ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಕಳೆದ 8 ದಿನಗಳಿಂದ ಪ್ರತಿನಿತ್ಯ 50 ಸಾವಿರಕ್ಕಿಂತ ಕಡಿಮೆ ಕೋವಿಡ್ ಹೊಸ ಪ್ರಕರಣಗಳು


ಸಕ್ರಿಯ ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರಿಕೆ

Posted On: 15 NOV 2020 12:30PM by PIB Bengaluru

ಭಾರತದಲ್ಲಿ ಕಳೆದ 8 ದಿನಗಳಿಂದ ಕೋವಿಡ್-19 ಹೊಸ ಪ್ರಕರಣಗಳ ಸಂಖ್ಯೆ ನಿರಂತರ ಇಳಿಕೆ ಕಾಣುತ್ತಿದ್ದು, ಅದು 50 ಸಾವಿರ ಮಟ್ಟದಿಂದ ಕೆಳಗಿದೆ. ಕಳೆದ 24 ತಾಸುಗಳಲ್ಲಿ, 41 ಸಾವಿರ ಜನರಿಗೆ ಕೋವಿಡ್-19 ಸೋಂಕು ವ್ಯಾಪಿಸಿರುವುದು ದೃಢಪಟ್ಟಿದೆ. ನವೆಂಬರ್ 7ರಿಂದ ದಿನನಿತ್ಯ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರ ಮಟ್ಟದಿಂದ ಕೆಳಕ್ಕೆ ಇಳಿಯುತ್ತಾ ಬಂದಿದೆ. ಕೋವಿಡ್ ಮಾರ್ಗಸೂಚಿ ಮತ್ತು ಎಚ್ಚರಿಕೆಯ ಕ್ರಮಗಳ ಕುರಿತು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಕೈಗೊಂಡ ಸೂಕ್ತ ಕ್ರಮಗಳು ಮತ್ತು ಯಶಸ್ವಿ ಜನಜಾಗೃತಿ ಕಾರ್ಯಕ್ರಮಗಳಫಲವಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕು ದಿನೇದಿನೆ ವ್ಯಾಪಕವಾಗುತ್ತಿರುವುದನ್ನು ಗಮನಿಸಿದರೆ, ಭಾರತದಲ್ಲಿ ಕೈಗೊಂಡ ಕ್ರಮಗಳು ಮಹತ್ವಪೂರ್ಣವೆನಿಸಿವೆ.

ಕಳೆದ 24 ತಾಸುಗಳಲ್ಲಿ, ಭಾರತದಲ್ಲಿ 42,156 ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತಾ ಬರುತ್ತಿದೆ. ದೇಶದಲ್ಲಿ ಪ್ರಸ್ತುತ 4,79,216 ಸಕ್ರಿಯ ಪ್ರಕರಣಗಳಿದ್ದು, ಅದು ಒಟ್ಟು ಪಾಸಿಟಿವ್ ಪ್ರಕರಣಗಳ ಶೇಕಡ 5.44ರಷ್ಟಿದೆ.

15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ 10 ಲಕ್ಷಕ್ಕೆ ಹೋಲಿಸಿದರೆ, ರಾಷ್ಟ್ರೀಯ ಸರಾಸರಿ 6,387ಕ್ಕಿಂತ ಕಡಿಮೆ ಇದೆ.

ಪ್ರತಿ 24 ತಾಸುಗಳಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆಯು ಹೊಸ ಪ್ರಕರಣಗಳನ್ನು ಹಿಂದಿಕ್ಕುತ್ತಿದೆ. ಅಂದರೆ, ದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳಿಗಿಂತ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೇ ಹೆಚ್ಚುತ್ತಾ ಸಾಗಿದೆ. ಇದರಿಂದ ಚೇತರಿಕೆ ದರ 93.09%ಗೆ ಸುಧಾರಣೆ ಕಂಡಿದೆ. ದೇಶದಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣ 82,05,728ಕ್ಕೆ ಏರಿಕೆ ಕಂಡಿದೆ. ಗುಣಮುಖ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ಸ್ಥಿರವಾಗಿ ಏರಿಕೆ ಕಾಣುತ್ತಿದ್ದು, ಇದುವರೆಗಿನ ಸಕ್ರಿಯ ಪ್ರಕರಣಗಳ ಪ್ರಮಾಣ 77,26,512ರಷ್ಟಿದೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸದಾಗಿ ಚೇತರಿಸಿಕೊಂಡವರ ಪ್ರಮಾಣ ಶೇಕಡ 79.91ರಷ್ಟಿದೆ.

ಕಳೆದ 24 ತಾಸುಗಳಲ್ಲಿ ದೆಹಲಿಯಲ್ಲಿ ಗರಿಷ್ಠ 7,117 ಸೋಕಿತರು ಗುಣಮುಖರಾದರೆ, ಕೇರಳದಲ್ಲಿ 6,793 ಜನರು ಮತ್ತು ಪಶ್ಚಿಮ ಬಂಗಾಳದಲ್ಲಿ 4,479 ಮಂದಿ ಚೇತರಿಸಿಕೊಂಡಿದ್ದಾರೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ 82.87% ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸುಗಳಲ್ಲಿ ದೆಹಲಿಯಲ್ಲಿ 7,340 ಹೊಸ ಪ್ರಕರಣಗಳು, ಕೇರಳದಲ್ಲಿ 6,357 ಮತ್ತು ಮಹಾರಾಷ್ಟ್ರದಲ್ಲಿ 4,237 ಪ್ರಕರಣಗಳು ಪತ್ತೆಯಾಗಿವೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿನ್ನೆ ಒಂದೇ ದಿನ 447 ಸೋಕಿತರು ಮರಣ ಹೊಂದಿದ್ದಾರೆ. ಅಂದರೆ, ಒಟ್ಟು ಸಾವಿನ 85.01% ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ 23.5% ಅಂದರೆ 105 ಸಾವುಗಳು, ದೆಹಲಿಯಲ್ಲಿ 96 ಮತ್ತು ಪಶ್ಚಿಮ ಬಂಗಾಳದಲ್ಲಿ 53 ಸಾವುಗಳು ಸಂಭವಿಸಿವೆ.

21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವುಗಳ ಪ್ರಮಾಣ ಪ್ರತಿ 10 ಲಕ್ಷಕ್ಕೆ ಹೋಲಿಸಿದರೆ, ರಾಷ್ಟ್ರೀಯ ಸರಾಸರಿ 94ಕ್ಕಿಂತ ಕಡಿಮೆ ಇದೆ.

***



(Release ID: 1678809) Visitor Counter : 130