ಪ್ರಧಾನ ಮಂತ್ರಿಯವರ ಕಛೇರಿ

ಬಾಹ್ಯಾಕಾಶ ಕ್ಷೇತ್ರದ ಉದ್ಯಮ, ನವೋದ್ಯಮ ಮತ್ತು ತಂತ್ರಜ್ಞರೊಂದಿಗೆ ಪ್ರಧಾನಿ ಸಂವಾದ


ಬಾಹ್ಯಾಕಾಶ ವಲಯದ ಸುಧಾರಣೆಗಳು ಸುಲಭ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ; ಪ್ರತಿಯೊಂದು ಹಂತದಲ್ಲೂ ಸಹಾಯವನ್ನು ಒದಗಿಸಲಾಗುತ್ತಿದೆ

ದೇಶವು ಶೀಘ್ರದಲ್ಲೇ ಬಾಹ್ಯಾಕಾಶ ಸ್ವತ್ತುಗಳ ಉತ್ಪಾದನಾ ಕೇಂದ್ರವಾಗಲಿದೆ: ಪ್ರಧಾನಿ ಭರವಸೆ

ಬಾಹ್ಯಾಕಾಶ ಕಾರ್ಯಕ್ರಮದ ಪ್ರಯೋಜನಗಳು ಬಡವರಿಗೆ ತಲುಪುವುದು ನಮ್ಮ ಉದ್ದೇಶವಾಗಿದೆ

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಪ್ರತಿಭೆಗಳು ವಿಶ್ವಾದ್ಯಂತ ಹೆಸರು ಮಾಡಿರುವಂತೆ, ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಆಗಬೇಕು: ಪ್ರಧಾನಿ ನರೇಂದ್ರ ಮೋದಿ

Posted On: 14 DEC 2020 5:42PM by PIB Bengaluru

ಬಾಹ್ಯಾಕಾಶ ಕ್ಷೇತ್ರದ ಚಟುವಟಿಕೆಗಳನ್ನು ಉತ್ತೇಜಿಸಲು ಬಾಹ್ಯಾಕಾಶ ವಲಯದ ಪ್ರಮುಖ ಉದ್ಯಮಗಳು, ನವೋದ್ಯಮಗಳು ಮತ್ತು ತಂತ್ರಜ್ಞರೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಪ್ರಧಾನ ಮಂತ್ರಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟವು 2020 ರ ಜೂನ್‌ನಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಲು ಮುಕ್ತಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿತು. ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅಧಿಕಾರ ಕೇಂದ್ರ (ಐಎನ್-ಸ್ಪೇಸ್) ರಚನೆಯೊಂದಿಗೆ, ಸುಧಾರಣೆಗಳು ಖಾಸಗಿ ಕಂಪನಿಗಳು ಮತ್ತು ಸ್ಟಾರ್ಟ್ ಅಪ್‌ಗಳಿಗೆ ಅವಕಾಶವನ್ನು ಒದಗಿಸುತ್ತವೆ. ಇದರ ನಂತರ, ಹಲವಾರು ಉದ್ಯಮಗಳು ಬಾಹ್ಯಾಕಾಶ ಇಲಾಖೆ ಅಡಿಯಲ್ಲಿರುವ ಐಎನ್-ಸ್ಪೇಸ್ ಗೆ ಪ್ರಸ್ತಾಪಗಳನ್ನು ಸಲ್ಲಿಸಿವೆ. ಈ ಪ್ರಸ್ತಾಪಗಳು ಉಪಗ್ರಹ ತಾರಾಪುಂಜ, ಸಣ್ಣ ಉಪಗ್ರಹ ಉಡಾವಣಾ ವಾಹಕಗಳು, ಭೂ ಕೇಂದ್ರ, ಜಿಯೋಸ್ಪೇಷಿಯಲ್ ಸೇವೆಗಳು, ಪ್ರೊಪಲ್ಷನ್ ವ್ಯವಸ್ಥೆಗಳು ಮತ್ತು ಅಪ್ಲಿಕೇಶನ್ ಉತ್ಪನ್ನಗಳಂತಹ ವ್ಯಾಪಕ ಚಟುವಟಿಕೆಗಳಿಗೆ ಸಂಬಂಧಿಸಿವೆ.

ಬಾಹ್ಯಾಕಾಶ ವಲಯದಲ್ಲಿ ಭಾರತದ ಸಾಮರ್ಥ್ಯದ ಅನ್ಲಾಕ್ 

ಭಾಗವಹಿಸಿದವರು ಇದುವರೆಗಿನ ತಮ್ಮ ಅನುಭವದ ಬಗ್ಗೆ ನೀಡಿದ ಪ್ರತಿಕ್ರಿಯೆಗೆ ಧನ್ಯವಾದ ತಿಳಿಸಿದ ಪ್ರಧಾನಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಅನ್ಲಾಕ್ ಮಾಡುವ ನಿರ್ಧಾರವು ಈ ವಲಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದು ಅವರು ಹೇಳಿದರು. ಈ ಪ್ರಯತ್ನದಲ್ಲಿ ಭಾಗವಹಿಸುವವರಿಗೆ ಸರ್ಕಾರದ ಸಂಪೂರ್ಣ ಮತ್ತು ಮುಕ್ತ ಮನಸ್ಸಿನ ಬೆಂಬಲವನ್ನು ನೀಡುವ ಭರವಸೆ ನೀಡಿದರು. ನೀತಿಗಳಲ್ಲಿನ ವೃತ್ತಿಪರತೆ ಮತ್ತು ಪಾರದರ್ಶಕತೆ ಮತ್ತು ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಬಾಹ್ಯಾಕಾಶ ಕ್ಷೇತ್ರಕ್ಕೆ ಸೇರುವ ಕಂಪನಿಗಳಿಗೆ ಪ್ರಯೋಜನಕಾರಿಯಾಗಿವೆ ಎಂದು ಅವರು ಹೇಳಿದರು.

ರಾಕೆಟ್‌ಗಳು ಮತ್ತು ಉಪಗ್ರಹಗಳನ್ನು ತಯಾರಿಸುವ ಕಂಪನಿಗಳ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ಇದು ಒಂದು ದೊಡ್ಡ ಬದಲಾವಣೆಯನ್ನು ತರುತ್ತದೆ, ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಪರಾಕ್ರಮವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯು ಹೈಟೆಕ್ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದ್ದು, ಇದು ಐಐಟಿ / ಎನ್‌ಐಟಿ ಮತ್ತು ಇತರ ತಾಂತ್ರಿಕ ಸಂಸ್ಥೆಗಳ ಪ್ರತಿಭೆಗಳಿಗೆ  ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಐಟಿ ಕ್ಷೇತ್ರದಲ್ಲಿ ಭಾರತೀಯ ಪ್ರತಿಭೆಗಳು ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿರುವಂತೆಯೇ, ಬಾಹ್ಯಾಕಾಶ ಕ್ಷೇತ್ರದಲ್ಲೂ ಹೆಸರು ಮಾಡಲು ಸಾಧ್ಯವಾಗುತ್ತದೆ ಎಂಬುದು ತಮ್ಮ ದೃಢ ವಿಶ್ವಾಸವಾಗಿದೆ ಎಂದು ಅವರು ಹೇಳಿದರು.

ಸುಲಭ ವ್ಯವಹಾರದಿಂದಾಚೆಗೆ ಹೋಗುವುದು

ಬಾಹ್ಯಾಕಾಶ ವಲಯದಲ್ಲಿನ ಸುಧಾರಣೆಗಳು ಸುಲಭ ವ್ಯವಹಾರವನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಪ್ರಧಾನಿ ಒತ್ತಿಹೇಳಿದರು. ಬದಲಿಗೆ ಲಭ್ಯವಿರುವ ಪರೀಕ್ಷಾ ಸೌಲಭ್ಯಗಳು ಮತ್ತು ಉಡಾವಣಾ ನೆಲೆಗಳನ್ನು ಒಳಗೊಂಡಂತೆ ಪ್ರತಿ ಹಂತದಲ್ಲಿ ಭಾಗವಹಿಸುವವರಿಗೆ ಸಹಾಯವನ್ನು ಒದಗಿಸಲು ಅಗತ್ಯವಾದ ಕಾರ್ಯವಿಧಾನಗಳನ್ನು ರೂಪಿಸಲಾಗಿದೆ. ಈ ಸುಧಾರಣೆಗಳ ಮೂಲಕ, ಭಾರತವು ಸ್ಪರ್ಧಾತ್ಮಕ ಬಾಹ್ಯಾಕಾಶ ಮಾರುಕಟ್ಟೆಯಾಗುವುದು ಮಾತ್ರವಲ್ಲ, ಬಾಹ್ಯಾಕಾಶ ಕಾರ್ಯಕ್ರಮದ ಪ್ರಯೋಜನಗಳು ಬಡವರಿಗೆ ತಲುಪುವುದನ್ನು ಖಚಿತಪಡಿಸಲಾಗುತ್ತದೆ ಎಂದು ಅವರು ಹೇಳಿದರು. ಭಾಗವಹಿಸುವವರು ಮುಕ್ತವಾಗಿ ಯೋಚಿಸಬೇಕು, ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಅವರು ಕರೆಕೊಟ್ಟರು.

ಸಂಪರ್ಕ ಮತ್ತು ಸಂಚರಣೆಯಲ್ಲಿ ಬಾಹ್ಯಾಕಾಶ ಕ್ಷೇತ್ರದ ಮಹತ್ವವನ್ನು ಪ್ರಧಾನಿ ಒತ್ತಿಹೇಳಿದರು. ಭಾಗವಹಿಸುವವರು ಬಾಹ್ಯಾಕಾಶ ಸಂಶೋಧನೆಯ ಈ ಯುಗದಲ್ಲಿ ಇಸ್ರೋ ಜೊತೆ ಸಹ ಪ್ರಯಾಣಿಕರಾಗುತ್ತಾರೆ ಎಂದು ಭರವಸೆ ನೀಡಿದರು. ದೇಶವು ಶೀಘ್ರದಲ್ಲೇ ಬಾಹ್ಯಾಕಾಶ ಸ್ವತ್ತುಗಳ ಉತ್ಪಾದನಾ ಕೇಂದ್ರವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವವರು
ಐಎನ್-ಸ್ಪೇಸ್ ನಿಂದ ಅನುಮತಿ ಪಡೆಯಲು ಮತ್ತು ಬಾಹ್ಯಾಕಾಶ ಇಲಾಖೆಯಿಂದ ಬೆಂಬಲ ಪಡೆಯಲು ಉದ್ಯಮ ಸಲ್ಲಿಸಿರುವ ವಿವಿಧ ಪ್ರಸ್ತಾಪಗಳ ಬಗ್ಗೆ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರು ಪ್ರಧಾನಿಯವರಿಗೆ ವಿವರಿಸಿದರು. ಬಾಹ್ಯಾಕಾಶ ಚಟುವಟಿಕೆಗಳನ್ನು ಕೈಗೊಳ್ಳಲು 25 ಕ್ಕೂ ಹೆಚ್ಚು ಉದ್ಯಮಗಳು ಈಗಾಗಲೇ ಬಾಹ್ಯಾಕಾಶ ಇಲಾಖೆಯನ್ನು ಸಂಪರ್ಕಿಸಿವೆ ಎಂದು ಅವರು ಮಾಹಿತಿ ನೀಡಿದರು.

ಸಂವಾದದ ಸಮಯದಲ್ಲಿ, ಭಾಗವಹಿಸುವವರು ಸುಧಾರಣೆಗಳ ಕುರಿತು ಪ್ರಧಾನ ಮಂತ್ರಿಯವರಿಗೆ ಫೀಡ್ ಬ್ಯಾಕ್ ನೀಡಿದರು. ಭಾರ್ತಿ ಎಂಟರ್‌ಪ್ರೈಸಸ್‌ನ ಶ್ರೀ ಸುನಿಲ್ ಭಾರ್ತಿ ಮಿತ್ತಲ್, ಲಾರ್ಸೆನ್ ಅಂಡ್ ಟೌಬ್ರೊ ಲಿಮಿಟೆಡ್‌ನ ಶ್ರೀ ಜಯಂತ್ ಪಾಟೀಲ್, ಅಗ್ನಿಕುಲ್ ಕಾಸ್ಮೋಸ್ ಪ್ರೈವೇಟ್ ಲಿಮಿಟೆಡ್‌ನ ಶ್ರೀ ಶ್ರೀನಾಥ್ ರವಿಚಂದ್ರನ್, ಸ್ಕೈರೂಟ್ ಏರೋಸ್ಪೇಸ್ ಲಿಮಿಟೆಡ್‌ನ ಶ್ರೀ ಪವನ್ ಕುಮಾರ್ ಚಂದನಾ, ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈ.ಲಿ.ನ ಕರ್ನಲ್ ಎಚ್ ಎಸ್ ಶಂಕರ್. ಮ್ಯಾಪ್ಮಿಇಂಡಿಯಾದ ಶ್ರೀ ರಾಕೇಶ್ ವರ್ಮಾ, ಪಿಕ್ಸೆಲ್ ಇಂಡಿಯಾದ ಶ್ರೀ ಅವೈಸ್ ಅಹ್ಮದ್ ಮತ್ತು ಸ್ಪೇಸ್ ಕಿಡ್ಜ್ ಇಂಡಿಯಾದ ಶ್ರೀಮತಿ ಕೇಸನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 

ಖಾಸಗಿಯವರ ಭಾಗವಹಿಸುವಿಕೆಗೆ ಈ ಕ್ಷೇತ್ರವನ್ನು ತೆರೆಯುವ ಕ್ರಮಕ್ಕೆ ಅವರು ಪ್ರಧಾನ ಮಂತ್ರಿಯವರಿಗೆ ಧನ್ಯವಾದ ತಿಳಿಸಿದರು. ಇದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತವು ಮಹಾಶಕ್ತಿಯಾಗಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಂಕಲ್ಪ ಮಾಡಿದರು.  ತಮ್ಮ ಯೋಜನೆಗಳಿಗೆ ಇಸ್ರೋ ಒದಗಿಸುತ್ತಿರುವ ಸಹಾಯ ಮತ್ತು ಮಾರ್ಗದರ್ಶನವನ್ನು ಅವರು ಶ್ಲಾಘಿಸಿದರು. ಇಸ್ರೋ ಜೊತೆ ಖಾಸಗಿ ಏಜೆನ್ಸಿಗಳ ಸಹಯೋಗವು ಹೆಚ್ಚಿನ ರಾಕೆಟ್ ಉಡಾವಣೆಗಳಿಗೆ ಕಾರಣವಾಗುವುದು ಮಾತ್ರವಲ್ಲದೆ, ರಾಕೆಟ್ ಎಂಜಿನ್ ಅಭಿವೃದ್ಧಿಯಲ್ಲಿ ಹೊಸ ತಾಂತ್ರಿಕ ಪ್ರಗತಿಯನ್ನು ರೂಪಿಸುತ್ತದೆ ಎಂದು ಹೇಳಿದರು. ಮಕ್ಕಳನ್ನು ಈ ವಲಯಕ್ಕೆ ಆಕರ್ಷಿಸಲು ಇಸ್ರೋ ಸೌಲಭ್ಯಗಳನ್ನು ಅವರಿಗೆ ಮುಕ್ತಗೊಳಿಸುವಂತೆ ಅವರು ಸಲಹೆ ನೀಡಿದರು.

***



(Release ID: 1680659) Visitor Counter : 231