ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಹಜ್ 2021ರ ಆನ್ ಲೈನ್ ಅರ್ಜಿ ಪ್ರಕ್ರಿಯೆ ಇಂದಿನಿಂದ ಆರಂಭ


ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಹಜ್ 2021ಕ್ಕೆ ದೇಶದಲ್ಲಿ 10 ನಿರ್ಗಮನ ತಾಣ

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ – ಅಂತಾರಾಷ್ಟ್ರೀಯ ಶಿಷ್ಟಾಚಾರಗಳನ್ನು ಅನುಷ್ಠಾನ ಮಾಡಿ ಹಜ್ 2021ರ ಸಮಯದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುವುದು: ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ

ಹಜ್ 2021ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ 2020 ಡಿಸೆಂಬರ್ 10

ಹಜ್ 2020ಕ್ಕೆ “ಮೆಹರಮ್” (ಪುರುಷ ಸಹ ಯಾತ್ರಿ) ಇಲ್ಲದ ಪ್ರವರ್ಗದಲ್ಲಿ ಅರ್ಜಿ ಭರ್ತಿ ಮಾಡಿರುವ ಮಹಿಳೆಯರಿಗೆ 2021ರ ಸಾಲಿನ ಹಜ್ ಯಾತ್ರೆಗೂ ಸಿಂಧುವಾಗುತ್ತದೆ

Posted On: 07 NOV 2020 3:57PM by PIB Bengaluru

ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಹಜ್ 2021ರ ಆನ್ ಲೈನ್ ಅರ್ಜಿ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಜ್ 2021 ಪ್ರಕ್ರಿಯೆಗಳಲ್ಲಿ ಗಣನೀಯ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಮುಂಬೈ ಹಜ್ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಸಚಿವರು ತಿಳಿಸಿದರು.  ಹಜ್ 2021 ಮಾರ್ಗಸೂಚಿಗಳನ್ನು (ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ), ಹಜ್ ಗಾಗಿ ಆನ್ ಲೈನ್ ಅರ್ಜಿ ನಮೂನೆ 1442 (ಎಚ್) -2021 ಮತ್ತು ಇತ್ತೀಚಿನ ಹಜ್ ನಿಯತಕಾಲಿಕದ ಸಂಚಿಕೆಯನ್ನು ಸಚಿವರು ಬಿಡುಗಡೆ ಮಾಡಿದರು. 

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ – ಅಂತಾರಾಷ್ಟ್ರೀಯ ಶಿಷ್ಟಾಚಾರಗಳ ಮಾರ್ಗಸೂಚಿ ಜಾರಿಗೆ ತರಲಾಗುವುದು ಮತ್ತು ಹಜ್ 2021ರ ವೇಳೆ ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು. ಹಜ್ 2021ಕ್ಕೆ ಅರ್ಜಿ ಸಲ್ಲಿಸಲು 2020 ಡಿಸೆಂಬರ್ 10 ಕೊನೆಯ ದಿನವಾಗಿದೆ. ಜನರು ಆನ್ ಲೈನ್, ಆಫ್ ಲೈನ್ ಮತ್ತು ಹಜ್ ಮೊಬೈಲ್ ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.

ಹಜ್ 2021 ಯಾತ್ರೆಯು ಜೂನ್ –ಜುಲೈ 2021ಕ್ಕೆ ನಿಗದಿಯಾಗಿದ್ದು, ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ  ಭಾರತ ಮತ್ತು ಸೌದಿ ಅರೆಬಿಯಾದ ಜನರ ಆರೋಗ್ಯ ಮತ್ತು ಯೋಗ ಕ್ಷೇಮಕ್ಕಾಗಿ ಸೌದಿ ಅರೇಬಿಯಾ ಸರ್ಕಾರ ಮತ್ತು ಭಾರತ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇಡೀ ಹಜ್ ಪ್ರಕ್ರಿಯೆ ನಡೆಯಲಿದೆ ಎಂದು ಶ್ರೀ ನಖ್ವಿ ಹೇಳಿದರು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಆರೋಗ್ಯ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನಾಗರಿಗ ವಿಮಾನಯಾನ ಸಚಿವಾಲಯ, ಭಾರತೀಯ ಹಜ್ ಸಮಿತಿ, ಸೌದಿ ಅರೇಬಿಯಾದಲ್ಲಿನ ಭಾರತೀಯ ಧೂತಾವಾಸ ಮತ್ತು ಜಡ್ಡಾದಲ್ಲಿನ ಭಾರತೀಯ ಕೌನ್ಸಲ್ ಜನರಲ್ ಮತ್ತು ಇತರ ಸಂಸ್ಥೆಗಳು ಸಾಂಕ್ರಾಮಿಕದ ಸವಾಲುಗಳ ಎಲ್ಲ ಅಂಶಗಳ ಬಗ್ಗೆ ಗಮನ ಇಡಲಿದ್ದು ಇವುಗಳೊಂದಿಗೆ ಸಮಾಲೋಚಿಸಿದ ಬಳಿಕ ಹಜ್ 2021 ಪ್ರಕ್ರಿಯೆ ರೂಪಿಸಲಾಗುವುದು ಎಂದರು.

ಹಜ್ 2021ಕ್ಕೆ ಸಿದ್ಧತೆಗಳನ್ನು ವಿಶೇಷ ಸನ್ನಿವೇಶದ ವಿಶೇಷ ನಿಯಮ, ನಿಬಂಧನೆ, ನಿಯಂತ್ರಣ, ಅರ್ಹತಾ ಮಾನದಂಡ, ವಯೋಮಿತಿಯ ನಿರ್ಬಂಧ, ಆರೋಗ್ಯ ಮತ್ತು ಸದೃಢತೆ ಅವಶ್ಯಕತೆಗಳು ಮತ್ತು ಕೊರೊನಾ ಸಾಂಕ್ರಾಮಿಕದ  ನಡುವೆ ಸೌರಿ ಅರೇಬಿಯಾದ  ಇತರ ಸೂಕ್ತ ಷರತ್ತುಗಳಡಿ ಮಾಡಲಾಗುತ್ತದೆ.

ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಡೀ ಹಜ್ ಯಾತ್ರೆಯ ಪ್ರಕ್ರಿಯೆಯಲ್ಲಿ ಗಣನೀಯ ಬದಲಾವಣೆ ಮಾಡಲಾಗಿದೆ ಎಂದು ನಖ್ವಿ ತಿಳಿಸಿದರು. ಇದರಲ್ಲಿ ವಸತಿ, ಯಾತ್ರಿಕರು ಉಳಿಯುವ ಅವಧಿ, ಸಾರಿಗೆ, ಆರೋಗ್ಯ ಮತ್ತು ಭಾರತ ಮತ್ತು ಸೌದಿ ಅರೇಬಿಯಾದಲ್ಲಿ ಇತರ ಸೌಲಭ್ಯಗಳು ಸೇರಿವೆ.  ಸೌದಿ ಅರೇಬಿಯಾ ಸರ್ಕಾರದಿಂದ ಸಾಂಕ್ರಾಮಿಕದ ನಡುವೆ ಹಜ್ 2021ಕ್ಕೆ ಅಗತ್ಯವಿರುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಹಜ್ ನಿರ್ವಹಿಸಲು ವಯಸ್ಸಿನ ಮಾನದಂಡಗಳಲ್ಲಿ ಬದಲಾವಣೆಗಳಿರಬಹುದು. ಚಾಲ್ತಿಯಲ್ಲಿರುವ ಅಂತಾರಾಷ್ಟ್ರೀಯ ವಾಯುಯಾನ ಶಿಷ್ಟಾಚಾರದ ಪ್ರಕಾರ ಪ್ರತಿ ಯಾತ್ರಿಕರು ಹಜ್ ಪ್ರಯಾಣಕ್ಕೆ 72 ಗಂಟೆಗಳ ಮೊದಲು ಕರೋನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪ್ರತಿ ಯಾತ್ರಿಕರು ಸೌದಿ ಅರೇಬಿಯಾ ಪ್ರವಾಸಕ್ಕೆ ಮೊದಲು ಅನುಮೋದಿತ ಪ್ರಯೋಗಾಲಯದಿಂದ ಪಡೆದ ನೆಗೆಟೀವಿ ಫಲಿತಾಂಶವಿರುವ ಪಿಸಿಆರ್ ಪರೀಕ್ಷಾ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ತಿಳಿಸಿದರು. ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮತ್ತು ಏರ್ ಇಂಡಿಯಾ ಮತ್ತು ಇತರ ಸಂಸ್ಥೆಗಳಿಂದದ ಪಡೆದ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಹಜ್ 2021ಕ್ಕೆ ನಿರ್ಗಮನ ತಾಣಗಳ ಸಂಖ್ಯೆಯನ್ನು 10ಕ್ಕೆ ಇಳಿಸಲಾಗಿದೆ. ಈ ಮೊದಲು ದೇಶದಾದ್ಯಂತ 21 ಹಜ್ ನಿರ್ಗಮನ ತಾಣಗಳಿದ್ದವು.ಹಜ್ 2021ರ ನಿರ್ಗಮನ ತಾಣಗಳು – ಅಹಮದಾಬಾದ್, ಬೆಂಗಳೂರು, ಕೊಚ್ಚಿನ್, ದೆಹಲಿ, ಗುವಾಹತಿ, ಹೈದ್ರಾಬಾದ್, ಕೋಲ್ಕತ್ತಾ, ಲಖನೌ, ಮುಂಬೈ ಮತ್ತು ಶ್ರೀನಗರ.

ಅಹಮದಾಬಾದ್ ನಿರ್ಗಮನ ತಾಣ ಇಡೀ ಗುಜರಾತ್ ಅನ್ನು, ಬೆಂಗಳೂರು ಇಡೀ ಕರ್ನಾಟಕವನ್ನು;  ಕೊಚ್ಚಿನ್ (ಕೇರಳ, ಲಕ್ಷದ್ವೀಪ, ಪುದುಚೇರಿ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್) ;  ದೆಹಲಿ (ದೆಹಲಿ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಉತ್ತರಾಖಂಡ, ರಾಜಾಸ್ಥಾನ, ಉತ್ತರ ಪ್ರದೇಶದ ಉತ್ತರ ಜಿಲ್ಲೆಗಳು) ;  ಗುವಾಹತಿ (ಅಸ್ಸಾಂ, ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ, ನಾಗಾಲ್ಯಾಂಡ್) ;  ಕೋಲ್ಕತ್ತಾ (ಪಶ್ಚಿಮ ಬಂಗಾಳ, ಒಡಿಶಾ, ತ್ರಿಪುರಾ, ಜಾರ್ಖಂಡ್, ಬಿಹಾರ್) ;  ಲಖನೌ (ಪಶ್ಚಿಮ ಭಾಗ ಹೊರತು ಪಡಿಸಿ, ಉತ್ತರ ಪ್ರದೇಶದ ಉಳಿದ ಭಾಗಗಳು) ;  ಮುಂಬೈ (ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಛತ್ತೀಸಗಢ, ಡಮನ್ ಮತ್ತು ಡಿಯು, ದಾದ್ರಾ ಮತ್ತು ನಗರ್ ಹವೇಲಿ) ;  ಮತ್ತು ಶ್ರೀನಗರ್ ನಿರ್ಗಮ ತಾಣ ಇಡೀ ಜಮ್ಮು ಕಾಶ್ಮೀ ಮತ್ತು ಲೇಹ್ ಲಡಾಕ್ ಕಾರ್ಗಿಲ್ ವ್ಯಾಪ್ತಿ ಹೊಂದಿರುತ್ತದೆ.

2020ರ ಹಜ್ ಯಾತ್ರೆಗೆ ಮೆಹ್ರಮ್ (ಪುರುಷ ಸಹಯಾತ್ರಿ) ಇಲ್ಲದೆ ಹೋಗುವ ಪ್ರವರ್ಗದಲ್ಲಿ ಮಹಿಳೆಯರು ಸಲ್ಲಿಸಿದ್ದ ಅರ್ಜಿ 2021ರ ಹಜ್ ಯಾತ್ರೆಗೂ ಸಿಂಧುವಾಗಿರುತ್ತದೆ. ಮಹೆರಮ್ ಇಲ್ಲದ ಪ್ರವರ್ಗದ ಎಲ್ಲ ಮಹಿಳೆಯರಿಗೆ ಲಾಟರಿ ವ್ಯವಸ್ಥೆಯಿಂದ ವಿನಾಯಿತಿ ನೀಡಲಾಗಿದೆ. 

ಮುಂಬೈನಲ್ಲಿನ ಸೌದಿ ಅರೇಬಿಯಾದ ರಾಯಲ್ ವೈಸ್ ಕೌನ್ಸಲ್ ಜನರಲ್ ಮೊಹಮದ್ ಅಬ್ದುಲ್ಲಾ ಕರೀಮ್ ಅಲ್ ಎನಾಜಿ; ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಹಜ್), ಶ್ರೀ ನಿಗರ್ ಫಾತಿಮಾ ಹುಸೇನ್; ಭಾರತೀಯ ಹಜ್ ಸಮಿತಿಯ ಸಿಇಓ ಶ್ರೀ ಎಂ.ಎ. ಖಾನ್ ಮತ್ತು ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಹಜ್ ಭವನದ ನಾಗರಿಕ ಸೇವೆಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಮತ್ತು ಕೇಂದ್ರ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ 30 ಅಭ್ಯರ್ಥಿಗಳನ್ನು ಸಚಿವರು ಸನ್ಮಾನಿಸಿದರು.

*******



(Release ID: 1671040) Visitor Counter : 257