ಕಲ್ಲಿದ್ದಲು ಸಚಿವಾಲಯ

ಗಣಿ ಕ್ಷೇತ್ರದ ನೈಜ ಸಾಮರ್ಥ್ಯದ ಬಳಕೆಗೆ ಸರ್ಕಾರದಿಂದ ರಚನಾತ್ಮಕ ಸುಧಾರಣೆಗಳು: ಕೇಂದ್ರ ಸಚಿವ ಶ್ರೀ ಪ್ರಹ್ಜಾದ್ ಜೋಶಿ

Posted On: 02 DEC 2020 5:20PM by PIB Bengaluru

ಗಣಿಗಾರಿಕೆ ಕ್ಷೇತ್ರದ ನೈಜ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸರ್ಕಾರ ಅನೇಕ ರಚನಾತ್ಮಕ ಸುಧಾರಣೆಗಳನ್ನು ತರುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಇಂದು ನಡೆದ 15 ನೇ ಜಾಗತಿಕ ಗಣಿಗಾರಿಕೆ ಶೃಂಗಸಭೆ ಮತ್ತು ಅಂತರರಾಷ್ಟ್ರೀಯ ಗಣಿಗಾರಿಕೆ ಮತ್ತು ಯಂತ್ರೋಪಕರಣಗಳ ಪ್ರದರ್ಶನವನ್ನು ಉದ್ದೇಶಿಸಿ ಸಚಿವರು ಮಾತನಾಡುತ್ತಿದ್ದರು.

"ಗಣಿಗಾರಿಕೆ ಕ್ಷೇತ್ರದ ಪ್ರಸ್ತಾವಿತ ರಚನಾತ್ಮಕ ಬದಲಾವಣೆಗಳು ಖನಿಜ ಪರಿಶೋಧನೆಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿ ಹೊಂದಿವೆ. ಪರಿಶೋಧನೆಯಿಂದ ಉತ್ಪಾದನೆಯವರೆಗೆ ತಡೆರಹಿತ ಸ್ಥಿತ್ಯಂತರವನ್ನು ಖಚಿತಪಡಿಸಿಕೊಳ್ಳಲು ಖನಿಜ ಘಟಕಗಳನ್ನು ಹರಾಜು ಮಾಡಲು ಪರಿಶೋಧನೆಯ ಮಾನದಂಡಗಳನ್ನು ಪುನರ್ ವ್ಯಾಖ್ಯಾನಿಸುತ್ತವೆ. ಪರವಾನಗಿ-ಕಮ್ ಗಣಿಗಾರಿಕೆ ಗುತ್ತಿಗೆ ಮತ್ತು ಗಣಿಗಾರಿಕೆ ಹಕ್ಕುಗಳ ಹಂಚಿಕೆಗಾಗಿ ಓಪನ್ ಎಕರೇಜ್ ಪರವಾನಗಿ (ಪರಿಶೋಧನೆಗಾಗಿ ಸಂಸ್ಥೆಯೇ ಘಟಕವನ್ನು ಆಯ್ದುಕೊಳ್ಳುವ ಅವಕಾಶ) ನೀತಿಯನ್ನು ಅವುಗಳು ಮರು ವ್ಯಾಖ್ಯಾನಿಸುತ್ತವೆ, ಇದು ದೇಶದಲ್ಲಿ ಖನಿಜಗಳ ಉತ್ಪಾದನೆಗೆ ದೊಡ್ಡ ಉತ್ತೇಜನ ನೀಡುತ್ತದೆ” ಎಂದು ಶ್ರೀ ಜೋಶಿ ಹೇಳಿದರು.

ಸರ್ಕಾರದ ಸಕ್ರಿಯ ಸುಧಾರಣಾ ವಿಧಾನದ ಬಗ್ಗೆ ಒತ್ತಿ ಹೇಳಿದ ಶ್ರೀ ಜೋಶಿ, ಮಾರ್ಚ್, 2020 ಒಂದು ಮಹತ್ವದ ಅವಧಿಯಾಗಿತ್ತು, ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯನಿರತ ಗಣಿಗಳ ಗುತ್ತಿಗೆ ಅವಧಿ ಮುಗಿದಿತ್ತು ಮತ್ತು ಅವುಗಳನ್ನು ತಕ್ಷಣವೇ ಹರಾಜು ಮಾಡಬೇಕಾಗಿತ್ತು. ಸುಗ್ರೀವಾಜ್ಞೆಯ ಮೂಲಕ ಎಲ್ಲಾ ಕಾನೂನುಬದ್ಧ ಅನುಮತಿಗಳನ್ನು ಹೊಸ ಗುತ್ತಿಗೆದಾರರಿಗೆ ನೀಡುವ ಸಕ್ರಿಯ ಮತ್ತು ಉದ್ಯಮ ಸ್ನೇಹಿ ಕ್ರಮವನ್ನು ಸರ್ಕಾರ ತೆಗೆದುಕೊಂಡಿತು. ಕಚ್ಚಾ ವಸ್ತುಗಳ ತಡೆರಹಿತ ಉತ್ಪಾದನೆಗೆ ಇದೊಂದು ಪ್ರಮುಖ ಹೆಜ್ಜೆಯಾಗಿತ್ತು ಎಂದು ಅವರು ಹೇಳಿದರು.

ನಿರ್ದಿಷ್ಟವಾಗಿ ಈ ಸುಧಾರಣೆಯ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ. ಈ ಸುಗ್ರೀವಾಜ್ಞೆಯಿಂದಾಗಿ, ಇತ್ತೀಚೆಗೆ ಒಡಿಶಾ ರಾಜ್ಯವು ಹೆಚ್ಚಿನ ಸಂಖ್ಯೆಯ ಕಬ್ಬಿಣದ ಅದಿರು ಗಣಿಗಳ ಹರಾಜನ್ನು ಯಶಸ್ವಿವಾಗಿ ಪೂರ್ಣಗೊಳಿಸಿದೆ ಎಂದು ಶ್ರೀ ಜೋಶಿ ಹೇಳಿದರು. ಆದಾಗ್ಯೂ, ಕೆಲವು ಹರಾಜಿನಲ್ಲಿ ಯಶಸ್ವಿಯಾಗಿರುವ ಕೆಲವರು ಉತ್ಪಾದನೆಯನ್ನು ವಿಳಂಬಗೊಳಿಸುವ ಮೂಲಕ ಹರಾಜು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ರಾಜ್ಯ ಸರ್ಕಾರದ ಸಮನ್ವಯದೊಂದಿಗೆ, ಈ ಕಾಯ್ದೆಯಲ್ಲಿ ಕಠಿಣ ನಿಬಂಧನೆಗಳನ್ನು ತರಲು ಸಚಿವಾಲಯ ಚಿಂತನೆ ನಡೆಸುತ್ತಿದೆ, ಇದರಿಂದಾಗಿ ಗಂಭೀರವಲ್ಲದ ಗುತ್ತಿಗೆದಾರರನ್ನು ಕೈ ಬಿಟ್ಟು, ಭವಿಷ್ಯದಲ್ಲಿ ನಡೆಯುವ ಹರಾಜಿನಲ್ಲಿ ಅವರಿಗೆ ನಿಷೇಧ ಹೇರಲಾಗುವುದು ಎಂದು ಸಚಿವರು ಹೇಳಿದರು.

ದೇಶದ ಖನಿಜ ಸಂಪನ್ಮೂಲಗಳ ಹರಾಜು ಪ್ರಕ್ರಿಯೆಯು ಸಂಪೂರ್ಣವಾಗಿ ಯಶಸ್ಸು ಕಾಣಲು ಮತ್ತು ಇದು ರಾಜ್ಯ ಸರ್ಕಾರಗಳಿಗೆ ಆದಾಯ ಮತ್ತು ಉದ್ಯೋಗ ನೀಡುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದರು.

ಭಾರತದ ಮಹತ್ವಾಕಾಂಕ್ಷೆಯ 5 ಟ್ರಿಲಿಯನ್ ಡಾಲರ್ ಪ್ರಗತಿಗೆ ಗಣಿ ಉದ್ಯಮವು ಪ್ರಮುಖವಾಗಿದೆ ಎಂದು ಶ್ರೀ ಜೋಶಿ ಹೇಳಿದರು. ಭಾರತವು ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ಜಿಡಿಪಿಗೆ ನೇರ ಕೊಡುಗೆಯ ಮೂಲಕ, ತಳಮಟ್ಟದ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಪರೋಕ್ಷ ಕೊಡುಗೆ ಮೂಲಕ ಉದ್ಯಮವು ದೇಶದ ಆರ್ಥಿಕತೆಗೆ ಅನೇಕ ರೀತಿಯಲ್ಲಿ ಕೊಡುಗೆ ನೀಡಿದೆ ಎಂದು ಅವರು ತಿಳಿಸಿದರು.

ಕೈಗಾರಿಕಾ ಅಭಿವೃದ್ಧಿಯಲ್ಲಿ ಗಣಿ ಕ್ಷೇತ್ರಕ್ಕಿರುವ ಅಂತರ ಸಂಪರ್ಕದ ದೃಷ್ಟಿಯಿಂದ, ಕಚ್ಚಾ ವಸ್ತುಗಳ ಲಭ್ಯತೆ, ದೇಶದ ಆರ್ಥಿಕತೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸುವ ವಿಷಯದಲ್ಲಿ ಸರ್ಕಾರವು ತನ್ನ ಆದ್ಯತೆಗಳನ್ನು ಬದಲಾಯಿಸಿದೆ ಎಂದು ಅವರು ಹೇಳಿದರು. ಪಾರದರ್ಶಕ ಮತ್ತು ಸಮಯಕ್ಕೆ ಸೂಕ್ತವಾದ ಕಾರ್ಯವಿಧಾನಗಳೊಂದಿಗೆ ವ್ಯವಹಾರವನ್ನು ಸುಲಭಗೊಳಿಸಲು ಅನುಕೂಲಕರ ವಾತಾವರಣವನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.

ಸರ್ಕಾರದ ಇತ್ತೀಚಿನ ಗಣಿಗಾರಿಕೆ ಮತ್ತು ಕಲ್ಲಿದ್ದಲು ಕ್ಷೇತ್ರದ ಸುಧಾರಣೆಗಳ ಬಗ್ಗೆ ವಿವರಿಸಿದ ಶ್ರೀ ಜೋಶಿ, ಉದ್ಯೋಗ ಸೃಷ್ಟಿ, ಇಂಧನದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಕಲ್ಲಿದ್ದಲು ವಲಯವನ್ನು ಖಾಸಗಿ ಕ್ಷೇತ್ರಕ್ಕೆ ಮುಕ್ತವಾಗಿಸಿರುವುದರಿಂದ ಮುಂದಿನ 5-7 ವರ್ಷಗಳಲ್ಲಿ ದೇಶದಲ್ಲಿ ಭಾರಿ ಬಂಡವಾಳ ಹೂಡಿಕೆಯನ್ನು ಗಳಿಸಬಹುದು ಎಂದು ತಿಳಿಸಿದರು.

ಲೋಹ ಮತ್ತು ಲೋಹೇತರ ಅದಿರುಗಳ ಗಣಿಗಾರಿಕೆ ಮತ್ತು ಪರಿಶೋಧನೆಯಲ್ಲಿ ವಿದೇಶಿ ನೇರ ಹೂಡಿಕೆಯ ಮಿತಿಯನ್ನು ಶೇ.100 ಕ್ಕೆ ಹೆಚ್ಚಿಸಲಾಗಿದೆ. ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆಯು ವಿವಿಧ ಖನಿಜ ವಸ್ತುಗಳ ಸುಮಾರು 400 ಖನಿಜ ಪರಿಶೋಧನಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ತನ್ನ ಪರಿಶೋಧನಾ ಚಟುವಟಿಕೆಯನ್ನು ದ್ವಿಗುಣಗೊಳಿಸಿದೆ ಎಂದು ಸಚಿವರು ತಿಳಿಸಿದರು.

***



(Release ID: 1677810) Visitor Counter : 216