ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ


ರೈತರಿಗಾಗಿ ಕಿಸಾನ್ ಸೂರ್ಯೋದಯ ಯೋಜನೆಗೆ ಚಾಲನೆ

ಯು. ಎನ್. ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಸಂಪರ್ಕಿತವಾದ ಮಕ್ಕಳ ಹೃದ್ರೋಗ ಆಸ್ಪತ್ರೆ ಉದ್ಘಾಟನೆ

ಗಿರ್ನಾರ್ ರೋಪ್ ವೇ ಉದ್ಘಾಟನೆ

Posted On: 24 OCT 2020 2:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುಜರಾತ್ ಮೂರು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಿದರು.

ಶ್ರೀ ಮೋದಿ ರೈತರಿಗೆ ದಿನದ 16 ಗಂಟೆ ವಿದ್ಯುತ್ ಪೂರೈಸುವ ಕಿಸಾನ್ ಸೂರ್ಯೋದಯ ಯೋಜನೆಗೆ ಚಾಲನೆ ನೀಡಿದರು. ಯು.ಎನ್. ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಸಂಪರ್ಕಿತವಾದ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ಹಾಗೂ ಅಹಮದಾಬಾದ್ ನಲ್ಲರುವ ಅಹ್ಮದಾಬಾದ್ ನಾಗರಿಕ ಆಸ್ಪತ್ರೆಯಲ್ಲಿ ಟೆಲಿ ಕಾರ್ಡಿಯಾಲಜಿಯನ್ನೂ ಅವರು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಗಿರ್ನಾರ್ ರೋಪ್ ವೇಯನ್ನೂ ಉದ್ಘಾಟಿಸಿದರು.

ಸಂದರ್ಭದಲ್ಲಿ ಮಾತನಾಡಿದ ಅವರು, ಗುಜರಾತ್ ಸದಾ ಶ್ರೀಸಾಮಾನ್ಯರ ದೃಢನಿಶ್ಚಯ ಮತ್ತು ಸಮರ್ಪಣಾ ಮನೋಭಾವಕ್ಕೆ ಆದರ್ಶಪ್ರಾಯವಾಗಿದೆ. ಸುಜಲಂ-ಸುಫಲಾಮ್ ಮತ್ತು ಸೌನಿ ಯೋಜನೆಯ ನಂತರ, ಕಿಸಾನ್ ಸೂರ್ಯೋದಯ ಯೋಜನೆ ಗುಜರಾತ್ ರೈತರ ಅಗತ್ಯಗಳನ್ನು ಪೂರೈಸುವಲ್ಲಿ ಒಂದು ಮೈಲಿಗಲ್ಲಿನ ಕ್ರಮವಾಗಿದೆ ಎಂದು ಅವರು ಹೇಳಿದರು. ವಿದ್ಯುತ್ ಕ್ಷೇತ್ರದಲ್ಲಿ ಗುಜರಾತ್ನಲ್ಲಿ ಹಲವು ವರ್ಷಗಳಿಂದ ಮಾಡಿದ ಕಾರ್ಯಗಳು, ಯೋಜನೆಯ ಆಧಾರವಾಗಿದೆ ಎಂದು ಅವರು ಹೇಳಿದರು. ರಾಜ್ಯದ ಸಾಮರ್ಥ್ಯ ವರ್ಧನೆಗೆ ವಿದ್ಯುತ್ ಉತ್ಪಾದನೆಯಿಂದ ಸರಬರಾಜಿನವರೆಗೆ ಎಲ್ಲ ಕಾಮಗಾರಿಯನ್ನೂ ಅಭಿಯಾನದೋಪಾದಿಯಲ್ಲಿ ನಡೆಸಲಾಗಿದೆ ಎಂದರು. 2010ರಲ್ಲಿ ಪಟಾನ್ ನಲ್ಲಿ ಸೌರ ವಿದ್ಯುತ್ ಘಟಕ ಉದ್ಘಾಟಿಸಿದಾಗ, ಭಾರತ ಮುಂದೊಂದು ದಿನ ಒಬ್ಬ ಸೂರ್ಯ ಒಂದು ಗ್ರಿಡ್ ಮಾರ್ಗವನ್ನು ಜಗತ್ತಿಗೆ ತೋರಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದರು. ಭಾರತ ಕೆಲವೇ ವರ್ಷಗಳಲ್ಲಿ ಈಗ ಸೌರ ವಿದ್ಯುತ್ ಕ್ಷೇತ್ರದಲ್ಲಿ ವಿಶ್ವದಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು ತ್ವರಿತವಾಗಿ ಮುಂದುವರಿಯುತ್ತಿದೆ ಎಂದರು.

ಕಿಸಾನ್ ಸೂರ್ಯೋದಯ ಯೋಜನೆಯ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ, ಹಿಂದೆ ಬಹುತೇಕ ರೈತರು ತಮ್ಮ ನೀರಾವರಿಗೆ ರಾತ್ರಿಯ ವೇಳೆ ಮಾತ್ರ ವಿದ್ಯುತ್ ಪಡೆಯುತ್ತಿದ್ದರು ಮತ್ತು ಇದಕ್ಕಾಗಿ ರಾತ್ರಿಯೆಲ್ಲಾ ಅವರು ಎದ್ದಿರಬೇಕಾಗುತ್ತಿತ್ತು. ಗಿರ್ನಾರ್ ಮತ್ತು ಜುನಾಗಢ್ ನಲ್ಲಿ ರೈತರು ಕಾಡು ಪ್ರಾಣಿಗಳ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಕಿಸಾನ್ ಸೂರ್ಯೋದಯ ಯೋಜನೆಯಿಂದ ರೈತರು ಬೆಳಗ್ಗೆ 5 ಗಂಟೆಯಿಂದ ರಾತ್ರಿ 9ರವರೆಗೆ 3 ಫೇಸ್ ವಿದ್ಯುತ್ ಪಡೆಯುತ್ತಾರೆ ಇದು ಅವರ ಬದುಕಿನಲ್ಲಿ ನವೋದಯವಾಗಲಿದೆ ಎಂದರು.

ಅಸ್ತಿತ್ವದಲ್ಲಿರುವ ಇತರ ವ್ಯವಸ್ಥೆಗಳಿಗೆ ಧಕ್ಕೆಯಾಗದಂತೆ ಸಂಪೂರ್ಣವಾಗಿ ಹೊಸ ಪ್ರಸರಣ ಸಾಮರ್ಥ್ಯವನ್ನು ಸಿದ್ಧಪಡಿಸುವ ಮೂಲಕ ಗುಜರಾತ್ ಸರ್ಕಾರ ಕಾರ್ಯವನ್ನು ಮಾಡಲು ಶ್ರಮಿಸಿದೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು. ಯೋಜನೆಯಡಿ, ಮುಂದಿನ 2-3 ವರ್ಷಗಳಲ್ಲಿ ಸುಮಾರು 3500 ಸರ್ಕ್ಯೂಟ್ ಕಿಲೋ ಮೀಟರ್ ಹೊಸ ಪ್ರಸರಣ ಮಾರ್ಗಗಳನ್ನು ಹಾಕಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು ಮತ್ತು ಗ್ರಾಮಗಳಲ್ಲಿ ಹೆಚ್ಚಿನವು ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿವೆ ಎಂದರು. ಯೋಜನೆಯ ಮೂಲಕ ಇಡೀ ಗುಜರಾತ್ಗೆ ವಿದ್ಯುತ್ ಸರಬರಾಜು ದೊರೆತಾಗ ಇದು ಲಕ್ಷಾಂತರ ರೈತರ ಜೀವನವನ್ನು ಬದಲಾಯಿಸುತ್ತದೆ ಎಂದೂ ಅವರು ಹೇಳಿದರು.

ರೈತರ ಆದಾಯ ದುಪ್ಪಟ್ಟು ಆಗುವಂತೆ ಮಾಡಲು, ಅವರ ಹೂಡಿಕೆ ತಗ್ಗಿಸಲು ಮತ್ತು ಅವರನ್ನು ಸಂಕಷ್ಟಗಳಿಂದ ಪಾರುಮಾಡಲು ಬದಲಾಗುತ್ತಿರುವ ಸಮಯಕ್ಕೆ ಅನುಗುಣವಾಗಿ ನಿರಂತರವಾಗಿ ಕಾರ್ಯನಿರ್ವಹಿಸಲು ಪ್ರಧಾನಮಂತ್ರಿ ಆಗ್ರಹಿಸಿದರು. ರೈತರ ಆದಾಯವನ್ನು ದ್ವಿಗುಣ ಮಾಡಲು ಕೈಗೊಂಡ ಕ್ರಮಗಳಾದ ಸಾವಿರಾರು ಎಫ್.ಪಿ.. ಸ್ಥಾಪನೆ, ಬೇವು ಲೇಪಿತ ಯೂರಿಯಾ ಪೂರೈಕೆ, ಮಣ್ಣಿನ ಆರೋಗ್ಯ ಕಾರ್ಡ್ ಮತ್ತು ಇನ್ನೂ ಹಲವು ಉಪಕ್ರಮ ಆರಂಭಿಸಿರುವುದನ್ನು ಪ್ರಸ್ತಾಪಿಸಿದರು. ಕುಸುಮ್ ಯೋಜನೆ ಅಡಿಯಲ್ಲಿ, ಎಫ್.ಪಿ..ಗಳು ಪಂಚಾಯಿತಿಗಳು ಮತ್ತು ಎಲ್ಲ ಅಂಥ ಸಂಸ್ಥೆಗಳು ಸಣ್ಣ ಸೌರ ಘಟಕಗಳನ್ನು ಬಂಜರು ಭೂಮಿಯಲ್ಲಿ ಸ್ಥಾಪಿಸಲು ನೆರವಾಗುತ್ತಿದ್ದಾರೆ ರೈತರ ನೀರಾವರಿ ಪಂಪ್ ಗಳನ್ನು ಸಹ ಸೌರ ವಿದ್ಯುತ್ ಗೆ ಸಂಪರ್ಕಿಸಲಾಗುತ್ತಿದೆ ಎಂದರು. ರೀತಿ ಉತ್ಪಾದಿಸಲಾದ ವಿದ್ಯುತ್ ಅನ್ನು ರೈತರು ತಮ್ಮ ನೀರಾವರಿಗೆ ಬಳಸಬಹುದು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಬಹುದು ಎಂದರು.

ವಿದ್ಯುತ್ ಕ್ಷೇತ್ರದ ಜೊತೆಗೆ ಗುಜರಾತ್ ಶ್ಲಾಘನಾರ್ಹ ಕಾರ್ಯವನ್ನು ನೀರಾವರಿ ಮತ್ತು ಕುಡಿಯುವ ನೀರಿನ ಕ್ಷೇತ್ರದಲ್ಲಿಯೂ ಮಾಡಿದೆ ಎಂದರು. ಹಿಂದೆ ಜನರಿಗೆ ನೀರು ತರುವುದು ತ್ರಾಸದಾಯಕವಾಗಿತ್ತು ಆದರೆ ಇಂದು ನೀರು ಅಂಥ ಜಿಲ್ಲೆಗಳನ್ನು ತಲುಪಿದೆ, ಅದನ್ನು ಮೊದಲು ಊಹಿಸಿಕೊಳ್ಳಲೂ ಆಗುತ್ತಿರಲಿಲ್ಲ ಎಂದರು. ಸರ್ದಾರ್ ಸರೋವರ ಯೋಜನೆ ಮತ್ತು ಜಲ ಗ್ರಿಡ್ ನಂತಹ ಯೋಜನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಯೋಜನೆಗಳು ಗುಜರಾತ್ ಬರ ಪೀಡಿತ ಪ್ರದೇಶಗಳಿಗೂ ನೀರು ತಲುಪಲು ನೆರವಾಗಿವೆ ಎಂದರು. ಗುಜರಾತ್ ಶೇ.80ರಷ್ಟು ಕುಟುಂಬಗಳು ಕೊಳವೆ ಮೂಲಕ ನೀರು ಪೂರೈಕೆ ಸೌಲಭ್ಯ ಪಡೆದಿವೆ ಮತ್ತು ಶೀಘ್ರವೇ ಗುಜರಾತ್ ಎಲ್ಲ ಮನೆಗಳಿಗೂ ಕೊಳವೆಯ ಮೂಲಕ ಕುಡಿಯುವ ನೀರು ಪೂರೈಕೆ ಸೌಲಭ್ಯ ಕಲ್ಪಿಸಿದ ರಾಜ್ಯವಾಗಲಿದೆ ಎಂದರು. ಕಿಸಾನ್ ಸೂರ್ಯೋದಯ ಯೋಜನೆ ಉದ್ಘಾಟನೆಯಾಗಿದ್ದು, ಪ್ರತಿ ಹನಿ ಹೆಚ್ಚು ಬೆಳೆ ಮಂತ್ರವನ್ನು ಜಪಿಸುವಂತೆ ಅವರು ರೈತರಿಗೆ ಆಗ್ರಹಿಸಿದರು. ಹಗಲು ಹೊತ್ತಿನಲ್ಲಿ ವಿದ್ಯುತ್ ಒದಗಿಸುವುದು ರೈತರಿಗೆ ಸೂಕ್ಷ್ಮ ನೀರಾವರಿ ಸ್ಥಾಪಿಸಲು ನೆರವಾಗಲಿದೆ ಮತ್ತು ಕಿಸಾನ್ ಸೂರ್ಯೋದಯ ಯೋಜನೆ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ವಿಸ್ತರಣೆಗೆ ನೆರವಾಗಲಿದೆ ಎಂದರು.

ಇಂದು ಉದ್ಘಾಟಿಸಲಾದ ಯು.ಎನ್. ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಪ್ರಸ್ತಾಪ ಮಾಡಿದ ಪ್ರಧಾನಮಂತ್ರಿಗಳು, ಇದು ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಆಧುನಿಕ ಆರೋಗ್ಯ ಸೌಲಭ್ಯವನ್ನು ಹೊಂದಿರುವ ದೇಶದ ಕೆಲವೇ ಆಸ್ಪತ್ರೆಗಳಲ್ಲಿ ಒಂದಾಗಿದೆ ಮತ್ತು ಇದು ಭಾರತದ ಅತಿದೊಡ್ಡ ಹೃದ್ರೋಗ ಆಸ್ಪತ್ರೆಯಾಗಿದೆ ಎಂದರು. ಆಧುನಿಕ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳ ಜಾಲವನ್ನು ಸ್ಥಾಪಿಸುವ ಮೂಲಕ ಮತ್ತು ಪ್ರತಿ ಹಳ್ಳಿಯನ್ನು ಉತ್ತಮ ಆರೋಗ್ಯ ಸೌಲಭ್ಯಗಳೊಂದಿಗೆ ಸಂಪರ್ಕಿಸುವ ಮೂಲಕ ಗುಜರಾತ್ ಶ್ಲಾಘನೀಯ ಕಾರ್ಯವನ್ನು ಮಾಡಿದೆ ಎಂದು ಅವರು ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ ಗುಜರಾತ್ 21 ಲಕ್ಷ ಜನರು ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದು ಅವರು ಹೇಳಿದರು. ಅಗ್ಗದ ದರದ ಔಷಧಿಗಳನ್ನು ನೀಡುವ 525 ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ಗುಜರಾತ್ನಲ್ಲಿ ತೆರೆಯಲಾಗಿದೆ ಮತ್ತು ಇದರಿಂದ ಸುಮಾರು 100 ಕೋಟಿ ರೂ.ಗಳನ್ನು ಗುಜರಾತ್ ಸಾಮಾನ್ಯ ಜನರಿಗೆ ಉಳಿತಾಯವಾಗಿದೆ ಎಂದರು.

ಗಿರ್ನಾರ್ ಪರ್ವತ ತಾಯಿ ಅಂಬೆಯ ನೆಲೆವೀಡು ಎಂದು ಪ್ರಧಾನಮಂತ್ರಿ ಹೇಳಿದರು. ಇದರಲ್ಲಿ ಗೋರಖ್ ನಾಥ್ ಶಿಖರವಿದೆ, ಗುರು ದತ್ತಾತ್ರೇಯರ ಶಿಖರ ಇದೆ ಮತ್ತು ಜೈನ ದೇವಾಲಯವಿದೆ ಎಂದರು. ವಿಶ್ವದರ್ಜೆಯ ರೋಪ್ ವೇಯನ್ನು ಉದ್ಘಾಟಿಸಿರುವುದರಿಂದ ಹೆಚ್ಚು ಹೆಚ್ಚು ಪ್ರವಾಸಿಗರು, ಭಕ್ತರು ಇಲ್ಲಿಗೆ ಆಗಮಿಸುತ್ತಾರೆ ಎಂದರು. ಗುಜರಾತ್ನಲ್ಲಿ ಬನಸ್ಕಾಂತ, ಪಾವಗಢ ಮತ್ತು ಸತ್ಪುರ ಬಳಿಕ ಇದು ಗುಜರಾತ್ ನಾಲ್ಕನೇ ರೋಪ್ ವೇ ಆಗಿದೆ ಎಂದು ಅವರು ಹೇಳಿದರು. ರೋಪ್ವೇ ಈಗ ಜನರಿಗೆ ಉದ್ಯೋಗಾವಕಾಶ ಮತ್ತು ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಇಂತಹ ವ್ಯವಸ್ಥೆಗಳು ಜನರಿಗೆ ತುಂಬಾ ಅನುಕೂಲವನ್ನು ಕಲ್ಪಿಸುತ್ತವಾದರೂ ಇಷ್ಟು ದಿನ ಜನರು ಎದುರಿಸುತ್ತಿದ್ದ ಕಷ್ಟಗಳನ್ನು ಅವರು ಒತ್ತಿ ಹೇಳಿದರು. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ಥಳೀಯರಿಗೆ ಆಗುವ ಆರ್ಥಿಕ ಲಾಭಗಳನ್ನು ಅವರು ಪಟ್ಟಿ ಮಾಡಿದರು. ಶಿವರಾಜ್ಪುರ ಕಡಲ ಕಿನಾರೆ ಬ್ಲೂ ಫ್ಲಾಗ್ ಪ್ರಮಾಣೀಕರಣ ಪಡೆದಿದೆ ಮತ್ತು ಏಕತೆಯ ಪ್ರತಿಮೆ ಸ್ಥಳೀಯರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಸಾಮಾನ್ಯವಾಗಿ ಯಾರೂ ಭೇಟಿಯನ್ನೇ ನೀಡದೇ ಇದ್ದ ಅಹಮದಾಬಾದ್ ಕಂಕರಿಯಾ ಸರೋವರದ ಉದಾಹರಣೆಯನ್ನು ನೀಡಿದ ಅವರು, ನವೀಕರಣದ ಬಳಿಕ ಪ್ರತಿವರ್ಷ ಸುಮಾರು 75 ಲಕ್ಷ ಜನರು ಸರೋವರಕ್ಕೆ ಭೇಟಿ ನೀಡುತ್ತಿದ್ದಾರೆ ಮತ್ತು ಅನೇಕ ಜನರಿಗೆ ಇದು ಆದಾಯದ ಮೂಲವಾಗಿದೆ ಎಂದು ಹೇಳಿದರು. ಪ್ರವಾಸೋದ್ಯಮವು ಒಂದು ವಲಯವಾಗಿದ್ದು, ಕಡಿಮೆ ಹೂಡಿಕೆಯೊಂದಿಗೆ ಅನೇಕ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಗುಜರಾತ್ ಜನರು ಮತ್ತು ಪ್ರಪಂಚದಾದ್ಯಂತ ನೆಲೆಸಿರುವ ಗುಜರಾತ್ ಮಂದಿ ರಾಜ್ಯದ ವಿವಿಧ ಪ್ರವಾಸಿ ತಾಣಗಳ ರಾಯಭಾರಿಗಳಾಗಿ ಪ್ರಚಾರ ಮಾಡಬೇಕು ಮತ್ತು ಅದರ ಪ್ರಗತಿಗೆ ಸಹಾಯ ಮಾಡಬೇಕೆಂದು ಅವರು ಆಗ್ರಹಿಸಿದರು.

ಹಿನ್ನೆಲೆ:

ಕಿಸಾನ್ ಸೂರ್ಯೋದಯ ಯೋಜನೆ

ಹಗಲು ಹೊತ್ತಿನಲ್ಲಿ ನೀರಾವರಿಗೆ ವಿದ್ಯುತ್ ಒದಗಿಸುವ ಯೋಜನೆಯಾಗಿದ್ದು, ಮುಖ್ಯಮಂತ್ರಿ ಶ್ರೀ ವಿಜಯ ರೂಪಾನಿ ಅವರ ನೇತೃತ್ವದಲ್ಲಿನ ಗುಜರಾತ್ ಸರ್ಕಾರ ಇತ್ತೀಚೆಗೆ ಕಿಸಾನ್ ಸೂರ್ಯೋದಯ ಯೋಜನೆ ಪ್ರಕಟಿಸಿತ್ತು. ಯೋಜನೆಯಡಿ ರೈತರು ಬೆಳಗ್ಗೆ 5 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ವಿದ್ಯುತ್ ಪಡೆಯಲಿದ್ದಾರೆ. ರಾಜ್ಯ ಸರ್ಕಾರ ವಿದ್ಯುತ್ ಸರಬರಾಜು ಮೂಲಸೌಕರ್ಯ ಸ್ಥಾಪನೆಗೆ ಯೋಜನೆಯಡಿ 2023ರವರೆಗೆ 3500 ಕೋಟಿ ರೂ. ಗಳನ್ನು ಹಂಚಿಕೆ ಮಾಡಿದೆ. 220 ಕೆವಿ ಸಬ್ಸ್ಟೇಷನ್ಗಳ ಜೊತೆಗೆ ಒಟ್ಟು 3490 ಸರ್ಕ್ಯೂಟ್ ಕಿಲೋ ಮೀಟರ್ (ಸಿಕೆಎಂ) ಉದ್ದದ 234 ‘66-ಕಿಲೋವಾಟ್ಪ್ರಸರಣ ಮಾರ್ಗಗಳನ್ನು ಯೋಜನೆಯಡಿ ಸ್ಥಾಪಿಸಲಾಗುವುದು. ದಾಹೋಡ್, ಪಟಾನ್, ಮಹಿಸಾಗರ್, ಪಂಚಮಹಲ್, ಛೋಟಾ ಉದೆಪುರ, ಖೇಡಾ, ತಾಪಿ, ವಲ್ಸಾದ್, ಆನಂದ್ ಮತ್ತು ಗಿರ್-ಸೋಮನಾಥ್ ಗಳನ್ನು 2020-21 ಯೋಜನೆಯಡಿ ಸೇರಿಸಲಾಗಿದೆ. ಉಳಿದ ಜಿಲ್ಲೆಗಳನ್ನು 2022-23 ವೇಳೆಗೆ ಹಂತ ಹಂತವಾಗಿ ಸೇರಿಸಲಾಗುತ್ತದೆ.

ಯು.ಎನ್. ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಜೊತೆ ಸಂಪರ್ಕಿತವಾದ ಮಕ್ಕಳ ಹೃದ್ರೋಗ ಆಸ್ಪತ್ರೆ

ಪ್ರಧಾನಮಂತ್ರಿಯವರು ಯು.ಎನ್. ಮೆಹ್ತಾ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಸಂಪರ್ಕಿತವಾದ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ಹಾಗೂ ಅಹಮದಾಬಾದ್ ನಲ್ಲಿರುವ ಅಹ್ಮದಾಬಾದ್ ನಾಗರಿಕ ಆಸ್ಪತ್ರೆಯಲ್ಲಿ ಟೆಲಿ ಕಾರ್ಡಿಯಾಲಜಿಯನ್ನೂ ಅವರು ಉದ್ಘಾಟಿಸಿದರು.

ಯು.ಎನ್. ಮೆಹ್ತಾ ಸಂಸ್ಥೆ ಈಗ ಭಾರತದ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆಯಾಗಿದೆ ಇದರ ಜೊತೆಗೆ ವಿಶ್ವದರ್ಜೆಯ ವೈದ್ಯಕೀಯ ಮೂಲಸೌಕರ್ಯ ಮತ್ತು ವೈದ್ಯಕೀಯ ವ್ಯವಸ್ಥೆ ಒಳಗೊಂಡ ಜಗತ್ತಿನ ಕೆಲವೇ ಆಸ್ಪತ್ರೆಗಳಲ್ಲಿ ಒಂದಾಗಿದೆ.

ಸಂಸ್ಥೆಯ 470 ಕೋಟಿ ರೂ. ವಿಸ್ತರಣೆ ಯೋಜನೆ ಕೈಗೊಂಡಿದ್ದು, ಪೂರ್ಣಗೊಂಡ ನಂತರ ಹಾಸಿಗೆಗಳ ಸಂಖ್ಯೆ 450 ರಿಂದ 1251 ಕ್ಕೆ ಹೆಚ್ಚಾಗಲಿದೆ. ಸಂಸ್ಥೆ ದೇಶದ ಅತಿದೊಡ್ಡ ಸಿಂಗಲ್ ಸೂಪರ್ ಸ್ಪೆಷಾಲಿಟಿ ಹೃದಯದ ಬೋಧನಾ ಸಂಸ್ಥೆಯಾಗಲಿದೆ ಮತ್ತು ವಿಶ್ವದ ಅತಿದೊಡ್ಡ ಸಿಂಗಲ್ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಆಸ್ಪತ್ರೆಗಳಲ್ಲಿ ಒಂದಾಗಲಿದೆ.

ಕಟ್ಟಡವು ಭೂಕಂಪ ನಿರೋಧಕ ನಿರ್ಮಾಣ, ಅಗ್ನಿಶಾಮಕ ಹೈಡ್ರಾಂಟ್ ವ್ಯವಸ್ಥೆ ಮತ್ತು ಅಗ್ನಿಶಾಮಕ ವ್ಯವಸ್ಥೆಯಂತಹ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಹೊಂದಿದೆ. ಸಂಶೋಧನಾ ಕೇಂದ್ರವು ಭಾರತದ ಮೊದಲ ಸುಧಾರಿತ ಹೃದ್ರೋಗದ ಐಸಿಯು ಆನ್ ವೀಲ್ಸ್ ನೊಂದಿಗೆ .ಟಿ. ಅನ್ನು ಹೊಂದಿದ್ದು, ಇದು ವೆಂಟಿಲೇಟರ್ಗಳು, ಐಎಬಿಪಿ, ಹೆಮೋಡಯಾಲಿಸಿಸ್, ಇಸಿಎಂಒ ಇತ್ಯಾದಿಗಳನ್ನೂ ಒಳಗೊಂಡಿದೆ. 14 ಶಸ್ತ್ರಚಿಕಿತ್ಸಾ ಕೇಂದ್ರಗಳು ಮತ್ತು 7 ಕಾರ್ಡಿಯಾಕ್ ಕ್ಯಾತಿಟೆರೈಸೇಶನ್ ಪ್ರಯೋಗಾಲಯಗಳನ್ನು ಸಹ ಸಂಸ್ಥೆಯಲ್ಲಿ ಪ್ರಾರಂಭಿಸಲಾಗುವುದು.

ಗಿರ್ನಾರ್ ರೋಪ್ ವೇ

ಗುಜರಾತ್ 2020 ಅಕ್ಟೋಬರ್ 24ರಂದು ಉದ್ಘಾಟನೆಗೊಂಡ ರೋಪ್ ವೇ ಮೂಲಕ ಜಾಗತಿಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮತ್ತೊಮ್ಮೆ ಪ್ರಮುಖವೆನಿಸಿದೆ. ಪ್ರಾರಂಭಿಕವಾಗಿ 25-30 ಕ್ಯಾಬಿನ್ ಗಳು ಇರುತ್ತವೆ, ಪ್ರತಿ ಕ್ಯಾನಿನ್ ನಲ್ಲಿ 8 ಜನರು ಪ್ರಯಾಣಿಸಬಹುದು. 2.3 ಕಿ.ಮೀ.ಗಳನ್ನು ಕೇವಲ 7.5 ನಿಮಿಷದಲ್ಲಿ ರೋಪ್ ವೇ ಮೂಲಕ ಏರಬಹುದು. ಇದರ ಜೊತೆಗೆ ರೋಪ್ ವೇ ಪ್ರಯಾಣ ಗಿರ್ನಾರ್ ಪರ್ವತದ ಸುತ್ತಲ ಹಚ್ಚ ಹಸುರಿನ ವಿಹಂಗಮ ನೋಟದ ಅನುಭವವನ್ನೂ ನೀಡುತ್ತದೆ.

***(Release ID: 1667383) Visitor Counter : 197