ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಜಾಗತಿಕ ಹೂಡಿಕೆದಾರರ ದುಂಡು ಮೇಜಿನ ಸಭೆ


ಭಾರತವು ಹೂಡಿಕೆದಾರರಿಗೆ ಪ್ರಜಾಪ್ರಭುತ್ವ, ಜನಸಂಖ್ಯೆ, ಬೇಡಿಕೆ ಮತ್ತು ವೈವಿಧ್ಯತೆಯನ್ನು ನೀಡುತ್ತದೆ: ಪ್ರಧಾನಿ

ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ನಗರ ಮತ್ತು ಪಟ್ಟಣಗಳಲ್ಲಿಯೂ ಹೂಡಿಕೆಗೆ ಪ್ರಧಾನಿ ಕರೆ

ಭಾರತವು ನಂಬಿಕೆಯೊಂದಿಗೆ ಆದಾಯ, ಪ್ರಜಾಪ್ರಭುತ್ವದೊಂದಿಗೆ ಬೇಡಿಕೆ, ಸುಸ್ಥಿರತೆಯೊಂದಿಗೆ ಸ್ಥಿರತೆ ಮತ್ತು ಪರಿಸರ ಸ್ನೇಹಿ ವಿಧಾನದೊಂದಿಗೆ ಬೆಳವಣಿಗೆಯನ್ನು ಖಚಿತಪಡಿಸುತ್ತದೆ: ಪ್ರಧಾನಿ

ಭಾರತವನ್ನು ಜಾಗತಿಕ ಬೆಳವಣಿಗೆಯ ಪುನರುಜ್ಜೀವನದ ಎಂಜಿನ್ ಆಗಿ ಮಾಡಲು ಸರ್ಕಾರ ಎಲ್ಲವನ್ನೂ ಮಾಡುತ್ತದೆ: ಪ್ರಧಾನಿ

ಕಳೆದ ವರ್ಷಕ್ಕೆ ಹೋಲಿಸಿದರೆ ಕಳೆದ 5 ತಿಂಗಳಲ್ಲಿ ಎಫ್ಡಿಐ ಒಳಹರಿವು ಶೇ.13ರಷ್ಟು ಹೆಚ್ಚಾಗಿದೆ: ಪ್ರಧಾನಿ

ಆತ್ಮನಿರ್ಭರ ಭಾರತ ಕೇವಲ ದೂರದೃಷ್ಟಿ ಮಾತ್ರವಲ್ಲದೆ, ಯೋಜಿತ ಆರ್ಥಿಕ ಕಾರ್ಯತಂತ್ರವಾಗಿದೆ: ಪ್ರಧಾನಿ

Posted On: 05 NOV 2020 8:50PM by PIB Bengaluru

ವರ್ಚುವಲ್ ಜಾಗತಿಕ ಹೂಡಿಕೆದಾರರ ದುಂಡುಮೇಜಿನ ಸಭೆಯು ಪ್ರಧಾನಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.

ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ, ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ  ಭಾರತವು ದಿಟ್ಟತನದಿಂದ ಹೋರಾಡುತ್ತಿರುವುದರಿಂದ, ಜಗತ್ತು ಭಾರತದ ರಾಷ್ಟ್ರೀಯ ಸ್ವರೂಪ ಮತ್ತು ನಿಜವಾದ ಸಾಮರ್ಥ್ಯಗಳನ್ನು ನೋಡಿದೆ. ಸಾಂಕ್ರಾಮಿಕ ರೋಗವು ಭಾರತೀಯರು ಹೆಸರುವಾಸಿಯಾಗಿರುವ ಜವಾಬ್ದಾರಿಯುತ ಪ್ರಜ್ಞೆ, ಸಹಾನುಭೂತಿ, ರಾಷ್ಟ್ರೀಯ ಏಕತೆ ಮತ್ತು ನಾವೀನ್ಯತೆಯಂತಹ ಗುಣಲಕ್ಷಣಗಳನ್ನು ಯಶಸ್ವಿಯಾಗಿ ಹೊರತಂದಿದೆ ಎಂದರು.

ವೈರಸ್ ವಿರುದ್ಧ ಹೋರಾಡುವುದರ ಜೊತೆಗೆ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವ ಮೂಲಕ ಭಾರತವು ಈ ಸಾಂಕ್ರಾಮಿಕ ರೋಗದಲ್ಲಿ ಗಮನಾರ್ಹ ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ ಎಂದು ಪ್ರಧಾನಿ ತಿಳಿಸಿದರು. ಈ ಸ್ಥಿತಿಸ್ಥಾಪಕತ್ವಕ್ಕೆ ಭಾರತದಲ್ಲಿನ ವ್ಯವಸ್ಥೆಯ ಬಲ, ಜನರ ಬೆಂಬಲ ಮತ್ತು ಸರ್ಕಾರದ ನೀತಿಗಳ ಸ್ಥಿರತೆ ಕಾರಣ ಎಂದು ಅವರು ಹೇಳಿದರು.

ಹಳೆಯ ಅಭ್ಯಾಸಗಳಿಂದ ಮುಕ್ತವಾಗಿರುವ ನವ ಭಾರತವನ್ನು ನಿರ್ಮಿಸಲಾಗುತ್ತಿದೆ. ಇಂದು ಭಾರತವು ಉತ್ತಮವಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಆತ್ಮನಿರ್ಭರ ಆಗಬೇಕೆಂಬ ಭಾರತದ ಆಶಯವು ಕೇವಲ ದೃಷ್ಟಿಕೋನವಲ್ಲ, ಅದೊಂದು ಯೋಜಿತ ಆರ್ಥಿಕ ಕಾರ್ಯತಂತ್ರವಾಗಿದೆ ಎಂದು ಅವರು ಹೇಳಿದರು. ಭಾರತವನ್ನು ಜಾಗತಿಕ ಉತ್ಪಾದಕತೆಯ ಶಕ್ತಿ ಕೇಂದ್ರವನ್ನಾಗಿ ಮಾಡಲು ದೇಶದ ವ್ಯವಹಾರ ಸಾಮರ್ಥ್ಯ ಮತ್ತು ಕಾರ್ಮಿಕರ ಕೌಶಲ್ಯಗಳನ್ನು ಬಳಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. ಭಾರತವು ನಾವೀನ್ಯತೆಗಳ ಜಾಗತಿಕ ಕೇಂದ್ರವಾಗಲು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವ ಗುರಿ ಹೊಂದಿದೆ ಮತ್ತು ಅಪಾರ ಮಾನವ ಸಂಪನ್ಮೂಲ ಮತ್ತು ಅವರ ಪ್ರತಿಭೆಯನ್ನು ಬಳಸಿಕೊಂಡು ಜಾಗತಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಗುರಿ ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು.

ಇಂದು ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್‌ಜಿ) ಸ್ಕೋರ್ ಹೆಚ್ಚು ಹೊಂದಿರುವ ಕಂಪನಿಗಳತ್ತ ಹೂಡಿಕೆದಾರರು ಹೋಗುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಅಂತಹ ವ್ಯವಸ್ಥೆಗಳನ್ನು ಹೊಂದಿರುವ ಮತ್ತು ಇಎಸ್‌ಜಿ ಸ್ಕೋರ್‌ನಲ್ಲಿ ಕಂಪನಿಗಳು ಉನ್ನತ ಸ್ಥಾನದಲ್ಲಿರುವ ರಾಷ್ಟ್ರವಾಗಿ ಭಾರತ ಇದೆ. ಇಎಸ್‌ಜಿ ಯ ಮೇಲೆ ಸಮಾನ ಗಮನಹರಿಸುವ ಬೆಳವಣಿಗೆಯ ಹಾದಿಯಲ್ಲಿ ಭಾರತ ನಂಬಿಕೆ ಇಟ್ಟಿದೆ ಎಂದು ಅವರು ಹೇಳಿದರು.

ಭಾರತವು ಹೂಡಿಕೆದಾರರಿಗೆ ಪ್ರಜಾಪ್ರಭುತ್ವ, ಜನಸಂಖ್ಯೆ, ಬೇಡಿಕೆ ಮತ್ತು ವೈವಿಧ್ಯತೆಯನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು. “ನಮ್ಮ ವೈವಿಧ್ಯತೆಯಿಂದಾಗಿ ಒಂದು ಮಾರುಕಟ್ಟೆಯೊಳಗೆ ನೀವು ಅನೇಕ ಮಾರುಕಟ್ಟೆಗಳನ್ನು ಪಡೆಯುತ್ತೀರಿ. ಇವು ವೆಚ್ಚದ ಅನೇಕ ಗಾತ್ರಗಳು ಮತ್ತು ಬಹು ಆದ್ಯತೆಗಳಾಗಿವೆ. ಇವು ಅನೇಕ ಹವಾಮಾನ ಮತ್ತು ಅನೇಕ ಹಂತದ ಅಭಿವೃದ್ಧಿಯೊಂದಿಗೆ ಬರುತ್ತವೆ. ” ಎಂದು ಅವರು ಹೇಳಿದರು.

ಸಮಸ್ಯೆಗಳಿಗೆ ದೀರ್ಘಕಾಲೀನ ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯುವ ಸರ್ಕಾರದ ವಿಧಾನವು ಹೂಡಿಕೆದಾರರಿಗೆ ಉತ್ತಮ ಮತ್ತು ಸುರಕ್ಷಿತ ದೀರ್ಘಕಾಲೀನ ಆದಾಯವನ್ನು ಹೇಗೆ ನೀಡುತ್ತದೆ ಎಂದು ಪ್ರಧಾನಿ ವಿವರಿಸಿದರು. ಉತ್ಪಾದನಾ ಸಾಮರ್ಥ್ಯವನ್ನು ಸುಧಾರಿಸುವ ಮತ್ತು ಸುಲಭ ವ್ಯಾಪಾರವನ್ನು ಸುಧಾರಿಸುವ ಸರ್ಕಾರದ ವಿವಿಧ ಉಪಕ್ರಮಗಳನ್ನು ಅವರು ಪಟ್ಟಿ ಮಾಡಿದರು.

 “ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಸುಧಾರಿಸಲು ನಾವು ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದ್ದೇವೆ, ನಾವು ಜಿ ಎಸ್ ಟಿ ರೂಪದಲ್ಲಿ ಒಂದು ದೇಶ, ಒಂದು ತೆರಿಗೆ  ವ್ಯವಸ್ಥೆಯನ್ನು ಪ್ರಾರಂಭಿಸಿದ್ದೇವೆ, ಕಡಿಮೆ ಕಾರ್ಪೊರೇಟ್ ತೆರಿಗೆ ದರಗಳು ಮತ್ತು ಹೊಸ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ, ಆದಾಯ ತೆರಿಗೆ ಮೌಲ್ಯಮಾಪನ ಮತ್ತು ಮೇಲ್ಮನವಿಗೆ ಮುಖಾಮುಖಿರಹಿತ ವ್ಯವಸ್ಥೆ ಮಾಡಲಾಗಿದೆ, ಹೊಸ ಕಾರ್ಮಿಕ ಕಾನೂನುಗಳು ಕಾರ್ಮಿಕರ ಕಲ್ಯಾಣವನ್ನು ಸಮತೋಲನಗೊಳಿಸುತ್ತವೆ ಮತ್ತು ಉದ್ಯೋಗದಾತರಿಗೆ ವ್ಯವಹಾರವನ್ನು ಸುಲಭಗೊಳಿಸುತ್ತವೆ. ನಿರ್ದಿಷ್ಟ ವಲಯಗಳಲ್ಲಿ ಉತ್ಪಾದನೆ ಆದಾರಿತ ಪ್ರೋತ್ಸಾಹಕ ಯೋಜನೆಗಳು ಮತ್ತು ಹೂಡಿಕೆದಾರರಿಗೆ ನೆರವಾಗಲು ಸಾಂಸ್ಥಿಕ ವ್ಯವಸ್ಥೆಯನ್ನು ಸಶಕ್ತಗೊಳಿಸಲಾಗಿದೆ ” ಎಂದು ಪ್ರಧಾನಿ ತಿಳಿಸಿದರು.

ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ ಅಡಿಯಲ್ಲಿ 1.5 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ತಿಳಿಸಿದರು. ವೇಗವಾದ ಆರ್ಥಿಕ ಬೆಳವಣಿಗೆಗೆ ಮತ್ತು ದೇಶದಲ್ಲಿನ ಬಡತನವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಭಾರತದಲ್ಲಿ ಯೋಜಿಸಲಾಗಿರುವ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯ ಯೋಜನೆಗಳನ್ನು ಅವರು ಪಟ್ಟಿ ಮಾಡಿದರು. ಭಾರತವು ಹೆದ್ದಾರಿಗಳು, ರೈಲ್ವೆಗಳು, ಮಹಾನಗರಗಳು, ಜಲಮಾರ್ಗಗಳು, ವಿಮಾನ ನಿಲ್ದಾಣಗಳ ಬೃಹತ್ ಮೂಲಸೌಕರ್ಯ ನಿರ್ಮಾಣವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ನವ-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಲಕ್ಷಾಂತರ ಮನೆಗಳನ್ನು ನೀಡಲು ಸಹ ಯೋಜಿಸಲಾಗಿದೆ ಎಂದು ಅವರು ಹೇಳಿದರು. ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ನಗರ ಮತ್ತು ಪಟ್ಟಣಗಳಲ್ಲಿಯೂ ಹೂಡಿಕೆ ಮಾಡುವಂತೆ ಅವರು ಕರೆ ನೀಡಿದರು ಮತ್ತು ಅಂತಹ ನಗರಗಳ ಅಭಿವೃದ್ಧಿಗೆ ಅಭಿಯಾನ ಮಾದರಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

ಹಣಕಾಸು ಕ್ಷೇತ್ರದ ಅಭಿವೃದ್ಧಿಗೆ ಸಮಗ್ರ ಕಾರ್ಯತಂತ್ರವನ್ನು ಪ್ರಧಾನಿ ವಿವರಿಸಿದರು. ಬ್ಯಾಂಕಿಂಗ್ ಕ್ಷೇತ್ರದ ಸಮಗ್ರ ಸುಧಾರಣೆಗಳು, ಹಣಕಾಸು ಮಾರುಕಟ್ಟೆಗಳ ಬಲವರ್ಧನೆ, ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಕ್ಕೆ ಏಕೀಕೃತ ವ್ಯವಸ್ಥೆ, ಅತ್ಯಂತ ಉದಾರವಾದ ಎಫ್‌ಡಿಐ ವ್ಯವಸ್ಥೆ, ವಿದೇಶಿ ಬಂಡವಾಳಕ್ಕೆ ಉದಾರ ತೆರಿಗೆ ಆಡಳಿತ, ಮುಂತಾದ ಹಣಕಾಸು ಕ್ಷೇತ್ರದ ಅಭಿವೃದ್ಧಿಗೆ ಪ್ರಮುಖ ಉಪಕ್ರಮಗಳನ್ನು ಅವರು ಪಟ್ಟಿ ಮಾಡಿದರು. ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಮತ್ತು ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್, ದಿವಾಳಿ ಮತ್ತು ದಿವಾಳಿತನ ಸಂಹಿತೆಯ ಅನುಷ್ಠಾನ, ನೇರ ಲಾಭ ವರ್ಗಾವಣೆಯ ಮೂಲಕ ಹಣಕಾಸು ಸಬಲೀಕರಣ ಮತ್ತು ರು-ಪೇ ಕಾರ್ಡ್‌ಗಳು ಮತ್ತು ಭೀಮ್-ಯುಪಿಐನಂತಹ ಹಣಕಾಸು ತಂತ್ರಜ್ಞಾನ ಆಧಾರಿತ ಪಾವತಿ ವ್ಯವಸ್ಥೆಗಳಿಗೆ ಸೂಕ್ತವಾದ ನೀತಿ ನಿಯಮಗಳ ಬಗ್ಗೆ ಪ್ರಧಾನಿ ವಿವರಿಸಿದರು.

ನಾವೀನ್ಯತೆ ಮತ್ತು ಡಿಜಿಟಲ್ ಉಪಕ್ರಮಗಳು ಯಾವಾಗಲೂ ಸರ್ಕಾರದ ನೀತಿ ಮತ್ತು ಸುಧಾರಣೆಯ ಕೇಂದ್ರಬಿಂದುವಾಗಿವೆ ಎಂದು ಪ್ರಧಾನಿ ತಿಳಿಸಿದರು. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಸ್ಟಾರ್ಟ್ ಅಪ್ ಮತ್ತು ಯುನಿಕಾರ್ನ್ ಗಳನ್ನು ಹೊಂದಿದೆ ಮತ್ತು ಇನ್ನೂ ವೇಗವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು. ಖಾಸಗಿ ಉದ್ಯಮದ ಅಭಿವೃದ್ಧಿಗಾಗಿ ಸರ್ಕಾರದ ಉಪಕ್ರಮಗಳನ್ನು ಅವರು ಪಟ್ಟಿ ಮಾಡಿದರು. ಇಂದು ಉತ್ಪಾದನೆ, ಮೂಲಸೌಕರ್ಯ, ತಂತ್ರಜ್ಞಾನ, ಕೃಷಿ, ಹಣಕಾಸು ಮತ್ತು ಆರೋಗ್ಯ ಮತ್ತು ಶಿಕ್ಷಣದಂತಹ ಸಾಮಾಜಿಕ ಕ್ಷೇತ್ರಗಳೂ ಸೇರಿದಂತೆ ಭಾರತದ ಪ್ರತಿಯೊಂದು ವಲಯವೂ ಏರುಗತಿಯಲ್ಲಿದೆ ಎಂದು ಅವರು ಹೇಳಿದರು.

ಕೃಷಿ ಕ್ಷೇತ್ರದಲ್ಲಿನ ಇತ್ತೀಚಿನ ಸುಧಾರಣೆಗಳು ಭಾರತದ ರೈತರೊಂದಿಗೆ ಪಾಲುದಾರರಾಗಲು ಹೊಸ ಸಾಧ್ಯತೆಗಳನ್ನು ತೆರೆದಿವೆ ಎಂದು ಪ್ರಧಾನಿ ಹೇಳಿದರು. ತಂತ್ರಜ್ಞಾನ ಮತ್ತು ಆಧುನಿಕ ಸಂಸ್ಕರಣಾ ಪರಿಹಾರಗಳ ನೆರವಿನಿಂದ ಭಾರತವು ಶೀಘ್ರದಲ್ಲೇ ಕೃಷಿ ರಫ್ತು ಕೇಂದ್ರವಾಗಿ ಹೊರಹೊಮ್ಮುತ್ತದೆ ಎಂದರು. ವಿದೇಶಿ ವಿಶ್ವವಿದ್ಯಾಲಯಗಳು ಬಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಅವಕಾಶವನ್ನು ನೀಡಿದೆ ಎಂದು ಅವರು ಗಮನಸೆಳೆದರು. ಜಾಗತಿಕ ಹೂಡಿಕೆದಾರರ ಸಮುದಾಯವು ಭಾರತದ ಭವಿಷ್ಯದ ಬಗ್ಗೆ ವಿಶ್ವಾಸ ತೋರಿಸಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಕಳೆದ 5 ತಿಂಗಳುಗಳಲ್ಲಿ ಎಫ್‌ಡಿಐ ಒಳಹರಿವು ಶೇ.13ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದರು.

ವಿಶ್ವಾಸಾರ್ಹತೆಯೊಂದಿಗೆ ಆದಾಯ, ಪ್ರಜಾಪ್ರಭುತ್ವದೊಂದಿಗೆ ಬೇಡಿಕೆ, ಸುಸ್ಥಿರತೆಯೊಂದಿಗೆ ಸ್ಥಿರತೆ ಮತ್ತು ಹಸಿರು ವಿಧಾನದೊಂದಿಗೆ ಬೆಳವಣಿಗೆಯನ್ನು ಬಯಸುವವರಿಗೆ ಭಾರತವು ಸೂಕ್ತ ಸ್ಥಳವಾಗಿದೆ ಪ್ರಧಾನ ಮಂತ್ರಿ ಹೇಳಿದರು. ಭಾರತದ ಬೆಳವಣಿಗೆಯು ಜಾಗತಿಕ ಆರ್ಥಿಕ ಪುನರುತ್ಥಾನಕ್ಕೆ ವೇಗತುಂಬುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಭಾರತದ ಯಾವುದೇ ಸಾಧನೆಯು ವಿಶ್ವದ ಅಭಿವೃದ್ಧಿ ಮತ್ತು ಕಲ್ಯಾಣದ ಮೇಲೆ ಬಹುಆಯಾಮದ ಪರಿಣಾಮವನ್ನು ಬೀರುತ್ತದೆ ಎಂದು ಅವರು ಹೇಳಿದರು. ವಿಶ್ವದ ಆರ್ಥಿಕ ವ್ಯವಸ್ಥೆಯನ್ನು ಸ್ಥಿರಗೊಳಿಸಲು ಭಾರತವು ಬಲವಾದ ಮತ್ತು ರೋಮಾಂಚಕವಾದ ಕೊಡುಗೆಯನ್ನು ನೀಡಬಹುದು ಎಂದು ಅವರು ಹೇಳಿದರು. ಭಾರತವನ್ನು ಜಾಗತಿಕ ಬೆಳವಣಿಗೆಯ ಪುನರುತ್ಥಾನದ ಎಂಜಿನ್ ಮಾಡಲು ಸರ್ಕಾರ ಏನು ಬೇಕಾದರೂ ಮಾಡುತ್ತದೆ ಎಂದು ಅವರು ಹೂಡಿಕೆದಾರರಿಗೆ ಭರವಸೆ ನೀಡಿದರು.

ಕಾರ್ಯಕ್ರಮದ ನಂತರ ಸಿಪಿಪಿ ಇನ್ವೆಸ್ಟ್‌ಮೆಂಟ್ಸ್‌ನ ಅಧ್ಯಕ್ಷ ಮತ್ತು ಸಿಇಒ ಶ್ರೀ ಮಾರ್ಕ್ ಮ್ಯಾಚಿನ್ ಮಾತನಾಡಿ, ವಿಜಿಐಆರ್ 2020 ರೌಂಡ್‌ಟೇಬಲ್ ಬಹಳ ಉತ್ಪಾದಕ ಮತ್ತು ಉಪಯುಕ್ತವಾದ ವೇದಿಕೆಯಾಗಿದ್ದು, ಇದು ಭಾರತದ ಆರ್ಥಿಕತೆಯನ್ನು ನಿರ್ಮಿಸುವ ಮತ್ತು ಅಂತರರಾಷ್ಟ್ರೀಯ ಸಾಂಸ್ಥಿಕ ಹೂಡಿಕೆಯ ಬೆಳವಣಿಗೆಯನ್ನು ವೇಗಗೊಳಿಸುವ ಸರ್ಕಾರದ ಒಳನೋಟವನ್ನು ನಮಗೆ ಒದಗಿಸಿದೆ ಎಂದರು. ಬೆಳವಣಿಗೆಯ ಮಾರುಕಟ್ಟೆಗಳ ಮೇಲೆ ಕೇಂದ್ರೀಕರಿಸಿದ ನಮ್ಮ ದೀರ್ಘಕಾಲೀನ ಹೂಡಿಕೆ ಕಾರ್ಯತಂತ್ರಕ್ಕೆ ಭಾರತ ಪ್ರಮುಖವಾಗಿದೆ ಮತ್ತು ಮೂಲಸೌಕರ್ಯ, ಕೈಗಾರಿಕೆ ಮತ್ತು ಗ್ರಾಹಕ ಕ್ಷೇತ್ರಗಳಲ್ಲಿ ನಮ್ಮ ಅಸ್ತಿತ್ವದಲ್ಲಿರುವ ಹೂಡಿಕೆಗಳನ್ನು ನಿರ್ಮಿಸಲು ನಮಗೆ ತೀವ್ರವಾದ ಬಯಕೆ ಇದೆ  ಎಂದು ಅವರು ತಿಳಿಸಿದರು.

ಕೈಸ್ಸೆ ಡೆ ಡೆಪಟ್ ಮತ್ತು ಪ್ಲೇಸ್‌ಮೆಂಟ್ ಡು ಕ್ವಿಬೆಕ್ (ಸಿಡಿಪಿಕ್ಯೂ) ನ ಅಧ್ಯಕ್ಷ ಮತ್ತು ಸಿಇಒ ಶ್ರೀ ಚಾರ್ಲ್ಸ್ ಎಮಂಡ್ ಭಾರತದ ಬಗ್ಗೆ ಮಾತನಾಡಿ, “ಭಾರತವು ಸಿಡಿಪಿಕ್ಯೂಗೆ ಒಂದು ಪ್ರಮುಖ ಮಾರುಕಟ್ಟೆಯಾಗಿದೆ. ನಾವು ನವೀಕರಿಸಬಹುದಾದ, ಲಾಜಿಸ್ಟಿಕ್ಸ್, ಹಣಕಾಸು ಸೇವೆಗಳು ಮತ್ತು ತಂತ್ರಜ್ಞಾನ ಶಕ್ತವಾದ ಸೇವೆಗಳ ಕ್ಷೇತ್ರಗಳಲ್ಲಿ ಹಲವಾರು ಶತಕೋಟಿ ಹೂಡಿಕೆ ಮಾಡಿದ್ದೇವೆ. ಮುಂಬರುವ ವರ್ಷಗಳಲ್ಲಿ ನಮ್ಮ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದ್ದೇವೆ. ಜಾಗತಿಕ ಹೂಡಿಕೆದಾರರು ಮತ್ತು ವ್ಯವಹಾರ ಮುಖಂಡರು ಭಾರತಕ್ಕೆ ಬಲವಾದ ಆರ್ಥಿಕತೆಯನ್ನು ಬೆಂಬಲಿಸುವ ಅವಕಾಶಗಳ ಬಗ್ಗೆ ಚರ್ಚಿಸಲು ಈ ರೌಂಡ್‌ಟೇಬಲ್ ಅನ್ನು ಆಯೋಜಿಸಲು ಮುಂದಾದ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ ” ಎಂದರು.

ಅಮೆರಿಕದ ಟೆಕ್ಸಾಸ್‌ನ ಶಿಕ್ಷಕರ ನಿವೃತ್ತಿ ವ್ಯವಸ್ಥೆಯ ಮುಖ್ಯ ಹೂಡಿಕೆ ಅಧಿಕಾರಿ ಶ್ರೀ ಜೇಸ್ ಆಬಿ ಅವರು ಭಾರತದ ಬಗ್ಗೆ ಮತ್ತು ರೌಂಡ್‌ಟೇಬಲ್‌ನಲ್ಲಿ ಭಾಗವಹಿಸಿದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು, “2020 ವರ್ಚುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್‌ನಲ್ಲಿ ಭಾಗವಹಿಸಲು ನನಗೆ ಸಂತೋಷವಾಗಿದೆ. ಪಿಂಚಣಿ ನಿಧಿ ಹೂಡಿಕೆದಾರರು ತಮ್ಮ ಪೋರ್ಟ್ಫೋಲಿಯೊಗಳ ಹೆಚ್ಚಿನ ಭಾಗವನ್ನು ಬೆಳೆಯುತ್ತಿರುವ ಆರ್ಥಿಕತೆ ಮತ್ತು ಮಾರುಕಟ್ಟೆಗಳಿಂದ ಲಾಭ ಪಡೆಯುವ ನಿರೀಕ್ಷೆಯ ಸ್ವತ್ತುಗಳಲ್ಲಿ ಹೂಡುತ್ತಾರೆ. ಭಾರತ ಕೈಗೊಂಡ ರಚನಾತ್ಮಕ ಸುಧಾರಣೆಗಳು ಭವಿಷ್ಯದಲ್ಲಿ ಅಂತಹ ಹೆಚ್ಚಿನ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಒದಗಿಸುವ ಸಾಧ್ಯತೆಯಿದೆ ” ಎಂದು ಹೇಳಿದರು.

*****



(Release ID: 1670478) Visitor Counter : 264