ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ದೀಪಾವಳಿಗೆ ಕೆವಿಐಸಿಯಿಂದ ಉನ್ನತ ಗುಣಮಟ್ಟದ ತೆಳು ಹತ್ತಿ (ಮಸ್ಲಿನ್) ಬಟ್ಟೆಯ ಮಾಸ್ಕ್

Posted On: 30 OCT 2020 4:52PM by PIB Bengaluru

ಈ ಬಾರಿಯ ದೀಪಾವಳಿ ಹಬ್ಬದ ಸಂಭ್ರಮವನ್ನು ಖಾದಿಯ ಶ್ವೇತ ವರ್ಣದ ಮತ್ತು ಹೊಳೆಯುವ ಕೆಂಪು ಬಣ್ಣದ ಹೊಸ ಬಗೆಯ ಮಾಸ್ಕ್ ಗಳೊಂದಿಗೆ ಆಚರಿಸಿ. ಹಬ್ಬದ ಋತುಮಾನವನ್ನು ಗಮನದಲ್ಲಿರಿಸಿಕೊಂಡು ಎಂಎಸ್ ಎಂ ಇ ಸಚಿವಾಲಯದ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಸೀಮಿತ ಸಂಖ್ಯೆಯ ಎರಡು ಪದರಗಳುಳ್ಳ “ಹ್ಯಾಪಿ ದೀಪಾವಳಿ” ಎಂದು ಮುದ್ರಿಸಿರುವ ಮಾಸ್ಕ್ ಗಳನ್ನು ಸಿದ್ಧಪಡಿಸಿದೆ. ಇವು ಅತ್ಯಂತ ನಯವಾದ ಹತ್ತಿ ಬಟ್ಟೆ(ಮಸ್ಲಿನ್ ) ಹೊಂದಿದ್ದು, ಉನ್ನತ ಗುಣಮಟ್ಟದ್ದಾಗಿದೆ ಹಾಗೂ ಅತ್ಯುತ್ತಮ ದರ್ಜೆಯ ಕೈಯಿಂದ ನೇಯ್ದ ಹತ್ತಿ ಬಟ್ಟೆಯನ್ನು ಬಳಸಿ, ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಖಾದಿ ಕರಕುಶಲಕರ್ಮಿಗಳು ಇವುಗಳನ್ನು ಸಿದ್ಧಪಡಿಸಿದ್ದಾರೆ.

ಅಲ್ಲದೆ ಕೆವಿಐಸಿ ಮುಂದಿನ ದಿನಗಳಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕಾಗಿ ವಿಶೇಷ ಮಾಸ್ಕ್ ಗಳನ್ನು ಬಿಡುಗಡೆ ಮಾಡಲಿದೆ.

ಎರಡೂ ಪದರದ ಖಾದಿ ಹತ್ತಿ ಮತ್ತು ಮೂರು ಪದರದ ರೇಷ್ಮೆ ಮಾಸ್ಕ್ ಗಳಿಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಮಸ್ಲಿನ್(ತೆಳು ಹತ್ತಿಯ ಬಟ್ಟೆ) ಮುಖಗವಸುಗಳನ್ನು ಸಿದ್ಧಪಡಿಸಲಾಗಿದೆ. ಈವರೆಗೆ ಕೆವಿಐಸಿ ದೇಶಾದ್ಯಂತ ಆರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಸುಮಾರು 18 ಲಕ್ಷ ಮಾಸ್ಕ್ ಗಳನ್ನು ಮಾರಾಟ ಮಾಡಿದೆ.

ದೀಪಾವಳಿಯ ಈ ಮಸ್ಲಿನ್ ಮಾಸ್ಕ್ ಗಳಿಗೆ ಪ್ರತಿಯೊಂದಕ್ಕೆ 75 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಅವು ದೆಹಲಿಯ ಖಾದಿಯ ಮಳಿಗೆಗಳಲ್ಲಿ ಮತ್ತು ಕೆವಿಐಸಿಯ ಆನ್ ಲೈನ್ ಇ-ಪೋರ್ಟಲ್ www.khadiindia.gov.in ಮೂಲಕ ಖರೀದಿಸಬಹುದಾಗಿದೆ.

ಖಾದಿಯ ಇತರೆ ಮಾಸ್ಕ್ ಗಳಂತೆ ಮಸ್ಲಿನ್ ಮಾಸ್ಕ್ ಗಳು ಕೂಡ ಚರ್ಮಸ್ನೇಹಿಯಾಗಿದ್ದು, ಅವುಗಳನ್ನು ತೊಳೆಯಬಹುದು, ಮರುಬಳಕೆ ಮಾಡಬಹುದು ಮತ್ತು ಅವು ಪರಿಸರದೊಂದಿಗೆ ಸುಲಭವಾಗಿ ಕೊಳೆಯುತ್ತವೆ ಹಾಗೂ ಆರ್ಥಿಕವಾಗಿಯೂ ಎಲ್ಲರಿಗೂ ಇಷ್ಟವಾಗುತ್ತವೆ. ಈ ಮಾಸ್ಕ್ ಗಳು ಎರಡು ಪದರಗಳನ್ನು ಹೊಂದಿದ್ದು, ಅವುಗಳು ಶ್ವೇತ ವರ್ಣದ ನಯವಾದ ಹತ್ತಿಯನ್ನು ಬಳಸಲಾಗಿದೆ. ಕೆಂಪು ಬಣ್ಣದ ಹೊಳೆಯುವ ಪೈಪಿಂಗ್ ಅನ್ನು ಮಾಸ್ಕ್ ಗೆ ಅಳವಡಿಸಲಾಗಿದ್ದು, ಅದರ ವಿನ್ಯಾಸ ಆಕರ್ಷಣೀಯವಾಗಿದ್ದು, ಅದು ಹಬ್ಬದ ಸಂಭ್ರಮಕ್ಕೆ ಹೇಳಿ ಮಾಡಿಸಿದಂತಿದೆ.

ಕೆವಿಐಸಿಯ ಅಧ್ಯಕ್ಷ ಶ್ರೀ ವಿನಯ್ ಕುಮಾರ್ ಸಕ್ಸೇನಾ ಅವರು, ಎರಡು ಪದರದ ದೀಪಾವಳಿ ಮಾಸ್ಕ್ ನ ಬೆಲೆ ಕಡಿಮೆ ಇರಬಹುದು ಆದರೆ ಅದರ ಮೌಲ್ಯ ಹೆಚ್ಚಿದೆ. ಇದು ವಿಶಿಷ್ಟ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವಾಗ ಸಾಂಕ್ರಾಮಿಕದಿಂದ ಜನರನ್ನು ರಕ್ಷಿಸುವ ಕೆವಿಐಸಿಯ ವಿನೂತನ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. “ಸೋಂಕು ಹರಡದಂತೆ ಜನರನ್ನು ರಕ್ಷಿಸುವುದಲ್ಲದೆ, ಕೆವಿಐಸಿ ಮಾಸ್ಕ್ ಗಳು ಅತ್ಯಾಕರ್ಷಕವಾಗಿರಬೇಕು ಎಂಬ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯೋನ್ಮುಖವಾಗಿದೆ. ಈ ಮಸ್ಲಿನ್ ಮಾಸ್ಕ್ ಗಳು ಬಗೆಬಗೆಯ ಮುಖಗವಸುಗಳ ವ್ಯಾಪ್ತಿಗೆ ಸೇರಲ್ಪಡಲಿದೆ ಮತ್ತು ಅವು ಹತ್ತಿ ಹಾಗೂ ರೇಷ್ಮೆ ಮಾಸ್ಕ್ ಗಳಿಗಿಂತ ಭಿನ್ನವಾಗಿದೆ. ಇದೇ ವೇಳೆ ಖಾದಿ ಉದ್ಯೋಗಿಗಳಿಗೆ ಇದು ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ” ಎಂದರು.

ಈ ಬಟ್ಟೆ ಒಳಗೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಕರಿಸುತ್ತದೆ ಎಂಬ ಕಾರಣಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಇದರ ಮೂಲಕ ಗಾಳಿ ಸೇವನೆಯೂ ಸಹ ಸುಲಭ ವಾಗಲಿದೆ. ಈ ಮಾಸ್ಕ್ ಗಳ ಮತ್ತೊಂದು ವಿಶೇಷವೆಂದರೆ ಕೈಯಿಂದ ನೇಯ್ದ ಮತ್ತು ಕೈಯಿಂದ ಹೊಲೆದ ತೆಳುವಾದ ಹತ್ತಿಬಟ್ಟೆ ಇದಾಗಿದ್ದು, ಇದು ಚರ್ಮದ ಮೇಲೆ ಅತ್ಯಂತ ನಯವಾಗಿ ಕೂರುತ್ತದೆ ಹಾಗೂ ದೀರ್ಘಾವಧಿಯ ಬಳಕೆಗೂ ಹೆಚ್ಚು ಆರಾಮಾಗಿರುತ್ತದೆ.

****



(Release ID: 1668963) Visitor Counter : 263