ಪ್ರಧಾನ ಮಂತ್ರಿಯವರ ಕಛೇರಿ
ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ ಸಮಾವೇಶ 2020ರಲ್ಲಿ ಪ್ರಧಾನಮಂತ್ರಿಯವರ ಪ್ರಧಾನ ಭಾಷಣದ ಪಠ್ಯ
Posted On:
19 OCT 2020 9:51PM by PIB Bengaluru
ನಮಸ್ಕಾರ!
ಮಿಲಿಂದಾ ಮತ್ತು ಬಿಲ್ ಗೇಟ್ಸ್ ಅವರೇ, ನನ್ನ ಸಚಿವ ಸಂಪುಟದ ಸಚಿವರಾದ ಡಾ. ಹರ್ಷವರ್ಧನ್ ಅವರೇ, ವಿಶ್ವಾದ್ಯಂತದ ಪ್ರತಿನಿಧಿಗಳೇ, ವಿಜ್ಞಾನಿಗಳೇ, ಸಂಶೋಧಕರೆ, ನಾವಿನ್ಯದಾರರೇ, ವಿದ್ಯಾರ್ಥಿಗಳೇ, ಸ್ನೇಹಿತರೆ, ನಾನು ನಿಮ್ಮೆಲ್ಲರೊಂದಿಗೆ ಈ 16ನೇ ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ ಸಮಾವೇಶದಲ್ಲಿ ಭಾಗಿಯಾಗಲು ಹರ್ಷಿಸುತ್ತೇನೆ.
ಈ ಸಮಾವೇಶ ಭೌತಿಕವಾಗಿ ಭಾರತದಲ್ಲಿ ನಡೆಯಬೇಕಾಗಿತ್ತು. ಆದರೆ, ಸವಾಲಿನ ಸನ್ನಿವೇಶದಲ್ಲಿ ಇದನ್ನು ವರ್ಚುವಲ್ ಮೂಲಕ ನಡೆಸಲಾಗುತ್ತಿದೆ. ಜಾಗತಿಕ ಮಹಾಮಾರಿ ಕೂಡ ನಮ್ಮನ್ನು ದೂರ ಇಡಲು ಸಾಧ್ಯವಿಲ್ಲ, ಇದು ತಂತ್ರಜ್ಞಾನದ ಶಕ್ತಿಯಾಗಿದೆ. ಈ ಕಾರ್ಯಕ್ರಮ ನಿಗದಿತ ವೇಳಾಪಟ್ಟಿಯಂತೆಯೇ ನಡೆಯುತ್ತಿದೆ. ಇದು ಗ್ರ್ಯಾಂಡ್ ಚಾಲೆಂಜ್ ಸಮುದಾಯದ ಬದ್ಧತೆಯನ್ನು ತೋರಿಸುತ್ತದೆ. ಇದು ನಾವಿನ್ಯತೆ ಮತ್ತು ಅಳವಡಿಕೆಯ ಬದ್ಧತೆಯ ಪ್ರದರ್ಶನವಾಗಿದೆ.
ಸ್ನೇಹಿತರೆ,
ವಿಜ್ಞಾನ ಮತ್ತು ನಾವಿನ್ಯತೆಯಲ್ಲಿ ಹೂಡಿಕೆ ಮಾಡಿದ ಸಮಾಜಗಳು ಭವಿಷ್ಯವನ್ನು ರೂಪಿಸುತ್ತವೆ. ಇದನ್ನು ಸಂಕುಚಿತ ದೃಷ್ಟಿಯ ವಿಧಾನದಿಂದ ಮಾಡಲು ಸಾಧ್ಯವಿಲ್ಲ. ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಮುಂಚಿತವಾಗಿಯೇ ಹೂಡಿಕೆ ಮಾಡಬೇಕು. ಆಗ ಮಾತ್ರ ನಾವು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿ ಈ ನಾವಿನ್ಯತೆಯ ಪಯಣವನ್ನು ಸಹಯೋಗ ಮತ್ತು ಸಾರ್ವಜನಿಕ ಸಹಭಾಗಿತ್ವದಿಂದ ರೂಪಿಸಬೇಕಾಗಿದೆ. ವಿಜ್ಞಾನ ಎಂದಿಗೂ ಕಂದಕಗಳಲ್ಲಿ ವಿಕಾಸಗೊಳ್ಳುವಿದಿಲ್ಲ. ಗ್ರ್ಯಾಂಡ್ ಚಾಲೆಂಜ್ ಕಾರ್ಯಕ್ರಮ ಈ ತತ್ವವನ್ನು ಅರ್ಥ ಮಾಡಿಕೊಂಡಿದೆ. ಈ ಕಾರ್ಯಕ್ರಮದ ಗಾತ್ರ ಶ್ಲಾಘನಾರ್ಹವಾಗಿದೆ.
15 ವರ್ಷಗಳಲ್ಲಿ ನೀವು ಜಾಗತಿಕವಾಗಿ ಹಲವಾರು ರಾಷ್ಟ್ರಗಳೊಂದಿಗೆ ಜೊತೆಗೂಡಿದ್ದೀರಿ. ನಿಭಾಯಿಸಿರುವ ಸಮಸ್ಯೆಗಳು ವೈವಿಧ್ಯ. ನೀವು ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್, ತಾಯಿಯ ಮತ್ತು ಮಕ್ಕಳ ಆರೋಗ್ಯ, ಕೃಷಿ, ಪೌಷ್ಟಿಕತೆ, ವಾಶ್ - (ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ), ಮತ್ತು ಇನ್ನೂ ಅನೇಕ ಇಂಥ ಸಮಸ್ಯೆಗಳ ನಿವಾರಣೆಗೆ ಜಾಗತಿಕ ಪ್ರತಿಭೆಗಳನ್ನು ಜೊತೆಗೂಡಿಸಿದ್ದೀರಿ.
ಸ್ನೇಹಿತರೆ,
ಜಾಗತಿಕ ಮಹಾಮಾರಿ ತಂಡ ಕಾರ್ಯದ ಮಹತ್ವವನ್ನು ನಮಗೆ ಮನವರಿಕೆ ಮಾಡಿಸಿದೆ. ರೋಗಗಳಿಗೆ ಭೌಗೋಳಿಕ ಗಡಿ ಎಂಬುದಿಲ್ಲ ಮತ್ತು ನಂಬಿಕೆ, ಜನಾಂಗ, ಲಿಂಗ ಅಥವಾ ಬಣ್ಣಗಳ ಆಧಾರದ ಮೇಲೆ ಅದು ತಾರತಮ್ಯ ಮಾಡುವುದಿಲ್ಲ. ನಾನು ಕೋವಿಡ್ ಒಂದರ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಈ ಕಾಯಿಲೆಗಳು ಜನರ ಅದರಲ್ಲೂ ಉಜ್ವಲ ಯುವಜನರ ಮೇಲೆ ಪರಿಣಾಮ ಬೀರುವ ಹಲವಾರು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ಸಹ ಒಳಗೊಂಡಿವೆ.
ಸ್ನೇಹಿತರೆ,
ಭಾರತದಲ್ಲಿ ನಾವು ಬಲಿಷ್ಠ ಮತ್ತು ಚೈತನ್ಯದಾಯಕ ವೈಜ್ಞಾನಿಕ ಸಮುದಾಯ ಹೊಂದಿದ್ದೇವೆ. ಉತ್ತಮ ವೈಜ್ಞಾನಿಕ ಸಂಸ್ಥೆಗಳನ್ನೂ ಹೊಂದಿದ್ದೇವೆ. ಅವು ಭಾರತದ ಆಸ್ತಿ, ವಿಶೇಷವಾಗಿ ಕಳೆದ ಕೆಲವು ತಿಂಗಳುಗಳಲ್ಲಿ, ಕೋವಿಡ್-19 ವಿರುದ್ಧ ಹೋರಾಡುವಾಗ ಅವು ದೇಶದ ಅತಿದೊಡ್ಡ ಆಸ್ತಿಗಳಾಗಿವೆ. ಕಂಟೈನ್ಮೆಂಟ್ ನಿಂದ ಸಾಮರ್ಥ್ಯವರ್ಧನೆವರೆಗೆ ಅವು ಅದ್ಭುತಗಳನ್ನು ಸಾಧಿಸಿವೆ.
ಸ್ನೇಹಿತರೆ,
ಭಾರತದ ಗಾತ್ರ, ಪ್ರಮಾಣ ಮತ್ತು ವೈವಿಧ್ಯತೆ ಸದಾ ಜಾಗತಿಕ ಸಮುದಾಯಕ್ಕೆ ಕುತೂಹಲ ಮೂಡಿಸಿದೆ. ನಮ್ಮ ದೇಶದ ಜನಸಂಖ್ಯೆ ಯು.ಎಸ್.ಎ.ಗಿಂತ ನಾಲ್ಕು ಪಟ್ಟು ದೊಡ್ಡದಾಗಿದೆ. ನಮ್ಮ ದೇಶದ ಕೆಲವು ರಾಜ್ಯಗಳು ಐರೋಪ್ಯ ರಾಷ್ಟ್ರಗಳಷ್ಟು ಜನಸಂಖ್ಯೆ ಹೊಂದಿವೆ. ಆದಾಗ್ಯೂ ಜನ ಚಾಲಿತ ದೃಷ್ಟಿಕೋನದಿಂದಾಗಿ ಭಾರತ ಕೋವಿಡ್ -19 ಮರಣ ದರವನ್ನು ಅತ್ಯಂತ ಕಡಿಮೆಯಲ್ಲಿಟ್ಟಿದೆ. ನಮ್ಮ ಜನರಿಗೆ ಧನ್ಯವಾದಗಳು. ಇಂದು ಪ್ರತಿನಿತ್ಯ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆ ಆಗುತ್ತಿದೆ, ವೃದ್ಧಿದರದಲ್ಲೂ ಇಳಿಕೆ ಆಗಿದೆ. ಭಾರತದಲ್ಲಿ ಶೇ.88ರಷ್ಟು ಅತಿಹೆಚ್ಚು ಚೇತರಿಕೆ ದರವೂ ಇದೆ. ಹೊಂದಿಕೊಳ್ಳುವಂಥ ಲಾಕ್ ಡೌನ್ ಅನ್ನು ಅಳವಡಿಸಿಕೊಂಡ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಮಾಸ್ಕ್ ಬಳಕೆಯನ್ನು ಉತ್ತೇಜಿಸಿದ, ಪರಿಣಾಮಕಾರಿಯಾಗಿ ಸಂಪರ್ಕ-ಪತ್ತೆಹಚ್ಚುವಿಕೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಪ್ರಾರಂಭಿಸಿ, ರಾಪಿಡ್ ಆಂಟಿಜನ್ ಟೆಸ್ಟ್ ನಿಯೋಜಿಸಿದ ಆರಂಭಿಕ ದೇಶಗಳಲ್ಲಿ ಒಂದಾಗಿದ್ದು ಭಾರತ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಭಾರತವು ಸಿಆರ್.ಐ.ಎಸ್.ಪಿ.ಆರ್. ಜೀನ್ ಎಡಿಟಿಂಗ್ ತಂತ್ರಜ್ಞಾನವನ್ನು ಸಹ ಆವಿಷ್ಕರಿಸಿದೆ.
ಸ್ನೇಹಿತರೆ,
ಭಾರತವು ಈಗ ಕೋವಿಡ್ ಲಸಿಕೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ನಮ್ಮ ದೇಶದಲ್ಲಿ 30ಕ್ಕೂ ಹೆಚ್ಚು ದೇಶೀಯ ಲಸಿಕೆಗಳು ಅಭಿವೃದ್ಧಿಯಾಗುತ್ತಿದ್ದು, ಮೂರು ಮುಂದುವರಿದ ಹಂತದಲ್ಲಿವೆ. ಭಾರತವು ಈಗಾಗಲೇ ಸುಸ್ಥಾಪಿತ ಲಸಿಕೆ ವಿತರಣೆ ವ್ಯವಸ್ಥೆಯನ್ನು ಹೊಂದಿದ್ದು, ನಮ್ಮ ನಾಗರಿಕರ ರೋಗನಿರೋಧಕ ಶಕ್ತಿ ವರ್ಧನೆ ಖಚಿತಪಡಿಸಿಕೊಳ್ಳಲು ಡಿಜಿಟಲ್ ಆರೋಗ್ಯ ಐಡಿಯೊಂದಿಗೆ ಈ ಡಿಜಿಟಲೀಕರಿಸಿದ ಜಾಲವನ್ನು ಬಳಸಲಾಗುತ್ತದೆ.
ಸ್ನೇಹಿತರೆ,
ಕೋವಿಡ್ ಆಚೆಗೂ, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಔಷಧ ಮತ್ತು ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯದ ವಿಚಾರದಲ್ಲಿ ಭಾರತ ಹೆಸರುವಾಸಿಯಾಗಿದೆ. ಜಾಗತಿಕ ರೋಗನಿರೋಧಕ ಶಕ್ತಿ ವರ್ಧಿಸುವ ಲಸಿಕೆಗಳ ಶೇಕಡಾ 60 ಕ್ಕಿಂತ ಹೆಚ್ಚು ಭಾರತದಲ್ಲಿ ತಯಾರಾಗುತ್ತಿದೆ. ನಾವು ಇಂದ್ರಧನುಷ್ ಲಸಿಕೆ ಕಾರ್ಯಕ್ರಮದಲ್ಲಿ ದೇಶೀಯ ರೋಟಾವೈರಸ್ ಲಸಿಕೆಯನ್ನೂ ಸೇರಿಸಿದ್ದೇವೆ. ಇದು ಬಲಿಷ್ಠ ಪಾಲುದಾರಿಕೆ/ದೀರ್ಘಕಾಲೀನ ಫಲಿತಾಂಶಕ್ಕೆ ಒಂದು ಯಶಸ್ವೀ ಉದಾಹರಣೆಯಾಗಿದೆ. ಗೇಟ್ಸ್ ಪ್ರತಿಷ್ಠಾನ ಕೂಡ ಈ ಜನಪ್ರಿಯ ಪ್ರಯತ್ನದ ಭಾಗವಾಗಿದೆ. ಭಾರತದ ಅನುಭವ ಮತ್ತು ಸಂಶೋಧನಾ ಪ್ರತಿಭೆಯೊಂದಿಗೆ, ಭಾರತವು ಜಾಗತಿಕ ಆರೋಗ್ಯ ಪ್ರಯತ್ನಗಳ ಕೇಂದ್ರಬಿಂದುವಾಗಿದೆ ಮತ್ತು ಈ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಇತರ ರಾಷ್ಟ್ರಗಳಿಗೆ ಸಹಾಯ ಮಾಡುವ ಆಶಯ ಹೊಂದಿದೆ.
ಸ್ನೇಹಿತರೆ,
ಕಳೆದ ಆರು ವರ್ಷಗಳಲ್ಲಿ ಉತ್ತಮ ಆರೋಗ್ಯ ಆರೈಕೆ ವ್ಯವಸ್ಥೆಗೆ ಕೊಡುಗೆ ನೀಡುವಂಥ ಹಲವು ಕಾರ್ಯಕ್ರಮಗಳನ್ನು ನಾವು ರೂಪಿಸಿದ್ದೇವೆ. ಅಂದರೆ ಉತ್ತಮ ನೈರ್ಮಲ್ಯ, ಸುಧಾರಿತ ಸ್ವಚ್ಛತೆ, ಹೆಚ್ಚು ಶೌಚಾಲಯ ವ್ಯಾಪ್ತಿ. ಇದು ಹೆಚ್ಚು ಯಾರಿಗೆ ಸಹಾಯ ಮಾಡಿದೆ?. ಇದು ಮಹಿಳೆಯರು, ಬಡವರು ಮತ್ತು ವಂಚಿತರಿಗೆ ನೆರವಾಗಿದೆ. ಇದು ರೋಗಗಳನ್ನು ತಗ್ಗಲು ಕಾರಣವಾಗಿದೆ. ಇದು ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿದೆ.
ಸ್ನೇಹಿತರೆ,
ಈಗ ಪ್ರತಿ ಮನೆಗಳಿಗೆ ಕೊಳವೆ ಮೂಲಕ ಕುಡಿಯುವ ನೀರನ್ನು ಪೂರೈಸುವುದನ್ನು ಖಾತ್ರಿಪಡಿಸಲಾಗುತ್ತಿದೆ. ಇದು ರೋಗಗಳ ತಗ್ಗಿಸುವಿಕೆ ಖಾತ್ರಿ ಪಡಿಸುತ್ತಿದೆ. ನಾವು ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುತ್ತಿದ್ದೇವೆ. ಇದು ಯುವಜನರಿಗೆ ಹೆಚ್ಚಿನ ಅವಕಾಶ ಒದಗಿಸುತ್ತಿದೆ. ನಾವು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ಮುನ್ನಡೆಸುತ್ತಿದ್ದೇವೆ ಮತ್ತು ಇದು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದ್ದೇವೆ.
ಸ್ನೇಹಿತರೆ,
ವೈಯಕ್ತಿಕ ಸಬಲೀಕರಣ ಮತ್ತು ಸಂಘಟಿತ ಯೋಗಕ್ಷೇಮಕ್ಕಾಗಿ ಸಹಕಾರಿ ಸ್ಫೂರ್ತಿ ಬಳಸೋಣ. ಗೇಟ್ಸ್ ಪ್ರತಿಷ್ಠಾನ ಮತ್ತು ಇತರ ಹಲವು ಸಂಘಟನೆಗಳು ಉತ್ತಮ ಕಾರ್ಯ ಮಾಡುತ್ತಿವೆ. ಈ ಗ್ರ್ಯಾಂಡ್ ಚಾಲೆಂಜ್ ವೇದಿಕೆಯಲ್ಲಿ ಫಲಪ್ರದವಾದ ಚರ್ಚೆ ನಡೆಯಲೆಂದು ಹಾರೈಸುತ್ತೇನೆ. ಇದರಿಂದ ಅನೇಕ ಅದ್ಭುತ ಮತ್ತು ಪ್ರೋತ್ಸಾಹದಾಯಕ ಪರಿಹಾರಗಳು ಹೊರಹೊಮ್ಮಲಿವೆ ಎಂಬ ವಿಶ್ವಾಸ ನನಗಿದೆ. ಈ ಪ್ರಯತ್ನಗಳು ಮಾನವ ಕೇಂದ್ರಿತ ಅಭಿವೃದ್ಧಿಯ ದೃಷ್ಟಿಕೋನವಾಗಿರಲಿ. ಇದು ನಮ್ಮ ಯುವಜನರಿಗೆ ಉಜ್ವಲ ಭವಿಷ್ಯದ ಚಿಂತನೆ ಮಾಡುವ ಅವಕಾಶ ಕಲ್ಪಿಸಲಿ. ಮತ್ತೊಮ್ಮೆ ನಾನು ಸಂಘಟಕರಿಗೆ ನನಗೆ ಆಹ್ವಾನ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ.
ಧನ್ಯವಾದಗಳು,.
ತುಂಬಾ ತುಂಬಾ ಧನ್ಯವಾದಗಳು.
***
(Release ID: 1666314)
Visitor Counter : 211
Read this release in:
Gujarati
,
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Odia
,
Tamil
,
Telugu
,
Malayalam