ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಮತ್ತು ಫ್ರಾನ್ಸ್ ಅಧ್ಯಕ್ಷ ಘನತೆವೆತ್ತ ಎಮ್ಯಾನುಯೆಲ್ ಮೆಕ್ರಾನ್ ನಡುವೆ ದೂರವಾಣಿ ಸಂಭಾಷಣೆ

Posted On: 07 DEC 2020 10:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಎಮ್ಯಾನ್ಯುಯಲ್ ಮೆಕ್ರಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಫ್ರಾನ್ಸ್ ನಲ್ಲಿ ಭಯೋತ್ಪಾದಕ ದಾಳಿಯ ಕುರಿತಂತೆ ಅಧ್ಯಕ್ಷ ಮೆಕ್ರಾನ್ ಅವರಿಗೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿಯವರು, ಭಯೋತ್ಪಾದನೆ, ವಿಧ್ವಂಸಕತೆ ಮತ್ತು ಮೂಲಭೂತವಾದದ ವಿರುದ್ಧದ ಫ್ರಾನ್ಸ್ ನ ಹೋರಾಟಕ್ಕೆ ಭಾರತದ ಸಂಪೂರ್ಣ ಬೆಂಬಲ ಸೂಚಿಸಿದರು.

ಇಬ್ಬರೂ ನಾಯಕರು ಕೋವಿಡ್-19 ಲಸಿಕೆಗಳನ್ನು ಕೈಗೆಟುಕುವ ದರದಲ್ಲಿ ದೊರಕುವಂತೆ ಮಾಡುವುದು, ಕೋವಿಡ್ ನಂತರದ ಆರ್ಥಿಕ ಚೇತರಿಕೆ, ಭಾರತ-ಪೆಸಿಫಿಕ್ ಪ್ರದೇಶದಲ್ಲಿನ ಸಹಕಾರ, ಸಾಗರ ಭದ್ರತೆ, ರಕ್ಷಣಾ ಸಹಕಾರ, ಡಿಜಿಟಲ್ ಆರ್ಥಿಕತೆ, ಸೈಬರ್ ಸುರಕ್ಷತೆ, ಬಹುಪಕ್ಷೀಯತೆ ಬಲಪಡಿಸುವುದು ಮತ್ತು ಹವಾಮಾನ ಬದಲಾವಣೆ ಹಾಗೂ ಜೀವವೈವಿಧ್ಯತೆ ಸೇರಿದಂತೆ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಪರಸ್ಪರ ಹಿತಾಸಕ್ತಿಯ ಇತರ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು.

ಇಬ್ಬರೂ ನಾಯಕರು ಇತ್ತೀಚಿನ ವರ್ಷಗಳಲ್ಲಿ ಭಾರತ-ಫ್ರಾನ್ಸ್ ಕಾರ್ಯತಂತ್ರದ ಸಹಭಾಗಿತ್ವವು ಪಡೆದುಕೊಂಡಿರುವ ಆಳ ಮತ್ತು ಬಲದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು ಮತ್ತು ಕೋವಿಡ್ ನಂತರದ ಯುಗದಲ್ಲಿ ಒಗ್ಗೂಡಿ ಕೆಲಸ ಮಾಡುವುದನ್ನು ಮುಂದುವರಿಸಲು ಸಮ್ಮತಿಸಿದರು.

ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಸುಧಾರಿಸಿದ ತರುವಾಯ ಅಧ್ಯಕ್ಷ ಮೆಕ್ರಾನ್ ಅವರನ್ನು ಭಾರತದಲ್ಲಿ ಸ್ವಾಗತಿಸಲು ಬಯಸುವುದಾಗಿ ಪ್ರಧಾನಮಂತ್ರಿ ತಿಳಿಸಿದರು.

***



(Release ID: 1679052) Visitor Counter : 201