯಗಳನ್ನು ಗೆಲ್ಲುವಂತಾಗಬೇಕು ಎಂದರು. ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಖಾತ್ರಿಪಡಿಸುವ ಜೊತೆಗೆ ಅವುಗಳಿಗೆ ಜಾಗತಿಕ ಬೇಡಿಕೆ ಉಂಟಾಗುವಂತೆ ಹಾಗೂ ಜಾಗತಿಕವಾಗಿ ಸ್ವೀಕೃತಿಯಾಗುವಂತೆ ನೋಡಿಕೊಳ್ಳಲು ಹೆಚ್ಚಿನ ಒತ್ತು ನೀಡಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.

ಪ್ರಧಾನಮಂತ್ರಿ ಅವರು ಇಂದು ಭಾರತೀಯ ನಿರ್ದೇಶಕ ದ್ರವ್ಯವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಭಾರೀ ಲೋಹಗಳು, ರಾಸಾಯನಿಕ ಫಾರ್ಮ ಮತ್ತು ಜವಳಿಯಲ್ಲಿ ನಿರ್ದಿಷ್ಟಪ್ರಮಾಣೀಕೃತ ಉಲ್ಲೇಖ ವಸ್ತು ವ್ಯವಸ್ಥೆಮೂಲಕ ಗುಣಮಟ್ಟದ ಉತ್ಪನ್ನಗಳನ್ನು ಸಿದ್ಧಪಡಿಸಲು ಉದ್ಯಮಗಳಿಗೆ ನೆರವಾಗಲಿದೆ. ಇದೀಗ ಉದ್ಯಮ ನಿಯಂತ್ರಣ ಕೇಂದ್ರಿತ ಮನೋಭಾವದಿಂದ ಗ್ರಾಹಕಸ್ನೇಹಿ ಮನೋಭಾವದತ್ತ ಸಾಗುತ್ತಿದೆ ಎಂದು ಅವರು ಹೇಳಿದರು. ಹೊಸ ಮಾನದಂಡಗಳೊಂದಿಗೆ ದೇಶಾದ್ಯಂತ ಜಿಲ್ಲೆಗಳಲ್ಲಿನ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಡುವಂತಾಗಲು ಅಭಿಯಾನವನ್ನು ಕೈಗೊಳ್ಳಲಾಗಿದೆ. ಇದು ವಿಶೇಷವಾಗಿ ನಮ್ಮ ಎಂಎಸ್ಎಂಇ ವಲಯಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುವುದರಿಂದ ಹೆಚ್ಚಿನ ವಿದೇಶಿ ಉತ್ಪಾದನಾ ಕಂಪನಿಗಳು ಭಾರತಕ್ಕೆ ಬಂದು ಇಲ್ಲಿನ ಸ್ಥಳೀಯ ಪೂರೈಕೆ ಸರಣಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ಆಮದು ಮತ್ತು ರಫ್ತು ಎರಡರಲ್ಲೂ ಹೊಸ ಮಾನದಂಡಗಳ ಗುಣಮಟ್ಟವನ್ನು ಖಾತ್ರಿಪಡಿಸಬೇಕಿದೆ ಎಂದು ಹೇಳಿದರು. ಭಾರತದ ಸಾಮಾನ್ಯ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ಒದಗಿಸಬೇಕು ಮತ್ತು ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಹೇಳಿದರು.  

ಐತಿಹಾಸಿಕವಾಗಿ ಯಾವುದೇ ರಾಷ್ಟ್ರ ಪ್ರಗತಿ ಸಾಧಿಸಿದರೂ ಅದು ವಿಜ್ಞಾನದ ಉತ್ತೇಜನಕ್ಕೆ ಎಷ್ಟು ಪ್ರಯತ್ನಗಳನ್ನು ನಡೆಸಿದೆ ಎಂಬುದನ್ನು ನೇರವಾಗಿ ಅವಲಂಬಿಸಿರುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಜ್ಞಾನ, ತಂತ್ರಜ್ಞಾನ, ಉದ್ಯಮ ಮತ್ತು ಕೈಗಾರಿಕೆಗಳಲ್ಲಿಮೌಲ್ಯ ಸೃಷ್ಟಿ ಚಕ್ರವನ್ನುಸೃಷ್ಟಿಸಬೇಕಾಗಿದೆ ಎಂದು ಹೇಳಿದರು. ಕುರಿತು ಮತ್ತಷ್ಟು ವಿವರಣೆ ನೀಡಿದ ಪ್ರಧಾನಮಂತ್ರಿ, ವೈಜ್ಞಾನಿಕ ಆವಿಷ್ಕಾರಗಳಿಂದ ತಂತ್ರಜ್ಞಾನ ಸೃಷ್ಟಿಯಾಗುತ್ತದೆ ಮತ್ತು ತಂತ್ರಜ್ಞಾನದಿಂದ ಕೈಗಾರಿಕಾ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಉದ್ಯಮ ಹೊಸ ಸಂಶೋಧನೆಗಾಗಿ ವಿಜ್ಞಾನದಲ್ಲಿ ಮತ್ತಷ್ಟು ಹಣವನ್ನು ಹೂಡಿಕೆ ಮಾಡುತ್ತದೆ. ಚಕ್ರ ಸದಾ ನಮ್ಮನ್ನು ಹೊಸ ಸಾಧ್ಯತೆಗಳ ನಿಟ್ಟಿನಲ್ಲಿ ಕೊಂಡೊಯ್ಯುತ್ತದೆ. ಮೌಲ್ಯ ಸರಣಿಯಲ್ಲಿ ಸಿಎಸ್ಐಆರ್-ಎನ್ ಪಿಎಲ್ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.  

ವಿಜ್ಞಾನದ ಮೌಲ್ಯ ಸೃಷ್ಟಿ ಪ್ರಕ್ರಿಯೆ ಇಂದಿನ ಜಗತ್ತಿನಲ್ಲಿ ಸಾಮೂಹಿಕ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಆತ್ಮನಿರ್ಭರ ಭಾರತ ಗುರಿ ಸಾಧನೆ ನಿಟ್ಟಿನಲ್ಲಿ ದೇಶ ಮುನ್ನಡೆಯಲು ಸಹಕಾರಿಯಾಗುತ್ತದೆ. ಇದರಲ್ಲಿ ಸಿಎಸ್ಐಆರ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.

ಸಿಎಸ್ಐಆರ್-ಎನ್ ಪಿಎಲ್ ರಾಷ್ಟ್ರೀಯ ಅಣು ಸಮಯ ಮಾಪಕವನ್ನು ಇಂದು ಮನುಕುಲಕ್ಕೆ ಅರ್ಪಣೆ ಮಾಡಿದ ಪ್ರಧಾನಮಂತ್ರಿ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಭಾರತ ಸಮಯವನ್ನು ನ್ಯಾನೊ ಸೆಕೆಂಡ್ ಗಳ ಪ್ರಮಾಣದಲ್ಲಿ ಅಳೆಯುವಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ಅವರು ಹೇಳಿದರು. 2.8 ನ್ಯಾನೊ ಸೆಕೆಂಡ್ ಗಳಲ್ಲಿ ಖಚಿತ ಮಟ್ಟವನ್ನು ಸಾಧಿಸುವುದು ಭಾರೀ ಸಾಮರ್ಥ್ಯದ್ದಾಗಿದೆ. ಇದೀಗ ಭಾರತೀಯ ನಿರ್ದಿಷ್ಟ ಸಮಯ, ಅಂತಾರಾಷ್ಟ್ರೀಯ ನಿರ್ದಿಷ್ಟ ಸಮಯಕ್ಕೆ ಹೊಂದಾಣಿಕೆಯಾಗುತ್ತಿದ್ದು, ಅದರ ಖಚಿತತೆ 3 ನ್ಯಾನೊ ಸೆಕೆಂಡಿಗೂ ಕಡಿಮೆ ಇದೆ. ಇದರಿಂದ ಸ್ಪರ್ಧಾತ್ಮಕ ತಂತ್ರಜ್ಞಾನ, ಆಧುನಿಕ  ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್, ರೈಲ್ವೆ, ರಕ್ಷಣಾ, ಆರೋಗ್ಯ, ದೂರಸಂಪರ್ಕ, ಹವಾಮಾನ ಮುನ್ನೆಚ್ಚರಿಕೆ, ವಿಪತ್ತುಗಳ ನಿರ್ವಹಣೆ ಮತ್ತು ಇತರೆ ವಲಯ ಸೇರಿದಂತೆ ಇಸ್ರೋದಂತಹ ಸಂಸ್ಥೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಮತ್ತು ಸಾಧನೆಯಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.

ಕೈಗಾರಿಕೆಗಳು 4.0ಅಲ್ಲಿ ಭಾರತದ ಪಾತ್ರದ ಬಲವರ್ಧನೆಯಲ್ಲಿ ಸಮಯ ಮಾಪಕದ ಪಾತ್ರವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಭಾರತ ಪರಿಸರ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನದತ್ತ ಸಾಗಿದೆ ಎಂದರು. ಆದರೆ ವಾಯು ಮಟ್ಟ ಮತ್ತು ಮಾಲಿನ್ಯ ಮಟ್ಟ ಅಳೆಯುವ ಉಪಕರಣ ಮತ್ತು ತಂತ್ರಜ್ಞಾನದಲ್ಲಿ ಭಾರತ ಇತರೆಯವರ ಮೇಲೆ ಅವಲಂಬಿಸಿದೆ. ಇದೀಗ ವಲಯದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿರುವುದರಿಂದ ಮಾಲಿನ್ಯ ನಿಯಂತ್ರಣಕ್ಕೆ ಅತ್ಯಂತ ಪರಿಣಾಮಕಾರಿ ಹಾಗೂ ಕಡಿಮೆ ವೆಚ್ಚದ ಸಾಧನಗಳನ್ನು ಉತ್ಪಾದಿಸಲು ನೆರವಾಗಲಿದೆ ಎಂದರು. ಇದರಿಂದ ವಾಯು ಗುಣಮಟ್ಟ ಮತ್ತು ಮಾಲಿನ್ಯ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಾಗತಿಕ ತಾಂತ್ರಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ವೃದ್ಧಿಯಾಗಲಿದೆ. ನಮ್ಮ ವಿಜ್ಞಾನಿಗಳ ನಿರಂತರ ಪ್ರಯತ್ನಗಳ ಫಲವಾಗಿ ಇದನ್ನು ಸಾಧಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು ಹಲವು ಜ್ಞಾನಾಧಾರಿತ ವಲಯಗಳಲ್ಲಿ ಸಂಶೋಧನೆಗಳ ಪಾತ್ರಗಳ ಕುರಿತು ಸುದೀರ್ಘವಾಗಿ ವಿವರಿಸಿದರು. ಅವರು ಯಾವುದೇ ಸಮಾಜ ಪ್ರಗತಿಯಾಗಬೇಕಾದರೆ ಸಂಶೋಧನೆ ಸ್ವಾಭಾವಿಕ ಹವ್ಯಾಸವಾಗುವ ಜೊತೆಗೆ ಅದು ನೈಸರ್ಗಿಕ ಪ್ರಕ್ರಿಯೆಯೂ ಆಗಿರಬೇಕು ಎಂದರು. ಸಂಶೋಧನೆಗಳ ಪರಿಣಾಮ ವಾಣಿಜ್ಯ ಅಥವಾ ಸಾಮಾಜಿಕದ್ದಾಗಿರಬಹುದು ಮತ್ತು ಸಂಶೋಧನೆ ನಮ್ಮ ಜ್ಞಾನ ಮತ್ತು ಅರ್ಥೈಸಿಕೊಳ್ಳುವ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹಾಯಕವಾಗುತ್ತದೆ. ಭವಿಷ್ಯದ ದಿಕ್ಸೂಚಿಗಳನ್ನು ಸದಾ ನಾವು ನಿರೀಕ್ಷಿಸಲಾಗದು. ಆದರೆ ಸಂಶೋಧನೆಗಳ ಅಂತಿಮ ಗುರಿಯನ್ನು ನಿರ್ಧರಿಸಿಕೊಳ್ಳಬೇಕಾಗುತ್ತದೆ. ಒಂದೇ ಒಂದು ಖಚಿತ ಅಂಶವೆಂದರೆ ಸಂಶೋಧನೆಗಳು ಜ್ಞಾನದ ಹೊಸ ಪಾಠಗಳನ್ನು ಕಲಿಸಲಿದ್ದು, ಅವು ಎಂದಿಗೂ ವ್ಯರ್ಥವಾಗುವುದಿಲ್ಲ. ಪ್ರಧಾನಮಂತ್ರಿ ಅವರು ವಂಶವಾಹಿಯ ಪಿತಾಮಹ ಮಂಡೇಲ್ ಮತ್ತು ನಿಕೊಲೋಸ್ ತೆಲ್ಸಾ ಅವರ ಉದಾಹರಣೆಗಳನ್ನು ನೀಡುತ್ತಾ ಅವರ ಕಾರ್ಯದ ಸಾಮರ್ಥ್ಯವನ್ನು ತುಂಬಾ ತಡವಾಗಿ ಗುರುತಿಸಲಾಯಿತು ಎಂದರು. ಹಲವು ಬಾರಿ ಸಂಶೋಧನೆಗಳು ತಕ್ಷಣದ ಗುರಿಗಳನ್ನು ಈಡೇರಿಸುವುದಿಲ್ಲ. ಆದರೆ ಅದೇ ಸಂಶೋಧನೆ ಮತ್ತೊಂದು ವಲಯದಲ್ಲಿ ಮಹತ್ವದ ದಿಕ್ಕು ಬದಲಿಸಬಹುದು. ಪ್ರಧಾನಮಂತ್ರಿ ಅವರು, ಜಗದೀಶ್ ಚಂದ್ರ ಬೋಸ್ ಅವರ ಉದಾಹರಣೆಯನ್ನು ನೀಡುತ್ತಾ ಅಂಶವನ್ನು ವಿಸ್ತೃತವಾಗಿ ವಿವರಿಸಿದರು. ಅವರ ಮೈಕ್ರೋವೇವ್ಸ್ ಸಿದ್ಧಾಂತ ವಾಣಿಜ್ಯ ರೂಪದಲ್ಲಿ ಮುಂದುವರಿಸಿಕೊಂಡು ಹೋಗಲಿಲ್ಲ. ಆದರೆ ಇಂದು ಇಡೀ ರೇಡಿಯೋ ಸಂವಹನ ವ್ಯವಸ್ಥೆ ಅದನ್ನು ಆಧರಿಸಿದ ಎಂದು ಹೇಳಿದರು. ಪ್ರಧಾನಮಂತ್ರಿ ಅವರು, ಜಾಗತಿಕ ಮಹಾಯುದ್ಧದ ವೇಳೆ ಹಲವು ವಲಯಗಳಲ್ಲಿ ಕ್ರಾಂತಿ ಉಂಟುಮಾಡಿದ ಸಂಶೋಧನೆಗಳ ಉದಾಹರಣೆ ನೀಡಿದರು. ಉದಾಹರಣೆಗೆ ಡ್ರೋಣ್ ಗಳನ್ನು ಯುದ್ಧಕ್ಕಾಗಿ ಸೃಷ್ಟಿಸಲಾಯಿತು. ಆದರೆ ಇಂದು ನಾವು ಅವುಗಳನ್ನು ಫೋಟೋ ಶೂಟ್ ಗಳಿಗಾಗಿ ಬಳಕೆ ಮಾಡುತ್ತಿದ್ದೇವೆ. ಹಾಗಾಗಿಯೇ ನಮ್ಮ ವಿಜ್ಞಾನಿಗಳು, ವಿಶೇಷವಾಗಿ ಯುವ ವಿಜ್ಞಾನಿಗಳು, ಸಂಶೋಧನಾ ಸಾಧ್ಯತೆಗಳ ಅನ್ವೇಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಕ್ಷೇತ್ರದ ಹೊರಗೆ ಸಂಶೋಧನೆಗಳ ಸಾಧ್ಯತೆಯನ್ನು ಬಳಕೆ ಮಾಡುವುದು ಸದಾ ಅವರ ಮುಂದಿರಬೇಕು.

ಪ್ರಧಾನಮಂತ್ರಿ ಅವರು, ಸಣ್ಣ ಸಂಶೋಧನೆಗಳು ಹೇಗೆ ಜಗತ್ತಿನ ಆಯಾಮವನ್ನು ಬದಲಿಸಿವೆ ಎಂದು ವಿವರಿಸುತ್ತಾ ವಿದ್ಯುಚ್ಛಕ್ತಿಯ ಉದಾಹರಣೆಯನ್ನು ನೀಡಿದರು. ಇಂದು ಎಲ್ಲವೂ ವಿದ್ಯುತ್ ನಿಂದ ಓಡುತ್ತಿದೆ. ಅದು ಸಾರಿಗೆ, ಸಂವಹನ, ಉದ್ಯಮ ಅಥವಾ ಪ್ರತಿ ದಿನದ ಜೀವನ. ಎಲ್ಲವೂ ಅದನ್ನು ಅವಲಂಬಿಸಿದೆ. ಅಂತೆಯೇ ಸೆಮಿ ಕಂಡೆಕ್ಟರ್ ನಂತಹ ಸಂಶೋಧನೆಗಳು ನಮ್ಮ ಜೀವನವನ್ನು ಡಿಜಿಟಲ್ ಕ್ರಾಂತಿಯ ಮೂಲಕ ಶ್ರೀಮಂತಗೊಳಿಸಿವೆ. ಅಂತಹ ಹಲವು ಸಾಧ್ಯತೆಗಳು ನಮ್ಮ ಯುವ ಸಂಶೋಧಕರ ಮುಂದಿದ್ದು, ಅವರು ತಮ್ಮ ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ಸಂಪೂರ್ಣ ವಿಭಿನ್ನ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭವಿಷ್ಯಕ್ಕೆ ಸಿದ್ಧವಾದ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಜಾಗತಿಕ ಆವಿಷ್ಕಾರಿ ಶ್ರೇಯಾಂಕದಲ್ಲಿ ಭಾರತ ಅಗ್ರ 50 ಗುಂಪಿಗೆ ಸೇರ್ಪಡೆಯಾಗಿದೆ ಮತ್ತು ವಿಜ್ಞಾನ ಹಾಗೂ ಇಂಜಿನಿಯರಿಂಗ್ ಪ್ರಕಟಣೆಗಳಲ್ಲಿ ಭಾರತ ಮೂರನೇ ಸ್ಥಾನ ತಲುಪಿದೆ. ಅದು ನಾವು ಮೂಲ ಸಂಶೋಧನೆಗೆ ಎಷ್ಟು ಒತ್ತು ನೀಡುತ್ತಿದ್ದೇವೆ ಎಂಬುದನ್ನು ತೋರುತ್ತದೆ. ಕೈಗಾರಿಕೆಗಳು ಮತ್ತು ಸಂಸ್ಥೆಗಳ ನಡುವಿನ ಸಹಭಾಗಿತ್ವ ಬಲವರ್ಧನೆಗೊಳಿಸಲಾಗುತ್ತಿದೆ. ಜಗತ್ತಿನ ಬಹುತೇಕ ಎಲ್ಲ ದೊಡ್ಡ ಕಂಪನಿಗಳು ಭಾರತದಲ್ಲಿ ತಮ್ಮ ಸಂಶೋಧನಾ ಸೌಕರ್ಯಗಳನ್ನು ಸ್ಥಾಪಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಅಂತಹ ಸೌಕರ್ಯಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.

ಭಾರತೀಯ ಯುವ ಜನಾಂಗಕ್ಕೆ ಸಂಶೋಧನೆ ಮತ್ತು ಆವಿಷ್ಕಾರಗಳ ಸಾಧ್ಯತೆಗಳು ಸೀಮಾತೀತವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಆದ್ದರಿಂದ ಅನುಶೋಧನೆಗಳ ಜೊತೆಗೆ ಆವಿಷ್ಕಾರಗಳಿಗೂ ಸಾಂಸ್ಥಿಕ ರೂಪ ನೀಡುವುದು ಅಷ್ಟೇ ಸಮಾನವಾಗಿ ಆಗಬೇಕಿದೆ. ನಮ್ಮ ಯುವಕರು ನಮ್ಮ ಬೌದ್ಧಿಕ ಸಂಪತ್ತನ್ನು ಹೇಗೆ ರಕ್ಷಿಸಿ ಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಹೆಚ್ಚಿನ ಸಂಖ್ಯೆಯಲ್ಲಿ ಪೇಟೆಂಟ್ ಗಳನ್ನು ಪಡೆದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ನೆನಪಿಸಿ ಕೊಳ್ಳಬೇಕು. ನಮ್ಮ ಸಂಶೋಧನೆ ಎಷ್ಟು ಬಲಿಷ್ಠ ಮತ್ತು ಮುಂಚೂಣಿಯಲ್ಲಿರುತ್ತದೋ ಅದೇ ರೀತಿ ನಾವು ಹಲವು ವಲಯಗಳಲ್ಲಿ ಪ್ರಬಲವಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ. ಇದರಿಂದಾಗಿ ಬಲಿಷ್ಠ ಇಂಡಿಯಾ ಬ್ರ್ಯಾಂಡ್ ನಿರ್ಮಾಣಕ್ಕೆ ಮುಂದಡಿ ಇಟ್ಟಂತಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ವಿಜ್ಞಾನಿಗಳನ್ನು ಕರ್ಮಯೋಗಿಗಳು ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಅವರು ಪ್ರಯೋಗಾಲಯಗಳಲ್ಲಿ ಸಂತರ ರೀತಿ ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ 130 ಕೋಟಿ ಭಾರತೀಯರ ಭರವಸೆ ಮತ್ತು ಆಶೋತ್ತರಗಳು ಅವರ ಮೇಲಿವೆ ಎಂದು ಹೇಳಿದರು.

***(Release ID: 1685971) Visitor Counter : 356