ಪ್ರಧಾನ ಮಂತ್ರಿಯವರ ಕಛೇರಿ

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನದ ಅಂಗವಾಗಿ ಗುಜರಾತ್ ನ ಕೆವಾಡಿಯಾದ ಏಕತಾ ದಿನದ ಸಮಾರಂಭದಲ್ಲಿ ಪ್ರಧಾನಿ ಭಾಗಿ


ಏಕತಾ ಪ್ರತಿಜ್ಞೆ ಬೋಧನೆ ಮತ್ತು ಏಕತಾ ದಿನದ ಪರೇಡ್ ವೀಕ್ಷಣೆ

ಭಾರತ ತನ್ನ ಸಾರ್ವಭೌಮತೆ ಮತ್ತು ಏಕತೆಯ ರಕ್ಷಣೆಗೆ ಸಂಪೂರ್ಣ ಸಿದ್ಧ: ಪ್ರಧಾನಮಂತ್ರಿ

130 ಕೋಟಿ ಭಾರತೀಯರು ಬಲಿಷ್ಠ ಆತ್ಮ ನಿರ್ಭರ ಭಾರತಕ್ಕಾಗಿ ಶ್ರಮಿಸುತ್ತಿದ್ದಾರೆ: ಪ್ರಧಾನಮಂತ್ರಿ

ದೇಶದ ಭದ್ರತೆ ಹಾಗೂ ಭದ್ರತಾ ಪಡೆಗಳ ಆತ್ಮಸ್ಥೈರ್ಯದ ಹಿತದೃಷ್ಟಿಯಿಂದ ಭಯೋತ್ಪಾದನೆಗೆ ಬೆಂಬಲ ನೀಡದಂತೆ ರಾಜಕೀಯ ಪಕ್ಷಗಳಿಗೆ ಆಗ್ರಹ

ಹೆಚ್ಚುತ್ತಿರುವ ಭಯೋತ್ಪಾದನೆ ಭೀತಿಯ ವಿರುದ್ಧ ಒಗ್ಗೂಡಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ

Posted On: 31 OCT 2020 11:32AM by PIB Bengaluru

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜಯಂತಿಯ ಅಂಗವಾಗಿ ಗುಜರಾತ್ ಕೆವಾಡಿಯಾದಲ್ಲಿಂದು ನಡೆದ ಏಕತಾ ದಿನದ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪಾಲ್ಗೊಂಡರು. ಏಕತೆಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಅವರು ಏಕತೆಯ ಪ್ರತಿಜ್ಞೆ ಬೋಧಿಸಿದರು ಮತ್ತು ಸಂದರ್ಭದಲ್ಲಿ ಏಕತಾ ದಿನದ ಪರೇಡ್ ವೀಕ್ಷಿಸಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಕೆವಾಡಿಯಾದ ಸಮಗ್ರ ಅಭಿವೃದ್ಧಿಗೆ ಉದ್ಘಾಟಿಸಲಾದ ವಿವಿಧ ಯೋಜನೆಗಳು ವಲಯದ ಪ್ರವಾಸೋದ್ಯಮದ ಹೆಚ್ಚಳಕ್ಕೆ ನೆರವಾಗಲಿದೆ ಎಂದರು. ಈಗ ಪ್ರವಾಸಿಗರಿಗೆ ಸಮುದ್ರ ವಿಮಾನ ಸೇವೆಯ ಮೂಲಕವೂ ಏಕತೆಯ ಪ್ರತಿಮೆಗೆ ಆಗಮಿಸಿ ಸರ್ದಾರ್ ಸಾಹೇಬ್ ಅವರ ದರ್ಶನ ಪಡೆಯಬಹುದಾಗಿದೆ ಎಂದರು.

ಮಹರ್ಷಿ ವಾಲ್ಮೀಕಿಗಳಿಂದ ಸಾಂಸ್ಕೃತಿಯ ಏಕತೆ

ಕೆಲವು ಶತಮಾನಗಳ ಹಿಂದೆ, ಆದಿಕವಿ ಮಹರ್ಷಿ ವಾಲ್ಮೀಕಿ ನಾವಿಂದು ಅನುಭವಿಸುತ್ತಿರುವ ಭಾರತಕ್ಕಿಂತ ಹೆಚ್ಚು ರೋಮಾಂಚಕ, ಚೈತನ್ಯಶೀಲ ಭಾರತವನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸಲು ಪ್ರಯತ್ನಿಸಿದ್ದರು ಎಂದು  ಪ್ರಧಾನಮಂತ್ರಿ ಹೇಳಿದರುಏಕತಾ ದಿನದಂದೆ ವಾಲ್ಮೀಕಿ ಜಯಂತಿಯೂ ಬಂದಿರುವ ಬಗ್ಗೆ ಶ್ರೀ ಮೋದಿ ಹರ್ಷ ವ್ಯಕ್ತಪಡಿಸಿದರು. ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶ ತನ್ನ ಒಗ್ಗಟ್ಟಿನ ಬಲ, ತನ್ನ ಸಂಘಟಿತ ಛಲವನ್ನು ಸಾಬೀತುಪಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಏಕತೆಯ ಹೊಸ ಆಯಾಮ

ಇಂದು ಕಾಶ್ಮೀರ ತನ್ನ ಅಭಿವೃದ್ದಿಗೆ ಬರುವ ಅಡ್ಡಿಗಳನ್ನು ನಿವಾರಿಸಿ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶ ಇಂದು ಏಕತೆಯ ಹೊಸ ಆಯಾಮ ಪಡೆದಿದೆ ಎಂದು ಹೇಳಿದರು. ಈಶಾನ್ಯ ಭಾಗದಲ್ಲಿ ಶಾಂತಿ ಪುನರ್ಸ್ಥಾಪಿಸಲು ಕೈಗೊಂಡಿರುವ ಕ್ರಮಗಳು ಮತ್ತು ಅಭಿವೃದ್ಧಿಗೆ ಕೈಗೊಂಡಿರುವ ಉಪಕ್ರಮಗಳನ್ನು ಪಟ್ಟಿ ಮಾಡಿದರು.

ಮಾನ್ಯ ಸುಪ್ರೀಂಕೋರ್ಟ್ ತೀರ್ಪಿನ ತರುವಾಯ ಅಯೋಧ್ಯಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡುತ್ತಿರುವುದು ಸರ್ದಾರ್ ಪಟೇಲ್ ಅವರ ಕಲ್ಪನೆಯ ಭಾರತದ ಸಾಂಸ್ಕೃತಿಕ ವೈಭವವನ್ನು ಪುನರ್ ಸ್ಥಾಪಿಸುವ ಪ್ರಯತ್ನ ಎಂದರು.

ಆತ್ಮ ನಿರ್ಭರ ಭಾರತ

ಇಂದು ದೇಶದ 130 ಕೋಟಿ ಜನರು ಒಟ್ಟಾಗಿ ಬಲಿಷ್ಠ ಮತ್ತು ಸಮರ್ಥ ದೇಶ ಕಟ್ಟುತ್ತಿದ್ದು, ಇದರಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳು ಇರಬೇಕು ಎಂದರು. ಸ್ವಾವಲಂಬಿ ದೇಶದಿಂದ ಮಾತ್ರ ಅದರ ಪ್ರಗತಿ ಮತ್ತು ಭದ್ರತೆ ಸಾಧ್ಯ ಎಂದರು. ಹೀಗಾಗಿಯೇ ದೇಶ ರಕ್ಷಣೆಯೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಾಗಿದೆ ಎಂದರು.

ಗಡಿ ಪ್ರದೇಶಗಳ ಅಭಿವೃದ್ಧಿ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಏಕತೆಯ ಸಂರಕ್ಷಣೆ

ಗಡಿಯ ವಿಚಾರದಲ್ಲಿ ಭಾರತದ ವರ್ತನೆ ಮತ್ತು ಚಿಂತನೆ ಎರಡೂ ಬದಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನೆರೆಯ ರಾಷ್ಟ್ರಗಳನ್ನು ಟೀಕಿಸಿದ ಅವರು, ಇಂದು ಭಾರತದ ಭೂಮಿಯತ್ತ ಕಣ್ಣಿಟ್ಟವರು ತಕ್ಕ ಉತ್ತರವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. ಭಾರತವು ಗಡಿಯಲ್ಲಿ ನೂರಾರು ಕಿಲೋ ಮೀಟರ್ ರಸ್ತೆಗಳು, ಡಜನ್ನುಗಟ್ಟಲೆ ಸೇತುವೆಗಳು ಮತ್ತು ಅನೇಕ ಸುರಂಗಗಳನ್ನು ನಿರ್ಮಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು. ಇಂದಿನ ಭಾರತವು ತನ್ನ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ದೃಢಪಡಿಸಿದರು.

ಭಯೋತ್ಪಾದನೆಯ ವಿರುದ್ಧ ಏಕತೆ

ಪ್ರಯತ್ನಗಳ ಹೊರತಾಗಿಯೂ ಭಾರತ ಮತ್ತು ಇಡೀ ವಿಶ್ವ ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದರು. ಕೆಲವರು ಹೊರಬಂದು ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ರೀತಿ ಇಂದು ಜಾಗತಿಕ ಕಾಳಜಿಯ ವಿಷಯವಾಗಿದೆ ಎಂದು ಅವರು ಹೇಳಿದರು. ವಿಶ್ವದ ಎಲ್ಲ ದೇಶಗಳು, ಎಲ್ಲಾ ಸರ್ಕಾರಗಳು, ಎಲ್ಲಾ ಧರ್ಮಗಳು ಭಯೋತ್ಪಾದನೆ ವಿರುದ್ಧ ಒಂದಾಗಬೇಕಾದ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಶಾಂತಿ, ಭ್ರಾತೃತ್ವ ಮತ್ತು ಪರಸ್ಪರ ಗೌರವದ ಭಾವನೆ ಮಾನವೀಯತೆಯ ನಿಜವಾದ ಪರಿಚಯವಾಗಿದೆ ಎಂದು ಅವರು ಹೇಳಿದರು. ಭಯೋತ್ಪಾದನೆ -ಹಿಂಸಾಚಾರದಿಂದ ಯಾರೂ ಕಲ್ಯಾಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಮ್ಮ ವೈವಿಧ್ಯತೆಯು ನಮ್ಮ ಅಸ್ತಿತ್ವ ಮತ್ತು ನಾವು ತುಂಬಾ ಅಸಾಧಾರಣವಾದವರು ಎಂದರು. ಭಾರತದ ಏಕತೆಯ ಶಕ್ತಿ ಇತರರನ್ನು ತುದಿ ಬೆರಳಲ್ಲಿ ನಿಲ್ಲುವಂತೆ ಮಾಡಿತ್ತು ಎಂದು ಅವರು ಸ್ಮರಿಸಿದರು. ವೈವಿಧ್ಯತೆಯನ್ನೇ ಅವರು ನಮ್ಮ ಏಕೈಕ ದೌರ್ಬಲ್ಯವನ್ನಾಗಿ ಮಾಡಲು  ಬಯಸುತ್ತಾರೆ. ಅಂತಹ ಶಕ್ತಿಗಳನ್ನು ಗುರುತಿಸಿ ಜಾಗರೂಕರಾಗಿರಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಪುಲ್ವಾಮಾ ದಾಳಿ

ಇಂದು ಅರೆ ಸೇನಾ ಪಡೆಯ ಪರೇಡ್ ವೀಕ್ಷಿಸುವಾಗ ತಮಗೆ ಪುಲ್ವಾಮಾ ದಾಳಿ ನೆನಪಿಗೆ ಬಂತೆಂದು ಪ್ರಧಾನಮಂತ್ರಿ ಹೇಳಿದರು. ದೇಶ ಎಂದಿಗೂ ಘಟನೆಯನ್ನು ಮರೆಯುವುದಿಲ್ಲ ಮತ್ತು ಇಡೀ ದೇಶ ತನ್ನ ವೀರ ಯೋಧರ ಅಗಲಿಕೆಯಿಂದ ದುಃಖಿತವಾಗಿದೆ ಎಂದರು. ಘಟನೆಯ ಬಗ್ಗೆ ನೀಡಲಾದ ಹೇಳಿಕೆಗಳನ್ನೂ ದೇಶ ಮರೆಯುವುದಿಲ್ಲ ಎಂದರು. ನೆರೆಯ ದೇಶದ ಸಂಸತ್ತಿನಲ್ಲಿ ಘಟನೆಯ ಬಗ್ಗೆ ಇತ್ತೀಚೆಗೆ ನೀಡಲಾದ ಹೇಳಿಕೆ ಸತ್ಯ ಬಯಲು ಮಾಡಿದೆ ಎಂದರು.

ದೇಶದಲ್ಲಿನ ಕೊಳಕು ರಾಜಕೀಯದ ನಾಟಕದ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು, ಅದು ಸಂಪೂರ್ಣ ಸ್ವಾರ್ಥ ಮತ್ತು ದುರಹಂಕಾರವನ್ನು ಪ್ರದರ್ಶಿಸುತ್ತದೆ. ಪುಲ್ವಾಮಾ ದಾಳಿಯ ನಂತರ ಮಾಡಿದ ರಾಜಕೀಯ ಜನರು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಯಾವ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಅಂತಹ ರಾಜಕೀಯ ಪಕ್ಷಗಳು ದೇಶದ ಭದ್ರತೆಯ ಹಿತದೃಷ್ಟಿಯಿಂದ ಮತ್ತು ನಮ್ಮ ಭದ್ರತಾ ಪಡೆಗಳ ಆತ್ಮಸ್ಥೈರ್ಯ ಹೆಚ್ಚಿಸಲು ಶ್ರಮಿಸಬೇಕು ಎಂದು ಅವರು ಆಗ್ರಹಿಸಿದರು

ನಿಮ್ಮ ಸ್ವಾರ್ಥಕ್ಕಾಗಿ ರಾಷ್ಟ್ರ ವಿರೋಧಿ ಶಕ್ತಿಗಳ ಕೈಗೆ ಆಡುವ ವಸ್ತುವಾಗುವ ಮೂಲಕ ತಿಳಿದೋ ಅಥವಾ ತಿಳಿಯದೆಯೋ ನೀವು ದೇಶದ ಹಿತಾಸಕ್ತಿಗಾಗಿ ಅಥವಾ ನಿಮ್ಮ ಪಕ್ಷಕ್ಕಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು.  ನಮ್ಮೆಲ್ಲರಿಗೂ ಹೆಚ್ಚಿನ ಆಸಕ್ತಿ ದೇಶದ ಹಿತಾಸಕ್ತಿಯಾಗಿರಬೇಕು ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬರ ಹಿತಾಸಕ್ತಿಗಳ ಬಗ್ಗೆ ಚಿಂತಿಸಿದಾಗ ನಾವು ಪ್ರಗತಿ ಹೊಂದುತ್ತೇವೆ ಎಂದು  ಹೇಳಿದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಗುಜರಾತ್ ರಾಜ್ಯ, ಕೇಂದ್ರ ಮೀಸಲು ಸಶಸ್ತ್ರಪಡೆ, ಗಡಿ ಭದ್ರತಾ ಪಡೆ, ಭಾರತ ಟಿಬೆಟಿಯನ್ ಗಡಿ ಪೊಲೀಸ್, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳ ವರ್ಣರಂಜಿತ ಪರೇಡ್ ವೀಕ್ಷಿಸಿದರು. ಪರೇಡ್ ಸಿಆರ್.ಪಿ.ಎಫ್. ಮಹಿಳಾ ಅಧಿಕಾರಿಗಳ ರೈಫಲ್ ಕಸರತ್ತನ್ನೂ ಒಳಗೊಂಡಿತ್ತು ಕಾರ್ಯಕ್ರಮದ ಅಂಘವಾಗಿ ಭಾರತೀಯ ವಾಯುಪಡೆಯ ಜಾಗ್ವಾರ್ಗಳು ಸಹ ಫ್ಲೈ-ಪಾಸ್ಟ್ ಪ್ರದರ್ಶನ ನೀಡಿದವು. ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ಭಾರತದ ಬುಡಕಟ್ಟು ಪರಂಪರೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಪ್ರಧಾನಮಂತ್ರಿ ಸಾಕ್ಷಿಯಾದರು.

***


(Release ID: 1669084) Visitor Counter : 227