ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ಪ್ರಗತಿ 34ನೇ ಸಂವಾದ

Posted On: 30 DEC 2020 7:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪ್ರಗತಿ 34ನೇ ಸಂವಾದದ ಅಧ್ಯಕ್ಷತೆ ವಹಿಸಿದ್ದರು. ಇಂದಿನ ಸಭೆಯಲ್ಲಿ, ವಿವಿಧ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಕುಂದುಕೊರತೆಗಳ ಬಗ್ಗೆ ಪರಾಮರ್ಶಿಸಲಾಯಿತು. ರೈಲ್ವೆ ಸಚಿವಾಲಯ, ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಒಟ್ಟು1 ಲಕ್ಷ ಕೋಟಿ ರೂಪಾಯಿಗಳ ಈ ಯೋಜನೆಗಳು ಹತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಾಸ್ಥಾನ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಗುಜರಾತ್ ಮತ್ತು ದಾದರ್ ಮತ್ತು ನಗರ ಹವೇಲಿಗೆ ಸೇರಿದ್ದಾಗಿವೆ. 
ಈ ಸಂವಾದದ ವೇಳೆ, ಆಯುಷ್ಮಾನ್ ಭಾರತ ಮತ್ತು ಜಲ್ ಜೀವನ ಅಭಿಯಾನ ಕಾರ್ಯಕ್ರಮಗಳ ಪರಾಮರ್ಶೆಯನ್ನೂ ನಡೆಸಲಾಯಿತು. ಅಲ್ಲದೆ ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನೂ ಕೈಗೆತ್ತಿಕೊಳ್ಳಲಾಯಿತು.
ಪ್ರಧಾನಮಂತ್ರಿಯವರು ಕುಂದುಕೊರತೆಗಳಿಗೆ ತ್ವರಿತವಾಗಿ ಸಮಗ್ರ ಪರಿಹಾರ ಒದಗಿಸುವುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.  ಪರಾಮರ್ಶಿಸಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿಯವರು ಬಾಕಿ ಇರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರದ ಖಾತ್ರಿ ಪಡಿಸುವಂತೆ ಮತ್ತು ಗಡುವಿನ ಒಳಗೆ ಪೂರ್ಣಗೊಳಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.  ಎಲ್ಲಾ ರಾಜ್ಯಗಳು ಆಯುಷ್ಮಾನ್ ಭಾರತ್‌ ನಲ್ಲಿ ಶೀಘ್ರವೇ ಶೇ.100ರಷ್ಟು ದಾಖಲಾತಿಗಾಗಿ ಶ್ರಮಿಸಬೇಕು ಎಂದು ಹೇಳಿದರು. ಜಲ ಜೀವನ್ ಅಭಿಯಾನದ ಅಡಿಯಲ್ಲಿ ಅಭಿಯಾನದೋಪಾದಿಯಲ್ಲಿ ಗುರಿಗಳನ್ನು ಸಾಧಿಸಲು ಮಾರ್ಗಸೂಚಿಯನ್ನು ರೂಪಿಸಲು ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸಿದರು.
ಕಳೆದ 33 ಪ್ರಗತಿ ಸಂವಾದಗಳಲ್ಲಿ, 50 ಕಾರ್ಯಕ್ರಮಗಳು/ಯೋಜನೆಗಳು ಮತ್ತು 18 ವಲಯಗಳ ಕುಂದುಕೊರತೆಗಳ ಜೊತೆಗೆ 280 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 

 

*****

 (Release ID: 1684862) Visitor Counter : 49