ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಮಾರುಕಟ್ಟೆ ಪ್ರದೇಶಗಳಲ್ಲಿ ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಎಸ್‌ಒಪಿ
Posted On:
02 DEC 2020 2:03PM by PIB Bengaluru
ದೇಶದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಾಮಾನ್ಯ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಬಿಡುಗಡೆ ಮಾಡಿದೆ. ಅವು ಕೆಳಕಂಡಂತಿವೆ:
1. ಹಿನ್ನೆಲೆ
ತಮ್ಮ ದೈನಂದಿನ ಅಗತ್ಯತೆಗಳು, ಶಾಪಿಂಗ್, ಮನರಂಜನೆ ಮತ್ತು ಆಹಾರಕ್ಕಾಗಿ ಮಾರುಕಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುತ್ತಾರೆ ಎಂಬ ಅಂಶವನ್ನು ಪರಿಗಣಿಸಿ ಆರೋಗ್ಯ ಸಚಿವಾಲಯವು ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸುವ ಶಿಷ್ಟಾಚಾರಗಳನ್ನು ರೂಪಿಸಿದೆ. ಸಾಂಕ್ರಾಮಿಕದ ಮಧ್ಯೆ, ಆರ್ಥಿಕ ಚಟುವಟಿಕೆಗಳನ್ನು ತೆರೆದಿರುವುದರಿಂದ, ಜನರು ಮಾರುಕಟ್ಟೆಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಇಂತಹ ಜನಸಂದಣಿಗಳಲ್ಲಿ ಕೋವಿಡ್-19ನ್ನು ನಿಯಂತ್ರಿಸುವ ಕ್ರಮಗಳನ್ನು ಪಾಲಿಸದಿದ್ದರೆ ಕೊರೊನಾವೈರಸ್ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
2. ವ್ಯಾಪ್ತಿ
ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟಲು ಮಾರುಕಟ್ಟೆಗಳಲ್ಲಿ ಅನುಸರಿಸಬೇಕಾದ ನಿರ್ದಿಷ್ಟ ಕ್ರಮಗಳ ಜೊತೆಗೆ ವಿವಿಧ ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಇದು ವಿವರಿಸುತ್ತದೆ. ಈ ಮಾರ್ಗಸೂಚಿಗಳು ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಗಳಿಗೆ ಅನ್ವಯವಾಗುತ್ತವೆ.
ಮಾಲ್‌ಗಳು/ ಹೈಪರ್/ ಸೂಪರ್‌ಮಾರ್ಕೆಟ್‌ಗಳನ್ನು ಹೊಂದಿರುವ ದೊಡ್ಡ ಮಾರುಕಟ್ಟೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಹಿಂದೆ ಹೊರಡಿಸಿದ ಮಾರ್ಗಸೂಚಿಗಳು (https://www.mohfw.gov.in/pdf/4SoPstobefollowedinShoppingMalls.pdf ನಲ್ಲಿ ಲಭ್ಯವಿದೆ) ಅನ್ವಯಿಸುತ್ತವೆ.
ಮಾರುಕಟ್ಟೆಗಳಲ್ಲಿರುವ ರೆಸ್ಟೋರೆಂಟ್‌ಗಳಿಗೆ, ಸಚಿವಾಲಯ ಹೊರಡಿಸಿದ ಹಿಂದಿನ ಮಾರ್ಗಸೂಚಿಗಳು (https://www.mohfw.gov.in/pdf/3SoPstobefollowedinRestaurants.pdf) ಅನ್ವಯವಾಗುತ್ತವೆ.
ಅಂತೆಯೇ, ಮಾರುಕಟ್ಟೆಗಳ ಭಾಗವಾಗಿರುವ ಅಥವಾ ಮಾರುಕಟ್ಟೆ ಸಂಕೀರ್ಣದಲ್ಲಿ ಇರುವ ಕಚೇರಿಗಳು, ಧಾರ್ಮಿಕ ಸ್ಥಳಗಳು / ಪೂಜಾ ಸ್ಥಳಗಳು, ತರಬೇತಿ ಸಂಸ್ಥೆಗಳು, ಯೋಗ ಸಂಸ್ಥೆಗಳು ಮತ್ತು ವ್ಯಾಯಾಮಶಾಲೆಗಳು, ಸಿನೆಮಾ ಮಂದಿರಗಳು / ಚಿತ್ರಮಂದಿರಗಳು ಸೇರಿದಂತೆ ಯಾವುದೇ ನಿರ್ದಿಷ್ಟ ಚಟುವಟಿಕೆಗಳಿಗೆ, ಸಚಿವಾಲಯವು ಕಾಲಕಾಲಕ್ಕೆ ಹೊರಡಿಸಿರುವ ನಿರ್ದಿಷ್ಟ ಮಾರ್ಗಸೂಚಿಗಳು ಅನ್ವಯಿಸುತ್ತವೆ.
ಕಂಟೈನ್ಮೆಂಟ್ ವಲಯಗಳಲ್ಲಿನ ಮಾರುಕಟ್ಟೆಗಳನ್ನು ತೆರೆಯುವಂತಿಲ್ಲ. ಕಂಟೈನ್ಮೆಂಟ್ ವಲಯಗಳ ಹೊರಗಿನ ಮಾರುಕಟ್ಟೆಗಳನ್ನು ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.
3. ಹೆಚ್ಚು ಅಪಾಯವಿರುವವರನ್ನು ರಕ್ಷಿಸುವುದು
ಅಗತ್ಯ ಮತ್ತು ಆರೋಗ್ಯದ ಉದ್ದೇಶಗಳನ್ನು ಹೊರತುಪಡಿಸಿ 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಸಹ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಮಾರ್ಕೆಟ್ ಮಾಲೀಕರ ಸಂಘಗಳಿಗೆ ಈ ಬಗ್ಗೆ ಸೂಕ್ತ ಸಲಹೆ ನೀಡಬೇಕು.
ಹೆಚ್ಚು ಅಪಾಯವಿರುವ ನೌಕರರು, ಅಂದರೆ ವಯಸ್ಸಾದ ಉದ್ಯೋಗಿಗಳು, ಗರ್ಭಿಣಿ ನೌಕರರು ಮತ್ತು ಆಧಾರವಾಗಿರುವ ವೈದ್ಯಕೀಯ ಆರೈಕೆಯಲ್ಲಿರುವ ಹೊಂದಿರುವ ನೌಕರರು ಹೆಚ್ಚು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಅಂತಹ ವ್ಯಕ್ತಿಗಳು ಸಾರ್ವಜನಿಕರೊಂದಿಗೆ ನೇರ ಸಂಪರ್ಕದ ಅಗತ್ಯವಿರುವ ಯಾವುದೇ ಕೆಲಸಗಳಿಗೆ ನಿಯೋಜಿಸಬಾರದು ಎಂದು ಮಾರುಕಟ್ಟೆ ಸಂಘಗಳಿಗೆ ಸೂಚಿಸಲಾಗಿದೆ.
4. ಕೋವಿಡ್ ನಿಯಂತ್ರಣ ನಡವಳಿಕೆಯನ್ನು ಉತ್ತೇಜಿಸುವುದು
ಕೋವಿಡ್-19 ಸಾಂಕ್ರಾಮಿಕದ ಅಪಾಯವನ್ನು ಕಡಿಮೆ ಮಾಡಲು ಸರಳವಾದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕು. ಈ ಕ್ರಮಗಳನ್ನು ಎಲ್ಲಾ ಸಮಯದಲ್ಲೂ ಅಂಗಡಿಗಳ ಮಾಲೀಕರು, ಅಲ್ಲಿಗೆ ಭೇಟಿ ನೀಡುವವರು ಮತ್ತು ಕಾರ್ಮಿಕರು ಗಮನಿಸಬೇಕಾಗುತ್ತದೆ.
ಆ ಕ್ರಮಗಳೆಂದರೆ:
i. ಕನಿಷ್ಠ 6 ಅಡಿಗಳ ದೈಹಿಕ ಅಂತರವನ್ನುಸಾಧ್ಯವಾದಷ್ಟು ಅನುಸರಿಸಬೇಕು.
ii. ಮುಖ ಕವಚ / ಮುಖಗವಸುಗಳ ಬಳಕೆಯನ್ನು ಕಡ್ಡಾಯಗೊಳಿಸಬೇಕು.
iii. ಕೈಗಳು ಕಾಣುವಂತೆ ಕೊಳಕಾಗಿಲ್ಲದಿದ್ದರೂ ಸಹ (ಕನಿಷ್ಠ 40-60 ಸೆಕೆಂಡುಗಳವರೆಗೆ) ಸಾಬೂನಿನಿಂದ ಕೈ ತೊಳೆಯುವುದು ಅಭ್ಯಾಸ ಮಾಡಿಕೊಳ್ಳಬೇಕು. ಆಲ್ಕೊಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳ ಬಳಕೆಯನ್ನು (ಕನಿಷ್ಠ 20 ಸೆಕೆಂಡುಗಳ ಕಾಲ) ಅಂಗಡಿಗಳು ಮತ್ತು ಇತರ ಸ್ಥಳಗಳ ಹೊರಗೆ ಮಾಡಬೇಕು.
iv. ಉಸಿರಾಟದ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಮ್ಮುವಾಗ / ಸೀನುವಾಗ, ಟಿಶ್ಯೂ /ಕರವಸ್ತ್ರ/ಬಾಗಿದ ಮೊಣಕೈಯಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಮತ್ತು ಬಳಸಿದ ಟಿಶ್ಯೂಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು.
v. ಆರೋಗ್ಯದ ಸ್ವಯಂ-ಮೇಲ್ವಿಚಾರಣೆ ಮತ್ತು ಯಾವುದೇ ರೀತಿಯ ಅನಾರೋಗ್ಯ ಕಂಡುಬಂದರೆ ರಾಜ್ಯ ಮತ್ತು ಜಿಲ್ಲಾ ಸಹಾಯವಾಣಿಗೆ ತಕ್ಷಣ ವರದಿ ಮಾಡುವುದು.
vi. ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
vii. ಆರೋಗ್ಯ ಸೇತು ಅಪ್ಲಿಕೇಶನ್‌ನ ಸ್ಥಾಪನೆ ಮತ್ತು ಬಳಕೆಯನ್ನು ಎಲ್ಲರಿಗೂ ಸಲಹೆ ಮಾಡಲಾಗಿದೆ.
5. ಮಾರುಕಟ್ಟೆಗಳಲ್ಲಿ ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳುವುದು
ಸಾಮಾನ್ಯ ಸಮಯದಲ್ಲಿ, ಮಾರುಕಟ್ಟೆಗಳು ಹೆಚ್ಚಿನ ಜನರಿಂದ ತುಂಬಿರುತ್ತವೆ, ಆಗ ಸಾಕಷ್ಟು ನೈರ್ಮಲ್ಯ ಸೌಲಭ್ಯಗಳ ಕೊರತೆಯಿರುತ್ತವೆ. ಕೋವಿಡ್ ಹರಡುವ ಅಪಾಯವನ್ನು ತಡೆಗಟ್ಟಲು, ಮಾರುಕಟ್ಟೆಗಳಲ್ಲಿ ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಆ ಕ್ರಮಗಳೆಂದರೆ:
i. ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸುವ ಮೊದಲು, ಅಂಗಡಿಯೊಳಗಿನ ಎಲ್ಲಾ ಪ್ರದೇಶಗಳನ್ನು ಅಂಗಡಿ ಮಾಲೀಕರು ಸ್ವಚ್ 1 ಗೊಳಿಸಬೇಕು (1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಬಳಸಿ).
ii. ಆಗಾಗ್ಗೆ ಮುಟ್ಟುವ ಮೇಲ್ಮೈಗಳನ್ನು (ಬಾಗಿಲ ಗುಬ್ಬಿಗಳು / ಹ್ಯಾಂಡಲ್‌ಗಳು, ಎಲಿವೇಟರ್ ಗುಂಡಿಗಳು, ರೇಲಿಂಗ್ಸ್, ಕುರ್ಚಿಗಳು, ಟೇಬಲ್ ಟಾಪ್ಸ್, ಕೌಂಟರ್‌ಗಳು, ಇತ್ಯಾದಿ) ಮತ್ತು ನೆಲ, ಗೋಡೆ ಇತ್ಯಾದಿಗಳನ್ನು ಅಂಗಡಿಗಳನ್ನು ತೆರೆಯುವ ಮೊದಲು ಮತ್ತು ದಿನದ ಅಂತ್ಯದಲ್ಲಿ ಸ್ವಚ್ಛಗೊಳಿಸಬೇಕು ಮತ್ತು ನಿಯಮಿತವಾಗಿ ಸೋಂಕುರಹಿತಗೊಳಿಸಬೇಕು.
iii. ಅಂಗಡಿಗಳ ಪ್ರವೇಶ ಸ್ಥಳದಲ್ಲಿ ಕಡ್ಡಾಯವಾಗಿ ಕೈ ನೈರ್ಮಲ್ಯ (ಸ್ಯಾನಿಟೈಜರ್) ವ್ಯವಸ್ಥೆ ಮಾಡಬೇಕು.
iv. ವಾಹನ ನಿಲುಗಡೆಯ ಸಮಯದಲ್ಲಿ ವಾಹನಗಳನ್ನು ನೌಕರರು ಬಳಸಿದ್ದರೆ, ವಾಹನವನ್ನು ಮತ್ತೆ ಬಳಸುವ ಮೊದಲು ಸ್ಟೀರಿಂಗ್, ಬಾಗಿಲು ಹ್ಯಾಂಡಲ್‌ಗಳು, ಕೀಗಳು ಇತ್ಯಾದಿಗಳನ್ನು ಮಾಲೀಕರು ಸೋಂಕುರಹಿತ ಮಾಡಬೇಕು.
v. ಸಾರ್ವಜನಿಕರು ಉಪಯೋಗಿಸುವ ಪ್ರದೇಶಗಳು ಮತ್ತು ತೆರೆದ ಸ್ಥಳಗಳನ್ನು 1% ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದೊಂದಿಗೆ ಸ್ವಚ್ಛಗೊಳಿಸಬೇಕು. ಇದನ್ನು ನಿಯಮಿತವಾಗಿ ಮಾಡಬೇಕು.
vi. ಶೌಚಾಲಯಗಳು, ಕೈ ತೊಳೆಯುವುದು ಮತ್ತು ಕುಡಿಯುವ ನೀರಿನ ಕೇಂದ್ರಗಳನ್ನು ಪ್ರತಿದಿನ ಕನಿಷ್ಠ 3-4 ಬಾರಿ ಶುದ್ಧೀಕರಣ ಮಾಡಬೇಕು.
vii. ಸಾರ್ವಜನಿಕರು ಉಪಯೋಗಿಸುವ ಪ್ರದೇಶಗಳು ಮತ್ತು ತೆರೆದ ಸ್ಥಳಗಳ ಆರೋಗ್ಯಕರ ವಾತಾವರಣವನ್ನು ಮಾರುಕಟ್ಟೆ ಸಂಘಗಳು ಸ್ವತಃ ಅಥವಾ ಸ್ಥಳೀಯ ನಗರ ಸಂಸ್ಥೆಗಳು / ನಾಗರಿಕ ಸಂಸ್ಥೆಗಳ ಮೂಲಕ ನಿರ್ವಹಿಸಬೇಕು.
ವಿವರವಾದ ಮಾರ್ಗಸೂಚಿಗಳು ಇಲ್ಲಿ ಲಭ್ಯವಿದೆ
https://www.mohfw.gov.in/pdf/Guidelinesondisinfectionofcommonpublicplacesincludingoffices.pdf
6. ಮಾರುಕಟ್ಟೆಗಳಲ್ಲಿ ಕೋವಿಡ್ ಸಂಬಂಧಿತ ನಡವಳಿಕೆಗೆ ಯೋಜನೆ
6.1 ಮಾರುಕಟ್ಟೆಗಳಲ್ಲಿ ಸ್ವಯಂ-ನಿಯಂತ್ರಿತ ಕೋವಿಡ್ ನಡವಳಿಕೆ
ಮಾರುಕಟ್ಟೆಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಮಾರುಕಟ್ಟೆ ಸಂಘಗಳು ಹಲವಾರು ಕ್ರಮಗಳ ಮೂಲಕ ಸ್ವಯಂ-ನಿಯಂತ್ರಿಸಬಹುದು:
i. ಮಾರುಕಟ್ಟೆಗಳಲ್ಲಿ (ಅಂಗಡಿಗಳ ಒಳಗೆ ಮತ್ತು ಹೊರಗೆ) ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಷ್ಠಾನಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ಪ್ರತಿ ಮಾರುಕಟ್ಟೆಗೆ ಉಪ-ಸಮಿತಿಯ ರಚನೆ.
ii. ಸರ್ಕಾರ ಅನುಮೋದಿಸಿರುವ ದರದಲ್ಲಿ ಮುಖಗವಸು ವಿತರಣೆ ಕಿಯೋಸ್ಕ್ ಗಳನ್ನು ಪ್ರವೇಶ ಸ್ಥಳಗಳು ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಸ್ಥಾಪಿಸಬಹುದು.
iii. ಖರೀದಿಸಲು ಸಾಧ್ಯವಾಗದವರಿಗೆ ಉಚಿತ ಮುಖಗವಸುಗಳನ್ನು ವಿತರಿಸುವುದು.
iv. ಸಾರ್ವಜನಿಕರು ಉಪಯೋಗಿಸುವ ಪ್ರದೇಶಗಳಲ್ಲಿ ಕೈ ತೊಳೆಯುವ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಸೋಪ್ ಮತ್ತು ನೀರಿನ ಲಭ್ಯತೆಯನ್ನು ಖಚಿತಪಡಿಸುವುದು. ಕಾಲು ಚಾಲಿತ ಟ್ಯಾಪ್‌ಗಳು ಮತ್ತು ಸಂಪರ್ಕರಹಿತ ಸೋಪ್ ವಿತರಕಗಳ ಬಳಕೆಯನ್ನು ಶಿಫಾರಸು ಮಾಡಲಾಗಿದೆ.
v. ಮಾರುಕಟ್ಟೆಗಯ ಪ್ರವೇಶ ಸ್ಥಳಗಳಲ್ಲಿ ಸಾಮೂಹಿಕ ಉಷ್ಣ ತಪಾಸಣೆ ನಡೆಸುವುದು .
vi. ಸಾರ್ವಜನಿಕರು ಉಪಯೋಗಿಸುವ ಪ್ರದೇಶಗಳ ನೈರ್ಮಲ್ಯೀಕರಣಕ್ಕಾಗಿ ಥರ್ಮಲ್ ಗನ್, ಸ್ಯಾನಿಟೈಜರ್ಸ್, ಸೋಂಕುನಿವಾರಕಗಳನ್ನು ಸಂಗ್ರಹಿಸುವುದು.
vii. ಪ್ರಮುಖ ಸ್ಥಳಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯ ಬಗ್ಗೆ ಐಇಸಿ ಸಾಮಗ್ರಿಗಳು ಪ್ರದರ್ಶಿಸುವುದು.
6.2 ಜಾರಿ ಸಂಸ್ಥೆಗಳಿಂದ ಕೋವಿಡ್ ಸೂಕ್ತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳುವುದು.
ಸ್ವಯಂ-ನಿಯಂತ್ರಕ ವಿಧಾನವು ವಿಫಲವಾದಾಗ ಅಥವಾ ಅದರ ಪರಿಣಾಕಾರಿಯಾಗಿಲ್ಲದಿದ್ದರೆ, ಯೋಜನೆಯು ಜಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಅದರಲ್ಲಿ ಇವುಗಳು ಒಳಗೊಂಡಿರಬಹುದು:
i. ಮುಖಗವಸು/ ಮುಖದ ಹೊದಿಕೆಯನ್ನು ಧರಿಸದಿದ ಅಥವಾ ದೈಹಿಕ ಅಂತರದ ಮಾನದಂಡಗಳನ್ನು ಅನುಸರಿಸದವರಿಗೆ ದಂಡ ವಿಧಿಸುವುದು.
ii. ಮಾರುಕಟ್ಟೆಗಳು / ಅಂಗಡಿಗಳನ್ನು ಪರ್ಯಾಯ ದಿನಗಳಲ್ಲಿ ತೆರೆಯಲು ಅನುಮತಿ ನೀಡುವ ಆಯ್ಕೆಯ ಬಗ್ಗೆ ಚಿಂತಿಸುವುದು
iii. ಮಾರುಕಟ್ಟೆಯಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿದ್ದರೆ ಮಾರುಕಟ್ಟೆಗಳನ್ನು ಮುಚ್ಚುವ ಬಗ್ಗೆ ಆಡಳಿತ ನಿರ್ಧರಿಸಬಹುದು.
6.3 ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿ ಮಾಲೀಕರಿಂದ ಕೋವಿಡ್ ಸೂಕ್ತ ನಡವಳಿಕೆಗಳನ್ನು ಖಚಿತಪಡಿಸಿಕೊಳ್ಳಲು ಯೋಜನೆ
ಮಾಲೀಕರು ಇವುಗಳನ್ನು ಖಚಿತಪಡಿಸಿಕೊಳ್ಳಬೇಕು:
i. ಅಂಗಡಿಗಳ ಒಳಗೆ ಮತ್ತು ಹೊರಗೆ ಕನಿಷ್ಠ 6 ಅಡಿಗಳಷ್ಟು ದೈಹಿಕ ದೂರವನ್ನು ಕಾಪಾಡಲು, ನೆಲದ ಮೇಲೆ ನಿರ್ದಿಷ್ಟ ಗುರುತುಗಳನ್ನು ಮಾಡಬಹುದು.
ii. ಅಂಗಡಿಗಳ ಒಳಗೆ / ಹೊರಗೆ ಸರತಿ ಸಾಲಿನ ನಿರ್ವಹಣೆ.
iii. ಸರತಿ ಸಾಲಿನಲ್ಲಿ ದೈಹಿಕ ಅಂತರದ ಮಾನದಂಡಗಳ ಮೇಲ್ವಿಚಾರಣೆ ಮಾಡಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಬೇಕು.
iv. ಮುಖಗವಸುಗಳಿಲ್ಲದೆ ಅಂಗಡಿಗಳನ್ನು ಪ್ರವೇಶಿಸುವ ಗ್ರಾಹಕರಿಗೆ ಟ್ರಿಪಲ್ ಲೇಯರ್ ಮುಖಗವಸುಗಳು / ಫೇಸ್ ಕವರ್‌ಗಳನ್ನು ಒದಗಿಸುವುದು.
v. ಸಂದರ್ಶಕರ ಕೈಗಳನ್ನು ಸ್ವಚ್ಛಗೊಳಿಸಲು ಅಂಗಡಿಯ ಪ್ರವೇಶದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಒದಗಿಸುವುದು. ಕಾರ್ಮಿಕರು ಮತ್ತು ಗ್ರಾಹಕರ ದೇಹದ ಉಷ್ಣತೆಯ ಪರಿಶೀಲನೆಗೆ ಸಾಧ್ಯವಾದಷ್ಟು ಮಟ್ಟಿಗೆ ಉಷ್ಣ ತಪಾಸಣೆ ನಿಬಂಧನೆಗಳನ್ನು ಅನುಸರಿಸುವುದು.
vi. ಸಾಧ್ಯವಾದ ಕಡೆಗಳಲ್ಲಿ ಸಂಪರ್ಕ-ರಹಿತ ಪಾವತಿಗೆ ಸೂಕ್ತವಾದ ವ್ಯವಸ್ಥೆಗಳನ್ನು ಮಾಡುವುದು.
6.4. ಗಾಳಿಯಾಡುವುದನ್ನು ಖಚಿತಪಡಿಸಿಕೊಳ್ಳವುದು
i. ಸಾಧ್ಯವಾದಷ್ಟು, ನೈಸರ್ಗಿಕವಾಗಿ ಗಾಳಿಯಾಡುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಕಿರಿದಾದ ಮುಚ್ಚಿದ ಸ್ಥಳಗಳ ಬಳಕೆಯನ್ನು ನಿಲ್ಲಿಸಬೇಕು.
ii. ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯುವ ಮೂಲಕ, ಪಂಖಗಳು ಅಥವಾ ಇತರ ವಿಧಾನಗಳನ್ನು ಬಳಸಿಕೊಂಡು ಹೊರಾಂಗಣ ಗಾಳಿಯ ಪ್ರಸರಣವನ್ನು ಸಾಧ್ಯವಾದಷ್ಟು ಹೆಚ್ಚಿಸಬೇಕು.
iii. ಮುಚ್ಚಿದ ಆವರಣಗಳ ಹವಾನಿಯಂತ್ರಣಕ್ಕಾಗಿ, ಸಿಪಿಡಬ್ಲ್ಯುಡಿಯ ಮಾರ್ಗಸೂಚಿಗಳನ್ನು ಅನುಸರಿಸಬೇಕು, ಇದು ಎಲ್ಲಾ ಹವಾನಿಯಂತ್ರಣ ಸಾಧನಗಳ ತಾಪಮಾನ ಸೆಟ್ಟಿಂಗ್ 24-30 ಸಿ ವ್ಯಾಪ್ತಿಯಲ್ಲಿರಬೇಕು ಹಾಗೂ ಸಾಪೇಕ್ಷ ಆರ್ದ್ರತೆಯು 40-70% ವ್ಯಾಪ್ತಿಯಲ್ಲಿರಬೇಕು ಎಂದು ಒತ್ತಿಹೇಳುತ್ತದೆ. ತಾಜಾ ಗಾಳಿಯ ಸೇವನೆಯು ಸಾಧ್ಯವಾದಷ್ಟು ಇರಬೇಕು. ಏರ್ ಹ್ಯಾಂಡ್ಲಿಂಗ್ ಘಟಕವನ್ನು ಚಾಲನೆಗೊಳಿಸುವ ಮೊದಲು ಸ್ವಚ್ಛಗೊಳಿಸಬೇಕು.
6.5. ಜನಸಂದಣಿ ನಿರ್ವಹಣೆ
ಜನಸಂದಣಿಯ ತೀವ್ರತೆಯು ಯಾವಾಗಲೂ ಒಂದೇ ಸಮನಾಗಿರುವುದಿಲ್ಲ. ಇದು ಸಾಮಾನ್ಯವಾಗಿ ವಾರದ ದಿನಗಳಲ್ಲಿ ಸಂಜೆ ಸಮಯದಲ್ಲಿ ಗರಿಷ್ಠವಾಗಿರುತ್ತದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ, ಮಾರುಕಟ್ಟೆಗಳು ದಿನಪೂರ್ತಿ ತುಂಬಿರುತ್ತವೆ. ಈ ಗರಿಷ್ಠ ಜನಸಂದಣಿಯ ದಿನಗಳು / ಗಂಟೆಗಳಿಗೆ ನಿರ್ದಿಷ್ಟವಾಗಿ ಯೋಜನೆಯು ಅಗತ್ಯವಾಗಿರುತ್ತದೆ. ಜನಸಮೂಹವನ್ನು ನಿರ್ವಹಿಸಲು ಮಾರುಕಟ್ಟೆ ಸಂಘಗಳ ಸಹಯೋಗದೊಂದಿಗೆ ಕಾನೂನು ಜಾರಿ ಸಂಸ್ಥೆಗಳು ಹಲವಾರು ತಂತ್ರಗಳನ್ನು ರೂಪಿಸಬಹುದು.
ಅವುಗಳೆಂದರೆ:
i. ಜನಸಂದಣಿಯನ್ನು ನಿಯಂತ್ರಿಸಲು ನಾಗರಿಕ ಸ್ವಯಂಸೇವಕರು / ಗೃಹರಕ್ಷಕರು / ಸ್ವಯಂಸೇವಕರನ್ನು ತೊಡಗಿಸಿಕೊಳ್ಳುವುದು.
ii. ವಾಹನಗಳ ಪ್ರವೇಶವನ್ನು ಸೀಮಿತಗೊಳಿಸಲು ಪಾರ್ಕಿಂಗ್ ಸ್ಥಳಗಳಲ್ಲಿ ಪ್ರವೇಶ ನಿಯಂತ್ರಣ.
iii. ಸಾಧ್ಯವಾದರೆ ಸಂದರ್ಶಕರಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ.
iv. ಮಾರುಕಟ್ಟೆಯೊಳಗಿನ ರಸ್ತೆಗಳನ್ನು ವಾಹನ ಮುಕ್ತಗೊಳಿಸಬಹುದು (ಸೈಕಲ್ / ಎಲೆಕ್ಟ್ರಿಕ್ ರಿಕ್ಷಾಗಳು ಸೇರಿದಂತೆ) ಮತ್ತು ಸಾಧ್ಯವಾದಷ್ಟು ಪಾದಚಾರಿಗಳು / ಬೈಸಿಕಲ್‌ಗಳಿಗೆ ಮಾತ್ರ ಅವಕಾಶ ನೀಡಬಹುದು.
v. ಮಾರುಕಟ್ಟೆ ರಸ್ತೆಗಳಲ್ಲಿ ಅಕ್ರಮವಾಗಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕಠಿಣ ದಂಡ ವಿಧಿಸಬಹುದು.
vi. ನಿರ್ದಿಷ್ಟ ಪಾರ್ಕಿಂಗ್ ಸ್ಥಳಗಳಲ್ಲಿ ಮಾತ್ರ ವಾಹನವನ್ನು ನಿಲುಗಡೆ ಮಾಡಲು ಅನುಮತಿಸಬಹುದು. ವಾಹನ ನಿಲುಗಡೆ ಸ್ಥಳಗಳಲ್ಲಿ ಮತ್ತು ಆವರಣದ ಹೊರಗಡೆ ಜನಸಂದಣಿ ನಿರ್ವಹಣೆ- ದೈಹಿಕ ದೂರದ ಮಾನದಂಡಗಳನ್ನು ಸರಿಯಾಗಿ ಅನುಸರಿಸುವುದು.
vii. ಜನದಟ್ಟಣೆಯನ್ನು ಪತ್ತೆಹಚ್ಚಲು ಸಿಸಿಟಿವಿ ಮೇಲ್ವಿಚಾರಣೆಯನ್ನು ಪರಿಗಣಿಸಬಹುದು.
viii. ಅಂಗಡಿಗಳಿಗೆ ಹಂತಹಂತದ ಸಮಯ ನಿಗದಿಪಡಿಸುವ ಮೂಲಕ ಹೆಚ್ಚಿನ ಸಮಯದವರೆಗೆ ತೆರೆದಿರಲು ಅವಕಾಶ ಮಾಡಿಕೊಡಬಹುದು.
ix. ನಿಲ್ದಾಣಗಳಿಂದ ನೇರವಾಗಿ ಮಾರುಕಟ್ಟೆಗಳಿಗೆ ಬರುವ ಜನಸಮೂಹ ನಿರ್ವಹಣೆಯನ್ನು ಸ್ಥಳೀಯ ಮೆಟ್ರೋ ರೈಲು ನಿಲುಗಡೆಗಳಲ್ಲಿಯೇ ಮಾಡಬಹುದಾಗಿದೆ.
X. ದಿನಸಿ / ವಸ್ತುಗಳ ಆನ್‌ಲೈನ್ ಬುಕಿಂಗ್ ಮತ್ತು ಮನೆ ಬಾಗಿಲಿಗೆ ತಲುಪಿಸಲು ಅವಕಾಶ ಕಲ್ಪಿಸಬೇಕು. ಮನೆ ವಿತರಣೆಯ ಸಿಬ್ಬಂದಿಯ ಉಷ್ಣತೆಯನ್ನು ಪರೀಕ್ಷಿಸಬೇಕು.
xi. ಹೆಚ್ಚುಆದ್ಯತೆಯಲ್ಲದ ಸಮಯದಲ್ಲಿ ಶಾಪಿಂಗ್ ಮಾಡುವವರಿಗೆ ಪ್ರೋತ್ಸಾಹ / ರಿಯಾಯಿತಿಯನ್ನು ನೀಡಬಹುದು.
6.6 ಜಾಗೃತಿ ಮೂಡಿಸುವುದು
i. ಕೋವಿಡ್-19 ವಿರುದ್ಧದ ತಡೆಗಟ್ಟುವ ಕ್ರಮಗಳ ಕುರಿತು ಪೋಸ್ಟರ್‌ಗಳು / ಸ್ಟ್ಯಾಂಡೀಸ್ / ಎವಿ ಮಾಧ್ಯಮವನ್ನು ಮಾರುಕಟ್ಟೆ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲು ಅವಕಾಶ ಕಲ್ಪಿಸಬೇಕು. ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳನ್ನು ಸಹ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು.
ii. ಮುನ್ನೆಚ್ಚರಿಕೆ ಕ್ರಮಗಳು ಮತ್ತು ಕೋವಿಡ್ ಸೂಕ್ತ ನಡವಳಿಕೆಯ ಕುರಿತು ಮುದ್ರಿತ ಸಂದೇಶಗಳನ್ನು ಮಾರುಕಟ್ಟೆ ಆವರಣದಲ್ಲಿ ಸ್ಥಾಪಿಸಲಾದ ಎವಿ ವ್ಯವಸ್ಥೆಗಳ ಮೂಲಕ ಪ್ರಸಾರ ಮಾಡಬಹುದು.
iii. ಅಂಗಡಿಗಳ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಲಭ್ಯವಿದ್ದರೆ, ಕೋವಿಡ್-19 ತಡೆಗಟ್ಟುವ ಕ್ರಮಗಳನ್ನು ಅವುಗಳ ಮುಖಪುಟದಲ್ಲಿ ಪ್ರದರ್ಶಿಸಬೇಕು. ವೆಬ್‌ಸೈಟ್ / ಮೊಬೈಲ್ ಅಪ್ಲಿಕೇಶನ್ ಸಂದರ್ಶಕರಿಗೆ ಆರೋಗ್ಯದ ಸ್ವಯಂ-ಮೇಲ್ವಿಚಾರಣೆಯ ಬಗ್ಗೆ ತಿಳಿಸಬೇಕು ಮತ್ತು ಕೋವಿಡ್ -19 ರೋಗಲಕ್ಷಣಗಳಿಂದ ಬಳಲುತ್ತಿರುವವರು ಮಾರುಕಟ್ಟೆಗೆ ಭೇಟಿ ನೀಡಬಾರದು ಎಂದು ಸಲಹೆ ಮಾಡಬೇಕು.
iv. ರಾಜ್ಯ ಸಹಾಯವಾಣಿ ಸಂಖ್ಯೆ ಮತ್ತು ಸ್ಥಳೀಯ ಆರೋಗ್ಯ ಅಧಿಕಾರಿಗಳ ಸಂಖ್ಯೆಯನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು.
6.7. ಕೋವಿಡ್ ಸಂಬಂಧಿತ ವಸ್ತುಗಳು ಲಭ್ಯವಾಗುವಂತೆ ಮಾಡುವುದು
i. ಅಂಗಡಿ ಮಾಲೀಕರು ತಮ್ಮ ಉದ್ಯೋಗಿಗಳಿಗೆ ಅಗತ್ಯವಿರುವ ವೈಯಕ್ತಿಕ ರಕ್ಷಣಾ ಸಾಧನಗಳಾದ ಮುಖ ಕವಚ/ ಮುಖಗವಸು ಮತ್ತು ಹ್ಯಾಂಡ್ ಸ್ಯಾನಿಟೈಜರ್ಸ್, ಸಾಬೂನು, ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ (1%) ದಂತಹ ವಸ್ತುಗಳು ಲಭ್ಯವಾಗಲು ಸೂಕ್ತವಾದ ವ್ಯವಸ್ಥೆಗಳನ್ನು ಮಾಡಬೇಕು. ಸಾರ್ವಜನಿಕರು ಉಪಯೋಗಿಸುವ ಪ್ರದೇಶಗಳ ನೈರ್ಮಲ್ಯೀಕರಣಕ್ಕಾಗಿ ಮಾರುಕಟ್ಟೆ ಸಂಘಗಳು ಇವುಗಳನ್ನು ಸಂಗ್ರಹಿಸಬೇಕು.
ii. ಥರ್ಮಲ್ ಗನ್‌ಗಳ ಸಮರ್ಪಕ ಪೂರೈಕೆಯನ್ನು ಒದಗಿಸುವುದು.
iii. ಸಿಪಿಸಿಬಿ ಮಾರ್ಗಸೂಚಿಗಳ ಪ್ರಕಾರ ತ್ಯಾಜ್ಯವನ್ನು ನಿರ್ವಹಿಸಲು ಸಾಕಷ್ಟು ಸಂಖ್ಯೆಯಲ್ಲಿ ಮುಚ್ಚಿದ ಡಸ್ಟ್‌ಬಿನ್‌ಗಳು ಮತ್ತು ಕಸದ ಡಬ್ಬಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು (https://cpcb.nic.in/uploads/Projects/BioMedical-Waste/BMWGUIDELINES- COVID_1.pdf)
7. ಮಾರುಕಟ್ಟೆಗಳಲ್ಲಿ ಆರೋಗ್ಯಕರ ಕಾರ್ಯಾಚರಣೆಗಳನ್ನು ನಿರ್ವಹಿಸುವುದು
i. ಕಂಟೈನ್ಮೆಂಟ್ ವಲಯಗಳಲ್ಲಿ ವಾಸಿಸುತ್ತಿರುವ ಮಳಿಗೆಗಳ ಮಾಲೀಕರು, ಉದ್ಯೋಗಿಗಳು ಮತ್ತು ಸಂದರ್ಶಕರಿಗೆ ಮಾರುಕಟ್ಟೆ ಸ್ಥಳಗಳಿಗೆ ಪ್ರವೇಶಕ್ಕೆ ಅನುಮತಿ ಇಲ್ಲ.
ii. ಅಂಗಡಿಗಳ ಪ್ರವೇಶ ಸ್ಥಳಗಳಲ್ಲಿ, ಎಲ್ಲಾ ಉದ್ಯೋಗಿಗಳು / ಸಂದರ್ಶಕರು ಕಡ್ಡಾಯವಾಗಿ ಕೈ ನೈರ್ಮಲ್ಯ (ಸ್ಯಾನಿಟೈಜರ್ ) ಮತ್ತು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗಬೇಕು. ರೋಗ ಲಕ್ಷಣಗಳಿಲ್ಲದ ನೌಕರರು / ಸಂದರ್ಶಕರನ್ನು ಮಾತ್ರ ಅಂಗಡಿಗಳ ಒಳಗೆ ಬಿಡಬೇಕು.
iii. ಮುಖ ಕವಚ / ಮುಖಗವಸುಗಳನ್ನು ಬಳಸಿದರೆ ಮಾತ್ರ ಎಲ್ಲಾ ಉದ್ಯೋಗಿಗಳು / ಸಂದರ್ಶಕರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಮುಖ ಕವಚ / ಮುಖಗವಸುಗಳನ್ನು ಅಂಗಡಿಗಳ ಒಳಗೆ ಮತ್ತು ಹೊರಗೆ ಎಲ್ಲಾ ಸಮಯದಲ್ಲೂ ಧರಿಸಬೇಕು.
iv. ಸಂದರ್ಶಕರು ಪ್ರವೇಶದ ಸಮಯದಲ್ಲಿ ಕ್ಯೂನಲ್ಲಿರುವಾಗ, ಕನಿಷ್ಠ 6 ಅಡಿಗಳಷ್ಟು ದೈಹಿಕ ದೂರವನ್ನು ಕಾಪಾಡಿಕೊಳ್ಳಬೇಕು.
v. ದೈಹಿಕ ಅಂತರದ ನಿಯಮಗಳನ್ನು ಕಾಪಾಡಿಕೊಳ್ಳಲು ಅಂಗಡಿಯೊಳಗೆ ಗ್ರಾಹಕರ ಸಂಖ್ಯೆ ಕಡಿಮೆ ಇರುವಂತೆ ನೋಡಿಕೊಳ್ಳಬೇಕು.
vi. ಅಂಗಡಿಗಳ ಒಳಗೆ ಆಸನ ವ್ಯವಸ್ಥೆ ಇದ್ದರೆ, ಕುರ್ಚಿಗಳು, ಬೆಂಚುಗಳು ಇತ್ಯಾದಿಗಳ ನಡುವೆ 6 ಅಡಿಗಳಷ್ಟು ಅಂತರ ಇರುವಂತೆ ನೋಡಿಕೊಳ್ಳಬೇಕು.
vii. ಲಿಫ್ಟ್‌ಗಳಲ್ಲಿ ಜನರ ಸಂಖ್ಯೆಯನ್ನು ನಿರ್ಬಂಧಿಸಬೇಕು. ದೈಹಿಕ ಅಂತರವನ್ನು ಸರಿಯಾಗಿ ಪಾಲಿಸಬೇಕು.
viii. ಒಂದು ಮೆಟ್ಟಿಲು ಬಿಟ್ಟು ಇನ್ನೊಂದರ ಮೇಲೆ ನಿಲ್ಲುವ ಮೂಲಕ ಎಸ್ಕಲೇಟರ್‌ಗಳ ಬಳಕೆಯನ್ನು ಪ್ರೋತ್ಸಾಹಿಸಬಹುದು.
ix. ಅಂಗಡಿಯ ಮಾಲೀಕರು, ಸಿಬ್ಬಂದಿ ಆಗಾಗ್ಗೆ ಕೈ ತೊಳೆಯಬೇಕು ಅಥವಾ ಹ್ಯಾಂಡ್ ಸ್ಯಾನಿಟೈಜರ್ ಬಳಸಬೇಕು.
***
(Release ID: 1677695)
Visitor Counter : 291
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu