ಪರಿಸರ ಮತ್ತು ಅರಣ್ಯ ಸಚಿವಾಲಯ

ಹವಾಮಾನ ಬದಲಾವಣೆ ಕುರಿತ ಖಾಸಗಿ ವಲಯದ ಘೋಷಣೆ ಒಂದು ಐತಿಹಾಸಿಕ ಹೆಜ್ಜೆ: ಕೇಂದ್ರ ಪರಿಸರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್


ಹವಾಮಾನ ಬದಲಾವಣೆ ಕುರಿತಾದ ಇಂಡಿಯಾ ಸಿಇಒ ಫೋರಂ ಸರ್ಕಾರ ಮತ್ತು ಖಾಸಗಿ ವಲಯದ ನಡುವೆ ದೀರ್ಘಕಾಲದ ಮತ್ತು ಸುಸ್ಥಿರ ಸಹಭಾಗಿತ್ವವನ್ನು ರೂಪಿಸುತ್ತದೆ

Posted On: 05 NOV 2020 4:22PM by PIB Bengaluru

ಪ್ಯಾರಿಸ್ ಒಪ್ಪಂದದಲ್ಲಿನ ತನ್ನ ಬದ್ಧತೆಗಳನ್ನು ಈಡೇರಿಸುವತ್ತ ಭಾರತ ಸಾಗುತ್ತಿದೆ ಮತ್ತು ದೇಶವು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳ (ಎನ್‌ಡಿಸಿ) ಕುರಿತು ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡುವಲ್ಲಿ, ಸರ್ಕಾರದ ಮಟ್ಟದಲ್ಲಿ ಮಾತ್ರವಲ್ಲದೆ ಖಾಸಗಿ ಮಟ್ಟದಲ್ಲಿಯೂ ಸಹ ನಮ್ಮ ಬದ್ಧತೆ ಮತ್ತು ಸಂಕಲ್ಪವನ್ನು ತೋರಿಸುವ ಕೆಲವೇ ಕೆಲವು ದೇಶಗಳಲ್ಲಿ ಭಾರತ ಒಂದಾಗಿದೆ. ಭಾರತವು 2 ಡಿಗ್ರಿ ಅನುಸರಣೆ  ಮತ್ತು ಅನೇಕ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಶ್ರೀ ಜಾವಡೇಕರ್ ತಿಳಿಸಿದ್ದಾರೆ.

 


24 ಪ್ರಮುಖ ಕೈಗಾರಿಕಾ ನಾಯಕರು ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸಹಿ ಮಾಡಿದ ಹವಾಮಾನ ಬದಲಾವಣೆಯ ಘೋಷಣೆಯನ್ನು ಹವಾಮಾನ ಬದಲಾವಣೆ ಕುರಿತ ವರ್ಚುವಲ್ ಇಂಡಿಯಾ ಸಿಇಒ ವೇದಿಕೆಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಶ್ರೀ ಜಾವಡೇಕರ್, ಖಾಸಗಿ ವಲಯದ ಕಂಪೆನಿಗಳು ಸ್ವಯಂಪ್ರೇರಣೆಯಿಂದ ಈ ಘೋಷಣೆಗೆ ಮುಂದಾಗಿದ್ದು ಒಂದು  ಐತಿಹಾಸಿಕ ಹೆಜ್ಜೆಯಾಗಿದೆ ಎಂದರು.

“ಜಗತ್ತು ಅನೇಕ ವಿಷಯಗಳ ಬಗ್ಗೆ ಹೇಳುತ್ತದೆ ಮತ್ತು ಬೋಧನೆ ಮಾಡುತ್ತದೆ. ಆದರೆ ಅವುಗಳನ್ನು ಆಚರಣೆಗೆ ತರುವುದು ಹೆಚ್ಚು ಕಷ್ಟದ ವಿಷಯ. ಆದರೆ ಇಂಗಾಲದ ತಟಸ್ಥತೆಯ ಯೋಜನೆಗಳನ್ನು ಅನುಸರಿಸುವ ಮತ್ತು ಘೋಷಿಸುವ ಭಾರತ ಮತ್ತು ಅದರ ಕಾರ್ಪೋರೇಟ್ ಜಗತ್ತಿನ ಈ ಉಪಕ್ರಮವನ್ನು ಇಂದು ವಿಶ್ವಸಂಸ್ಥೆಯ ಪರಿಸರ ವ್ಯವಸ್ಥೆ ಮತ್ತು ಯುಎನ್‌ಎಫ್‌ಸಿಸಿ ಗಮನಿಸುತ್ತದೆ ಎಂದು ನಾನು ಭಾವಿಸುತ್ತೇನೆ. ” ಎಂದು ಶ್ರೀ ಜಾವಡೇಕರ್ ಹೇಳಿದರು.

ಇಂಗಾಲದ ಕಡಿತದ ಬಗ್ಗೆ  ತಾವು ಕೈಗೊಳ್ಳುತ್ತಿರುವ ಕ್ರಮಗಳು ಮತ್ತು ಉಪಕ್ರಮಗಳ ಬಗ್ಗೆ  ಸರ್ಕಾರಕ್ಕೆ ವರದಿ ಮಾಡುವಂತೆ ಹಾಗೂ ಸೂಕ್ತ ಕ್ರಮಕ್ಕಾಗಿ ಮಾಲಿನ್ಯ ಚಟುವಟಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವಂತೆ ಸಚಿವರು ಕಾರ್ಪೊರೇಟ್ ಜಗತ್ತಿಗೆ ಸೂಚಿಸಿದರು. "ಮುಂದುವರಿದ ಆರ್ಥಿಕತೆಗಳಿಂದ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಕೇಳಲು ನಾವು ಒಂದಾಗಿರಬೇಕು. ಇದರಿಂದ ಭಾರತವು ಸಹ ಅವರೊಂದಿಗೆ ನಡೆಯಬಹುದು ಮತ್ತು ಮುಂದೆ ಸಾಗಬಹುದು" ಎಂದು ಪರಿಸರ ಸಚಿವರು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಟಾಟಾ, ರಿಲಯನ್ಸ್, ಅದಾನಿ ಗ್ರೂಪ್, ಮಹೀಂದ್ರಾ, ಸನ್ ಫಾರ್ಮಾ, ಡಾ. ರೆಡ್ಡಿ ಮುಂತಾದ ಪ್ರಮುಖ ಕೈಗಾರಿಕೆಗಳ ಸಿಇಒ ಮತ್ತು ಮುಖ್ಯಸ್ಥರು ತಾವು ಕೈಗೊಂಡ ವಿವಿಧ ಸ್ವಚ್ಛ ಪ್ರಕ್ರಿಯೆಗಳು ಮತ್ತು ಉಪಕ್ರಮಗಳು ಹಾಗೂ 2020 ರ ನಂತರದ ಮತ್ತಷ್ಟು ಡಿಕಾರ್ಬೊನೈಸೇಶನ್ ಬಗೆಗಿನ ಕಾರ್ಯಸೂಚಿಯನ್ನು ಪಟ್ಟಿ ಮಾಡಿದರು. ಹವಾಮಾನ ಬದಲಾವಣೆಯ ಬಗ್ಗೆ ಸರ್ಕಾರ ಮತ್ತು ಖಾಸಗಿ ವಲಯದ ಸಂಘಟಿತ ಪ್ರತಿಕ್ರಿಯೆಗೆ ಕಾರ್ಪೊರೇಟ್ ಜಗತ್ತು ತನ್ನ ಬೆಂಬಲವನ್ನು ವ್ಯಕ್ತಪಡಿಸಿತು. ಇದು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಭಾರತ ತನ್ನ ಹವಾಮಾನ ಬದಲಾವಣೆಯ ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿರುವುದನ್ನು ಖಚಿತಪಡಿಸುತ್ತದೆ.

ಕಡಿಮೆ ಇಂಗಾಲದ ಸುಸ್ಥಿರ ಆರ್ಥಿಕತೆಗಳನ್ನು ಸೃಷ್ಟಿಸುವಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಹವಾಮಾನ ವೈಪರೀತ್ಯದ ಕುರಿತು ಹಲವಾರು ಸ್ವಯಂಪ್ರೇರಿತ ಕ್ರಮಗಳನ್ನು ಕೈಗೊಂಡಿದೆ. ಇದು ಭಾರತದ ಎನ್‌ಡಿಸಿ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಕ್ಯೊಟೋ ಶಿಷ್ಟಾಚಾರದ ಸ್ವಚ್ಛ ಅಭಿವೃದ್ಧಿ ಕಾರ್ಯವಿಧಾನದಲ್ಲಿ ಭಾರತದ ಪಾಲ್ಗೊಳ್ಳುವಿಕೆಯಿಂದ ಖಾಸಗಿ ವಲಯವು ಪ್ರಯೋಜನ ಪಡೆದಿದೆ ಮತ್ತು ಪ್ಯಾರಿಸ್ ಒಪ್ಪಂದದ 6 ನೇ ಪರಿಚ್ಛೇದವನ್ನು ಪಾಲನೆ ಮಾಡುವುದರಿಂದ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ ಉದ್ದೇಶಗಳನ್ನು ಈಡೇರಿಸಲು ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ.

ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶದಡಿ ಭಾರತವು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದೆ. ತನ್ನ ರಾಷ್ಟ್ರೀಯ ನಿರ್ಧರಿತ ಕೊಡುಗೆ (ಎನ್‌ಡಿಸಿ) ಯ ಭಾಗವಾಗಿ, ಭಾರತವು ಮೂರು ಪರಿಮಾಣಾತ್ಮಕ ಹವಾಮಾನ ಬದಲಾವಣೆಯ ಗುರಿಗಳನ್ನು ಹೊಂದಿದೆ. 2030 ರ ವೇಳೆಗೆ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಇಂಗಾಲದ ಹೊರಸೂಸುವಿಕೆಯ ತೀವ್ರತೆಯನ್ನು 2005 ರ ಶೇ.33 ರಿಂದ 35 ಪ್ರತಿಶತಕ್ಕೆ ಕಡಿಮೆಗೊಳಿಸುವುದು, 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಆಧಾರಿತ ಇಂಧನ ಸಂಪನ್ಮೂಲಗಳಿಂದ ಸುಮಾರು 40 ಪ್ರತಿಶತದಷ್ಟು ಒಟ್ಟು ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವುದು ಮತ್ತು 2030 ರ ವೇಳೆಗೆ ಹೆಚ್ಚುವರಿ ಅರಣ್ಯ ಮತ್ತು ಮರದ ಹೊದಿಕೆಯ ಮೂಲಕ 2.5 ರಿಂದ 3 ಬಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಗೆ ಸಮಾನವಾದ ಹೆಚ್ಚುವರಿ ಕಾರ್ಬನ್ ಸಿಂಕ್ ಸೃಷ್ಟಿಸುವುದು ಪ್ರಮುಖ ಗುರಿಯಾಗಿವೆ.

 

***



(Release ID: 1670393) Visitor Counter : 562