ಪ್ರಧಾನ ಮಂತ್ರಿಯವರ ಕಛೇರಿ
ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಕಟಕ್ ಪೀಠದ ಕಚೇರಿ-ಸಹಿತ-ವಸತಿ ಸಮುಚ್ಛಯವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
Posted On:
09 NOV 2020 7:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ)ದ ಕಟಕ್ ಪೀಠದ ಅತ್ಯಾಧುನಿಕ ಸುಸಜ್ಜಿತ ಕಚೇರಿ ಸಹಿತ ವಸತಿ ಸಮುಚ್ಛಯವನ್ನು 2020ರ ನವೆಂಬರ್ 11ರಂದು ಸಂಜೆ 4.30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ. ಕೇಂದ್ರ ಕಾನೂನು ಸಚಿವರು, ಕೇಂದ್ರ ಪೆಟ್ರೋಲಿಯಂ ಸಚಿವರು, ಒಡಿಶಾದ ಮುಖ್ಯಮಂತ್ರಿ, ಒಡಿಶಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳು ಮತ್ತು ಇತರ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಐಟಿಎಟಿಯ ಇ-ಟೆಬಲ್ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಗುವುದು.
ಐಟಿಎಟಿ ಎಂದೂ ಕರೆಯಲಾಗುವ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ನೇರ ತೆರಿಗೆ ಕ್ಷೇತ್ರದಲ್ಲಿನ ಒಂದು ಪ್ರಮುಖ ಶಾಸನಾತ್ಮಕ ಕಾಯವಾಗಿದ್ದು ಇದರ ಆದೇಶಗಳು ಸತ್ಯಾನ್ವೇಷಣೆಯ ಆಧಾರದ ಮೇಲೆ ಅಂತಿಮ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಇದರ ನೇತೃತ್ವವನ್ನು ಈ ಹಿಂದೆ ಜಾರ್ಖಂಡ್ ಹೈಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ (ನಿವೃತ್ತ) ಶ್ರೀ ಪಿ.ಪಿ. ಭಟ್, ವಹಿಸಿದ್ದಾರೆ. ಐಟಿಎಟಿಯನ್ನು 1941ರ ಜನವರಿ 25ರಂದು ರಚಿಸಲಾದ ಮೊದಲ ನ್ಯಾಯಮಂಡಳಿಯಾಗಿದೆ ಮತ್ತು ಇದನ್ನು ‘ಮಾತೃ ನ್ಯಾಯಾಧಿಕರಣ’ ಎಂದೂ ಕರೆಯುತ್ತಾರೆ. ದೆಹಲಿ, ಬಾಂಬೆ ಮತ್ತು ಕೋಲ್ಕತ್ತಾದಲ್ಲಿ 1941ರಲ್ಲಿ ಮೂರು ಪೀಠಗಳಿಂದ ಪ್ರಾರಂಭವಾದ ಇದು ಈಗ ಭಾರತದ ಮೂವತ್ತು ನಗರಗಳಲ್ಲಿ 63 ಪೀಠಗಳು ಮತ್ತು ಎರಡು ಸಂಚಾರಿ ಪೀಠಗಳು ಹರಡಿ ಬೆಳೆದಿವೆ.
ಐಟಿಎಟಿಯ ಕಟಕ್ ಪೀಠವು 1970ರ ಮೇ 23ರಂದು ಆರಂಭವಾಗಿ ಕಾರ್ಯಾಚರಣೆಯಲ್ಲಿದೆ. ಕಟಕ್ ಪೀಠದ ವ್ಯಾಪ್ತಿ ಇಡೀ ಒಡಿಶಾಗೆ ಅನ್ವಯಿಸುತ್ತದೆ. ಇದು 50 ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಹೊಸದಾಗಿ ನಿರ್ಮಿಸಲಾಗಿರುವ ಕಟಕ್ ಐಟಿಎಟಿಯ ಕಚೇರಿ ಸಹಿತ ವಸತಿ ಸಮುಚ್ಛಯ 1.60 ಎಕರೆ ಪ್ರದೇಶದಲ್ಲಿದ್ದು, ಈ ಭೂಮಿಯನ್ನು ಒಡಿಶಾ ರಾಜ್ಯ ಸರ್ಕಾರ 2015ರಲ್ಲಿ ಉಚಿತವಾಗಿ ಮಂಜೂರು ಮಾಡಿತ್ತು. ಕಚೇರಿ ಸಮುಚ್ಛಯದ ಒಟ್ಟು ನಿರ್ಮಾಣದ ವಿಸ್ತೀರ್ಣ 1928 ಚದರ ಮೀಟರ್. ಇದರಲ್ಲಿ ವಿಶಾಲವಾದ ನ್ಯಾಯಾಲಯ ಕೊಠಡಿ, ಅತ್ಯಾಧುನಿಕ ಅಭಿಲೇಖಾಲಯ, ನ್ಯಾಯಪೀಠದ ಸದಸ್ಯರಿಗೆ ಸುಸಜ್ಜಿತ ಕೋಣೆಗಳು, ಗ್ರಂಥಾಲಯ ಕೊಠಡಿ, ಸುಸಜ್ಜಿತ ಆಧುನಿಕ ಸಮ್ಮೇಳನ ಸಭಾಂಗಣ, ದಾವೆ ಹೂಡುವವರಿಗೆ ಸಾಕಷ್ಟು ಸ್ಥಳಾವಕಾಶ, ವಕೀಲರಿಗೆ, ಚಾರ್ಟರ್ಡ್ ಅಕೌಂಟೆಂಟರುಗಳಿಗೆ ಕೊಠಡಿ, ಇತ್ಯಾದಿ ಒಳಗೊಂಡ 3 ಮಹಡಿಗಳಿವೆ.
***
(Release ID: 1671554)
Visitor Counter : 169
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam