ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನದಡಿ 6 ರಾಜ್ಯಗಳ 116 ಜಿಲ್ಲೆಗಳಲ್ಲಿ 3 ಲಕ್ಷ ವಲಸೆ ಕಾರ್ಮಿಕರಿಗೆ ಸ್ಕಿಲ್ ಇಂಡಿಯಾ ಕೌಶಲ್ಯ ತರಬೇತಿ

Posted On: 12 NOV 2020 5:32PM by PIB Bengaluru
  • ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಬೇಡಿಕೆ ಆಧಾರಿತ ಕೌಶಲ್ಯ ತರಬೇತಿ
  • ಆರು ರಾಜ್ಯಗಳ 116 ಜಿಲ್ಲೆಗಳಾದ್ಯಂತ ಸುಮಾರು 200 ತರಬೇತಿದಾರರಿಂದ ಪ್ರಕ್ರಿಯೆ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ (ಜಿಕೆಆರ್ ) ಮಾರ್ಗದರ್ಶನದಡಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ(ಎಂಎಸ್ ಡಿಇ) ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಒಡಿಶಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಾದ್ಯಂತ 116 ಜಿಲ್ಲೆಗಳಲ್ಲಿ ಮೂರು ಲಕ್ಷ ವಲಸೆ ಕಾರ್ಮಿಕರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆರಂಭಿಸಿದೆ. ವಲಸೆ ಕಾರ್ಮಿಕರ ಸಬಲೀಕರಣ ಮತ್ತು ಕೋವಿಡ್ ನಂತರದ ಯುಗದಲ್ಲಿ ಬೇಡಿಕೆ ಆಧಾರಿತ ಕೌಶಲ್ಯ ತರಬೇತಿಯನ್ನು ಗ್ರಾಮೀಣ ಜನರಿಗೆ ಒದಗಿಸುವುದು ಇದರ ಉದ್ದೇಶವಾಗಿದೆ ಹಾಗೂ ಕೇಂದ್ರದ ಪ್ರಾಯೋಜಿತ ಮತ್ತು ಕೇಂದ್ರದ ನಿರ್ವಹಣೆ (ಸಿಎಸ್ ಸಿಎಂ)ಅಡಿಯಲ್ಲಿ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) 2016-2020 ಅಡಿಯಲ್ಲಿ ಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ. ಸಂಬಂಧಿಸಿದ ಆಯಾ ಜಿಲ್ಲಾ ಕಲೆಕ್ಟರ್/ಜಿಲ್ಲಾ ಮ್ಯಾಜಿಸ್ಟ್ರೇಟ್/ಜಿಲ್ಲಾಧಿಕಾರಿಗಳ ಸಹಭಾಗಿತ್ವದಲ್ಲಿ ಎಂಎಸ್ ಡಿಇ ಜಿಲ್ಲೆಗಳಲ್ಲಿ 125 ದಿನಗಳ ಕೌಶಲ್ಯ ತರಬೇತಿಗೆ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಈಗಾಗಲೇ ಗುರುತಿಸಲ್ಪಟ್ಟ ಕೆಲವು ಜಿಲ್ಲೆಗಳ ಕೆಲವು ಭಾಗಗಳಲ್ಲಿ ತರಬೇತಿ ಕಾರ್ಯ ಆರಂಭವಾಗಿದೆ ಮತ್ತು ಕ್ರಮೇಣ ತಿಂಗಳಲ್ಲಿ ಇತರೆ ಭಾಗಕ್ಕೂ ತರಬೇತಿ ಕಾರ್ಯ ವಿಸ್ತರಿಸಲಾಗುವುದು.

ಎಂಎಸ್ ಡಿಇ ಅಡಿಯಲ್ಲಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ(ಎನ್ಎಸ್ ಡಿಸಿ) ತರಬೇತಿ ಕಾರ್ಯಕ್ರಮವನ್ನು ಹಾಲಿ ಇರುವ ತರಬೇತುದಾರರು ಮತ್ತು ಪಿಎಂಕೆವಿವೈ 2016-20 ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಜನಾ ಅನುಷ್ಠಾನ ಸಂಸ್ಥೆಗಳು ಅಥವಾ ರಾಜ್ಯಗಳ ಯೋಜನೆಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ. ಸುಮಾರು 1.5 ಲಕ್ಷ ವಲಸೆ ಕಾರ್ಮಿಕರಿಗೆ ಅಲ್ಪಾವಧಿ ತರಬೇತಿ(ಎಸ್ ಟಿಟಿ) ಕಾರ್ಯಕ್ರಮದಡಿ ತರಬೇತಿ ನೀಡಲಾಗಿದೆ ಮತ್ತು ಹೆಚ್ಚುವರಿಯಾಗಿ ಮತ್ತೆ 1.5 ಲಕ್ಷ ವಲಸೆ ಕಾರ್ಮಿಕರಿಗೆ ಪೂರ್ವ ಕಲಿಕೆ ಗುರುತಿಸುವಿಕೆ(ಆರ್ ಪಿಎಲ್) ಯೋಜನೆ ಅಡಿ ಪ್ರಮಾಣೀಕರಿಸಲಾಗಿದೆ. ಜಿಲ್ಲೆಗಳಲ್ಲಿ ಬೇಡಿಕೆ ಆಧಾರಿತ ಉದ್ಯೋಗಗಳು ಹೆಚ್ಚಾಗುತ್ತಿವೆ ಮತ್ತು ವಲಸೆ ಕಾರ್ಮಿಕರನ್ನು ಒಗ್ಗೂಡಿಸಿ ಜಿಲ್ಲಾಡಳಿತಗಳಿಂದ ತರಬೇತಿಯನ್ನು ನೀಡಲಾಗುತ್ತಿದೆ. ಕೌಶಲ್ಯ ಸಚಿವಾಲಯ, ಸ್ಥಳೀಯ ಉದ್ಯಮ ಬೇಡಿಕೆಗೆ ಅನುಗುಣವಾಗಿ ಜಿಲ್ಲಾಡಳಿತದ ಶಿಫಾರಸ್ಸಿನಂತೆ ನಾನಾ ಹುದ್ದೆಗಳಿಗೆ ಅನುಕೂಲವಾಗುವಂತೆ ಕೌಶಲ್ಯ ತರಬೇತಿಗಳನ್ನು ನೀಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೈಗೊಂಡಿದೆ.

ಕೌಶಲ್ಯಕ್ಕೆ ಉತ್ತೇಜನ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಉದ್ಯಮಶೀಲತೆಗೆ ಒತ್ತು ನೀಡುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ. ಮಹೇಂದ್ರನಾಥ್ ಪಾಂಡೆ ಅವರು, “ಸ್ಕಿಲ್ ಇಂಡಿಯಾ ಮಿಷನ್ ಮೂಲ ಉದ್ದೇಶ ಶೇ.70ರಷ್ಟು ಒಟ್ಟಾರೆ ದುಡಿಯುವ ಶಕ್ತಿ ಗ್ರಾಮೀಣ ಭಾರತದಿಂದ ಬರುತ್ತಿರುವುದರಿಂದ ಕೌಶಲ್ಯ ವೃದ್ಧಿಯ ಮೂಲಕ ಗ್ರಾಮೀಣಾಭಿವೃದ್ಧಿ ಸಾಧಿಸುವುದಾಗಿದೆ. ಬದಲಾಗುತ್ತಿರುವ ಉದ್ಯಮದ ಅಗತ್ಯತೆಗಳಿಗೆ ತಕ್ಕಂತೆ ಗ್ರಾಮೀಣ ದುಡಿಯುವ ಶಕ್ತಿಯನ್ನು ಸಜ್ಜುಗೊಳಿಸುವುದು ಮತ್ತು ಕೌಶಲ್ಯಾಭಿವೃದ್ಧಿಗೆ ಪೂರಕ ವಾತಾವರಣವನ್ನು ಸೃಷ್ಟಿಸಲು ನಾನಾ ಪಾಲುದಾರರ ನಡುವೆ ಸಮನ್ವಯ ಸಾಧಿಸುವ ದೂರದೃಷ್ಟಿಯನ್ನು ಹೊಂದಲಾಗಿದೆ. ಸದ್ಯದ ಉದ್ಯಮದ ಬೇಡಿಕೆಗಳನ್ನು ಆಧರಿಸಿ ನಾವು ನಮ್ಮೊಳಗೆ ಮರು ಹೊಂದಾಣಿಕೆ ಮಾಡಿಕೊಳ್ಳಬೇಕು ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸೂಕ್ತ ಉದ್ಯೋಗಗಳನ್ನು ಗುರುತಿಸಿ ಅವುಗಳಿಗೆ ತಕ್ಕಂತೆ ತರಬೇತಿ ನೀಡಬೇಕಿದೆ. ವಲಸೆ ಕಾರ್ಮಿಕರ ಸಾಮೂಹಿಕ ಶಕ್ತಿಯೇ ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವುದರಿಂದ ಉತ್ತಮ ಮತ್ತು ಸುಸ್ಥಿರ ಜೀವನೋಪಾಯ ಅವಕಾಶಗಳನ್ನು ಸೃಷ್ಟಿಸಲು ನಾವು ಸ್ಥಳೀಯ ಬೇಡಿಕೆ ಆಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲು ಬದ್ಧವಾಗಿದ್ದೇವೆಎಂದರು.  

ಗುರುತಿಸಲ್ಪಟ್ಟ ಜಿಲ್ಲೆಗಳಾದ್ಯಂತ ಕೌಶಲ್ಯ ತರಬೇತಿ ಮತ್ತು ಪುನರ್ ಮನನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಸ್ಕಿಲ್ ಇಂಡಿಯಾ ಪೋರ್ಟಲ್ ನಡಿ ತರಬೇತುದಾರರಿಗೆ ಮಾನ್ಯತೆ ಮತ್ತು ಪ್ರಮಾಣೀಕರಣ ನೀಡಲಾಗುತ್ತಿದ್ದು, ವ್ಯವಸ್ಥೆ ಆಧಾರಿತ ಗುರಿಗಳಿಗೆ ನಂತರ ಅನುಮೋದನೆ ನೀಡಲಾಗುತ್ತಿದೆ. ಆರು ರಾಜ್ಯಗಳಲ್ಲಿ ಸಹಾಯಕ ಎಲೆಕ್ಟ್ರಿಶಿಯನ್, ಸ್ವಯಂ ಉದ್ಯೋಗದ ಟೈಲರ್(ದರ್ಜಿ), ಚಿಲ್ಲರೆ ಮಾರಾಟ ಅಸೋಸಿಯೇಟ್, ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ (ಕಾಲ್ ಸೆಂಟರ್), ಹೊಲಿಗೆಯಂತ್ರ ಆಪರೇಟರ್, ಸಾಮಾನ್ಯ ಕೆಲಸ ಸಹಾಯಕರು ಮತ್ತಿತರ ಉದ್ಯೋಗಗಳಿಗೆ ಬೇಡಿಕೆ ಇದೆ. ಜಿಕೆಆರ್ ಅಲ್ಪಾವಧಿ ತರಬೇತಿ(ಎಸ್ ಟಿಟಿ) ಭಾಗವಾಗಿದ್ದು, ಎಸ್ ಟಿಟಿ-ಸಿಎಸ್ ಸಿಎಂ-ಪಿಎಂಕೆವಿಐ 2016-20 ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ. ಅರ್ಹ ಅಭ್ಯರ್ಥಿಗಳು ಭತ್ಯೆ ಬೆಂಬಲವನ್ನು ನೇರ ನಗದು ಮೂಲಕ(ಡಿಬಿಟಿ) ಪಡೆಯಲಿದ್ದಾರೆ ಮತ್ತು ವಾಸ್ತವ್ಯ ಮತ್ತು ಊಟೋಪಚಾರ, ಉದ್ಯೋಗಕ್ಕೆ ಬೆಂಬಲ, ಸಾಧನ ಸಲಕರಣೆಗಳ ವಿತರಣೆ ಮತ್ತು ಇತರೆ ನೆರವನ್ನು ನೀಡಲಾಗುವುದು.

ಸ್ಕಿಲ್ ಇಂಡಿಯಾದ ಮಹತ್ವಾಕಾಂಕ್ಷೆಯ ಪಿಎಂಕೆವಿವೈ ಯೋಜನೆ ಅಡಿ ಶಾಲೆ/ಕಾಲೇಜಿನಿಂದ ಹೊರಗುಳಿದವರು ಅಥವಾ ನಿರುದ್ಯೋಗಿ ಯುವಕರಿಗೆ ನಾನಾ ವಲಯಗಳಲ್ಲಿ ಉದ್ಯೋಗಗಳ ಅನುಸಾರ ಅಲ್ಪಾವಧಿ ತರಬೇತಿಯನ್ನು(ಎಸ್ ಟಿಟಿ) ನೀಡುವ ಉದ್ದೇಶವಿದೆ. ತರಬೇತಿಯ ಅವಧಿ ಆಯ್ದ ಉದ್ಯೋಗಗಳ ಮೇಲೆ 150 ರಿಂದ 300 ಗಂಟೆಗಳವರೆಗೆ ಅವಲಂಬಿಸಿರುತ್ತದೆ. ಪೂರ್ವ ಕಲಿಕೆ ಗುರುತಿಸುವಿಕೆ (ಆರ್ ಪಿ ಎಲ್) ಕಾರ್ಯಕ್ರಮದಡಿ ಸಂಘಟಿತ ವಲಯದ ಹೊರಗಿನ ಕಲಿಕೆಯ ಮೌಲ್ಯವನ್ನು ಗುರುತಿಸಲಾಗುವುದು ಮತ್ತು ವೈಯಕ್ತಿಕ ಕೌಶಲ್ಯಗಳಿಗೆ ಸರ್ಕಾರದಿಂದ ಪ್ರಮಾಣಪತ್ರ ವಿತರಿಸಲಾಗುವುದು. ಅಭ್ಯರ್ಥಿಗಳು ಡಿಜಿಟಲ್ ಮತ್ತು ಹಣಕಾಸು ಸಾಕ್ಷರತಾ ಪರಿಕಲ್ಪನೆಗಳಿಗೆ ತೆರೆದುಕೊಳ್ಳಬಹುದು. ಅವರು ಮೂರು ವರ್ಷಗಳವರೆಗೆ ಉಚಿತ ಅಪಘಾತ ವಿಮೆಗೆ ಒಳಪಡುತ್ತಾರೆ. ಆರ್ ಪಿ ಎಲ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಮತ್ತು ಪ್ರತಿ ಯಶಸ್ವಿ ಪ್ರಮಾಣಪತ್ರ ಪಡೆದ ಅಭ್ಯರ್ಥಿಗಳಿಗೆ ತಲಾ 500 ರೂ. ನೀಡಲಾಗುವುದು.

ಕೌಶಲ್ಯ ಸಚಿವಾಲಯ, ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ(ಪಿಎಂಕೆವಿವೈ) 2016-20 ಅಡಿಯಲ್ಲಿ ಈವರೆಗೆ 92 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಿದೆ.

***


(Release ID: 1672399) Visitor Counter : 222