ಪ್ರಧಾನ ಮಂತ್ರಿಯವರ ಕಛೇರಿ
ವಾರಣಾಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
ದೀಪಾವಳಿಯಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಜನತೆಗೆ ಕರೆ
ವಾರಣಾಸಿಯ ಸಂಪರ್ಕ ಮೂಲಸೌಕರ್ಯ ಸರ್ಕಾರದ ಪ್ರಮುಖ ಆದ್ಯತೆ: ಪ್ರಧಾನಿ
Posted On:
09 NOV 2020 1:33PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸ್ ಮೂಲಕ ವಾರಣಾಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಪ್ರಧಾನಿಯವರು ಇಂದು 220 ಕೋಟಿ ರೂ.ಗಳ 16 ಯೋಜನೆಗಳಿಗೆ ಚಾಲನೆ ನೀಡಿದರು. ವಾರಣಾಸಿಯಲ್ಲಿ 400 ಕೋಟಿ ರೂ. ವೆಚ್ಚದ 14 ಯೋಜನೆಗಳ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ ಎಂದು ಪ್ರಧಾನಿ ಹೇಳಿದರು. ನೀಡಿದರು.
ಸಾರನಾಥ್ ಧ್ವನಿ ಮತ್ತು ಬೆಳಕು ಪಾರ್ಯಕ್ರಮ, ರಾಮನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆ ಉನ್ನತೀಕರಣ, ಒಳಚರಂಡಿ ಸಂಬಂಧಿತ ಕಾರ್ಯಗಳು, ಗೋರಕ್ಷಣೆ ಮತ್ತು ಸಂರಕ್ಷಣೆಗಾಗಿ ಮೂಲಸೌಕರ್ಯ ಸೌಲಭ್ಯಗಳು, ವಿವಿಧೋದ್ದೇಶ ಬೀಜ ಉಗ್ರಾಣ, 100 ಮೆ.ಟನ್ ಸಾಮರ್ಥ್ಯದ ಕೃಷಿ ಉತ್ಪಾದನಾ ಗೋದಾಮು, ಐಪಿಡಿಎಸ್ 2ನೇ ಹಂತ, ಸಂಪೂರ್ಣಾನಂದ ಕ್ರೀಡಾಂಗಣದಲ್ಲಿ ಪ್ರೀಡಾಪಟುಗಳಿಗೆ ವಸತಿ ಸಂಕೀರ್ಣ, ವಾರಣಾಸಿ ನಗರದ ಸ್ಮಾರ್ಟ್ ಲೈಟಿಂಗ್ ಕೆಲಸಗಳು, 105 ಅಂಗನವಾಡಿ ಕೇಂದ್ರಗಳು ಮತ್ತು 102 ಗೋ ಆಶ್ರಯ ಕೇಂದ್ರಗಳನ್ನು ಇಂದು ಪ್ರಧಾನಿಯವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಪ್ರವಾಸೋದ್ಯಮವು ವಾರಣಾಸಿ ನಗರ ಮತ್ತು ಗ್ರಾಮಾಂತರ ಪ್ರದೇಶಾಭಿವೃದ್ಧಿ ಯೋಜನೆಯ ಒಂದು ಭಾಗವಾಗಿದೆ. ಗಂಗಾ ನದಿಯ ಸ್ವಚ್ಛತೆ, ಆರೋಗ್ಯ ಸೇವೆಗಳು, ರಸ್ತೆ, ಮೂಲಸೌಕರ್ಯ, ಪ್ರವಾಸೋದ್ಯಮ, ವಿದ್ಯುತ್, ಯುವಜನ, ಕ್ರೀಡೆಗಳು, ರೈತರು – ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ವಾರಣಾಸಿಯು ಅಭಿವೃದ್ಧಿಯ ವೇಗವನ್ನು ಪಡೆದುಕೊಂಡಿರುವುದಕ್ಕೆ ಎಂಬುದಕ್ಕೆ ಈ ಬೆಳವಣಿಗೆಯು ಒಂದು ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಗಂಗಾ ಕ್ರಿಯಾ ಯೋಜನೆಯಡಿ ಒಳಚರಂಡಿ ಸಂಸ್ಕರಣಾ ಘಟಕದ ನವೀಕರಣ ಪೂರ್ಣಗೊಂಡಿದೆ ಎಂದು ಅವರು ಪ್ರಕಟಿಸಿದರು. ಘಾಟ್‌ಗಳ ಅಲಂಕಾರ, ಮಾಲಿನ್ಯವನ್ನು ಕಡಿಮೆ ಮಾಡಲು ಸಿಎನ್‌ಜಿಯ ಪರಿಚಯ, ದಶಾಶ್ವಮೇಧ ಘಾಟ್‌ನಲ್ಲಿ ಪ್ರವಾಸಿಗರ ಪ್ಲಾಜಾ ಮುಂತಾದ ವಾರಣಾಸಿಯಲ್ಲಿ ಕೈಗೊಂಡಿರುವ ಮೂಲಸೌಕರ್ಯ ಕೆಲಸಗಳನ್ನು ಅವರು ಪಟ್ಟಿ ಮಾಡಿದರು.
ಗಂಗಾ ನದಿಯಲ್ಲಿ ನಡೆದಿರುವ ಈ ಕೆಲಸಗಳು ಕಾಶಿಯ ಸಂಕಲ್ಪ ಮತ್ತು ಕಾಶಿಗೆ ಹೊಸ ಅವಕಾಶಗಳನ್ನು ಒದಗಿಸುವ ಹಾದಿಯಾಗಿದೆ ಎಂದು ಪ್ರಧಾನಿ ಹೇಳಿದರು. ಕ್ರಮೇಣವಾಗಿ ಇಲ್ಲಿನ ಘಾಟ್‌ಗಳ ಪರಿಸ್ಥಿತಿ ಸುಧಾರಿಸುತ್ತಿದೆ. ಗಂಗಾ ನದಿಯ ಘಾಟ್‌ಗಳ ಸ್ವಚ್ಛತೆ ಮತ್ತು ಸುಂದರೀಕರಣದ ಜೊತೆಗೆ ಸಾರನಾಥ್ ಕೂಡ ಹೊಸ ನೋಟವನ್ನು ಪಡೆಯುತ್ತಿದೆ ಎಂದರು. ಇಂದು ಪ್ರಾರಂಭಿಸಲಾದ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಸಾರನಾಥದ ಭವ್ಯತೆಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ಹೇಳಿದರು.
ವಿದ್ಯುತ್ ತಂತಿಗಳು ನೇತಾಡುವ ಸಮಸ್ಯೆಯಿಂದ ಇಂದು ಕಾಶಿಯ ಬುತೇಕ ಭಾಗವನ್ನು ಮುಕ್ತಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಘೋಷಿಸಿದರು. ತಂತಿಗಳನ್ನು ಭೂಮಿಯಡಿ ಹಾಕುವ ಮತ್ತೊಂದು ಹಂತವು ಇಂದು ಪೂರ್ಣಗೊಂಡಿದೆ. ಇದಲ್ಲದೆ, ಸ್ಮಾರ್ಟ್ ಎಲ್ಇಡಿ ದೀಪಗಳು ರಸ್ತೆಗಳನ್ನು ಪ್ರಕಾಶಗೊಳಿಸುತ್ತವೆ ಮತ್ತು ಸುಂದರಗೊಳಿಸುತ್ತವೆ ಎಂದು ಅವರು ಹೇಳಿದರು.
ವಾರಣಾಸಿಯ ಸಂಪರ್ಕ ಕೆಲಸವು ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕಾಶಿ ಜನರು ಮತ್ತು ಪ್ರವಾಸಿಗರು ವಾಹನ ಸಂದಣಿಯಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದಂತೆ ಹೊಸ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ ಎಂದರು. ಬಬತ್‌ಪುರವನ್ನು ನಗರಕ್ಕೆ ಸಂಪರ್ಕಿಸುವ ರಸ್ತೆಯು ವಾರಣಾಸಿಯ ಹೊಸ ಗುರುತಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು. ವಾರಣಾಸಿ ವಿಮಾನ ನಿಲ್ದಾಣದಲ್ಲಿ ಎರಡು ಪ್ರಯಾಣಿಕರ ಬೋರ್ಡಿಂಗ್ ಸೇತುವೆಗಳನ್ನು ಪ್ರಾರಂಭಿಸುವುದು ಅಗತ್ಯವಾಗಿತ್ತು ಎಂದು ಅವರು ಹೇಳಿದರು. ಪ್ರತಿದಿನ 12 ವಿಮಾನಗಳನ್ನು ನಿರ್ವಹಿಸುತ್ತಿದ್ದ ವಾರಣಾಸಿ ವಿಮಾನ ನಿಲ್ದಾಣವು ಈಗ ದಿನಕ್ಕೆ 48 ವಿಮಾನಗಳನ್ನು ನಿರ್ವಹಿಸುತ್ತಿದೆ. ಇಲ್ಲಿ ವಾಸಿಸುವರಿಗೆ ಮತ್ತು ಇಲ್ಲಿಗೆ ಭೇಟಿ ನೀಡುವವರಿಗೆ ಜೀವನವನ್ನು ಸುಲಭಗೊಳಿಸಲು ವಾರಣಾಸಿಯಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು. ವಾರಣಾಸಿ ನಗರದಲ್ಲಿ ಕೈಗೊಂಡ ರಸ್ತೆ ಮೂಲಸೌಕರ್ಯ ಕಾರ್ಯಗಳನ್ನು ಅವರು ಪಟ್ಟಿ ಮಾಡಿದರು.
ಕಳೆದ 6 ವರ್ಷಗಳಿಂದ ವಾರಣಾಸಿಯಲ್ಲಿ ಆರೋಗ್ಯ ಮೂಲಸೌಕರ್ಯಗಳಲ್ಲಿ ಅಭೂತಪೂರ್ವ ಕೆಲಸಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು. ಇಂದು ಉತ್ತರ ಪ್ರದೇಶಕ್ಕೆ ಮಾತ್ರವಲ್ಲದೇ, ಇದು ಇಡೀ ಪೂರ್ವಾಂಚಲ ಆರೋಗ್ಯ ಸೌಲಭ್ಯಗಳ ಕೇಂದ್ರವಾಗುತ್ತಿದೆ. ರಾಮನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯ ಆಧುನೀಕರಣ ಸೇರಿದಂತೆ ವಾರಣಾಸಿ ಪ್ರದೇಶದಲ್ಲಿ ಕೈಗೊಂಡ ಆರೋಗ್ಯ ಮೂಲಸೌಕರ್ಯಗಳನ್ನು ಅವರು ಪಟ್ಟಿ ಮಾಡಿದರು.
ಇಂದು ವಾರಣಾಸಿಯಲ್ಲಿ ಸರ್ವಾಂಗೀಣ ಅಭಿವೃದ್ಧಿ ನಡೆಯುತ್ತಿದೆ ಮತ್ತು ಪೂರ್ವಾಂಚಲ ಸೇರಿದಂತೆ ಇಡೀ ಪೂರ್ವ ಭಾರತಕ್ಕೆ ಇದರಿಂದ ಪ್ರಯೋಜನವಾಗುತ್ತಿದೆ. ಈಗ ಪುರ್ವಾಂಚಲದ ಜನರು ಸಣ್ಣ ಪುಟ್ಟ ಅಗತ್ಯಗಳಿಗಾಗಿ ದೆಹಲಿ ಮತ್ತು ಮುಂಬೈಗೆ ಹೋಗಬೇಕಾಗಿಲ್ಲ ಎಂದು ಅವರು ಹೇಳಿದರು.
ವಾರಣಾಸಿ ಮತ್ತು ಪೂರ್ವಾಂಚಲದ ರೈತರಿಗಾಗಿ ಅಂತರರಾಷ್ಟ್ರೀಯ ಅಕ್ಕಿ ಸಂಸ್ಥೆ, ಹಾಲು ಸಂಸ್ಕರಣಾ ಘಟಕ, ಬೇಗ ಹಾಳಾಗುವ ಸರಕುಗಳ ಕೇಂದ್ರದ ನಿರ್ಮಾಣ ಮುಂತಾದ ಸಂಗ್ರಹಣೆಯಿಂದ ಸಾರಿಗೆಯವರೆಗೆ ಅನೇಕ ಸೌಲಭ್ಯಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಈ ಸೌಲಭ್ಯಗಳಿಂದ ರೈತರು ಬಹಳಷ್ಟುಪ್ರಯೋಜನ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಈ ವರ್ಷ ಮೊದಲ ಬಾರಿಗೆ ವಾರಣಾಸಿ ಪ್ರದೇಶದಿಂದ ಹಣ್ಣು, ತರಕಾರಿ ಮತ್ತು ಭತ್ತವನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಇಂದು ಪ್ರಾರಂಭಿಸಲಾದ 100 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯ ಹೊಂದಿರುವ ಗೋದಾಮು, ಕಾಶಿಯ ರೈತರಿಗೆ ಶೇಖರಣಾ ಸೌಲಭ್ಯಗಳನ್ನು ವಿಸ್ತರಿಸಲಿದೆ ಎಂದು ಅವರು ಹೇಳಿದರು. ಜನ್ಸಾದಲ್ಲಿ ಬಹುಪಯೋಗಿ ಬೀಜ ಗೋದಾಮು ಮತ್ತು ಪ್ರಸರಣ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದರು.
ಹಳ್ಳಿಗಳ ಬಡವರು ಮತ್ತು ರೈತರು ಆತ್ಮನಿರ್ಭರ ಭಾರತ ಅಭಿಯಾನದ ಬಹುದೊಡ್ಡ ಆಧಾರ ಸ್ತಂಭಗಳಾಗಿದ್ದು, ಅತಿದೊಡ್ಡ ಫಲಾನುಭವಿಗಳೂ ಆಗಿದ್ದಾರೆ ಎಂದು ಪ್ರಧಾನಿ ಹೇಳಿದರು. ಇತ್ತೀಚಿನ ಕೃಷಿ ಸುಧಾರಣೆಗಳು ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡಲಿವೆ ಎಂದರು. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳು ಸುಲಭವಾಗಿ ಸಾಲ ಪಡೆಯುತ್ತಿದ್ದಾರೆ, ಇದರಿಂದಾಗಿ ಅವರು ಸಾಂಕ್ರಾಮಿಕ ರೋಗದ ನಂತರ ತಮ್ಮ ವ್ಯಾಪಾರವನ್ನು ಪುನರಾರಂಭಿಸಬಹುದು ಎಂದು ಅವರು ಹೇಳಿದರು.
ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಜಮೀನು ಮತ್ತು ಮನೆಗಳ ಕಾನೂನುಬದ್ಧ ಹಕ್ಕುಗಳನ್ನು ಒದಗಿಸಲು ‘ಸ್ವಾಮಿತ್ವ ಯೋಜನೆ’ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಈ ಯೋಜನೆಯಡಿ ಆಸ್ತಿ ಕಾರ್ಡ್‌ಗಳನ್ನು ನೀಡಿದ ನಂತರ, ಹಳ್ಳಿಗಳಲ್ಲಿ ಆಸ್ತಿ ವಿವಾದಗಳು ಇರುವುದಿಲ್ಲ ಎಂದು ಅವರು ಹೇಳಿದರು. ಹಳ್ಳಿಯ ಮನೆ ಅಥವಾ ಜಮೀನಿನ ಮೇಲೆ ಬ್ಯಾಂಕಿನಿಂದ ಸಾಲ ಪಡೆಯುವುದು ಈಗ ಸುಲಭವಾಗುತ್ತದೆ ಎಂದು ಅವರು ಹೇಳಿದರು.
ದೀಪಾವಳಿ, ಗೋವರ್ಧನ ಪೂಜೆ ಮತ್ತು ಭಯ್ಯಾ ದೂಜ್ ಹಬ್ಬಗಳಿಗೆ ಪ್ರಧಾನಿಯವರು ಜನತೆಗೆ ಶುಭ ಕೋರಿದರು. ದೀಪಾವಳಿಯ ಸಂದರ್ಭದಲ್ಲಿ ಸ್ಥಳೀಯತೆಯನ್ನು ಪ್ರೋತ್ಸಾಹ ನೀಡುವಂತೆ ಮತ್ತು ಸ್ಥಳೀಯ ಸರಕುಗಳ ಬಗ್ಗೆ ಹೆಮ್ಮೆಯಿಂದ ಪ್ರಚಾರ ಮಾಡುವಂತೆ ಅವರು ಜನರಿಗೆ ಕರೆಕೊಟ್ಟರು. ಇದು ಸ್ಥಳೀಯ ಗುರುತನ್ನು ಬಲಪಡಿಸುತ್ತದೆ ಎಂದು ಪ್ರಧಾನಿಯವರು ಹೇಳಿದರು.
***
(Release ID: 1671457)
Visitor Counter : 249
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam