ಪ್ರಧಾನ ಮಂತ್ರಿಯವರ ಕಛೇರಿ
80ನೇ ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನದ ಸಮಾರೋಪ ಅಧಿವೇಶನ: ಪ್ರಧಾನಿ ಭಾಷಣ
ಕಾನೂನುಗಳ ಭಾಷೆ ಸರಳ ಮತ್ತು ಜನಸಾಮಾನ್ಯರಿಗೆ ಲಭ್ಯವಾಗುವಂತಿರಬೇಕು
ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಚರ್ಚೆಯ ಅಗತ್ಯ
ಕೆವೈಸಿ - ನಿಮ್ಮ ಸಂವಿಧಾನದ ಬಗ್ಗೆ ತಿಳಿದುಕೊಳ್ಳಿ - ಒಂದು ದೊಡ್ಡ ರಕ್ಷಣೆ: ಪ್ರಧಾನಿ ನರೇಂದ್ರ ಮೋದಿ
Posted On:
26 NOV 2020 2:58PM by PIB Bengaluru
ಗುಜರಾತ್ನ ಕೆವಾಡಿಯಾದಲ್ಲಿ ನಡೆದ 80 ನೇ ಅಖಿಲ ಭಾರತ ಸಭಾಧ್ಯಕ್ಷರ ಸಮಾವೇಶದ ಸಮಾರೋಪ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಗಾಂಧೀಜಿ ಅವರ ಸ್ಫೂರ್ತಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬದ್ಧತೆಯನ್ನು ಸ್ಮರಿಸುವ ದಿನ ಇದಾಗಿದೆ ಎಂದು ಪ್ರಧಾನಿ ಹೇಳಿದರು. 2008 ರಲ್ಲಿ ಈ ದಿನಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದವರನ್ನು ಅವರು ಸ್ಮರಿಸಿಕೊಂಡರು. ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಪಡೆಗಳ ಯೋಧರಿಗೆ ಗೌರವ ಸಲ್ಲಿಸಿದ ಅವರು, ಇಂದು ಭಾರತವು ಭಯೋತ್ಪಾದನೆ ವಿರುದ್ಧ ಹೊಸ ರೀತಿಯಲ್ಲಿ ಹೋರಾಡುತ್ತಿದೆ ಎಂದು ಹೇಳಿದರು.
ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, 1970 ರಲ್ಲಿ ಅಧಿಕಾರ ವಿಕೇಂದ್ರೀಕರಣದ ಘನತೆಗೆ ವಿರುದ್ಧವಾದ ಪ್ರಯತ್ನಗಳು ನಡೆದವು. ಆದರೆ ಅದಕ್ಕೆ ಉತ್ತರವು ಸಂವಿಧಾನದಿಂದಲೇ ದೊರೆಯಿತು, ಸಂವಿಧಾನದಲ್ಲಿಯೇ ಘನತೆ ಮತ್ತು ಅಧಿಕಾರ ವಿಕೇಂದ್ರೀಕರಣವನ್ನು ವಿವರಿಸಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಹಳಷ್ಟು ಕಲಿತಿದ್ದರಿಂದ, ಅದರ ನಂತರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯು ಬಲಗೊಳ್ಳುತ್ತಲೇ ಹೋಯಿತು. ಸರ್ಕಾರದ ಮೂರು ಅಂಗಗಳಲ್ಲಿ 130 ಕೋಟಿ ಭಾರತೀಯರು ಹೊಂದಿರುವ ವಿಶ್ವಾಸದಿಂದಾಗಿ ಇದು ಸಾಧ್ಯವಾಯಿತು. ಮತ್ತು ಕಾಲಕ್ರಮೇಣ ಈ ವಿಶ್ವಾಸವನ್ನು ಬಲಪಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ನಮ್ಮ ಸಂವಿಧಾನದ ಶಕ್ತಿಯು ನಮಗೆ ಕಷ್ಟ ಕಾಲದಲ್ಲಿ ನೆರವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಭಾರತೀಯ ಚುನಾವಣಾ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವ ಮತ್ತು ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಪ್ರತಿಕ್ರಿಯೆಯು ಇದನ್ನು ಸಾಬೀತುಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಉತ್ಪಾದಕ ದಿನಗಳನ್ನು ನೀಡಿದ್ದಕ್ಕಾಗಿ ಮತ್ತು ಕೊರೊನಾ ವಿರುದ್ಧದ ಹೋರಾಟದಲ್ಲಿ ನೆರವಾಗಲು ತಮ್ಮ ವೇತನದಲ್ಲಿ ಕಡಿತಕ್ಕೆ ಒಪ್ಪಿದ್ದಕ್ಕಾಗಿ ಅವರು ಸಂಸತ್ ಸದಸ್ಯರನ್ನು ಶ್ಲಾಘಿಸಿದರು.
ಯೋಜನೆಗಳು ಬಾಕಿ ಉಳಿಸುವ ಪ್ರವೃತ್ತಿಯ ವಿರುದ್ಧ ಪ್ರಧಾನಿಯವರು ಎಚ್ಚರಿಕೆ ನೀಡಿದರು. ಸರ್ದಾರ್ ಸರೋವರ್ ಉದಾಹರಣೆಯನ್ನು ನೀಡಿದ ಅವರು, ಅದು ವರ್ಷಗಟ್ಟಲೆ ಸ್ಥಗಿತವಾಗಿತ್ತು ಮತ್ತು ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಜನರನ್ನು ಅಂತಿಮವಾಗಿ ಅಣೆಕಟ್ಟು ಪೂರ್ಣವಾದಾಗ ಸಿಗಬೇಕಾದ ಬೃಹತ್ ಪ್ರಯೋಜನಗಳಿಂದ ವಂಚಿತವಾಗಿಸಿತ್ತು ಎಂದರು.
ಕರ್ತವ್ಯಗಳ ಮಹತ್ವದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಕರ್ತವ್ಯಗಳನ್ನು ಹಕ್ಕುಗಳು, ಘನತೆ ಮತ್ತು ಆತ್ಮವಿಶ್ವಾಸದ ಮೂಲವಾಗಿ ಪರಿಗಣಿಸಬೇಕು ಎಂದು ಹೇಳಿದರು. "ನಮ್ಮ ಸಂವಿಧಾನವು ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಆದರೆ ಒಂದು ವಿಶೇಷ ಲಕ್ಷಣವೆಂದರೆ, ಕರ್ತವ್ಯಗಳಿಗೆ ಪ್ರಾಮುಖ್ಯತೆ ನೀಡಿರುವುದು. ಮಹಾತ್ಮ ಗಾಂಧಿಯವರು ಈ ಬಗ್ಗೆ ಬಹಳ ಉತ್ಸುಕರಾಗಿದ್ದರು. ಅವರು ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಇರುವ ನಿಕಟ ಸಂಬಂಧವನ್ನು ಕಂಡಿದ್ದರು. ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ, ಹಕ್ಕುಗಳು ತಂತಾನೇ ರಕ್ಷಿಸಲ್ಪಡುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದರು” ಎಂದು ಪ್ರಧಾನಿ ಹೇಳಿದರು.
ಸಂವಿಧಾನದ ಮೌಲ್ಯಗಳ ಬಗ್ಗೆ ಪ್ರಚಾರದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ಕೆವೈಸಿ-ನೋ ಯುವರ್ ಕಸ್ಟಮರ್ ಎಂಬುದು ಡಿಜಿಟಲ್ ಭದ್ರತೆಯಲ್ಲಿ ಪ್ರಮುಖ ಅಂಶವಾಗಿದೆ. ಹಾಗೆಯೇ ಕೆವೈಸಿ- ನಿಮ್ಮ ಸಂವಿಧಾನವನ್ನು ತಿಳಿದುಕೊಳ್ಳಿ, ಎಂಬುದು ಸಾಂವಿಧಾನಿಕ ಸುರಕ್ಷತೆಗ ಗುರಾಣಿಯಾಗಿದೆ ಎಂದು ಅವರು ಹೇಳಿದರು. ನಮ್ಮ ಕಾನೂನುಗಳ ಭಾಷೆ ಸರಳವಾಗಿರಬೇಕು ಮತ್ತು ಜನ ಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗುವಂತಿರಬೇಕು. ಇದರಿಂದ ಜನರು ಪ್ರತಿ ಕಾನೂನಿನೊಂದಿಗೆ ನೇರ ಸಂಪರ್ಕವನ್ನು ಪಡೆಯುತ್ತಾರೆ ಎಂದು ಅವರು ಒತ್ತಿ ಹೇಳಿದರು. ಬಳಕೆಯಲ್ಲಿಲ್ಲದ ಕಾನೂನುಗಳನ್ನು ತೆಗೆಯುವ ಪ್ರಕ್ರಿಯೆಯು ಸರಳವಾಗಿರಬೇಕು ಮತ್ತು ನಾವು ಹಳೆಯ ಕಾನೂನುಗಳಿಗೆ ತಿದ್ದುಪಡಿ ಮಾಡುವಾಗ ಅದನ್ನು ರದ್ದುಗೊಳಿಸುವ ಸ್ವಯಂಚಾಲಿತ ವ್ಯವಸ್ಥೆ ಇರಬೇಕು ಎಂದು ಸಲಹೆ ನೀಡಿದರು.
ಒಂದು ರಾಷ್ಟ್ರ, ಒಂದು ಚುನಾವಣೆಯ ಬಗ್ಗೆ ಚರ್ಚೆಗೂ ಪ್ರಧಾನಿ ಕರೆ ಕೊಟ್ಟರು. ಲೋಕಸಭೆ, ವಿಧಾನಸಭೆಗಳು ಅಥವಾ ಸ್ಥಳೀಯ ಪಂಚಾಯತ್ ಮಟ್ಟದಲ್ಲಿ ಪ್ರತಿಯೊಂದು ಹಂತದಲ್ಲೂ ಏಕಕಾಲದಲ್ಲಿ ನಡೆಯುವ ಚುನಾವಣೆಗಳು ನಡೆಯುವ ಕುರಿತು ಮಾತನಾಡಿದರು. ಸಾಮಾನ್ಯ ಮತದಾರರ ಪಟ್ಟಿಯನ್ನು ಇದಕ್ಕಾಗಿ ಬಳಸಬಹುದು. ಇದಕ್ಕಾಗಿ ಶಾಸಕಾಂಗ ಕ್ಷೇತ್ರದಲ್ಲಿ ಡಿಜಿಟಲ್ ಆವಿಷ್ಕಾರಗಳನ್ನು ತೀವ್ರ ಶ್ರದ್ಧೆಯಿಂದ ಮಾಡಬೇಕು ಎಂದು ಅವರು ತಿಳಿಸಿದರು.
ಸಭಾಧ್ಯಕ್ಷರುಗಳೇ ತಮ್ಮ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಸಂಸತ್ತುಗಳನ್ನು ಆಯೋಜಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.
***
(Release ID: 1676069)
Visitor Counter : 261
Read this release in:
Odia
,
Tamil
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Telugu
,
Malayalam