ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಕಿಸಾನ್ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 18 DEC 2020 6:25PM by PIB Bengaluru

ನಮಸ್ಕಾರ,

ಮಧ್ಯಪ್ರದೇಶದ ಕಠಿಣ ದುಡಿಮೆಗಾರ ರೈತ ಸಹೋದರರಿಗೆ ಮತ್ತು ಸಹೋದರಿಯರಿಗೆ ನನ್ನ ಶುಭಾಶಯಗಳು! ಮಧ್ಯಪ್ರದೇಶದ ವಿವಿಧ ಮೂಲೆಗಳಿಂದ ವಿಶೇಷ ಕಾರ್ಯಕ್ರಮಕ್ಕಾಗಿ ರೈತ ಸ್ನೇಹಿತರು ಇಲ್ಲಿ ಸೇರಿದ್ದೀರಿ. ಬಹಳಷ್ಟು ರೈತರು ಬಂದಿದ್ದಾರೆ. ಸಾವಿರಾರು ರೈತ ಸಹೋದರರು ಮತ್ತು ಸಹೋದರಿಯರು ನಮ್ಮೊಂದಿಗೆ ಡಿಜಿಟಲ್ ಮೂಲಕ ಸಂಪರ್ಕಿಸಲ್ಪಟ್ಟಿದ್ದಾರೆ. ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ಹಿಂದೆ ಮಧ್ಯಪ್ರದೇಶದ ರೈತರು ಆಲಿಕಲ್ಲುಗಳು ಮತ್ತು ನೈಸರ್ಗಿಕ ವಿಕೋಪದಿಂದ ನಷ್ಟ ಅನುಭವಿಸಿದ್ದಾರೆ. ಮಧ್ಯಪ್ರದೇಶದ ಇಂತಹ 35 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ  ಹದಿನಾರು ನೂರು ಕೋ.ರೂ.ಗಳನ್ನು ಕಾರ್ಯಕ್ರಮದಲ್ಲಿ ವರ್ಗಾಯಿಸಲಾಗುತ್ತಿದೆ. ಅಲ್ಲಿ ಮಧ್ಯವರ್ತಿಗಳಿಲ್ಲ ಮತ್ತು ಕಮಿಶನ್ ಕೂಡಾ ಇಲ್ಲ. ಕಡಿತ ಕೂಡಾ ಇಲ್ಲ. ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಇದೆಲ್ಲ ಸಾಧ್ಯವಾಗಿರುವುದು ತಂತ್ರಜ್ಞಾನದ ಮೂಲಕ. ಕಳೆದ 5-6 ವರ್ಷಗಳಲ್ಲಿ ಭಾರತದಲ್ಲಿ ರೂಪಿಸಲಾದ ಆಧುನಿಕ ವ್ಯವಸ್ಥೆಯನ್ನು ಇಂದು ವಿಶ್ವದಾದ್ಯಂತ ಚರ್ಚಿಸಲಾಗುತ್ತಿದೆ ಮತ್ತು ನಮ್ಮ ದೇಶದ ಯುವ ಪ್ರತಿಭೆ ಇದಕ್ಕೆ ಬಹಳ ದೊಡ್ಡ ಕಾಣಿಕೆ ನೀಡಿದೆ.

ಸ್ನೇಹಿತರೇ,

ರೈತರ ಕ್ರೆಡಿಟ್ ಕಾರ್ಡ್ ಗಳನ್ನು ಕೂಡಾ ಇಂದು ಕಾರ್ಯಕ್ರಮದಲ್ಲಿ  ಹಲವಾರು ರೈತರಿಗೆ ನೀಡಲಾಗುತ್ತಿದೆ. ಮೊದಲು ರೈತರ ಕ್ರೆಡಿಟ್ ಕಾರ್ಡುಗಳು ಎಲ್ಲರಿಗೂ ದೊರೆಯುತ್ತಿರಲಿಲ್ಲ. ನಮ್ಮ ಸರಕಾರ ಪ್ರತಿಯೊಬ್ಬ ರೈತರಿಗೂ ಕ್ರೆಡಿಟ್ ಕಾರ್ಡ್ ಲಭ್ಯವಾಗಬೇಕು ಎಂದು ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿತು. ಈಗ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿ ಸುಲಭದಲ್ಲಿ ಬಂಡವಾಳ ಲಭಿಸುತ್ತಿದೆ. ಇತರರಿಂದ ಹೆಚ್ಚು ಬಡ್ಡಿಯಲ್ಲಿ ಹಣ ಸಾಲ ಪಡೆಯುವ ಪರಿಸ್ಥಿತಿಯಿಂದ ಅವರು ಮುಕ್ತರಾಗಿದ್ದಾರೆ

ಸ್ನೇಹಿತರೇ,

ಇಂದು ಕಾರ್ಯಕ್ರಮದಲ್ಲಿ, ಹಲವಾರು ಶೀತಲ ದಾಸ್ತಾನು ಮೂಲಸೌಕರ್ಯ ಮತ್ತು ಇತರ ಸೌಲಭ್ಯಗಳನ್ನು ಒಂದೋ ಉದ್ಘಾಟಿಸಲಾಗಿದೆ ಇಲ್ಲವೇ ಅವುಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ರೈತರು ಎಷ್ಟೇ ಕಷ್ಟಪಟ್ಟರೂ, ಅಲ್ಲಿ ಹಣ್ಣುಗಳ, ತರಕಾರಿಗಳ ಅಥವಾ ಆಹಾರ ಧಾನ್ಯಗಳ ದಾಸ್ತಾನಿಗೆ ಸೂಕ್ತ ಸೌಲಭ್ಯಗಳು ಇಲ್ಲದಿದ್ದರೆ, ಅದು ಭಾರೀ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದು ವಾಸ್ತವ. ಮತ್ತು ಇದರಿಂದ ನಷ್ಟಕ್ಕೀಡಾಗುವವರು ರೈತರು ಮಾತ್ರವಲ್ಲ, ಇಡೀ ಭಾರತವೇ ನಷ್ಟವನ್ನು ಹೊರಬೇಕಾಗುತ್ತದೆ. ಒಂದು ಅಂದಾಜಿನ ಪ್ರಕಾರ ಸುಮಾರು 1 ಲಕ್ಷ ಕೋ.ರೂ. ಮೌಲ್ಯದ ಹಣ್ಣುಗಳು, ತರಕಾರಿಗಳು, ಆಹಾರಧಾನ್ಯಗಳು ಪ್ರತೀ ವರ್ಷ ಹಾಳಾಗುತ್ತಿವೆ. ಮೊದಲು ಬಗ್ಗೆ ಬಹಳಷ್ಟು ಭಿನ್ನಾಭಿಪ್ರಾಯಗಳು ಇದ್ದವು. ಈಗ ನಮ್ಮ ಆದ್ಯತೆ ಎಂದರೆ ಹೊಸ ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸುವುದು, ಶೀತಲ ದಾಸ್ತಾನುಗಾರಗಳ ದೊಡ್ಡ ಜಾಲವನ್ನು ರಚಿಸುವುದು ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ಒದಗಿಸುವುದು. ಆಧುನಿಕ ದಾಸ್ತಾನು ಸೌಲಭ್ಯಗಳನ್ನು, ಶೀತಲ ದಾಸ್ತಾನುಗಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಮತ್ತು ಹೊಸ ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸಲು ಕೊಡುಗೆ ನೀಡಲು ಮುಂದೆ ಬರಬೇಕು ಎಂದು ನಾನು ಸಾಂಸ್ಥಿಕ ವಿಶ್ವಕ್ಕೆ ಮನವಿ ಮಾಡುತ್ತೇನೆ. ನಾವು ಎಲ್ಲವನ್ನೂ ರೈತರಿಗೆ ಅವರೇ ಮಾಡಬೇಕು ಎಂದು ಆಶಿಸುವುದು ಸೂಕ್ತವಲ್ಲ. ನಿಮ್ಮ ಗಳಿಕೆ  ಸ್ವಲ್ಪ ಕಡಿಮೆಯಾಗಬಹುದು, ಆದರೆ ಅದರಿಂದ ರೈತರಿಗೆ ಲಾಭವಾಗಲಿದೆ, ಬಡವರಿಗೆ ಮತ್ತು ದೇಶದ ಗ್ರಾಮಗಳಿಗೆ ಒಳಿತಾಗಲಿದೆ.  

ಸ್ನೇಹಿತರೇ,

ಭಾರತದ ಕೃಷಿ ಮತ್ತು ರೈತರು ಇನ್ನು ಹಿಂದುಳಿದ ಸ್ಥಿತಿಯಲ್ಲಿಯೇ ಬದುಕುವಂತಾಗಬಾರದು. ಅಭಿವೃದ್ಧಿ ಹೊಂದಿದ ದೇಶಗಳ ರೈತರಿಗೆ ದೊರೆಯುತ್ತಿರುವ ಆಧುನಿಕ ಸೌಲಭ್ಯಗಳು ಭಾರತೀಯ ರೈತರಿಗೂ ದೊರೆಯುವಂತಾಗಬೇಕು. ಅದರಲ್ಲಿ ಇನ್ನು ಯಾವುದೇ ವಿಳಂಬ ಸಲ್ಲದು. ಸಮಯ ನಮಗಾಗಿ ಕಾಯುತ್ತಾ ನಿಲ್ಲುವುದಿಲ್ಲ. ಅತ್ಯಂತ ತ್ವರಿತಗತಿಯಿಂದ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ, ಭಾರತದಲ್ಲಿ ರೈತರು ಸೌಲಭ್ಯಗಳಿಲ್ಲದೆ ಮತ್ತು ಆಧುನಿಕ ವಿಧಾನಗಳಿಲ್ಲದೆ ಅಸಹಾಯಕರಾಗಬೇಕಾದ ಸ್ಥಿತಿಯನ್ನು ನಾವು ಒಪ್ಪಲಾಗದು. ಈಗಾಗಲೇ ತುಂಬಾ ತಡವಾಗಿದೆ. ನಾವು 25-30 ವರ್ಷಗಳ ಹಿಂದೆ ಮಾಡಬೇಕಾಗಿದ್ದ ಕೆಲಸಗಳನ್ನು ಮಾಡಲು ಕಟಿಬದ್ಧರಾಗಿದ್ದೇವೆ. ಕಳೆದ ಆರು ವರ್ಷಗಳಲ್ಲಿ, ನಮ್ಮ ಸರಕಾರ ರೈತರ ಪ್ರತೀ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಇದರಂಗವಾಗಿ, ಇದುವರೆಗೆ ಹಲವಾರು ವರ್ಷಗಳಿಂದ ಬರೇ ಚರ್ಚೆ ಮಾತ್ರವೇ ನಡೆಯುತ್ತಿದ್ದ ರೈತರ ಎಲ್ಲಾ ಬೇಡಿಕೆಗಳು ಈಡೇರಿವೆ. ರೈತರಿಗಾಗಿ ಮಾಡಲಾದ ಹೊಸ ಕಾನೂನುಗಳು ಈಗ ಕೆಲವು ಸಮಯದಿಂದ ಸುದ್ದಿಯಲ್ಲಿವೆ. ಕೃಷಿ ಸುಧಾರಣೆಗಳು ರಾತ್ರಿ ಹಗಲಾಗುವುದರಲ್ಲಿ ಬಂದವುಗಳಲ್ಲ. ದೇಶದ ಪ್ರತೀ ಸರಕಾರವೂ ಕಳೆದ 20-22 ವರ್ಷಗಳಲ್ಲಿ ರಾಜ್ಯ ಸರಕಾರಗಳ ಜೊತೆ ವ್ಯಾಪಕ ಮಾತುಕತೆ ನಡೆಸಿದೆ. ಬಹುತೇಕ ಪ್ರತೀ ಸಂಘಟನೆಗಳೂ ಕಾನೂನುಗಳ ಬಗ್ಗೆ ಚರ್ಚೆ ಮಾಡಿವೆ.

ದೇಶದ ರೈತರು, ರೈತ ಸಂಘಟನೆಗಳು, ಕೃಷಿ ತಜ್ಞರು, ಕೃಷಿ ಅರ್ಥಶಾಸ್ತ್ರಜ್ಞರು, ಕೃಷಿ ವಿಜ್ಞಾನಿಗಳು, ನಮ್ಮ ದೇಶದ ಪ್ರಗತಿಪರ ರೈತರು ಕೃಷಿ ವಲಯದಲ್ಲಿ ಸುಧಾರಣೆಗಳಿಗಾಗಿ ಸತತ ಆಗ್ರಹಿಸುತ್ತಲೇ ಬಂದಿದ್ದಾರೆ. ವಾಸ್ತವ ಎಂದರೆ ದೇಶದ ರೈತರು ಸುಧಾರಣೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಪ್ರಸ್ತಾಪಿಸಿದ, ಸುಧಾರಣೆಗಳ ಪರ ಮಾತನಾಡಿದ, ಮತ್ತು ಓಟಿಗಾಗಿ ರೈತರಿಗೆ ಭವ್ಯ ಭರವಸೆಗಳನ್ನು ನೀಡಿದವರಲ್ಲಿ ಉತ್ತರವನ್ನು ಕೇಳಬೇಕು. ಆದರೆ ಅವರು ಯಾರೂ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಜಾರಿಗೆ ತಂದವರಲ್ಲ. ಅವರು ಬೇಡಿಕೆಗಳನ್ನು ಸತತವಾಗಿ ನಿರ್ಲಕ್ಷಿಸುತ್ತಾ ಬಂದರು. ಯಾಕೆಂದರೆ ಅವರಿಗೆ ರೈತರು ಆದ್ಯತೆಯಾಗಿರಲಿಲ್ಲ. ಇದರ ಪರಿಣಾಮವಾಗಿ ದೇಶದ ರೈತರು ಕಾಯುತ್ತಲೇ ಇರಬೇಕಾಗಿ ಬಂದಿತು. ಈಗ ಜಾರಿಗೆ ಬರುತ್ತಿರುವ ಕೃಷಿ ಸುಧಾರಣೆಗಳು ಮೊದಲು ದೇಶದ ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿದ್ದುದಕ್ಕಿಂತ ಭಿನ್ನವಾದವುಗಳಲ್ಲಅವರ ಮೊದಲ ಹೇಳಿಕೆಗಳು, ಕೃಷಿ ಇಲಾಖೆಯ ಉಸ್ತುವಾರಿ ಹೊಂದಿದ್ದವರು ಬರೆದಿರುವ ಪತ್ರಗಳು ಇದಕ್ಕೆ ಸಾಕ್ಷಿ. ಅವರು ಯಾವೆಲ್ಲಾ ಭರವಸೆಗಳ ಬಗ್ಗೆ ಮಾತನಾಡುತ್ತಿದ್ದರೋ ಅವೆಲ್ಲಾ ಕೃಷಿ ಸುಧಾರಣಾ ಕಾಯ್ದೆಗಳಲ್ಲಿವೆ. ಅವರು ಕೃಷಿ ಸುಧಾರಣೆಗಳಿಂದಾಗಿ ನೊಂದಿಲ್ಲ. ಅವರ ನೋವು ನಾವು ಭರವಸೆ ನೀಡಿದೆವು, ನಮಗೆ ಜಾರಿಗೆ ತರಲಾಗಲಿಲ್ಲ, ಅದನ್ನು ಮೋದಿ ಹೇಗೆ ಮತ್ತು ಯಾಕೆ ಜಾರಿಗೆ ತಂದರು ಎಂಬುದಾಗಿರಬಹುದು. ಮೋದಿಗೆ ಇದರ ಖ್ಯಾತಿ ಯಾಕೆ ಸಲ್ಲಬೇಕು?. ನಾನು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಕೈಮುಗಿದು ಮನವಿ ಮಾಡುತ್ತೇನೆ-ಇದರ ಪೂರ್ಣ ಖ್ಯಾತಿಯನ್ನು ನೀವು ಪಡೆದುಕೊಳ್ಳಿ. ನಾನು ನಿಮ್ಮ ಮೊದಲಿನ ಚುನಾವಣಾ ಪ್ರಣಾಳಿಕೆಗಳಿಗೆ ಇದರ ಖ್ಯಾತಿಯನ್ನು, ಕೀರ್ತಿಯನ್ನು ಕೊಡುತ್ತೇನೆ. ನನಗೆ ಯಾವುದೇ ಕೀರ್ತಿ ಬೇಡ. ನಾನು ರೈತರ ಜೀವನಕ್ಕೆ ಅನುಕೂಲಕರ ಸ್ಥಿತಿ ಇರಬೇಕು, ಸಮೃದ್ಧಿ ಲಭ್ಯವಾಗಬೇಕು, ಆಧುನಿಕ ಕೃಷಿ ಸಾಧ್ಯವಾಗಬೇಕು  ಎಂದು  ಮಾತ್ರ ಆಶಿಸುತ್ತೇನೆ. ದಯವಿಟ್ಟು ರೈತರಿಗೆ ತಪ್ಪು ಮಾರ್ಗದರ್ಶನ ಮಾಡಬೇಡಿ ಮತ್ತು ಅವರನ್ನು ಗೊಂದಲಕ್ಕೆ ಹಾಕಬೇಡಿ.

ಸ್ನೇಹಿತರೇ,

ಕಾನೂನುಗಳನ್ನು ಜಾರಿಗೆ ತಂದು ಆರುಏಳು ತಿಂಗಳು ಕಳೆದಿದೆ. ಆದರೆ, ಈಗ ಇದ್ದಕ್ಕಿದ್ದಂತೆ ಸುಳ್ಳುಗಳನ್ನು ಹರಡಿ ಮತ್ತು ಗೊಂದಲದ ಜಾಲಗಳನ್ನು ಹೆಣೆದು ರಾಜಕೀಯ ಆಟವನ್ನು ಆಡಲಾಗುತ್ತಿದೆ. ರೈತರ ಹೆಗಲ ಮೇಲಿನಿಂದ ದಾಳಿಗಳನ್ನು ಮಾಡಲಾಗುತ್ತಿದೆ. ನೀವು ನೋಡಿರಬಹುದು, ಸರಕಾರ ಸಭೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಪದೇ ಪದೇ ಹೇಳುತ್ತಿದೆ ಮತ್ತು ನಮ್ಮ ಕೃಷಿ ಸಚಿವರೂ ಟಿ.ವಿ. ಸಂದರ್ಶನಗಳಲ್ಲಿ ಹೇಳುತ್ತಿದ್ದಾರೆ, ನಾನೂ ಹೇಳುತ್ತಿದ್ದೇನೆ. ಕಾನೂನಿನ ಯಾವ ನಿಬಂಧನೆಗಳ ವಿಷಯದಲ್ಲಿ ಸಮಸ್ಯೆಗಳಿವೆಯೋ ಅದನ್ನು  ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಸಮಸ್ಯೆಗಳನ್ನು ನಮಗೆ ಹೇಳಿ. ರಾಜಕೀಯ ಪಕ್ಷಗಳಲ್ಲಿ ದೃಢವಾದ ಉತ್ತರಗಳು ಇಲ್ಲ. ಮತ್ತು ಇದು ರಾಜಕೀಯ ಪಕ್ಷಗಳ ಸತ್ಯ.

ಸ್ನೇಹಿತರೇ,

ತಮ್ಮ ರಾಜಕೀಯ ನೆಲೆಯನ್ನು ಕಳೆದುಕೊಂಡಿರುವವರು ರೈತರಲ್ಲಿ ಈಗ ಭೂಮಿ ಕಳೆದುಕೊಳ್ಳುತ್ತೀರಿ ಎಂಬ ಭಯವನ್ನು ಬಿತ್ತಲು ಪ್ರಯತ್ನಿಸುತ್ತಿದ್ದಾರೆ, ಮೂಲಕ ತಮ್ಮ ರಾಜಕೀಯ ನೆಲೆಯನ್ನು ಮರುಸ್ಥಾಪಿಸಿಕೊಳ್ಳಲು ಹೆಣಗುತ್ತಿದ್ದಾರೆ. ಜನರು ದೇಶಕ್ಕಾಗಿ ಏನು ಮಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಅವಶ್ಯವಿದೆ. ರೈತರ ಹೆಸರಿನಲ್ಲಿ ಚಳವಳಿ ಮಾಡುತ್ತಿರುವವರು ದೇಶವನ್ನು ಆಳುವ ಅವಕಾಶ ಬಂದಾಗ ಅಥವಾ ಸರಕಾರದ ಭಾಗವಾಗುವ ಅವಕಾಶ ಬಂದಾಗ ಏನು ಮಾಡಿದರು. ಇಂದು, ನಾನು ದೇಶವಾಸಿಗಳ ಎದುರು, ನನ್ನ ರೈತ ಸಹೋದರರು ಮತ್ತು ಸಹೋದರಿಯರ ಎದುರು ಜನರ ಬಣ್ಣ ಬಯಲು ಮಾಡಲು ಇಚ್ಚಿಸುತ್ತೇನೆ.

ಸ್ನೇಹಿತರೇ,

ರೈತರ ಕಲ್ಯಾಣದ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿರುವ ಜನರು ಎಷ್ಟು ಕ್ರೂರಿಯಾಗಿದ್ದರು?. ಸ್ವಾಮಿನಾಥನ್ ಸಮಿತಿ ವರದಿ ಇದಕ್ಕೆ ದೊಡ್ಡ ಸಾಕ್ಷಿ. ಸ್ವಾಮಿನಾಥನ್ ಸಮಿತಿ ವರದಿ ಸಲ್ಲಿಸಲ್ಪಟ್ಟಾಗ ಜನರು ಶಿಫಾರಸುಗಳನ್ನು ಎಂಟು ವರ್ಷ ನೆನೆಗುದಿಗೆ  ಹಾಕಿ ಅದರ ಮೇಲೆ ಕುಳಿತರು. ರೈತರು ಪ್ರತಿಭಟನೆ ಮಾಡುತ್ತಿದ್ದರೂ ಅವರು ಚಿಂತಿಸಲಿಲ್ಲ. ಜನರು ತಮ್ಮ ಸರಕಾರ ರೈತರ ಮೇಲೆ ಹೆಚ್ಚು ಹಣ ಖರ್ಚು ಮಾಡಬಾರದು ಎಂದು ವರದಿಗೆ ಮುಚ್ಚಳ ಹಾಕಿದ್ದರು. ಅವರಿಗೆ ರೈತರ ಕಾಳಜಿ, ಹಿತಾಸಕ್ತಿ ಮುಖ್ಯವಾಗಿರಲೇ ಇಲ್ಲ. ಅವರು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ, ಕಾಲ ಕಾಲಕ್ಕೆ ರೈತರನ್ನು ದುರುಪಯೋಗ ಮಾಡಿಕೊಂಡರು. ಆದರೆ ನಮ್ಮ ಸರಕಾರ ರೈತರ ಬಗ್ಗೆ ಸೂಕ್ಷ್ಮತ್ವವನ್ನು ಹೊಂದಿದೆ ಮತ್ತು ರೈತರಿಗಾಗಿ ಅರ್ಪಿಸಿಕೊಂಡಿದೆ, ಅದು ರೈತರನ್ನುಅನ್ನದಾತಎಂದು ಪರಿಗಣಿಸಿದೆ. ನಾವು ಕಡತಗಳ ರಾಶಿಯಿಂದ ಸ್ವಾಮಿನಾಥನ್ ವರದಿಯನ್ನು ಹುಡುಕಿ ತೆಗೆದೆವು ಮತ್ತು ಅದರ ಶಿಫಾರಸುಗಳನ್ನು ಅನುಷ್ಟಾನಕ್ಕೆ ತಂದೆವು. ನಾವು ರೈತರಿಗೆ ವೆಚ್ಚದ 1.5 ಪಟ್ಟು ಎಂ.ಎಸ್.ಪಿ.ಯನ್ನು ನೀಡಿದೆವು.

ಸ್ನೇಹಿತರೇ,

ನಮ್ಮ ದೇಶದಲ್ಲಿ ರೈತರಿಗಾಗುವ ವಂಚನೆಯ ಬಹಳ ದೊಡ್ಡ ಉದಾಹರಣೆ ಎಂದರೆ ಕಾಂಗ್ರೆಸ್ ಸರಕಾರಗಳ ಸಾಲ ಮನ್ನಾ. ಎರಡು ವರ್ಷಗಳ ಹಿಂದೆ ಮಧ್ಯಪ್ರದೇಶದಲ್ಲಿ ಚುನಾವಣೆಗಳು ಬಂದಾಗ ಸಾಲ ಮನ್ನಾದ ಭರವಸೆಯನ್ನು ನೀಡಲಾಯಿತು. ಸರಕಾರ ರಚನೆಯಾದ 10 ದಿನಗಳಲ್ಲಿ ರೈತರ ಎಲ್ಲಾ ಸಾಲಗಳನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಲಾಯಿತು. ಎಷ್ಟು ಮಂದಿ ಸಾಲಗಾರರ ಸಾಲ ಮನ್ನಾ ಮಾಡಲಾಯಿತು, ಸರಕಾರ ರಚನೆಯಾದ ಬಳಿಕ ಯಾವೆಲ್ಲ ಅಡೆ ತಡೆಗಳನ್ನು, ತೊಂದರೆಗಳನ್ನು ಹೇಳಲಾಯಿತು. ಮಧ್ಯಪ್ರದೇಶದ ರೈತರಿಗೆ ಬಗ್ಗೆ ನನಗಿಂತ ಹೆಚ್ಚು ತಿಳಿದಿದೆರಾಜಸ್ಥಾನದ ಲಕ್ಷಾಂತರ ರೈತರು ಇನ್ನೂ ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಬಹಳ ದೊಡ್ಡ ಮೋಸ, ವಂಚನೆ ಮಾಡಿದವರು ರೈತರ ಕಲ್ಯಾಣದ ಬಗ್ಗೆ ಮಾತನಾಡುತ್ತಿರುವುದು ನನಗೆ ಆಶ್ಚರ್ಯವನ್ನು ತರುತ್ತಿದೆ. ರಾಜಕೀಯ ಇಷ್ಟು ಕೆಳಮಟ್ಟಕ್ಕೆ ಇಳಿಯಬಹುದೇ?. ಯಾರಾದರೂ ಇಷ್ಟರ ಮಟ್ಟಿಗೆ ಮೋಸ ಮಾಡಬಹುದೇ?. ಅದೂ ರೈತರ ಹೆಸರಿನಲ್ಲಿ!. ಜನರು ಇನ್ನೂ ಎಷ್ಟೆಂದು ರೈತರನ್ನು ಮೋಸ ಮಾಡುತ್ತಾರೆ?.

ಸ್ನೇಹಿತರೇ,

ಅವರು ಪ್ರತೀ ಚುನಾವಣೆಗೆ ಮೊದಲು ಸಾಲ ಮನ್ನಾದ ಬಗ್ಗೆ ಮಾತನಾಡುತ್ತಾರೆ. ಮತ್ತು ಸಾಲ ಮನ್ನಾ ಎಷ್ಟು?. ಎಲ್ಲಾ ರೈತರೂ ಇದರಡಿ ಬರುತ್ತಾರೆಯೇ?. ಅವರೆಂದಾದರೂ ಸಣ್ಣ ರೈತರ ಬಗ್ಗೆ, ಬ್ಯಾಂಕಿನ ಮುಖವನ್ನೂ ನೋಡದವರ ಬಗ್ಗೆ ಅಥವಾ ಸಾಲ ಪಡೆಯದವರ ಬಗ್ಗೆ ಚಿಂತಿಸಿದ್ದಾರೆಯೇ?. ಮತ್ತು ಅನುಭವಗಳು ನಮಗೆ ಹೇಳುತ್ತವೆ ಏನೆಂದರೆ ಅವರು ಎಂದೂ ಅವರೇ ಘೋಷಿಸಿದ ಸಾಲ ಮನ್ನಾಕ್ಕೆ ಬದ್ದರಾಗಿರಲೇ ಇಲ್ಲರೈತರ ಹಣದ ಬಗ್ಗೆ ಅವರು ಮಾತನಾಡುತ್ತಿದ್ದರೂ ಹಣ ರೈತರನ್ನು ತಲುಪಲೇ ಇಲ್ಲ. ರೈತರು ಬಾರಿ ತಮ್ಮ ಇಡೀ ಸಾಲ ಮನ್ನಾ ಆಗುತ್ತದೆ ಎಂದು ಭಾವಿಸುತ್ತಿದ್ದರು. ಮತ್ತು ಅವರು ಪಡೆಯುತ್ತಿದ್ದ ಪ್ರತಿಫಲ ಏನು?. ಬ್ಯಾಂಕುಗಳಿಂದ ನೋಟೀಸುಗಳು ಮತ್ತು ಬಂಧನ ವಾರಂಟ್ ಗಳು!. ಮತ್ತು ಸಾಲ ಮನ್ನಾದ ಗರಿಷ್ಟ ಲಾಭ ಪಡೆಯುತ್ತಿದ್ದವರು ಯಾರು?.ಅವರಿಗೆ ನಿಕಟರಾಗಿದ್ದ ಜನರು ಮತ್ತು ಅವರ ಸಂಬಂಧಿಗಳು!. ಮಾಧ್ಯಮಗಳಲ್ಲಿಯ ನನ್ನ ಸ್ನೇಹಿತರು ಇದರ ಬಗ್ಗೆ ಆಳವಾಗಿ ಬಗೆಯಲು ಹೊರಟರೆ 8-10 ವರ್ಷಗಳ ಹಿಂದಿನ ಪ್ರತಿಯೊಂದು ವರದಿಗಳ ಬಗ್ಗೆಯೂ ಅವರಿಗೆ ತಿಳಿಯುತ್ತದೆ. ಇದು ಅವರ ಗುಣ-ನಡತೆ.

ರಾಜಕೀಯ ರೈತರ ಪರವಾಗಿ ಎಂದೂ ಚಳವಳಿ ಮಾಡಿಲ್ಲ ಮತ್ತು ಅದಕ್ಕಾಗಿ ಪ್ರತಿಭಟನೆ ಮಾಡಿಲ್ಲ ಎಂದು ತೋರಿಸಿಕೊಡಲಾಗುತ್ತಿದೆ. ಅವರ ರಾಜಕೀಯ ಹಿತಾಸಕ್ತಿಗಳು 10 ವರ್ಷಕ್ಕೊಮ್ಮೆ ದೊಡ್ಡ ರೈತರ ಸಾಲ ಮನ್ನಾ ಮಾಡುವುದರೊಂದಿಗೆ ರಕ್ಷಿಸಲ್ಪಡುತ್ತವೆ. ಬಳಿಕ ರೈತರಿಗಾಗಿ ಯಾರು ಹೋರಾಟ ಮಾಡುತ್ತಾರೆ?. ದೇಶವು ಮತ ಬ್ಯಾಂಕ್ ರಾಜಕೀಯ ಯಾರು ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡಿದೆ ಮತ್ತು ಅದನ್ನು ನೋಡುತ್ತಿದೆ. ದೇಶವು ನಮ್ಮ ಉದ್ದೇಶಗಳಲ್ಲಿಯ ಶುದ್ಢತೆಯನ್ನೂ ನೋಡುತ್ತಿದೆ. ಗಂಗಾ ಮತ್ತು ನರ್ಮದಾ ಮಾತೆಯ ನೀರಿನಂತೆ ನಮ್ಮ ಆಶಯಗಳು ಶುದ್ಧವಾಗಿವೆ. ಅವರು 10 ವರ್ಷಗಳಿಗೆ ಒಮ್ಮೆ ಸಾಲ ಮನ್ನಾ ಯೋಜನೆಗಾಗಿ 50,000 ಕೋ.ರೂ.ಗಳನ್ನು ವ್ಯಯಿಸುವ ಬಗ್ಗೆ ಮಾತನಾಡುತ್ತಾರೆ. ನಮ್ಮ ಸರಕಾರ ಜಾರಿಗೆ ತಂದ ಪಿ.ಎಂ.-ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತೀ ವರ್ಷ ರೈತರು 75,000 ಕೋ.ರೂ. ಗಳನ್ನು ಪಡೆಯುತ್ತಾರೆ. ಅಂದರೆ 10 ವರ್ಷಗಳಲ್ಲಿ 7.5 ಲಕ್ಷ ಕೋ.ರೂ.ಗಳು. ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಯಿಂದ ಎಲ್ಲೂ ಸೋರಿಕೆ ಇಲ್ಲ, ಯಾರಿಗೂ ಕಮಿಶನ್ ಇಲ್ಲ!. ಅಲ್ಲಿ ಕಡಿತದ ಸಂಸ್ಕೃತಿಯ ಅಂಶವೇ  ಇಲ್ಲ.

ಸ್ನೇಹಿತರೇ,

ನಾನು ಈಗ ದೇಶದ ರೈತರಿಗೆ ಯೂರಿಯಾ ಕುರಿತಂತೆ ನೆನಪು ಮಾಡುತ್ತೇನೆ. 7-8 ವರ್ಷಗಳ ಹಿಂದೆ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಿ. ಯುರಿಯಾಕ್ಕಾಗಿ ರೈತರು ತಡರಾತ್ರಿಯಲ್ಲೂ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು ಎಂಬುದು ಸತ್ಯವಲ್ಲವೇ?. ಯೂರಿಯಾಕ್ಕಾಗಿ ಕಾಯುತ್ತಿದ್ದ ರೈತರ ಮೇಲೆ ಲಾಠಿಚಾರ್ಜ್ ಮಾಡಿದ ಸುದ್ದಿ ಸಾಮಾನ್ಯವಾಗಿತ್ತು. ಯೂರಿಯಾದ ಕಾಳಸಂತೆ ವ್ಯಾಪಾರ ವ್ಯಾಪಕವಾಗಿತ್ತು. ಇದು ಸತ್ಯವಲ್ಲವೇ?. ರಸಗೊಬ್ಬರ ಇಲ್ಲದೆ ರೈತರ ಬೆಳೆಗಳು ತೊಂದರೆಗೆ ಈಡಾಗುತ್ತಿದ್ದವು, ಆದರೆ ಅವರು ಅದರ ಬಗ್ಗೆ ಕನಿಷ್ಟ ಕಾಳಜಿ ಹೊಂದಿದ್ದರು. ಇದು ರೈತರ ಮೇಲಿನ ದೌರ್ಜನ್ಯವಲ್ಲವೇ?. ಇಂತಹ ಪರಿಸ್ಥಿತಿಯನ್ನು ಉಂಟು ಮಾಡಿದ ಜನರು ಕೃಷಿಗೆ ಸಂಬಂಧಿಸಿ ರಾಜಕೀಯ ಮಾಡುತ್ತಿರುವುದು ನನಗೆ ಆಶ್ಚರ್ಯವನ್ನು ತಂದಿದೆ.

ಸ್ನೇಹಿತರೇ,

ಯೂರಿಯಾ ಬಿಕ್ಕಟ್ಟಿಗೆ ಮೊದಲು ಪರಿಹಾರ ಇರಲಿಲ್ಲವೇ?. ಅವರು ರೈತರ ಸಮಸ್ಯೆಗಳ ಬಗ್ಗೆ ಪ್ರಜ್ಞೆಯನ್ನು ಹೊಂದಿದ್ದರೆ, ಅಲ್ಲಿ ಯೂರಿಯಾಕ್ಕೆ ಕೊರತೆ ಇರುತ್ತಿರಲಿಲ್ಲ. ಇಡೀ ಸಮಸ್ಯೆಯನ್ನು ನಿವಾರಿಸಲು ನಾವು ಏನು ಮಾಡಿದೆವು?. ಇಂದು ಯೂರಿಯಾ ಕೊರತೆಯ ಸುದ್ದಿ ಇಲ್ಲ. ಮತ್ತು ರೈತರು ಯೂರಿಯಾಕ್ಕಾಗಿ ಪೆಟ್ಟು ತಿನ್ನಬೇಕಾದ ಪರಿಸ್ಥಿತಿಯೂ ಇಲ್ಲ. ನಾವು ರೈತರ ಸಮಸ್ಯೆಗಳನ್ನು ನಿವಾರಿಸಲು ಶ್ರದ್ಧೆಯಿಂದ ಕೆಲಸ ಮಾಡಿದೆವು. ನಾವು ಯೂರಿಯಾದ ಕಾಳಸಂತೆ ಮಾರಾಟವನ್ನು ನಿಲ್ಲಿಸಿದೆವು, ಬಲವಾದ ಕ್ರಮಗಳನ್ನು ಕೈಗೊಂಡು ಭ್ರಷ್ಟಾಚಾರವನ್ನು ನಿರ್ಬಂಧಿಸಿದೆವು. ನಾವು ರೈತರ ಹೊಲಗಳಿಗೆ ಯೂರಿಯಾ ತಲುಪುವುದನ್ನು ಖಾತ್ರಿ ಮಾಡಿದೆವು. ಜನರ ಆಡಳಿತದಲ್ಲಿ ರೈತರಿಗಾಗಿರುವ ಸಬ್ಸಿಡಿಯ ಪ್ರಯೋಜನವನ್ನು ಇತರರು ಪಡೆಯುತ್ತಿದ್ದರು. ನಾವು ಭ್ರಷ್ಟಾಚಾರಕ್ಕೆ ಪೂರ್ಣ ವಿರಾಮ ಹಾಕಿದೆವು. ನಾವು ಯೂರಿಯಾಕ್ಕೆ ನೂರು ಶೇಖಡಾ ಬೇವಿನ ಲೇಪನವನ್ನು ಕಡ್ಡಾಯ ಮಾಡಿದೆವು. ಹಳೆಯ ತಂತ್ರಜ್ಞಾನದಿಂದ ಮುಚ್ಚಲ್ಪಟ್ಟಿರುವ ರಸಗೊಬ್ಬರ ಕಾರ್ಖಾನೆಗಳನ್ನು ನಾವು ಪುನರಾರಂಭ ಮಾಡುತ್ತಿದ್ದೇವೆ. ಇನ್ನು ಕೆಲವೇ ವರ್ಷಗಳಲ್ಲಿ ಆಧುನಿಕ ರಸಗೊಬ್ಬರ ಸ್ಥಾವರಗಳು ಉತ್ತರ ಪ್ರದೇಶದ ಗೋರಖ್ ಪುರ, ಬಿಹಾರದ ಬರೌನಿ, ಜಾರ್ಖಂಡದ ಸಿಂದ್ರಿ, ಒಡಿಶಾದ ತಲ್ಚೇರ್ ಮತ್ತು ತೆಲಂಗಾಣದ ರಾಮಗುಂಡಂಗಳಲ್ಲಿ ಕಾರ್ಯಾರಂಭ ಮಾಡಲಿವೆ. ಇವುಗಳ ಮೇಲೆ 50,000 ದಿಂದ 60,000 ಕೋ.ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಆಧುನಿಕ ರಸಗೊಬ್ಬರ ಸ್ಥಾವರಗಳು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಮತ್ತು ಯೂರಿಯಾ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಲು ಸಹಾಯ ಮಾಡಲಿವೆ. ಇದರಿಂದ ಹಲವು ಸಾವಿರ ಕೋಟಿ ರೂಪಾಯಿಗಳ ಯೂರಿಯಾ ಅಮದು ಕೂಡಾ ಕಡಿಮೆಯಾಗಲಿದೆ.

ಸ್ನೇಹಿತರೇ,

ರಸಗೊಬ್ಬರ ಸ್ಥಾವರಗಳನ್ನು ಪುನರಾರಂಭ ಮಾಡಲು ಯಾರೊಬ್ಬರೂ ಅಡ್ಡಿ ಮಾಡಲಿಲ್ಲ. ಯಾರೊಬ್ಬರೂ ಅವರಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ತಡೆ ನೀಡಲಿಲ್ಲ. ಆದರೆ ಅದು ಉದ್ದೇಶವೂ ಆಗಿರಲಿಲ್ಲ. ಅಲ್ಲಿ ನೀತಿ ಇರಲಿಲ್ಲ. ಅಲ್ಲಿ ರೈತರ ಬಗ್ಗೆ ವಿಶ್ವಾಸ ಇರಲಿಲ್ಲ. ಅವರು ಬರೇ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದರು ಮತ್ತು ದೇಶವನ್ನು ಆಳುತ್ತಿದ್ದರು.

ಸ್ನೇಹಿತರೇ,

ಹಿಂದಿನ ಸರಕಾರಗಳಿಗೆ ಕಾಳಜಿ ಇದ್ದಿದ್ದರೆ, ಸುಮಾರು 100 ಬೃಹತ್ ನೀರಾವರಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬೀಳುತ್ತಿರಲಿಲ್ಲ. ಅಣೆಕಟ್ಟುಗಳ ನಿರ್ಮಾಣ ಕಾರ್ಯ 25 ವರ್ಷಗಳ ಕಾಲ ನಡೆಯಿತು. ಅಣೆಕಟ್ಟು ನಿರ್ಮಾಣವಾದರೆ ಅಲ್ಲಿ ಕಾಲುವೆಗಳಿರಲಿಲ್ಲ. ಕಾಲುವೆಗಳನ್ನು ನಿರ್ಮಿಸಲಾಗಿದ್ದರೆ , ಅವುಗಳನ್ನು ಜೋಡಿಸಲು ಯಾವುದೇ ಪ್ರಯತ್ನಗಳಾಗಲಿಲ್ಲ. ಹಣ ಮತ್ತು ಕಾಲವನ್ನು ಪೋಲು ಮಾಡಲಾಯಿತು ಅಷ್ಟೇ. ಈಗ ನಮ್ಮ ಸರಕಾರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆಂದೋಲನ ಮಾದರಿಯಲ್ಲಿ ಸಾವಿರಾರು ಕೋ.ರೂ.ಗಳನ್ನು ಖರ್ಚು ಮಾಡುತ್ತಿದೆ. ಇದರಿಂದ ಪ್ರತೀ ರೈತರ ಹೊಲಗಳಿಗೂ ನೀರು ಒದಗಣೆಯ ಆಶಯ ಖಾತ್ರಿಯಾದಂತಾಗುತ್ತದೆ.

ಸ್ನೇಹಿತರೇ,

ರೈತರಿಗೆ ಒಳಸುರಿ ಖರ್ಚುಗಳನ್ನು ಕಡಿಮೆ ಮಾಡಲು ಮತ್ತು ಕೃಷಿಗೆ ತಗಲುವ ಖರ್ಚನ್ನು ಕಡಿಮೆ ಮಾಡಲು ದೃಢವಾದ ಪ್ರಯತ್ನಗಳನ್ನು ಸರಕಾರ ಮಾಡುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ರೈತರಿಗೆ ಸೌರ ಪಂಪ್ ಗಳನ್ನು ಒದಗಿಸುವ ನಿಟ್ಟಿನಲ್ಲಿ ಬೃಹತ್ ಆಂದೋಲನ ಚಾಲ್ತಿಯಲ್ಲಿದೆ. ನಮ್ಮ ರೈತರು ವಿದ್ಯುತ್ ಉತ್ಪಾದಕರಾಗುವಂತೆ ಮಾಡಲು ಮಾಡುವ ನಿಟ್ಟಿನಲ್ಲಿಯೂ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಸರಕಾರ ರೈತರಿಗೆ ಜೇನು ಸಾಕಾಣಿಕೆ, ಪಶುಪಾಲನೆ, ಮತ್ತು ಮೀನುಗಾರಿಕೆಗಳಿಗೂ ಧಾನ್ಯ ಉತ್ಪಾದನೆಯ ಜೊತೆ ಉತ್ತೇಜನ ನೀಡುತ್ತಿದೆ. ಹಿಂದಿನ ಸರಕಾರಗಳ ಅವಧಿಯಲ್ಲಿ ದೇಶದಲ್ಲಿ ಜೇನು ಉತ್ಪಾದನೆ ಸುಮಾರು 76,000 ಮೆಟ್ರಿಕ್ ಟನ್ನುಗಳಷ್ಟಿತ್ತು. ದೇಶದ ರೈತರು ಈಗ ಹಿಂದಿನ ಸರಕಾರಗಳ ಅವಧಿಗಿಂತ ದುಪ್ಪಟ್ಟು ಜೇನನ್ನು ರಫ್ತು ಮಾಡುತ್ತಿದ್ದಾರೆ.

ಸ್ನೇಹಿತರೇ,

ತಜ್ಞರು ಹೇಳುತ್ತಾರೆ ಮೀನುಗಾರಿಕೆಯು ಕಡಿಮೆ ಖರ್ಚಿನಲ್ಲಿ ಗರಿಷ್ಟ ಲಾಭ ತರುವ ವಲಯ ಎಂಬುದಾಗಿ. ನಮ್ಮ ಸರಕಾರವು ಮೀನುಗಾರಿಕೆಯನ್ನು ಉತ್ತೇಜಿಸಲು ನೀಲ ಕ್ರಾಂತಿ ಯೋಜನೆಯನ್ನು ಅನುಷ್ಟಾನಿಸುತ್ತಿದೆ. ಕೆಲ ಸಮಯದ ಹಿಂದೆ 20,000 ಕೋ.ರೂ.ಗಳ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನಾವನ್ನೂ ಆರಂಭಿಸಲಾಗಿದೆ. ಎಲ್ಲಾ ಪ್ರಯತ್ನಗಳ ಫಲವಾಗಿ, ದೇಶದಲ್ಲಿ ಮೀನು ಉತ್ಪಾದನೆಯ ಹಿಂದಿನ ಎಲ್ಲಾ ದಾಖಲೆಗಳೂ ಮುರಿದು ಬಿದ್ದಿವೆ. ಈಗ ದೇಶವು ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಒಂದು ಲಕ್ಷ ಕೋ.ರೂ. ಗಳಿಗೂ ಅಧಿಕ ಮೌಲ್ಯದ ಮೀನು ರಫ್ತು ಮಾಡುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ

ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಂಡ ಕ್ರಮಗಳು...ಮಧ್ಯಪ್ರದೇಶದಲ್ಲಿ ರೈತರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳನ್ನು ನೀವು ನೋಡಬಹುದು. ಕ್ರಮಗಳು ಪೂರ್ಣವಾಗಿ ರೈತರಿಗಾಗಿ ಇವೆ. ಎಲ್ಲಾ ಕ್ರಮಗಳನ್ನು ವಿವರಿಸುತ್ತಾ ಹೋದರೆ ಸಮಯ ಸಾಲದು. ಆದರೆ ನಮ್ಮ ಸರಕಾರದ ಪ್ರಾಮಾಣಿಕತೆಯನ್ನು ನೀವು ಪರೀಕ್ಷೆ ಮಾಡುವುದಕ್ಕಾಗಿ, ನಾನು ಕೆಲವು ಉದಾಹರಣೆಗಳನ್ನು ಕೊಟ್ಟಿದ್ದೇನೆ, ನೀವು ಅವುಗಳನ್ನು ಪರಿಶೀಲನೆ ಮಾಡಬಹುದು ಮತ್ತು ನಮ್ಮ ಉತ್ತಮ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳಬಹುದು. ಆದುದರಿಂದ ಆಧಾರದ ಮೇಲೆ, ನಾನು ಹೇಳುತ್ತೇನೆ, ನಾವು ಇತ್ತೀಚೆಗೆ ಜಾರಿಗೆ ತಂದ ಕೃಷಿ ಸುಧಾರಣೆಗಳ ಮೇಲೆ ಅಪನಂಬಿಕೆ ಬೇಡ. ಅದರಲ್ಲಿ ಸುಳ್ಳಿಗೆ ಜಾಗ ಇಲ್ಲ. ಕೃಷಿ ಸುಧಾರಣೆಗಳ ಬಳಿಕ ಹರಡಲಾಗುತ್ತಿರುವ ಅತಿ ದೊಡ್ಡ ಸುಳ್ಳಿನ ಬಗ್ಗೆ ನಾನು ನಿಮಗೆ ಹೇಳುತ್ತೇನೆ. ಸುಳ್ಳನ್ನು ಪದೇ ಪದೇ ಗಟ್ಟಿಯಾಗಿ ಹೇಳಲಾಗುತ್ತಿದೆ. ಸುಳ್ಳನ್ನು ಹರಡಲು ಯಾವ ಅವಕಾಶವನ್ನೂ ಅವರು ಬಿಟ್ಟಿಲ್ಲ. ಸುಳ್ಳಿನಲ್ಲಿ ಕಾರಣವೂ ಇಲ್ಲ ತಾರ್ಕಿಕತೆಯೂ ಇಲ್ಲ. ನಾನು ಮೊದಲು ಹೇಳಿದಂತೆ, ನಮ್ಮ ಸರಕಾರ ಸ್ವಾಮಿನಾಥನ್ ಸಮಿತಿ ವರದಿಯನ್ನು ಅನುಷ್ಟಾನ ಮಾಡಿದೆ. ನಾವು ಎಂ.ಎಸ್.ಪಿ.ಯನ್ನು ಹಿಂಪಡೆಯುವುದೇ ಆಗಿದ್ದಲ್ಲಿ, ನಾವು ಸ್ವಾಮಿನಾಥನ್ ವರದಿಯನ್ನು ಯಾಕೆ ಜಾರಿಗೆ ತರುತ್ತಿದ್ದೆವು?. ನೀವು ವರದಿಯನ್ನು ಅನುಷ್ಟಾನಿಸಲಿಲ್ಲ: ನಾವು ಕೂಡಾ ಅದನ್ನೇ ಮಾಡಬಹುದಿತ್ತು. ಅದಕ್ಕೆ ಬದಲು, ನಾವದನ್ನು ಜಾರಿಗೆ ತಂದೆವು. ಎರಡನೆಯದಾಗಿ ನಮ್ಮ ಸರಕಾರ  ಎಂ.ಎಸ್.ಪಿ. ಬಗ್ಗೆ ಗಂಭೀರವಾಗಿದೆ, ಅದು ಬಿತ್ತನೆಗೆ ಮೊದಲೇ ಎಂ.ಎಸ್.ಪಿ.ಯನ್ನು ಘೋಷಿಸುತ್ತದೆ. ಇದರಿಂದ ರೈತರು ತಮ್ಮ ಬೆಳೆಗಳಿಗೆ ಎಂ.ಎಸ್.ಪಿ.ಯನ್ನು ಮುಂಚಿತವಾಗಿಯೇ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಅವರಿಗೆ ಯಾವುದಾದರೂ ಬದಲಾವಣೆ ಮಾಡಿಕೊಳ್ಳಬೇಕಿದ್ದರೆ ಅದಕ್ಕೆ ಸಹಾಯವಾಗುತ್ತದೆ

ಸ್ನೇಹಿತರೇ,

ಹೊಸ ಕಾನೂನುಗಳನ್ನು ಜಾರಿಗೆ ತಂದು ಆರು ತಿಂಗಳಿಗೂ ಹೆಚ್ಚು ಕಾಲವಾಗಿದೆ. ಕಾನೂನುಗಳನ್ನು ರೂಪಿಸಿದ ಬಳಿಕವೂ ಪದ್ಧತಿಯಂತೆ ಎಂ.ಎಸ್.ಪಿ.ಯನ್ನು ಘೋಷಿಸಲಾಗಿದೆ. ಇದನ್ನು ಕೊರೊನಾ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಟ ಚಾಲ್ತಿಯಲ್ಲಿದ್ದಾಗಲೂ ಘೋಷಿಸಲಾಗಿದೆ. ಎಂ.ಎಸ್.ಪಿ.ಅನ್ವಯ ಅದೇ ಮಂಡಿಗಳಲ್ಲಿ ಅದೇ ರೀತಿಯಲ್ಲಿ ಖರೀದಿಯನ್ನೂ ಮಾಡಲಾಗಿದೆ. ಆಗಲೂ ಹೊಸ ಕಾನೂನುಗಳನ್ನು ಮಾಡಲಾಗಿತ್ತು. ಕಾನೂನುಗಳನ್ನು ಮಾಡಲಾದ ಬಳಿಕವೂ ಎಂ.ಎಸ್.ಪಿ.ಯನ್ನು ಘೋಷಿಸಲಾಗಿದೆ ಮತ್ತು ಸರಕಾರಿ ಖರೀದಿ ಅವೇ ಮಂಡಿಗಳಲ್ಲಿ ನಡೆದಿರುವಾಗ, ಎಂ.ಎಸ್.ಪಿ.ಯನ್ನು ಕೈಬಿಡಲಾಗುತ್ತದೆ ಎಂಬಂತಹ ಸುಳ್ಳನ್ನು ಯಾರಾದರೂ ಒಪ್ಪುತ್ತಾರೆಯೇ. ಆದುದರಿಂದ, ನಾನು ಹೇಳುತ್ತೇನೆ, ಇದಕ್ಕಿಂತ ದೊಡ್ಡ ಸುಳ್ಳು ಮತ್ತು ಒಳಸಂಚು ಇರಲಾರದು. ಆದುದರಿಂದ ನಾನು ದೇಶದ ಪ್ರತೀ ರೈತರಿಗೂ ಭರವಸೆ ಕೊಡುತ್ತೇನೆ-ಎಂ.ಎಸ್.ಪಿ. ಹಿಂದಿನಂತೆ ಮುಂದುವರೆಯುತ್ತದೆ ಮತ್ತು ಅದನ್ನು ಸ್ಥಗಿತಗೊಳಿಸುವುದಿಲ್ಲ.

ಸ್ನೇಹಿತರೇ,

ನಾನು ಈಗ ಉಲ್ಲೇಖಿಸುವ ಅಂಕಿ ಅಂಶಗಳು ನಿಮಗೆ ಸಂಗತಿಗಳನ್ನು ನಿಚ್ಚಳಗೊಳಿಸುತ್ತವೆ. ಗೋಧಿ ಮೇಲಣ ಬೆಂಬಲ ಬೆಲೆ ಹಿಂದಿನ ಸರಕಾರದಲ್ಲಿ ಕ್ವಿಂಟಾಲೊಂದಕ್ಕೆ 1400 ರೂ. ಗಳಿತ್ತು. ನಮ್ಮ ಸರಕಾರ ಗೋಧಿಗೆ ಕ್ವಿಂಟಾಲೊಂದಕ್ಕೆ 1975 ರೂ . ಬೆಂಬಲ ಬೆಲೆ ನೀಡುತ್ತದೆ. ಹಿಂದಿನ ಸರಕಾರದಲ್ಲಿ ಭತ್ತದ ಕನಿಷ್ಟ ಬೆಂಬಲ ಬೆಲೆ ಕ್ವಿಂಟಾಲೊಂದಕ್ಕೆ 1310 ರೂ ಇತ್ತು. ನಮ್ಮ ಸರಕಾರ ಭತ್ತಕ್ಕೆ ಬೆಂಬಲ ಬೆಲೆ ಕ್ವಿಂಟಾಲೊಂದಕ್ಕೆ ಸುಮಾರು 1870 ರೂ. ನೀಡುತ್ತಿದೆ. ಹಿಂದಿನ ಸರಕಾರದಲ್ಲಿ ಜೋಳದ ಜೋಳದ ಬೆಂಬಲ ಬೆಲೆ ಕ್ವಿಂಟಾಲೊಂದಕ್ಕೆ 1520 ರೂ. ಇತ್ತು. ನಮ್ಮ ಸರಕಾರ ಜೋಳಕ್ಕೆ ಕ್ವಿಂಟಾಲೊಂದರ ಕನಿಷ್ತ ಬೆಂಬಲ ಬೆಲೆ 2640 ರೂ. ನೀಡುತ್ತಿದೆ. ಹಿಂದಿನ ಸರಕಾರದಲ್ಲಿ ಹೆಸರು ಬೇಳೆ ಎಂ.ಎಸ್.ಪಿ. ಕ್ವಿಂಟಾಲೊಂದಕ್ಕೆ 2950 ರೂಪಾಯಿ ಇತ್ತು. ನಮ್ಮ ಸರಕಾರ ಹೆಸರು ಬೇಳೆಗೆ ಕ್ವಿಂಟಾಲೊಂದಕ್ಕೆ 5100 ರೂ. ಎಂ.ಎಸ್.ಪಿ. ನೀಡುತ್ತಿದೆ. ಹಿಂದಿನ ಸರಕಾರದಲ್ಲಿ ಬೇಳೆಯ ಬೆಂಬಲ ಬೆಲೆ ಕ್ವಿಂಟಾಲೊಂದಕ್ಕೆ 3100 ರೂ. ಇತ್ತು. ನಮ್ಮ ಸರಕಾರ ಇದಕ್ಕೆ ಕ್ವಿಂಟಾಲೊಂದಕ್ಕೆ 5100 ರೂ. ಎಂ.ಎಸ್.ಪಿ. ನೀಡುತ್ತಿದೆ. ಹಿಂದಿನ ಸರಕಾರದಲ್ಲಿ ತೊಗರಿ ಬೇಳೆಯ ಎಂ.ಎಸ್.ಪಿ. ಕ್ವಿಂಟಾಲೊಂದಕ್ಕೆ 4,300 ರೂ. ಇತ್ತು. ನಮ್ಮ ಸರಕಾರ ತೊಗರಿ ಬೇಳೆಗೆ ಕ್ವಿಂಟಾಲೊಂದಕ್ಕೆ 6,000 ರೂ. ಎಂ.ಎಸ್.ಪಿ. ನೀಡುತ್ತಿದೆ. ಹಿಂದಿನ ಸರಕಾರದಲ್ಲಿ, ಹುರುಳಿ ಎಂ.ಎಸ್.ಪಿ. ಕ್ವಿಂಟಾಲೊಂದಕ್ಕೆ 4500 ರೂ. ಇತ್ತು. ನಮ್ಮ ಸರಕಾರ ಇದಕ್ಕೆ ಕ್ವಿಂಟಾಲೊಂದಕ್ಕೆ ಸುಮಾರು 7,200 ರೂ. ಎಂ.ಎಸ್.ಪಿ. ನೀಡುತ್ತಿದೆ.

ಸ್ನೇಹಿತರೇ,

ಕಾಲ ಕಾಲಕ್ಕೆ ಎಂ.ಎಸ್.ಪಿ.ಯನ್ನು ಹೆಚ್ಚಿಸುವುದಕ್ಕೆ ನಮ್ಮ ಸರಕಾರ ಗಂಭೀರವಾದ ಚಿಂತನೆಯನ್ನು ಮಾಡುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ. ಜೊತೆಗೆ ಎಂ.ಎಸ್.ಪಿ. ಹೆಚ್ಚಳವಲ್ಲದೆ ಸರಕಾರವು ಎಂ.ಎಸ್.ಪಿ. ಮೂಲಕ ಗರಿಷ್ಟ ಖರೀದಿಗೂ ಒತ್ತು ನೀಡುತ್ತಿದೆ. ಹಿಂದಿನ ಸರಕಾರ ಅದರ ಐದು ವರ್ಷಗಳ ಅಧಿಕಾರಾವಧಿಯಲ್ಲಿ 1700 ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಭತ್ತವನ್ನು ಖರೀದಿ ಮಾಡಿತ್ತು. ನಮ್ಮ ಸರಕಾರ ರೈತರಿಂದ 3000 ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಭತ್ತವನ್ನು ಐದು ವರ್ಷಗಳಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿತು. ಪ್ರಮಾಣದಲ್ಲಿ ಇದು ಸರಿಸುಮಾರು ದುಪ್ಪಟ್ಟು. ಹಿಂದಿನ ಸರಕಾರ ಅದರ ಐದು ವರ್ಷಗಳ ಅವಧಿಯಲ್ಲಿ ಸುಮಾರು 3.75 ಲಕ್ಷ ಮೆಟ್ರಿಕ್ ಟನ್ ತೈಲ ಬೀಜಗಳನ್ನು ಖರೀದಿ ಮಾಡಿತ್ತು. ನಮ್ಮ ಸರಕಾರ ಐದು ವರ್ಷಗಳಲ್ಲಿ ಎಂ.ಎಸ್.ಪಿ.ಯಲ್ಲಿ 56 ಲಕ್ಷ ಟನ್ನಿಗೂ ಅಧಿಕ ತೈಲ ಬೀಜಗಳನ್ನು ರೈತರಿಂದ ಖರೀದಿ ಮಾಡಿತು. 3.75 ಲಕ್ಷ ಮತ್ತು 56 ಲಕ್ಷದ ನಡುವಿನ ವ್ಯತ್ಯಾಸ ನೋಡಿ!. ನಮ್ಮ ಸರಕಾರ ಎಂ.ಎಸ್.ಪಿ.ಯನ್ನು ಹೆಚ್ಚಿಸಿದ್ದು ಮಾತ್ರವಲ್ಲ, ರೈತರಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಎಂ.ಎಸ್.ಪಿ.ಯಲ್ಲಿ ಬೆಳೆಗಳನ್ನು ಖರೀದಿ ಮಾಡಿತು. ಇದರ ಅತಿ ದೊಡ್ಡ ಪ್ರಯೋಜನ ಎಂದರೆ ಹಿಂದಿಗಿಂತ ಹೆಚ್ಚು ಹಣ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಯಿತು. ಹಿಂದಿನ ಸರಕಾರದ ಐದು ವರ್ಷಗಳ ಅವಧಿಯಲ್ಲಿ ರೈತರು ತಮ್ಮ ಭತ್ತ ಮತ್ತು ಗೋಧಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿ 3,74,000 ಕೋ.ರೂ.ಗಳನ್ನು ಪಡೆದುಕೊಂಡರು. ನಮ್ಮ ಸರಕಾರ ಕಳೆದ ಐದು ವರ್ಷಗಳಲ್ಲಿರೈತರಿಂದ ಗೋಧಿ ಮತ್ತು ಭತ್ತವನ್ನು ಖರೀದಿ ಮಾಡಿ ಅವರಿಗೆ 800,000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ನೀಡಿದೆ

ಸ್ನೇಹಿತರೇ,

ದ್ವಿದಳ ಧಾನ್ಯಗಳನ್ನು ಬೆಳೆಯುವ ರೈತರ ವಿಷಯದಲ್ಲಿ ರಾಜಕೀಯ ಮಾಡುತ್ತಿರುವವರು ಹೇಗೆ ಆನುಚಿತವಾಗಿ ನಡೆದುಕೊಳ್ಳುತ್ತಿದ್ದರು ಎಂಬುದಕ್ಕೆ ಇನ್ನೊಂದು ಉದಾಹರಣೆ ಇದೆ. 2014 ಅವಧಿಯನ್ನೊಮ್ಮೆ ನೆನಪಿಸಿಕೊಳ್ಳಿ, ಆಗ ಬೇಳೆ ಕಾಳುಗಳ, ದ್ವಿದಳ ಧಾನ್ಯಗಳ ಅಭಾವ ಉಂಟಾಗಿತ್ತು. ಅವುಗಳನ್ನು  ಆಮದು ಮಾಡಲಾಗುತ್ತಿತ್ತು. ದ್ವಿದಳ ಧಾನ್ಯಗಳ  ಧಾರಣೆ ಏರುವುದರೊಂದಿಗೆ ಅಡುಗೆ ಮನೆಯ ವೆಚ್ಚ ಹೆಚ್ಚಾಗುತ್ತಿತ್ತು. ಬೇಳೆ ಕಾಳುಗಳ ಗರಿಷ್ಟ ಬಳಕೆ ಇದ್ದಾಗಲೂ ಬೇಳೆ ಕಾಳುಗಳನ್ನು ಉತ್ಪಾದಿಸುವವರನ್ನು ನಾಶ ಮಾಡಲು ಸರ್ವ ಪ್ರಯತ್ನಗಳನ್ನು ಮಾಡಲಾಯಿತು. ರೈತರು ನಿರಾಶರಾಗಿದ್ದರು ಮತ್ತು ಅವರು ವಿದೇಶಗಳಿಂದ ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಂಡು ಸಂತೋಷದಿಂದಿದ್ದರು. ಪ್ರಾಕೃತಿಕ ವಿಕೋಪ ಇದ್ದಾಗ ಅಥವಾ ಕೊರತೆ ಇದ್ದಾಗ ದೇಶದ ನಾಗರಿಕರು ಉಪವಾಸ ಬೀಳದಂತೆ ನೋಡಿಕೊಳ್ಳಲು ಬೇಳೆ ಕಾಳುಗಳನ್ನು ಆಮದು ಮಾಡಿಕೊಳ್ಳುವುದರ ಅನಿವಾರ್ಯತೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಸದಾ ಯಾಕೆ ಹಾಗಾಗಬೇಕು?.

ಸ್ನೇಹಿತರೇ,

ಜನರು ದ್ವಿದಳ ಧಾನ್ಯಗಳ  ಮೇಲೆ ಎಂ.ಎಸ್.ಪಿ. ನೀಡಿದವರಲ್ಲ. ಮತ್ತು ಎಂ.ಎಸ್.ಪಿ. ಅಡಿಯಲ್ಲಿ ಅದನ್ನು ಖರೀದಿಸಿದವರಲ್ಲ. 2014ಕ್ಕೆ ಮೊದಲು ಐದು ವರ್ಷ ಇಂತಹ ಪರಿಸ್ಥಿತಿ ಇತ್ತು. ಅವರು ಬರೇ 1.5 ಲಕ್ಷ ಮೆಟ್ರಿಕ್ ಟನ್ ಬೇಳೆ ಕಾಳುಗಳನ್ನು ರೈತರಿಂದ ಖರೀದಿಸಿದರು. ಅಂಕೆ ಸಂಖ್ಯೆಯನ್ನು ನೆನಪಿಡಿ. ಬರೇ 1.5 ಲಕ್ಷ ಮೆಟ್ರಿಕ್ ಟನ್ ಬೇಳೆ ಕಾಳುಗಳು!. 2014ರಲ್ಲಿ ನಮ್ಮ ಸರಕಾರ ರಚನೆಯಾದಾಗ, ನಾವು ನೀತಿಯನ್ನು ಬದಲಾಯಿಸಿದೆವು ಮತ್ತು ದೊಡ್ಡ ನಿರ್ಧಾರಗಳನ್ನು ಕೈಗೊಂಡೆವು. ನಾವು ರೈತರಿಗೆ ಬೇಳೆ ಕಾಳುಗಳನ್ನು ಉತ್ಪಾದಿಸಲು ಉತ್ತೇಜನ ನೀಡಿದೆವು.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಸರಕಾರ 112 ಲಕ್ಷ ಮೆಟ್ರಿಕ್ ಟನ್ನಿನಷ್ಟು ದ್ವಿದಳ ಧಾನ್ಯಗಳನ್ನು, ಬೇಳೆ ಕಾಳುಗಳನ್ನು ಎಂ.ಎಸ್.ಪಿ.ದರದಲ್ಲಿ ರೈತರಿಂದ ಖರೀದಿ ಮಾಡಿದೆ. ಕಲ್ಪಿಸಿಕೊಳ್ಳಿ ಅವರ ಕಾಲದ 1.5 ಲಕ್ಷ ಮೆಟ್ರಿಕ್ ಟನ್ನುಗಳೆಲ್ಲಿ,  112 ಲಕ್ಷ ಮೆಟ್ರಿಕ್ ಟನ್ನುಗಳೆಲ್ಲಿ. ಅವರ ಐದು ವರ್ಷಗಳಲ್ಲಿ ಬೇಳೆ ಕಾಳುಗಳನ್ನು ಬೆಳೆಯುವವರಿಗೆ ಅವರು ಕೊಟ್ಟದೆಷ್ಟು?. ಅವರು 650 ಕೋ.ರೂ.ಗಳನ್ನು ಕೊಟ್ಟರು, ಮತ್ತು ನಮ್ಮ ಸರಕಾರ ಏನು ಮಾಡಿತು?. ನಾವು ಸುಮಾರು 50,000 ಕೋ.ರೂ.ಗಳನ್ನು ದ್ವಿದಳ ಧಾನ್ಯಗಳನ್ನು, ಬೇಳೆ ಕಾಳುಗಳನ್ನು ಉತ್ಪಾದಿಸುವ ರೈತರಿಗೆ ನೀಡಿದೆವು. ಇಂದು ದ್ವಿದಳ ಧಾನ್ಯಗಳನ್ನು, ಬೇಳೆ ಕಾಳುಗಳನ್ನು ಬೆಳೆಯುವ ರೈತರು ಹೆಚ್ಚು ಹಣ ಪಡೆಯುತ್ತಿದ್ದಾರೆ. ಬೇಳೆ ಕಾಳುಗಳ ದರವೂ ಕಡಿಮೆಯಾಗಿದೆ. ಇದರಿಂದ ಬಡವರಿಗೆ ನೇರ ಪ್ರಯೋಜನಗಳಾಗಿವೆ. ರೈತರಿಗೆ ಎಂ.ಎಸ್.ಪಿ. ಕೊಡಲಾಗದವರು ಮತ್ತು ಎಂ.ಎಸ್.ಪಿ.ಯಿಂದ ಸೂಕ್ತವಾಗಿ ಖರೀದಿಸಲಾರದವರು ಎಂ.ಎಸ್.ಪಿ. ಕುರಿತಂತೆ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ

ಸ್ನೇಹಿತರೇ,

ಕೃಷಿ ಸುಧಾರಣೆಗಳಿಗೆ ಸಂಬಂಧಿಸಿ ಹರಡಲಾಗುತ್ತಿರುವ ಇನ್ನೊಂದು ಸುಳ್ಳೆಂದರೆ ಅದು .ಪಿ.ಎಂ.ಸಿ, ಸರಕಾರಿ ಮಂಡಿಗಳಿಗೆ (ಖರೀದಿ ಮಾರುಕಟ್ಟೆಗಳು) ಸಂಬಂಧಿಸಿದ್ದು. ನಾವು ಕಾನೂನುಗಳಲ್ಲಿ ಏನು ಮಾಡಿದ್ದೇವೆ?. ಕಾನೂನುಗಳು ರೈತರಿಗೆ ಹೊಸ ಅವಕಾಶ ಮತ್ತು ಸ್ವಾತಂತ್ರ್ಯವನ್ನು ನೀಡುತ್ತವೆ. ಯಾರಾದರೊಬ್ಬರು ದೇಶದಲ್ಲಿ ಸಾಬೂನು ಮಾರಾಟ ಮಾಡುವುದಾದಲ್ಲಿ ಸರಕಾರ ಅದನ್ನು ಒಂದು ನಿರ್ದಿಷ್ಟ ಅಂಗಡಿಯಲ್ಲಿ ಮಾರಾಟ ಮಾಡಬೇಕು ಎಂದು ನಿರ್ಧರಿಸುವುದಿಲ್ಲ. ಯಾರಾದರು ಸ್ಕೂಟರ್ ಮಾರಾಟ ಮಾಡುವುದಾದಲ್ಲಿ, ಅದನ್ನು ನಿರ್ದಿಷ್ಟ ಡೀಲರಿಗೇ ನೀಡಬೇಕು ಎಂದು ಸರಕಾರ ನಿರ್ಧಾರ ಕೈಗೊಳ್ಳುವುದಿಲ್ಲ. ಆದರೆ ಕಳೆದ 70 ವರ್ಷಗಳಿಂದ   ಸರಕಾರ ರೈತರಿಗೆ ಪದೇ ಪದೇ ಹೇಳುತ್ತಿದೆ ಏನೆಂದರೆ ನಿಮ್ಮ ಕೃಷ್ಯುತ್ಪನ್ನಗಳನ್ನು ನಿರ್ದಿಷ್ಟ ಮಂಡಿಗಳಲ್ಲಿ ಮಾರಾಟ ಮಾಡಿ ಎಂಬುದಾಗಿರೈತರು ಮಂಡಿಗಳ ಹೊರತಾಗಿ ಬೇರೆಲ್ಲೂ ತಮ್ಮ ಕೃಷ್ಯುತ್ಪಾದನೆಯನ್ನು ಮಾರಾಟ ಮಾಡುವಂತಿಲ್ಲನಾವು ಹೊಸ ಕಾನೂನುಗಳಲ್ಲಿ ಏನು ಹೇಳುತ್ತಿದ್ದೇವೆ ಎಂದರೆ  ರೈತರು ತಮಗೆ ಲಾಭದಾಯಕ ಎಂದು ಕಂಡರೆ ಅದೇ ಮಂಡಿಯಲ್ಲಿ ತನ್ನ ಕೃಷಿ ಉತ್ಪಾದನೆಯನ್ನು ಮಾರಾಟ ಮಾಡಬಹುದು, ಆದರೆ ಅವರಿಗೆ ಉತ್ತಮ ಬೆಲೆ ಬೇರೆಡೆ, ಮಂಡಿಗಳಿಗೆ ಹೊರಗೆ ದೊರೆಯುವುದಾದಲ್ಲಿ ಆಗ ಅವರಿಗೆ ಹಕ್ಕು ಇರಬೇಕು ಎಂದು. ನನ್ನ ರೈತ ಸಹೋದರರು ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಬಾಧ್ಯರಲ್ಲವೇ?.

ಈಗ ರೈತರು ತಮ್ಮ ಉತ್ಪನ್ನವನ್ನು ತಮಗೆ ಎಲ್ಲಿ ದರ ಸಿಗುತ್ತದೆಯೋ ಅಲ್ಲಿ ಮಾರಾಟ ಮಾಡಬಹುದು. ಮಂಡಿಗಳೂ ಇರುತ್ತವೆ. ರೈತರು ಮೊದಲು ಮಾರಾಟ ಮಾಡುತ್ತಿದ್ದಂತೆ ಅಲ್ಲಿಯೂ ಮಾರಾಟ ಮಾಡಬಹುದು. ಅದು ರೈತರನ್ನು ಅವಲಂಬಿಸಿದೆ. ವಾಸ್ತವ ಎಂದರೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಹೊಸ ಕಾನೂನು ಬಂದ ಬಳಿಕ ಮಂಡಿಯ ಹೊರಗೆ ಮಾರಾಟ ಮಾಡಲು ಆರಂಭಿಸಿದ್ದಾರೆ. ಇತ್ತೀಚೆಗೆ ಭತ್ತ ಬೆಳೆಯುವ ಕೃಷಿಕರ ಒಂದು ಗುಂಪು ಅಕ್ಕಿ ಗಿರಣಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಅವರ ಆದಾಯ 20 ಶೇಖಡಾ ಹೆಚ್ಚಾಗಿದೆ. ಇನ್ನೊಂದು ಕಡೆಯಲ್ಲಿ ಬಟಾಟೆ ಬೆಳೆಗಾರರು ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಕಂಪೆನಿಯು ಅವರ ವೆಚ್ಚದ 35 ಶೇಖಡಾ ಹೆಚ್ಚುವರಿ ಪಾವತಿಯನ್ನು ಗ್ಯಾರಂಟಿಯಾಗಿ ನೀಡಲು ಭರವಸೆ ನೀಡಿದೆ. ಮೆಣಸು ಮತ್ತು ಬಾಳೆಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಿದ ರೈತರೊಬ್ಬರು ದುಪ್ಪಟ್ಟು ದರ ಪಡೆದಿರುವ ಬಗ್ಗೆ ನಾನು ವರದಿಯನ್ನು ಓದಿದೆ. ಈಗ ನೀವು ಹೇಳಿ, ಪ್ರತಿಯೊಬ್ಬ ರೈತರಿಗೂ ಲಾಭ ಮತ್ತು ಹಕ್ಕು ಸಿಗಬಾರದೇ?. ಸುಧಾರಣೆಗಳು ಹಿಂದೆ ರೈತರನ್ನು ಮಂಡಿಗಳಿಗೆ ಕಟ್ಟಿ ಹಾಕಿದ ಸ್ಥಿತಿಯಿಂದ ವಿಮೋಚನೆ ಮಾಡುವಂತಹವು. ನಾನು ಪುನರುಚ್ಚರಿಸುತ್ತೇನೆ. ಭಾರತದ ಯಾವುದೇ ಭಾಗದ ಯಾವುದೇ ಮಂಡಿಯನ್ನೂ ಕಾನೂನು ಜಾರಿಗೆ ಬಂದ ಆರು ತಿಂಗಳ ಅವಧಿಯಲ್ಲಿ ಮುಚ್ಚಿಲ್ಲ. ಹಾಗಿರುವಾಗ ಸುಳ್ಳನ್ನು ಯಾಕೆ ಹೇಳಲಾಗುತ್ತಿದೆ. ವಾಸ್ತವ ಎಂದರೆ ನಮ್ಮ ಸರಕಾರವು .ಪಿ.ಎಂ.ಸಿ. ಗಳನ್ನು ಆಧುನೀಕರಣ ಮಾಡಲು ಮತ್ತು ಕಂಪ್ಯೂಟರೀಕರಣಗೊಳಿಸಲು 500 ಕೋ.ರೂ.ಗಳಿಗೂ ಹೆಚ್ಚು ಹಣವನ್ನು ವ್ಯಯ ಮಾಡುತ್ತಿದೆ. ಹಾಗಿರುವಾಗ .ಪಿ.ಎಂ.ಸಿ.ಗಳನ್ನು ಮುಚ್ಚುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತದೆ?. ಸುಳ್ಳನ್ನು ಪದೇ ಪದೇ ಹರಡಲಾಗುತ್ತಿದೆ, ಯಾವುದೇ ಕಾರಣವಿಲ್ಲದೆ

ಸ್ನೇಹಿತರೇ,

ಕೃಷಿ ಸುಧಾರಣೆಗಳಿಗೆ ಸಂಬಂಧಿಸಿ ಸಾರಲಾಗುತ್ತಿರುವ ಮೂರನೇ ಅತಿ ದೊಡ್ಡ ಸುಳ್ಳೆಂದರೆ ಕೃಷಿ ಒಪ್ಪಂದದ್ದು. ದೇಶದಲ್ಲಿ ಕೃಷಿ ಒಪ್ಪಂದ ಹೊಸತೇನಲ್ಲ. ನಾವೇನು ಕೃಷಿ ಒಪ್ಪಂದಗಳನ್ನು ಹೊಸ ಕಾನೂನುಗಳನ್ನು ಮಾಡಿ ಇದಕ್ಕಿದ್ದಂತೆ ಅನುಷ್ಟಾನ ಮಾಡುತ್ತಿದ್ದೇವೆಯೇ?. ಇಲ್ಲ. ಬಹಳ ಹಿಂದಿನಿಂದಲೂ ನಮ್ಮ ದೇಶದಲ್ಲಿ ಕೃಷಿ ಒಪ್ಪಂದಗಳು ಇದ್ದವು. ಬರೇ ಒಂದು ಅಥವಾ ಎರಡು ರಾಜ್ಯಗಳಲ್ಲಿ ಅಲ್ಲ. ಬಹಳ ಹಿಂದಿನಿಂದಲೂ ಹಲವಾರು ರಾಜ್ಯಗಳಲ್ಲಿ ಕೃಷಿ ಒಪ್ಪಂದಗಳು ಚಾಲ್ತಿಯಲ್ಲಿದ್ದವು. ಇತ್ತೀಚೆಗೆ ಒಬ್ಬರು ನನಗೆ 2019 ಮಾರ್ಚ್ 8   ದಿನಾಂಕದ ಸುದ್ದಿ ಪತ್ರಿಕೆಯ ವರದಿಯನ್ನು ಕಳುಹಿಸಿದ್ದರು. ಪಂಜಾಬಿನಲ್ಲಿರುವ ಕಾಂಗ್ರೆಸ್ ಸರಕಾರ ಬಹುರಾಷ್ಟ್ರೀಯ ಕಂಪೆನಿಗಳ ಜೊತೆ 800 ಕೋ.ರೂ. ಮೌಲ್ಯದ ಕೃಷಿ ಒಪ್ಪಂದಗಳನ್ನು ಮಾಡಿಕೊಂಡಿದೆ. ನಮ್ಮ ಸರಕಾರಕ್ಕೆ ಇದು ಕೂಡಾ ಸಂತೋಷದ ಸಂಗತಿ. ಪಂಜಾಬಿನ ರೈತ ಸಹೋದರರು ಮತ್ತು ಸಹೋದರಿಯರ ಕೃಷಿಯಲ್ಲಿ ಹೆಚ್ಚು ಹೂಡಿಕೆ ಬರಬೇಕು.

ಸ್ನೇಹಿತರೇ,

ದೇಶದಲ್ಲಿ ಮೊದಲಿನ ಕೃಷಿ ಒಪ್ಪಂದಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಬಹಳ ದೊಡ್ಡ ಅಪಾಯಗಳಿದ್ದವು. ನಮ್ಮ ಸರಕಾರವು ಹೊಸ ಕಾನೂನುಗಳ ಅಡಿಯಲ್ಲಿ ಕೃಷಿ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ರೈತರನ್ನು ರಕ್ಷಿಸಲು ಕಾನೂನು ನಿಬಂಧನೆಗಳನ್ನು ಅಳವಡಿಸಿಕೊಂಡಿದೆ. ಕೃಷಿ ಒಪ್ಪಂದಗಳಲ್ಲಿ ಗರಿಷ್ಟ ಲಾಭ ರೈತರಿಗೆ ದೊರೆಯುವಂತೆ ಖಾತ್ರಿಪಡಿಸಿಕೊಂಡಿದ್ದೇವೆ. ಕೃಷಿಕರೊಂದಿಗೆ ಒಪ್ಪಂದ ಮಾಡಿಕೊಳ್ಳುವವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳದಂತೆ ಖಾತ್ರಿಪಡಿಸಲು ಕಾನೂನು ನಿಬಂಧನೆಗಳನ್ನು ಅಳವಡಿಸಿದ್ದೇವೆ. ಪ್ರವರ್ತಕರು ಅಥವಾ ಭಾಗೀದಾರರು ರೈತರಿಗೆ ನೀಡಿದ ಭರವಸೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಹೊಸ ಕಾಯ್ದೆಗಳು ಜಾರಿಗೆ ಬಂದ ನಂತರ ರೈತರು ತಮ್ಮ ಸ್ಥಳೀಯ ಎಸ್.ಡಿ.ಎಂ.ಗಳಿಗೆ ದೂರು ನೀಡಿದ ಹಲವು ಪ್ರಕರಣಗಳು ನಡೆದಿವೆ ಮತ್ತು ದೂರು ನೀಡಿದ ಕೆಲವೇ ದಿನಗಳಲ್ಲಿ ರೈತರಿಗೆ ಬಾಕಿ ಹಣ ಸಂದಾಯವಾಗಿದೆ.

ಸ್ನೇಹಿತರೇ,

ಗುತ್ತಿಗೆ ಕೃಷಿ ಅಡಿಯಲ್ಲಿ, ಗುತ್ತಿಗೆ ಬರೇ ಬೆಳೆ ಅಥವಾ ಉತ್ಪಾದನೆಗಷ್ಟೇ ಸೀಮಿತವಾಗಿರುತ್ತದೆ. ಭೂಮಿ ರೈತರ ಬಳಿಯೇ ಇರುತ್ತದೆ. ಒಪ್ಪಂದ ಯಾವ ರೀತಿಯಿಂದಲೂ ಭೂಮಿಗೆ ಸಂಬಂಧಿಸಿರುವುದಿಲ್ಲ. ಅಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದರೂ, ರೈತರಿಗೆ ಗುತ್ತಿಗೆ ಕರಾರಿನನ್ವಯ ಪೂರ್ಣ ಹಣ ಲಭಿಸುತ್ತದೆ. ಹೊಸ ಕಾನೂನುಗಳ ಪ್ರಕಾರ, ಭಾಗೀದಾರರು ತಾವು ಹೂಡಿದ ಬಂಡವಾಳಕ್ಕೆ ಇದ್ದಕ್ಕಿದ್ದಂತೆ ಹೆಚ್ಚು ಲಾಭವನ್ನು ಪಡೆದರೆ, ಆಗ ಅಲ್ಲಿ ಕಾನೂನಿನಲ್ಲಿ ಗಳಿಸಿದ ಹೆಚ್ಚು ಲಾಭದ ಸ್ವಲ್ಪ ಭಾಗವನ್ನು ರೈತರಿಗೆ ಮೊದಲು ನಿಗದಿ ಮಾಡಿದ್ದ ಒಪ್ಪಂದಕ್ಕಿಂತ ಹೆಚ್ಚುವರಿಯಾಗಿ ಕೊಡಬೇಕು ಎಂಬ ನಿಬಂಧನೆ ಇದೆ.

ಸ್ನೇಹಿತರೇ,

ಗುತ್ತಿಗೆ ಕರಾರು ಮಾಡಿಕೊಳ್ಳಬೇಕು ಎನ್ನುವುದು ಕಡ್ಡಾಯವೇನಲ್ಲ. ಒಪ್ಪಂದ ಮಾಡಿಕೊಳ್ಳಬೇಕೋ, ಬೇಡವೋ ಎಂಬುದು ರೈತರಿಗೆ ಸೇರಿದ್ದು. ಆದರೆ ಯಾರೊಬ್ಬರೂ ವಂಚನೆ ಮಾಡದಂತೆ, ರೈತರಿಗೆ ಅನ್ಯಾಯ ಮಾಡದಂತೆ ನಿಬಂಧನೆಗಳನ್ನು ರೂಪಿಸಲಾಗಿದೆ. ಹೊಸ ಕಾಯ್ದೆಗಳಲ್ಲಿ ದಂಡ ಇರುವುದು ಪ್ರವರ್ತಕರಿಗೆ ಹೊರತು ರೈತರಿಗಲ್ಲ. ಪ್ರವರ್ತಕರಿಗೆ ಗುತ್ತಿಗೆಯನ್ನು ತೆಗೆದುಹಾಕುವ ಅಧಿಕಾರ ಇಲ್ಲ. ಅವರು ಒಂದೊಮ್ಮೆ ಗುತ್ತಿಗೆಯಿಂದ ಹೊರನಡೆದರೆ, ಆಗ ಅವರು ರೈಅತರಿಗೆ ಭಾರೀ ದಂಡ ಪಾವತಿ ಮಾಡಬೇಕಾಗುತ್ತದೆ. ಆದರೆ ರೈತರು ಗುತ್ತಿಗೆಯಿಂದ ಹೊರ ಬರಲು ಇಚ್ಛಿಸಿದರೆ , ಅವರು ಅದನ್ನು ಯಾವುದೇ ದಂಡ ಇಲ್ಲದೆ ಮಾಡಬಹುದು. ನಾನು ರಾಜ್ಯ ಸರಕಾರಗಳಿಗೆ ಗುತ್ತಿಗೆ ಕೃಷಿಯ ಬಗ್ಗೆ ನೀಲ ನಕಾಶೆಯನ್ನು ಸರಳ ಭಾಷೆಯಲ್ಲಿ ರೂಪಿಸಿ ಅದನ್ನು ರೈತರ ಜೊತೆ ಹಂಚಿಕೊಳ್ಳಬೇಕು ಎಂದು ಸಲಹೆ ಮಾಡುತ್ತೇನೆ, ಆಗ ಯಾರಿಗೂ ರೈತರನ್ನು ವಂಚಿಸಲು ಸಾಧ್ಯವಾಗುವುದಿಲ್ಲ.

ಸ್ನೇಹಿತರೇ,

ದೇಶದಾದ್ಯಂತ ರೈತರು ಹೊಸ ಕೃಷಿ ಸುಧಾರಣೆಗಳನ್ನು ಅಂಗೀಕರಿಸಿರುವುದಕ್ಕೆ ಮತ್ತು ಗೊಂದಲಗಳನ್ನು ಹರಡುತ್ತಿರುವವರನ್ನು ಪ್ರಶ್ನಿಸುತ್ತಿರುವುದಕ್ಕೆ  ನಾನು ಸಂತಸಗೊಂಡಿದ್ದೇನೆ. ಕೆಲವು ರೈತರಲ್ಲಿ ಯಾವುದಾದರೂ ಗೊಂದಲಗಳಿದ್ದರೆ, ಕಳವಳಗಳಿದ್ದರೆ, ನಾನು ಅವರಿಗೆ ಮರುಚಿಂತಿಸಲು ಮನವಿ ಮಾಡುತ್ತೇನೆ. ಏನೂ ಆಗಿರದ ಬಗ್ಗೆ ಮತ್ತು ಮುಂದೆಂದೂ ಆಗಲಾರದ ಬಗ್ಗೆ ಸುಳ್ಳುಗಳನ್ನು ಹರಡುತ್ತಿರುವ, ಗೊಂದಲಗಳನ್ನು ಉಂಟು ಮಾಡುತ್ತಿರುವ ಶಕ್ತಿಗಳ ಬಗ್ಗೆ ಜಾಗ್ರತೆಯಿಂದಿರಿ. ಜನರನ್ನು ನನ್ನ ರೈತ ಸಹೋದರರು ಮತ್ತು ಸಹೋದರಿಯರು ಗುರುತಿಸಿಟ್ಟಿರಿ. ಜನರು ಸದಾ ರೈತರನ್ನು ವಂಚಿಸಿದವರು. ಅವರು ಮೊದಲು ರೈತರನ್ನು ದುರುಪಯೋಗ  ಮಾಡಿಕೊಂಡವರು, ಮತ್ತು ಅವರು ಈಗಲೂ ಅದನ್ನೇ ಮಾಡುತ್ತಿದ್ದಾರೆ. ನನ್ನ ಮಾತುಗಳ ಬಳಿಕವೂ, ಸರಕಾರದ ಪ್ರಯತ್ನಗಳ ಹೊರತಾಗಿಯೂ, ಯಾರಿಗಾದರೂ ಏನಾದರೂ ಕಳವಳಗಳು, ಸಂಶಯಗಳು ಇದ್ದರೆ ನಾವು ತಲೆ ಬಾಗಿ, ನಮ್ಮ ಕೈಗಳನ್ನು ಜೋಡಿಸಿ ಮತ್ತು ವಿನಯದಿಂದ ರೈತ ಸಹೋದರರಿಗೆ ಹೇಳಲು ಇಚ್ಛಿಸುತ್ತೇವೆಏನೆಂದರೆ ನಾವು ಯಾವುದೇ ವಿಷಯದಲ್ಲಾದರೂ ಮಾತನಾಡಲು ಸಿದ್ದರಿದ್ದೇವೆ ಮತ್ತು ಅವರ ಕಳವಳಗಳಿಗೆ, ಆತಂಕಗಳಿಗೆ ಪರಿಹಾರ ಒದಗಿಸಲು ಸಿದ್ದರಿದ್ದೇವೆ. ದೇಶದ ರೈತರು ಮತ್ತು ಅವರ ಕಲ್ಯಾಣ ನಮ್ಮ ಆದ್ಯತೆಗಳಲ್ಲಿ ಒಂದು.

ಸ್ನೇಹಿತರೇ,

ಇಂದು, ನಾನು ವಿವರವಾಗಿ ಮಾತನಾಡಿದ್ದೇನೆ ಮತ್ತು ಹಲವಾರು ವಿಷಯಗಳ ಬಗ್ಗೆ ಸತ್ಯ ಏನೆಂಬುದನ್ನು ದೇಶದೆದುರು ಇಟ್ಟಿದ್ದೇನೆ. ನಾನು ಮತ್ತೊಮ್ಮೆ ಡಿಸೆಂಬರ್ 25 ರಂದು ನಮ್ಮ ಪೂಜ್ಯ ಅಟಲ್ ಜೀ ಅವರ ಜನ್ಮ ದಿನದಂದು ದೇಶದ ರೈತರ ಜೊತೆ ವಿವರವಾಗಿ ಮಾತನಾಡಲಿದ್ದೇನೆ. ದಿನ ಪಿ.ಎಂ.ಕಿಸಾನ್ ಸಮ್ಮಾನ್ ನಿಧಿಯ ಇನ್ನೊಂದು  ಕಂತನ್ನು ಕೋಟ್ಯಾಂತರ ರೈತರ  ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು. ನನ್ನ ದೇಶದ ರೈತರು ಕಾಲದ ಜೊತೆ ಬದಲಾಗಲು ನಿರ್ಧರಿಸಿದ್ದಾರೆ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ.

ಹೊಸ ನಿರ್ಧಾರಗಳೊಂದಿಗೆ, ನಾವು ಹೊಸ ವ್ಯಾಪ್ತಿಗಳನ್ನು ಜೋಡಿಸಿಕೊಂಡು ದೇಶವನ್ನು ಯಶೋಗಾಥೆಯತ್ತ ಕೊಂಡೊಯ್ಯೋಣ, ಇದರಿಂದ ದೇಶದ ರೈತರಿಗೂ ಒಳಿತಾಗುತ್ತದೆ. ನಂಬಿಕೆಯೊಂದಿಗೆ, ನಾನು ಮತ್ತೊಮ್ಮೆ ಮಧ್ಯಪ್ರದೇಶ ಸರಕಾರವನ್ನು ಅಭಿನಂದಿಸುತ್ತೇನೆ ಮತ್ತು ಇಂದು ಮಧ್ಯಪ್ರದೇಶದ ಮಿಲಿಯಾಂತರ ರೈತರ ಜೊತೆ ಮಾತನಾಡುವ ಅವಕಾಶ ನನಗೆ ಒದಗಿಸಿಕೊಟ್ಟುದಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು  ಸಲ್ಲಿಸುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು.

ಬಹಳ ಬಹಳ ಧನ್ಯವಾದಗಳು!

***



(Release ID: 1683261) Visitor Counter : 188