ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ವಿದ್ಯಾರ್ಥಿವೇತನ ಯೋಜನೆಗಳ ವಿತರಣೆ ವಿಳಂಬ ವರದಿಗೆ ಸಾಮಾಜಿಕ ನ್ಯಾಯ  ಮತ್ತು ಸಬಲೀಕರಣ ಸಚಿವಾಲಯದ ಸ್ಪಷ್ಟನೆ

Posted On: 17 NOV 2020 5:47PM by PIB Bengaluru

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರ ವಿದ್ಯಾರ್ಥಿವೇತನಗಳ ವಿತರಣೆ ಅಥವಾ ಬಟವಾಡೆಯಲ್ಲಿ ವಿಳಂಬವಾಗುತ್ತಿದೆ. ಇದರಿಂದ ವಿದ್ಯಾರ್ಥಿ ಸಮುದಾಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಮತ್ತು ಲೇಖನಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸ್ಪಷ್ಟನೆ ನೀಡಿದೆ. ಅಲ್ಲದೆ, ಅದು ವಾಸ್ತವ ಸ್ಥಿತಿಗತಿಗಳ ವಿವರ ನೀಡಿದೆ.

ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ವರ್ಗಗಳು, ಅಧಿಸೂಚಿತ ಬುಡಕಟ್ಟು ಜನಾಂಗಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಚಿವಾಲಯವು ರಾಜ್ಯ ಸರಕಾರಗಳು, ಕೇಂದ್ರಡಳಿತ ಪ್ರದೇಶಗಳ ಆಡಳಿತ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನೇರ ಸಹಯೋಗದಲ್ಲಿ ಹಲವಾರು ವಿದ್ಯಾರ್ಥಿವೇತನ (ಸ್ಕಾಲರ್ಶಿಪ್) ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಿಗೆ ಕಾಲಕಾಲಕ್ಕೆ ಅನುದಾನ ಒದಗಿಸುತ್ತಾ ಬರಲಾಗಿದೆ

ಎಲ್ಲಾ ಸ್ಕಾಲರ್ಶಿಪ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿವಿಧ ಸಂಸ್ಥೆಗಳ ವಿದ್ಯಾರ್ಥಿವೇತನ ಬಟವಾಡೆ ಕಾರ್ಯವೈಖರಿ ಕುರಿತು   ಸಚಿವಾಲಯ ಕಟ್ಟುನಿಟ್ಟಾದ ಮೇಲ್ವಿಚಾರಣೆ ನಡೆಸುತ್ತಿದೆ. ಹಾಗಾಗಿ, ಸ್ಕಾಲರ್ಶಿಪ್ ಫಲಾನುಭವಿ ವಿದ್ಯಾರ್ಥಿಗಳು ವಿಶೇಷವಾಗಿ ಕೋವಿಡ್-19 ಸಂಕಷ್ಟ ಕಾಲಘಟ್ಟದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಯೋಜನೆಗೆ ಸಚಿವಾಲಯವು ಕೇಂದ್ರದ ಪಾಲಿನ ಶೇಕಡ 75 ಅನುದಾನವನ್ನು 2020 ಜೂನ್ನಲ್ಲೇ ಬಿಡುಗಡೆ ಮಾಡಿದೆ. ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ನಿರೀಕ್ಷಿತ ಬೇಡಿಕೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಕೇಂದ್ರದ ಪಾಲಿನ ಇನ್ನುಳಿದ 25% ಅನುದಾನಕ್ಕೂ ಮಂಜೂರಾತಿ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ, ಅವರ ಸ್ಕಾಲರ್ಶಿಪ್ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸುವಂತೆ ಎಲ್ಲಾ ಅನುಷ್ಠಾನ ಸಂಸ್ಥೆ (ಏಜೆನ್ಸಿಗಳು) ಗಳಿಗೆ ಸೂಚನೆ ನೀಡಲಾಗಿದೆ. ಇನ್ನುಳಿದ ಎಲ್ಲಾ ಸ್ಕಾಲರ್ಶಿಪ್ ಯೋಜನೆಗಳಿಗೆ ಸಚಿವಾಲಯವು, ನಿಯಮಿತವಾಗಿ ಅನುಷ್ಠಾನ ಏಜೆನ್ಸಿಗಳಿಗೆ ನಿಧಿ ಬಿಡುಗಡೆ ಮಾಡುತ್ತಿದೆ. ಸಚಿವಾಲಯವು ಅನುದಾನ ಬಿಡುಗಡೆ ಮಾಡುವ ಸಂಬಂಧಿಸಿದ ಇಲಾಖೆಗಳ ಕಾರ್ಯವೈಖರಿ ಮೇಲೆ ದೈನಂದಿನ ಆಧಾರದಲ್ಲಿ ನಿಕಟ ಮೇಲ್ವಿಚಾರಣೆ ನಡೆಸುತ್ತಿದೆ.

ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ರಾಷ್ಟ್ರೀಯ ಶಿಷ್ಯವೇತನ ಯೋಜನೆಅಡಿ ಶಿಷ್ಯವೇತನ (ಫೆಲೋಶಿಪ್) ವಿತರಿಸಲಾಗುತ್ತಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಮತ್ತು ಇತರೆ ಪಾಲುದಾರರ ಸಹಯೋಗದಲ್ಲಿ ಸಚಿವಾಲಯವು ಮಾಸಿಕ ಆಧಾರದಲ್ಲಿ ಯೋಜನೆಗೆ ಅನುದಾನ ಮಂಜೂರಾತಿ, ಬಿಡುಗಡೆ ಮತ್ತಿತರ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರಾಷ್ಟ್ರೀಯ ಫೆಲೋಶಿಪ್ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಶಿಷ್ಯವೇತನ ತಲುಪುವಂತೆ ಕ್ರಮ ಕೈಗೊಳ್ಳಲು ಎಲ್ಲಾ ಪಾಲುದಾರರಿಗೆ ನಿರ್ದೇಶನ ನೀಡುತ್ತಾ ಬಂದಿದೆ.

***(Release ID: 1673646) Visitor Counter : 228