ಪ್ರಧಾನ ಮಂತ್ರಿಯವರ ಕಛೇರಿ

ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಯ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಜಗತ್ತಿನಾದ್ಯಂತ ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಎಫ್‌ಎಒ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ

ಇತ್ತೀಚೆಗೆ ಅಭಿವೃದ್ಧಿಪಡಿಸಿದ 17 ಜೈವಿಕ ಬಲವರ್ಧಿತ ಬೆಳೆಗಳು ರಾಷ್ಟ್ರಕ್ಕೆ ಸಮರ್ಪಣೆ 

ಭಾರತದಲ್ಲಿನ ಸುಧಾರಣೆಗಳು ಜಾಗತಿಕ ಆಹಾರ ಭದ್ರತೆಯ ಬಗ್ಗೆ ಭಾರತದ ಬದ್ಧತೆಯನ್ನು ತೋರಿಸುತ್ತವೆ: ಪ್ರಧಾನಿ

Posted On: 16 OCT 2020 4:51PM by PIB Bengaluru

ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಯ 75 ನೇ ವಾರ್ಷಿಕೋತ್ಸವದ ಅಂಗವಾಗಿ 75 ರೂ.ಗಳ ಸ್ಮರಣಾರ್ಥ ನಾಣ್ಯಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಇತ್ತೀಚೆಗೆ ಅಭಿವೃದ್ಧಿಪಡಿಸಿದ 17 ಜೈವಿಕ ಬಲವರ್ಧಿತ ಬೆಳೆಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಅಪೌಷ್ಟಿಕತೆಯನ್ನು ತೊಡೆದುಹಾಕಲು ವಿಶ್ವದಾದ್ಯಂತ ನಿರಂತರವಾಗಿ ಶ್ರಮಿಸುತ್ತಿರುವವರಿಗೆ ಶುಭ ಕೋರಿದರು. ನಮ್ಮ ಕಿಸಾನ್ ಸಾಥಿ - ನಮ್ಮ ಅನ್ನದಾತ, ನಮ್ಮ ಕೃಷಿ ವಿಜ್ಞಾನಿ, ನಮ್ಮ ಅಂಗನವಾಡಿ ಆಶಾ ಕಾರ್ಮಿಕರು ಅಪೌಷ್ಟಿಕತೆಯ ವಿರುದ್ಧದ ಆಂದೋಲನಕ್ಕೆ ಆಧಾರವಾಗಿದ್ದಾರೆ ಎಂದು ಅವರು ಹೇಳಿದರು. ಅವರು ತಮ್ಮ ಕಠಿಣ ಪರಿಶ್ರಮದಿಂದ ಭಾರತದ ಕಣಜವನ್ನು ತುಂಬಿದ್ದಾರೆ, ಬಡವರನ್ನು ತಲುಪಲು ಅವರು ಸರ್ಕಾರಕ್ಕೂ ಸಹಾಯ ಮಾಡುತ್ತಿದ್ದಾರೆ. ಈ ಎಲ್ಲಾ ಪ್ರಯತ್ನಗಳಿಂದಾಗಿ, ಕೊರೊನಾದ ಈ ಬಿಕ್ಕಟ್ಟಿನಲ್ಲೂ ಭಾರತ ಅಪೌಷ್ಟಿಕತೆಯ ವಿರುದ್ಧ  ಪ್ರಬಲ ಹೋರಾಟವನ್ನು ನಡೆಸುತ್ತಿದೆ ಎಂದು ಅವರು ಹೇಳಿದರು.
ಭಾರತ ಸೇರಿದಂತೆ, ವಿಶ್ವದಾದ್ಯಂತ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹಸಿವನ್ನು ನಿರ್ಮೂಲನೆ ಮಾಡಲು ಎಫ್‌ಎಒ ಸಹಾಯ ಮಾಡಿದೆ ಮತ್ತು ಪೌಷ್ಠಿಕತೆಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ. ಅದರ ಸೇವೆಯನ್ನು 130 ಕೋಟಿಗೂ ಹೆಚ್ಚು ಭಾರತೀಯರು ಗೌರವಿಸಿದ್ದಾರೆ ಎಂದು ಪ್ರಧಾನಿ ಹೇಳಿದರು. ವಿಶ್ವ ಆಹಾರ ಕಾರ್ಯಕ್ರಮಕ್ಕೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿರುವುದು ಕೂಡ ಎಫ್‌ಎಒದ ದೊಡ್ಡ ಸಾಧನೆಯಾಗಿದೆ ಎಂದು ಅವರು ಹೇಳಿದರು. ಎಫ್ಎಒದೊಂದಿಗೆ ಐತಿಹಾಸಿಕ ಪಾಲುದಾರಿಕೆ ಮತ್ತು ಒಡಂಬಡಿಕೆಯ ಬಗ್ಗೆ ಭಾರತವು ಸಂತೋಷಪಡುತ್ತದೆ ಎಂದು ಅವರು ಹೇಳಿದರು.
ಡಾ.ಬಿನಯ್ ರಂಜನ್ ಸೇನ್ ಅವರು ಎಫ್‌ಎಒನಲ್ಲಿ ಮಹಾನಿರ್ದೇಶಕರಾಗಿದ್ದಾಗ ವಿಶ್ವ ಆಹಾರ ಕಾರ್ಯಕ್ರಮವನ್ನು ಪ್ರಾರಂಭಿಸಿದರು ಎಂದು ಪ್ರಧಾನಿ ಹೇಳಿದರು. ಅವರು ಕ್ಷಾಮ ಮತ್ತು ಹಸಿವಿನ ನೋವನ್ನು ಬಹಳ ನಿಕಟವಾಗಿ ಅನುಭವಿಸಿದ್ದರು ಮತ್ತು ಅವರ ಕೆಲಸವು ಇಡೀ ಜಗತ್ತಿಗೆ ಇನ್ನೂ ಉಪಯುಕ್ತವಾಗಿದೆ. ಕಳೆದ ಹಲವಾರು ದಶಕಗಳಲ್ಲಿ ಅಪೌಷ್ಟಿಕತೆಯ ವಿರುದ್ಧ ಭಾರತದ ಹೋರಾಟವನ್ನು ಎಫ್‌ಎಒ ಕೂಡ ಸೂಕ್ಷ್ಮವಾಗಿ ಗಮನಿಸಿದೆ. ಆದರೆ ಅದರ ವ್ಯಾಪ್ತಿಗೆ ಹಲವು ನಿರ್ಬಂಧಗಳಿವೆ. ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾಗುವುದು, ಶಿಕ್ಷಣದ ಕೊರತೆ, ಮಾಹಿತಿಯ ಕೊರತೆ, ಕುಡಿಯುವ ನೀರಿನ ಕೊರತೆ, ಸ್ವಚ್ಛತೆಯ ಕೊರತೆ ಮುಂತಾದ ಕಾರಣಗಳಿಂದಾಗಿ ನಾವು ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
2014 ರ ನಂತರ ದೇಶದಲ್ಲಿ ಹೊಸ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. ಸರ್ಕಾರವು ಸಮಗ್ರ ವಿಧಾನದ ಮೂಲಕ ಬಹು ಆಯಾಮದ ಕಾರ್ಯತಂತ್ರದಲ್ಲಿ ಕೆಲಸ ಮಾಡಲು ಎಲ್ಲಾ ಅಡೆತಡೆಗಳನ್ನು ಕೊನೆಗೊಳಿಸಿತು ಎಂದು ಅವರು ಹೇಳಿದರು. ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಸರ್ಕಾರವು ರಾಷ್ಟ್ರೀಯ ಪೌಷ್ಠಿಕಾಂಶ ಮಿಷನ್ (ಪೋಶಣಾ ಅಭಿಯಾನ), ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣ, ಮಿಷನ್ ಇಂದ್ರಧನುಷ್, ಜಲ ಜೀವನ ಮಿಷನ್, ಕಡಿಮೆ ವೆಚ್ಚದ ನೈರ್ಮಲ್ಯ ಪ್ಯಾಡ್ ವಿತರಣೆ ಇತ್ಯಾದಿ ಕ್ರಮಗಳನ್ನು ಅವರು ಪಟ್ಟಿ ಮಾಡಿದರು. ಈ ಎಲ್ಲ ಪ್ರಯತ್ನಗಳ ಫಲವಾಗಿ ಬಾಲಕರಿಗಿಂತ ಹೆಚ್ಚಿನ ಸಂಖ್ಯೆಯ ಬಾಲಕಿಯರ ಒಟ್ಟು ದಾಖಲಾತಿ ಅನುಪಾತ ಹೆಚ್ಚಾಗಿದೆ. ಸಿರಿಧಾನ್ಯಗಳು ಮತ್ತು ಪ್ರೋಟೀನ್, ಕಬ್ಬಿಣ, ಸತು ಮುಂತಾದ ಪೌಷ್ಠಿಕಾಂಶದಿಂದ ಸಮೃದ್ಧವಾಗಿರುವ ಬೆಳೆಗಳನ್ನು ಉತ್ತೇಜಿಸುವ ಮೂಲಕ ಅಪೌಷ್ಟಿಕತೆಯನ್ನು ನಿಭಾಯಿಸಲು ಪ್ರಮುಖ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸುವ ಭಾರತದ ಪ್ರಸ್ತಾಪವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಕ್ಕಾಗಿ ಪ್ರಧಾನಿಯವರು ಎಫ್‌ಎಒಗೆ ಧನ್ಯವಾದಗಳನ್ನು ತಿಳಿಸಿದರು. ಇದು ಪೌಷ್ಠಿಕ ಆಹಾರವನ್ನು ಸೇವಿಸುವುದನ್ನು ಉತ್ತೇಜಿಸುತ್ತದೆ, ಅವುಗಳ ಲಭ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಇದರಿಂದ ಸಣ್ಣ ರೈತರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ ಎಂದು ಅವರು ಹೇಳಿದರು. ನೀರಿನ ಸಮಸ್ಯೆಯಿರುವ ಮತ್ತು ಭೂಮಿ ಅಷ್ಟೊಂದು ಫಲವತ್ತಾಗಿಲ್ಲದ ಕಡೆಯಲ್ಲಿ ಸಣ್ಣ ಮತ್ತು ಮಧ್ಯಮ ರೈತರು ಹೆಚ್ಚಾಗಿ ತಮ್ಮ ಭೂಮಿಯಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ಇದು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಕೆಲವು ಬೆಳೆಗಳ ಸಾಮಾನ್ಯ ಪ್ರಭೇದವು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಹೊಂದಿರುತ್ತದೆ. ಆದ್ದರಿಂದ ಈ ನ್ಯೂನತೆಗಳನ್ನು ನಿವಾರಿಸಲು ಜೈವಿಕ ಬಲವರ್ಧಿತ ಪ್ರಭೇದಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಗೋಧಿ ಮತ್ತು ಭತ್ತ ಸೇರಿದಂತೆ ಹಲವಾರು ಸ್ಥಳೀಯ ಮತ್ತು ಸಾಂಪ್ರದಾಯಿಕ ಬೆಳೆಗಳ 17 ಜೈವಿಕ ಬಲವರ್ಧಿತ ಬೀಜ ಪ್ರಭೇದಗಳನ್ನು ರೈತರಿಗೆ ದೊರೆಯುವಂತೆ ಮಾಡಲಾಗುತ್ತಿದೆ, ಇದು ಪೌಷ್ಠಿಕಾಂಶ ಅಭಿಯಾನವನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಪ್ರಧಾನಿ ಹೇಳಿದರು.
ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಭಾರತದಲ್ಲಿ ಹಸಿವು ಮತ್ತು ಅಪೌಷ್ಟಿಕತೆಯ ಬಗ್ಗೆ ವಿಶ್ವದಾದ್ಯಂತ ತಜ್ಞರು ಕಳವಳ ವ್ಯಕ್ತಪಡಿಸಿದ್ದರು ಎಂದು ಪ್ರಧಾನಿ ಹೇಳಿದರು. ಈ ಆತಂಕಗಳ ಮಧ್ಯೆ, ಕಳೆದ 7-8 ತಿಂಗಳುಗಳಲ್ಲಿ, ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಭಾರತವು 80 ಕೋಟಿ ಬಡವರಿಗೆ ಉಚಿತವಾಗಿ 1.5 ಕೋಟಿ ರೂ.ಗಳ ಆಹಾರ ಧಾನ್ಯಗಳನ್ನು ವಿತರಿಸಿದೆ. ಆಹಾರ ಭದ್ರತೆಯ ಬಗ್ಗೆ ಭಾರತದ ಬದ್ಧತೆಯಂತೆ, ಪಡಿತರದಲ್ಲಿ ಮಸೂರದೊಂದಿಗೆ ಅಕ್ಕಿ ಅಥವಾ ಗೋಧಿಯನ್ನು ಸೇರಿಸಲು ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಅವರು ಹೇಳಿದರು.
2014 ರವರೆಗೆ ಆಹಾರ ಭದ್ರತಾ ಕಾಯ್ದೆ 11 ರಾಜ್ಯಗಳಲ್ಲಿ ಮಾತ್ರ ಜಾರಿಯಲ್ಲಿತ್ತು ಮತ್ತು ಅದರ ನಂತರ ಇಡೀ ದೇಶದಲ್ಲಿ ಇದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಹೇಳಿದರು. ಕೊರೊನಾದಿಂದ ಇಡೀ ಜಗತ್ತು ಹೆಣಗಾಡುತ್ತಿರುವಾಗ, ಭಾರತೀಯ ರೈತರು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದಾಖಲೆ ಮಾಡಿದ್ದಾರೆ. ಗೋಧಿ, ಭತ್ತ ಮತ್ತು ದ್ವಿದಳ ಧಾನ್ಯಗಳಂತಹ ಆಹಾರ ಧಾನ್ಯಗಳನ್ನು ಖರೀದಿಸುವಲ್ಲಿ ಸರ್ಕಾರವು ಹೊಸ ದಾಖಲೆಗಳನ್ನು ಮಾಡಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಸುಧಾರಣೆಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ, ಇದು ಜಾಗತಿಕ ಆಹಾರ ಸುರಕ್ಷತೆಯ ಬಗೆಗಿನ ತನ್ನ ಬದ್ಧತೆಯನ್ನು ತೋರಿಸುತ್ತದೆ. ರೈತರ ಆದಾಯವನ್ನು ಹೆಚ್ಚಿಸಲು ವಿವಿಧ ಕೃಷಿ ಸುಧಾರಣೆಗಳನ್ನು ತರಲಾಗುತ್ತಿದೆ ಎಂದು ಅವರು ಹೇಳಿದರು. ಎಪಿಎಂಸಿ ಕಾಯ್ದೆಗೆ ಮಾಡಿದ ತಿದ್ದುಪಡಿಗಳ ಗುರಿಯು ಅವುಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಮಾಡುವುದಾಗಿದೆ ಎಂದರು. ಎಂಎಸ್‌ಪಿಗಿಂತ ರೈತರಿಗೆ ಒಂದೂವರೆ ಪಟ್ಟು ಹೆಚ್ಚು ಪಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಎಂಎಸ್ಪಿ ಮತ್ತು ಸರ್ಕಾರದ ಖರೀದಿ ದೇಶದ ಆಹಾರ ಸುರಕ್ಷತೆಯನ್ನು ಖಾತರಿಪಡಿಸುವ ಪ್ರಮುಖ ಭಾಗವಾಗಿದೆ. ಆದ್ದರಿಂದ ಅವುಗಳು ಸಹಜವಾಗಿ ಮುಂದುವರಿಯುತ್ತವೆ ಎಂದು ತಿಳಿಸಿದರು.
ಸಣ್ಣ ರೈತರಿಗೆ ಶಕ್ತಿ ನೀಡಲು ದೇಶದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ದೊಡ್ಡ ಜಾಲ, ಅಂದರೆ ಎಫ್‌ಪಿಒಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಧಾನ್ಯಗಳನ್ನು ವ್ಯರ್ಥ ಮಾಡುವುದು ಯಾವಾಗಲೂ ಭಾರತದಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದೆ ಮತ್ತು ಅಗತ್ಯ ಸರಕುಗಳ ಕಾಯ್ದೆಯಲ್ಲಿನ ತಿದ್ದುಪಡಿಗಳು ಇದನ್ನು ಬದಲಾಯಿಸುತ್ತವೆ. ಈಗ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಹಳ್ಳಿಗಳಲ್ಲಿ ಉತ್ತಮ ಮೂಲಸೌಕರ್ಯಗಳನ್ನು ನಿರ್ಮಿಸಲು ಹೆಚ್ಚಿನ ಅವಕಾಶವನ್ನು ಪಡೆಯುತ್ತವೆ ಎಂದು ಅವರು ಹೇಳಿದರು.
ಎಪಿಎಂಸಿ ಕಾಯ್ದೆಯ ತಿದ್ದುಪಡಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಪ್ರಧಾನಿಯವರು, ರೈತ ಯಾವುದೇ ಖಾಸಗಿ ಕಂಪನಿ ಅಥವಾ ಉದ್ಯಮದೊಂದಿಗೆ ಒಪ್ಪಂದ ಮಾಡಿಕೊಂಡಾಗ, ಬಿತ್ತನೆಗೂ ಮೊದಲೇ ಉತ್ಪನ್ನಗಳ ಬೆಲೆಯನ್ನು ನಿರ್ಧರಿಸಲಾಗುವುದು ಎಂದು ಹೇಳಿದರು. ಇದು ಬೆಲೆ ಏರಿಳಿತಗಳ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ ಮತ್ತು ಕೃಷಿಯಲ್ಲಿ ಹೊಸ ತಂತ್ರಜ್ಞಾನವನ್ನು ಉತ್ತೇಜಿಸುತ್ತದೆ. ರೈತನಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವುದರ ಜೊತೆಗೆ, ರೈತನಿಗೆ ಕಾನೂನು ರಕ್ಷಣೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈತ ಒಪ್ಪಂದವನ್ನು ಮುರಿಯಲು ಬಯಸಿದರೆ, ಅವನು ಯಾವುದೇ ದಂಡವನ್ನು ಪಾವತಿಸಬೇಕಾಗಿಲ್ಲ. ಆದರೆ ರೈತನೊಂದಿಗೆ ಒಪ್ಪಂದ ಮಾಡಿಕೊಂಡ ಸಂಸ್ಥೆ ಒಪ್ಪಂದವನ್ನು ಮುರಿದರೆ, ಅದು ದಂಡವನ್ನು ಪಾವತಿಸಬೇಕಾಗುತ್ತದೆ. ಒಪ್ಪಂದವು ಬೆಳೆಯ ಇಳುವರಿಗೆ ಮಾತ್ರ ಸಂಬಂಧಿಸಿರುತ್ತದೆ. ರೈತನ ಭೂಮಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಬಿಕ್ಕಟ್ಟು ಉಂಟಾಗುವುದಿಲ್ಲ. ಅಂದರೆ, ಈ ಸುಧಾರಣೆಗಳ ಮೂಲಕ ರೈತನಿಗೆ ಪ್ರತಿಯೊಂದು ರೀತಿಯಲ್ಲೂ ರಕ್ಷಣೆಯನ್ನು ಖಾತ್ರಿಪಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಭಾರತೀಯ ರೈತರು ಸದೃಢರಾದಾ ಅವರ ಆದಾಯವೂ ಹೆಚ್ಚಾಗುತ್ತದೆ, ಆದ್ದರಿಂದ ಅಪೌಷ್ಟಿಕತೆಯ ವಿರುದ್ಧದ ಅಭಿಯಾನ ಸಹ ಅಷ್ಟೇ ಶಕ್ತಿಯನ್ನು ಪಡೆಯುತ್ತದೆ ಎಂದು ಪ್ರಧಾನಿ ತಿಳಿಸಿದರು. ಭಾರತ ಮತ್ತು ಎಫ್‌ಎಒ ನಡುವೆ ಹೆಚ್ಚುತ್ತಿರುವ ಹೊಂದಾಣಿಕೆಯು ಅಭಿಯಾನಕ್ಕೆ ಮತ್ತಷ್ಟು ವೇಗವನ್ನು ನೀಡಲಿದೆ ಎಂದು ಪ್ರಧಾನಿ ಹಾರೈಸಿದರು.

***



(Release ID: 1665551) Visitor Counter : 256