ಸಂಪುಟ

ಆತ್ಮನಿರ್ಭರ ಭಾರತ ರೋಜ್ಗಾರ್ ಯೋಜನೆ (ಎ.ಬಿ.ಆರ್.ವೈ) ಗೆ ಸಂಪುಟದ ಅನುಮೋದನೆ

Posted On: 09 DEC 2020 3:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಔಪಚಾರಿಕ ವಲಯದಲ್ಲಿ ಉದ್ಯೋಗಾವಕಾಶಕ್ಕೆ ಉತ್ತೇಜನ ನೀಡಲು ಮತ್ತು ಕೋವಿಡ್ ಚೇತರಿಕೆ ಹಂತದಲ್ಲಿ ಆತ್ಮ ನಿರ್ಭರ ಭಾರತ ಪ್ಯಾಕೇಜ್ 3.0 ಅಡಿಯಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡಲು ಆತ್ಮನಿರ್ಭರ ಭಾರತ ರೋಜ್ಗಾರ್ ಯೋಜನೆ (ಎಬಿಆರ್.ವೈ)ಗೆ ತನ್ನ ಅನುಮೋದನೆ ನೀಡಿದೆ.

ಸಂಪುಟವು ಪ್ರಸಕ್ತ ಹಣಕಾಸು ವರ್ಷದಲ್ಲಿ 1,584 ಕೋಟಿ ರೂಪಾಯಿ ಮತ್ತು 2020-23ರ ಇಡಿ ಯೋಜನಾ ಅವಧಿಗೆ 22,810 ಕೋಟಿ ರೂ.ಗಳ ವೆಚ್ಚಕ್ಕೂ ತನ್ನ ಸಮ್ಮತಿ ಸೂಚಿಸಿದೆ.

ಯೋಜನೆಯ ಮುಖ್ಯಾಂಶಗಳು ಕೆಳಕಂಡಂತಿವೆ:

  1. 2020ರ ಅಕ್ಟೋಬರ್ 1ರಂದು ಅಥವಾ ನಂತರ ಮತ್ತು 2021 ಜೂನ್ 30 ರವರೆಗೆ ಹೊಸ ಉದ್ಯೋಗದಲ್ಲಿ ತೊಡಗಿಕೊಳ್ಳುವವರಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಎರಡು ವರ್ಷಗಳವರೆಗೆ ಸಹಾಯಧನವನ್ನು ನೀಡುತ್ತದೆ.
  2. ಭಾರತ ಸರ್ಕಾರವು 1000 ಉದ್ಯೋಗಿಗಳವರೆಗೆ ಇರುವ ಸ್ಥಾಪನೆಗಳಲ್ಲಿ ಉದ್ಯೋಗ ಪಡೆಯುವ ಹೊಸ ಉದ್ಯೋಗಿಗಳಿಗೆ ಎರಡು ವರ್ಷಗಳವರೆಗೆ ಶೇ.12ರಷ್ಟು ಉದ್ಯೋಗಿಗಳ ವಂತಿಗೆ ಮತ್ತು ಶೇ.12ರಷ್ಟು ಉದ್ಯೋಗದಾತರ ವಂತಿಗೆ ಸೇರಿ ಸಂಬಳದ ಶೇ.24ರಷ್ಟನ್ನು ತಾನೇ ಪಾವತಿಸುತ್ತದೆ.
  3. ಭಾರತ ಸರ್ಕಾರವು 1000ಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಸ್ಥಾಪನೆಗಳಿಗೆ ಸಂಬಂಧಿಸಿದಂತೆ ಉದ್ಯೋಗಿಗಳ ಪಾಲಿನ ಇಪಿಎಫ್ ವಂತಿಗೆಯನ್ನು ಮಾತ್ರವೇ ಅಂದರೆ ವೇತನದ ಶೇ.12ರಷ್ಟನ್ನು ಹೊಸ ಉದ್ಯೋಗಿಗಳಿಗೆ 2 ವರ್ಷಗಳವರೆಗೆ ನೀಡುತ್ತದೆ.
  4. ಮಾಸಿಕ ವೇತನ ರೂ.15,000ಕ್ಕಿಂತ ಕಡಿಮೆ ಪಡೆಯುವ ನೌಕರರು 2020ರ ಅಕ್ಟೋಬರ್ 1ಕ್ಕೆ ಮೊದಲು ನೌಕರರ ಭವಿಷ್ಯ ನಿಧಿ (ಇಪಿಎಫ್.ಓ.)ಯಲ್ಲಿ ನೋಂದಣಿಯಾಗಿರುವ ಸ್ಥಾಪನೆಗಳಲ್ಲಿ ಕೆಲಸ ಮಾಡದೇ ಇದ್ದಲ್ಲಿ ಮತ್ತು ಸಾರ್ವತ್ರಿಕ ಖಾತೆ ಸಂಖಅಯೆಯನ್ನು ಅಥವಾ ಇಪಿಎಫ್ ಸದಸ್ಯ ಖಾತೆ ಸಂಖ್ಯೆಯನ್ನು 2020ರ ಅಕ್ಟೋಬರ್ 1ಕ್ಕೆ ಮೊದಲು ಹೊಂದದೇ ಇದ್ದಲ್ಲಿ ಅವರೂ ಪ್ರಯೋಜನಕ್ಕೆ ಅರ್ಹರಾಗುತ್ತಾರೆ.
  5. ಯಾವುದೇ ಇಪಿಎಫ್ ಸದಸ್ಯರು ಸಾರ್ವತ್ರಿಕ ಖಾತೆ ಸಂಖ್ಯೆ (ಯು.ಎ.ಎನ್.) ಹೊಂದಿದ್ದಲ್ಲಿ ಅವರ ಮಾಸಿಕ ರೂ. 15,000 ಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಲ್ಲಿ ಮತ್ತು ಅವರು ಕೋವಿಡ್ ಸಾಂಕ್ರಾಮಿಕದ ವೇಳೆ ಅಂದರೆ 01.03.2020 ರಿಂದ 30.09.2020ರ ನಡುವೆ ಉದ್ಯೋಗ ತೊರೆದಿದ್ದಲ್ಲಿ ಮತ್ತು ಯಾವುದೇ ಇಪಿಎಫ್ ಇರುವ ಸ್ಥಾಪನೆಯಲ್ಲಿ 30.09.2020ರವರೆಗೆ ಉದ್ಯೋಗಕ್ಕೆ ಸೇರದೇ ಇದ್ದಲ್ಲಿ ಅವರೂ ಕೂಡ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
  6. ಇಪಿಎಫ್.ಓ ಆಧಾರ್ ಸಂಪರ್ಕಿತ ಸದಸ್ಯರ ಖಾತೆಗೆ ಎಲೆಕ್ಟ್ರಾನಿಕ್ ಮಾದರಿಯಲ್ಲಿ ವಂತಿಗೆಯನ್ನು ಜಮಾ ಮಾಡುತ್ತದೆ.
  7. ಇಪಿಎಫ್.ಓ. ಯೋಜನೆಗೆ ಒಂದು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಒಂದು ಪ್ರಕ್ರಿಯೆಯನ್ನೂ ಅಭಿವೃದ್ಧಿ ಮಾಡಿದೆ, ಅದು ಪಾರದರ್ಶಕ ಮತ್ತು ತನ್ನ ಕಡೆಯಿಂದ ಹೊಣೆಯಾರಿಕೆಯಿಂದ ಕೂಡಿದೆ.
  8. ಇಪಿಎಫ್.ಓ ಜಾರಿಗೆ ತಂದ ಯಾವುದೇ ಯೋಜನೆಯೊಂದಿಗೆ ಎಬಿಆರ್‌.ವೈ ಅಡಿಯಲ್ಲಿ ಒದಗಿಸಲಾದ ಪ್ರಯೋಜನಗಳ ಪುನರಾವರ್ತನೆಯಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇಪಿಎಫ್‌.ಒ ವಿಧಾನವನ್ನೂ ರೂಪಿಸುತ್ತಿದೆ.

***(Release ID: 1679425) Visitor Counter : 384