ಪ್ರಧಾನ ಮಂತ್ರಿಯವರ ಕಛೇರಿ

ಇಂಡಿಯಾ ಮೊಬೈಲ್ ಕಾಂಗ್ರೆಸ್ 2020 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 07 DEC 2020 3:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020ರ ಡಿಸೆಂಬರ್ 8ರಂದು ಬೆಳಗ್ಗೆ 10.45ಕ್ಕೆ ಇಂಡಿಯಾ ಮೊಬೈಲ್ ಕಾಂಗ್ರೆಸ್(ಐಎಂಸಿ) ವರ್ಚುವಲ್ ಸಮಾವೇಶವನ್ನು ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಈ ಐಎಂಸಿ 2020ಅನ್ನು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ ಮತ್ತು ಭಾರತೀಯ ಸೆಲ್ಯುಲರ್ ಆಪರೇಟರ್ ಅಸೋಸಿಯೇಷನ್(ಸಿಒಎಐ) ಸಹಯೋಗದಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶ 2020ರ ಡಿಸೆಂಬರ್ 8 ರಿಂದ 10ರ ವರೆಗೆ ನಡೆಯಲಿದೆ.

ಐಎಂಸಿ 2020 ಕುರಿತು

ಐಎಂಸಿ 2020 ಸಮಾವೇಶದ ಘೋಷವಾಕ್ಯ “ಸಮಗ್ರ ಆವಿಷ್ಕಾರ – ಸ್ಮಾರ್ಟ್, ಸುಭದ್ರ ಮತ್ತು ಸುಸ್ಥಿರ” ಎಂಬುದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ‘ಆತ್ಮನಿರ್ಭರ ಭಾರತ’ ಉತ್ತೇಜನಕ್ಕೆ ಹಾಗೂ ‘ಡಿಜಿಟಲ್ ಒಳಗೊಳ್ಳುವಿಕೆ’ ಮತ್ತು ‘ಸುಸ್ಥಿರ ಅಭಿವೃದ್ಧಿ’, ‘ಉದ್ಯಮಶೀಲತೆ’ ಮತ್ತು ‘ಆವಿಷ್ಕಾರ’ ಇವುಗಳಿಗೆ ಪೂರಕವಾಗಿ ಇದನ್ನು ಆಯೋಜಿಸಲಾಗಿದೆ. ಅಲ್ಲದೆ ದೂರಸಂಪರ್ಕ ಮತ್ತು ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನ ವಲಯಗಳಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಉತ್ತೇಜನ, ವಿದೇಶಿ ಹಾಗೂ ಸ್ಥಳೀಯ ಬಂಡವಾಳ ಆಕರ್ಷಣೆ ಉದ್ದೇಶವನ್ನು ಹೊಂದಲಾಗಿದೆ.

ಐಎಂಸಿ 2020ರಲ್ಲಿ ನಾನಾ ಸಚಿವಾಲಯಗಳು, ದೂರಸಂಪರ್ಕ ಕಂಪನಿಗಳ ಸಿಇಒಗಳು, ಜಾಗತಿಕ ಸಿಇಒಗಳು, 5ಜಿ ತಜ್ಞರು, ಕೃತಕ ಬುದ್ಧಿಮತ್ತೆ (ಎಐ), ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ), ಡಾಟಾ ಅನಾಲಿಟಿಕ್ಸ್, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬ್ಲಾಕ್ ಚೈನ್, ಸೈಬರ್ ಭದ್ರತೆ, ಸ್ಮಾರ್ಟ್ ಸಿಟಿ ಮತ್ತು ಆಟೋಮೇಷನ್ ಸೇರಿದಂತೆ ವಿವಿಧ ವಲಯಗಳ ತಜ್ಞರು ಭಾಗವಹಿಸಲಿದ್ದಾರೆ.

***



(Release ID: 1678836) Visitor Counter : 202